ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಈ ಗಾದೆಯ ಒದೆ ತಿಂದವರು ಅದೆಷ್ಟೋ ಜನ. ಕೆಲವೊಮ್ಮೆ ಅದ್ಯಾವುದೋ ಒಂದು ಸಮಯದಲ್ಲಿ ಒಂದು ಕೆಟ್ಟ ಮಾತನಾಡಿ ಬಿಡುತ್ತೇವೆ ಕೊನೆಗೆ ಮನಸ್ಸು ಹದಗತಿಗೆ ಬಂದಾಗಲೋ ಅಥವಾ ಬಲ್ಲವರು ಹಿಡಿದು ಜಾಢಿಸಿದಾಗಲೋ ನಮ್ಮ ಆ ಕೆಟ್ಟ ಮಾತಿನ ಪರಿಣಾಮ ಅರಿತು ಪರಿತಪಿಸುತ್ತೇವೆ. ಕಾಣೆ ಮೀನು ಕೆಲಸ ಇಲ್ದೆ ವಿವೇಕಾನಂದರ ಬಗ್ಗೆ ಬರೆದಿತ್ತಲ್ಲ ಅದು ಈ ಗಾದೆಗೆ ತುಂಬಾ ದೊಡ್ಡ ಉದಾಹರಣೆ. ಭಗವಾನ್ ಎಂಬೋ ಕನ್ನಡ ಸಾಹಿತ್ಯ ಲೋಕದ ಸೆಲ್ಫ್ ಡಿಕ್ಲೇರ್ಡ್ ವಿಮರ್ಶಕ ಭಗವದ್ಗೀತೆಯ ಮೇಲೆ ಒಂದಿಷ್ಟು ತುಚ್ಛ ಮಾತುಗಳನ್ನಾಡಿದನಲ್ಲ ಅದು ಈ ಗಾದೆಗೆ ಉದಾಹರಣೆ. ಕೆಲವೊಮ್ಮೆ ತಕ್ಷಣಕ್ಕೆ ಥಟ್ಟನೆ ಆಡುವ ಮಾತು ನಮ್ಮ ವ್ಯಕ್ತಿತ್ವವವ ಪ್ರತಿಫಲಿಸಿಬಿಡುತ್ತದೆ.ಎಷ್ಟೋ ದಿನದಿಂದ ಸಿದ್ಧಪಡಿಸಿದ ಭಾಷಣದಂತೆ ರಪರಪನೆ ಒದರಿಬಿಡುವ ನಾವು ಆಮೇಲೆ ಆ ಮಾತಿಗೆ ಪರಿತಪಿಸುತ್ತಾ ಕೂರುತ್ತೇವೆ. ಬಿಡಿ!! ಈಗೇಕೆ ಈ ಗಾದೆಯನ್ನು ಈತ ಸಂದರ್ಭ ಸಹಿತ ವಿವರಿಸುತ್ತಿದಾನೆ ಎಂದು ಯೋಚಿಸುತ್ತಿದ್ದೀರಾ? ಏನಿಲ್ಲ, ವಿಶಾಲ್ ದದ್ಲಾನಿ ಎಂಬ ಬಾಲಿವುಡ್’ನ ಮಹಾನ್ ಸಂಗೀತಗಾರ ಕಳೆದ ಆಗಸ್ಟ್ 27 ರಂದು ಜೈನ ಭಿಕ್ಷು ಮುನಿಶ್ರೀ ತರುಣ ಸಾಗರ ಅವರ ಮೇಲೊಂದು ಟ್ವೀಟ್ ಮಾಡುತ್ತಾನೆ. ಹರ್ಯಾಣ ವಿಧಾನ ಸಭೆಯನ್ನುದ್ದೇಶಿಸಿ ಅದ್ಭುತ ಭಾಷಣ ಮಾಡಿದ್ದ ಮುನಿಶ್ರೀ ಅವರನ್ನು ಮಂಕೀ ಎಂದೂ,ಸರ್ಕಾರದಲ್ಲಿ ಧರ್ಮ ಯಾವತ್ತೂ ನುಸುಳಬಾರದು ಎಂಬ ಉಪದೇಶವನ್ನೂ ಮಾಡುವ ಈತ ಜೈನ ಸಮುದಾಯದ ಸಂಸ್ಕ್ರತಿಯನ್ನು