Chand tanha hai asman tanha
Dil mila hai kahan kahan tanha
Bujh gai aas chup gaya tara
Thartharata raha dhuan tanha
ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ ಮನ.
ಬೆಳದಿಂಗಳ ಶಾಂತ ರಾತ್ರಿಯಲ್ಲಿ ಅಗಣ್ಯ ತಾರಾರಾಶಿಗಳ ನಡುವೆ ಸವಿ ಮಧುರ ಸ್ವರದಲ್ಲಿ ಹಾಡಿರುವ ಈ ಹಾಡನ್ನು ಕೇಳುತ್ತಾ ಕುಳಿತರೆ ಬೆನ್ನತ್ತಿದ ಏಕಾಂತವನ್ನೂ ಶೃಂಗಾರ ಕಾವ್ಯವನ್ನಾಗಿ ಬಣ್ಣಿಸಿರುವ ಚಿತ್ರಣ ತಿಳಿಯುತ್ತದೆ. ವರ್ಣಿಸಿರುವ ಪ್ರತಿ ಸಾಲಿನಲ್ಲೂ ಏಕಾಂತ, ಹಾಡಿರುವ ಪ್ರತಿ ಪದಗಳಲ್ಲೂ ವೇದನೆ. ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವವರು ನಾಯಕ ನಟಿ, ಕವಿಯತ್ರಿ, ಹಾಡುಗಾರ್ತಿ, ನೃತ್ಯಗಾರ್ತಿ ಹಾಗು ಹಿಂದಿ ಚಿತ್ರರಂಗದ ದಂತಕಥೆ, ಟ್ರಾಜಿಡಿ ಕ್ವೀನ್, ಮ್ಹಜಾಮೀನ್ ಬಾನು ಉರ್ಫ್ ಮೀನಾ ಕುಮಾರಿ. ‘ನಾಜ್’ ಎಂಬ ಕಾವ್ಯನಾಮದೊಂದಿಗೆ ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವ ಮ್ಹಜಾಮೀನ್ ಬಾನು ಪರದೆಯ ಹಿಂದೂ ಹಾಗು ಪರದೆಯ ಮುಂದೂ ಕಂಡ ತನ್ನ ನೋವಿನ ಸಂಘರ್ಷಣೆಯನ್ನು ಕವಿತೆಗಳಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಚಿತ್ರಪ್ರಿಯರ ಹೃದಯಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ.
ಆಗಸ್ಟ್ 1, 1933 ರಲ್ಲಿ ಅಲಿ ಬಕ್ಸ್ ಹಾಗು ಇಕ್ಬಲ್ ಬೇಗಮ್ ಬಡ ದಂಪತಿಗೆ ಜನಿಸಿದ ಮೀನಾ ,ಬಾಲ್ಯದಿಂದಲೇ ಕಷ್ಟದ ಸರಮಾಲೆಯ ಜೊತೆಗೆ ಬೆಳೆದಳು. ನಾಟಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಕಷ್ಟದಿಂದ ಜೀವನ ಸಾಗಿಸುತ್ತಿದ್ದ ತಂದೆ ಅಲಿ ಬಕ್ಸ್ ಗಂಡು ಮಗುವೊಂದನ್ನು ಅಪೇಕ್ಷಿಸಿದ್ದರು. ಮೀನಾಳ ಜನನ ತಂದೆಗೆ ಅದೆಷ್ಟು ನೋವುಂಟು ಮಾಡಿತ್ತೆಂದರೆ ಕೆಲ ಸಮಯದ ಕಾಲ ಅನಾಥಾಲಯದ ಬಳಿ ಮಗುವನ್ನು ಬಿಟ್ಟು