X

ಕಟು ಸತ್ಯ

ಇದು ಕಲಿಗಾಲ. ಇಲ್ಲಿ ಏನು ನಡೆಯುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿದ್ದೂ ಕಣ್ಣು ಮುಚ್ಚಿ ಕುರುಡರಂತೆ ಅಸಹಾಯಕತೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನೂ ಆಗುತ್ತಲೇ ಇದೆ.  ಇದರ ಅಂತ್ಯ ಎಲ್ಲಿಗೆ ಹೋಗಿ ತಲುಪುತ್ತದೊ ಅನ್ನುವ ಆತಂಕ , ಜಿಜ್ಞಾಸೆ ಮನದಲ್ಲಿ.  ಈ ಜಗತ್ತು, ದೇಶ ಯಾರೊಬ್ಬರ ಸ್ವತ್ತಲ್ಲ.  ಆದರೆ ಬರಬರುತ್ತಾ ಈ ದೇಶದ, ರಾಜ್ಯದ ಸ್ಥಿತಿ ಹದಗೆಡುತ್ತಲಿದೆ.  ಹುಟ್ಟಿದ ಶಿಶುವಿನಿಂದ ಹಿಡಿದು ಸಾಯುವ ಮುದುಕರವರೆಗೂ ತೊಳಲಾಟ ತಪ್ಪಿದ್ದಲ್ಲ.  ಎಲ್ಲಿ ನೋಡಿದರೂ ಅರಾಜಕತೆ.  ಮನುಷ್ಯ ಪ್ರತಿಯೊಂದು ಕ್ಷಣವೂ ಕತ್ತಿಯ ಅಲಗಿನ ಮೇಲೆ ಬದುಕುವಂತ ಸ್ಥಿತಿ ನಿರ್ಮಾಣವಾಗುತ್ತಿದೆ.

ಹಸುಳೆಗೆ ಹಾಲು ಕುಡಿಸುವಾಗಲೂ ತಂದ ಹಾಲು ಹಾಲೊ ಅಥವ ಹಾಲಾಹಲವೊ ಅನ್ನುವ ಸಂಕಟದಲ್ಲಿ ಹೆತ್ತ ಕರುಳು ಸಂಕಟ ಪಡುವಂತಾಗಿದೆ.  ಉಪಾಯ ಇಲ್ಲ. ಮನದೊಳಗಿನ ಆತಂಕ ಬದಿಗೊತ್ತಿ ಮಗುವಿನ ಹೊಟ್ಟೆ ತುಂಬಿಸುತ್ತಾಳೆ. ತಿನ್ನುವ ತರಕಾರಿ, ಹಣ್ಣು, ಬೇಳೆ ಕಾಳುಗಳಿಗೂ ವಿಷ ಮಿಶ್ರಿತ. ಕೆಡದೆ ಹಾಳಾಗದಿರಲು, ಫ್ರೆಶ್ ಆಗಿ ಕಾಣಲು. ಕಾಯಿ ಹಣ್ಣಾಗಲು ಎಲ್ಲದಕ್ಕೂ ತೀರ್ಥ ಪ್ರೋಕ್ಷಣೆ, ಗಂಧ ಲೇಪನ, ಅಕ್ಷತೆ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ದಂಧೆ ಅವ್ಯಾಹತವಾಗಿ ನಡೆಯುತ್ತಲೇ ಇದೆ.  ಟೀವಿ ಮಾಧ್ಯಮಗಳಲ್ಲಿ ಕಣ್ಣಾರೆ ಕಂಡ ಜನ ತುತ್ತು ಅನ್ನ ತಿನ್ನುವಾಗಲೂ ನಾಳೆ ನನ್ನ ಆರೋಗ್ಯ ಏನಾಗುತ್ತೊ ಎಂದು ಯೋಚಿಸುವಂತಾಗಿದೆ.  ಪಿಜ್ಜಾ ಬರ್ಗರ್ ಹಾವಳಿ ಯುವಕ ಯುವತಿಯರ ಬಾಯಿ ಚಪಲಕ್ಕೆ ಮನೆಯ ತಿಂಡಿ ರುಚಿಸದಂತಾಗಿದೆ.

