X

ಭಾರತದ ಹೆಮ್ಮೆಯ ನಾವಿಕ ಐಆರ್’ಎನ್’ಎಸ್’ಎಸ್(IRNSS)

21ನೇ ಶತಮಾನ ತಂತ್ರಜ್ಞಾನ ಕ್ರಾಂತಿಯನ್ನು ಕಂಡ ಶತಮಾನ. ಮನುಷ್ಯನ ಬೆರಳ ತುದಿಯಲ್ಲಿ ಜಗತ್ತೇ ಅವಿತು ಕುಳಿತಿದೆ. ಎಲ್ಲವೂ ಇಂಟರ್ನೆಟ್, ಎಲ್ಲೆಡೆಯೂ ಇಂಟರ್ನೆಟ್. ಇಂಟರ್ನೆಟ್ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವೇ ಇಲ್ಲ. ಹೌದು ಇದೊಂತರ ಮನುಷ್ಯ ಬದುಕಲು ಆಮ್ಲಜನಕ ಹೇಗೆ ಅಗತ್ಯವೋ ಹಾಗೇ ಈ ಇಂಟರ್ನೆಟ್ ಕೂಡ ಬಹಳಾ ಮುಖ್ಯ. ಮನೋರಂಜನೆಯಿಂದ ಹಿಡಿದು ಬಿಸಿನೆಸ್ ತನಕ, ಮಕ್ಕಳಿಂದ ಹಿಡಿದು ಹಿರಿಯರ ತನಕ, ಹಳ್ಳಿಯಿಂದ ಹಿಡಿದು ದಿಲ್ಲಿಯ ತನಕ ಈಗೇನಿದ್ದರೂ ಇಂಟರ್ನೆಟ್ ಜಮಾನ. ಹಲವಾರು ತಂತ್ರಜ್ಞಾನಗಳು ಭಾರತದಲ್ಲಿ ಹುಟ್ಟದಿದ್ದರೂ, ಅವುಗಳನ್ನು ಬಳಸುವುದರಲ್ಲಿ ಭಾರತೀಯರು ಸದಾ ಮುಂದು. ಬಹುಷಃ  ಇಂಟರ್ನೆಟ್ ಬಳಸುವುದರಲ್ಲಿ ಭಾರತೀಯರು ಅಗ್ರ ಸ್ಥಾನವನ್ನೇ ಪಡೆಯುತ್ತಾರೆ. ಚೀನಾ, ಜಪಾನ್ ದೇಶಗಳಿಗೆ ಭಾರತೀಯರಿಂದಲೇ ದೊಡ್ಡ ಬಿಸಿನೆಸ್ ದೊರೆಯುತ್ತಿದೆ. ಇಂದು ನಾವು ಬಳಸುವ ಬಹುತೇಕ ಹಾರ್ಡ್’ವೇರ್ ಭಾಗಗಳು ತಯಾರಾಗುವುದು ಚೀನಾ ಹಾಗೂ ಜಪಾನ್’ನಲ್ಲಿ. ನಾವು ಭಾರತೀಯರು ಇದರ ಹಿಂದೂ ಮುಂದೂ ತಿಳಿಯದೇನೆ ಎಲ್ಲವನ್ನೂ ಬಳಸುತ್ತೇವೆ. ಅದರೆ ಈ ಹೊರದೇಶದಿಂದ ಬರುವ ಹಲವಾರು ಪ್ರಮುಖ ಹಾರ್ಡ್’ವೇರ್ ಉತ್ಪನ್ನಗಳನ್ನೇನು ಇಂಟರ್ನೆಟ್ ಒದಗಿಸಲು ಬಳಸುತ್ತೇವೆ, ಅವುಗಳಿಂದ ನಮ್ಮ ದೇಶದ ಜನರ ಮಾಹಿತಿಗಳು ಯಾರಿಗೂ ತಿಳಿಯದಂತೆ ಚೀನಾ ಹಾಗೂ ಜಪಾನ್’ನಂತಹ ದೇಶಗಳಿಗೆ ಹರಿದುಹೋಗುತ್ತದೆ. ಹಾಗಾದರೆ ಈ ಮಾಹಿತಿ ಸೋರಿಕೆಯನ್ನು ತಡೆಯಲು ಹಾಗೂ ಭದ್ರತೆಯನ್ನು ಬಿಗಿಗೊಳಿಸಲು ಏನು ಮಾಡಬೇಕು ?. ಆದಷ್ಟು ಸ್ವದೇಶಿ ತಂತ್ರಜ್ಞಾನಗಳನ್ನು ಬೆಳೆಸಿಕೊಂಡು, ಬಳಸಬೇಕು. ಹೌದು ಇಂದು ನಾನು ಹೇಳಹೊರಟಿರುವ ವಿಷಯ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವಿಷಯ. ಅದುವೇ ಸ್ವದೇಶಿ ನೇವಿಗೇಷನ್ ವ್ಯವಸ್ಥೆ(GPS) ಐಆರ್’ಎನ್’ಎಸ್’ಎಸ್(IRNSS).

