X

ಯುದ್ಧ ಬೇಡ.. ಆದರೆ ನ್ಯಾಯ ಬೇಕಲ್ಲವೇ..??

ಕಾಶ್ಮೀರ.. ಭಾರತದ ಮುಕುಟ ರತ್ನವಿದು… ಮುಡಿಗೆ ಮಲ್ಲಿಗೆಯ ಸಿಂಗಾರದಂತೆ ಭಾರತ ಮಾತೆಯ ಮುಡಿಗೆ ಕಾಶ್ಮೀರದ ಹಿಮ ಮಲ್ಲಿಗೆ ಮುಡಿಸಿದಂತೆ. ಅಲ್ಲಿ ಸೌಂದರ್ಯವಿದೆ, ಸಂಕಷ್ಟವೂ ಇದೆ.. ಸಿಯಾಚಿನ್’ನಂತಹ ಎತ್ತರದ ಗಡಿಯಿದೆ.. ಅತ್ತ ದರಿ ಇತ್ತ ಪುಲಿ ಎಂಬಂತೆ ಯಾವತ್ತೂ ಕಾವಲು ಇರಲೇಬೇಕು.. ಇಲ್ಲದಿದ್ದರೆ ಚೀನಾ ಮತ್ತು ಪಾಕಿಸ್ತಾನ ಎರಡು ದೇಶಗಳು ಅದನ್ನು ಬಾಚಿ ನುಂಗಲು ಕಾಯುತ್ತಿವೆ.. ಉರಿ, ಸಿಯಾಚಿನ್, ಕಾರಾಕೋರಂ ಹೀಗೆ ಹತ್ತು ಹಲವು ಪ್ರದೇಶಗಳಲ್ಲಿ ಕ್ಷಣ ಕ್ಷಣಕ್ಕೂ ಅಪಾಯ ಹೊತ್ತು ಕಾಯುವ ಪರಿಸ್ಥಿತಿ.. ಎರಡು ದೇಶಗಳು ಒಂದೊಂದು ದಿಕ್ಕಿನಲ್ಲಿ ಹೊಂಚು ಹಾಕುತ್ತಿದ್ದರೆ, ಮತ್ತೊಂದು ಕಡೆ 0 ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶಮತ್ತು  ಹಿಮಪಾತದ ವಾತಾವರಣ. ಒಟ್ಟಿನಲ್ಲಿ ಹೇಳಬೇಕು ಎಂದರೆ ಮಾನವನ ವಾಸಕ್ಕೆ ಸ್ವಲ್ಪವೂ ಒಗ್ಗದ ವಾತಾವರಣ.. ಇಂಥ ಸ್ಥಿತಿಯಲ್ಲಿ ಇದ್ದರೂ ಅವುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ.. ಸೈನಿಕರು ಜೀವವನ್ನೇ ಪಣಕ್ಕಿಟ್ಟು ಕಾಯುತ್ತಾರೆ.. ಯಾಕೆಂದರೆ ಅದನ್ನು ಬಿಟ್ಟುಕೊಟ್ಟರೆ ಹೊಂಚುಹಾಕುತ್ತಿರುವವರು ಲಡಾಕ್ ತನಕ ಮುತ್ತಿ ಬಿಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಭೂಮಿ. ನಾವ್ಯಾಕ್ರೀ ಬಿಡ್ಬೇಕು..?? ನಮ್ಮ ಜಮೀನಿನಲ್ಲಿ ಒಂದು ತುಂಡು ದಾಯವಾದಿಗಳ ಪಾಲಾದರೆ ಸಹಿಸೋಲ್ಲ.. ಇನ್ನು ಒಂದು ರಾಜ್ಯವೇ ಬೇರೆ ದೇಶಗಳ ಪಾಲಾದರೆ ಸಹಿಸಲು ಸಾಧ್ಯವೇ..??

