ಅದೊಂದು ಶರದೃತುವಿನ ದಿನ. ದೀಪಾವಳಿ ಕಳೆದು ಕೆಲದಿನಗಳಾಗಿತ್ತಷ್ಟೇ. ನೀಲಾಕಾಶದ ಮಧ್ಯೆ ಅಲ್ಲಲ್ಲಿ ಕಾಣುವ ಬೆಳ್ಳಗಿನ ಮೋಡಗಳು ಯಾವುದೋ ಗುರಿಯ ತಲುಪಲು ನಿರ್ಧರಿಸಿವೆಯೇನೋ ಎಂಬಂತೆ ಒಂದೇ ದಿಕ್ಕಿನಲ್ಲಿ ತೇಲಿ ಹೋಗುತ್ತಿತ್ತು. ಸಿಂಗಪ್ಪಯ್ಯ ಮೈಗೆ ಎಳ್ಳೆಣ್ಣೆ ಅಭ್ಯಂಜನ ಮಾಡಿಕೊಳ್ಳಲು ಎಣ್ಣೆ ಬಟ್ಟಲಿನ ಸಮೇತ ಮನೆಯ ಮುಂದಿನ ಅಂಗಳದ ತುದಿಯಲ್ಲಿರುವ ಅಡಕೆ ಬೇಯಿಸುವ ಹಂಡೆಯ ಬಳಿ ಬಂದರು. ಮನೆಯ ಪಕ್ಕದ ಹಾಡ್ಯದಿಂದ, ತಮ್ಮ ಗೂಡು ಬಿಟ್ಟು ದೈನಂದಿನ ಚಟುವಟಿಕೆಗೆ ಹೊರಟು ಹೋಗುತ್ತಿರುವ ಹಕ್ಕಿಗಳ ಗುಂಪು ತಮ್ಮದೇ ಲಯದಲ್ಲಿ ಚೀರುತ್ತಾ ಹೋಗುತ್ತಿರುವುದ ನೋಡಿ “ಈ ಹಕ್ಕಿಗಳೋ ಮೂರುನಾಲ್ಕು ರೀತಿಯ ಸ್ವರಗಳನ್ನು ಹೊರಡಿಸುತ್ತವೆ. ನಮ್ಮ ಹಾಗೆ ಹಲವಾರು ರೀತಿಯ ಅಕ್ಷರ, ಅವುಗಳಿಂದ ಹುಟ್ಟಿದ ಅಸಂಖ್ಯ ಪದಗಳು, ಅವುಗಳನ್ನು ಬಳಸಿ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಭಾವನೆ, ಅನುಭವ ಇವು ಯಾವುದೂ ಪಕ್ಷಿಗಳಿಗೆ ಸಾಧ್ಯವಾಗದು. ನಮಗೆ ಇಷ್ಟೆಲ್ಲಾ ಪದಗುಚ್ಛಗಳ ಅಗಾಧ ರಾಶಿಯೇ ಇರುವಾಗ ಎಷ್ಟೋ ಬಾರೀ ತಮ್ಮ ಇಂಗಿತ ವ್ಯಕ್ತ ಪಡಿಸಲು ಪದಗಳ ಅಭಾವ ಕಂಡು ಬರುವುದು. ತಾನು ಅನುಭವಿಸಿದ್ದನ್ನು, ತಾನು ಕಲ್ಪಿಸಿಕೊಂಡಿದ್ದನ್ನು ಇತರರಿಗೆ ಮನಮುಟ್ಟುವಂತೆ ಹೇಳಬೇಕೆಂದಾಗ ಸರಿಸಾಟಿಯಾದ ಪದಗಳು ಸಿಗದೇ ಚಡಪಡಿಸಿದ್ದುಂಟು. ಅಂತಹುದರಲ್ಲಿ ಈ ಮಾತು ಬರದ ಜೀವಿಗಳು ತಮ್ಮಿಂದ ಹೊರಡುವ ಮೂರ್ನಾಲ್ಕು ರೀತಿಯ ಶಬ್ಧದಲ್ಲಿಯೇ ಅದೇನು ತಾನೇ ಮಾತನಾಡಬಲ್ಲವು.? ಅಥವಾ ಸಂಗೀತದಲ್ಲಿ ಸಪ್ತ ಸ್ವರಗಳ ಏರಿಳಿತದಿಂದುಂಟಾದ ರಾಗಗಳನ್ನು ಇದೇ ರಾಗ ಎಂದು ಗುರುತಿಸುವ ಹಾಗೆ ಅವುಗಳೂ ತಮ್ಮ ದ್ವನಿಯ ಏರಿಳಿತದಿಂದ ಅವು ಏನು ಹೇಳುತ್ತಿವೆ ಎಂದು ಅರ್ಥೈಸಿಕೊಳ್ಳುತ್ತವೆಯೇನೋ” ಎಂದು ಹಾರುತ್ತಾ ಹೋದ ಹಕ್ಕಿಗಳ ಗುಂಪನ್ನೇ ದೃಷ್ಟಿಸುತ್ತಾ ನಿಂತರು.
ಆದರೂ ಅವರಿಗೊಂದು ಅನುಮಾನ ಕಾಡಿತು. “ಅಕ್ಷರಗಳೇ ಇಲ್ಲದ ಮೇಲೆ ಸ್ವರದಿಂದ ಎಷ್ಟು ತಾನೇ ಅರ್ಥಗಳನ್ನು ಹುಟ್ಟಿಸಲು ಸಾಧ್ಯ? ಕೆಲವೊಂದು ಸ್ವರಕ್ಕೆ ಕೆಲವೊಂದು ಸೂಚನೆಗಳನ್ನು ಕೊಡಲು ಮಾತ್ರ ಸಾಧ್ಯವಾದೀತು. ನಾವೂ ಕೂಡ ಕೆಲ ಸೂಚನೆಗಳನ್ನು ನೀಡಲು ಕೆಲ ರೀತಿಯ ಶಬ್ಧ ಮಾಡುತ್ತೇವಲ್ಲಾ ಹಾಗೆಯೇ. ಊಟದ ಸಮಯಕ್ಕೆ ತೋಟದಲ್ಲಿ, ದೂರದ ಗದ್ದೆಯಲ್ಲಿ ಕೆಲಸ ಮಾಡುವವರನ್ನು ಕರೆಯಲು ಕೂ… ಹೊಡೆಯುತ್ತೇವೆ. ಮಾತನಾಡಬೇಡ, ಶಬ್ಧ ಮಾಡಬೇಡ ಎಂದು ಹೇಳಲು ಶ್ಶ್… ಎನ್ನುತ್ತೇವೆ. ಇವುಗಳನ್ನೆಲ್ಲಾ ಸೂಚನೆ ಕೊಡಲಷ್ಟೇ ಬಳಸಬಹುದು ಹೊರತು ಇವುಗಳಿಂದ ತಮ್ಮೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲಾಗದು. ಆದರೆ ಅವುಗಳು ಈ ವಿಷಯದಲ್ಲಿ ಇನ್ನೂ ಪ್ರಗತಿ ಹೊಂದಿ ಒಂದು ಬಾರಿ ಉಚ್ಛರಿಸಿದರೆ ಒಂದು ಅರ್ಥ, ಮತ್ತೊಮ್ಮೆ ಉಚ್ಛರಿಸಿದರೆ ಮಗದೊಂದು ಅರ್ಥವೆಂದು ಪ್ರತೀ ಭಾರಿ ಉಚ್ಛರಿಸಿದ್ದನ್ನು ಲೆಕ್ಕ ಇಡುವುದರ ಮೂಲಕ ಅರ್ಥೈಸಿಕೊಂಡು ಮಾತನಾಡಿಕೊಳ್ಳುತ್ತವೆಯೇನೋ” ಎಂಬ ಉತ್ತರ ಕಂಡುಕೊಂಡು ತಮ್ಮ ತಾವು ಸಮಾಧಾನಿಸಿಕೊಂಡರು.
