ದೇವೇಂದ್ರ ಜಜೋರಿಯಾ, ಮೊನ್ನೆ ರಿಯೋದಲ್ಲಿ ಜಾವಲಿನ್’ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ೨೦೦೪ರ ಒಲಂಪಿಕ್’ನಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಅವರು ೧೨ ವರ್ಷಗಳ ನಂತರ ಮತ್ತೆ ಚಿನ್ನ ಗೆದ್ದು, ಎರಡು ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ೨೦೦೪ರಲ್ಲಿ ೬೨.೧೫ಮೀ ದೂರ ಎಸೆದು ವಿಶ್ವದಾಖಲೆ ಮಾಡಿದ್ದ ಇವರು ಈ ಬಾರಿ ೬೩.೯೭ಮೀ ನೊಂದಿಗೆ ಹೊಸ ದಾಖಲೆ ಬರೆದಿದ್ದಾರೆ.
ರಾಜಸ್ಥಾನದ ದೇವೇಂದ್ರ ಜಜಾರಿಯಾ ಅವರಿಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಬಹಳ ಆಸಕ್ತಿಯಿತ್ತು. ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ಗೆಳೆಯರೊಂದಿಗೆ ಹೊರಗೆ ಆಟವಾಡುತ್ತಾ ಇದ್ದಾಗ, ಆಕಸ್ಮಿಕವಾಗಿ ೧೧,೦೦೦ ವೋಲ್ಟ್’ನ ವಿದ್ಯುತ್ ಕೇಬಲ್’ನ ಸಂಪರ್ಕಕ್ಕೆ ಬಂದು ಬಿಟ್ಟಿದ್ದರು. ತೀವ್ರತರವಾದ ಸುಟ್ಟಗಾಯಗಳಾಗಿದ್ದ ದೇವೇಂದ್ರ ಅವರು ಆ ರಾತ್ರಿಯನ್ನು ಕಳೆಯುವುದು ಕಷ್ಟವೆಂದೇ ಭಾವಿಸಿದ್ದರು. ಆದರೆ ಅವರ ಮನೋಸ್ಥೈರ್ಯ ಅವರನ್ನು ಅಂದು ಬದುಕಿಸಿದ್ದಲ್ಲದೇ, ಇಂದು ವಿಶ್ವ ದಾಖಲೆ ಬರೆಯುವಂತೆ ಮಾಡಿದೆ.
ತಮ್ಮ ಅಪಘಾತದಿಂದ ಸಂಪೂರ್ಣ ಗುಣಮುಖರಾದ ನಂತರ ತಮ್ಮ ಒಂದು ಕೈಯ್ಯನ್ನು ಕಳೆದುಕೊಂದಿದ್ದರೂ ಕೂಡ ಅವರು ಜಾವಲಿನ್ ಎಸತದಲ್ಲಿ ನಿರಂತರ ಪರಿಶ್ರಮ ಮಾಡಲಾರಂಭಿಸಿ, ೧೦ನೇ ತರಗತಿಯಲ್ಲಿದ್ದಾಗ ಜಿಲ್ಲಾ ಮಟ್ಟದ ಜಾವಲಿನ್ ಎಸೆತದಲ್ಲಿ ಸಾಮಾನ್ಯ ಕ್ರೀಡಾಳುಗಳೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದರು. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಕಾಲೇಜ್ ದಿನಗಳಲ್ಲಿ ಕೂಡ ಸಾಮಾನ್ಯ ಕ್ರೀಡಾಳುಗಳೊಂದಿಗೆ ಸ್ಪರ್ಧಿಸುತ್ತಿದ್ದ ದೇವೇಂದ್ರ ಅವರಿಗೆ ಪ್ಯಾರ-ಸ್ಪೋರ್ಟ್ಸ್ ಬಗ್ಗೆ ಗೊತ್ತೇ ಇರಲಿಲ್ಲ. ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವ ಅರ್.ಡಿ.ಸಿಂಗ್ ಅವರ ಶಿಷ್ಯನಾದ ನಂತರವೇ ಇವರು ಪ್ಯಾರಾ-ಸ್ಪೋರ್ಟ್ಸ್’ಗಳಲ್ಲಿ ಭಾಗವಹಿಸಲಾರಂಭಿಸಿದರು. ಇಂದಿಗೂ ದೇವೇಂದ್ರ ಅವರಿಗೆ ಸಿಂಗ್ ಅವರೇ ಸ್ಪೂರ್ತಿ.