ಹೋದರು. ಆತ್ಮಸಾಕ್ಷಿಯ ಕರೆಗೆ ಕರಗಿದ ತಂದೆ ಪುನಃ ಹಿಂದಕ್ಕೆ ಬಂದು ಅಳುತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದರೆ ಮಗುವಿನ ಮೈಯ ಮೇಲೆಲ್ಲಾ ಇರುವೆಗಳು ತುಂಬಿಕೊಂಡಿರುತ್ತವೆ! ಹೀಗೆ ಹುಟ್ಟಿಸಿದ ತಂದೆಗೆ ಬೇಕು-ಬೇಡವಾದ ಮೀನಾ ತನ್ನ ಬಾಲ್ಯದಲ್ಲೇ ನಾಟಕ ಶಾಲೆಗೆ ದುಡಿಯಲು ಹೋಗಬೇಕಾಗುತ್ತದೆ. ಗಂಡನ್ನು ಅಪೇಕ್ಷಿಸಿದ್ದ ಅಪ್ಪ ಆಕೆಯನ್ನು ಒಬ್ಬ ಹೆಣ್ಣು ಎಂಬುದನ್ನೇ ಮರೆಯುತ್ತಾರೆ. ಇತರ ಮಕ್ಕಳೆಲ್ಲ ಶಾಲೆಗೆ ಹೊಗುವುದ ಕಂಡು ತಾನು ಓದಬೇಕೆಂದು ಪುಟಾಣಿ ಮೀನಾ ಅತ್ತರೆ ಆಕೆಯನ್ನು ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡೆಂದು ತಂದು ನಿಲ್ಲಿಸುತ್ತಿದ್ದರು ಅಪ್ಪ. ಹೀಗೆ ಬಾಲ್ಯದಿಂದಲೇ ಮೀನಾಳಿಗೆ ನಾಟಕ ಹಾಗು ಚಿತ್ರಗಳ ನಂಟು ಹತ್ತುತ್ತದೆ.
ಮ್ಹಜಾಮೀನ್ ಬಾನುವಿನಿಂದ ಬೇಬಿ ಮೀನಾಳಾಗಿ, ತನ್ನ ಹದಿನಾಲ್ಕನೇ ವಯಸ್ಸಿಗೆ 1946 ರಲ್ಲಿ ‘ಬಚ್ಚೋ ಕ ಖೇಲ್’ ಎನ್ನುವ ಚಿತ್ರ ದಲ್ಲಿ ಮೀನಾ ಕುಮಾರಿ ಎಂಬ ಹೆಸರಿನೊಟ್ಟಿಗೆ ನಾಯಕ ನಟಿಯಾಗಿ ತೆರೆಯ ಮೇಲೆ ಮೂಡುತ್ತಾಳೆ. ಮುಂದೆ ನಡೆಯುವುದೆಲ್ಲ ಅಮೋಘ ಇತಿಹಾಸ. ನಟನೆಯನ್ನು ಅದೆಷ್ಟು ಕರಗತ ಮಾಡಿಕೊಳ್ಳುತ್ತಾಳೆಂದರೆ ಅಂದಿನ ದಿನಗಳ ಹೆಣ್ಣಿನ ಬವಣೆಯ ನಾನಾ ಮುಖಗಳನ್ನು, ಆಕೆಯ ನೂರಾರು ಭಾವನೆಗಳನ್ನು ನೋಡುಗರ ಮನ ಮುಟ್ಟುವಂತೆ, ನೋಡುಗ ಕಣ್ಣು ಮಿಟುಕಿಸದಂತೆ ನಟಿಸುತ್ತಾಳೆ. ದೇಶದ ಮನೆಮಾತಾಗುತ್ತಾಳೆ. ಹೀಗೆ ತೊಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೀನಾ ನಾಲ್ಕು ಬಾರಿ ಫಿಲಂ ಫೆರ್’ನ ಅತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿರುವುದಲ್ಲದೆ ಎಂಟು ಬಾರಿ ನಾಮನಿರ್ದೇಶನಗೊಂಡಿರುತ್ತಾಳೆ! ಫಿಲಂ ಫೆರ್’ನ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಮೀನಾ ಕುಮಾರಿಯದೆ ಆಗಿದೆ.
