X

ಕಾಣುವ ಮಾಯೆಯ ಸತ್ಯವ ನಂಬದೆ ಕಾಣದ ಬ್ರಹ್ಮದ ಸತ್ವವ ನಂಬುವುದೆಂತು ?

ಎಲ್ಲಿ, ಬ್ರಹ್ಮಸೃಷ್ಟಿಗೂ ಮಾಯಾ ಜಗಕ್ಕು ನಂಟು ಹಾಕುವ ಕೊಂಡಿ ?:

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯವೆನ್ನುವೊಡೆ |

ಸಂಬಂಧವಿಲ್ಲವೇನಾ ವಿಷಯ ಯುಗಕೆ? ||

ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |

ನೆಮ್ಮುವುದದಾರನೋ ? – ಮಂಕುತಿಮ್ಮ || ೩೦ ||

ಇದೋ ಇಲ್ಲಿನ್ನೊಂದು ಸೃಷ್ಟಿ ಮತ್ತು ಅದರ ಕತೃವಿನ (ಬ್ರಹ್ಮದ) ಕುರಿತಾದ ಕವಿ ಕುತೂಹಲದ ಜಿಜ್ಞಾಸೆ.

ಈ ಬ್ರಹ್ಮಾಂಡಾದಿ ಜಗವೆಲ್ಲ ಬ್ರಹ್ಮಸೃಷ್ಟಿಯೆನ್ನುತ್ತಾರೆಯಾದರೂ, ಅವನದೆ ಆದ ಈ ಸೃಷ್ಟಿಯೆಲ್ಲ ಶಾಶ್ವತವಲ್ಲದ ನಿಮಿತ್ತ ಮಾತ್ರ, ಬರಿ ಮಾಯೆ, ಬರಿಯ ಮಿಥ್ಯೆ ಎಂದು ಹೇಳುತ್ತದೆ ನಮ್ಮ ಪುರಾಣ, ಪ್ರವಚನ ಜ್ಞಾನ. ಈ ಮಾಯಾಸೃಷ್ಟಿಯ ಅನಿಶ್ಚಿತ-ಅನಿಯಮಿತ-ಅಶಾಶ್ವತ ಅಸ್ತಿತ್ವದಲ್ಲಿ ಸತ್ಯವೆನ್ನುವುದು ಕೇವಲ ಬ್ರಹ್ಮ ಮಾತ್ರ. ಇದನ್ನೆಲ್ಲಾ ಸೃಜಿಸಿದ ಅದನ್ನು ಬಿಟ್ಟು ಮಿಕ್ಕೆಲ್ಲವು ಬರಿಯ ಭ್ರಮೆ, ನೀರ್ಗುಳ್ಳೆಯ ಹಾಗಿನ ಅಸ್ಥಿರ ಅಸ್ತಿತ್ವ ಎನ್ನುವುದನ್ನು ನಿಜವೆ ಎಂದಿಟ್ಟುಕೊಂಡರು – ಹಾಗೆಂದ ಮಾತ್ರಕ್ಕೆ ಅವೆರಡರ ನಡುವೆ ಯಾವ ಸಂಬಂಧವಾಗಲಿ, ನಂಟಾಗಲಿ ಇಲ್ಲವೆಂದುಬಿಡಲಾದೀತೆ?

‘ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ.. ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ‘ಎನ್ನುತ್ತಾ ಪದಕ್ಕೂ ಅದರ ಅರ್ಥಕ್ಕೂ ಇರುವ ಅವಿನಾಭಾವ ಸಂಬಂಧವನ್ನು ದೈವದ ಅಸ್ತಿತ್ವಕ್ಕೂ, ಅದರ ಸ್ವರೂಪಕ್ಕೂ ಆರೋಪಿಸಿದ ಅದ್ಭುತ ಕಲ್ಪನೆ ನಮ್ಮದು. ಬ್ರಹ್ಮ ಮತ್ತದರ ಸೃಷ್ಟಿಯ ನಡುವಿನ ಪರಸ್ಪರ ವಿರೋಧಾಭಾಸದ ಇರುವಿಕೆ ಅದೆಷ್ಟೇ ಸತ್ಯವಿದ್ದರೂ ಸಹ ಅವೆರಡರ ವಸ್ತು-ವಿಷಯ, ಕಾರ್ಯ-ಕಾರಣ ಅವಲಂಬನೆ ಇರುವಿಕೆಯ ರೀತಿ, ಅವುಗಳ ಪರಸ್ಪರ ಸಂಬಂಧ ನಾವಿರುವ ಯುಗಕ್ಕೆ ಸಂಬಂಧಿಸಿದ್ದಲ್ಲವೆಂದು, ಅದೆಂದೊ ಆಗಿಹೋದ ಪುರಾತನ ಕತೆಯೆಂದು ಬದಿಗೆ ಸರಿಸಲಾದೀತೆ? ಅವುಗಳುಂಟು ಮಾಡಿರುವ, ಮಾಡುತ್ತಿರುವ ಪರಿಣಾಮ, ಫಲಿತಗಳನ್ನು, ಅನುಭವಗಳನ್ನು ಕಡೆಗಣಿಸಲಾದೀತೆ? ಯುಗಧರ್ಮದ ನೆಪದಲ್ಲಿ ಅವುಗಳ ಕಾಲಾತೀತ ವ್ಯಾಪ್ತಿಯನ್ನು ಪ್ರಶ್ನಿಸಲಾದೀತೆ?

ಪುರಾಣಶಾಸ್ತ್ರ, ಗ್ರಂಥಗಳು ಹೇಳುತ್ತವೆ ಆ ಬ್ರಹ್ಮ ಮಾತ್ರವೆ ಸತ್ಯ ಎಂದು. ಆದರೆ ಭೌತಿಕವಾಗಿ ಆ ಬ್ರಹ್ಮವೆಂಬುದನ್ನು

ಕಾಣುವುದೇ ಸಾಧ್ಯವಿಲ್ಲವಾಗಿ ಆ ಮಾತನ್ನು ನಿಜವೆನ್ನಬೇಕೊ, ಸುಳ್ಳೆನ್ನಬೇಕೊ ಎನ್ನುವ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿ, ಈ ಸೃಷ್ಟಿಯೇ ಮಿಥ್ಯವೆಂದು ಸಾರುವ ಮತ್ತೊಂದು ಎಳೆ ಹಿಡಿದು ಹೊರಟರೆ, ಮಸಲಾ ಆ ಮಿಥ್ಯೆ ಎನ್ನುವುದೆ ಸತ್ಯದ ರೂಪದಲ್ಲಿ ನಮ್ಮ ಕಣ್ಮುಂದೆಯೆ ಇದೆ, ನಾವದರಲ್ಲೆ ದಿನವೂ ಬದುಕು ಸಾಗಿಸುತ್ತಿದ್ದೇವೆ.. ಹೀಗಾಗಿ ಅಲ್ಲಿಯೂ ಗೊಂದಲದ ಗೂಡೊಳಗೆ ಬಿದ್ದ ಚಡಪಡಿಕೆಯ ಭಾವವೆ ಅನುಭವ ವೇದ್ಯವಾಗುತ್ತದೆ. ಭೌತಿಕ ಅನುಭವಕ್ಕೆ ನಿಲುಕದ ಬ್ರಹ್ಮದ ಅಸ್ತಿತ್ವವನ್ನು ನಂಬಿ ಒಪ್ಪಿಕೊಳ್ಳಬೇಕಂತೆ, ಅನುಭವಗಮ್ಯ ಮಾಯಾ ಜಗತ್ತನ್ನು ನಿರಾಕರಿಸಬೇಕಂತೆ – ಎಂಥಾ ವಿರೋಧಾಭಾಸ! ಪಂಚೇಂದ್ರಿಯ ಮತ್ತು ಅತಿಂದ್ರೀಯ ಜ್ಞಾನದ ಹಿಡಿತಕ್ಕೆ ಭೌತಿಕವಾಗಿಯಾಗಲಿ, ತಾರ್ಕಿಕವಾಗಿಯಾಗಲಿ ಸರಳವಾಗಿ ನಿಲುಕದ ಈ ವಿರೋಧಾಭಾಸದ, ಗೊಂದಲಮಯ ದ್ವಂದ್ವ ಸಿದ್ದಾಂತವನ್ನು ನಮ್ಮ ಹುಲುಮಾನವ ಪ್ರಜ್ಞೆ ಒಪ್ಪಿಕೊಳ್ಳುವುದಾದರೂ ಹೇಗೆ ?

