X

ಗೊತ್ತು ಗುರಿ ನಿಯಮವಿದೆಯೇ ಸೃಷ್ಟಿಯಾಟಕೆ ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ  ೩೨

ಪರಬೊಮ್ಮ ನೀ ಜಗವ ರಚಿಸಿದವನಾದೊಡದು |

ಬರಿಯಾಟವೋ ಕನಸೊ ನಿದ್ದೆ ಕಲರವವೋ ? ||

ಮರುಳನವನಲ್ಲದೊಡೆ ನಿಯಮವೊಂದಿರಬೇಕು |

ಗುರಿ ಗೊತ್ತದೇನಿಹುದೋ? – ಮಂಕುತಿಮ್ಮ || ೩೨ ||

ಹಿಂದಿನೆರಡು ಕಗ್ಗಗಳಲ್ಲಿ (30, 31) ಪರಬ್ರಹ್ಮದ ಸ್ವರೂಪ ಮತ್ತು ತಂತ್ರಗಾರಿಕೆಯ ಬಗ್ಗೆ ಸ್ವೈರವಿಹಾರ ಮಾಡಿದ ಕವಿಮನ ಈ ಕಗ್ಗದಲ್ಲಿ ಆ ಸೃಷ್ಟಿಯ ಹೊತ್ತಿನಲ್ಲಿರಬಹುದಾದ ಪರಬ್ರಹ್ಮದ ಮನಸ್ಥಿತಿಯ ಕುರಿತಾದ ವಿಶ್ಲೇಷಣೆಗಿಳಿದುಬಿಡುತ್ತದೆ.

ಕಣ್ಣಿಗೆ ಕಾಣಿಸದೆ ಮಿಥ್ಯೆಯ ಮರೆಯಲ್ಲಡಗಿಕೊಂಡ ಸೃಷ್ಟಿಯ ಸ್ವರೂಪದ ಗೊಂದಲ ತಿಳಿಯಾಗುವ ಮೊದಲೆ, ಪ್ರಕೃತಿ ಸಹಜ ಸ್ಥಿತಿಯಲ್ಲಿ ಅನಾವರಣವಾಗದ ಮತ್ತೊಂದು ಗೊಂದಲ ಸೇರಿಕೊಂಡು ಎಲ್ಲವನ್ನು ಅಯೋಮಯವಾಗಿಸಿಬಿಟ್ಟಿದೆ (31,32). ಇದೆಲ್ಲ ಗೊಂದಲಗಳನ್ನು ನೋಡಿದರೆ – ಅದೇನು ಬೇಕಾಗಿಯೆ ಸೃಜಿಸಿಕೊಂಡ ಬುದ್ಧಿವಂತಿಕೆಯ ಪರಿಸರವೊ? ಅಥವಾ ಕೈ ಹಿಡಿದ ಕಾರ್ಯದಲ್ಲಿ ಏಮಾರಿ, ನಿರೀಕ್ಷಿಸಿದ್ದನ್ನು ಸಾಧಿಸಲಾಗದೆ ಅನಿರೀಕ್ಷಿತ ಫಲಿತದ ಅನಿವಾರ್ಯಕ್ಕೊಳಗಾದ ಪರದಾಟವೊ ? ಎಂಬ ಸಂಶಯ ಕವಿಯ ಮನದಲ್ಲಿ ಮೂಡಿರಬೇಕು. ಅದರ ಫಲಶೃತಿಯೆಂಬಂತೆ ಈ ಸಾಲುಗಳು ಹೊರಡುತ್ತವೆ – ಪರಬ್ರಹ್ಮನನ್ನೆ ಅವನ ವಿಧಾನ, ನಿಯಮಗಳ ಹಿನ್ನಲೆಯನ್ನು ಪ್ರಶ್ನಿಸುವ ಸಾಹಸದತ್ತ.

