ಹಕ್ಕಿಗಳ ’ಚಿಂವ್ ಚಿಂವ್’, ತಣ್ಣನೆ ಸುಯ್ಗುಡುತ್ತಾ ಕಿವಿಯಲ್ಲೇನೋ ಪಿಸುಗುಡುವಂತೆ ಬರುವ ಗಾಳಿ, ನೀರವ ಮಧುರ ಮೌನ, ಇವೆಲ್ಲಾ ಬರಿಯ ಕಲ್ಪನೆಯ ಕಥಾವಸ್ತುಗಳು.ಟರ್ರ್ ಟರ್ರ್ ಟರ್ರ್ ಎಂದು ಬಾರಿಸುವ ಅಲಾರಾಂ ಇಂದಿನ ಸತ್ಯ. ಅಲಾರಾಂ ಹಾಡು ಎಷ್ಟೇ ಮಧುರವಾಗಿದ್ದರೂ ಸುಂದರ ನಿದ್ದೆಯಲ್ಲಿದವರಿಗೆ ಅದು ಕರ್ಕಶವೇ. ಮಲಗುವಾಗ ತಾವೇ ಸೆಟ್ ಮಾಡಿಟ್ಟದ್ದು ಆ ಅಲಾರಾಂ ಎಂಬುದನ್ನು ಮರೆತು ತನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಕ್ಕಾಗಿ ಅದನ್ನೇ ಶಪಿಸುತ್ತಾ ಬೆಳಗಾಗುತ್ತದೆ.
ಆದರೆ ನಮ್ಮ ರಾಜಯ್ಯನಿಗೆ ಅಲಾರಾಂ ರಿಂಗಣದ ಅವಶ್ಯಕತೆಯಿಲ್ಲ. ಮುಂಜಾವು ಮೂರಕ್ಕೇ ಪಕ್ಕದ ಮನೆಯ ’ಕಾಲ್ ಸೆಂಟರ್’ನಲ್ಲಿ ಕೆಲಸ ಮಾಡುವ ಹುಡುಗಿಯನ್ನು ಪಿಕ್ ಮಾಡಲು ಬರುವ ವಾಹನದ ಅಲಾರಾಂಗಿಂತಲೂ ಕರ್ಕಶವಾದ ಮೊಳಗು, ನಿದ್ದೆಗೆ ಇಂಟರ್ವಲ್ನಲ್ಲೇ ಬ್ರೇಕ್ ಹಾಕುತ್ತದೆ. ಪ್ರತಿನಿತ್ಯವೂ ಹೀಗೆ ಎಬ್ಬಿಸುವವರನ್ನು ಬೈಯ್ಯುವುದು ಅವಶ್ಯವೇ? ಎಂದು ಮಲಗಿದರೆ ’ಊಹೂಂ’ ನಿದ್ದೆ ಬರಲೊಲ್ಲದು.
ಎಫ಼್.ಎಂ. ಕೇಳೋಣವೆಂದರೆ ವಿವಿಧ ಭಾರತಿಯಿಂದಿಡಿದು ಎಲ್ಲ ಕನ್ನಡ ಸ್ಟೇಷನ್ ಗಳೂ ಪ್ರಾರಂಭವಾಗುವುದು ೬ರನಂತರ. ಒಂದೆರಡು ಚಾನೆಲ್ಲುಗಳಲ್ಲಿ ಇಂಗ್ಲೀಷ್ ಗೀತೆಗಳು ಬರುತ್ತವೆ. ಆದರೆ ಅವು ಎಷ್ಟೇ ಮಧುರವಾಗಿದ್ದರೂ ೭೦ರ ಸರಿ ಸುಮಾರಿನ ರಾಜಯ್ಯನಿಗೆ ಒಗ್ಗುತ್ತಿರಲಿಲ್ಲ. ಹಿಂದಿ ಗೀತೆಗಳಾದರು ಸ್ವಲ್ಪ ಜೀರ್ಣವಾಗುತ್ತಿದ್ದವು, ಆದರೆ ಹಳೆಯ ಗೀತೆಗಳಾಗಿದ್ದರೆ ಕೇಳಬಹುದಿತ್ತು. ಎಲ್ಲೋ ತನ್ನ ಪ್ರೇಯಸಿಗೆ ಮೆಸ್ಸೇಜ್ ಮಾಡುತ್ತಾ ಎದ್ದಿರುವ ಹುಡುಗನಿಗೆ ಪ್ರಿಯವಾಗುವ ಆ ಹೊಸ ಗಾಯಕನ ’ಊಊಊಊ…’ ಎಂದು ಊಳಿಡುವ ಗೀತೆ ಇವನಿಗೆಲ್ಲಿ ಪ್ರಿಯವಾಗಬೇಕು.