ಹೀಯಾಳಿಸಿ ತನ್ನ ವಿಕೃತಿ ಮೆರೆದಿದ್ದ. ಇನ್ನೊಂದು ಧರ್ಮವನ್ನು ಅಥವಾ ಕನಿಷ್ಟ ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವ ಸೌಜನ್ಯವನ್ನು ಹೊಂದಿರದ ನೀನು ಅದೆಷ್ಟೋ ಹಾಡುಗಳಿಗೆ ಸಂಗೀತ ನುಡಿಸಿ,ಕೋಟಿ ಕೋಟಿ ಹಣಗಳಿಸಿ, ಪ್ರಶಸ್ತಿಗಳ ಮೇಲೆ ಪ್ರಶಸ್ತಿಯನ್ನು ಬಾಚಿ ಏನೂ ಪ್ರಯೋಜನವಿಲ್ಲ ಎಂದು ಜನ ಉಗಿದ ಮೇಲೆ ಈತನಿಗೆ ಬುದ್ಧಿ ಬಂತು.
ಈ ವಿಶಾಲ್ ದದ್ಲಾನಿಯ ಬಗ್ಗೆ ಬಹುಶಃ ನಿಮಗೆಲ್ಲ ತಿಳಿದಿರುತ್ತದೆ. ಈತ, ನಮ್ಮ ರಾಷ್ಟ್ರ ಬದಲಿಸುವ ಸಲುವಾಗಿ ಹಗಲೂ ರಾತ್ರಿ ಶ್ರಮಿಸಿ ಆಮ್ ಆದ್ಮಿ ಪಾರ್ಟಿಯನ್ನು ಕಟ್ಟಿದ,ದೇಶದ ರಾಜಕೀಯದ ದಿಕ್ಕು,ದೆಸೆ,ಮಾನ,ಮರ್ಯಾದೆ ಎಲ್ಲ ಹರಾಜು ಹಾಕಿದ ಶ್ರೀ ಶ್ರೀ ಅರವಿಂದ ಕೇಜ್ರಿವಾಲರ ಪರಮಾಪ್ತ ಶಿಷ್ಯ. ಅಲ್ಲಿಗೆ ಗುರುವಿನಂತೆ ಶಿಷ್ಯ ಎಂಬ ಗಾದೆಯೂ ಇಲ್ಲಿ ವರ್ಕೌಟ್ ಆಯ್ತು ಅಂದಾಂಗಾಯ್ತು . ಗುರು ತನ್ನ ಮನೆಯಲ್ಲಿ ಇಲಿಯೊಂದು ವಯಸ್ಸಾಗಿ ಸತ್ತರೂ ಅದಕ್ಕೆ ನರೇಂದ್ರ ಮೋದಿ ಕಾರಣ ಎನ್ನುವಷ್ಟು ಪಳಗಿರುವಾಗ ಇನ್ನೂ ಈ ಶಿಷ್ಯ ಮುಂಡೇವಿನಿಂದ ಏನನ್ನು ಅಪೇಕ್ಷಿಸಬಹುದು ಅಲ್ಲವೇ? ಆದರೆ ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂಬುದು ಈ ಆಮ್ ಆದ್ಮಿ ಪಕ್ಷಕ್ಕೆ ಮತ್ತು ಅರವಿಂದ ಕೇಜ್ರಿವಾಲ್ ಅವರಿಗೆ ಅಂತಾನೆ ಸೃಷ್ಟಿಸಿದ ಗಾದೆಯಿರಬೇಕು. ಇನ್ನೊಬ್ಬರ ಸರ್ಕಾರದಲ್ಲಿ ನಡೆದ ಭೃಷ್ಟಾಚಾರದ ಬಗ್ಗೆ ಫೂಂಕಾನುಪುಂಕವಾಗಿ ಒದರುವ ಕೇಜ್ರಿವಾಲರು ತನ್ನ ಸರ್ಕಾರದ ಶಾಸಕರು ಒಬ್ಬರಾದ ಮೇಲೆ ಒಬ್ಬರು ಕಂಬಿ ಎಣಿಸಲು