ನೆನ್ನೆ ಮುಂಜಾವಿನಲ್ಲಿ ಭಾರತ ಸೈನಿಕರು ಮಾಡಿದ ಸರ್ಜಿಕಲ್ ಸ್ಟ್ರೈಕ್’ಗೆ ಅನೇಕಾನೇಕ ಅಭಿಪ್ರಾಯಗಳು ಹೊರ ಬಿದ್ದವು.. ಉರಿಯಲ್ಲಿ ಆದ ಭಯೋತ್ಪಾದಕರ ಧಾಳಿಯಲ್ಲಿ ಮೋದಿಯನ್ನು ಗುರಿ ಮಾಡಿದವರು, 56 ಇಂಚಿನ ಎದೆ ಏನ್ ಮಾಡ್ತಾ ಇದೆ ಅಂತೆಲ್ಲ ಪ್ರಶ್ನೆ ಮಾಡಿದವರು ಇಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತಾಡ್ತಾ ಇದಾರೆ.. ನಿಜವಾಗಿಯೂ ಸೈನ್ಯಕ್ಕೆ ಅಭಿನಂದನೆ ಸಲ್ಲಿಸಲೇಬೇಕು.. ಆಗುತ್ತಿರುವ ಭಯೋತ್ಪಾದಕರ ಧಾಳಿಗೆ ತಕ್ಕ ಉತ್ತರ ನೀಡಿದೆ.. ಆದರೆ ಕೆಲವರು “ಸೈನ್ಯ ನಡೆಸುವ ಸರ್ಜಿಕಲ್ ಸ್ಟ್ರೈಕ್ ಎಂದು ಯಾವ ದಾಳಿಯನ್ನು ಗುರುತಿಸಲಾಗುತ್ತದೆಯೋ ಅದರ ಮಾಹಿತಿ ಬಹಳ ಗೌಪ್ಯವಾಗಿ ನಿರ್ವಹಿಸಲಾಗುತ್ತದೆ. ಆದ್ರೆ ನೆನ್ನೆ ನಡೆದ ಧಾಳಿಯನ್ನು ಮೀಡಿಯಾದವರು ಪಬ್ಲಿಕ್ ಮಾಡಿದ್ರು, ರಾಜಕೀಯ ಲಾಭ ಪಡ್ಕೊಂಡ್ರು” ಎಂದು ಹೇಳುತ್ತಾ ಇದ್ದಾರಲ್ಲ ಇದಕ್ಕೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ.. ಸರಿ ರಾಜಕೀಯ ಲಾಭಕ್ಕೇ ಅಂತ ಇಟ್ಟುಕೊಳ್ಳೋಣ.. ಇದರಿಂದ ಎಲ್ಲಾ ರೀತಿಯಿಂದ ಲಾಭವಾಗಿದೆ ಅಲ್ಲವೇ..? ಪಕ್ಷಕ್ಕೂ ಲಾಭ ಅದಕ್ಕಿಂತ ಹೆಚ್ಚಾಗಿ ಗಡಿಯಲ್ಲಿರುವ ಅನೇಕ ಭಯೋತ್ಪಾದಕರಿಂದ ಮುಕ್ತಿ.. ಇಂಥದ್ದೊಂದು ಲಾಭ ಮಾಡಿಕೊಳ್ಳೊಕೂ ಗೊತ್ತಿರದ ಪಕ್ಷವನ್ನು ಕೂರಿಸಿದರೆ ಲಾಭ ಯಾರಿಗ್ರಿ..? ನಾನೇನು ಮೋದಿಯದಾಗಲಿ, ಬಿಜೆಪಿಯದ್ದಾಗಲಿ ಹಿಂಬಾಲಕನಲ್ಲ.. ಭಕ್ತನಂತೂ ಮೊದಲೇ ಅಲ್ಲ.. ರಾಜಕೀಯ ಅಂದರೆ ಸ್ವಲ್ಪ ದೂರ ನಿಂತೇ ಮಾತನಾಡುತ್ತೇನೆ.. ಹಾಗಾಗಿ ನನಗೆ ಪಕ್ಷ ಯಾವುದು ಎಂಬುದು ಮುಖ್ಯವಲ್ಲ… ದೇಶ ಮತ್ತು ಪಕ್ಷ ಎಂಬುದು ಬಂದಾಗಲೂ ಪಕ್ಷವೇ ಮೇಲು ಅನ್ನೋ ಜನಗಳು ಮಾತ್ರ ಇಂಥ ಕೆಸರೆರಚಾಟಕ್ಕೆ ಮುಂದಾಗುತ್ತಾರೆ.. ನಾಯಕ ಯಾರಾದರೇನು, ನಾವಿಕ ನಮ್ಮ ಸೈನಿಕ… ಅವರು ಸರಿಯಾದ ದಾರಿಯಲ್ಲಿ ನಡೆದರೆ ಮಾತ್ರ ದೇಶ ಸರಿಯಾಗಿ ಮುಂದುವರೆಯುತ್ತೆ.. ಅವರ ಶೌರ್ಯವೇ ಇಂದು 47 ಜನರನ್ನು ಹೊಡೆದು ಹಾಕಿ ಉರಿಯ ಬೆಂಕಿಯನ್ನು ಆರಿಸಿದೆ ಮತ್ತು ಅದನ್ನು ಜಗತ್ತಿನ ಎದುರು ತೆರೆದಿಟ್ಟದ್ದರಿಂದಲೇ ಪಾಕ್’ಗೆ ತಲೆ ತಗ್ಗಿಸುವಂತಾಗಿದೆ..

