ರೋಹಿತ್ ಚಕ್ರತೀರ್ಥರ “ಬಲ್ಲರೆಷ್ಟು ಜನ ಬೀರಬಲ್ಲನ?” ಅಂಕಣ ಓದಿದ ಮೇಲೆ ಅಮರಚಿತ್ರ ಕಥೆಯಲ್ಲಿ ಓದಿದ ಕಥೆಯೊಂದು ನೆನಪಾಯಿತು. ಇದು ಅಕ್ಬರನ ಆಸ್ಥಾನಕ್ಕೆ ಬೀರಬಲ್ಲನ ಪ್ರವೇಶಕ್ಕೆ ಸಂಬಂಧಪಟ್ಟಿದ್ದು.
ಅಕ್ಬರನಿಗೆ ಪ್ರತಿದಿನ ಊಟದ ನಂತರ ವೀಳ್ಯೆ ತಿನ್ನುವ ಅಭ್ಯಾಸವಿರುತ್ತದೆ. ಒಂದು ದಿನ ಹೊಸದಾಗಿ ಸೇರಿದ ಸೇವಕನೊಬ್ಬನು ವೀಳ್ಯೆಯಲ್ಲಿ ಜಾಸ್ತಿ ಸುಣ್ಣ ಹಾಕಿ ಕೊಡುತ್ತಾನೆ. ಅದನ್ನು ತಿಂದ ಅಕ್ಬರನ ನಾಲಿಗೆ ಉರಿಯತೊಡಗುತ್ತದೆ. ಸಿಟ್ಟಾದ ಅಕ್ಬರ್ ಸೇವಕನಿಗೆ ಸಿಕ್ಕಾಪಟ್ಟೆ ಬಯ್ಯುತ್ತಾನೆ. “ಇನ್ನೊಂದು ಸಲ ಹೀಗೆ ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು” ಎಂಬ ಎಚ್ಚರಿಕೆ ಬೇರೆ.
ದುರ್ದೈವವಶಾತ್ ಕೆಲದಿನಗಳ ನಂತರ ಅದೇ ಸೇವಕನು ತಯಾರಿಸಿದ ವೀಳ್ಯದಿಂದ ಅಕ್ಬರನ ನಾಲಿಗೆ, ಗಂಟಲು ಮತ್ತೊಮ್ಮೆ ಉರಿಯುತ್ತವೆ. ಕೆಂಡಾಮಂಡಲವಾದ ಅಕ್ಬರ್ ಸೇವಕನಿಗೆ ಒಂದು ದೊಡ್ಡ ಡಬ್ಬಿ ಕೊಟ್ಟು “ತಕ್ಷಣ ಇದರ ತುಂಬ ಸುಣ್ಣವನ್ನು ತೆಗೆದುಕೊಂಡು ಬಾ” ಎಂದು ಆದೇಶಿಸುತ್ತಾನೆ.
ಅರಮನೆಯಲ್ಲಿ ಅಷ್ಟೊಂದು ಸುಣ್ಣವಿರದ ಕಾರಣ, ಸೇವಕನು ಹತ್ತಿರದ ಅಂಗಡಿಯೊಂದಕ್ಕೆ ಧಾವಿಸುತ್ತಾನೆ. “ಜಹಾಪನಾಂಗಾಗಿ ಈ ಡಬ್ಬದ ತುಂಬ ಸುಣ್ಣ ಕೊಡಿ ಬೇಗ” ಆತ ಅವಸರಿಸುತ್ತಾನೆ. ಅಚ್ಚರಿಗೊಂಡ ವರ್ತಕ ಡಬ್ಬದಲ್ಲಿ ಸುಣ್ಣ ತುಂಬುತ್ತಿರುವಾಗ, ಅಲ್ಲಿಯೇ ನಿಂತಿದ್ದ ಅಪರಿಚಿತನೊಬ್ಬನು ಕೇಳುತ್ತಾನೆ, ” ಜಹಾಪನಾಂರವರು ಇಷ್ಟೊಂದು ಸುಣ್ಣದಿಂದ ಏನು ಮಾಡುತ್ತಾರೆ?”