ಹೊರಡುವುದನ್ನು ಬಹುಶಃ ನೋಡುವುದೇ ಇಲ್ಲವೇನೋ. ದೆಹಲಿಯ ಜನರ ಕನಿಷ್ಟ ನಂಬಿಕೆಯನ್ನೂ ಉಳಿಸಿಕೊಳ್ಳಲಾಗದ ಈ ಮನುಷ್ಯ ಈಗ ಗೋವಾ ಮತ್ತು ಪಂಜಾಬ್ ಅನ್ನು ಆಳುವ ಕನಸನ್ನು ಹೊತ್ತಿದಾನೆ. ದೆಹಲಿಯಲ್ಲಿ ಹೊಸ ಮಧ್ಯದ ಅಂಗಡಿಗಳಿಗೆ ಪರವಾನಿಗೆ ನೀಡುತ್ತಾ ಪಂಜಾಬ್’ನಲ್ಲಿ ಮಾದಕ ವ್ಯಸನ ಚಟುವಟಿಕೆಗಳು ಜಾಸ್ತಿ ಆಗಿವೆ ಅದನ್ನು ಕಿತ್ತೊಗೆಯಲು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕೇಳುವ ಈ ಮನುಷ್ಯನಿಗೆ ಮಾನ ಮರ್ಯಾದೆ ಎನ್ನುವುದು ಚೂರಾದರೂ ಇದೆಯೇ ಎನ್ನುವುದು ಯಕ್ಷಪ್ರಶ್ನೆ.
ಮುನಿಶ್ರೀ ತರುಣ ಸಾಗರ ಅವರು ಮಹಾನ್ ಸಾಧಕರು ಮತ್ತು ವಾಗ್ಮಿಗಳು. ತಮ್ಮ ನೇರ ಮಾತುಗಳಿಂದ ಅನೇಕರನ್ನು ಸೆಳೆದವರು ಮುನಿಶ್ರೀ. ಜೈನ ಧರ್ಮಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಧರ್ಮದ ಅನೇಕ ಜನರಿಗೆ ಮುನಿಶ್ರೀ ಅವರ ಮಾತು ಕೇಳುವುದೆಂದರೆ ಅದೇನೋ ಖುಷಿ. ಅದರಲ್ಲೂ ಅವರ “ಕದ್ವೆ ಪ್ರವಚನ”(ಕಹಿ ಪ್ರವಚನಗಳು) ಬಹಳ ಖ್ಯಾತಿಗೊಂಡಿತ್ತು. ಯಾವಾಗ ಒಬ್ಬ ಸಂತನನ್ನು ಎಲ್ಲ ಸಮುದಾಯದವರೂ ಒಪ್ಪಿಕೊಳ್ಳುತಾರೋ ಆಗ ಆತನನ್ನು ಸದ್ಗುರು ಎನ್ನಬಹುದೇನೋ. ಮುನಿಶ್ರೀ ತರುಣ ಸಾಗರ ಅವರು ಸದ್ಗುರುಗಳಾಗಿದ್ದಾರೆ. ಜೈನ ಧರ್ಮದ ದಿಗಂಬರ ಸಂತರಲ್ಲಿ ಪ್ರಮುಖರು ತರುಣ ಸಾಗರ್ ಅವರು. 2009ರಲ್ಲಿ ನಾಗ್ಪುರದ ಆರ್.ಎಸ್.ಎಸ್ ಕಚೇರಿಯಲ್ಲಿ ನಡೆದ ವಿಜಯ ದಶಮಿಗೆ ಮುನಿಶ್ರೀ ತರುಣ ಸಾಗರ್ ಅವರನ್ನು ಕರೆಸಲಾಗಿತ್ತು. ಮುನಿಶ್ರೀ ಆ ವೇದಿಕೆಯಲ್ಲಿ ಒಂದು ಮಾತು ಹೇಳಿದ್ದರು. ಎಲ್ಲಿಯವರೆಗೆ ನಿಮ್ಮ ಸೊಂಟದಲ್ಲಿ ಲೆದರ್ ಬೆಲ್ಟ್ ದರಿಸುತ್ತೀರೋ ಅಲ್ಲಿಯವರೆಗೆ ನೀವು ಅದೆಷ್ಟು ಅಹಿಂಸೆಯ ಹೋರಾಟ ಮಾಡಿದರೂ ಪ್ರಯೋಜನವಿಲ್ಲ ಎಂದು, ಅದಾದ ನಂತರ ಆರ್.