X

ನೋವಿನಿಂದಲೇ ಕರುಣೆ ಹುಟ್ಟುವುದಂತೆ…

ಕ್ಯಾನ್ಸರ್ ಎನ್ನುವುದು ಜಗತ್ತಿನಲ್ಲಿರುವ ಭಯಾನಕ ಖಾಯಿಲೆಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡುತ್ತಾ, ಜೀವಕೋಶಗಳನ್ನ ಸರಿಪಡಿಸಲಾಗದಷ್ಟು, ಗುಣಪಡಿಸಲಾಗದಷ್ಟರ ಮಟ್ಟಿಗೆ ಹಾಳು ಮಾಡಿ ಬಿಟ್ಟಿರುತ್ತದೆ. ಹಾಗಂತ ಇವುಗಳಿಗೆ ಹೊರತಾದ ಘಟನೆಗಳೇ ಇಲ್ಲ ಎಂದೇನಲ್ಲ. ಎಷ್ಟೋ ಜನ ತಮ್ಮ ಭರವಸೆ, ಆತ್ಮವಿಶ್ವಾಸ, ಜೀವನಪ್ರೀತಿಯಿಂದ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಮೀರಿದ್ದಾರೆ. ಅಂಥವರಲ್ಲಿ ಒಬ್ಬಳು ಜೂಲಿಯ.