ಇನ್ನು ಹಲವರು ಯುದ್ಧದ ಮುನ್ಸೂಚನೆ ಎಂಬಂತೆ ಮಾತನಾಡ್ತಾ ಇದಾರೆ.. ಯುದ್ಧ ಬೇಡ ಶಾಂತಿ ಬೇಕು, ಸೈನಿಕರ ತಂದೆ ತಾಯಿಯ ದುಃಖ ನೋಡುವುದು ಕಷ್ಟ ಎಂಬುದು ಹಲವರ ಅಂಬೋಣ.. ನಿಜ.. ಖಂಡಿತವಾಗಿಯೂ ಒಪ್ಪಲೇಬೇಕು.. ಯುದ್ಧ ಯಾರಿಗೆ ಬೇಕು ಹೇಳಿ..?? ಒಂದು ಯುದ್ಧ ಎಂದರೆ ಕಡಿಮೆ ಮಾತೆ..?? ಯುದ್ಧದ ಸ್ಥಿತಿ ಯಾವ ದೇಶಕ್ಕೂ ಬರೋದು ಬೇಡ ಅಂತ ಹೇಳುವವರು ನಮ್ಮ ದೇಶಕ್ಕೆ ಬೇಕು ಅಂತ ಯಾಕೆ ಹೇಳ್ತೇವೆ..?? ಯುದ್ಧ ಲಾಭಕ್ಕಿಂತ ಹೆಚ್ಚಾಗಿ ನಷ್ಟವನ್ನೇ ನೀಡುತ್ತೆ.. ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗಳ ರೇಖೆ ಇಳಿಕೆಯಾಗುತ್ತ ಹೋಗುತ್ತೆ.. ಅಭಿವೃದ್ಧಿ ಕುಂಠಿತಗೊಳ್ಳುತ್ತೆ. ಇದೆಲ್ಲಕ್ಕಿಂತ ಮೇಲಾಗಿ ಸೈನಿಕರು ಸಾಯುತ್ತಾರೆ.. ಆ ಸಾವು ನೋವು, ತಂದೆ ತಾಯಿಗಳ ಆಕ್ರಂದನ, ಹಿಡಿ ಶಾಪಗಳು ಯಾರಿಗೆ ಖುಷಿ ಕೊಡುತ್ತೆ ನೀವೇ ಹೇಳಿ..?? ಆದರೆ ಭಯೋತ್ಪಾದಕರ ಅಟ್ಟಹಾಸ, ಉರಿ ದಾಳಿ, ಪಠಾಣ್ ಕೋಟ್ ಧಾಳಿಗಳನ್ನು ಸಹಿಸಿ ಕೂರೋಕೆ ಆಗುತ್ತಾ..?? ಸೈನಿಕರ ಸಾವಿಗೆ ನ್ಯಾಯ ಬೇಕಲ್ಲವೇ..??

