ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೫.
ಇರಬಹುದು ; ಚಿರಕಾಲ ಬೊಮ್ಮ ಚಿಂತಿಸೆ ದುಡಿದು |
ನಿರವಿಸಿಹ ವಿಶ್ವ ಚಿತ್ರವ ಮರ್ತ್ಯನರನು ||
ಅರಿತೆ ನಾನೆನ್ನುವಂತಾಗೆ ಕೃತಿ ಕೌಶಲದ |
ಹಿರಿಮೆಗದುಕುಂದಲ್ತೆ ? – ಮಂಕುತಿಮ್ಮ || ೩೫ ||
ಸೃಷ್ಟಿ ರಹಸ್ಯದ ಕುರಿತಾದ ಶೋಧ, ಜಿಜ್ಞಾಸೆಗಳೆಲ್ಲ ವ್ಯರ್ಥ, ಹತಾಶ ಪ್ರಯತ್ನವೆನಿಸಿ ಆ ವಿಷಯವನ್ನು ಕೈ ಬಿಟ್ಟು ಬಿಡುವುದೇ ಸರಿ ಎಂದು ಎಷ್ಟು ಬಾರಿ ಅಂದುಕೊಂಡಿತ್ತೋ ಶೋಧಕ, ಚಿಕಿತ್ಸಕ ಕವಿ ಮನ.. ಆದರೆ ಕೊರೆಯುತ್ತಿರುವ ವಿಷಯ ಮನದಿಂದ ಅಷ್ಟು ಸುಲಭದಲ್ಲಿ ದೂರಾಗುವುದಿಲ್ಲವಲ್ಲ? ಅಂದುಕೊಂಡರು, ಅದೇನು ಅಷ್ಟು ಸುಲಭದಲ್ಲಿ ಮನದಿಂದ ತೊಲಗುವ ಕ್ಷುಲ್ಲಕ ವಿಷಯವೇ ?
ಹಿಂದಿನ ಪದ್ಯದಲ್ಲಿ ‘ಇನ್ನು ಆ ಚಿಂತನೆ ಸಾಕು’ ಎಂದು ಬೇಸತ್ತು ಕೈತೊಳೆದುಕೊಂಡಂತೆ ಕಂಡರೂ, ಬಿಡದೆ ಕಾಡುವ ಆಲೋಚನೆ ಹೊಸರೂಪದ ಚಿಂತನೆಯಾಗಿ ಆವರಿಸಿಕೊಳ್ಳುತ್ತದೆ. ನಿರಾಳವಾಗಿರಲು ಬಿಡದಲೆ ಬಂದು ಬಂದೂ ಮುತ್ತುತ್ತಲೆ ಇರುತ್ತದೆ ; ಈ ಬಾರಿ, ‘ಆ ಪರಬ್ರಹ್ಮ ಅದೇಕೆ ಈ ಗುಟ್ಟನ್ನು ಬಿಟ್ಟುಕೊಡಲು ಇಷ್ಟು ಸತಾಯಿಸುತ್ತಿರುವಾ?’ ಎಂಬ ಮತ್ತೊಂದು ದಿಕ್ಕಿನ ಆಲೋಚನೆಯಲ್ಲಿ ಮಥನ ನಡೆಸುತ್ತ.
ಹಾಗೆ ಆಲೋಚಿಸುವಾಗ ಕವಿಗನಿಸಿದ್ದು ಹೀಗೆ – ಇಷ್ಟು ಸಂಕೀರ್ಣ ಸೃಷ್ಟಿಯನ್ನು ಕೇವಲ ಅರ್ಥಮಾಡಿಕೊಳ್ಳಲೆ ನಾವಿಷ್ಟು ಪರದಾಡಿ, ಹೆಣಗಾಡುತ್ತಿರಬೇಕಾದರೆ ಅದನ್ನು ಅಮೂರ್ತದಲಿ ಚಿಂತಿಸಿ, ಆಲೋಚಿಸಿ, ಕಲ್ಪನಾ ಶಕ್ತಿಗೆ ಸೃಜನಶೀಲತೆಯನ್ನು ಬೆರೆಸಿ ಈ ಸೃಷ್ಟಿಯೆಂಬ ಅಸ್ಥಿತ್ವಕ್ಕೆ ಜೀವಂತ ಮತ್ತು ಮೂರ್ತರೂಪು ನೀಡಲು ಆ ಪರಬ್ರಹ್ಮನೂ ತನ್ನಲ್ಲೆ ಅದೆಷ್ಟು ಚಿಂತನೆ ನಡೆಸಿರಬೇಕು? ಹಗಲಿರುಳೆನ್ನದೆ ದುಡಿದು ಅದೆಷ್ಟು ವಿವಿಧ ಸಂಯೋಜನೆ ವಿಕಲ್ಪಗಳನ್ನೆಲ್ಲ ಸಮೀಕರಿಸಿ ಕೊನೆಗೆ ಈ ಅಂತಿಮ ರೂಪದ ತೀರ್ಮಾನಕ್ಕೆ ಬಂದಿರಬೇಕು? ಹಾಗೊಂದು ಪೂರ್ಣತೆಯ ಹಂತ ತಲುಪಲು ಅದೆಷ್ಟು ಕಾಲ ಹಿಡಿದಿದೆಯೊ, ಅದೆಷ್ಟು ಪ್ರಯೋಗ ಚಕ್ರಗಳು ಸವೆದಿವೆಯೊ?
