ಮನುಷ್ಯನಿಗೆ ಆಸೆ, ಆಮಿಷಗಳು ಜಾಸ್ತಿ. ಎಲ್ಲ ಇದ್ದರೂ ಅತೃಪ್ತಿ. ಮತ್ತೇನಕ್ಕೋ ತುಡಿತ. ಆಸೆ,ಹಂಬಲಗಳಿಗೆ ಕೊನೆಯಿಲ್ಲ. ಬೇಕು, ಬೇಕು ಅನ್ನೋ ಬಯಕೆಗಳಿಗೆ ಪೂರ್ಣ ವಿರಾಮವಿಲ್ಲ ಎಲ್ಲಾ ಇದ್ದರೂ, ಇನ್ನೇನೋ ಬೇಕು ಅನ್ನೋ ತುಡಿತದಲ್ಲೇ ಬದುಕು ಮುಂದುವರೆಯುತ್ತಿರುತ್ತದೆ.
ಹೊತ್ತಿಗೆ ತುತ್ತು, ಮೈ ತುಂಬಾ ಬಟ್ಟೆ ಇದ್ದವನಿಗೆ ಮಧ್ಯಮ ವರ್ಗದ ಬದುಕಿನ ಆಸೆ. ಮನೆಯಲ್ಲಿ ಟಿವಿ,ಫ್ರಿಡ್ಜ್ ಇಟ್ಟುಕೊಂಡವನಿಗೆ ಎಸಿ ರೂಮ್,ಐಷಾರಾಮಿ ಕಾರನ್ನು ಕೊಳ್ಳುವ ಕನಸು, ಕಾರು,ಬಂಗಲೆ, ಕೋಟಿ ಕೋಟಿ ಇದ್ದವನಿಗೆ ಮತ್ತೇನೋ ಬೇಕು. ಆಸೆಗಳಿಂದಲೇ ನಿರ್ಮಾಣಗೊಂಡ ಈ ಜಗತ್ತಿನಲ್ಲಿ ಎಲ್ಲರೂ ಅತೃಪ್ತರೇ..ಎಲ್ಲ ಇದ್ದರೂ ಯಾವುದೂ ಇಲ್ಲದಂತೆ ಕೊರಗುವವರು.
ಕೈಯಲ್ಲೊಂದು ಮೊಬೈಲ್ ಇದ್ದರೆ, ಇನ್ನಷ್ಟು ಬೆಲೆ ಬಾಳುವ ಮೊಬೈಲ್ ಖರೀದಿಸುವ ಆಸೆ. ಬೆಲೆ ಬಾಳುವ ಬಟ್ಟೆ, ಆಭರಣಗಳ ಮೇಲೆ ಪ್ರೀತಿ. ಅಗತ್ಯವೇ ಇಲ್ಲದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವ್ಯಾಮೋಹ. ಪುಟ್ಟ ಮನೆಯಿದ್ದರೆ, ಇನ್ನೊಂದು ಮಹಡಿ ಕಟ್ಟುವ ಕನಸು. ಬೈಕ್ ಇದ್ದರೆ ಕಾರು ಕೊಳ್ಳುವ ಬಯಕೆ. ಲೋನ್‍ಗಳಿಗಾಗಿ ಬ್ಯಾಂಕ್‍ಗಳಿಗೆ ಅಲೆದಾಟ. ಬೇಕಿದ್ದನ್ನು ಕೊಳ್ಳಲು ಹಣ ಹೊಂದಿಸುವ ಧಾವಂತ, ಯೋಚನೆ, ಆಲೋಚನೆ, ಚಿಂತನೆಯಲ್ಲೇ ಬದುಕು ಮುಗಿದು ಬಿಡುತ್ತದೆ.
ಸುದೀರ್ಘ ಬದುಕಿನಲ್ಲಿ ಎಲ್ಲರೂ ಟೆನ್ಶನ್,ತಲೆನೋವಿನಲ್ಲಿ ಬಳಲುವವರೇ. ಇಲ್ಲಿ ಯಾರೂ ಸುಖಿಗಳಲ್ಲ. ತಾವೇ ನಿರ್ಮಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡ ಒದ್ದಾಡುವವರು.ಕೊನೆಯಿಲ್ಲದ ಆಸೆಯ ಹಿಂದೆ ಬಿದ್ದು ಕಣ್ಣೀರಾಗುವವರು.
ಆದ್ರೆ ಪ್ರಪಂಚದಲ್ಲಿ ಇವೆಲ್ಲವನ್ನೂ ಬಿಟ್ಟು ಪ್ರಪಂಚದ ಪರಮಸುಖಿಗಳಿದ್ದಾರೆ. ಆಫೀಸಿಗೆ ಹೋಗಬೇಕಾದರೆ ದಿನನಿತ್ಯ ಶ್ರೀನಗರದಿಂದ ಶಿವಾಜಿನಗರ ಕಡೆ ಸಂಚರಿಸುವಾಗ ಇಂತಹ ಪರಮಸುಖಿಗಳನ್ನು ನೋಡಿದ್ದೇನೆ. ಲಾಲ್‍ಬಾಗ್ ರೋಡ್‍ನ ಫ್ಲೈಓವರ್ ಕೆಳಗಡೆ ಪ್ರಪಂಚವನ್ನೇ ಮರೆತು ಮಲಗಿರುತ್ತಾರೆ. ಬಿಸಿಲು, ಮಳೆಯಿಂದ ರಕ್ಷಿಸಲು ಮೇಲೆ ಸಣ್ಣ ಸೂರಿದೆ. ಹೊದ್ದುಕೊಳ್ಳಲು ಹರಿದು ಹೋದ ಹೊದಿಕೆ. ಕಿತ್ತು ಬರುವ ಬೆವರಿಗೆ ಜನ್ರು ಬಸವಳಿತೀದ್ರೆ, ಸುರಿವ ಮಳೆಗೆ ಮನೆ ಸೇರಿಕೊಳ್ಳುವ ಧಾವಂತದಲ್ಲಿದ್ರೆ, ಇವ್ರಿಗೆ ಅದ್ಯಾವ ಗೊಡವೆಯೂ ಇಲ್ಲ.