   ಜೂಲಿಯ ತನ್ನ ತಂದೆಯನ್ನು ಕಳೆದುಕೊಂಡಾಗ ಆಕೆಗೆ ಕೇವಲ ೧೦ವರ್ಷ. ಆಕೆಯ ತಂದೆಗೆ ಕ್ಯಾನ್ಸರ್ ಆಗಿತ್ತು. ಆ ೧೦ ವರ್ಷದ ಪುಟ್ಟ ಹುಡುಗಿ ಪ್ರತಿದಿನ ತನ್ನ ತಂದೆಯನ್ನು ರೋಗದಿಂದ ಬಳಲುತ್ತಿರುವುದನ್ನ ನೋಡಿದ್ದಳು. ಕ್ಯಾನ್ಸರ್ ಎಂದರೇನು ಅಂತೆಲ್ಲಾ ಅರ್ಥವಾಗದಿದ್ದರೂ, ಅದೊಂದು ರೀತಿಯ ಭಯಾನಕ ಖಾಯಿಲೆ, ಸಾಕಷ್ಟು ನೋವುಂಟು ಮಾಡುವ ಖಾಯಿಲೆ ಎನ್ನುವುದನ್ನ ಮಾತ್ರ ಅರಿತಿದ್ದಳು. ಕ್ಯಾನ್ಸರ್ ಎನ್ನುವುದು ತನ್ನ ತಂದೆಯನ್ನು ತನ್ನಿಂದ ದೂರ ಮಾಡಿದೆ ಎನ್ನುವುದು ಆಕೆಯ ಮನಸಲ್ಲಿ ಅಚ್ಚೊತ್ತಿತ್ತು. ಅದಾಗಿ ಕೆಲವೇ ದಿನಗಳಲ್ಲಿ, ಜೂಲಿಯಾಗೆ ಲ್ಯುಕೇಮಿಯಾ ಉಂಟಾಗಿತ್ತು. ಆಕೆಯ ತಾಯಿ ಹಾಗೂ ಉಳಿದ ಕುಟುಂಬದವರು ಆಕೆಯಿಂದ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಆಕೆಗೆ ಮಾನಸಿಕವಾಗಿ ಯಾವುದೇ ಆಘಾತವಾಗದಿರಲಿ ಎಂಬ ಕಾರಣಕ್ಕೆ…! ಆದರೆ ಜೂಲಿಯಾಗೆ ತನಗೇನೋ ಆಗಿದೆ ಎಂಬುದು ಮಾತ್ರ ತಿಳಿದಿತ್ತು. ಅದರ ಜೊತೆಗೆ ತನ್ನ ಮನೆಯವರು ತನ್ನ ಬಗ್ಗೆ ಏನೋ ಗಂಭೀರವಾದದ್ದನ್ನು ಮಾತನಾಡುತ್ತಿದ್ದಾರೆ, ತನ್ನಿಂದ ಮುಚ್ಚಿಡುತ್ತಿದ್ದಾರೆ ಎಂಬುದು ಕೂಡ ತಿಳಿದಿತ್ತು. ಅದು ಆಕೆಯ ಭಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಎಷ್ಟೋ ಬಾರಿ ಇದೆಲ್ಲದರಿಂದ ಓಡಿ ಹೋಗಬೇಕೆನಿಸುತ್ತಿತ್ತು. ಆಕೆಗೆ ನೋವಾಗುತ್ತಿತ್ತು. ಅಲ್ಲದೇ ಅದು ಕಡಿಮೆಯಾಗುವುದರ ಬದಲು ದಿನೇ ದಿನೇ ಹೆಚ್ಚುತ್ತಿತ್ತು. ಒಂದು ದಿನ ಆಕೆ ತಲೆಬಾಚಿಕೊಳ್ಳುತ್ತಿರುವಾಗ, ಕೂದಲ ರಾಶಿಯೇ ಕೆಳಗೆ ಬಿದ್ದಿತ್ತು. ಇದೆಲ್ಲವೂ ಆಕೆಯ ಭಯವನ್ನು ಇಮ್ಮಡಿಗೊಳಿಸಿತ್ತು. ಕೊನೆಗೂ ಆಕೆಯ ತಾಯಿ ಕ್ಯಾನ್ಸರ್ ವಿಷಯವನ್ನು ಹೇಳಲೇಬೇಕಾಯಿತು. ಆಕೆಗೆ ಕ್ಯಾನ್ಸರ್ ಬಗ್ಗೆ ಹೆಚ್ಚೇನೋ ಅರ್ಥವಾಗಲಿಲ್ಲ. ಬದಲಾಗಿ ಅದು ತನ್ನ ತಂದೆಯನ್ನು ತನ್ನಿಂದ ದೂರ ಮಾಡಿದ್ದು, ಸದ್ಯ ತನ್ನನ್ನೂ ಆ ಭಯ ತರಿಸುವ ಸ್ಥಿತಿ ಆವರಿಸಿದೆ ಎಂದಷ್ಟೇ ಅರಿತಳು. ಆದರೆ ಕ್ಯಾನ್ಸರ್ ಆಕೆಯನ್ನು ಆಕೆಯ ತಾಯಿಯಿಂದ ದೂರ ಮಾಡಲಿಲ್ಲ. ಜೂಲಿಯ ಗುಣಮುಖಳಾದಳು. ಮತ್ತೆ ಶಾಲೆಗೆ ಹೋಗಲಾರಂಭಿಸಿದಳು. ಆಕೆಯ ಬದುಕು ಸುಸೂತ್ರವಾಯಿತು.

   ಆದರೆ ನೀವಂದುಕೊಳ್ಳುತ್ತಿರುವಂತೆ ಕಥೆ ಅಲ್ಲಿಗೇ ಮುಗಿಯಲಿಲ್ಲ. ಜೂಲಿಯ ಒಂದು ದಿನ ಶಾಲೆಯಲ್ಲಿ ಬೇಸ್’ಬಾಲ್ ಆಡುತ್ತಿರುವಾಗ ಬಾಲ್’ನಿಂದ ಆಕೆಯ ಮಂಡಿಗೆ ಬಲವಾದ ಪೆಟ್ಟು ಬಿದ್ದು ಆಕೆ ಅಲ್ಲೇ ಪ್ರಜ್ಞೆ ಕಳೆದುಕೊಂಡಳು. ಆಕೆಯನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸಿಲಾಯಿತು. ಹಲವು ಟೆಸ್ಟ್’ಗಳ ನಂತರ ತಿಳಿದುಬಂದಿದ್ದು ಆಕೆಗೆ ಆಸ್ಟಿಯೋಸರ್ಕೋಮ ಉಂಟಾಗಿದೆ ಎಂದು. ಕ್ಯಾನ್ಸರ್ ಮತ್ತೆ ಆಕೆಯ ಬದುಕಲ್ಲಿ ಕಾಲಿಟ್ಟಿತ್ತು…!! ಆಗ ಆಕೆಗೆ ಕೇವಲ ೧೩ ವರ್ಷ. ಆಕೆಗೆ ಮತ್ತೆ ಕೀಮೋಥೆರಪಿ ಆರಂಭಿಸಲಾಯಿತು. ಮೊದಲು ಡ್ರಿಪ್’ನೊಂದಿಗೆ ಕೊಡುತ್ತಿದ್ದರು, ದಿನ ಹೋದಂತೆ ಶಕ್ತಿಗುಂದುತ್ತಿದ್ದ ಆಕೆಯನ್ನು ನೋಡಿ, ಹೃದಯದ ಬಳಿ ಒಂದು ಸಣ್ಣ ಪೋರ್ಟ್ ಮಾಡಿ ಅಲ್ಲಿಂದ ನೀಡಲಾಯಿತು.

