ಪದವಿಗೆ ಕಾಲಿರಿಸುವವರೆಗೆ ಯಾವುದೇ ಗುರಿಯನ್ನು ಹೊಂದಿರದ ರಕ್ಷಿತಾಗೆ, ಡಿಗ್ರಿ ಅಭ್ಯಾಸದ ವೇಳೆ ಜ್ಞಾನೋದಯವಾಗಿದ್ದು.. ‘ನಾನು ಇನ್ನೂ ಹೀಗೆಯೇ ಇದ್ದರೆ ಮುಂದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂಬ ಅರಿವಿನ ಬೆಳಕು ಆಕೆಯ ಹೃದಯದಲ್ಲಿ ಮಿಂಚಿ ಮರೆಯಾದಾಗ ಸಾಧನೆ ಮಾಡುವುದರ ಕುರಿತಂತೆ ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರಂತೆ. ಮಾತನಾಡುವುದರಲ್ಲಿ ಎತ್ತಿದ ಕೈಯಾದ್ದರಿಂದ ಅವರಿಗೆ ಆರ್.ಜೆ. ಆಗಬೇಕೆಂಬ ಹಂಬಲ ಶುರುವಾಯಿತು. ನಿರೂಪಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರಿಂದ ಅವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಪದವಿ ಮುಗಿದ ಕೂಡಲೇ ಮಂಗಳೂರಿನ 92.7 ಬಿಗ್ ಎಫ್.ಎಂನಲ್ಲಿ ಆರ್.ಜೆ.ಯಾಗಿ ಸೇರಿಕೊಂಡರು. ರಕ್ಷಿತಾ ನಡೆಸಿಕೊಡುತಿದ್ದ Full Volume ಕಾರ್ಯಕ್ರಮ ತುಂಬ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಜನರ ಆಶಯದಂತೆ ಆರ್‌ಜೆ ಮ್ಯಾರಥಾನ್ ಎಂಬ ಸವಾಲುಬದ್ಧ ಕಾರ್ಯವನ್ನು ಕೈಗೆತ್ತಿಕೊಂಡ ರಕ್ಷಿತಾ ಅವರು ಸುಮಾರು 5 ದಿನ, 106 ಗಂಟೆಗಳ ಕಾಲ ಸುದೀರ್ಘ ಕಾರ್ಯಕ್ರಮ ನಿರೂಪಿಸುವುದರ ಮೂಲಕ ಒಂದು ದಾಖಲೆ ನಿರ್ಮಿಸಿದರು. ಎರಡೂವರೆ ವರ್ಷಗಳಿಂದ ಆರ್‌ಜೆಯಾಗಿ ಕೆಲಸ ಮಾಡಿರುವ ಇವರ ನಿರೂಪಣಾ ಶೈಲಿಗೆ ಅಪಾರ ಅಭಿಮಾನಿ ಬಳಗವಿದೆ. ಇದಲ್ಲದೇ ಬೆಂಗಳೂರು, ಮಂಗಳೂರು ಮುಂತಾದ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಿರೂಪಿಸಿ ಸೈ ಎನಿಸಿಕೊಂಡಿದ್ದಾರೆ.
ರಕ್ಷಿತಾ ಈವರಗೆ ಅನೇಕ ಸಂದರ್ಶನಗಳನ್ನು ಮಾಡಿದ್ದಾರೆ. ಅದರಲ್ಲೂ ಭಾರತದ ಕ್ರಿಕೆಟ್ ತಂಡದ ನಾಯಕ ಎಂ.ಎಸ್.ಧೋನಿ, ನಟ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಸಂಗೀತಗಾರ karthik ಇವರೆಲ್ಲರನ್ನು ಸಂದರ್ಶಿಸಿರುವುದು ಇವರ ಜೀವನದಲ್ಲಿ ಮರೆಯಾಲಾಗದ ಕ್ಷಣಗಳಂತೆ. ಮೊದಲ ಬಾರಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರನ್ನು ಮಂಗಳೂರಿನ ಎಫ್‌ಎಂನಲ್ಲಿ ಸಂದರ್ಶಿಸುವುದರ ಮೂಲಕ ಇಬ್ಬರು ರಾಕಿ ಬ್ರದರ್ಸ್ ಅನ್ನು ಅವರು ಪಡೆದುಕೊಂಡಿದ್ದಾರೆ.