ಸೇವಕನು ಬೇಸರದಿಂದಲೂ ಕೊಂಚ ಹೆದರಿಕೆಯಿಂದಲೂ ತನಗೆ ಗೊತ್ತಿಲ್ಲವೆಂದು ಹೇಳಿದ. ಅಪರಿಚಿತನು ಅಷ್ಟಕ್ಕೆ ಬಿಡದೆ, ” ನಿನ್ನಿಂದ ಏನಾದರೂ ತಪ್ಪಾಗಿದೆಯಾ ” ಎಂದು ಕೇಳಿದ. ಸೇವಕನು ನಡೆದಿದ್ದನ್ನು ವಿವರಿಸಿದ. ಅಪರಿಚಿತನು ಮರುಕದಿಂದ ಸೇವಕನ ಹೆಗಲ ಮೇಲೆ ಕೈ ಹಾಕಿ ಹೇಳಿದ ” ನಿನಗೆ ಜೀವದ ಮೇಲೆ ಆಸೆಯಿದ್ದರೆ ಈ ಡಬ್ಬದ ತುಂಬ ತುಪ್ಪ ಕುಡಿದು ಅರಮನೆಗೆ ಹೋಗು.” ಆಶ್ಚರ್ಯ ಚಕಿತನಾದರೂ, ಅಪರಿಚಿತನ ಧ್ವನಿಯಲ್ಲಿನ ಗಾಂಭೀರ್ಯದಿಂದ ಪ್ರಭಾವಿತನಾದ ಸೇವಕನು ಅದರಂತೇ ನಡೆದ.
ಅರಮನೆಗೆ ಬಂದಾಗ, ಅಕ್ಬರ್ ಇನ್ನೂ ಸಿಟ್ಟಿನಲ್ಲಿಯೇ ಇದ್ದ. ಸೇವಕನನ್ನು ನೋಡಿದ ತಕ್ಷಣ ಹತ್ತಿರದಲ್ಲಿದ್ದ ದ್ವಾರಪಲಕರನ್ನು ಕರೆದು ಹೇಳಿದ, ” ಈ ಸುಣ್ಣವನ್ನೆಲ್ಲಾ ಇವನ ಗಂಟಲಿಗೆ ಸುರಿಯಿರಿ”. ಅಪ್ಪಣೆಯ ಪಾಲನೆಯಾಯಿತು. ಇನ್ನೂ ಚಡಪಡಿಸುತ್ತಿದ್ದ ಸೇವಕನನ್ನು ಅರಮನೆಯಿಂದ ಹೊರ ಹಾಕಲಾಯಿತು.
ಮೊದಲೇ ತುಪ್ಪ ಕುಡಿದಿದ್ದರಿಂದ, ಸೇವಕನು ಸುಣ್ಣವನ್ನೆಲ್ಲಾ ವಾಂತಿಮಾಡಿ ಬದುಕಿಬಿಟ್ಟ. ಕೊಂಚ ಸುಧಾರಿಸಿಕೊಂಡು ತನಗೆ ಸಲಹೆ ನೀಡಿದ ಅಪರಿಚಿತನನ್ನು ಹುಡುಕಿಕೊಂಡು ಹೊರಟ. ಆ ಅಪರಿಚಿತನು ಅದೇ ಅಂಗಡಿಯ ಹತ್ತಿರ ಕಾಯುತ್ತಿದ್ದ. ಸೇವಕನು ಅವನಿಗೆ ಧನ್ಯವಾದಗಳನ್ನು ಅರ್ಪಿಸಿದ ಹಾಗೂ ಮುಂದೇನು ಮಾಡಬೇಕೆಂದು ಕೇಳಿದ.
ಅಪರಿಚಿತನ ಸಲಹೆಯ ಪ್ರಕಾರ, ಸೇವಕನು ಮತ್ತೆ ಅರಮನೆಗೆ ಹೋಗಿ ಅಕ್ಬರನಲ್ಲಿ ಕ್ಷಮೆಯಾಚಿಸಿದ. ಅಷ್ಟೊಂದು ಸುಣ್ಣವನ್ನು ಕುಡಿದೂ ಬದುಕಿದವನನ್ನು ನೋಡಿ ಅಕ್ಬರನಿಗೆ ಆಶ್ಚರ್ಯ. ಅವನ ಮುಖಾಂತರ ಅಪರಿಚಿತನ ಬಗ್ಗೆ ತಿಳಿದು ತನ್ನ ಆಸ್ಥಾನಕ್ಕೆ ಕರೆಸಿದ. ಹೀಗೆ ಬಂದವನೇ ಬೀರಬಲ್.
ವಿ.ಸೂ. — ಈ ಕಥೆಯನ್ನು ಓದಿ ತುಂಬಾ ವರ್ಷಗಳಾಗಿವೆ. ಸಾಧ್ಯವಾದಷ್ಟು ನೆನಪಿಸಿಕೊಂಡು ಬರೆದಿದ್ದೇನೆ. ಹಾಗಾಗಿ ಮೂಲ ಅಮರಚಿತ್ರದ ಕಥೆಗೂ ಇದಕ್ಕೂ ಕೆಲ ವ್ಯತ್ಯಾಸಗಳಿರಬಹುದು.
-ಉಷಾ ಜೋಗಳೇಕರ್
Facebook ಕಾಮೆಂಟ್ಸ್