ದಿನನಿತ್ಯದ ಬದುಕಿನಲ್ಲಿ, ಅವಶ್ಯಕತೆಗಳ ಸಾಲಿನ ಜೊತೆಗೆ ಸೇರಿಕೊಂಡಿರುವ ಜಿಪಿಎಸ್(GPS) ವ್ಯವಸ್ಥೆಯು ನಮಗೆ ಬಹಳ ಸಹಾಯ ಮಾಡುತ್ತಿದೆ. ಯಾವುದೇ ಹೊಸ ಜಾಗಗಳಿಗೆ ಹೋಗುವಾಗ ಮಾರ್ಗ ಸರಿಯಾಗಿ ತಿಳಿಯದಿದ್ದರೆ ಚಿಂತಿಸುವ ಪ್ರಸಂಗವೇ ಇಲ್ಲ. ಜೊತೆಗೆ ಸ್ಮಾರ್ಟ್’ಫೋನ್ ಇದ್ದರೆ ಸಾಕು, ಜಿಪಿಎಸ್ ಎಂಬ ಮಾಂತ್ರಿಕ ನಾವು ಎಲ್ಲಿಗೆ ಹೋಗಬೇಕು ಎಂದು ತಿಳಿಸಿದರೆ ಸಾಕು, ಸಂಪೂರ್ಣ ದಾರಿಯನ್ನು ತೋರಿಸುತ್ತಾನೆ. ಈ ಜಿಪಿಎಸ್ ನಮ್ಮ ದಿನನಿತ್ಯದ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ನಮ್ಮ ಹಿರಿಯರು ತಮ್ಮ ಜೊತೆಗೆ ನಕ್ಷೆಯನ್ನು ಹಿಡಿದುಕೊಂಡು ಹೊಸ ಜಾಗಗಳಿಗೆ ಹೋಗುತ್ತಿದ್ದರು. ಆದರೆ‌ ಈಗ ತಂತ್ರಜ್ಞಾನ ಬಹಳಾನೇ ಮುಂದುವರೆದಿದೆ. ಬರೀ ಮಾರ್ಗಸೂಚಿ ಅಷ್ಟೇ ಅಲ್ಲದೇ, ಸಮಯವನ್ನು ತಿಳಿಯಲು, ಭೂಮಿಯ ಮೇಲಿನ ಜಾಗಗಳನ್ನು ಅಧ್ಯಯನ‌ ಮಾಡಲು, ದೇಶದಲ್ಲಿ ಸೈನ್ಯಕ್ಕೆ ಅಗತ್ಯವಿರುವ ಕೆಲವೊಂದು ಗೌಪ್ಯ ವಿಷಯಗಳನ್ನು ಕುರಿತು ಅಧ್ಯಯನ ಮಾಡಲು ಹಾಗೂ ಇನ್ನೂ ಹಲವಾರು ಪ್ರಮುಖ ಸೇವೆಗಳನ್ನು ಜಿಪಿಎಸ್ ತಂತ್ರಜ್ಞಾನ ವದಗಿಸುತ್ತದೆ‌. ಭಾರತ ಇದುವರೆಗೂ ಸ್ವದೇಶಿ ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರಲಿಲ್ಲ. ನಾವು ಅಮೇರಿಕಾದ ನೇವಿಗೇಷನ್ ವ್ಯವಸ್ಥೆ ಜಿಪಿಎಸ್(GPS)ಅನ್ನು ಬಳಸುತ್ತಿದ್ದೇವೆ. ಆದರೆ‌ ಭಾರತ ಸ್ವದೇಶಿ ಜಿಪಿಎಸ್ ತಂತ್ರಜ್ಞಾನವನ್ನು ಬಳಸಲು ತಯಾರಾಗಿ ನಿಂತಿದೆ. ಇನ್ನೇನಿದ್ದರು ನಮ್ಮ ಸ್ವದೇಶಿ ಜಿಪಿಎಸ್ ವ್ಯವಸ್ಥೆ. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ವಿಷಯ. ಈ ದೊಡ್ಡ ಕನಸಿನ‌ ಹಿಂದೆ ಇಸ್ರೋದ(ISRO) ಹಲವಾರು ವಿಜ್ಞಾನಿಗಳ ಹಾಗೂ ತಂತ್ರಜ್ಞರ ಶ್ರಮವಿದೆ.

