X

ಬ್ರಹ್ಮಸೃಷ್ಟಿಯೂ ಹೊರತಲ್ಲವೀ ದ್ವಂದ್ವದಿಂದ !

(ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೬)

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |

ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ ||

ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |

ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ || ೦೨೬ ||

ಮಸಲ, ಸೃಷ್ಟಿಯಾಶಯ ಮೋಹಕವೆ ? ಭೀಭತ್ಸಕವೆ ?

ದ್ವಂದ್ವವೆನ್ನುವುದು ಈ ಇಹಜೀವನದಲ್ಲಿ ಪ್ರಧಾನವಾಗಿ ಎದ್ದು ಕಾಣುವ ಅಂಶ. ಸುಖ-ದುಃಖ, ದಿನ-ರಾತ್ರಿ, ಸೌಂದರ್ಯ-ಕುರೂಪ, ಸತ್ಯ-ಮಿಥ್ಯ, ಸದ್ಗುಣ-ದುರ್ಗುಣ ಹೀಗೆ ಯಾವುದೆ ಕೋನದಲ್ಲಿ ನೋಡಿದರು ಈ ಅಸ್ತಿತ್ವ-ಪ್ರತಿ ಅಸ್ತಿತ್ವದ ದ್ವಂದ್ವವಿರುವುದು ಎದ್ದು ಕಾಣುತ್ತದೆ. ಈ ದ್ವಂದ್ವದ ತತ್ವದಿಂದ ಬ್ರಹ್ಮಸೃಷ್ಟಿಯೂ ಹೊರತಲ್ಲವೆಂದು ಗಮನಿಸಿ ಕವಿಮನ ವಿಸ್ಮಿತವಾಗುವ ಪರಿ ಈ ಸಾಲುಗಳಲ್ಲಿ ವ್ಯಕ್ತವಾಗಿವೆ.

ಈ ಸೃಷ್ಟಿಯಲ್ಲಿನ ಸೋಜಿಗವೆಂದರೆ ಇದೇ: ಅದನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ, ಅದರ ಮೂಲ ಆಶಯವೇನಿತ್ತು ಎನ್ನುವುದರಿಂದಲೆ ಈ ದ್ವಂದ್ವ ಆರಂಭವಾಗುತ್ತದೆ!  ಯಾವುದೇ ಅಸ್ತಿತ್ವದ ಹಿನ್ನಲೆಯಲ್ಲಿ ಕೆಲಸ ಮಾಡುವ ಇಚ್ಚಾ-ಜ್ಞಾನ-ಕ್ರಿಯಾ ಶಕ್ತಿಗಳೆಂಬ ತ್ರಿಶಕ್ತಿ ರೂಪಗಳಲ್ಲಿ ನಮ್ಮ ಕಣ್ಣಿಗೆ ಪ್ರಕಟರೂಪದಲ್ಲಿ ಅನಾವರಣವಾಗುವುದು ಕ್ರಿಯಾಶಕ್ತಿಯ ಫಲಿತ. ಇಚ್ಛೆಯೆನ್ನುವುದು ರೂಪುಗೊಳ್ಳುವ ಒಂದು ಅಂತರಂಗಿಕ ಕ್ರಿಯೆಯಾದ ಕಾರಣ ಅದನ್ನು ಮತ್ತದರ ಒತ್ತಡವನ್ನು ಒಳಗೆ ಅನುಭವಿಸಬಹುದೇ ಹೊರತು ನೇರ ಕಾಣಲಾಗದು.  ಇನ್ನು ಇಚ್ಛೆಯು ಕ್ರಿಯೆಯಾಗಿ ಬದಲಾಗಬೇಕಿದ್ದರೆ ಬರಿ ಅಮೂರ್ತರೂಪಿ ಆಶಯವಿದ್ದರೆ ಸಾಲದು ; ಅದನ್ನು ಸೂಕ್ತ ಮತ್ತು ಸಮರ್ಥ ಪ್ರಕ್ರಿಯೆಯಾಗಿ ಮಾರ್ಪಡಿಸಬಲ್ಲ ಅರಿವು, ತಿಳುವಳಿಕೆ, ವಿದ್ಯೆ ಜತೆಗಿರಬೇಕು. ಅದನ್ನು ಒದಗಿಸಬಲ್ಲ ಸರಕನ್ನೆ ನಾವು ಜ್ಞಾನಶಕ್ತಿ ಎಂದುಬಿಡುತ್ತೇವೆ. ಇವೆರಡು ಸರಿಸೂಕ್ತ ಪ್ರಮಾಣ, ಪರಿಮಾಣಗಳಲ್ಲಿ ಇದ್ದ ಮೇಲಷ್ಟೆ ಅದಕ್ಕೆ ಸಕಾರಾತ್ಮಕ ಫಲಿತವಾಗುವ ಕ್ರಿಯಾಶಕ್ತಿಯ ಬಲ ಬರುವುದು.

