X
    Categories: ಕಥೆ

ಸ್ವರ್ಣಗೌರಿ

“ಯಾಕೇ ಸ್ವರ್ಣೀ…ಏನಾಯ್ತೇ….ಸ್ವರ್ಣಿ,ಸ್ವರ್ಣೀ…ಮೊದ್ಲು ಅಳು ನಿಲ್ಸಿ ಏನಾಯ್ತು ಅಂತ ಹೇಳೇ…ಕರು ಬಿಡ್ಬೇಕು ಕಣೇ…ಹೊತ್ತಾಗ್ತಿದೆ..ಬೆಳಕು ಹರಿಯೋ ಹೋತ್ಗೇನೆ ಯಾಕೆ ಅಳ್ತಾ ಕೂತಿದ್ಯಾ” ಏನೋ ಆದವಳಂತೆ ಅಳುತ್ತಾ ,ಅದು ಬಿಕ್ಕಳಿಸಿ ಅಳುತ್ತಾ ಬಂದ ತಂಗಿ ಸ್ವರ್ಣಗೌರಿಯನ್ನು ಸಮಾಧಾನದಿಂದಲೇ ಮಾಧವ ಕೇಳುತ್ತಿದ್ದ.

“ಕಲ್ಕೆರೆಯಿಂದ ಗಂಡಿನ್ ಕಡೆಯವ್ರು ಬರ್ತಿದ್ದಾರಂತೆ….ಅದು ನಾಳೆನೆ..ಅಪ್ಪಯ್ಯ ನನ್ನ ಅಟ್ಟಕ್ಕೆ ಕಾಯ್ತಿದಾನೆ ಅಣ್ಣಯ್ಯ…”

“ಅಲ್ವೆ ಸ್ವರ್ಣಿ..ನೀನೆನ್ ಇನ್ನು ಸಣ್ ಹುಡ್ಗಿನೆನೆ..ಏನ್ ಮುದ್ಕಿ ಆದ್ಮೆಲೆ ಮದ್ವೆ ಆಗ್ತಿಯಾ “

” ನಿನ್ ಬಿಟ್ ಅಷ್ಟ್ ದೂರ ಹೋಗಲ್ಲ ಅಣ್ಣಯ್ಯ.  ಬೇಕಾದ್ರೆ ಇದೇ ಊರಲ್ಲಿ ಒಂದು ಗಂಡು ನೋಡು ,, ನಿನ್ ಜೊತ್ಗೆನೆ ಇದ್ ಬಿಟ್ತಿನಿ..”

“ಅಯ್ಯೊ ಪೆದ್ದಿ…ಬರ್ತಿರೊ ಗಂಡು ಮೇಷ್ಟ್ರು ಕಣೆ…ನನ್ನನ್ಗೆ ಬೇಸಾಯ ಮಾಡ್ಕಂಡು ಇಲ್ಲ.ಕಲ್ಕೆರೆ ಇನ್ನೇಷ್ಟ್ ದೂರ ಇದ್ಯೆ..ತಿಪಟೂರ್ ದಾಟಿ ಹದ್ನಾಕು ಮೈಲಿ ನಡೆದ್ರೆ..ಕಲ್ಕೆರೆ..ಗಾಡಿಲಿ ಬಂದ್ರೆ ಅರ್ಧ ದಿನ,ಈಗೇನೆ.. ತಿಪಟೂರ್ ತನ್ಕ ಬಸ್ ಹೋಗುತ್ತೆ”

“ಅಯ್ಯೊ ಅದೇ ತೊಂದ್ರೆ ಅಣ್ಣಯ್ಯ,,,ಮೇಷ್ಟ್ರುಗಳು ತುಂಬ ಸಿಟ್ಟು…ಅದ್ರು ಬದ್ಲು ನಮ್ ಮನೆ ದನ ಹಿಡ್ಕಂಡು ಹೋಗ್ತಾನಲ್ಲ..ನಂಜ..ಅವನ್ನೆ ಮದ್ವೆ ಆಗ್’ಬೋದು…”

“ಮೆತ್ಗೆ ಮಾತಾಡೆ..ಅಪ್ಪಯ್ಯ ಕೇಳಿಸ್ಕಂಡಾರು…ಹುಡುಗನ್ನ ಯಾರು ಅನ್ಕಂಡಿದ್ಯಾ..ನಮ್ಮೂರ ಮಠದ್ ಸ್ವಾಮಿಗಳ ದೊಡ್ಡಪ್ಪನ ಮಗ..ನಾನು ನೋಡಿದಿನಿ..ತುಂಬ ಒಳ್ಳೆ ಹುಡ್ಗ…ಕರುನೇ ಹಿಡ್ಕಳಕ್ಕೆ ಹೆದ್ರುತಾನೆ…ಇನ್ನು ನಿನ್ನ ಹೆದ್ರುಸ್ತಾನ”

“ಅಣ್ಣಯ್ಯ ಮದ್ವೆ ಆಗ್ಲೆ ಬೇಕೆನೋ….ನಾನ್ ಇಲ್ಲೆ ಇದ್ರೆ ನಿನ್ ಊಟ ಹಾಕಲ್ವೆನೋ…..”