ಈ ಪರಿಸ್ಥಿತಿಯಲ್ಲಿ ಕಣ್ಣೆದುರಿಗಿರುವುದನ್ನು ನಂಬಬೇಡ, ಕಾಣದಿರುವುದನ್ನು ನಂಬು ಎನ್ನುವ ತರ್ಕ-ಸಿದ್ದಾಂತ, ನಾವು ಹುಟ್ಟಿನಿಂದ ನಂಬಿಕೊಂಡು ಬಂದ ಕಣ್ಣಿಂದ ನೋಡಿ, ಮನಸಿಂದ ಗ್ರಹಿಸುವ ತರ್ಕ ಪ್ರಕ್ರಿಯೆಗೆ ತದ್ವಿರುದ್ಧವಾದ ಅಭಾಸವೆನಿಸುವುದಿಲ್ಲವೆ ? ನಮ್ಮ ಇಂದ್ರೀಯಾಂತಃಕರಣಗಳೆ ನಮಗೆ ಸುಳ್ಳು (ಸಟೆ) ಹೇಳುತ್ತಿವೆ, ಅದನ್ನು ನಂಬಬೇಡ ಎಂದರೆ – ಯಾರು ನಿಜ ಹೇಳುತ್ತಿದ್ದಾರೆಂದು ನಂಬುವುದು? ವೈಜ್ಞಾನಿಕ ತರ್ಕವನ್ನಾಧರಿಸಿದ ಕಣ್ಮುಂದಿನ ಸಾಕ್ಷಾಧಾರವನ್ನೊ ? ಕಾಣಿಸದ ತತ್ವ ಸಿದ್ದಾಂತವನ್ನೊ ? – ಎನ್ನುವ ಮಂಕುತಿಮ್ಮನ ಗೊಂದಲ ಇಲ್ಲಿನ ಸಾರ.

ಹಾಗೆಯೆ ಸೂಕ್ಷ್ಮವಾಗಿ ಗಮನಿಸಿದರೆ ಆಸ್ತಿಕತ್ವ, ನಾಸ್ತಿಕತ್ವದ ನಡುವಿನ ತಿಕ್ಕಾಟದ, ಗೊಂದಲದ ಎಳೆಯೂ ಪ್ರಶ್ನೆಯ ರೂಪಾಗಿ ಇಲ್ಲಿ ಅನಾವರಣಗೊಂಡಿದೆ. ಬ್ರಹ್ಮದ ಪ್ರಸ್ತಾಪ ಆಸ್ತಿಕತ್ವದ ನಂಬಿಕೆಯ ಸೋಪಾನವಾದರೆ ಅದನ್ನು ಪ್ರಶ್ನಿಸುವ ಅಥವಾ ಅದರ ಇರುವಿಕೆಯನ್ನು ನಿರಾಕರಿಸುವ ಹಾಗೆ ಪ್ರವರ್ತಿಸುವ ಮಾಯಾ ಜಗತ್ತು ನಾಸ್ತಿಕತ್ವಕ್ಕೆ ಇಂಬುಕೊಡುತ್ತದೆ.  ಅದೇ ಹೊತ್ತಿನಲ್ಲಿ ಸೃಷ್ಟಿಸಿಯಾದ ಮೇಲೆ ನನ್ನ ಕೆಲಸ ಮುಗಿಯಿತೆನ್ನುವಂತೆ ಇಷ್ಟೆಲ್ಲಾ ಗೊಂದಲ, ಸಂಶಯಗಳನ್ನು ತನ್ನ ಸೃಷ್ಟಿಯಲ್ಲಿರಿಸಿ ಅದನ್ನು ನಮ್ಮ ಮೇಲೆ ಹೇರಿ, ತಾನು ಮಾತ್ರ ಅದರ ಆಗುಹೋಗುಗಳಿಗೆ ಸಂಬಂಧವಿರದ ತಂತ್ರಜ್ಞ, ವಿನ್ಯಾಸಕಾರನ ಹಾಗೆ ನಿರ್ಲಿಪ್ತನಾಗಿ ಕೂತ ಸೃಷ್ಟಿಕರ್ತನ ಮೇಲಿನ ದೂರುವ ದನಿಯೂ ಇಲ್ಲಿ ಅಡಕವಾಗಿದೆ. ಪ್ರತಿಯೊಂದನ್ನು ನಮ್ಮ ಕಣ್ಣಿಗೆ ಕಾಣುವ ಸಾಕ್ಷಿ, ಪ್ರಾತ್ಯಕ್ಷಿಕೆಯ ವೈಜ್ಞಾನಿಕ ನೆಲೆಗಟ್ಟಿನಲಷ್ಟೆ ನಂಬುವ ನಮ್ಮ ಜಗದಲ್ಲಿ ಆ ಬ್ರಹ್ಮದಂತಹ ಬ್ರಹ್ಮವು ಸೃಷ್ಟಿಸಿದ ಜಗವೇ ಸುಳ್ಳಾಡುವ ಪ್ರತಿಮಾ ರೂಪವಾಗಿ ಕಾಣುವುದೆಂದರೆ , ಇನ್ನಾರನ್ನು ತಾನೆ, ಇನ್ನಾವುದನ್ನು ತಾನೆ ನಂಬುವುದೋ ? ಎನ್ನುವ ಅಳಲು ಅಸಹಾಯಕತೆ ಕೂಡ ಈ ಸಾಲುಗಳಲ್ಲಿ ಅಂತರ್ಗತವಾಗಿರುವ ಭಾವ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post