ಚಿತ್ರರಂಗಕ್ಕೆ ಬಂದು ದೇಶದಲ್ಲೆಲ್ಲಾ ಪ್ರಸಿದ್ದಿ ಪಡೆದಿದ್ದರೂ ಮನೆಯ ಗೋಳೇನು ಈಕೆಗೆ ತೀರಲಿಲ್ಲ. ಅಪ್ಪನಿಗೆ ಇವಳು ನೋಟನ್ನು ಸುರಿಯುವ ಯಂತ್ರದಂತಾಗುತ್ತಾಳೆ. ಚಿತ್ರಗಳ ಆಯ್ಕೆ, ಸಂಭಾವನೆ ಎಲ್ಲವೂ ಅಪ್ಪನ ಆಯ್ಕೆ. ಈಕೆ ಏನಿದ್ದರೂ ಕ್ಯಾಮರಾದ ಮುಂದೆ ತನ್ನ ಮುಗ್ದ ಮುಖವನ್ನು ತಂದು ನಟಿಸಿ ಪುನಹ ಸಂಜೆ ಮನೆಯನ್ನು ಸೇರಬೇಕು. ಆದ ಕಾರಣಕ್ಕೆ ಈಕೆಯನ್ನು ಏಕಾಂತ ಸದಾ ಕಾಡಿತು. ರವೀಂದ್ರನಾಥ ಠಾಗೂರರ ವಂಶಸ್ಥಳಾಗಿದ್ದರಿಂದಲೋ (ಮೀನಾಳ ಅಜ್ಜಿ ರವೀಂದ್ರನಾಥ ಠಾಗೂರರ ತಮ್ಮನ ಮಗಳು) ಏನೋ ನಟನೆಯ ಜೊತೆ-ಜೊತೆಗೆ ಬರಹಗಳಲ್ಲೂ ಮೀನಾ ಕುಮಾರಿಗೆ ಆಸಕ್ತಿ ಮೂಡುತ್ತದೆ. ತನ್ನ ನೋವು ಸಂಕಟವನ್ನೆಲ್ಲ ಬರೆದಿಡುವ ಬಯಕೆ ಮೂಡುತ್ತದೆ. ಆದರೆ ತನ್ನ ಜೀವನದಲ್ಲಿ ಒಮ್ಮೆಯೂ ಶಾಲೆಯ ಹಾದಿ ಕಾಣದ ಮೀನಾ ಬರೆಯುವುದೇಗೆ? ಯಾರೊಟ್ಟಿಗೂ ಹಂಚಿಕೊಳ್ಳಲಾಗದ ಸಾವಿರ ಭಾವಗಳು ಕಣ್ಣ ಅಂಚಿನಲ್ಲಿ ಬಂದು, ಕರಗಿ ಜಾರಿ ಹೋಗುವ ಮುನ್ನ ಹಿಡಿದು ಕೂರಿಸಬೇಕು. ಬರೆಯಬೇಕು. ದೃತಿ ಗೆಡುವುದಿಲ್ಲ. ಮನೆಯಲ್ಲೇ ಉರ್ದು ಪಾಠವನ್ನು ಹೇಳಿಸಿಕೊಳ್ಳುತ್ತಾಳೆ. ಕಲಿತ ಚೂರು ಪಾರು ಪದಗಳಲ್ಲೇ ಬರಹವನ್ನು ಶುರು ಮಾಡುತ್ತಾಳೆ.
ಏತನ್ಮದ್ಯೆ ಚಿತ್ರ ನಿರ್ದೇಶಕ ಕಮಲ್ ಅಮರೋಹಿಯೊಟ್ಟಿಗೆ ಪ್ರೇಮಾಂಕುರವಾಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಅವರನ್ನು ವರಿಸುತ್ತಾಳೆ. ಕೆಲ ವರ್ಷಗಳ ಕಾಲ ತನ್ನ ಜೀವನದ ಸುಮಧುರ ದಿನಗಳನ್ನು (ಇವೆಷ್ಟೇ ದಿನಗಳು ಮಾತ್ರ ಆಕೆಯ ನೆಮ್ಮದಿಯ ದಿನಗಳೆನ್ನಬಹುದು) ಪತಿಯೊಟ್ಟಿಗೆ ಕಳೆಯುತ್ತಾಳೆ. ಎಲ್ಲವೂ ಸಾಂಗಾವಾಗಿ, ನೆಮ್ಮದಿಯಿಂದ ನಡೆಯುತ್ತಿದೆ ಅನ್ನುವಾಗಲೇ ಎಲ್ಲ ಸಂಸಾರದಂತೆ ಇಲ್ಲೂ ಬಿರುಕು-ಕೊರಕುಗಳು ಮೂಡುತ್ತವೆ. ತುಂಬ ಭಾವಜೀವಿಯಾಗಿದ್ದ ಮೀನಾ ನೊಂದು ಪತಿಯಿಂದ ದೂರವಾಗುತ್ತಾಳೆ. ಆದರೆ ವಿಚ್ಛೇದನವನ್ನು ಬಯಸುವುದಿಲ್ಲ! ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯಿಂದ ದೂರದ ಮೀನಾ ಮತ್ತೊಮ್ಮೆ ಏಕಾಂತದ ಕೂಪಕ್ಕೆ ಬೀಳುತ್ತಾಳೆ. ಮುಂದೆದೂ ಏಳದ ರೀತಿ. ಆಗಲೇ ಇಂತಹ ಹಲವಾರು ಕತೆ, ಕವನಗಳು ಅವಳಿಂದ ಮೂಡುವುದು.