ಅದರ ಹಿಂದೆಯೇ ಅವರಿಗೆ ಮತ್ತೊಂದು ಅನುಮಾನ ತಲೆಯೆತ್ತಿತು. “ಇವುಗಳಿಗೆ ಅಷ್ಟೆಲ್ಲಾ ಬುದ್ಧಿಮತ್ತೆ ಇದ್ದಿದ್ದರೆ ನಮ್ಮನ್ನು ನೋಡಿ ಅವುಗಳೂ ಸಹ ಅಕ್ಷರ ಜೋಡಣೆ ಕಲಿತಿರುತ್ತಿದ್ದವು. ಅಥವಾ ಇವುಗಳಿಗೆ ಭಾವನೆಗಳೇ ಇರುವುದಿಲ್ಲವೇನೋ” ಎಂದು ಯೋಚಿಸುತ್ತಿರುವಾಗಲೇ ಅವರ ಆಲೋಚನೆಗಳನ್ನೆಲ್ಲಾ ಸೀಳಿಬಿಡುವ ಧ್ವನಿಯೊಂದು ಮನೆಯೊಳಗಿನಿಂದ ಕೇಳಿಸಿತು. “ರೀ ನಿಮಗೊಂಚೂರೂ ನಾಚಿಕೆ ಮಾನ ಮರ್ಯಾದಿ ಇಲ್ಲ. ಬರೀ ಕಚ್ಚೆಯಲ್ಲೇ ಮನೆ ಮುಂದೆ ನಿಂತಿದ್ದೀರಲ್ಲಾ. ಮನೆಗೆ ಯಾರಾದರೂ ಬಂದರೆ ಅನ್ನುವ ಪರಿಜ್ಞಾನವೂ ಬೇಡವೆ. ಗಂಡಸರ ಹಣೇಬರಹವೇ ಇಷ್ಟು. ಎಷ್ಟು ಹೇಳಿದರೂ ಬದಲಾಗಲ್ಲ” ಎನ್ನುತ್ತಿರುವಾಗಲೇ “ಆಯ್ತು ಮಾರಾಯ್ತಿ, ಹಿತ್ತಲಕಡೆ ಅಂಗಳಕ್ಕೆ ಹೋಗ್ತೀನಿ. ಅದಕ್ಕೆ ಯಾಕಷ್ಟುದ್ದ ನಾಲಗೆ ಚಾಚ್ತೀಯ. ಪೇಟೆ ತರ ಏನು ರಸ್ತೆ ಬದಿಯಲ್ಲೇ ನಮ್ಮ ಮನೆ ಇದೆಯ. ಹಾಡ್ಯ ದಾಟಿ, ಬಯಲಿಗೆ ಇಳಿದ ಕೂಡಲೇ ಕಾಣತ್ತೆ ಯಾರಾದರೂ ಬಂದರೆ. ಸುಮ್ಮನೆ ಯಾಕೆ ಅರ್ಚಿಕೊಳ್ತೀಯ. ಅರೆಬರೆ ಮುಚ್ಚಿಕೊಳ್ಳುವ ಪೂಜೆಗೆ ಬರುವ ಭಟ್ಟರ ಮೈ ನೋಡಕ್ಕಾಗತ್ತೆ, ಫಿಲ್ಮಲ್ಲಿ ಬರೋ ಹೀರೋಗಳ ಮೈ ನೋಡಕ್ಕಾಗತ್ತೆ. ನಾನಿಲ್ಲಿ ಅಭ್ಯಂಜನ ಮಾಡಿಕೊಳ್ಳಕ್ಕೆ ಅಂತ ಬಟ್ಟೆ ಕಳಚಿಟ್ಟರೆ ಏನೋ ತೋರಿಸಬಾರದ್ದು ತೋರಿಸಿದೆ ಎನ್ನುವ ಹಾಗೆ ಹೇಳ್ತಿದ್ದೀಯಾ. ಲಂಗೋಟಿ ಕಟ್ಟಿಕೊಂಡಿಲ್ವ. ಯಾವುದು ಮುಚ್ಚಿಕೊಳ್ಳಬೇಕೋ ಅದನ್ನು ಮುಚ್ಚಿಕೊಂಡಿದ್ದೀನಲ್ಲಾ”ಎಂದರು. “ಥೂ.. ಆ ತಿಮ್ಮಯ್ಯನ ಜೊತೆ ಸೇರಿ ಹಾಳಾಗಿ ಹೋಗಿದ್ದೀರ. ಮಾತೆತ್ತಿದರೆ ಹೊಲಸು ಮಾತೇ ಬಾಯಿಗೆ ಬರುವುದು. ಅವನ ಸಹವಾಸದಿಂದಲೇ ನೀವು ಹೀಗಾಗಿರುವುದು. ಅವನೋ, ಯಾರಿಗೂ ಇಲ್ಲದ್ದು ತನಗಿದೆಯೇನೋ ಎಂಬಂತೆ ಎಲ್ಲರಿಗೂ ಕಾಣುವ ಹಾಗೆ ಬಸ್ ಸ್ಟಾಪಿನ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾನೆ. ಹೋದ ಜನ್ಮದಲ್ಲಿ ನಾಯಿಯಾಗಿ ಹುಟ್ಟಿದ್ದನೇನೋ ಆ ಹಾಳು ಶನಿ” ಎಂದು ಇಬ್ಬರಿಗೂ ಸೇರಿಸಿ ಉಗಿದರು. “ಸರಿ ಬಿಡೇ ನನ್ನ ಕಚ್ಚೆ ವಿಷಯಕ್ಕೆ ಅವನನ್ಯಾಕೆ ಎಳೆದು ತರುತ್ತೀಯ. ಬಿಡು ಹೋಗ್ತಾ ಇದೀನಲ್ಲಾ”ಎಂದು ಮನೆಯ ಹಿಂಬದಿಯ ಅಂಗಳಕ್ಕೆ ಧಾವಿಸಿದರು.
ಅಂಗಳದ ಹಿಂಬದಿಯಲ್ಲಿಯೇ ಗದ್ದೆಯು ಆರಂಭಗೊಂಡಿತ್ತು. ಪಕ್ಕದವರ ಗದ್ದೆ ತೋಟಗಳಿಗೆ ಹೋಗಬೇಕಾದರೆ ತಮ್ಮ ಗದ್ದೆಯ ಕಟ್ಟಣೆಯ ಮೂಲಕವೇ ಹಾದು ಹೋಗಬೇಕು. ಇಲ್ಲವಾದರೆ ಗದ್ದೆಯ ಆಚೆಗಿನ ಟ್ರ್ಯಾಕ್ಟರ್ ಹೋಗುವ ಮಣ್ಣಿನ ಓಣಿಯಲ್ಲಿ ಸುತ್ತು ಬಳಸಿ ಹೋಗಬೇಕು. ಆ ದಾರಿಯಲ್ಲಿ ಹೋಗುವುದಾದರೆ ಸುಮಾರು ಇಪ್ಪತ್ತು ನಿಮಿಷ ಹೆಚ್ಚು ಸಮಯ ಬೇಕು. ಆದ್ದರಿಂದ ಎಲ್ಲರೂ ಇವರ ಗದ್ದೆಯ ಮೇಲೆಯೇ ಹೋಗುತ್ತಿದ್ದದ್ದು. ಸುಮಾರು ಒಂಭತ್ತು ಘಂಟೆ ಸಮಯ. ಪಕ್ಕದ ಗದ್ದೆಗೆ, ತೋಟಕ್ಕೆ ಕೆಲಸಕ್ಕೆ ಹೋಗುವವರು ಇವರ ಗದ್ದೆಯ ಹಾದು ಹೋಗುತ್ತಿದ್ದರು. ಶರದೃತುವಿನ ತಂಗಾಳಿಯೊಂದು ಸಿಂಗಪ್ಪಯ್ಯರ ಮೈ ಸವರಿ ಹೋಯಿತು. “ಗದ್ದೆಯಿಂದ ಬೀಸುವ ಈ ಗಾಳಿಗೆ ಮೈಕೊರೆಯುತ್ತದೆ. ಇವಳಿಗೆ ಹೇಳಿದರೂ ಅರ್ಥವಾಗುವುದಿಲ್ಲ. ಚಳಿಗೆ ಮೈ ರೋಮಗಳೆಲ್ಲಾ ನಿಂತಿರುವುದೂ ಇವಳಿಗೆ ಕಾಣುವುದಿಲ್ಲ. ಈ ತಂಡಿ ವಾತಾವರಣಕ್ಕೆ ಸೂರ್ಯನ ಕಿರಣಗಳ ಶಾಖವೂ ಮುಟ್ಟುತ್ತಿಲ್ಲ. ಮೊದಲೇ ಎಳೆ ಬಿಸಿಲು. ಅದರ ಮಧ್ಯೆ ಈ ಮರಗಳ ನೆರಳು ಅಡ್ಡ ಬರುತ್ತಿದೆ. ಈ ಬೇಸಿಗೆಯಲ್ಲಿ ಇವುಗಳೆಲ್ಲವನ್ನೂ ಕುಯ್ಯಿಸಬೇಕು. ಹಿಂದಿನವರಿಗೆ ಬುದ್ಧಿ ಕಡಿಮೆ. ಅಂಗಳದ ತುದಿಯಲ್ಲಿ ಗದ್ದೆ ಬೇಲಿಗನುಗುಣವಾಗಿ ತೆಂಗು,ಹಲಸು,ಕಾಡು ಮಾವಿನ ಮರಗಳನ್ನ ನೆಟ್ಟಿಟ್ಟಿದ್ದಾರೆ. ಇವುಗಳ ಅನುಕೂಲಕ್ಕಿಂತ ತಾಪತ್ರಯವೇ ಹೆಚ್ಚು. ಮಳೆಗಾಲದಲ್ಲಿ ಗಾಳಿ ಮಳೆಗೆ ಇವುಗಳ ಗರಿ, ಹೆರೆ, ರೆಂಬೆಗಳು ಬಿದ್ದು ಮನೆಯ ಹಂಚೆಲ್ಲಾ ಪುಡಿಯಾಯಿತು. ಇವುಗಳಿಂದ ಮಂಗಗಳ ಕಾಟ ಬೇರೆ. ಅವುಗಳನ್ನು ಓಡಿಸುವುದರಲ್ಲೇ ಜೀವನ ಕಳೆದು ಹೋಯಿತು. ಅಷ್ಟಾಗಿಯೂ ಇವುಗಳನ್ನು ಮಂಗಗಳಿಂದ ಕಾಪಾಡಿ ಸಾಧಿಸಿದ್ದಾದರೂ ಏನು? ಬೇಸಿಗೆಯಲ್ಲಿ ಕಾಡುಮಾವಿನ ರಸಾಯನ. ಹಲಸಿನಕಾಯಿಯ ಹಪ್ಪಳ, ಹಲಸಿನ ಹಣ್ಣಿನ ಕಡುಬು,ಮೂಳ್ಕ,ಪಾಯಸ. ಇಷ್ಟಕ್ಕಾಗಿ ಇಡೀ ಜೀವನವನ್ನೇ ಮಂಗಗಳ ವಿರುದ್ಧದ ಸಂಗ್ರಾಮವಾಗಿ ಮಾರ್ಪಾಡು ಮಾಡಿ ಬಿಟ್ಟಿದ್ದೆನಲ್ಲಾ” ಎಂಬ ನಿರಾಸೆ ಮೂಡತೊಡಗಿತು.