೨೦೦೨ರಲ್ಲಿ ಕೊರಿಯಾದಲ್ಲಿ ನಡೆದ ಫಾರ್ ಈಸ್ಟ್ ಅಂಡ್ ಸೌತ್ ಪೆಸಿಪಿಕ್ ಗೇಮ್ಸ್ ಫಾರ್ ಡಿಸೇಬಲ್ಡ್’ನಲ್ಲಿ ಚಿನ್ನದ ಪದಕ, ೨೦೦೪ರಲ್ಲಿ ಪ್ಯಾರಾ ಒಲಂಪಿಕ್’ನಲ್ಲಿ ಚಿನ್ನದ ಪದಕ, ೨೦೧೩ರ ವರ್ಲ್ಡ್ ಚಾಂಪಿಯನ್’ಶಿಪ್’ನಲ್ಲಿ ಚಿನ್ನದ ಪದಕ, ೨೦೧೪ ರ ಏಶಿಯನ್ ಪ್ಯಾರಾ ಗೇಮ್ಸ್’ನಲ್ಲಿ ಬೆಳ್ಳಿ ಪದಕ, ೨೦೧೫ರ ವರ್ಲ್ಡ್ ಚಾಂಪಿಯನ್’ಶಿಪ್’ನಲ್ಲಿ ಬೆಳ್ಳಿ ಪದಕ ಪಡೆದಿರುವ ದೇವೇಂದ್ರ ಅವರು ಈಗ ಮತ್ತೆ ಒಲಂಪಿಕ್’ನಲ್ಲಿ ಚಿನ್ನ ಗೆದ್ದಿದ್ದಾರೆ. ದೇವೇಂದ್ರ ಅವರು ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇವೇಂದ್ರ ಜಜಾರಿಯಾ ಅವರು ಒಬ್ಬ ಶ್ರೇಷ್ಟ ಕ್ರೀಡಾಪಟು ಅಷ್ಟೇ ಅಲ್ಲದೇ ಉತ್ತಮ ತಂದೆಯೂ ಹೌದು. ಅವರ ಪುಟ್ಟ ಮಗಳು ”ನಾನು ಎಲ್.ಕೆ.ಜಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ನೀವು ಒಲಂಪಿಕ್’ನಲ್ಲಿ ಮೊದಲ ಸ್ಥಾನ ಗಳಿಸಬೇಕು’ ಎಂದು ಹೇಳಿ ಷರತ್ತೊಂದನ್ನು ಹಾಕಿದ್ದಳು. ಅದರಂತೆ ರಿಯೋ ತಲುಪಿದ ತಂದೆಗೆ ಫೋನ್ ಮಾಡಿ ಫಲಿತಾಂಶ ತಿಳಿಸುತ್ತಾ, “ಅಪ್ಪಾ, ನಾನು ಮೊದಲ ಸ್ಥಾನ ಗಳಿಸಿದ್ದೇನೆ, ಈಗ ನಿಮ್ಮ ಬಾರಿ” ಎಂದಿದ್ದಳು. ಅದಕ್ಕೆ ತಕ್ಕನಾಗಿ ದೇವೇಂದ್ರ ಅವರು ತಮ್ಮ ಮಾತನ್ನು ನಡೆಸಿಕೊಟ್ಟಿದ್ದಾರೆ.
ದೇವೇಂದ್ರ ಅವರು ಸಾಧನೆಯ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿ, ನಮ್ಮ ದೇಶಕ್ಕೆ ಮತ್ತೊಮ್ಮೆ ಚಿನ್ನ ತಂದು ಕೊಟ್ಟಿದ್ದಕ್ಕಾಗಿ ಶುಭ ಕೋರೋಣ.
Facebook ಕಾಮೆಂಟ್ಸ್