ಹಾಗಾದರೇ ಏನೀ ಸ್ವದೇಶಿ ಜಿಪಿಎಸ್ ತಂತ್ರಜ್ಞಾನ ? ಇದರ ಹೆಸರಾದರೂ ಏನು ? ಯಾವಾಗ ನಾವು ಇದನ್ನು ಬಳಸಬಹುದು ? ಹಾಗೂ ಇದು ಹೇಗೆ ಕೆಲಸ ನಿರ್ವಹಿಸುತ್ತದೆ ? ಎಂಬೆಲ್ಲಾ ಮಾಹಿತಿಗಳನ್ನು ತಿಳಿಯೋಣ ಬನ್ನಿ. ಮೊದಲು ಈ ಜಿಪಿಎಸ್ ಅಂದರೆ‌ ಏನು ಹಾಗೂ ಇದು ಹೇಗೆ ಕೆಲಸಾ ನಿರ್ವಹಿಸುತ್ತದೆ ಎಂಬುದನ್ನ ತಿಳಿಯೋಣ. ಜಿಪಿಎಸ್(GPS) ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್(Global Positioning System). ಇದು 30 ಉಪಗ್ರಹಗಳನ್ನು ಹೊಂದಿರುವ, ಭೂಮಿಯಿಂದ 20,000ಕಿಲೋಮೀಟರ್ ಎತ್ತರದಲ್ಲಿ ರಚನೆಯಾಗಿರುವ ಒಂದು ವ್ಯವಸ್ಥೆ. ಈ 30 ಉಪಗ್ರಹಗಳೂ ಭೂಮಿಯನ್ನು ಒಂದು ವ್ಯವಸ್ಥಿತವಾದ ವ್ಯೂಹದಲ್ಲಿ ಸುತ್ತುತ್ತವೆ. ಈ ಜಿಪಿಎಸ್ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಅಮೇರಿಕ. ಇದನ್ನು ಪ್ರಮುಖವಾಗಿ ತನ್ನ ಸೇನಾ ವ್ಯವಸ್ಥೆಯಲ್ಲಿ ಬಳಸಿದ ಅಮೇರಿಕಾ ನಂತರದ ದಿನಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಅಳವಡಿಸಲು ಅನುಮತಿ ನೀಡುತ್ತದೆ. ಈ ಜಿಪಿಎಸ್ ಉಪಗ್ರಹಗಳು ಅಟಾಮಿಕ್ ಕ್ಲಾಕ್’ಗಳನ್ನು(ಪರಮಾಣು ಗಡಿಯಾರಗಳು) ಹೊಂದಿವೆ. ಇದರಿಂದಾಗಿ ನಾವು ನಿಂತಿರುವ ಜಾಗದ ನಿಖರವಾದ ಸಮಯವನ್ನು ಪಡೆಯಬಹುದು. ಹಾಗೂ ಈ ಜಿಪಿಎಸ್ ತಂತ್ರಜ್ಞಾನ ಐನ್’ಸ್ಟೈನ್’ನ ಸಾಪೇಕ್ಷ ಸಿದ್ಧಾಂತವನ್ನು ಬಳಸಿಕೊಂಡು ಕೆಲಸಾ ಮಾಡುತ್ತವೆ. ಇನ್ನು ನಾವು ಅಮೇರಿಕಾದ ಜಿಪಿಎಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಸ್ವದೇಶಿ ಜಿಪಿಎಸ್ ವ್ಯವಸ್ಥೆಯು ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯರ ಕೈ ಸೇರಲಿದೆ.