ಹಿಂದಿನ ಕಾಲದ ಆಟ ಪಾಟ ತಿಂಡಿಗಳು ಒಡವೆ ವಸ್ತ್ರಗಳು ಹಿರಿಯರ ಮಾತು ಯಾವುದಕ್ಕೂ ಈಗ ನಯಾಪೈಸೆ ಕಿಮ್ಮತ್ತಿಲ್ಲ.  ಇನ್ನೂ ಶಾಲೆ ಮೆಟ್ಟಿಲು ಹತ್ತದ ಮಗುವಿನ ಕೈಯಲ್ಲಿ ಮೊಬೈಲು ರಿಮೋಟ್ ಕಂಟ್ರೋಲ್.  ವಯಸ್ಸಿಗೆ ಮೀರಿದ ದೊಡ್ಡ ದೊಡ್ಡ ಮಾತುಗಳು. ಮಕ್ಕಳ ಬಾಯಲ್ಲಿ.. ಶಾಲೆ ಅಂದರೆ ಅದೊಂದು ದೇವ ಮಂದಿರ. “ಶಿರ ಬಾಗಿ ಒಳಗೆ ಬಾ” ಅನ್ನುವ ಫಲಕ ಶಾಲೆಯ ಬಾಗಿಲಲ್ಲಿ ಅಂದು. ಆದರೆ ಈಗ “ಡ್ರೈ ಫುಡ್, ಬೇಕರಿ ಫುಡ್ ಲಂಚಿಗೆ ಇಟ್ಟುಕೊಂಡು ಬಾ” ಈಗಿನ ಶಾಲೆಯ ಕಾನೂನು.  ಬೆಳೆಯುವ ಮಕ್ಕಳಿಗೆ ಮನೆಯ ಶಿಕ್ಷಣ ಎಲ್ಲಾದರೂ ಹೇಳಿಕೊಟ್ಟರೂ ಶಾಲೆಯ ಪಾಠವೇ ವೇದ ವಾಕ್ಯ.  ಸುತ್ತ ಹುಡುಕಾಡುವ ಕಾಮುಕರ ಕಣ್ಣು ಮಕ್ಕಳು ಶಾಲೆಯಿಂದ ಮನೆಗೆ ಬರುವವರೆಗೂ ಹೆತ್ತವರ ಆತಂಕ. ಇಬ್ಬರೂ ದುಡಿಯದೇ ಇದ್ದರೆ ಸಂಸಾರ ತೂಗಿಸುವುದು ಕಷ್ಟ.  ದಿನವಿಡಿ ದುಡಿವ ಮನಕೆ ಮಕ್ಕಳ ಯೋಚನೆ ತಪ್ಪಿದ್ದಲ್ಲ.

ಇನ್ನು ಕಾಲೇಜು ಹತ್ತಿದ ಮಕ್ಕಳ ಬಗ್ಗೆ ಹೆತ್ತವರ ಆತಂಕ ನೂರಾರು.  ಎಲ್ಲಿ ನೋಡಿದರಲ್ಲಿ ಬಾರು ರೆಸ್ಟೋರೆಂಟ್. ಮನೆಯಿಂದ ಹೊರಗೆ ಹೋದ ಮಕ್ಕಳನ್ನು ಕಂಟ್ರೋಲಲ್ಲಿ ಇಟ್ಟುಕೊಳ್ಳುವುದು ಕನಸಿನ ಮಾತು. ಈಗ ಫ್ರೆಂಡ್ಸ್ ಸರ್ಕಲ್ ಜಾಸ್ತಿ.  ಸುತ್ತಾಡೋದು ಪಾಟಿ೯ಗಳು ಸಿನೇಮಾ,  ಊರು ಸುತ್ತುವುದು ಎಲ್ಲ ಒಟ್ಟಿಗೆ ಸೇರಿ ಮನೆಯ ಮಕ್ಕಳ ಹತ್ತಿರ ಮಾತಾಡುವುದಕ್ಕೂ ಕೈಗೆ ಸಿಗದ ಪರಿಸ್ಥಿತಿ.  ಇಷ್ಟೆಲ್ಲಾ ಆತಂಕದ ಮದ್ಯ ಹೆತ್ತ ಮಕ್ಕಳು ಒಳ್ಳೆಯ ಶಿಕ್ಷಣವಂತರಾಗಿ ಹೊರ ಬಂದರೆ ಅದು ಹೆತ್ತವರ ಪೂವ೯ ಜನ್ಮದ ಪುಣ್ಯವೇ ಸರಿ.  ಭವಿಷ್ಯದ ಮುಂದಿನ ಹಾದಿ ಒಮ್ಮೊಮ್ಮೆ ಯಕ್ಪ ಪ್ರಶ್ನೆಯಾಗಿ ಕಾಡುವುದಿದೆ.  ಭವಿಷ್ಯ ಹೀಗಿರುವಾಗ ಮಕ್ಕಳು ಬೇಕಾ? ಈ ಪ್ರಶ್ನೆ ಹಲವರ ಬಾಯಲ್ಲಿ ಕೇಳಿದ್ದಿದೆ.

ದೇವರೆ ಈ ಜಗತ್ತನ್ನು ಕಾಪಾಡು.  ಅದು ನಿನ್ನಿಂದ ಮಾತ್ರ ಸಾಧ್ಯ ಎಂದು ಮೊರೆ ಇಡುವ ಜನರ ಕೂಗು ಆ ದೇವನಿಗೆ ಕೇಳಿದರೆ ಸಾಕು!!

ಧೂಮ ಪಾನ ಆರೋಗ್ಯಕ್ಕೆ ಹಾಳು

ಕುಡಿತದಿಂದ ಆರೋಗ್ಯ ಸಂಸಾರ ಎರಡೂ ಹಾಳು

ಜೂಜು ಆಡಿ ಮನೆ ಮಠ ಮಾರಿ ಬೀದಿ ಪಾಲು

ಕಳ್ಳ ದಂಧೆಕೋರರಿಂದ ಹೆಣ್ಣು ಮಕ್ಕಳ ಜೀವನ ಹಾಳು

ಪ್ರಪಂಚದ ತುಂಬಾ ಹಾಳುಗಳ ಸರಮಾಲೆ ವಿಜೃಂಭಿಸುತ್ತಿರುವಾಗ

ಹಾಳುಗಳಿಗೆ ನಿಷೇಧ ಹೇರಿ ಜಗತ್ತು ಉದ್ಧಾರ ಮಾಡುವವರು ಯಾರು?