ಸಿಂಗಪ್ಪಯ್ಯರಿಗೆ ದೀಪಾವಳಿಯಿಂದ ಹಿಡಿದು ಶಿವರಾತ್ರಿಯವರೆಗೂ ಪ್ರತಿನಿತ್ಯ ಎಣ್ಣೆಯ ಅಭ್ಯಂಜನ ಮಾಡಿ ಸ್ನಾನ ಮಾಡುವುದು ಅಭ್ಯಾಸ. ಇದು ಅವರಿಗೆ ಅವರಪ್ಪ ಕಲಿಸಿದ ಶಿಸ್ತು. ದೀಪಾವಳಿ ಸಮಯದಿಂದಲೇ ವಾತಾವರಣದಲ್ಲಿ ಶುಶ್ಕಹವೆ ಶುರುವಾಗಿ ಮೈಚರ್ಮಗಳೆಲ್ಲಾ ಬಿರುಕು ಬಿಡುತ್ತವೆ. ಆದ್ದರಿಂದಲೇ ಹಿಂದಿನವರು ಈ ಬದಲಾವಣೆ ಉಂಟಾಗುವ ದಿನಗಳನ್ನು ಗುರುತಿಸಿ ಎಣ್ಣೆ ಹಚ್ಚಿಕೊಳ್ಳುವ ಹಬ್ಬವಾಗಿ ದೀಪಾವಳಿಯನ್ನು ಮಾಡಿದ್ದು ಎಂದು ಸಿಂಗಪ್ಪಯ್ಯರಿಗೆ ಚಿಕ್ಕವರಿದ್ದಾಗಲೇ ತಲೆ ತುಂಬಿ ಬಿಟ್ಟಿದ್ದರು. ಆದರೆ ಕಳೆದ ವರ್ಷ ಈ ವಿಷಯವನ್ನು ತರ್ಕಿಸಿ ನೋಡಿಯೇ ಇಲ್ಲವೆಂದು ಅಭ್ಯಂಜನ ಮಾಡಿಕೊಂಡಿರಲಿಲ್ಲ. ಅಷ್ಟಕ್ಕೂ ವಯಸ್ಸಾದ ಮೇಲೆ ಚರ್ಮ ಬಿರುಕು ಬಿಟ್ಟರೇನಂತೆ, ಯಾರು ತಾನೇ ನನ್ನ ನೋಡುತ್ತಾರೆ ಎಂಬ ಧೋರಣೆಯಲ್ಲಿ ಮಾಡದೇ ಬಿಟ್ಟಿದ್ದರು. ಅದಕ್ಕೆ ಹೇಳಿ ಮಾಡಿಸಿದಂತೆ ಅವರ ಮೈ ಹಾವಿನ ಪೊರೆಯಂತೆ ಬಿರುಕು ಬಿಟ್ಟುಕೊಂಡಿತ್ತು. ಅಷ್ಟೇ ಆಗಿದ್ದರೆ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮೈಯೆಲ್ಲಾ ಉರಿಯಲು ಆರಂಭಿಸಿತು. ಅದೂ ರಾತ್ರಿ ಹಾಸಿಗೆಯು ಮೈಗೆ ತಾಗಿದಾಗ ಉರಿಗೆ ನಿದ್ರೆ ಹತ್ತುತ್ತಿರಲಿಲ್ಲ. ಈ ಯಾತನೆ ಸಹಿಸಲಾರದೆ ಮತ್ತೊಮ್ಮೆ ಅಭ್ಯಂಜನದ ವಿರುದ್ಧ ಯಾವುದೇ ಪ್ರಯೋಗ ಮಾಡಲು ಪ್ರಯತ್ನಿಸಲಿಲ್ಲ.
ತೋಟದ ಆಚೆಗಿನ ಬೆಟ್ಟದಲ್ಲಿ ನವಿಲೊಂದು ಕೂಗುತ್ತಲಿತ್ತು. ಚಳಿಗಾಲ ಆರಂಭದ ಸಮಯ. ಮದುವೆಯ ದಿನ ರಾತ್ರಿ ಮಧುಮಗಳು ತನ್ನ ಮೇಲೆ ಹೇರಿದ ಆಭರಣಗಳನ್ನೆಲ್ಲಾ ಕಳಚುವ ಹಾಗೆ ಮರಗಳು ತಮ್ಮ ನೆತ್ತಿಯ ಮೇಲಿನ ಎಲೆಗಳನ್ನೆಲ್ಲಾ ಉದುರಿಸಲು ಆರಂಭಿಸಿದ್ದವು. ಎಣ್ಣೆ ಹಚ್ಚಿಕೊಳ್ಳುತ್ತಿದ್ದ ಸಿಂಗಪ್ಪಯ್ಯರಿಗೆ ತಮ್ಮ ಗದ್ದೆಯಲ್ಲಿ ಯಾರೋ ಜಗಳಮಾಡಿಕೊಳ್ಳುತ್ತಿದ್ದದು ಕೇಳಿ ಬಂತು. ನೋಡಿದರೆ ಸೋಮಿಯ ಗಂಡ ಚೌಡ ಮತ್ತು ಕೆಂಪಣ್ಣನ ಮಗ ಚಂದ್ರು.
ಚೌಡ ಈ ಬಾರಿ ಪಕ್ಕದ ಗೌಡರ ತೋಟದ ಅಡಕೆ ಕೊಯ್ಲಿನ ಉಸ್ತುವಾರಿ ವಹಿಸಿಕೊಂಡವನು. ಹಿರೀಗೌಡರ ಕಾಲದಿಂದಲೂ ಚಂದ್ರುವಿನ ತಂದೆ ಕೆಂಪಣ್ಣ ಮತ್ತು ಅವರ ಕುಟುಂಬದವರೇ ಗೌಡರ ಖಾಯಂ ಕೆಲಸದಾಳಾಗಿದ್ದವರು. ಕೆಂಪಣ್ಣನಿಗೆ ಹಿರೀಗೌಡರೆಂದರೆ ಏನೋ ಒಂದು ರೀತಿಯ ಅಭಿಮಾನ ಮತ್ತು ನಿಯತ್ತು. ಗೌಡರಿಗೂ ಕೆಂಪಣ್ಣನ ಮೇಲೆ ಅಷ್ಟೇ ವಿಶ್ವಾಸ. ಇಬ್ಬರ ಜೋಡಿ ರಾಮ-ಹನುಮನಂತಿತ್ತು. ಗೌಡರಿಗೆ ಯುಗಾದಿಯಿಂದ ಹಿಡಿದು ಶಿವರಾತ್ರಿಯವರೆಗೆ ಬರುವ ಎಲ್ಲಾ ಹಬ್ಬಗಳಿಗೂ ಹೊಸ ಬಟ್ಟೆ ತೆಗೆದುಕೊಳ್ಳುವ ಪರಿಪಾಠವಿತ್ತು. ಹಬ್ಬದ ದಿನ ಹೊಸ ಬಟ್ಟೆ ಹಾಕಿಕೊಂಡು ಹೆಂಡತಿ ಮಕ್ಕಳ ಸಮೇತ ಊರ ಮಧ್ಯೆ ಇರುವ ಗ್ರಾಮ ದೇವತೆಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮಿರಿಮಿರಿ ಮಿಂಚುವ ಬಟ್ಟೆ ಧರಿಸಿದ ಇಡೀ ಕುಟುಂಬವನ್ನು ಜನ ನೋಡುತ್ತಿದ್ದಾಗ ಗೌಡರಿಗೆ ಏನೋ ಒಂದು ಬಿಗುಮಾನ. ‘ಬಟ್ಟೆಯಿಂದಲೇ ಮನುಷ್ಯನ ಪ್ರತಿಷ್ಠೆ ಹೆಚ್ಚುವುದು’ ಎಂದು ನಂಬಿದವರು ಅವರು. ದೇವರ ಮೇಲಿನ ನಂಬಿಕೆಗೋ ಅಥವಾ ತಮ್ಮ ಹೊಸ ಬಟ್ಟೆ ತೋರಿಸಲೋ ಒಟ್ಟಿನಲ್ಲಿ ಹಬ್ಬದ ದಿನ ದೇವಸ್ಥಾನಕ್ಕೆ ಹೋಗುವುದು ತಪ್ಪಿಸುತ್ತಿರಲಿಲ್ಲ. ಅದರ ಜೊತೆಗೆ ಅವರದು ಮತ್ತೊಂದು ಒಣಪ್ರತಿಷ್ಠೆ ಇತ್ತು. ಹಿಂದಿನ ವರ್ಷದ ಹಬ್ಬಕ್ಕೆ ತೆಗೆದುಕೊಂಡ ಬಟ್ಟೆಯನ್ನು ಮುಂದಿನ ಹಬ್ಬದವರೆಗೆ ಮಾತ್ರ ಹಾಕುತ್ತಿದ್ದದ್ದು. ನಂತರ ಅದನ್ನು ತಮ್ಮ ಬಂಟ ಕೆಂಪಣ್ಣನ ಕುಟುಂಬಕ್ಕೆ ಕೊಟ್ಟು ಬಿಡುತ್ತಿದ್ದರು. ಗೌಡರ ಶರ್ಟು-ಪಂಚೆ ಕೆಂಪಣ್ಣನಿಗೆ, ರೇಷ್ಮೆ ಹೊರತುಪಡಿಸಿ ಗೌಡರ ಮನೆಯವರ ಸೀರೆ ಕೆಂಪಣ್ಣನ ಹೆಂಡತಿಗೆ. ಮರಿಗೌಡನ ಪ್ಯಾಂಟ್ ಶರ್ಟು ಚಂದ್ರುವಿಗೆ.