ಎಸ್.ಎಸ್’ನ ಸಮವಸ್ತ್ರದಿಂದ ಲೆದರ್ ಬೆಲ್ಟ್ ಅನ್ನು ತೆಗೆದುಹಾಕಲಾಯಿತು. ತಮ್ಮ ನೇರ ಮಾತುಗಳಿಂದಲೇ ಎಲ್ಲರ ಮನಸ್ಸಿಗೆ ಹತ್ತಿರವಾದವರು ಮುನಿಶ್ರೀ. ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುನಿಶ್ರೀ ಒಂದು ಸಲಹೆಯನ್ನು ನೀಡಿದ್ದರು, ಅದೇನೆಂದರೆ ಮಧ್ಯಪ್ರದೇಶದಲ್ಲಿ ಹೊಸ ಸಾರಾಯಿ ಅಂಗಡಿಗಳನ್ನು ತೆರೆಯದಂತೆ ಮಾಡಿ ಎಂದು. ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಮುನಿಶ್ರೀ ತರುಣ ಸಾಗರ್ ಅವರ ಸಲಹೆಗೆ ಒಪ್ಪಿ 2010ರಿಂದ ಮಧ್ಯಪ್ರದೇಶದಲ್ಲಿ ಹೊಸ ಸಾರಾಯಿ ಅಂಗಡಿಗಳಿಗೆ ಪರವಾನಿಗೆಯನ್ನು ನೀಡಲೇ ಇಲ್ಲ. ಇಷ್ಟೇ ಅಲ್ಲದೆ ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ದನದ ಮಾಂಸ ಮತ್ತು ಲೆದರ್ ಬೆಲ್ಟ್’ಗಳನ್ನು ತಡೆಗಟ್ಟಲು ಅಹಿಂಸಾ ಮಹಾಕುಂಬ್ ಎನ್ನುವ ಚಳುವಳಿಯನ್ನು ಶುರು ಮಾಡಿದವರು ತರುಣ್ ಸಾಗರ್ . 2010ರಲ್ಲಿ ಮಧ್ಯಪ್ರದೇಶದ ವಿಧಾನಸಭೆಯನ್ನುದ್ದೇಶಿಸಿ ಪ್ರವಚನ ನೀಡಿದ ತರುಣ ಸಾಗರ್ ತನಗೆ ಒಮ್ಮೆ ದೇಶದ ಸಂಸತ್ತಿನಲ್ಲಿ ಮಾತನಾಡಲು ನೀಡಿದರೆ ಬೃಷ್ಟ ರಾಜಕಾರಣಿಗಳನ್ನು ಬದಲಿಸಬಲ್ಲೆ ಎಂದು ಹೇಳುತ್ತಾರೆ.