ಈ ತ್ರಿವಳಿ ಶಕ್ತಿಗಳ ಸ್ವರೂಪವನ್ನು ಅರ್ಥೈಸಲು ಸರಳವಾಗಿ ಉದಾಹರಣೆಯೊಂದಿಗೆ ಹೇಳುವುದಾದರೆ ನಮ್ಮ ನೀರಿನ ಸಮಸ್ಯೆಯ ಕುರಿತಾದ ಕಾವೇರಿ, ಮಹದಾಯಿಗಳ ವಿಷಯವನ್ನೇ ತೆಗೆದುಕೊಳ್ಳಿ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಮೂಲವಾಗಿ ಪರಿಹರಿಸಬೇಕೆಂಬ ಪ್ರಾಮಾಣಿಕ ಇಚ್ಚಾಶಕ್ತಿ ಇರಬೇಕಾದ್ದು ಇದರ ಮೊದಲ ಅಗತ್ಯ. ನಮ್ಮಲ್ಲಿ ಸಾಕಷ್ಟು ಸಾಮಾಜಿಕ ಇಚ್ಚಾಶಕ್ತಿಯಿದ್ದರೂ , ರಾಜಕೀಯ ಇಚ್ಚಾಶಕ್ತಿಯ ಅಗಾಧ ಕೊರತೆ ಇದೆ.

ಇದಕ್ಕೆ ಬೆನ್ನೆಲುಬಾದ ಜ್ಞಾನಶಕ್ತಿಯೆನ್ನುವುದು: ಸಾಧಕ-ಬಾಧಕಗಳು, ನೈಜ ಮತ್ತು ಕಾರ್ಯತಂತ್ರಸಂವೇದಿ ಅಂಕಿ-ಅಂಶಗಳು ಮತ್ತಿತ್ಯಾದಿಗಳ ನಿರಂತರ ಸಂಗ್ರಹ, ವಿಶ್ಲೇಷಣೆ ಮತ್ತದರ ಸೂಕ್ತ ಬಳಕೆಯ ಸಾಧ್ಯತೆಯ ಜಾಣ್ಮೆ ಹಾಗು ಸೂಕ್ಷ್ಮಜ್ಞತೆಗಳನ್ನೂ ಒಳಗೊಂಡಿರುತ್ತದೆ.

ಹೀಗೆ ಇಚ್ಚಾಶಕ್ತಿ ಮತ್ತದರಿಂದ ಪ್ರೇರಿತವಾಗಿ ಗ್ರಹಿಸಲ್ಪಟ್ಟ ಜ್ಞಾನಶಕ್ತಿ – ಇವೆರಡು ಬಲವಾಗಿದ್ದರೆ ಅದನ್ನವಲಂಭಿಸಿದ ಕಾರ್ಯ ತಂತ್ರ (ಕಾರ್ಯಶಕ್ತಿಯ ಪ್ರಕಟರೂಪ) ಖಚಿತವಾಗಿ ಯಶಸ್ವಿಯಾಗುತ್ತದೆ (ಮಾತುಕತೆಯಲ್ಲಾಗಲಿ, ಕೋರ್ಟಿನ ನೆಲೆಗಟ್ಟಿನಲ್ಲೇ ಆಗಲಿ – ಹಿಂದೆ ದೇವೇಗೌಡರು ಸ್ವಂತದಲ್ಲೆ ಅಧ್ಯಯನ ನಡೆಸಿ ಮಾಹಿತಿ ಕಲೆಹಾಕಿ, ತಮಿಳುನಾಡಿನ ವಾದದಲ್ಲಿದ್ದ ಹುಳುಕುಗಳನ್ನು ಎತ್ತಿ ತೋರಿಸಿದ್ದನ್ನು ಇಲ್ಲಿ ಉದಾಹರಿಸಬಹುದು).