ಆದರೆ ಗೌಡರು ಇವುಗಳನ್ನು ಕೊಡುವಾಗ ತಮ್ಮ ಧಾರಾಳತನವನ್ನು ಪ್ರದರ್ಶನಕ್ಕಿಡದೇ ಕೊಟ್ಟಿದ್ದೇ ಇಲ್ಲ. ದೊಡ್ಡಸ್ತಿಕೆಯಲ್ಲಿ ತಮಗೆ ಸರಿ ಸಮಾನವಾದ ತಮ್ಮ ಕುಲಬಾಂಧವರು ಬಂದಾಗ ಹಾಗೂ ಊರಿನ ಜನಗಳು ಹಬ್ಬ ಹರಿದಿನ, ಸಭೆ, ಜಾತ್ರೆಗೆ, ಊರಿನ ಇತರೇ ಕಾರ್ಯಕ್ರಮಗಳಿಗೆ ದೇಣಿಗೆ ಕೇಳಲು ಬಂದಾಗ ಅವರಿಗೆ ಕೊಡುವುದ ಕೊಟ್ಟು ಅವರೆದುರಿಗೇ ಕೆಂಪಣ್ಣನ ಕರೆದು ಅವರ ಇನ್ನೂ ಹಳತಾಗಿರದ ಹೊಚ್ಚ ಹೊಸತಿನಂತಿರುವ ಬಟ್ಟೆಗಳನ್ನು ಕೊಡುತ್ತಿದ್ದರು. ಗೌಡರು ಕೆಂಪಣ್ಣನಿಗೆ ಎಲ್ಲರಂತೆ ಕೂಲಿ ಕೊಡುತ್ತಿದ್ದರೂ ಈ ಕಾರಣದಿಂದಲೇ ಅವನಿಗೆ ಗೌಡರ ಮೇಲೆ ಅಚಲ ಶ್ರದ್ಧೆ ಇತ್ತು. ಇದನ್ನು ನೋಡಿದ ಕೆಲವರಿಗೆ ನಾವೂ ಹೇಗಾದರು ಮಾಡಿ ಗೌಡರ ಕಾಯಂ ಕೆಲಸದಾಳಾಗಬೇಕು ಅನ್ನಿಸುತ್ತಿತ್ತು. ಈ ಎಲ್ಲಾ ತೋರ್ಪಡಿಕೆಗಳಿಂದ ಊರಲ್ಲಿ ಗೌಡರೆಂದರೆ ಅಪಾರ ಗೌರವವಿತ್ತು. ಎಲ್ಲರಂತೆ ಸಹಜವಾಗಿ ಅವರೂ ಕೂಡ ವಯಸ್ಸಾದ ಮೇಲೆ ಒಂದು ದಿನ ತೀರಿಕೊಂಡರು.
ಗೌಡರ ನಂತರ ಮಗ ಮರೀಗೌಡನ ಯಜಮಾನಿಕೆ. ಅವನಿಗೆ ರಾಜಕೀಯದಲ್ಲಿ ಅತೀವ ಆಸಕ್ತಿ. ತಮ್ಮ ಜಾತಿಯ ಸಂಘಟನೆಗಳಲ್ಲಿ, ಸಹಕಾರ ಸಂಘಗಳಲ್ಲಿ ಎಲ್ಲದರಲ್ಲೂ ಒಂದೊಂದು ಹುದ್ದೆ ಹೊಂದಿದವ ಆತ. ತಾನು ಒಬ್ಬ ದೊಡ್ಡ ನಾಯಕನಾಗಬೇಕು ಎಂಬ ಕನಸು ಕಟ್ಟಿಕೊಂಡವನಾತ. ಒಂದು ಮಟ್ಟದ ಹೆಸರು ಗಳಿಸಿದ್ದ ಆತನಿಗೆ ಮುಂದೆ ಪಂಚಾಯಿತಿ ಚೇರ್ಮೆನ್ ಆಗುವ ಬಯಕೆ ಇತ್ತು. ಆದರೆ ಸಂಘಗಳ ರೀತಿಯಲ್ಲಿ ಇದಕ್ಕೆ ಯಾರೋ ಒಂದಿಷ್ಟು ಜನರ ಬೆಂಬಲ ಇದ್ದರೆ ಸಾಲದು. ಎಲ್ಲ ಜಾತಿ ವರ್ಗದವರ ವಿಶ್ವಾಸ ಬಹಳ ಮುಖ್ಯವಾಗಿತ್ತು. ತಮ್ಮ ಜಾತಿಯವರು ಬಹುಸಂಖ್ಯಾತರಾಗಿದ್ದರೂ ಕೂಡ ಬ್ರಾಹ್ಮಣರೂ, ಹರಿಜನ-ಗಿರಿಜನರೂ ನಿರ್ಣಾಯಕರಾಗಿದ್ದರು. ಬ್ರಾಹ್ಮಣರನ್ನು ಹರಿಜನ-ಗಿರಿಜನರನ್ನು ಒಟ್ಟುಗೂಡಿಸಿದರೆ ಅವರ ಸಂಖ್ಯೆಯೇ ಹೆಚ್ಚಾಗಿದ್ದರಿಂದ ಇವರಲ್ಲಿ ಯಾರಾದರೊಬ್ಬರ ಬೆಂಬಲವಿಲ್ಲದೆ ಚುನಾವಣೆ ಗೆಲ್ಲುವುದು ಕನಸಿನ ಮಾತಾಗಿತ್ತು. ಹಾಗಾಗಿ ಅವನು ಬಹಳ ಯೋಚಿಸಿದ್ದನು.
ಬ್ರಾಮಣರು ಎಂದರೆ ಮೊದಲಿನಿಂದಲೂ ಅವನಿಗೆ ತಿರಸ್ಕಾರ. ಚಿಕ್ಕವನಿದ್ದಾಗ ಊರಿನವರೆಲ್ಲರೂ ಹಿರಿಗೌಡರ ಮಗನೆಂದು ಗೌರವ ಕೊಟ್ಟರೆ ಬ್ರಾಹ್ಮಣರು ತಂದೆಗೆ ಮಾತ್ರ ಗೌಡರೆಂದು ಸಂಭೋದಿಸಿ ಇವನಿಗೆ “ಏನೋ ಮರಿಗೌಡ” ಎನ್ನುತ್ತಿದ್ದರು. ಈ ಅಪಮಾನ ಮೊದಲಿನಿಂದಲೂ ಅವನ ಮನದಾಳದಲ್ಲಿ ಬೇರೂರಿತ್ತು. ಚಿಕ್ಕವನಿದ್ದಾಗ ಹೋಗಲಿ ಬಿಡಿ ಎಂದರೆ ದೊಡ್ಡವನಾದ ಮೇಲೂ ವಯಸ್ಸಾದ ಬ್ರಾಹ್ಮಣ ಮುದುಕರು ಎಲ್ಲಾದರೂ ಕಂಡರೆ ‘ಮರಿಗೌಡ’ ಎಂದೇ ಏಕವಚನದಲ್ಲಿ ಸಂಭೋದಿಸುತ್ತಿದ್ದರು. ಅದು ಅವನಲ್ಲಿ ಹಳೆಯ ಅಪಮಾನವನ್ನು ಮತ್ತೆ ಮತ್ತೆ ಕೆರಳಿಸುತ್ತಿತ್ತು. ಅವಕಾಶ ಸಿಕ್ಕಿದಾಗೆಲ್ಲಾ ಅವನ ಆಪ್ತರ ಬಳಿ ಬ್ರಾಮಣರನ್ನು ನಖಶಿಖಾಂತ ಬೈಯುತ್ತಿದ್ದ. “ಪ್ರಪಂಚದಲ್ಲಿರುವ ದುರಂಹಕಾರಿಗಳೆಂದರೆ ಇವರೇ. ಪುಡಿಗಾಸಿಗಾಗಿ ಪೂಜೆ ಮಾಡುವುದಾದರೂ ತಾವೇ ದೇವರ ಸಹವರ್ತಿಗಳೇನೋ ಎಂಬಂತೆ ಫೋಸು ಕೊಡುತ್ತಾರೆ. ತಮ್ಮ ಗುರುಗಳಿಗೆ, ದೊಡ್ಡ ದೊಡ್ಡ ಭಟ್ಟರಿಗೆ ಬಿಟ್ಟರೆ ಇನ್ಯಾರಿಗೂ ಬೆಲೆ ಕೊಡುವುದಿಲ್ಲ ಇವರುಗಳು. ತಾವೇ ಎಲ್ಲ ತಿಳಿದವರ ಹಾಗೆ ವರ್ತಿಸುತ್ತಾರೆ”ಎಂದು ಎಷ್ಟು ತೆಗಳಕ್ಕಾಗುತ್ತದೆಯೋ ಅಷ್ಟು ತೆಗಳುತ್ತಿದ್ದ. ಹಾಗಂತ ತನ್ನ ಸಮಕಾಲೀನ ಬ್ರಾಹ್ಮಣರು ಗೌಡರೆಂದು ಬೆಲೆ ಕೊಟ್ಟು ಮಾತನಾಡಿದರೂ ಅವನಿಗೆ ಸಮಾಧಾನವಿರಲಿಲ್ಲ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ತಾನೇ ಅಧ್ಯಕ್ಷನಾಗಿದ್ದರೂ ದೇವಸ್ಥಾನದ ಅರ್ಚಕ ಮಾತ್ರ ಮಡಿ ಎಂಬ ಕಾರಣ ಇಟ್ಟುಕೊಂಡು ತನಗೂ ಎಲ್ಲರಂತೆ ಮೈ ತಾಗದಂತೆ ದೂರದಿಂದ ಪ್ರಸಾದ ನೀಡುತ್ತಾನೆ ಎಂಬುದೇ ಅವನಿಗೆ ಅಸಮಾಧಾನ ತರುತ್ತಿದ್ದ ವಿಷಯ. “ಬ್ರಾಮಣರ ನಿಯತ್ತು ಪಿಂಡಕ್ಕೆ ಮಾತ್ರ”ಎಂದು ಗೇಲಿ ಮಾಡುತ್ತಿದ್ದ. ಬಡವನಾದರೂ ಬೇರೆ ಜಾತಿಯವರ ಹಂಗಲ್ಲಿ ಬದುಕದ ಬ್ರಾಹ್ಮಣರನ್ನು ತನ್ನ ಹಂಗಲ್ಲಿ ಇಟ್ಟುಕೊಳ್ಳಲಾಗದು, ಜೊತೆಗೆ ಇವರ ಓಟಿಗಾಗಿ ತಾನೇ ಅವರ ಬಳಿ ಗೋಗರಿಯಬೇಕೆಂಬುದು ಅವನಿಗೆ ತಿಳಿದಿತ್ತು. ಇದು ಅವನ ಸ್ವಾಭಿಮಾನವನ್ನು ಕೆರಳಿಸುತಿತ್ತು. ಆದ್ದರಿಂದ ಅವರ ಸಹವಾಸ ಮಾಡದೇ ಹರಿಜನ-ಗಿರಿಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಉತ್ತಮ ಎಂದು ನಿರ್ಧರಿಸಿದ್ದನು.