ಇಂತಹ ಸಂತನನ್ನು ನಿಂದಿಸಿದ ವಿಶಾಲ್ ದದ್ಲಾನಿ ತನ್ನ ತಪ್ಪಿನ ಅರಿವಾಗಿ 33 ಸಲ ತಪ್ಪೊಪ್ಪಿಗೆಯ ಟ್ವೀಟ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ರಾಜಕೀಯವನ್ನು ತ್ಯಜಿಸುವ ಮಾತನ್ನಾಡಿದ್ದಾನೆ. ಅಲ್ಲಿಗೆ ಕೇಜ್ರಿವಾಲರಿಗೆ ಕಿರುಚಿ ಬೆಂಬಲ ನೀಡುತ್ತಿದ್ದ ವಿಶಾಲ್ ದದ್ಲಾನಿ ಎಂಬ ಹಾಡುಗಾರ ಶಿಷ್ಯನನ್ನು ಕಳೆದುಕೊಂಡ ವೇದನೆ ಅಂತೂ ಪಕ್ಕಾ ಅಂದಾಯ್ತು. . ಆಡಳಿತದಲ್ಲಿ ಧರ್ಮವನ್ನು ಬೆರೆಸಬಾರದು ಎಂದು ಉದ್ದುದ್ದ ಟ್ವೀಟ್ ಮಾಡುವ ಆಮ್ ಆದ್ಮಿ ಪಕ್ಷದವರಿಗೆ ಕೇಜ್ರಿವಾಲ ಇಫ್ತಾರ್ ಕೂಟದಲ್ಲಿ ಥೇಟ್ ಮುಸ್ಲಿಮರ ವೇಷ ಹಾಕಿಕೊಂಡು ಬಿರಿಯಾನಿ ಸವಿದಿದ್ದು ಕಾಣಿಸುವುದಿಲ್ಲವೇ? ಪಂಜಾಬ್’ನ ಜನರ ಮನವೊಲಿಸಲು ಸ್ವತಃ ಕೇಜ್ರಿವಾಲ್ ಸ್ವರ್ಣಮಂದಿರದ ಪಾತ್ರೆ ತೊಳೆದಿದ್ದೇನೆ ಎಂದು ಟ್ವೀಟ್ ಮಾಡಿದ್ದು ನೆನಪಿಗೆ ಬರುವುದಿಲ್ಲವೇ? ದೇಶ ಕಟ್ಟುವುದಕ್ಕಿಂತ ತನ್ನ ಪಾರ್ಟಿಯ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲ ಎನ್ನುವ ನಿಮ್ಮಿಂದ ಸಾಮಾನ್ಯ ಜನರಾದ ನಾವು ಇನ್ನೂ ಏನನ್ನು ಅಪೇಕ್ಷಿಸಲು ಸಾಧ್ಯ? ತನ್ನ ಹದಿನಾಲ್ಕು ಶಾಸಕರು ಪೋಲೀಸ್ ಕೇಸ್’ನಲ್ಲಿ ಸಿಲುಕಿಕೊಂಡಿರುವಾಗ ಅರವಿಂದ್ ಕೇಜರಿವಾಲ್ ಇನ್ನೊಬ್ಬರ ಸರಕಾರವನ್ನು ಅದೇಗೆ ಪ್ರಶ್ನಿಸುವ ನೈತಿಕತೆಯನ್ನು ಹೊಂದಿದ್ದಾರೋ ಆ ದೇವನೆ ಬಲ್ಲ.
ದೇಶದಲ್ಲಿ ಏನೇ ಆದರೂ ಅದಕ್ಕೆ ನರೇಂದ್ರ ಮೋದಿ ಮತ್ತು ಆರ್.ಎಸ್.ಎಸ್ ಕಾರಣ ಎಂಬ ಒಂದು ವರ್ಗದ ಜನರು ದೇಶದ ಬೆಳವಣಿಗೆಯನ್ನು ಚೂರು ಸಹಿಸದ ಒಂತರಾ ಹಿಡನ್ ದೇಶದ್ರೋಹಿಗಳು. ಗ್ರೀನ್ ಪೀಸ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಜುಟ್ಟು ಹಿಡಿದು ಭಾರತದಿಂದ ಹೊರದಬ್ಬಿದ ನಂತರ ಇವರ “ಆಜಾದಿ”ಯ ಘೋಷಣೆ ಜಾಸ್ತಿಯಾಗಿದೆ. ಅಂದರೆ ಯಾರ್ಯಾರಿಗೆ,ಎಲ್ಲೆಲ್ಲಿ ಮತ್ತು ಹೇಗೆ ಹಣ ಸಂದಾಯವಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ.ಅಲ್ಪಸಂಖ್ಯಾತರ ಕಲ್ಯಾಣ ಮಾಡುತ್ತೇನೆ ಎಂದು ಹಣ ಪೀಕಿದ ಅದೆಷ್ಟೋ NGO ಗಳ ಕರಾಳ ಮುಖವನ್ನು ಬಯಲು ಮಾಡಿದ ಮೋದಿ&ಟೀಮ್ ಹೊರ ರಾಷ್ಟ್ರಗಳಿಂದ ಹರಿದು ಬರುತ್ತಿದ್ದ ಕ್ರಿಸ್ಚಿಯನ್ ಮಶೀನರೀ ಫಂಡ್’ಗಳ ಮೇಲೆ ನಿರ್ಬಂಧ ಹೇರಿದ ಮೇಲೆ ಸ್ವಯಂ ಘೋಷಿತ ಸಮಾಜ ಸೇವಾ ಸಂಸ್ಥೆಗಳು ಅಂಡು ಸುಟ್ಟಿರೋ ಬೆಕ್ಕಿನಂತೆ ಆಡುತ್ತಿವೆ.ಈ ಬುದ್ದಿಜೀವಿಗಳು ಎನಿಸಿಕೊಂಡಿರುವ ಅಥವಾ ಘೋಷಿಸಿಕೊಂಡವರು ಮೋದಿ ಅಧಿಕಾರಕ್ಕೆ ಬಂದ ಮೇಲೆ ಸುಮ್ಮನೆ ತೆಪ್ಪಗೆ ಇದ್ದಿದ್ದರೆ ಬುದ್ದಿಜೀವಿ ಎಂಬ ಕನಿಷ್ಟ ಹಣೆಪಟ್ಟಿಯನ್ನಾದರೂ ಉಳಿಸಿಕೊಳ್ಳಬಹುದಿತ್ತು ಆದರೆ ಮೋದಿಯ ಸರ್ವನಾಶ ಮಾಡುತ್ತೇವೆ ಎಂದು ಯಾವಾಗ ಹೊರಟರೋ ಆವತ್ತಿನಿಂದ ಸಾರ್ವಜನಿಕವಾಗಿ ತಾವು ಬುದ್ದುಗಳು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದಾರೆ.. ಅದೇನೋ ಅಂತಾರಲ್ಲ ಉದ್ಯೋಗವಿಲ್ಲದ ಬಡಿಗ ಮಗನ ಅಂಡು ಕೆತ್ತಿದ್ದ ಎಂದು ಇದು ಕೂಡ ಸೇಮ್ ಕೇಸ್. ನರೇಂದ್ರ ಮೋದಿ ತನ್ನ ಸುತ್ತಲೂ ಹೊಗಳು ಭಟ ಪತ್ರಕರ್ತರನ್ನು ಸೇರಿಸಿಕೊಂಡಿಲ್ಲ, ವಿದೇಶ ಪ್ರವಾಸದ ವೇಳೆ ಯಾವುದೇ ಪತ್ರಕರ್ತರನ್ನು ಕರೆದುಕೊಂಡು ಹೋಗಲಿಲ್ಲ. ಮಾತಾಡುವುದೇ ತನ್ನ ಕೆಲಸ ಎಂದು ವಾರಕ್ಕೊಂದು ಪತ್ರಿಕಾಗೋಷ್ಟಿ ಕರೆಯಲಿಲ್ಲ. ಬದಲಾಗಿ ಒಂದಿಷ್ಟು ಬದಲಾವಣೆಯನ್ನು ಖಂಡಿತ ಮಾಡಿದರು. ಪುಲ್ಲೆಲ ಗೋಪಿಚಂದ್ ಹೇಳುತ್ತಾರೆ “2012ರ ಒಲಂಪಿಕ್ಸ್’ನಲ್ಲಿ ಕಂಚು ಗೆದ್ದ ಸೈನಾ ಮತ್ತು ನಾನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಹೋದಾಗ ನಮ್ಮನ್ನು ಯಾವುದೋ ಪಕ್ಷದ ಕಾರ್ಯಕರ್ತರು ಎಂಬಂತೆ ನೋಡಿಕೊಂಡರು ಆದರೆ 2016ರ ರಿಯೊ ಒಲಂಪಿಕ್ಸ್’ನ ಫೈನಲ್ ಪಂದ್ಯ ಆರಂಭವಾಗುವ ಮುನ್ನವೇ ಪ್ರಧಾನಿ ನಮಗೆ ಆಲ್ ದ ಬೆಸ್ಟ್ ಹೇಳಿದ್ದರು” ಎಂದು. ಇಲ್ಲಿ ಒಬ್ಬ ವ್ಯಕ್ತಿಯ ಕೆಲಸವನ್ನು ಗೌರವಿಸಲು ಆತನ ಪಕ್ಷ, ಜಾತಿ, ಧರ್ಮ ಮುಖ್ಯವಾಗಬಾರದು. ಜಾತಿ ವ್ಯವಸ್ಥೆಯನ್ನು ಕೊನೆಗಾಣಿಸ ಹೊರಟವರು ಹಿಡಿದುಕೊಂಡಿರುವುದು ಜಾತೀಯತೆಯ ಪೋಸ್ಟರ್’ಗಳನ್ನು. ಅವರು ಎಲ್ಲರನ್ನೂ ಅಳೆಯುವುದು ಜಾತಿಯ ಮೇಲೆಯೇ. ನರೇಂದ್ರ ಮೋದಿಯನ್ನು ಬೆಂಬಲಿಸುತ್ತೇವೆ ಎಂದರೆ ನಾವು ಬಿಜೆಪಿಯವರು ಮಾಡುವ ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ ಎಂದಲ್ಲ. ನರೇಂದ್ರ ಮೋದಿ ಎಂದರೆ ಆತ ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ಮೀಸಲಿಟ್ಟು ಶ್ರಮಿಸುತ್ತಿರುವವರಲ್ಲಿ ಮುಂಚೂಣಿಗ, ಆತ ಆಡುವ ಮಾತು ನಮ್ಮೊಳಗೆ ಅದೆಷ್ಟೋ ದಿನದಿಂದ ಕೊರೆಯುತ್ತಿದ್ದ ಮಾತು ಅನ್ನಿಸುವಷ್ಟು ನಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಪ್ರಧಾನ ಸೇವಕ ಆತ.ಒಂದಿಷ್ಟು ಒಳ್ಳೆ ಕೆಲಸಗಳು ನಮಗ್ಯಾರಿಗೂ ಅರಿವಿಲ್ಲದೆ ಆಗುತ್ತಿದೆ ಅನ್ನುವುದಂತೂ ಸತ್ಯ. ಐದು ವರ್ಷದ ನಂತರ ಮೋದಿ ಹಿಡಿದು ತರುವ ರಿಪೋರ್ಟ್ ಕಾರ್ಡ್ ಸಿದ್ದರಾಮಯ್ಯನವರ ಪ್ರಣಾಳಿಕೆಯ ತೆರನಾಗಿಯಂತೂ ಇರುವುದಿಲ್ಲ.
Facebook ಕಾಮೆಂಟ್ಸ್