“ಅಯ್ಯೊ ಪುಟ್ಟಿ…ಹುಟ್ಟಿದ್ ಮೇಲೆ ಹೇಗೆ ಸಾಯ್ಲೆ ಬೇಕೋ,ಹೆಣ್ಣಾಗಿ ಹುಟ್ಟಿ ,ಮದ್ವೆ ಆಗಲ್ಲಾ ಅಂತಾರೇನು..ನಿನ್ನಿಂದ ಕಲ್ಕೆರೆ ವಂಶ ಬೆಳಿಬೇಕು..”

“ಸ್ವರ್ಣ,,.  ಆ ಮಾಧವ ಎಲ್ಲಿ ಹಾಳಾಗಿ ಹೋದ ನೋಡೆ…ಆ ಕರು ತರ್ಕತಾ ಇದೆ ..”ಎಂದು ಒಳಗಿನಿಂದ ಅಪ್ಪಯ್ಯನ ಧ್ವನಿಯನ್ನು ಕೇಳಿದ ಕೂಡಲೆ ಅಣ್ಣ ತಂಗಿ ಇಬ್ಬರೂ ಕಾಲು ಕಿತ್ತರು

ಇದು ಅತಿಶಯೋಕ್ತಿಯಲ್ಲ, ಸ್ವರ್ಣಗೌರಿಗೆ ಮಾಧವನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಮಾಧವನಿಗೇನು ಕಡಿಮೆಯಿಲ್ಲ. ತಂಗಿಯೆಂದರೆ ಪಂಚಪ್ರಾಣ. ಹಾಗಂತ ವಯಸ್ಸಿಗೆ ಬಂದ ಹೆಣ್ಣು ಮಗಳನ್ನು ಮನೆಯಲ್ಲೆ ಇಟ್ಟು ಕೊಳ್ಳಲು ಸಾಧ್ಯವೇ?

” ಛೆ, ಹೆಣ್ಣು ಮಕ್ಕಳು ಹುಟ್ಟಲೇ ಬಾರದಪ್ಪ…ಅದ್ರಲ್ಲು ಸ್ವರ್ಣಿಯಂತ ತಂಗಿ ಮಾತ್ರ ಸಿಗ್ ಬಾರದಪ್ಪ…ಸುಮ್ಮನೆ ನೋವ್ ಕೊಡ್ತಾರೆ..ಹೆಣ್ಣು ಮಕ್ಕಳನ್ನು ಯಾಕೆ ಮದ್ವೆ ಮಾಡಿ ಕಳಿಸ್’ಬೇಕು.ಇಗ್ ನಾವೇನ್ ಹೋಗ್ತೀವಾ…ಅವಳ್ಗೆ ಅಣ್ಣನಾಗಿ ಒಂದ್ ತುತ್ತು ಅನ್ನ ಹಾಕಕ್ಕೆ ಆಗಲ್ವ……ಆದ್ರೆ ಇದು ಕಷ್ಟನೇ…ಎಲ್ರು ನನ್ನಂಗೆ ಯೋಚ್ನೆ ಮಾಡಿದ್ರೆ ಯಾರೂ ಹುಟ್ತಿರ್ಲಿಲ್ಲ. ಹೆಣ್ಣಾಗಿ ಹುಟ್ಟಿದ ಮೇಲೆ ಮದ್ವೆ,ಪ್ರಸವ,ಬಸುರಿ.,ಬಾಣಂತನ ಎಲ್ಲವೂ ನಡೆಯಲೇ ಬೇಕು.ಇದೇ ಪ್ರಕೃತಿಯ ನಿಯಮವಲ್ಲವೆ….ಆದ್ರೂ ಸ್ವರ್ಣಿಗೆ ಎಷ್ಟು ತೊಂದ್ರೆ ಅಲ್ವಾ ” ಎಂದು ಯೋಚಿಸುತ್ತಾಮಾಧವ ಹಾಲು ಹಿಂಡುತ್ತಿದ್ದಾ.