’ಅರೆ, ರಾಜಯ್ಯ ವಾಕಿಂಗ್’ಗಾದರೂ ಹೊಗಬಹುದಲ್ಲಾ?’ ಅಂತ ನೀವು ಕೇಳ್ತಿರಾ? ಪಾಪ, ನಾವು ಬೊಜ್ಜು ಕರಗಿಸಲು ಮಾಡುವ ವಾಕಿಂಗೇ , ನಮ್ಮ ರಾಜಯ್ಯನಿಗೆ ’ಬೊಜ್ಜ ತುಂಬಿಸುವ’ ವಾಕಿಂಗ್. ದಿನವಿಡೀ ಊದುಬತ್ತಿ ಮಾರುತ್ತಾ ಬಸವನಗುಡಿಯ ಗಾಂಧಿಬಜ಼ಾರ್’ನಿಂದ ಸೌತೆಂಡ್ ಸರ್ಕಲ್ ತನಕ ಐದಾರು ಬಾರಿ ಅಲೆಯುವ ರಾಜಯ್ಯನಿಗೆ ವಾಕಿಂಗೇ ಗತಿ. ಹಾಂ, ಹಿಂದೆ ಸೈಕಲ್ ಏರಿ ಮಾರಿದ್ದೂ ಊಂಟು, ಆದರೆ ಈಗ ಅವನ ಕಾಲುಗಳಿಗೆ ಆ ತ್ರಾಣವಿಲ್ಲ. ಜೊತೆಗೆ ಇಂದಿನ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ನಡುವೆ ಸೈಕಲ್ ತುಳಿಯುವ ಸಾಹಸಿ ಯುವಕರ ಗುಂಪಿನಲ್ಲಿ ಇವನಿಲ್ಲ.
ಹತ್ತು ವರುಷದ ಹಿಂದೆ ಇವನ ಜೀವನ ಹೀಗಿರಲಿಲ್ಲ. ಮಡದಿಯಿದ್ದಳು, ಈಗಿಲ್ಲ. ಒಂದು ರಾತ್ರಿ ನಿದ್ದೆಗೆ ಜಾರಿದವಳು, ಜೀವನದಿಂದಲೂ ಜಾರಿ ಹೋದಳು. ಅವಳಿದ್ದಾಗಲೇ ಬದುಕು ಚೆಂದವಾಗಿತ್ತು. ಇವನು ತರುತ್ತಿದ್ದ ಅಲ್ಪ ಗಳಿಕೆಯಲ್ಲೇ ಎಷ್ಟು ಚೆಂದಾಗಿ ಜೀವನ ಕಟ್ಟಿದ್ದಳಾಕೆ. ಈಗ ಈತನಿರುವ ೧೦*೧೦ ವ್ಯಾಸದ ರೂಮನ್ನೇ ಮನೆಯಾಗಿಸಿದ್ದಳು. ಅದು ತನ್ನ ತವರಿನಿಂದ ಬಂದ ಉಡುಗೊರೆ ಎಂಬ ಹೆಮ್ಮೆಯಿದ್ದರೂ ಅಹಂ ಇರಲಿಲ್ಲ ಆಕೆಯಲ್ಲಿ. ಶಾಲೆಯಲ್ಲಿ ಕಲಿಯಲಿಲ್ಲವಾದರು ಜೀವನ ನಡೆಸುವುದು ತಿಳಿದಿತ್ತು. ಗಂಡೊಂದು, ಹೆಣ್ಣೆರಡನ್ನು ಹೆತ್ತು, ಅವುಗಳಿಗೆ ಶಾಲಾ-ಕಾಲೇಜುಗಳನ್ನೂ ತೋರಿಸಿ, ಜೊತೆಗೊಂದೊಂದು ಜೋಡಿಯನ್ನೂ ಮೂವರಿಗೂ ಕೊಡಿಸಿ ಕಣ್ಮರೆಯಾಗಿದ್ದಳು ಆ ಮಹಾತಾಯಿ.