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಂಡ ಕಂಡಲ್ಲಿ ಜಾಹೀರಾತು ಟೀವಿ ನೋಡಿ ಬೀದಿ ನೋಡಿ

ದಮ್ಮು ಎಳೀರಿ, ರಮ್ಮು ಕುಡೀರಿ, ತಡ ರಾತ್ರಿಯವರೆಗೂ ಬಾರ್ ತೆಗೀರಿ

ಪರವಾಗಿಲ್ಲ ಕೊಟ್ಟವರೆ ಪರ್ಮೀಷನ್ನು

ಜವಾಬ್ದಾರಿ ಮರೆತು ದುಡಿದ ದುಡ್ಡು ದುಂದುವೆಚ್ಚ

ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು

ಹೊಡೀರಿ ಮಜಾ ಮೋಜು ಮಸ್ತಿಗೆಲ್ಲ ಕಳ್ಳ ಪ್ರಚೋದನೆ

ಇಂದಿನ ಯುವ ಪೀಳಿಗೆ ಹಾಳಾಗಲು ಇನ್ನೇನು ಬೇಕು?

ಆಡಳಿತಾರೂಢ ಮಂದಿಗೆ ಜೇಬು ಭರ್ತಿಯಾದರಷ್ಟೇ ಸಾಕು

ಕಂಡವರ ಗೊಡವೆ ಯಾಕೆ ಬೇಕು?

ಕಾಳ ಸಂತೆ ಸೇರಿದರೂ ಪೊಗದಸ್ತಾಗಿ ದವಸ ಧಾನ್ಯ

ಜಾಣ ಕಣ್ಣಿಗೆ ಏನೂ ಕಾಣದು ಕುರುಡು ಪಾಪ!

ಇದ್ದವರಿಗೆ ಇನ್ನಷ್ಟು ಕೂಡಿಡುವ ಹಂಬಲ ವಿದೇಶಿ ಬ್ಯಾಂಕೂ ಬೇಕು

ಹಾದಿಗೊಂದು ಬೀದಿಗೊಂದು ಇರುವ ಬ್ಯಾಂಕು ಏನೇನೂ ಸಾಲದು

ದಿನ ದಿನ ಹೊಸ ಹೊಸ ಯೋಜನೆ ರೂಪು ರೇಶೆ ತಳೆದು

ಆಗುತಿಹುದು ಬೆಳೆದು ನಿಂತ ಮರಗಳ ಮಾರಣ ಹೋಮ

ರಸ್ತೆ ಗುಂಡಿ ಕಾಣಲಿಲ್ಲ ಸವಾರರ ಪರದಾಟ ತಪ್ಪಲಿಲ್ಲ

ರೈತರ ಬವಣೆ ಕೇಳುವವರಿಲ್ಲ ಸಾವೊಂದೆ ಪರಿಹಾರ ಆಯಿತಲ್ಲ.

ಕಕ್ಕುಲತೆಯ ಮನವು ನೊಂದು ಬರೆಯುವರು ನೂರೆಂಟು ಬರಹ

ಕಣ್ಣ ಮುಂದಿನ ಸತ್ಯ ತಾಳಲಾರದ ಜನ ಹಾಕುವರು ಟೆಂಟು ಅಲ್ಲಿ ಇಲ್ಲಿ

ಯಾವ ಸರಪಳಿ ಹೆಣೆದರೇನು ಕೂಗಿ ಗಂಟಲು ಕಿರಿದಾದರೇನು

ಜನಾಭಿಪ್ರಾಯ ಕೇಳೋರಿಲ್ಲ ವೋಟು ಕೇಳಿದಾಗ ಹಾಕೀರೆಲ್ಲ

ಕಾಯ್ದೆ ಕಾನೂನು ಲೆಕ್ಕಕ್ಕಿಲ್ಲ ಸಂಪತ್ತಿನ ಜನಕ್ಕೆ ಸೌಲತ್ತು ಎಲ್ಲ

ಬಡವ ನೀ ಮಡದಾಂಗೆ ಇರು ಸಿರಿವಂತರ ದರ್ಬಾರು ನೋಡ್ತಾ ಇರು

ಇದುವೆ ಜೀವನ ಇರು ನೀ ಬೇಕಾದರೆ ಇಲ್ಲಿ ಇಲ್ಲವಾದರೆ ಮುಂದಿನ ಹಾದಿ ಕಾಣು

ಉದ್ಧಾರದ ಕನಸು ಕಾಣಬೇಡ ; ಕಂಡರೆ ಆಗುವುದು ತಿರುಕನ ಕನಸು.

-ಸಂಗೀತಾ ಕಲ್ಮನೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post