ಜೂಲಿಯಾ ತನ್ನ ಪರಿಸ್ಥಿತಿಯಲ್ಲಿ ಯಾವುದೇ ಆಟೋಟಗಳಲ್ಲಿ ಭಾಗವಹಿಸುವಂತಿರಲಿಲ್ಲ. ಇದು ಆಕೆಯನ್ನ ನಿರಾಶೆಗೊಳಿಸಿತ್ತು. ಇದೆಲ್ಲಕ್ಕಿಂತ ಹೆಚ್ಚು ಹತಾಶೆಯುಂಟಾಗಿದ್ದು, ಡಾಕ್ಟರ್ ಆಕೆಯ ಕಾಲನ್ನು ತೆಗೆಯಬೇಕು ಎಂದಾಗ..! ಆಕೆ ಇನ್ನೂ ೧೩ ವರ್ಷದ ಹುಡುಗಿ, ಈ ವಿಷಯ ಆಕೆಗೆ ದೊಡ್ಡ ಆಘಾತವನ್ನೇ ನೀಡಿತ್ತು. ಆಕೆ ತನ್ನೆಲ್ಲಾ ಭರವಸೆಗಳನ್ನ ಕಳೆದುಕೊಂಡಿದ್ದಳು..

   ಆಕೆಯಲ್ಲಿ ಮತ್ತೆ ಧೈರ್ಯವನ್ನು, ಭರವಸೆಯನ್ನ ತುಂಬಿದ್ದು ಆಕೆಯ ತಂದೆ..!! ನಿಜ ಆಕೆಯ ತಂದೆ ಆಕೆಯ ಜೊತೆಗಿರಲಿಲ್ಲ. ಆದರೆ ಅವರ ಬದುಕು ಈಕೆಗೆ ಸ್ಪೂರ್ತಿಯಗಿತ್ತು. ಬದುಕಿನ ಕೊನೆ ಕ್ಷಣದವರೆಗೂ ಧೃತಿಗೆಡದೆ ಕ್ಯಾನ್ಸರ್ ಎಂಬ ಸವಾಲನ್ನ ಎದುರಿಸಿದ್ದನ್ನ ನೆನಪು ಮಾಡಿಕೊಂಡಿದ್ದಳು. ಆಕೆಯ ತಂದೆಯ ಆ ಗುಣವೇ ಆಕೆಯಲ್ಲಿ ಮತ್ತೆ ಇದೆಲ್ಲವನ್ನು ಎದುರಿಸುವ ಎದೆಗಾರಿಕೆಯನ್ನ ಹುಟ್ಟು ಹಾಕಿದ್ದು.  ಕೊನೆಗೂ ಆ ಧೈರ್ಯ, ಸ್ಪೂರ್ತಿ ಆಕೆಯನ್ನು ಸೋಲಲು ಬಿಡಲಿಲ್ಲ.