ಪರಬೊಮ್ಮ ನೀ ಜಗವ ರಚಿಸಿದವನಾದೊಡದು |

ಬರಿಯಾಟವೋ ಕನಸೊ ನಿದ್ದೆ ಕಲರವವೋ ? ||

ಪರಬ್ರಹ್ಮನೇ ಈ ಜಗವಿನ್ಯಾಸವನ್ನು ರಚಿಸಿ, ಸೃಜಿಸಿದ್ದು ಎಂಬ ನಂಬಿಕೆಯನ್ನು ಮೂಲಾಧಾರವಾಗಿಟ್ಟುಕೊಂಡು ಹೊರಟರೂ ಇಷ್ಟೆಲ್ಲ ಗೊಂದಲ, ಅಸಹಜತೆಗಳನ್ನು ನೋಡಿದರೆ ಒಂದನುಮಾನವಂತೂ ಬರುತ್ತದೆಯಂತೆ ಮಂಕುತಿಮ್ಮನಿಗೆ… ‘ಇದೇನು ಸುಮ್ಮನೆ ಹುಡುಗಾಟವಾಡಲೆಂದು ರಚಿಸಿದ, ಉಢಾಪೆಯ ಅನಾಸಕ್ತ ಸೃಷ್ಟಿಯೊ ? ಅಥವಾ ನಿದ್ದೆಯಲ್ಲಿ ಕನಸಿನಲ್ಲಾಗುವಂತೆ, ಯಾವುದೇ ಸರಿಯಾದ ಪೂರ್ವನಿಯೋಜಿತ ಸಿದ್ಧತೆ, ಕ್ರಮಬದ್ಧತೆ, ಯೋಜನೆ, ರೂಪುರೇಷೆಯಿರದೆ ಅಡ್ಡಾದಿಡ್ಡಿ ಮನಸಿಗೆ ತೋಚಿದ ಅಪರಿಪೂರ್ಣ ಕಲ್ಪನೆಯನ್ನೆ ಸಾಕಾರವಾಗಿಸಿದ ರೀತಿಯೊ?’ ಎಂದು. ಮೊದಲೆರಡು ಸಾಲಿನಲ್ಲಿ ಆ ಅನುಮಾನ ಪ್ರಶ್ನೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಹಾಗೆ ಸಂಶಯಿಸುತ್ತಲೆ ಮುಂದಿನೆರಡು ಸಾಲುಗಳಲ್ಲಿ ಆ ಪ್ರಶ್ನೆಗಿರಬಹುದಾದ ಉತ್ತರವನ್ನು ಊಹಿಸುತ್ತದೆ ಕವಿ ಮನ.

ಮರುಳನವನಲ್ಲದೊಡೆ ನಿಯಮವೊಂದಿರಬೇಕು |

ಗುರಿ ಗೊತ್ತದೇನಿಹುದೋ? – ಮಂಕುತಿಮ್ಮ ||

ಇಷ್ಟೆಲ್ಲಾ ಅದ್ಭುತ ರಚನೆಯನ್ನು ಸೃಜಿಸುವಾತ ಬರಿಯ ಹುಚ್ಚಾಟದಿಂದ (ಮರುಳುತನ) ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ, ಅವನ ಈ ಸೃಷ್ಟಿಗೂ ಯಾವುದೊ ಒಂದು ಮೂಲ ರೀತಿ, ನೀತಿ, ನಿಯಮಗಳ ಕಟ್ಟುಪಾಡಿರಬೇಕು. ಯಾವುದೋ ಪೂರ್ವ ನಿಯೋಜಿತ ಗೊತ್ತು, ಗುರಿ, ಉದ್ದೇಶಗಳಿರಬೇಕು. ಆದರೆ ಆ ದಿಕ್ಕು ದೆಸೆಗಳ ಸುಳಿವು ನಮಗೆ ಕಾಣುತ್ತಿಲ್ಲವಷ್ಟೆ ಎಂದು ಭಾಗಶಃ ಉತ್ತರದ ಸಾಧ್ಯತೆಯಲ್ಲಿಯೆ ಸಮಾಧಾನಪಟ್ಟುಕೊಳ್ಳುತ್ತದೆ ಕವಿಮನದ ಜಿಜ್ಞಾಸೆ.