ಭಾರತ ಅಭಿವೃದ್ಧಿ ಪಡಿಸುತ್ತಿರುವ ಜಿಪಿಎಸ್ ತಂತ್ರಜ್ಞಾನದ ಹೆಸರು ಐಆರ್’ಎನ್’ಎಸ್’ಎಸ್(IRNSS) ಅಂದರೆ ಇಂಡಿಯನ್ ರೀಜನಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್(Indian Regional Navigation Satellite System). ಇದರ ಇನ್ನೊಂದು ಹೆಸರೇ(Operational Name) ನಾವಿಕ ಅಥವಾ ನಾವಿಕ್(NAVIC – NAVigation with Indian Constellation). ಅಮೇರಿಕಾ, ಯುರೋಪಿಯನ್ ಯೂನಿಯನ್, ಚೈನಾ, ರಷಿಯಾ ಹಾಗೂ ಜಪಾನ್ ದೇಶಗಳು ಸ್ವಂತ ಜಿಪಿಎಸ್ ವ್ಯವಸ್ಥೆಯನ್ನು ಹೊಂದಿವೆ.  ರಷಿಯಾ GLONASS, ಯುರೋಪಿಯನ್ ಯೂನಿಯನ್ GALILIO, ಜಪಾನ್ QZSS, ಚೈನಾ BEIDOU ನೇವಿಗೇಷನ್ ವ್ಯವಸ್ಥೆಯ ಹಕ್ಕನ್ನು ಹೊಂದಿವೆ. ಇದರ ಜೊತೆಗೆ ಈಗ ಭಾರತದ ನಾವಿಕ್(NAVIC) ಈ ಸಾಲಿಗೆ  ಸೇರಿಕೊಳ್ಳಲಿದೆ.

ನಮ್ಮ ನಾವಿಕ್ ಒಟ್ಟು ಏಳು ಉಪಗ್ರಹಗಳನ್ನು ಹೊಂದಿದೆ. ಈ ತಂತ್ರಜ್ಞಾನವನ್ನು ಬಹು ಮುಖ್ಯವಾಗಿ ಮಾರ್ಗ‌ ಅಥವಾ ಸ್ಥಳ ಸೂಚನೆಗಾಗಿ ಅಥವಾ ಹುಡುಕುವುದಕ್ಕಾಗಿ ಹಾಗೂ ಸಮಯವನ್ನು ತಿಳಿಯುವುದಕ್ಕಾಗಿ‌ ಬಳಸಿಕೊಳ್ಳಲಾಗುತ್ತದೆ.
ಈ ಏಳು ಉಪಗ್ರಹಗಳು ಅಂದಾಜು 1500 ಕಿಲೋಮೀಟರ್ ಭೂಪ್ರದೇಶವನ್ನು ಚಾಚಿಕೊಂಡು ನೇವಿಗೇಷನ್ ಸೇವೆಯನ್ನು ನೀಡಲಿವೆ. ಯಾಕೆ ಭಾರತ ಸ್ವದೇಶಿ ನೇವಿಗೇಷನ್ ವ್ಯವಸ್ಥೆಯನ್ನು ಹೊಂದಲು ತೀರ್ಮಾನಿಸಿತೆಂದರೆ, ಅಮೇರಿಕಾದ‌‌ ಜಿಪಿಎಸ್ ನಮಗೇ ತಿಳಿಯದಂತೆ ನಮ್ಮ ಸೈನ್ಯಕ್ಕೆ ಸಂಬಂಧಪಟ್ಟ ಗುಪ್ತ ಮಾಹಿತಿಗಳನ್ನು ಅಮೇರಿಕಾಗೆ ಕಳುಹಿಸುತ್ತಿತ್ತು. ಇದು‌ ಭಾರತದ ಪಾಲಿಗೆ ದೊಡ್ಡ ಸಮಸ್ಯೆಯಾಗಿತ್ತು. ಭಾರತ ಅಮೇರಿಕಾದ ಜಿಪಿಎಸ್ ವ್ಯವಸ್ಥೆಯನ್ನು ಬಳಸಬೇಕಾದರೆ ಅಮೇರಿಕಾದ ಕೆಲವೊಂದು ಷರತ್ತುಗಳಿಗೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯಿತ್ತು. ಈ ಷರತ್ತಿನ ಅನುಸಾರ ಅಮೇರಿಕಾ ತನ್ನ ಜಿಪಿಎಸ್ ವ್ಯವಸ್ಥೆಯ ಮೂಲಕ ಭಾರತದ ಭೂಭಾಗವನ್ನು ಬಹಳ ಹತ್ತಿರದಿಂದ ನೋಡುತ್ತಿತ್ತು. ಸದಾ ದೊಡ್ಡಣ್ಣನ ಕಣ್ಣು ಭಾರತದ ಮೇಲಿತ್ತು. ಭಾರತ ಅದೇನೇ ಗುಪ್ತವಾಯಿ ನಡೆಸಿದರು ಈ ಜಿಪಿಎಸ್ ಎಲ್ಲವನ್ನೂ ಗಮನಿಸುತ್ತಿತ್ತು. ಮಾಜಿ ಪ್ರಧಾನಿ ವಾಜಪೇಯಿ ಅವರು ಪೋಕ್ರಾನ್ ಪರೀಕ್ಷೆ ನಡೆಸಿದಾಗ ದೊಡ್ಡಣ್ಣನ ಕಣ್ಣು ಮರೆಸಲು ಹರಸಾಹಸ ಪಟ್ಟಿರಬಹುದು. ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು 2006ರಲ್ಲಿ. ಭಾರತದ ಸ್ವದೇಶಿ ನೇವಿಗೇಷನ್ ವ್ಯವಸ್ಥೆಯ ಯೋಜನೆಯ ಅಭಿವೃದ್ಧಿಗೆ 2006 ಮೇ ತಿಂಗಳಲ್ಲಿ ಭಾರತ ಸರ್ಕಾರದ ಅನುಮತಿ ನೀಡಿತು.