       ಜೂಲಿಯಾಗೆ ಈಗ ೨೫ ವರ್ಷ, ಸೈಕಾಲಜಿಯಲ್ಲಿ ಪದವಿಯನ್ನು ಪೂರೈಸಿ ಸ್ಟೂಡೆಂಟ್ ಸೈಕಾಲಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಜೊತೆಗೆ ಕ್ಯಾನ್ಸರ್’ನಿಂದ ಬಳಲುತ್ತಿರುವ ಮಕ್ಕಳಿಗೆ ಧೈರ್ಯ ಹಾಗೂ ಭರವಸೆಯನ್ನ ತುಂಬುತ್ತಾ, ಅವರಿಗೆ ಸಹಾಯ ಮಾಡುತ್ತಿದ್ದಾಳೆ. ಜೂಲಿಯಾಗೆ ಈ ಎಲ್ಲಾ ಕಾರ್ಯಗಳಲ್ಲಿ ಆಕೆಯ ತಾಯಿ ಹಾಗೂ ಇಬ್ಬರು ಸಹೋದರರು ಬೆನ್ನೆಲುಬಾಗಿ ನಿಂತಿದ್ದಾರೆ.

    ನೋವು ಎನ್ನುವುದು ಕರುಣೆಯನ್ನ ಹುಟ್ಟು ಹಾಕುತ್ತದೆಯಂತೆ. ಹಾಗಂತ ಮಾಯ ಕ್ಲಿನಿಕ್’ನ ಡಾಕ್ಟರ್ ಅಮಿತ್ ಸೂದ್ ಹೇಳಿದ್ದಾರೆ. ಮೈಂಡ್ ಅಂಡ್ ಬಾಡಿ ಎಕ್ಸ್’ಪರ್ಟ್ ಆಗಿ ಕೆಲಸ ಮಾಡುತ್ತಿರುವ ಅಮಿತ್ ನೋವು ಹಾಗೂ ಕರುಣೆಯ ಬಗ್ಗೆ ಬರೆಯುತ್ತಾ ಈ ಮಾತನ್ನ ಹೇಳಿದ್ದಾರೆ. ಜೂಲಿಯಾ ಅದಕ್ಕೆ ಒಬ್ಬ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾಳೆ. ತನ್ನ ಬಾಲ್ಯದಲ್ಲಿ ತಾನು ಅನುಭವಿಸಿದ ನೋವುಗಳ ಪರಿಣಾಮವೇ ಆಕೆ ಇಂದು ಎಷ್ಟೋ ಮಕ್ಕಳಿಗೆ ಬೆನ್ನೆಲುಬಾಗಿ, ಅವರ ನೋವನ್ನ ಕಡಿಮೆ ಮಾಡುವುದಕ್ಕಾಗಿ ಕೆಲಸ ಮಾಡುತ್ತಿದ್ದಾಳೆ. ಅವರನ್ನು ಆದಷ್ಟು ಸಂತೋಷವಾಗಿಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾಳೆ.

ಹಾಗಂತ ಯಾವಾಗಲೂ ಹೀಗೆಯೇ ಆಗುತ್ತದೆ ಎಂದಲ್ಲ. ಡಾಕ್ಟರ್ ಅಮಿತ್ ಸೂದ್ ಹೇಳುವಂತೆ ನೋವು ಹಾಗೂ ಕಷ್ಟಗಳ ಪರಿಣಾಮ ಎರಡು ರೀತಿಯಲ್ಲಿರುತ್ತದೆ. ಕೆಲವೊಮ್ಮೆ ಅವು ಜೀವನ ಪರ್ಯಂತ ನೋವನ್ನುಂಟು ಮಾಡುವಂತಹ, ಮನಸ್ಸಿನಿಂದ ಅಳಿಸಲಾಗದಂತಹ ಕಲೆ ಆಗಿಬಿಡುತ್ತದೆ. ನಮ್ಮ ಭವಿಷ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಮ್ಮಲ್ಲಿನ ಭರವಸೆಯನ್ನ ತೆಗೆದುಹಾಕಿ, ನಂಬಿಕೆಗಳನ್ನ ಘಾಸಿ ಮಾಡಿ ಜೀವನದುದ್ದಕ್ಕೋ ಭಯಭೀತರಾಗಿರುವಂತೆ ಮಾಡಿ ಬಿಡುತ್ತದೆ. ಜೀವನವಿಡೀ ಸಂತಸವೇ ಇಲ್ಲದೇ ಕಾಲ ಕಳೆಯುವಂತಾಗುತ್ತದೆ. ಇದನ್ನೇ, ಪೋಸ್ಟ್ ಟ್ರೌಮ್ಯಾಟಿಕ್ ಸ್ಟ್ರೆಸ್ , ಕ್ರೋನಿಕ್ ಸ್ಟ್ರೆಸ್, ಬ್ಯಾಟಲ್ ಫ್ಯಾಟಿಗ್ ಅಂತೆಲ್ಲಾ ಕರೆಯುತ್ತಾರೆ.