ಎಫ್‌ಎಂನಲ್ಲಿ ತನ್ನ ಮಾತಿನ ಚಾತುರ್ಯವನ್ನು ಪ್ರದರ್ಶಿಸಿರುವ ರಕ್ಷಿತಾ ಆರ್‌ಜೆಯಾಗಿ ಮಾತ್ರವಲ್ಲದೇ ನಮ್ಮ ಟಿವಿ ಮತ್ತು ಸ್ಪಂದನ ಚಾನೆಲ್‌ಗಳಲ್ಲಿ ವಿಜೆಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಚಲನಚಿತ್ರಗಳಲ್ಲಿ ನಟನೆ ಮತ್ತು ಡಬ್ಬಿಂಗ್ ಮಾಡುತ್ತಿರುವ ಇವರು ತುಳುವಿನ ‘ಕುಡ್ಲ ಕೆಫೆ’, ‘ದಬಕ್ ದಬಾ ಐಸಾ’ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಿಂದಲೂ ಆಫರ್‌ಗಳು ಬಂದಿದ್ದು, ತುಳುವಿನ ‘ಪಿಲಿಬೈಲು ಯಮುನಕ್ಕ’ ಚಿತ್ರದಲ್ಲಿ ನಟಿಸಿದ್ದಾರೆ.
ರಕ್ಷಿತಾ ಉತ್ತಮ ಕ್ರೀಡಾಪಟುವೂ ಹೌದು. ಸ್ಟ್ಯಾಂಪ್ ಮತ್ತು ಎಂ.ಎಸ್.ಧೋನಿ ಫೋಟೊ ಸಂಗ್ರಹಿಸುವುದೆಂದರೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ಧೋನಿ ಇವರ ರೋಲ್ ಮಾಡೆಲ್. ಕ್ರಿಕೆಟ್ ಎಂದರೆ ತುಂಬಾ ಒಲವಿರುವ ಇವರು ಪ್ರಸ್ತುತ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡ camp ge ಆಯ್ಕೆಯಾಗಿರುವುದು ಸಂತಸದ ವಿಷಯ. ಸದ್ಯಕ್ಕೆ ಆರ್.ಜೆಯನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಮತ್ತು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ರಕ್ಷಿತಾ ಹುಟ್ಟಿ ಬೆಳೆದದ್ದು, ಮೂಡಬಿದಿರೆಯಲ್ಲಾದರೂ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ವಿಟ್ಲದಲ್ಲಿ ಪಡೆದು, ತದನಂತರದ ಬಿಬಿಎಂ ಪದವಿಯನ್ನು ಉಡುಪಿಯ ವಿಲಗ್ರಿಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಕ್ರಿಕೆಟ್ ಜೀವನವನ್ನು ಆರಂಭಿಸಿರುವ ಇವರು ತಮ್ಮ ಮೊದಲ ಪ್ರಾಶಸ್ತ್ಯವನ್ನು ಕ್ರಿಕೆಟಿಗೆ ನೀಡಿ ಸಮಯ ದೊರೆತರೆ ನಂತರದ ಆದ್ಯತೆ ಸಿನಿಮಾ ಕ್ಷೇತ್ರಕ್ಕೆ ನೀಡ ಬಯಸುತ್ತಾರೆ. ತನ್ನ ಹೆಸರಿನ ಮುಂದೆ ಡಾಕ್ಟರ್ ಎಂಬ ಪದವಿ ಇರಬೇಕೆಂಬುದು ಇವರ ಜೀವನದ ದೊಡ್ಡ ಆಸೆ.
‘ಜೀವನ ತುಂಬ ಚಿಕ್ಕದು. ನಾಳೆ ಏನು ಎಂದು ಯಾರಿಗೂ ತಿಳಿದಿಲ್ಲ. ಈ ಸಮಯದಲ್ಲಿ ಏನು ಮಾಡಬೇಕೆಂದು ಅನಿಸುತ್ತದೆಯೋ ಅದನ್ನು ಮಾಡಿ ಬಿಡಬೇಕು. ಆರ್‌ಜೆಯಾದವರಿಗೆ ಮುಖ್ಯವಾಗಿ ಜನರನ್ನು ಮನರಂಜಿಸುವ ಕಲೆ ಮತ್ತು ಗುಣ ತಿಳಿದಿರಬೇಕು. ಒಬ್ಬರನ್ನು ನಗಿಸುವುದು ತುಂಬಾ ಕಷ್ಟದ ಸಂಗತಿ. ನಮ್ಮಿಂದ ಒಂದಿಬ್ಬರನ್ನು ನಗಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ತೃಪ್ತಿ ಇನ್ನೊಂದಿಲ್ಲ. ಜನರನ್ನು ಯಾವಾಗ ನಾವು ನಮ್ಮವರು ಎಂದು ತಿಳಿದುಕೊಳ್ಳುತ್ತೇವೋ ಆಗ ಅವರು ನಮ್ಮನ್ನು ಸ್ವೀಕರಿಸುತ್ತಾರೆ ಮತ್ತು ಇಷ್ಟಪಡುತ್ತಾರೆ.’ ಎಂದು ಖುಷಿಯಿಂದ ಹೇಳುತ್ತಾರೆ ರಕ್ಷಿತಾ.
Facebook ಕಾಮೆಂಟ್ಸ್