ಪತಿಯಿಂದ ದೂರದ ವೇದನೆ, ಮತ್ತೆಲ್ಲೋ ಆ ಬಗೆಯ ಪ್ರೇಮಾನ್ವೇಷಣೆ ಹಾಗು ಸೋಲು, ಜೊತೆಗೆ ಬೆಂಬಿಡದ ಏಕಾಂತ. ಮೀನಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ನಿದ್ರಾವಂಚಿತಳಾಗುತ್ತಾಳೆ. ಕೊನೆಗೆ ಆಕೆಯ ಡಾಕ್ಟರ್’ನ ಸಲಹೆಯ ಮೇರೆಗೆ, ನಿದ್ರಾಹೀನತೆಯಿಂದ ಕೊಂಚ ಮುಕ್ತಿ ಪಡೆಯಲು ಕೆಲವೇ ಮಿಲಿಯಷ್ಟು ಬ್ರಾಂಡಿಯ ಸೇವನೆಗೆ ಮುಂದಾಗುತ್ತಾಳೆ. ಆದರೆ ಅಭ್ಯಾಸ ಚಟವಾಗುತ್ತದೆ. ಮನಸ್ಸಿನ ನೋವಿಗೆ ಮದ್ಯದ ಕಹಿಯೇ ಔಷಧಿಯೆಂದು ಭಾವಿಸುತ್ತಾಳೆ. ನಂತರದ ದಿನಗಳಲ್ಲಿ ಮೀನಾ ಮದ್ಯಕ್ಕೆ ಅದೆಷ್ಟು ಅವಲಂಬಿತಳಾಗಿದ್ದಳೆಂದರೆ ಮನೆಯವರು ಹರಸಾಹಸ ಮಾಡಿ ಆಕೆಯಿಂದ ಮದ್ಯವನ್ನು ಕಾಣದಂತೆ ಮುಚ್ಚಿಡಬೇಕಿತ್ತು. ಆಕೆಯ ಅರಿವಿಗೆ ಬಾರದಂತೆ ದೇಹ ಹದಗೆಡುತ್ತಾ ಹೋಯಿತು. ಆದರೆ ಮೀನಾ ಬರೆಯುವುದ ಬಿಡಲಿಲ್ಲ. ಮದ್ಯದ ನಶೆಯಲ್ಲೂ ತನ್ನ ಜೀವನವನ್ನು ಕಥೆ-ಕವನಗಳ ಮೂಲಕ ಹಾಳೆಗಳ ಮೇಲೆ ಗೀಜುತ್ತಿದ್ದಳು. ಗೀಜಿ ಅಳುತ್ತಿದ್ದಳು. ಅತ್ತು ಮತ್ತೆ ಬರೆಯುತ್ತಿದ್ದಳು. ಇದೆ ಸಮಯದಲ್ಲಿ ‘ I write, I recite ‘ ಎಂಬ ಕವನ ಸಂಕಲವನ್ನು ಖಯ್ಯಾಮ್’ರ ಸಂಗೀತದ ಸಹಾಯದಿಂದ 1971 ರಲ್ಲಿ ಸ್ವತಹಃ ತಾನೆ ಹಾಡಿ ಹೊರ ತಂದಳು.