“ಹರಿಜನ-ಗಿರಿಜನರನ್ನ ಒಲಿಸಿಕೊಳ್ಳುವುದು ಬಹಳ ಸಲೀಸು. ಅವರಲ್ಲಿ ಎಷ್ಟೋ ಜನರಿಗೆ ಸರ್ಕಾರಿ ಸೌಲಭ್ಯಗಳು ಎಷ್ಟಿವೆಯೆಂದೇ ಇನ್ನೂ ತಿಳಿದಿಲ್ಲ. ತಾನೇ ಮುಂದೆ ನಿಂತು ಸರ್ಕಾರಿ ಕಛೇರಿಗಳಿಗೆ ಹೋಗಿ ಅವರ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟರೆ ಸಾಕು, ಜೀವನ ಪರ್ಯಂತ ನೆನೆಸಿಕೊಳ್ತಾರೆ. ಅದಕ್ಕಿಂತ ಹೆಚ್ಚಾಗಿ ನಮ್ಮಿಬ್ಬರ ನಾಲಗೆ ರುಚಿಯೂ ಒಂದೇ. ಚುನಾವಣೆ ಸಮಯದಲ್ಲಿ ಗಡದ್ದಾದ ಬಾಡೂಟ ಹಾಕಿಸಿದರೆ ಸಾಕು. ಅರ್ಧಕ್ಕರ್ಧ ಗೆದ್ದಂತೆ” ಎಂಬ ಮತ ಅವನದ್ದು. ಆದ್ದರಿಂದ ಗಿರಿಜನರ ಮುಖಂಡನಂತಿದ್ದ ಚೌಡನನ್ನು ತನ್ನ ಆಪ್ತನನ್ನಾಗಿ ಮಾಡಿಕೊಂಡು ಆ ಮೂಲಕ ಅವರ ಸಮುದಾಯದ ಓಟು ಭದ್ರಪಡಿಸಿಕೊಳ್ಳುವುದರ ಜೊತೆಗೆ ಹಿಂದುಳಿದವರ ಬೆಂಬಲವಿರುವ ನಾಯಕ ಎಂದು ಪಕ್ಷದ ಹಿರಿಯ ನಾಯಕರ ಬಳಿ ಹೆಸರು ಗಿಟ್ಟಿಸಿದ್ದ.
ಹಿರೀಗೌಡರು ಹೋದ ಮೇಲೆ ಕೆಂಪಣ್ಣನೂ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಬಿಟ್ಟ. ಅವನ ಬದಲು ಚಂದ್ರುವಿಗೆ ಕಳುಹಿಸುತ್ತಿದ್ದ. ಆದರೆ ಚಂದ್ರುವಿಗೆ ಪೇಟೆ ಸುತ್ತುವ ಹುಚ್ಚಿದ್ದರಿಂದ ತೋಟದ ಕೆಲಸ ಮಾಡಲು ಮೈಗಳ್ಳತನ ರೂಢಿಸಿಕೊಂಡಿದ್ದ. ಜೊತೆಗೆ ಅಪ್ಪನ ಹಾಗೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿರಲಿಲ್ಲ. ಹೇಳಿದ್ದಷ್ಟೇ ಕೆಲಸ ಮಾಡುತ್ತಿದ್ದ. ಅದೇ ಸಮಯಕ್ಕೆ ಚೌಡನೂ ಇವನ ಕೆಲಸದ ಮೇಲಿನ ನಿರಾಸಕ್ತಿಯನ್ನು ಬಣ್ಣಬಣ್ಣವಾಗಿ ವಿವರಿಸಿ ಮರಿಗೌಡನ ಕಿವಿ ಊದಿದ. ಹಾಗೂ ಅಡಕೆ ಕೊಯ್ಲಿನ ಉಸ್ತವಾರಿ ಸ್ವತಃ ತಾನೇ ವಹಿಸಿಕೊಂಡ. ಮರಿಗೌಡನಿಗೂ ಇದೇ ಬೇಕಾಗಿತ್ತು. ಚೌಡ & ಅವನ ಸಂಗಡಿಗರಿಗೆ ಕೇಳಿ ಕೇಳಿದಾಗೆಲ್ಲಾ ಸಾಲ ಕೊಟ್ಟು ಸುಳ್ಳು ಲೆಕ್ಕದ ಬಾಕಿ ಬರೆಸಿ ತನ್ನ ಹಂಗಿನಲ್ಲಿರುವಂತೆ ಮಾಡಿಕೊಂಡಿದ್ದ. ಇದರಿಂದ ಕೆಂಡಾಮಂಡಲನಾದವನು ಚಂದ್ರು. ಚೌಡ ತನ್ನ ಸ್ಥಾನವನ್ನು ನಿಧಾನವಾಗಿ ಆಕ್ರಮಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಮನವರಿಕೆಯಾಯಿತು. ಗೌಡರಿಗೆ “ನಾನಿರುವಾಗ ಕೊಯ್ಲನ್ನು ಇವನಿಗೆ ಏಕೆ ವಹಿಸಿದಿರಿ” ಎಂದು ನೇರವಾಗಿ ಕೇಳುವ ಧೈರ್ಯವಿಲ್ಲದ್ದರಿಂದ ಒಳಗೊಳಗೇ ಇಬ್ಬರ ಮೇಲೂ ಕುದಿಯುತ್ತಿದ್ದ. ಇವನನ್ನು ಹೇಗಾದರೂ ಮಾಡಿ ಮೊದಲು ಇಲ್ಲಿಂದ ಓಡಿಸಬೇಕು ಎಂದು ಕಾಯುತ್ತಲೇ ಇದ್ದ. ಜೊತೆಗೆ ಚೌಡ ಗೌಡರ ಬಳಿ ಇವನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾನೆಂದೂ, ಅದರಿಂದಲೇ ಕೊಯ್ಲಿನ ಉಸ್ತುವಾರಿಯನ್ನು ಅವನಿಗೆ ನೀಡಿದ್ದಾರೆಂದೂ ಯಾರೋ ಮಾಹಿತಿ ನೀಡಿದರು.
ಈ ವಿಷಯ ತಿಳಿದ ಮಾರನೇ ದಿನ ಬೆಳಿಗ್ಗೆ ಅಪರೂಪಕ್ಕೆ ಬಂದ ಅತ್ತೆಯ ಜೊತೆ ಚಂದ್ರು ಮತ್ತು ಅವನ ಹೆಂಡತಿ ಸಿಂಗಪ್ಪಯ್ಯರ ಗದ್ದೆಯನ್ನು ಹಾದು ಎಲ್ಲಿಗೋ ಹೊಗುತ್ತಿದ್ದಾಗ ಚೌಡ, ಸೋಮಿ ಮತ್ತು ಅವನ ಕಡೆಯ ಹೆಣ್ಣಾಳೊಬ್ಬಳು ಎದುರುಗೊಂಡರು. ಚೌಡನನ್ನು ನೋಡಿದ್ದೇ ತಡ ಚಂದ್ರುವಿನ ಕೋಪ ನೆತ್ತಿಗೇರಿತು. “ಬೋಳಿಮಗನೆ.. ನನ್ನ ಅನ್ನಕ್ಕೇ ಕಲ್ ಹಾಕಕ್ಕೆ ನೋಡ್ತಿದೀಯ. ನನ್ನ ಬಗ್ಗೆನೇ ಗೌಡರ ಬಳಿ ಚಾಡಿ ಹೇಳಿ ಇಲ್ದೇ ಇರೋದೆಲ್ಲಾ ಹೇಳಿದೀಯ. ನಿಮ್ಮವರು ಊರು ಬಿಟ್ಟು ಓಡಿ ಹೋಗ್ಬೇಕು, ಹಂಗೆ ಮಾಡದೇ ಇದ್ರೆ ಕೇಳು ನಾನು ನಮ್ ಅಪ್ಪನಿಗೆ ಹುಟ್ಟಿದವ್ನೇ ಅಲ್ಲ” ಎಂದು ಗದರುವುದರೋಳಗೆ ಚೌಡನೂ ಪ್ರತಿಬಾಣ ಹೂಡಿಯಾಗಿತ್ತು. “ನೀನು ಅಪ್ಪನಿಗೆ ಹುಟ್ಟಿದವನೋ ಅಲ್ಲವೋ ಎನ್ನುವ ಸಂಶಯ ಎಲ್ಲರ್ಗೂ ಐತೆ, ಅದನ್ಯಾಕೆ ಸಾಬೀತು ಪಡುಸ್ತೀಯ” ಎಂದು ಒಮ್ಮೆಲೇ ಮರ್ಮಾಘಾತ ಆಗುವ ಹಾಗೆ ಹೇಳಿದನು. ಈ ಪ್ರತಿಕ್ರಿಯೆಯನ್ನು ಬಯಸದ ಚಂದ್ರು ಮತ್ತಷ್ಟು ಕುಪಿತಗೊಂಡನು. “ನನ್ನ ಹುಟ್ಟಿನ ಬಗ್ಗೆ ನೀನೇನು ಹೇಳೋದು. ನಿಮ್ ಕುಲದವರ್ನೆಲ್ಲಾ ನೋಡ್ಕೋ ಹೇಗಿದಾರೆ ಒಬ್ಬೊಬ್ಬರು ಅಂತ. ಒಬ್ಬಬ್ಬರದ್ದೂ ಒಂದೊಂದು ಆಕಾರ. ಒಬ್ಬೊಬ್ಬರದ್ದೂ ಒಂದೊಂದು ಮುಖ ಚಹರೆ. ನೀವು ಒಬ್ಬರಾದರೂ ನಿಮ್ ಅಪ್ಪಂದಿರನ್ನ ಹೋಲ್ತೀರಾ.. ಎಂತಹ ಹೆಡ್ಡನಿಗಾದರೂ ಗೊತ್ತಾಗ್ತದೆ ಯಾರು ಅಪ್ಪನಿಗುಟ್ಟಿದವ್ರು” ಎಂದು ಬಾಯಿಗೆ ಬಂದದ್ದು ಉಗುಳಿಬಿಟ್ಟ. ಅನಾವಷ್ಯಕವಾಗಿ ತಮ್ಮ ಕುಲದವರನ್ನು ಅವರಿಗೆ ಸಂಬಂಧವಿಲ್ಲದ ವಿಷಯಕ್ಕೆ ಎಳೆದು ತಂದಿದ್ದು ಚೌಡನಿಗೆ ಸಹಿಸಲಾಗಲಿಲ್ಲ. “ನಮ್ಮ ಕುಲದ ಬಗ್ಗೆ ಮಾತಾಡೋ ಯೋಗ್ಯತೆಯೂ ನಿನಗಾಗಲೀ ನಿನ್ನ ಕುಟುಂಬದವರಿಗಾಗಲೀ ಇಲ್ಲ. ನಿಮ್ಮ ವಂಶವೇ ಅಂತದ್ದು. ನಿಮ್ ಜಾತಿಯವರೆಲ್ಲಾ ಕಪ್ಪಗೇ ಇರೋದು. ಅಂತದ್ರಲ್ಲಿ ನಿನ್ ಅಪ್ಪ ಕೆಂಪಣ್ಣ ಅದ್ ಹ್ಯಾಗೆ ಕೆಂಪಗೆ ಹುಟ್ದ ನಂಗೊತ್ತಿಲ್ವಾ. ನಮ್ ಕಡೆ ಹಿರೀಕ್ರುಗಳು ಎಲ್ರೂ ಹೇಳ್ತಾರೆ ನಿಮ್ ಅಜ್ಜಿ ಬಗ್ಗೆ. ಆಗಿನ್ ಕಾಲ್ದಾಗೆ ಬ್ರಿಟೀಷ್ರು ಇದ್ರಂತಲ ಪಕ್ಕದ್ ಊರ್ನಾಗೆ. ಅಲ್ಲಿ ಅವರ ಬಂಗ್ಲೆಗೆ ನಿನ್ ಅಜ್ಜಿ ಕೆಲ್ಸಕ್ಕೆ ಹೋಗ್ತಿತ್ತಂತೆ. ಅಲ್ಲಿ ನಿನ್ ಅಜ್ಜಿ ಯಾವನೋ ಬ್ರಿಟೀಷಂಗೆ ಬಸ್ರಾಗಿ ನಿನ್ ಅಪ್ಪ ಕೆಂಪಣ್ಣ ಹುಟ್ಟಿದ್ದು ಊರಲ್ಲಿ ಎಲ್ಲರ್ಗೂ ಗೊತ್ತಿರೋ ಇಸ್ಯಾನೇ. ಇಲ್ದೇ ಇದ್ರೆ ಯಾರಿಗೂ ಇಲ್ದೇ ಇರೋ ಬಿಳಿಚರ್ಮ ಅವಂಗೆ ಹೇಗ್ ಬಂತು.?” ಎಂದು ಒಂದೇ ಮಾತಲ್ಲಿ ಅವನ ಕುಟುಂಬದ ವಂಶವೃಕ್ಷದ ಎಲ್ಲ ತಲೆಗಳ ಇತಿಹಾಸ ತೆರೆದಿಟ್ಟನು. ಅಷ್ಟಕ್ಕೇ ನಿಲ್ಲಿಸದೇ ” ನನ್ನ ಕುಲದವರ ಬಗ್ಗೆ ಇನ್ನೊಂದು ಮಾತು ಎತ್ತಿದರೆ ನನ್ನ ಜಾತಿಯವರ ಬಗ್ಗೆ ಕೀಳಾಗಿ ಮಾತನಾಡಿದ ಎಂದು ಪೋಲೀಸರ ಬಳಿ ತೆರಳಿ ಜಾತಿ ನಿಂದನೆ ಕೇಸ್ ಹಾಕಿಸಿ ಕಂಬಿ ಎಣೆಸುವ ಹಾಗೆ ಮಾಡ್ತೇನೆ” ಎಂದು ತನಗೆ ಅರೆಬರೆ ಗೊತ್ತಿರುವ, ರಾಜಕೀಯದಲ್ಲಿ ಬಳಸುವ ಕಾನೂನನ್ನು ಹೇಳಿದನು. ಆದರೆ ಚಂದ್ರು ಇದರಿಂದ ಇನ್ನೂ ರೋಷಾವೇಷಗೊಂಡನು. ತನ್ನ ಹೆಂಡತಿಯ ಮನೆ ಕಡೆ ಅವನಿಗೆ ಬಹಳ ಬೆಲೆ ಇತ್ತು. ನಿಮ್ಮಂತಹವರ ಮನೆ ಸೇರುವುದಕ್ಕೆ ನಮ್ಮ ಮಗಳು ಬಹಳ ಪುಣ್ಯ ಮಾಡಿದ್ದಳು ಎಂದೆಲ್ಲಾ ಹೆಂಡತಿಯ ಮನೆಯವರು ಗುಣಗಾನ ಮಾಡಿದ್ದರು. ಆದರೆ ಇಷ್ಟು ದಿನ ಅದನ್ನು ಕಾಪಾಡಿಕೊಂಡು ಬಂದಿದ್ದ ಅವನನ್ನು ಹಾಗು ಅವರ ಇಡೀ ವಂಶದವರನ್ನು ಅವನ ಅತ್ತೆಯ ಮುಂದೆಯೇ ಚೌಡ ಹರಾಜು ಹಾಕಿದ್ದ. ಈ ಅವಮಾನ ಸಹಿಸಲಾರದೆ ಚಂದ್ರು “ಕೇಸು ದಾಖಲಿಸುವುದು ನೀನು ಬದುಕಿದ್ದರೆ ತಾನೇ” ಎಂದು ಅವನಿಗೆ ಹೊಡೆಯಲು ನುಗ್ಗಿದನು. ಚಂದ್ರುವಿನ ಬಲಾಢ್ಯ ದೇಹ ತನ್ನ ಮೇಲೆ ಎರಗಿ ಬರುತ್ತಿದ್ದುದ ಕಂಡು ಚೌಡ ಅವನಿಂದ ತಪ್ಪಿಸಿಕೊಂಡು ಓಡಿದನು. ಅವನ ಹಿಂದೆಯೇ ಚಂದ್ರು ಅವನನ್ನು ಅಟ್ಟಿಸಿಕೊಂಡು ಹೋದನು.
ಅವರಿಬ್ಬರ ಉತ್ತರಾಧಿಕಾರವನ್ನು ಚಂದ್ರುವಿನ ಹೆಂಡತಿ ಮತ್ತು ಸೋಮಿ ಸ್ವೀಕರಿಸಿದರು. “ನಿನ್ನ ಗಂಡ ಬೇಜವಾಬ್ದಾರಿ ಆಗಿದ್ದಕ್ಕೇ ಗೌಡರು ಕೋಯ್ಲನ್ನು ನಮಗೆ ವಹಿಸಿರುವುದು. ಇಲ್ಲದಿದ್ದರೆ ನಮಗ್ಯಾಕೆ ವಹಿಸುತ್ತಿದ್ದರು. ನೀವುಗಳು ಮೈಗಳ್ಳತನ ಮಾಡುತ್ತಿದ್ದೀರ ಎಂದು ಗೌಡರೇ ಸ್ವತಃ ನಮ್ಮ ಬಳಿ ಹೇಳಿಕೊಂಡರು. ಅನ್ನ ಹಾಕಿದವರಿಗೆ ಮೋಸ ಮಾಡಬಾರದು” ಎಂದು ಸೋಮಿ ತನ್ನ ಗಂಡನ ಪರವಾಗಿ ವಕಾಲತ್ತು ವಹಿಸಿದಳು. ಚಂದ್ರುವಿನ ಹೆಂಡತಿ ಮೊದಲೇ ಗಯ್ಯಾಳಿ, “ಸಾಕು ಮುಚ್ಚೇ. ನಮ್ಮ ಬಗ್ಗೆ ಇಲ್ದೇ ಇರೋದನ್ನೆಲ್ಲಾ ಗೌಡರ ಕಿವಿಯಲ್ಲಿ ಊದಿರೋದು ನಮಗೆ ಗೊತ್ತಿಲ್ಲ ಅನ್ಕೊಂಡಿದ್ದೀಯ. ಇವತ್ತು ಗೌಡರ ಬಳಿಯೇ ಅದ್ನ್ನೆಲ್ಲಾ ಕೇಳಬೇಕೆಂದೇ ಹೊರಟಿದ್ವಿ. ಗೌಡ್ರಿಗೆ ಮಿನಿಷ್ಟ್ರೆಲ್ಲಾ ಗೊತ್ತು. ಅದ್ಕೆ ಅವ್ರ್ ಕಡೆಯಿಂದ ಸಣ್ಪುಟ್ಟ ಕೆಲಸ ಮಾಡ್ಸಿಕೊಳಕ್ಕೆ ಕೊಯ್ಲು ನೆಪ ಇಟ್ಕೊಂಡು ಗೌಡ್ರು ಬಳಿ ಬಂದಿದೀರ” ಎಂದಳು. “ನಿನ್ ಗಂಡ ಒಣಪುಗಾರ, ದಿನಾಲು ಸಂಜೆ ಪೇಟೆ ಸುತ್ತುತಾನೆ ಶೋಕಿ ಮಾಡಕ್ಕೆ. ಇನ್ ಕೆಲ್ಸ ಎಲ್ಲಿಂದ ಮಾಡ್ತಿದ್ದ” ಎಂದು ಸೋಮಿ ತನ್ನ ಗಂಡನನ್ನು ಬೈದಿದ್ದು ಚಂದ್ರುವಿನ ಹೆಂಡತಿಗೆ ಸಹಿಸಲಾಗಲಿಲ್ಲ. ಮೊದಲೇ ತನ್ನ ಅಮ್ಮನೆದುರಿಗೆ ಚೌಡ ಚಂದ್ರುವಿನ ಮನೆಯವರ ಬಗ್ಗೆ ಹಿಗ್ಗಾಮುಗ್ಗಾ ತೆಗಳಿದ್ದನು. ಈಗ ಸೋಮಿ ಚಂದ್ರುವಿನ ಮಾನ ಹರಾಜು ಹಾಕಿದಳು. “ನನ್ ಗಂಡ ಶೋಕಿಯಾದರೂ ಮಾಡ್ತಾನೆ, ಇನ್ನೊಂದಾದ್ರೂ ಮಾಡ್ತಾನೆ, ನೀನ್ಯಾವಳೆ ನನ್ನ ಗಂಡನ ಬಗ್ಗೆ ಮಾತಾಡಕ್ಕೆ ಹಲ್ ಮುಂಗ್ರಿ” ಎಂದು ಶುರುವಾದ ಜಗಳ ಕೈ-ಕೈ ಮಿಲಾಯಿಸುವ ತನಕ ಹೋಯಿತು. ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಾ ಒಬ್ಬರ ಜಡೆ ಒಬ್ಬರು ಹಿಡಿದುಕೊಂಡು ಸಿಂಗಪ್ಪಯ್ಯರ ಗದ್ದೆಯನ್ನೇ ರಣಾಂಗಣ ಮಾಡಿಕೊಂಡರು.