ನವೆಂಬರ್ 26 ಬಂದರೆ 2008 ರ ಮುಂಬೈ ದಾಳಿ.. ಸತ್ತ ಜೀವಗಳು, ಆ ಕಣ್ಣೀರು.. ಎಲ್ಲವೂ ಕಣ್ಣ ಮುಂದೆ ಬರುತ್ತೆ… ಏಳು ವರ್ಷಗಳಾದರೂ ಇನ್ನೂ ಆ ನೋವು ಹೋಗಿಲ್ಲ.. ವಾಹ್ ತಾಜ್ ಎಂದು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ಆ ಹೋಟೆಲ್ ಇಂದು ಆ ಕರಾಳ ದಿನವನ್ನು ನೆನಪಿಸುತ್ತೆ… ದಾಳಿಯ ನಂತರ ಮೊದಲಿನಂತೆ ರಿಪೇರಿ ಮಾಡಲಾಗಿದ್ದರೂ ಸಹ ಎಲ್ಲೋ ಮೂಲೆಯಲ್ಲಿ ಅಂಟಿಕೊಂಡ ಮಸಿ 2008 ರ ಮಾರಣ ಹೋಮಕ್ಕೆ ಸಾಕ್ಷಿ ಹೇಳುತ್ತದೆ.. ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪಾಗುತ್ತಾನೆ.. ನಮ್ಮೆಲ್ಲರಂತೆ ನಗುತ್ತಿದ್ದ ಜೀವ, ತಾಯ್ನಾಡಿಗಾಗಿ ಬಲಿಯಾದ ಜೀವ.. ಇದರ ಜೊತೆ ಬಲಿಯಾದ ಎನ್‌ಕೌಂಟರ‍್ ಸ್ಪೆಷಲಿಸ್ಟ್‌ ವಿಜಯ್‌ ಸಲಾಸ್ಕರ್‌, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ತುಕಾರಾಂ ಒಂಬಳೆ, ಗಜೇಂದರ್ ಸಿಂಗ್ ಎಲ್ಲರೂ ಬಲಿಯಾದವರೆ… 2008 ರ ನಂತರ ಇದೆಲ್ಲವೂ ನೆನಪಾಗದ ನವೆಂಬರ್ 26 ಇಲ್ಲ… ಇನ್ನು ಪಠಾಣ್ ಕೋಟ್ ವಾಯುನೆಲೆಯ ಮೇಲಾದ ಧಾಳಿ ನಿಜಕ್ಕೂ ದುಃಖಕರ.. ಸತ್ತ ಯೋಧರು ದೇಶದ ಆಸ್ತಿ.. ಅವರನ್ನು ಕಳೆದುಕೊಂಡ ನೋವು ಹಸಿಯಾಗಿರುವಾಗಲೇ ಉರಿ ಸೆಕ್ಟರ್ ಮೇಲಾದ ದಾಳಿ.. ಇಂಥ ಹತ್ತು ಹಲವು ಧಾಳಿಗಳು ಇವೆ.. ಮುಂಬೈ, ಹೈದ್ರಾಬಾದ್, ಬೆಂಗಳೂರು, ಅಹಮದಾಬಾದ್ ಅದೆಷ್ಟು ಧಾಳಿಗಳಾದವು, ಬಾಂಬುಗಳು ಸ್ಪೋಟಗೊಂಡವು.. ಸಂಸತ್ತಿನ ಮೇಲೂ ಧಾಳಿಯಾಆಯಿತು.. ಇನ್ನೂ ನ್ಯಾಯ ಸಿಗಬಾರದು ಎಂದರೆ ಹೇಗೆ..?? ಶಾಂತಿ ಮಾತುಕತೆಗೆ ಭಾರತ ಅದೆಷ್ಟು ಸಾರಿ ಆಹ್ವಾನಿಸಿದೆ.. ಕಾಂಗ್ರೆಸ್ ಸರ್ಕಾರ ಶಾಂತಿಯಿಂದಲೇ ಗೆಲ್ಲುವ ಪ್ರಯತ್ನ ಮಾಡಿತ್ತು.. ಅದಕ್ಕೆ ಸಹಕಾರ ಸಿಕ್ಕಿತ್ತೆ..??