ಗಂಡು ಹೆಣ್ಣಿನ ಒಪ್ಪಿಗೆಯಾಯಿತು ,ಹೆಣ್ಣಿನ ಒಪ್ಪಿಗೆಯನ್ನು ಕೇಳಿದ್ದವರು ಯಾರು?

.ಕುಟುಂಬಗಳ ನಡುವೆ ಮಾತುಕತೆಯಾಯಿತು, ಲಗ್ನಪತ್ರಿಕೆಯ ಶಾಸ್ತ್ರವು ಮುಗಿಯಿತು, ಶ್ರಾವಣದ ಶುದ್ದ ತದಿಗೆಯ ದಿನ ಮಂಗಳವಾದ್ಯ ಮೊಳಗಿತು

ಮಾರನೆಯ ದಿನವೇ ಮದುವೆಯ ದಿಬ್ಬಣ ಕಲ್ಲೂರಿನಿಂದ ಕಲ್ಕೆರೆಯ ಕಡೆಗೆ ಹೊರಟಿತು. ಅಣ್ಣನನ್ನು ನೋಡಿ ಬಿಕ್ಕಳಿಸಿ ಅಳುತ್ತಿದ್ದ ಸ್ವರ್ಣಗೌರಿಯನ್ನು ಮೇಷ್ಟ್ರು ತಮ್ಮ ಭುಜದ ಮೇಲೆ ಮಲಗಿಸಿಕೊಂಡರು.

ದಿನಗಳು ಉರುಳಿದವು ,ಶ್ರಾವಣ ಕಳೆದು ಭಾದ್ರಪದ ಬಂದೆ ಬಿಟ್ಟಿತು.ಗೌರಿಹಬ್ಬ ಬಂದೆ ಬಿಟ್ಟಿತು.ಸ್ವರ್ಣಿಯನ್ನು ಕಲ್ಕೆರೆಗೆ ಹೋಗಿ ಗೌರಿಹಬ್ಬಕ್ಕೆ ಕರೆತರಲು ಸಿದ್ಧತೆ ಮಾಡಿಕೊಂಡಿದ್ದ ಮಾಧವ.ಅಷ್ಟರಲ್ಲೆ,” ನಿಮ್ಮ ಭಾವ ಮತ್ತೆ ಸ್ವರ್ಣಿ ನಾಳಿನ್ ಸಾಯಂಕಾಲದ್ ಬಸ್’ಗೆ ಬರ್ತಾರಂತೆ,ಅಣ್ಣಯ್ಯ ಏನ್ ಬರದ್ ಬ್ಯಾಡ ಅಂತ ಪತ್ರ ಹಾಕಿದ್ಲು” ಅಂತ ಅಪ್ಪಯ್ಯ ಮಾಧವನಿಗೆ ಹೇಳಿದರು.

ಆ ವರುಷ ದೇವರ ಕೃಪೆಯೇನೋ, ಕಲ್ಲೂರಿಗೆ ಸಾಕಷ್ಟು ಮಳೆಯಾಗಿ, ಸುತ್ತಮುತ್ತಲಿನ ಕೆರೆಗಳು ಕೋಡಿ ಬಿದ್ದು ಹಳ್ಳಗಳೆಲ್ಲವೂ ತುಂಬಿ ಹರಿಯುತ್ತಿದ್ದವು. ಆದರೂ ಇನ್ನು ಮಳೆ ನಿಂತಿರಲಿಲ್ಲ, ಪುಬ್ಬ ಮಳೆ ಸಾಧಾರಣವಾಗಿಯೇ ಹುಯ್ಯುತ್ತಿತ್ತು. ಮಾಧವ ಕೊಡೆಯನ್ನು ಹಿಡಿದು ಬಸ್ಟ್ಯಾಂಡ್’ಗೆ ಬಂದು ಸಂಜೆ ಹೊತ್ತಿಗೆ ನಿಂತ.

ಮಾಧವನಂತೆ ಬಸ್ಟಾಂಡಿನಲ್ಲಿ ತುಂಬ ಮಂದಿ ಹಬ್ಬಕ್ಕೆ ಬರುವವರನ್ನು ಕಾದು ಕುಳಿತ್ತಿದ್ದರು. ತಿಪಟೂರ್’ನಿಂದ ಬರಕ್ಕೆ ಇಷ್ಟ್ ಹೊತ್ ಬೇಕಾ, ಮಳೆ ಅಲ್ವಾ.  ಅನ್ಕಂಡು ಕಾಯುತ್ತಾ ಕುಳಿತ್ತಿದ್ದರು. ಯಾರೋ ತಿಪಟೂರ್ ಕಡೆಯಿಂದ ಓಡಿ ಬರುತ್ತಿದ್ದರು ,”ನಮ್ಮೂರ್ ಬಸ್ ಹಳ್ಳದಲ್ಲಿ ಹೂತ್ಕಂಡು ಬಿಟ್ಟಿದೆ…ಸೊಂಟುದ್ ತನ್ಕ ನೀರ್ ಹೋಗಿದೆ.

ಸುದ್ದಿ ಊರೆಲ್ಲ ಹರಡಲು ಸಾಕಷ್ಟು ಸಮಯ ಬೇಕಾಗಲಿಲ್ಲ,ಇಡಿ ಊರಿಗೇ ಊರೆ ಹಳ್ಳದ ಹತ್ತಿರ ಬಂದಿತು, ಮಾಧವ, ಅಪ್ಪಯ್ಯ, ನಂಜ ಎಲ್ರೂ ಹಳ್ಳದೆಡೆಗೆ ಓಡಿ ಹೋದರು.

ಅಲ್ಲಿ ಆದ್ದದ್ದು ಇಷ್ಟೆ, ಕಲ್ಲೂರು ತಿಪಟೂರು ರಸ್ತೆಯೇನು ಡಾಂಬರಿನದ್ದಲ್ಲ ಹಾಗೂ ಈ ಎರಡು ಊರುಗಳ ಇರುವುದು ಒಂದೇ ಬಸ್ಸು,ಹಬ್ಬದ ಸಮಯವಾಗಿದ್ದರಿಂದ ಅದರ ನಖ ಶಿಖಗಳಲ್ಲೂ ಜನ ತುಂಬಿದ್ದರು.ಕಲ್ಲೂರನ್ನು ತಲುಪಲು ಹಳ್ಳದೊಳಗೆ ಹೋಗಲೇಬೇಕು.ಬೇಸಿಗೆಯಲ್ಲಿ ಖಾಲಿ ಇರುವ ಹಳ್ಳ ,ಆ ದಿನ ತುಂಬಿ ಹರಿಯುತ್ತಿತ್ತು. ಬಸ್ ಚಾಲಕ ಎಂದಿನಂತೆ ಹಳ್ಳಕ್ಕೆ ಇಳಿಸಿದನು,ಚಕ್ರಗಳು ಮಣ್ಣಲ್ಲಿ ಹೂತಿತು,ನೀರು ಬಸ್ ಒಳಗೆ ನುಗ್ಗಿತು, ಇಂಜಿನ್ ಸ್ತಬ್ಧಗೊಂಡಿತು. ಬಸ್ಸಿನೊಳಗಿದ್ದವರಿಗೆಲ್ಲ ಎದೆಯ ಮಟ್ಟಕ್ಕೆ ನೀರು ಬಂದು ನಿಂತಿತು.

ಯಾರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ,ಮಾಧವನಂತು ಕಂಗಲಾಗಿ ಹೋದ.ತೆಪ್ಪವನ್ನು ಹೂಡಲು ಸಾಧ್ಯವೇ ಇರಲಿಲ್ಲ,ನೀರಿನ ರಭಸ ಬಹಳ ತೀವ್ರವಾಗಿತ್ತು.ಕೆಲವರು ಕೆರೆಯನ್ನೆ ಒಡೆಯೋಣ ಅಂದರು, ಕೆರೆ ಒಡೆದರೆ ಊರಿನೊಳಗೆಯೇ ನುಗ್ಗುತ್ತದೆ ನೀರು, ಕೆಲವರು ಮರಳಿನ ಚೀಲ ಹಾಕುವುದರಲ್ಲಿ ಇದ್ದರು,ಜೋಕೆ ,ಹಳ್ಳ ತುಂಬಿ ಹರಿಯುತಿದೆ.ಮಾಧವ ಊರಿನ ಒಂದಿಪ್ಪತು ಜೋಡಿ ಗಟ್ಟಿ ಮುಟ್ಟಾದ ಎತ್ತುಗಳಿಂದ ಎಳೆಸಿದ, ಒಂದಿಷ್ಟು ಅಲುಗಿತಾದರೂ ಪ್ರಯೋಜನವಾಗಲಿಲ್ಲ.ಎಲ್ಲರ ಮನಸ್ಸು ತಳಮಳಗೊಳ್ಳುತ್ತಿತು.