ಈ ಯೋಜನೆಯನ್ನು ಕೈಗೆತ್ತಿಕೊಂಡ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 1,420 ಕೋಟಿ ಎಂದು ನಿರೀಕ್ಷಿಸಲಾಗಿದೆ. ಯೋಜನೆ ಒಟ್ಟು ಏಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಈ ಉಪಗ್ರಹಗಳ ಹೆಸರು IRNSS-1 ಎಂಬ ಪೂರ್ವಪ್ರತ್ಯಯದಿಂದ ಪ್ರಾರಂಭವಾಗುತ್ತದೆ. ಇಸ್ರೋ 2010 ಏಪ್ರಿಲ್’ನಿಂದ ಪ್ರತೀ ಆರು ತಿಂಗಳಿಗೊಂದು ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರ ಮೂಲಕ 2015ರ‌ ವೇಳೆಗೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ವರದಿಯನ್ನು ಪ್ರಸ್ತಾಪಿಸಿತಾದರೂ, ಸ್ವಲ್ಪ ತಡವಾಗಿ ಯೋಜನೆ ಪ್ರಾರಂಭವಾಯಿತು. ಈ ಯೋಜನೆಯ ಪ್ರಪ್ರಥಮ ಉಪಗ್ರಹವನ್ನ(IRNSS-1A) 2013 ಜುಲೈ ಒಂದನೇ ತಾರೀಖು ಕಕ್ಷೆಗೆ ಸೇರಿಸಲಾಯಿತು. ನಂತರ IRNSS-1B ಉಪಗ್ರಹವನ್ನು ಏಪ್ರಿಲ್ 4, 2014ರಂದು, IRNSS-1C ಉಪಗ್ರಹವನ್ನು 16 ಅಕ್ಟೋಬರ್ 2014ರಂದು, IRNSS-1D ಉಪಗ್ರಹವನ್ನು 28 ಮಾರ್ಚ್ 2015ರಂದು, IRNSS-1E ಉಪಗ್ರಹವನ್ನು 20 ಜನವರಿ 2016ರಂದು, IRNSS-1F ಉಪಗ್ರಹವನ್ನು 10 ಮಾರ್ಚ್ 2016ರಂದು ಹಾಗೂ ಕೊನೆಯ ಉಪಗ್ರಹ IRNSS-1Gಯನ್ನು 28 ಏಪ್ರಿಲ್ 2016ರಂದು ವ್ಯವಸ್ಥಿತ ವಿವಿಧ ಕಕ್ಷೆಗಳಿಗೆ ಸೇರಿಸಲಾಯಿತು.

ಇನ್ನೇನು ಕೆಲವು ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ನಮ್ಮ ದೇಶದ ಹೆಮ್ಮೆಯ ನಾವಿಕ ಐಆರ್’ಎನ್’ಎಸ್’ಎಸ್(IRNSS) ಭಾರತೀಯರ ಕೈಸೇರಲಿದ್ದಾನೆ. ಇನ್ನೇನಿದ್ದರೂ ನಾವಿಕನ‌ ಜೊತೆ ನಮ್ಮ ಸಂಚಾರ ಆರಂಭವಾಗುತ್ತದೆ. ಇಂತದ್ದೊಂದು ದೊಡ್ಡ ಯೋಜನೆಯಡಿಯಲ್ಲಿ  ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಹಾಗೂ ತಂತ್ರಜ್ಞರಿಗೆ ದೊಡ್ಡದೊಂದು ನಮಸ್ಕಾರಗಳು. ಸ್ವದೇಶಿ ನೇವಿಗೇಷನ್ ವ್ಯವಸ್ಥೆಯನ್ನು ಹೊಂದುವ ಭಾರತದ ಕನಸು ನನಸಾಗಿದೆ.

Facebook ಕಾಮೆಂಟ್ಸ್

Manjunath Madhyasta: ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.
Related Post