ಬಸ್ಸಿನಲ್ಲಿ ಕುಳಿತು ಇದನ್ನೆಲ್ಲಾ ನೋಡುವವರಿಗೆ ನೂರು ಟೆನ್ಶನ್. ಆಫೀಸಿಗೆ ಲೇಟಾದ್ರೆ ಬಾಸ್ ಎದುರು ನಿಂತು ಬೈಗುಳ ಕೇಳ್ಬೇಕಲ್ಲಾ. ಸ್ಯಾಲರಿ ಬರೋಕೆ ಇನ್ನೂ ಒಂದು ವಾರವಿದೆ ಅಲ್ಲಿಯ ವರೆಗೆ ಏನ್ ಮಾಡೋದು. ಹೊಸ ಮೊಬೈಲ್ ತಗೋಳ್ ಪ್ಲಾನ್ ಈ ಮಂತ್ ಕೂಡಾ ಆಗಲ್ಲ. ಸೇವಿಂಗ್ ಕಥೆಯಂತೂ ದೂರದ ಮಾತು. ಹೀಗೆ ಆದ್ರೆ ಮುಂದೆ ಹೀಗೆ. ಮನದಲ್ಲಿ ಮೂಡುವ ನೂರು ಆಲೋಚನೆಗಳಿಗೆ ತಲೆನೋವು ಬಂದರೂ ಉತ್ತರವಿಲ್ಲ.
ಆದ್ರೆ, ವಿಳಾಸವೇ ಇಲ್ಲದ ಆ ದಾರಿಹೋಕರು ಪ್ರಪಂಚದ ಪರಮಸುಖಿಗಳು. ಹಾಕಿಕೊಳ್ಳೋಕೆ ಕಲರ್‍ಫುಲ್ ಬಟ್ಟೆ ಇಲ್ಲದಿದ್ರೂ, ಕೈಯಲ್ಲಿ ಮೊಬೈಲ್ ಫೋನ್ ಇಲ್ಲದಿದ್ರೂ ಇವ್ರಿಗೆ ಅದ್ರ ಆಸೆಯಿಲ್ಲ. ಬಂಗಲೆ, ಕಾರಿನ ಗೊಡವೆಯಿಲ್ಲ. ಬಿರಿಯಾನಿ,ಬರ್ಗರ್ ತಿನ್ನುವ ಬಯಕೆಯಿಲ್ಲ. ಹೊತ್ತಿಗೆ ತಂಗಳು ಅನ್ನ ಸಿಕ್ಕಿದ್ರೂ ಸಾಕು ಅವ್ರಿಗೆ ಖುಷಿ. ಜನ್ರು ಅಯ್ಯೋ ಪಾಪ ಅಂದ್ರೂ ಅವ್ರು ತಲೆಕೆಡಿಸಿಕೊಳ್ಳುವವರಲ್ಲ.
ಯಾರು ಏನ್ ಹೇಳ್ತಾರೋ ಏನೋ ಅಂತ ಹೆದರಿಕೊಂಡೇ ಬದುಕುವ ಜನ್ರು ಎಲ್ಲರೂ. ಅಂಥಹಾ ಡ್ರೆಸ್ ಹಾಕ್ಕೊಂಡ್ ಹೋದ್ರೆ ಏನ್ ಹೇಳ್ತಾರೋ. ಇಂಥಹಾ ಮೊಬೈಲ್ ಇಟ್ಕೊಂಡ್ರೆ ಏನಂತಾರೋ ಎಲ್ಲವೂ ಪ್ರಶ್ನೆಗಳೇ. ಆದ್ರೆ ಇವ್ರಿಗೆ ಯಾವ ಕಮೆಂಟ್, ಕಾಂಪ್ಲಿಮೆಂಟ್ಸ್’ನಿಂದಲೂ ಏನೂ ಆಗಬೇಕಿಲ್ಲ.
ಇವತ್ತಿನ ದಿನಕ್ಕೆ ಅವ್ರು ಪರಮಸುಖಿಗಳು. ನಾಳಿನ ಚಿಂತೆಯಿಲ್ಲ. ಮತ್ತಿನ ದಿನಗಳ ಬಗ್ಗೆ ಗೊತ್ತಿಲ್ಲ. ಏನೇನೋ ಬೇಕು ಅನ್ನೋ ಆಸೆಯಿಲ್ಲ. ಯಾವುದೋ ಸಿಕ್ಕಿಲ್ಲ ಅಂತ ಕೊರಗಿಲ್ಲ. ಅವರದೇ ಪುಟ್ಟ ಪ್ರಪಂಚದಲ್ಲಿ ಖುಷಿಗೆ ಕೊರತೆಯಿಲ್ಲ. ಎಲ್ಲರಿಂದ ತಿರಸ್ಕತಗೊಂಡರೂ ಅವರಿಗಿರುವಷ್ಟು ಖುಷಿ ಬಹುಶಃ ಪ್ರಪಂಚದಲ್ಲಿ ಯಾರಲ್ಲೂ ಸಿಗಲಿಕ್ಕಿಲ್ಲ.
Facebook ಕಾಮೆಂಟ್ಸ್