ಎಲ್ಲರೂ ತಲೆಯ ಮೇಲೆ ಕೈ ಹೊತ್ತಿ ಕುಳಿತ್ತಿದ್ದರು. ಯಾರಿಗೂ ದಿಕ್ಕೆ ತೋಚದೆ ಹಾಗೆ ಆಗಿಹೋಗಿತ್ತು. ಅಷ್ಟರಲ್ಲೆ, ಸುದ್ದಿ ಕಲ್ಲೂರು ಮಠದ ಸ್ವಾಮಿಗಳಿಗೂ ಮುಟ್ಟಿತ್ತು ಅನಿಸುತ್ತದೆ,ಕಲ್ಲೂರಮ್ಮನ ಉತ್ಸವಮೂರ್ತಿಯ ಜೊತೆಗೆ ಯಾರೋ ಭಕ್ತರು ಮಠಕ್ಕೆ ದಾನ ಕೊಟ್ಟಿದ ಆನೆಯ ಮೇಲೇರಿ ಸ್ವಾಮಿಗಳು ಬರುತ್ತಿದ್ದರು.ಸ್ವಾಮಿಗಳು ಕಲ್ಲೂರಮ್ಮನಿಗೆ ಆನೆಯ ಮೇಲಿಂದಲೇ ನಮಸ್ಕರಿಸಿ ಆನೆಯನ್ನು ಹಳ್ಳದೊಳಗೆ ಇಳಿಸಿ ಬಸ್ಸಿನ ಹಿಂಬದಿಯಿಂದ ತಳ್ಳುವಂತೆ ಮಾಡಿದರು.ಬಸ್ಸಿನ ಮುಂಭಾಗಕ್ಕೆ ಕಟ್ಟಿದ ಎತ್ತುಗಳನ್ನು ಮಾಧವ ಮುನ್ನೆಡಿಸಿದ, ಅಂತು ಬಸ್ ಹಳ್ಳವನ್ನೇರಿ ಬಂತು. ಎಲ್ಲರಿಗೂ ಕಣ್ಣೀರಿನ ಜೊತೆಗೆ ಆನಂದವೋ ಆನಂದ.

ಎಲ್ಲರೂ ಮಠದ ಸ್ವಾಮಿಗಳಿಗೆ ನಮಸ್ಕರಿಸಲು ಹೊರಟರು.ಆಗ ಸ್ವಾಮಿಗಳು “ನೀವು ನಮಸ್ಕರಿಸಬೇಕಾಗಿರುವುದು ನನ್ನಗಲ್ಲ ,ಬಸ್’ಅನ್ನು ಎಳೆದ ಎತ್ತುಗಳಿಗೆ ಮತ್ತು ಬಸ್’ಅನ್ನು ತಳ್ಳಿದ ಆ ಕುಂಜರನಿಗೆ..ಇನ್ನು ಹೇಳಬೇಕೆಂದರೆ,ಆನೆ,ಎತ್ತುಗಳನ್ನು ಸೃಷ್ಠಿಸಿದ ಪ್ರಕೃತಿಮಾತೆಗೆ,ಅಂದ್ರೆ ಪ್ರಕೃತಿ ಸ್ವರೂಪಳಾಗಿರುವಂತ ಕಲ್ಲೂರಮ್ಮನಿಗೆ, ಬನ್ನಿ ಎಲ್ಲರೂ ಪ್ರಕೃತಿಯ ಆರಾಧನೆಯನ್ನು ಸ್ವರ್ಣಗೌರಿಯನ್ನು ಪೂಜಿಸುವುದರಿಂದ ಮಾಡೋಣ ” ಎಂದರು.

ಎಲ್ಲರೂ ಕಲ್ಲೂರಮ್ಮನಿಗೆ ನಮಸ್ಕರಿಸಿದರು. ಸ್ವರ್ಣಿ ಮಾಧವನನ್ನು ತಬ್ಬಿಕೊಂಡು ಜೋರಾಗಿ ಅತ್ತಳು.ಮಾಧವನ ಕಣ್ಣು ಕೆರೆಕೋಡಿಯಂತೆ ತುಂಬಿ ಹರಿಯುತ್ತಿತ್ತು. ಪಕ್ಕದಲ್ಲೆ ಇದ್ದ ಮೇಷ್ಟ್ರು ಏನೂ ಅರಿಯದವರಂತೆ ಸ್ವರ್ಣಿಯನ್ನು ನೋಡುತ್ತಿದ್ದ.

-ಅಭಿಲಾಶ್ ಟಿ.

Facebook ಕಾಮೆಂಟ್ಸ್

Abhilash T B: Software engineer by profession. He is from Tipatoor . Writing story is his hobby.
Related Post