ಇವರ ಬೈಗುಳಗಳೆಲ್ಲಾ ಒಂದರ ಮೇಲೊಂದು ಸಿಂಗಪ್ಪಯ್ಯರ ಕಿವಿಗೆ ರಾಚುತ್ತಿದ್ದವು. ಚಂದ್ರು ಮತ್ತು ಚೌಡ ಜಗಳವಾಡುವಾಗಲೇ ಸಿಂಗಪ್ಪಯ್ಯ ಅಂಗಳದಲ್ಲೇ ನಿಂತುಕೊಂಡು “ಏಯ್.. ಏನ್ರೋ ಅದು ಜಗಳ ನಿಮ್ದು… ಬೆಳಿಗ್ಗೆ ಬೆಳಿಗ್ಗೆನೆ ಶುರು ಮಾಡಿಕೊಂಡಿದ್ದೀರ” ಎಂದು ಗುಟುರು ಹಾಕಿದ್ದರು. ಆದರೆ ಅವರ ಜಗಳದ ಭರಾಟೆಯಲ್ಲಿ ಸಿಂಗಪ್ಪಯ್ಯರ ಕೂಗು ಕೇಳಿಸಿರಲಿಲ್ಲ. ಆದರೆ ಸಿಂಗಪ್ಪಯ್ಯರ ಕಡೆ ಅವರುಗಳು ತಿರುಗಿಯೂ ನೋಡದಿದ್ದದು ಅವರಲ್ಲಿ ಅತೀವ ಕೋಪ ಹುಟ್ಟಿಸಿತು. ತನ್ನ ಜಮೀನಿನಲ್ಲಿಯೇ ನಿಂತು ತನ್ನ ಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ ಎಂಬುದು ಅವರ ಕೋಪಕ್ಕೆ ಕಾರಣ. “ಅವರ ಪ್ರಕಾರ ನಾನೊಬ್ಬ ಕ್ಷುದ್ರಜೀವಿ ಇರಬೇಕು. ನನ್ನ ಮಾತಿಗೆ ಬೆಲೆಯೇ ಇಲ್ಲವಲ್ಲ. ಯಕಶ್ಚಿತ್ ಹುಲುಮಾನವನೆಂದುಕೊಂಡಿದ್ದಾರೇನೋ ನನ್ನನ್ನು. ಅದೇ ನನ್ನ ಜಾಗದಲ್ಲಿ ಗೌಡರಿದ್ದರೆ ಪಂಚಾಯಿತಿಗೆ ಹೋಗುತ್ತಿದ್ದರು. ಎಷ್ಟು ದುರಂಹಕಾರಿಗಳು ಇವರು” ಎಂದು ಯೋಚಿಸುತ್ತಿರುವಾಗಲೇ ಓಡಿ ಹೋದ ಚೌಡನನ್ನು ಚಂದ್ರು ಅಟ್ಟಿಸಿಕೊಂಡು ಹೋದನು. ಅದನ್ನು ನೋಡಿ “ಎಲ್ಲಾದರೂ ಹಾಳಾಗಿ ಹೋಗಲಿ.. ಬೆಳಿಗ್ಗೆ ಬೆಳಿಗ್ಗೆ ಇಬ್ಬರೂ ಕಂಠಮಟ್ಟ ಕುಡಿದು ಬಂದಿದ್ದಾರೇನೋ ಬೇವರ್ಸಿಗಳು” ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಅವರುಗಳ ಹೆಂಗಸರ ಮಾರಾಮಾರಿ ಶುರುವಾಗಿತ್ತು. ಇದು ಸಿಂಗಪ್ಪಯ್ಯರನ್ನು ನಿಜಕ್ಕೂ ದಿಗಿಲು ಬೀಳಿಸಿತ್ತು.
“ಮೊದಲೇ ಹೆಂಗಸರು.. ಹೊಡೆದಾಡಿಕೊಂಡು ಹೆಚ್ಚು ಕಡಿಮೆಯಾದರೆ ನಾಳೆ ನನಗೇ ತೊಂದರೆ ಕಟ್ಟಿಟ್ಟ ಬುತ್ತಿ. ಹೊಡೆದಾಟದಲ್ಲಿ ಯಾರಾದರೂ ನೆಗೆದು ಬಿದ್ದರೆ ಅವರ ಅತೃಪ್ತ ಆತ್ಮ ನಮ್ಮ ಜಮೀನನ್ನ ಬಿಟ್ಟು ಹೋಗದು. ‘ಜಮೀನಿನಲ್ಲಿ ಪ್ರೇತ ಭಾದೆ ಕಂಡರೆ ಜಮೀನು ಏಳ್ಗೆ ಹೊಂದುವುದಿಲ್ಲ’ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದರಲ್ಲೂ ಮನೆಯ ಹತ್ತಿರವೇ ಆದ್ದರಿಂದ ಅಮಾವಾಸ್ಯೆಯ ಸಮಯದಲ್ಲಿ ಒಮ್ಮೊಮ್ಮೆ ಪ್ರೇತವಾಗಿ ಕಾಣಿಸಿಕೊಂಡು ಹೆದರಿಸಬಹುದು. ಇದರಿಂದ ಮನಸ್ಸಿಗೆ ನೆಮ್ಮದಿ ಇಲ್ಲದೇ ಜ್ಯೋತಿಷಿಗಳ ಬಳಿ ಹೋದರೆ ಅದನ್ನು ಉಚ್ಛಾಟಿಸಲು ಪ್ರೇತ ಸಂಸ್ಕಾರ ಅಂತೆಲ್ಲಾ ಏನೇನೋ ದುಡ್ಡು ಖರ್ಚಾಗುವ ಪರಿಹಾರವನ್ನೇ ಹೇಳುತ್ತಾರೆ.
ಇದಾದರೂ ಹಾಳಾಗಿ ಹೋಗಲಿ. ತನ್ನ ಎದುರಲ್ಲೇ ಯಾರಾದರು ಸತ್ತರೆ ನೋಡಿದ ಸಾಕ್ಷಿ ಎಂದು ಪೋಲೀಸರು ಕರೆಯುತ್ತಾರೆ. ಕೋರ್ಟು ಕಛೇರಿ ಅಂತೆಲ್ಲಾ ವರ್ಷಗಟ್ಟಲೆ ಅಲೆದಾಡಬೇಕಾಗುತ್ತದೆ. ಪೋಲೀಸರು ಮನೆ ಹತ್ತಿರ ಬಂದದ್ದು ನಮ್ಮವರು ಯಾರಾದರು ನೋಡಿದರೆ ನಾವೇ ಏನೋ ಮಾಡಿದ್ದೇವೆಂದು ಒಂದಕ್ಕೊಂದು ಸೇರಿಸಿ ಕತೆ ಕಟ್ಟಿ ಸುತ್ತಮುತ್ತಲಿನ ಊರಲ್ಲೆಲ್ಲಾ ಸಾರುತ್ತಾರೆ. ಒಂದು ವೇಳೆ ಕೊಲೆ ಮಾಡಿ ತಪ್ಪಿಸಿಕೊಂಡು ಓಡಿ ಹೋದರೆ ಪೋಲೀಸರು ಯಾರು ಆರೋಪಿ, ಯಾರು ಸಾಕ್ಷಿ ಎಂದು ನೋಡದೇ ಎಲ್ಲರಿಗೂ ಒಳಗೆ ಹಾಕಿ ಬೆಂಡೆತ್ತುತ್ತಾರಂತೆ” ಎನ್ನುವ ಭಯ ಆವರಿಸಿತು. ಯಾವುದೋ ನಾಯಿ ಯಾರೋ ದಾರಿಹೋಕನಿಗೆ ಕಚ್ಚಿದರೆ ಊರಲ್ಲಿರುವ ಎಲ್ಲಾ ನಾಯಿಗಳನ್ನು ಹಿಡಿದು ಕಸಿ ಮಾಡುವ ಚಿತ್ರಣ ಇದ್ದಕ್ಕಿದ್ದಂತೆ ಕಣ್ಮುಂದೆ ಹಾದು ಹೋಯಿತು. ಆಗಲೇ ಸಿಂಗಪ್ಪಯ್ಯರ ಕಾಲಿನ ಭಾಗದಲ್ಲಿ ನಡುಕ ಹತ್ತಿತ್ತು. ಇನ್ನು ತಡ ಮಾಡಿದರೆ ಆಗದು. ಮೊದಲು ಎಲ್ಲರನ್ನೂ ಜಮೀನಿನಿಂದ ಓಡಿಸಬೇಕೆಂದು ಹೊರಟರು.