  ಇದೇ ನೋವುಗಳು, ಕಷ್ಟಗಳು ಇನ್ನೊಂದು ರೀತಿಯಲ್ಲಿ ಕೂಡ ಪರಿಣಮಿಸುತ್ತದೆ. ಜಗತ್ತಿನೆಡೆಗಿನ. ಬದುಕಿನೆಡೆಗಿನ ನಮ್ಮ ದೃಷ್ಟಿಕೋನ ಬದಲಾಗುತ್ತದೆ, ತಾಳ್ಮೆ ಹಾಗೂ ಕರುಣೆ ಹೆಚ್ಚುತ್ತದೆ. ಸಂಬಂಧಗಳು ಸುಂದರವಾಗುತ್ತದೆ,ಪ್ರಾಮುಖ್ಯತೆಗಳು ಬದಲಾಗುತ್ತದೆ, ಹೊಸ ಹೊಸ ಅವಕಾಶಗಳು ಸಿಗುತ್ತದೆ. ಆ ನೋವುಗಳಿಲ್ಲದ ಕ್ಷಣಗಳು ಎಷ್ಟು ಅಮೂಲ್ಯ ಎಂದು ಅರಿವಾಗತೊಡಗುತ್ತದೆ. ಆ ನೋವುಗಳನ್ನು ದಾಟಿ ಬಂದವನು ಮತ್ತಷ್ಟು ಗಟ್ಟಿಗೊಳ್ಳುತ್ತಾನೆ. ಮುಂಬರುವ ಕಷ್ಟಗಳು ಆತನನ್ನ ಮತ್ತೆ ಆ ಬೇಸ್’ಲೈನ್’ಗೆ ತಳ್ಳುವುದಿಲ್ಲ. ಆತ ಅದನ್ನ ಮೀರಿ ಬಂದಿರುತ್ತಾನೆ! ಕೆಲವರು ಇದನ್ನ ಪೋಸ್ಟ್ ಟ್ರೌಮ್ಯಾಟಿಕ್ ಗ್ರೋತ್ ಎನ್ನುತ್ತಾರೆ.

    ಹಾಗಾದರೆ ನೋವುಗಳು ನಮ್ಮ ಬೆಳವಣಿಗೆಗೆ ಕಾರಣವಾ? ಎಂದರೆ ಅದಕ್ಕೆ ತುಂಬಾ ಸುಂದರವಾಗಿ ಉತ್ತರ ಕೊಡುತ್ತಾರೆ ಅಮಿತ್. ಕಷ್ಟಗಳು ನಮ್ಮೊಳಗಿರುವ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಂತೆ, ಒಂದು ಉತ್ತಮ ದೃಷ್ಟಿಕೋನ ಬೆಳೆಸಿಕೊಳ್ಳುವಂತೆ  ನಮ್ಮನ್ನ ಬಡಿದೆಬ್ಬಿಸುತ್ತೆ. ಆದರೆ ಅದನ್ನ ನಾವು ಆಯ್ಕೆ ಮಾಡಿಕೊಳ್ಳುತ್ತೇವೋ ಇಲ್ಲವೋ ಎನ್ನುವುದು ನಮಗೇ ಬಿಟ್ಟಿದ್ದು. ಜೂಲಿಯಾ ಅದನ್ನ ಆಯ್ಕೆ ಮಾಡಿಕೊಂಡಳು. ಬದುಕಿನೆಡೆಗಿನ ತನ್ನ ದೃಷ್ಟಿಕೋನವನ್ನು ಬದಲಾಯಿಸಿ, ಎಲ್ಲವನ್ನು ಎದುರಿಸುವ ತನ್ನ ಶಕ್ತಿಯನ್ನ ಕಂಡುಕೊಂಡಳು.

ನಾನು ನೋಡಿದ ಹಾಗೂ ಕೇಳಿದ ಸಾಕಷ್ಟು ಜನ ಸರ್ವೈವರ್ಸ್ ಕೂಡ ಅದನ್ನೇ ಆಯ್ಕೆ ಮಾಡಿಕೊಂಡರು. ಕಷ್ಟಗಳು ಬಂದಾಗ ಅದನ್ನ ನೋಡುವ ರೀತಿಯನ್ನ ಬದಲಾಯಿಸಿಕೊಂಡರು. ಹಾಗಂತ ಎಲ್ಲರೂ ಹಾಗಿಲ್ಲ. ಕೆಲವರು ಆ ಅವಕಾಶವನ್ನು ಆಯ್ಕೆ ಮಾಡಿಕೊಳ್ಳದೇ, ತಮ್ಮ ಮನಸ್ಸು, ಬದುಕಲ್ಲಿ ಅದೊಂದು ಕಲೆಯಾಗಿ ಉಳಿಯುವಂತಾಗಿದೆ.

ಅಮಿತ್ ಸೂದ್ ಹೇಳುವಂತೆ ಕರುಣೆ ಹುಟ್ಟುವುದು ನೋವಿನಿಂದಂತೆ. ಮೊದಲು ಈ ಕರುಣೆ ನಮ್ಮಂತೆಯೇ ನೋವನುಭವಿಸಿದವರಿಗೆ ಮಾತ್ರ ಸೀಮಿತವಾಗಿದ್ದು, ನಂತರ ಅದನ್ನ ಮೀರಿ ಎಲ್ಲರಿಗೂ ನೀಡುವಂತಾಗುತ್ತದೆಯಂತೆ, ನೋವನ್ನುಂಟು ಮಾಡಿದವರ ಮೇಲೂ ಕರುಣೆ ತೋರಿಸುವಂತಹ ಸ್ಥಿತಿ ತಲುಪುತ್ತಾರಂತೆ.

ಅದೇನೇ ಇರಲಿ, ನಾವು ನೋವನುಭವಿಸಿದ್ದರೆ ಮಾತ್ರ ಇನ್ನೊಬ್ಬರ ನೋವು ಅರ್ಥ ಮಾಡಿಕೊಳ್ಳುವ ಸ್ಥಿತಿ ಕಡಿಮೆಯಾಗಿ. ನೋವೇ ಇಲ್ಲದೇ ನಮ್ಮ ಹೃದಯದಲ್ಲಿ ಕರುಣೆ ಹುಟ್ಟುವ ದಿನ ಬೇಗ ಬರಲಿ ಎಂದು ಆಶಿಸೋಣ. ನಮ್ಮಲ್ಲಿನ ಆ ಕರುಣೆ ಹೆಚ್ಚೆಚ್ಚು ಜನರಿಗೆ ಸಹಾಯ ಒದಗಿಸುತ್ತ, ಅವರ ಬದುಕಿನಲ್ಲಿ ಬದಲಾವಣೆಯನ್ನ, ಸಂತಸವನ್ನ ತರುವಂತಾಗಲಿ. ಕ್ಯಾನ್ಸರ್’ಗೆ ಒಳಗಾಗಿರುವ ಮಕ್ಕಳ ಬಾಳಲ್ಲಿ ಮಂದಹಾಸ ತರಲು ಪ್ರಯತ್ನಿಸುತ್ತಿರುವ ಜೂಲಿಯಾ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ…!!

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post