ಅಂತೂ ಅಷ್ಟೆಲ್ಲಾ ಶ್ರಮಿಸಿ, ಪ್ರಸವಿಸಿದ ಈ ಜಗದ ‘ಅಂತಿಮ ಕಾರ್ಯನಿರತ ತಂತ್ರ’ದ ಗುಟ್ಟನ್ನು ಕೇವಲ ನಶ್ವರ ದೇಹದ, ಮರಣದಿಂದಂತ್ಯ ಕಾಣುವ ಹುಲು ಮನುಜ – ಸಾಮಾನ್ಯ ನರನು (ಮರ್ತ್ಯ ನರ), ಸುಲಭದಲ್ಲಿ ಚಿಟಕಿ ಹೊಡೆದಂತೆ ಬಿಡಿಸಿ ಅರ್ಥ ಮಾಡಿಕೊಂಡುಬಿಟ್ಟನೆಂದರೆ, ಅಂತಹ ಅದ್ಭುತ ಕಲಾಕೃತಿಯನ್ನು ಸೃಜಿಸಿದ ಪರಬ್ರಹ್ಮದ ಕೃತಿ ಕೌಶಲ್ಯದ ಹಿರಿಮೆಗೆ ಕುಂದಲ್ಲವೆ? ಕೇವಲ ಸಾಧಾರಣ ನರಮನುಷ್ಯನೊಬ್ಬ ಬಿಡಿಸಿಬಿಟ್ಟ ಸೃಷ್ಟಿ ರಹಸ್ಯವೆಂದು ಅಪಹಾಸ್ಯಕ್ಕೊಳಗಾದಂತಾಗುವುದಿಲ್ಲವೆ? ಬಹುಶಃ ಹಾಗಾಗುವುದೆಂಬ ಅಳುಕಿನಿಂದಲೆ ಆ ಪರಬ್ರಹ್ಮನು ಯಾರಿಗೂ ಈ ಗುಟ್ಟನರಿಯಲು ಬಿಡುತ್ತಿಲ್ಲ…! ಅರಿಯಲೆತ್ನಿಸಿದವರಿಗು ಶಂಕೆಯ ಮೇಲೆ ಶಂಕೆ ಅನುಮಾನಗಳನ್ನುಟ್ಟಿಸಿ ದಾರಿ ತಪ್ಪಿಸಿ, ಅವರು ಸದಾ ಅಜ್ಞಾನದ ಕತ್ತಲಿನಲ್ಲಿಯೆ ಇರುವಂತೆ ಮಾಡಿ ದಾರಿ ತಪ್ಪಿಸುತ್ತಿದ್ದಾನೆ – ತನ್ನ ಮುಕುಟಪ್ರಾಯ ರಚನೆಯಾದ ಸೃಷ್ಟಿಯ ಗುಟ್ಟನ್ನು ಯಾರೂ ಒಡೆಯಲಾಗದಂತೆ.
ಒಟ್ಟಾರೆ ಅಪೂರ್ವ ಚಿತ್ರಕಾರನೊಬ್ಬನು ಸೃಜಿಸಿದ ಅಪರೂಪದ ಕೃತಿಯನ್ನು ಹೇಗೆ ಎಲ್ಲರು ಪೂರ್ತಿ ಅರಿತುಕೊಳ್ಳಲು ಸಾಧ್ಯವಿಲ್ಲವೊ ಹಾಗೆಯೇ ಇದೆ ಈ ಸೃಷ್ಟಿಯ ವಿಚಾರ. ಕೃತಿಯ ಸಂಕೀರ್ಣತೆ, ಅಗಾಧತೆ, ಅದ್ಭುತತೆಯನ್ನು ಅರೆಬರೆ ಅರಿತೇ ಅನುಭವಿಸುವ ಪಾಡು ನಮ್ಮದು. ಹಾಗಿರುವುದರಿಂದಲೇ, ಅದು ಆ ಕಲಾಕಾರನ ಅರ್ಥವಾಗದ ಕೃತಿಯಂತೆ ಕಂಡು, ಅದರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸುಲಭದಲ್ಲಿ ಎಟುಕುವಂತಿದ್ದರೆ, ಅದರ ಮೌಲ್ಯವನ್ನೆ ಕೀಳು ಮಟ್ಟದ್ದೆನ್ನುವ ತೀರ್ಮಾನಕ್ಕೆ ಬರುವ ಜನಗಳ ಮಧ್ಯೆ ಇದೇ ಸರಿಯಾದ ವಿಧಾನವಲ್ಲವೇ ? ಎಂಬ ಪ್ರಶ್ನೆಯೆತ್ತುತ್ತಾನೆ ಮಂಕುತಿಮ್ಮ. ಘನತೆಗೆ ತಕ್ಕ ಹಾಗೆ ಒಡೆಯಲಾಗದ ಒಡಪನ್ನಿಟ್ಟರೆ ಹೆಚ್ಚು ಸಮಂಜಸವೇ ಹೊರತು, ಸುಲಭದಲ್ಲಿ ಎಟುಕುವಂತೆ ಸುನಾಯಾಸ ವಾಗಿಸುವುದರಿಂದ ಅಲ್ಲ ಎಂಬ ಸಾರ ಇಲ್ಲಿನ ಮೂಲ ಆಶಯ.
Facebook ಕಾಮೆಂಟ್ಸ್