“ಏಯ್.. ಹಡ್ಬೆ ಮುಂಡೇರ.. ನನ್ ಗದ್ದೇನ ಏನ್ ಸ್ಮಶಾಣ ಮಾಡ್ಕಂಡಿದೀರ ಹೊಡೆದಾಡಿ ಸಾಯಕ್ಕೆ.. ನೀವಾಗೇ ತೊಲುಗ್ತೀರೋ ಇಲ್ವೋ ಇವಾಗ” ಎಂದು ರೋಷಾವೇಶದಿಂದ ಕೂಗುತ್ತಾ ಅಂಗಳದ ತುದಿಯಲ್ಲಿರುವ ಮುಳ್ಳುತಂತಿಯ ಬೇಲಿಯನ್ನು ದಾಟಿ ಮುನ್ನುಗ್ಗಿದರು. ಸಿಂಗಪ್ಪಯ್ಯ ತಮ್ಮತ್ತ ಬರುವುದ ನೋಡಿದ್ದೇ ತಡ ನಾಲ್ಕೂ ಜನ ಹೆಂಗಸರು ಗಾಬರಿಗೊಂಡು ದಿಕ್ಕೆಟ್ಟು ಓಡಿದರು… ಅರವತ್ತು ವಯಸ್ಸು ದಾಟಿದರೂ ಸಹ ಸಿಂಗಪ್ಪಯ್ಯ ಉಸಿರುಗಟ್ಟಿ ಗದ್ದೆಯ ತುದಿಯವರೆಗೂ ಅವರುಗಳನ್ನು ಅಟ್ಟಿಸಿಕೊಂಡು ಹೋದರು. ಅಟ್ಟಿಸಿಕೊಂಡು ಬರುತ್ತಿದ್ದ ಸಿಂಗಪ್ಪಯ್ಯರನ್ನು ಮತ್ತೆ ಮತ್ತೆ ತಿರುಗಿ ನೋಡಿ ಹೆಂಗಸರು “ಅಯ್ಯಯ್ಯೋ” ಎಂದು ಕಿರುಚುತ್ತಾ ಕೈಯಲ್ಲಿರುವ ಸಾಮಾನು ಸರಂಜಾಮುಗಳನ್ನು ಬಿಸಾಡಿ ಓಡಿ ಹೋದರು.
ಸುಸ್ತಾಗಿ ಭಾರವಾದ ಹೆಜ್ಜೆಗಳನ್ನಿಡುತ್ತಾ, ಏದುಸಿರು ಬಿಡುತ್ತಾ ಸಿಂಗಪ್ಪಯ್ಯ ಮನೆಯ ಮುಂಭಾಗಕ್ಕೆ ಬಂದರು. ಬರುವಾಗ ಸುಸ್ತಾಗಿದ್ದರೂ ಏನೋ ಒಂದು ರೀತಿಯ ಹುಮ್ಮಸ್ಸು ಅವರಲ್ಲಿ ಮೈದುಂಬಿತ್ತು.”ಅಲ್ಲಾ.. ಅಂತಾ ಜಟ್ಟಿ ಹೆಂಗಸರುಗಳು ನನ್ನ ನೋಡಿ ಹೆದರಿದರೇ.!!? ಮೊದಲೇ ಬ್ರಾಹ್ಮಣ, ಕಬ್ಬಿಣದಂತಹ ದೇಹವಿರುವುದಿಲ್ಲ, ಅದರಲ್ಲೂ ವಯಸ್ಸಾಗಿ ತೋಳು, ಎದೆ ಎಲ್ಲಾ ಸುಕ್ಕುಗಟ್ಟಿ ಜೋತುಬಿದ್ದಿವೆ. ಕೈಯಲ್ಲಿ ಹೆದರಿಸುವುದಕ್ಕೆ ಕೋಲಾಗಲೀ ಅಥವಾ ಕತ್ತಿಯಾಗಲೀ ಯಾವುದನ್ನೂ ಹಿಡಿದುಕೊಂಡಿರಲಿಲ್ಲ. ಆದರೂ ಸಹ ನಾನು ಓಡಿಬರುವುದ ನೋಡಿಯೇ ಹೆದರಿ ಓಡಿದರಲ್ಲಾ.. ಹಾಗಾದರೆ ನನ್ನಲ್ಲಿ ಅಂತಹ ಭಯ ಹುಟ್ಟಿಸುವ ವರ್ಚಸ್ಸಿದೆಯೇ?” ಎನ್ನುವ ಖುಷಿ ಮೂಡಿತು.
ಮಹರ್ಷಿ ವಸಿಷ್ಠರ ಬಳಿ ಇದ್ದ ಸ್ವರ್ಗದ ಹಸು ‘ನಂದಿನಿ’ಯನ್ನು ತಾನು ತೆಗೆಂದುಕೊಂಡು ಹೋಗಲು ವಸಿಷ್ಠರು ಒಪ್ಪದಿದ್ದಾಗ ಅವರ ವಿರುದ್ಧವೇ ಕೌಶಿಕ ಮಹಾರಾಜ ಯುದ್ಧ ಆರಂಭಿಸಿದ್ದ. ರಿಕ್ತಹಸ್ತರಾಗಿದ್ದರೂ ಸಹ ವಸಿಷ್ಠರನ್ನು ಕೊನೆಗೂ ಕೌಶಿಕನಿಗೆ ಸೋಲಿಸಲಾಗಲಿಲ್ಲ. ಬ್ರಹ್ಮದಂಡದ ವಿರುದ್ಧ ಕ್ಷತ್ರಿಯ ಸೈನಿಕರ ಬಾಹುಬಲವೇ ಹುದುಗಿಹೋಯಿತು. ವಸಿಷ್ಠರ ಬ್ರಹ್ಮ ತೇಜಸ್ಸು ಕೌಶಿಕ ಮಹಾರಾಜನ ತೋಳ್ಬಲವನ್ನು ನಾಶ ಮಾಡಿತ್ತು. ಅದಕ್ಕೇ ಹೇಳುವುದು “ಬ್ರಹ್ಮತೇಜೋ ಬಲಂ ಬಲಂ” ಎಂದು. ಹೌದು ಇದು ಪರಮ ಸತ್ಯ. ಬ್ರಹ್ಮ ತೇಜಸ್ಸಿನ ಮುಂದೆ ಯಾವ ಶಕ್ತಿಯೂ ನಿಲ್ಲಲಾಗದು. ಇಲ್ಲದಿದ್ದರೆ ನನ್ನಂತಹ ಮುದುಕನನ್ನು ನೋಡಿ ಆ ಜಗಳಗಂಟಿಯರು ಒಮ್ಮೆಲೇ ಓಡಿ ಹೋಗುತ್ತಿದ್ದರೆ?” ಎಂದು ತಮ್ಮ ಅದೃಷ್ಯ ವರ್ಚಸ್ಸಿನ ಬಗ್ಗೆ ಗರ್ವದಿಂದ ಹೆಮ್ಮೆಪಟ್ಟುಕೊಳ್ಳುತ್ತಾ ಮನೆಯವಳಿಗೆ ಈ ವಿಷಯವನ್ನು ತಿಳಿಸಲು ಒಳ ನಡೆದರು. ಸಿಂಗಪ್ಪಯ್ಯರ ಕಂಡ ಕೂಡಲೇ ಅವರ ಮನೆಯವರು “ಅಯ್ಯೋ.. ಥೂ ನಿಮ್ಮ…. ನಿಮಗೇನ್ರೀ ಬರಬಾರ್ದು ಬಂದಿರೋದು ಈ ವಯಸ್ಸಿನಲ್ಲಿ…. ತೋಲಗ್ರೀ ಆಚೆಗೆ ಮೊದಲು…. ಇಲ್ದಿದ್ರೆ ಒಲೆ ಮೇಲಿರುವ ಬಿಸೀ ನೀರನ್ನು ಸುರಿದು ಬಿಡ್ತೀನಿ ನೋಡಿ” ಎಂದು ಸಿಂಗಪ್ಪಯ್ಯರ ಸೊಂಟದ ಕೆಳಭಾಗವನ್ನು ನೋಡುತ್ತಾ ದೊಡ್ಡ ಗಂಟಲಿನಲ್ಲಿ ಅರಚಿದರು.. ಆ ಸಮಯಕ್ಕೆ ಸಿಂಗಪ್ಪಯ್ಯರಿಗೆ ನಿಜವಾಗಿಯೂ ಆ ನಾಲ್ಕು ಜನ ಹೆಂಗಸರು ತನ್ನ ನೋಡಿ ದಿಗಿಲು ಬಿದ್ದು ಯಾಕೆ ಓಡಿಹೋದರು ಎಂದು ಮನವರಿಕೆಯಾಗಿತ್ತು.
*ಅಂಗಳದಿಂದ ಗದ್ದೆಗೆ ದಾಟುವ ಜಾಗದಲ್ಲಿ ಮುಳ್ಳಿನ ತಂತೀಬೇಲಿಯ ಮೇಲೆ ಸಿಕ್ಕಿ ಹಾಕಿಕೊಂಡ ಲಂಗೋಟಿಯ ತುಂಡು ಗಾಳಿಗೆ ಸ್ವಚ್ಛಂದವಾಗಿ ಹಾರಾಡುತ್ತಿತ್ತು.*
– ವಿಕ್ರಮ್ ಜೋಯ್ಸ್ ಶಿವಮೊಗ್ಗ.
Facebook ಕಾಮೆಂಟ್ಸ್