ಇವೆಲ್ಲದರ ನಡುವೆ ಮೀನಾ ನಟಿಸುವುದ ಮಾತ್ರ ಬಿಟ್ಟಿರಲಿಲ್ಲ. ಜೀವನ ನೋಯಿಸಿದಷ್ಟು ಅವಳ ಚಿತ್ರಗಳು ಆಕೆಯನ್ನು ನೋಯಿಸಲಿಲ್ಲ. ಒಂದರ ಮೇಲೊಂದು ಚಿತ್ರಗಳು ನೋಡುಗರ ಮನಗೆಲ್ಲತೊಡಗಿದವು. ಕರುಣಾಜನಕ, ರೋದನೆಗಳೊಡಪಡುವ ಪಾತ್ರಗಳೇ ಹೆಚ್ಚಾಗಿ ಮೀನಾಳ ಪಾಲಾಗುತ್ತಿದ್ದವು. ಆಕೆಯ ನಿಜ ಜೀವನವೂ ಇಂತಹ ಪಾತ್ರಗಳೊಟ್ಟಿಗೆ ವ್ಯತಿರಿಕ್ತವಾಗಿಲ್ಲದ್ದಿದರಿಂದ ನೋಡುಗನ ಕಣ್ಣುಗಳು ತೇವವಾಗುವಂತೆ ಸರಾಗವಾಗಿ ನಟಿಸುತ್ತಿದ್ದಳು. ಆಜಾದ್, ಕೊಹಿನೂರ್, ಫುಟ್ ಪಾತ್, ಗಜಲ್, ಕಾಜಲ್, ಸಾಹಿಬ್ ಬೀವಿ ಔರ್ ಗುಲಾಮ್, ಹೀಗೆ ಸಾಲು ಸಾಲು ಚಿತ್ರಗಳು ಆಕೆಯನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸತೊಡಗಿದವು. ಈ ಮದ್ಯೆ ವಿಪರೀತ ಮದ್ಯ ಸೇವನೆಯಿಂದ ಆರೋಗ್ಯ ತೀವ್ರ ಹದಗೆಡುತ್ತದೆ. ೧೯೬೮ ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್’ಗೆ ಹೋಗಬೇಕಾಗುತ್ತದೆ. ಸತತ ಮೂರು ತಿಂಗಳ ಚಿಕಿತ್ಸೆಯ ಪರಿಣಾಮ ಮೀನಾ ಚೇತರಿಸಿಕೊಳ್ಳುತ್ತಾಳೆ ಅಲ್ಲದೆ ಮುಂದೆಂದೂ ಮದ್ಯದ ಒಂದು ಹನಿಯನ್ನು ಸಹ ಸೇವಿಸುವುದಿಲ್ಲ. ಆದರೆ ಒಳಗೊಳಗೇ ಕ್ಷಿಣಿಸುತ್ತಿದ್ದ ಆರೋಗ್ಯ ಯಾರ ಅರಿವಿಗೂ ಸಹ ಬರುವುದಿಲ್ಲ!
ಚಿತ್ರ ‘ಪಾಕೀಝ’ :
1958 ರಲ್ಲಿ ಶುರುವಾದ ಪಾಕಿಝ ಚಿತ್ರ ಪೂರ್ಣಗೊಂಡಿದ್ದು 1972 ರಲ್ಲಿ! ಇದರ ನಿರ್ದೇಶಕ ಮೀನಾಳ ಪತಿ ಕಮಲ್ ಅಮರೋಹಿ. ಚಿತ್ರ ಶುರುವಾಗಿ ಮುಂದುವರೆಯುತಿದ್ದಾಗ ಮೀನಾ ಹಾಗು ಕಮಲ್’ರ ನಡುವಿನ ಮನಸ್ತಾಪ ಚಿತ್ರವನ್ನು ಇನ್ನೂ ಕೆಲ ವರ್ಷಗಳ ಕಾಲ ಮುಂದೂಡುತ್ತದೆ. ಪರಸ್ಪರ ವೈಮನಸ್ಸಿನಿಂದ ದೂರವಿದ್ದ ಇಬ್ಬರನ್ನೂ ಈ ಚಿತ್ರವೇ ಮತ್ತೊಮ್ಮೆ ಒಂದುಗೂಡಿಸಿತು ಎಂದರೆ ಸುಳ್ಳಾಗದು. ಬಾಗಶಃ ಪೂರ್ಣಗೊಂಡಿದ್ದ ಚಿತ್ರವನ್ನು ಪೂರ್ಣಗೊಳಿಸಲು, ಚಿತ್ರದ ಕಥೆ ಹಾಗು ಅದರ ಪ್ರಾಮುಖ್ಯತೆಯನ್ನು ಅರಿತಿದ್ದ ನರ್ಗಿಸ್ ಹಾಗು ಸುನಿಲ್ ದತ್ತ್ ಜೋಡಿಯ ಸಂಧಾನ ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಮತ್ತೆ ಕರೆ ತಂದಿತು. ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಸಜ್ಜಾದಳು. ಆದರೆ ಅಷ್ಟರಲಾಗಲೇ ಆಕೆಯ ಕಾಯಿಲೆ ಉಲ್ಬಣಿಸಿ ಹೋಗಿತ್ತು. ಲಿವರ್’ನ Cirrhosis ಕಾಯಿಲೆ ಆಕೆಯನ್ನು ಆವರಿಸಿತ್ತು. ಬೇರೆ ಇತರರಿಗಿಂತ ಮೀನಾಳಿಗೆ ತಾನು ಬದುಕುಳಿಯುವ ಅಸಾಧ್ಯತೆಯ ಬಗ್ಗೆ ಹೆಚ್ಚಿನ ಅರಿವಿತ್ತು! ಚಿತ್ರಕ್ಕಾಗಿ ಕೇವಲ ಒಂದು ರೂಪಾಯಿ ಸಂಭಾವನೆಯನ್ನು ಪತಿಯಿಂದ ಪಡೆದ ಮೀನಾ ನಗು ನಗುತ್ತಲೇ ಚಿತ್ರದ ಶೂಟಿಂಗ್’ಗೆ ಬಂದಳು. ದೇಹ ಪೂರ್ಣವಾಗಿ ನಿಷ್ಕ್ರಿಯವಾಗುವ ಮುನ್ನ ಚಿತ್ರವನ್ನು ಮುಗಿಸಬೇಕೆಂದು ಬೇಗ ಬೇಗನೆ ನಟಿಸಿದಳು. ಅತ್ತು ಬೇಸತ್ತ ಕಣ್ಣುಗಳು, ಅವುಗಳನ್ನೂ ಸೊಗಸಾಗಿಸುವ ಕಾಡಿಗೆ, ನಗುವ ಮರೆತ ಮುಖದಲ್ಲಿ ಹತಾಶೆಯ ಸ್ವರಗಳು, ಇವಕ್ಕೆ ಸರಿದೂಗುವಂತೆ ಆಕೆಯ ವಸ್ತ್ರಾಭರಣಗಳು ಜೊತೆಗೆ ಆಕೆಯ ಅಮೋಘ ನಟನೆ. ಸಾವಿನ ಬಾಗಿಲಲ್ಲಿ ನಿಂತು ಹೊರಡುವ ಮುನ್ನ ಮೀನಾ ನೋಡುಗರಿಗೆ ಒಂದು ಅದ್ಬುತ ಚಿತ್ರವನ್ನು ನೀಡಿದಳು. ಪಾಕೀಝ ಚಿತ್ರ ಇಂದಿಗೂ ದೇಶದ ಅತ್ಯುತ್ತಮ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಅಲ್ಲದೆ ಚಿತ್ರ ಮುಗಿಯುವಷ್ಟರಲ್ಲಿ ಕಮಲ್ ಹಾಗು ಮೀನಾರ ನಡುವಿನ ಮನಸ್ತಾಪ ಮುರಿದು ಬಿದ್ದಿರುತ್ತದೆ. ಆದರೆ ಚಿತ್ರ ಬಿಡುಗಡೆಗೊಂಡ ಮೂರು ತಿಂಗಳಲ್ಲೇ ಮೀನಾ ಕೊನೆಯುಸಿರೆಳೆದ್ದಿರುತ್ತಾಳೆ. ಹೀಗೆ ಹೋಗುವಾಗ ಮೀನಾಳಿಗೆ ಕೇವಲ ಮೂವತ್ತೆಂಟು ವರ್ಷಗಳು!