ಇಲ್ಲಿ ಗಮನಿಸಬೇಕಾದ ಸೂಕ್ಷ್ಮವೆಂದರೆ ಮೊದಲಿನೆರಡು ಸಾಲು ಮತ್ತು ಕೊನೆಯೆರಡರ ನಡುವೆ ಹೇಳದೆ ಬಿಟ್ಟದ್ದು. ಮೊದಲೆರಡರಲ್ಲಿ ಪ್ರಶ್ನಿಸುವ ಧಾವಂತ, ತಟ್ಟನೆ ಕೊನೆಯೆರಡರಲ್ಲಿ ತಾನೇ ಏನೋ ಉತ್ತರ ಕಂಡುಕೊಂಡ ಅರೆ ಸಮಾಧಾನವನ್ನು ಸೂಚಿಸುತ್ತದೆ. ಆದರೆ ಆ ತೀರ್ಮಾನಕ್ಕೆ ಬರಬೇಕಾದಲ್ಲಿ ಅದೆಷ್ಟು ಹುಡುಕಾಟ, ತಡಕಾಟ, ತಾಕಲಾಟ, ಅಧ್ಯಯನ, ಸಂಶೋಧನೆ, ಚಿಂತನೆ, ಮಥನ, ಚರ್ಚೆ, ವಾದವಿವಾದಗಳು ನಡೆದಿರಬಹುದೆನ್ನುವ ಕಲ್ಪನೆಯನ್ನು ನಮಗೇ ಬಿಟ್ಟುಬಿಡುತ್ತದೆ. ತಾನು ಕೊನೆಗೆ ತಲುಪಿದ ಅಂತಿಮ ನಿಲುವನ್ನು ಮಾತ್ರ ಹೇಳುತ್ತಾ, ಮಿಕ್ಕೆಲ್ಲ ಜಂಜಾಟಗಳನ್ನು ಅಮೂರ್ತ ಇಂಗಿತವಾಗಿಯಷ್ಟೆ ಪ್ರಸ್ತುತಪಡಿಸುತ್ತದೆ.

ಇನ್ನೂ ಒಳಹೊಕ್ಕು ನೋಡಿದರೆ ‘ಗುರಿ ಗೊತ್ತದೇನಿದೆಯೋ?’ ಎನ್ನುವ ಎರಡು ಪದಗಳಲ್ಲೇ, ಆ ಹುಡುಕಾಟದ ಪ್ರಕ್ರಿಯೆಯಲ್ಲಿ ಕವಿಯಂತಃಕರಣಗಳೆಲ್ಲ ಅಲೆದಾಡಿ ಕ್ರಮಿಸಿದ ದೂರ, ಆಳ, ಅಗಲಗಳ ವೈಶಾಲ್ಯದ ತುಣುಕನ್ನು ಪರಿಚಯಿಸುತ್ತದೆ – ತನ್ನ ಪದಗಳ ಸರಳ ಮತ್ತು ಸೀಮಿತ ವ್ಯಾಪ್ತಿಯ ಪರಿಧಿಯಲ್ಲೆ. ಕೊನೆಗೂ ಅಂತಿಮವಾದ, ಪರಿಪೂರ್ಣ ಉತ್ತರ ಸಿಗದ ಹತಾಶ ಭಾವ ಮತ್ತು ಅರಿಯಲಾಗದ ಅಗಾಧ ಶಕ್ತಿಯ ಕುರಿತಾದ ವಿಸ್ಮಯ ಒಟ್ಟಾಗಿಯೇ ಇಣುಕುವುದನ್ನು ಇವೆರಡು ಪದಗಳ ಪ್ರಶ್ನಾರ್ಥಕ ರೂಪದಲ್ಲಿ ಕಾಣಬಹುದು.

#ಕಗ್ಗಕೊಂದು-ಹಗ್ಗ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post