ಸಾಮಾಜಿಕ ಜಾಲತಾಣದಲ್ಲಿ ಕೆಲವರು ಉನ್ಮಾದದಲ್ಲಿ ಮಾತನಾಡುತ್ತಿರುವುದು ನಿಜ.. ಇದು ಸರಿ ಎಂದು ವಾದಿಸುತ್ತಿಲ್ಲ.. ಜೊತೆಗೆ ಎಂದೋ ಪಾಕಿಸ್ತಾನ ಸೇನೆ ಹತ್ಯೆ ಮಾಡಿದ ಭಯೋತ್ಪಾದಕರ ಚಿತ್ರವನ್ನು ತೆಗೆದು ಭಾರತದವರು ಹತ್ಯೆ ಮಾಡಿದ ಭಯೋತ್ಪಾದಕರು ಎಂದು ಹೇಳುತ್ತಿದ್ದಾರೆ.. ಅಸಲಿಗೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮಾಹಿತಿ ಮತ್ತು ಭಯೋತ್ಪಾದಕರ ಹತ್ಯೆಯ ಮಾಹಿತಿ ನೀಡಿದೆಯೇ ಹೊರತು ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಿಲ್ಲ.. ಆದರೆ ಉತ್ಸಾಹದಲ್ಲಿ ಚಿತ್ರಗಳನ್ನು ಹಾಕಿದ್ದಾರೆ.. ಭಾರತದ ಸೈನಿಕರ ಸಾಧನೆ ನಿಜಕ್ಕೂ ಅಭಿನಂದನೀಯ.. ದೇಶವೇ ಅಭಿನಂದಿಸುತ್ತಿದೆ.. ಆದರೆ ಕೆಲವರು ಅಲ್ಲೂ ಜಾತಿ ಹುಡುಕುತ್ತಿರುವುದು ಮತ್ತೊಂದು ವಿಷಾದನೀಯ.. ಜಾತಿ, ಮತ, ಧರ್ಮ, ಪಂಥ ಎಲ್ಲವನ್ನು ಮೀರಿ ದೇಶ ಎಂದು ಹೇಳುವ ನಮ್ಮ ಸೈನಿಕರು ನಮ್ಮ ಹೆಮ್ಮೆ.. ರೈತ ಮತ್ತು ಸೈನಿಕ ಇಬ್ಬರ ಸೇವೆಯನ್ನು ನಾವು ಇಂದಿಗೂ ಮರೆಯಲು ಸಾಧ್ಯವಿಲ್ಲ.. ಅವರಿಗೆ ನಮ್ಮ ಸಲಾಂ.. ಈ ಧಾಳಿ ಯುದ್ಧದ ಮುನ್ಸೂಚನೆ ಅಂತೂ ಅಲ್ಲ.. ಯುದ್ಧ ನಮಗೆ ಬೇಡವೂ ಬೇಡ.. ಆದರೆ  ನಮ್ಮ ಸೈನಿಕರು, ನಮ್ಮನ್ನು ಕಾಯುವವರು ಸಾವನ್ನಪ್ಪಿದಾಗ ಅವರ ಸಾವಿಗೊಂದು ನ್ಯಾಯ ಬೇಕೇ ಬೇಕು..

ಕೊನೇಯ ಅನುಮಾನ…

ದೇಶ, ಸೈನಿಕ, ನೆಲ, ಜಲ ಎಲ್ಲ ವಿಷಯ ಬಂದಾಗಲೂ ಕೆಲವರಿಗೆ ಅದ್ಯಾವುದೂ ಗೊತ್ತಾಗಲ್ವಲ್ಲ… ಅಂಥವರ ಮನಸ್ಸಲ್ಲಿ ನಿಜವಾಗಿಯೂ ತುಂಬಿರುವುದಾದರೂ ಏನು..? ಅಟ್ಲೀಸ್ಟ್ ದೇಶದ ವಿಷ್ಯ ಬಂದಾಗಲಾದರೂ ಒಂದಾಗಿ…

Facebook ಕಾಮೆಂಟ್ಸ್

Manjunath Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..
Related Post