ಇಂದು ಮೀನಾ ಕುಮಾರಿಯೆಂದರೆ ಬಲ್ಲವರು ತೀರಾ ವಿರಳ. ಆದರೆ ಆಕೆ ತನ್ನ ಕೆಲವೇ ವರ್ಷಗಳಲ್ಲಿ ನಟಿಸಿ ಚಿತ್ರಪ್ರಿಯರ ಮನ ತುಂಬಿದ ಪಾತ್ರಗಳು ಇಂದಿನ ಅದೆಷ್ಟೋ ನಟ ನಟಿಯರಿಗೆ ಪ್ರೇರಕವಾಗಿವೆ. ಮೀನಾ ಕುಮಾರಿ ತನ್ನ ನಟನೆಗೆ ಅಲ್ಲದೆ ಆಕೆಯ ಉದಾರಿ ಗುಣದಿಂದಲೂ ಹೆಸರು ಮಾಡಿದ್ದಳು. ಜೀವನ ಅರಿತಾಗಿನಿಂದ ಆಕೆ ಇತರರಿಗಾಗೇ ದುಡಿದಳು. ಮನೆಯವರಿಗಂತೂ ಈಕೆಯೇ ಹಸಿವು ನೀಗಿಸುವ ಸಾಧನವಾಗಿದ್ದಳು. ತಾನು ಸಾಯುವುದು ಖಚಿತವೆಂದರಿತ್ತಿದ್ದ ಆಕೆ ನಟಿ ಮುಮ್ತಾಜ್’ಳ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದಾಗ ತನ್ನ ಬಂಗಲೆಯನ್ನೇ ಆಕೆಗೆ ಕೊಟ್ಟಳು. ಕೊನೆ ಕ್ಷಣಗಳಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುವಾಗ ಅಡ್ಡ ಬಂದು ತಬ್ಬಿ ಆಳಲಾರಂಭಿಸಿದ ಕಸ ಗುಡಿಸುವಳನ್ನೂ ಸಹ ಸಮಾಧಾನ ಮಾಡಿ ತನ್ನ ಬಳಿ ಇದ್ದ ಪರ್ಸನ್ನೂ ಆಕೆಗೆ ನೀಡಿ ‘ಖುದಾ ಹಾಫೀಜ್’ ಎನ್ನುತ ಹೊರಟು ಹೋದಳು. ಇಷ್ಟೊಂದು ಹೃದಯ ವೈಶಾಲ್ಯತೆಯ ಮೀನಾಳನ್ನು ಜೀವನ ವಿಪರೀತವಾಗಿ ಕಾಡಿತು. ಆಕೆ ತಾನು ಬದುಕಿದ ಸಣ್ಣ ಜೀವನದಲ್ಲಿ ಅರಸಿದ್ದು ಕೇವಲ ಪ್ರೀತಿ ಹಾಗು ಮಮತೆ. ಜೀವನ ಆಕೆಗೆ ಅದನ್ನೂ ಕರುಣಿಸದಾಯಿತು. ಅಳುತ್ತಾ ಯಾರಿಗೂ ಬೇಡವಾಗಿ ಬಂದ ಮೀನಾ ಅಳುತ್ತಲೇ ಯಾರಿಗೂ ಬೇಡವಾಗೇ ಹೋದಳೆನ್ನಬಹುದು. ಕೊನೆ ಯ ದಿನಗಳಲ್ಲಿ ಆಸ್ಪತ್ರೆಗೆ ಸೇರಲೂ ಸಹ ಮೀನಾ ಕುಮಾರಿಯ ಬಳಿಯಲ್ಲಿ ಹಣವಿಲ್ಲದಿದ್ದದ್ದು ವಿಪರ್ಯಾಸ.
ಇಂದು ಮೀನಾಕುಮಾರಿ ಬದುಕ್ಕಿದ್ದರೆ ಆಕೆಗೆ ಎಂಬತ್ನಾಲ್ಕು ವರ್ಷಗಳಾಗಿರುತ್ತಿದ್ದವು. ಆದರೆ ಎಂಬತ್ನಾಲ್ಕರ ಮೀನಾ ಇಂದಿಗೂ ಮೂವತ್ತೆಂಟರ ಸುಂದರಿಯಾಗಿ ಚಿತ್ರಪ್ರಿಯರ ಹೃದಯಗಳಲ್ಲಿ ಬದುಕಿದ್ದಾಳೆ. ಆ ಮುದ್ದಾದ ಮೌನ ಆವರಿಸಿದ ಮುಖ, ಸಾವಿರ ಮಾತಾನಾಡುವ ಆಕೆಯ ಕಣ್ಣುಗಳು, ಆ ಮಾತುಗಳಿಗೆ ಬಣ್ಣ ತುಂಬುವ ಆಕೆಯ ಕವನಗಳು ಇಂದಿಗೂ ಹಸಿರಾಗಿವೆ. ಹೆಸರಾಗಿವೆ.
Facebook ಕಾಮೆಂಟ್ಸ್