ಆದರೆ, ರಾಜಯ್ಯನಿಗೆ ಹೆಂಡತಿಯ ಮೇಲೆ ಮುನಿಸಿದೆ. ಅವಳು ಮಕ್ಕಳಿಗೆ ಅಷ್ಟು ಓದಿಸಿದ್ದರಿಂದಲೇ ಮಕ್ಕಳು ತನ್ನಿಂದ ಇಂದು ದೂರವಿದ್ದಾರೆ ಎಂದವನ ವಿಚಾರ. ಬಿ.ಎಸ್ಸಿ ಮಾಡಿದ ಮಗ ಹೆಂಡತಿ ಮಕ್ಕಳೊಡನೆ ತಿಳಿಯದ ದೇಶದಲ್ಲಿದ್ದಾನೆ, ಕಿರಿಯ ಮಗಳದೂ ಅದೇ ಕಥೆ. ಹಿರಿಯಳು ಇದೇ ಊರಲ್ಲಿದ್ದರೂ ಎಲ್ಲಿದ್ದಾಳೋ ತಿಳಿಯದು. ಅವಳಿಗೆ ತಾತನಂತೆ ಸೀಳು ತುಟಿಯ ಮಗು ಹುಟ್ಟಿತೆಂದು ತನ್ನ ಅಪ್ಪನ ಮೇಲೆ ಸಿಟ್ಟು. ’ಅಪ್ಪ ಮಾತನಾಡುವುದು ಅರ್ಥವೇ ಆಗುವುದಿಲ್ಲ. ಸದಾ ಮೂಗಿನಲ್ಲೇ ಮಾತು ಬಂದರೆ ಅದು ತನಗೆ ತಿಳಿಯುವುದಾದರೂ ಹೇಗೆ?’ ಈಗ ಇಂಥದ್ದೇ ಒಂದು ಕೂಸು ತನಗಾದ ಮೇಲೆ ಅಪ್ಪನ ಮೇಲೆ ಎಲ್ಲಿಲ್ಲದ ಹಗೆ. ’ಅಮ್ಮನಿಗಾದರೂ ಬೇರೆ ದಾರಿಯಿರಲಿಲ್ಲ ಇವನ ಜೊತೆಯಿದ್ದಳು, ನಾನ್ಯಾಕಿರಬೇಕು?’ ಎಂದು ದೂರವಿದ್ದಾಳೆ .
ಇರಲಿ, ಇವರ್ಯಾರ ಮೇಲೂ ರಾಜಯ್ಯನಿಗೆ ಸಿಟ್ಟಿಲ್ಲ. ಸಿಟ್ಟೆಲ್ಲಾ ಹೆಂಡತಿಯ ಮೇಲೆ. ಏನು ಮಾಡುವುದು? ತನ್ನನು ತನ್ನೆಲ್ಲಾ ನ್ಯೂನ್ಯತೆಯ ನಡುವೆಯೂ ಪ್ರೀತಿಸಿದ ಜೀವ ಅದೊಂದೇ ತಾನೆ! ತನ್ನನ್ನು ಹೀಗೆ ಬಿಟ್ಟು ಎಲ್ಲೋ ಹೋಗಲು ಅವಳಿಗೆ ಅಲ್ಲಿ ಅಂತಹ ತುರ್ತಾದ ಕೆಲಸವಾದರೂ ಏನಿತ್ತು? ಕರೆದೊಯ್ದಿದ್ದರೆ ತಾನು ಅವಳೊಡನೆ ಹೋಗುತ್ತಿರಲಿಲ್ಲವೆ! ಎಂಬ ನೋವು ತುಂಬಿದ ಸಿಟ್ಟಿದೆ. ಅತ್ತರೂ ಕಂಬನಿ ಒರೆಸುವ ಕೈಗಳಿಲ್ಲ, ಅಳುವುದಾದರೂ ಏತಕ್ಕೆ ಎನಿಸುತ್ತದೆ.
ಅತ್ತ ಕಡೆಯಿಂದ ಇತ್ತ ಕಡೆ ಹೊರಳಿ , ಇತ್ತಿಂದತ್ತ ಹೊರಳುವುದೇ ಸಮಯ ಕಳೆಯಲು ಮಾಡುವ ಕೆಲಸ. ಪ್ರತಿರಾತ್ರಿಯೂ ಹೀಗೇ.
ಬೆಳಗಾಯ್ತು, ಊದಿನಕಡ್ಡಿ ತುಂಬಿದ ಬ್ಯಾಗು ಹಿಡಿದು ಹೊರನಡೆದ ರಾಜಯ್ಯನ ಮನದಲ್ಲಿ, ಮತ್ತೆ ರಾತ್ರಿಯಾಗುತ್ತದೆಂಬ ಭಯವಿದೆ.
– ನರೇಂದ್ರ ಕಶ್ಯಪ್
kashyap.mech@yahoo.com
Facebook ಕಾಮೆಂಟ್ಸ್