ಹೀಗಾಗಿ ಏನನ್ನಾದರೂ ಮಾಡಬೇಕೆಂಬ ಇಚ್ಛೆ-ಆಶಯವಾಗಲಿ, ಅದನ್ನು ಕಾರ್ಯಗತಗೊಳಿಸಬೇಕಾದ ಜ್ಞಾನಶಕ್ತಿಯಾಗಲಿ ಕೇವಲ ಹಿನ್ನಲೆಯಲ್ಲಿ ಕೆಲಸ ಮಾಡುವ ಪ್ರೇರಕ ಶಕ್ತಿಗಳಷ್ಟೆ. ಆದರೆ ಈಗ ನಾವು ನೋಡುವ, ನೋಡುತ್ತಿರುವ ಪ್ರಕಟರೂಪವಾದ ಕ್ರಿಯಾಶಕ್ತಿ ಮಾತ್ರ ಬರಿಯ ದ್ವಂದ್ವಗಳಿಂದಲೆ ತುಂಬಿಹೋಗಿದೆ. ಒಂದೆಡೆ ಮನಸಿಗೆ ಹಿತವೆನಿಸುವ, ಮುದಕೊಡುವ, ಅಭೂತಪೂರ್ವ ಅನುಭವವೀವ ದಿವ್ಯತೆಯುಳ್ಳ ಗುಣಗಳು, ಮತ್ತದರ ಪ್ರತಿರೂಪಗಳು ಕಂಡು ಬಂದರೆ, ಅದೇ ಸೃಷ್ಟಿಯ ಮತ್ತೊಂದೆಡೆ ಬಡತನದಂತಹ ಕಷ್ಟ-ಕಾರ್ಪಣ್ಯಗಳು, ಅಸಹ್ಯ ಹುಟ್ಟಿಸುವ ಸ್ವರೂಪಗಳು, ಘಟನೆಗಳು, ಘೋರ-ಭೀಕರತೆಗಳು ಕಣ್ಣಿಗೆ ರಾಚುತ್ತವೆ – ಅದೇ ಸುಂದರ ಸೃಷ್ಟಿಯ ಬಗಲಲ್ಲಿ.

ಬ್ರಹ್ಮವೆಂಬ ಕಲಾವಿದ ಸೃಜಿಸಿದ ಈ ಸೃಷ್ಟಿಯೆಂಬ ಕಲಾಕೃತಿ ಆ ಅಪ್ರತಿಮ ಕಲಾವಿದನ ಸಂದೇಶವನ್ನು ಬಿತ್ತರಿಸುತ್ತ ಸಹಜವಾಗಿ ಮತ್ತು ತಾರ್ಕಿಕವಾಗಿ ಸುಂದರವಾಗಿರಬೇಕಲ್ಲವೆ ? ಇಲ್ಲೇಕೆ ಆ ಕಲೆಗಾರ ಸೌಂದರ್ಯವನ್ನು ಬಿಂಬಿಸಿದಷ್ಟೆ ಸಹಜವಾಗಿ ಅದರ ದ್ವಂದ್ವ – ಸಂವಾದಿರೂಪಿಯಾದ ಕುರೂಪವನ್ನು ಬಿಡಿಸಿಟ್ಟ ? ಇದೇನು ಬೇಕೆಂದೆ ಮಾಡಿದ ಕೆಲಸವೆ ಅಥವಾ ಅವನ ಹತೋಟಿ ಮೀರಿ ಆಯಾಚಿತವಾಗಿ ಘಟಿಸಿದ ಅನಪೇಕ್ಷಣೀಯ ಸಂಕೀರ್ಣತೆಯೊ? ಅವನ ಇಚ್ಛಾಶಕ್ತಿಯೆ ಹೀಗೆ ಮಾಡಬೇಕೆಂದು ಮೊದಲೆ ನಿರ್ಧರಿಸಿತ್ತೆ ಅಥವಾ ಇದು ಕ್ರಿಯೆಯ ಹೊತ್ತಲ್ಲಿ ಜರುಗಿದ ಪ್ರಮಾದದ ಪರಿಣಾಮವೇ? ಯಾಕೊ ಸೃಷ್ಟಿಯ ಆಶಯವೆ ಅಸ್ಪಷ್ಟವಾಗಿ, ಅರ್ಥವಾಗದ ಸಂಕೀರ್ಣ ಒಗಟಾಗಿ ಕಾಣುವುದಲ್ಲಾ? ಈ ಬ್ರಹ್ಮಸೃಷ್ಟಿಯ ಅದ್ಭುತ ಕಲಾಕೃತಿಯನ್ನು ಅರ್ಥ ಮಾಡಿಕೊಳ್ಳುವುದೇ ಕ್ಲಿಷ್ಟವಿರುವಂತಿದೆಯಲ್ಲಾ – ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post