ಗುರುವನ್ನು ಮೂರ್ಕೋಟಿ ದೇವರುಗಳಿಗೆ ಹೋಲಿಸಿದರೂ ಕಮ್ಮಿಯೆನಿಸುವುದೇನೋ…ಗುರು ಎಂಬ ಪದಕ್ಕಿರುವ ಶಕ್ತಿ ಅಂತದ್ದು. ಗುರು ಎಂದರೆ ಕೇವಲ ಕೋಲು ಹಿಡಿದು ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗೆ ಹೇಳಿಕೊಡುವ ಶಿಕ್ಷಕನಲ್ಲ. ಆತ ವಿದ್ಯಾರ್ಥಿಯೋರ್ವನ ಭವಿಷ್ಯವನ್ನು ರೂಪಿಸುವ ಶಿಲ್ಪಿ. ವಿದ್ಯಾರ್ಥಿಯೋರ್ವನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದು ಸಮರ್ಪಕವಾದ ಮಾರ್ಗದರ್ಶನವನ್ನು ನೀಡುವ ಧ್ರುವತಾರೆ ನಮ್ಮ ನಡುವಿನ ಗುರು. ತಪ್ಪುಗಳನ್ನು ತಿದ್ದಿ, ಬದುಕುವ ಕಲೆಯನ್ನು ಕಲಿಸಿಕೊಡುವ ಆಪ್ತಬಂಧು ಆತ. ಗುರುವೆಂದ ಮಾತ್ರಕ್ಕೆ ವೃತ್ತಿಯಲ್ಲೇ ಗುರುವೆನಿಸಿಕೊಳ್ಳಬೇಕೆಂದೇನಿಲ್ಲ.
ಇನ್ನು ನಮ್ಮ ಬದುಕು ನಮಗೆ ಕಲಿಸುವ ಪಾಠ ಕಮ್ಮಿಯದ್ದೇನಲ್ಲ. ಗೊತ್ತಿದ್ದೊ ಗೊತ್ತಿಲ್ಲದೆಯೋ ಮಾಡಿದ ತಪ್ಪಿಗೆ, ಮೆಲ್ಲಗೆ ಬಂದು ಕಿವಿ ಹಿಂಡಿ ಹೋಗುತ್ತವೆ ಬದುಕಿನ ಪ್ರಸಂಗಗಳು. ಜೀವನಾನುಭವಗಳಿಂದ ಕಲಿಯುವ ಪಾಠ ಸದಾ ಕಾಲ ನೆನಪಿನಲ್ಲಿರುತ್ತದೆ. ಇವೆಲ್ಲವೂ ಒಂದು ತೆರನಾದ ಗುರುವಿನ ಅನ್ವರ್ಥಗಳು.
ಇತಿಹಾಸದ ಪುಟ ತಿರುವಿದರೆ ಅದೆಷ್ಟೋ ಸಾಮ್ರಾಜ್ಯಗಳ ಸ್ಥಾಪನೆಯ ಹಿಂದೆ ಒಬ್ಬ ಗುರುವಿನ ಅಸ್ತಿತ್ವ ಕಾಣಬಹುದು. ಒಬ್ಬ ಸಾಮಾನ್ಯನೆನಿಸಿಕೊಂಡ ಬಾಲಕ ಚಂದ್ರಗುಪ್ತನಲ್ಲಿದ್ದ ವಿಶೇಷತೆಯನ್ನು ಗುರುತಿಸಿ, ಆತನನ್ನು ಸುಶಿಕ್ಷಿತನಾಗಿ ಮಾಡಿದ ಚಾಣಕ್ಯರು ಮೌರ್ಯ ವಂಶಕ್ಕೆ ನಾಂದಿ ಹಾಡಲಿಲ್ಲವೇ? ಇನ್ನು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು ವಿದ್ಯಾರಣ್ಯರ ಮಾರ್ಗದರ್ಶನದಿಂದಲೇ. ವಿವೇಕಾನಂದರೆಂಬ ಮಹಾನ್ ವ್ಯಕ್ತಿತ್ವ ರೂಪುಗೊಂಡಿದ್ದು ರಾಮಕೃಷ್ಣರ ಕಮ್ಮಟದಲ್ಲೇ. ಮೊನ್ನೆ ತಾನೆ ರಿಯೋ ಒಲಿಂಪಿಕ್ಸ್’ನಲ್ಲಿ ಬೆಳ್ಳಿ ಬಾಚಿಕೊಂಡ ಚಿನ್ನದ ಹುಡುಗಿ ಪಿ ವಿ ಸಿಂಧು ಹಾಗೂ 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಸೈನಾ ನೆಹ್ವಾಲ್ ರಂತಹ ಅನರ್ಘ್ಯ ರತ್ನಗಳ ಸಾಧನೆಯ ಹಿಂದೆ ಇದ್ದ ಗೋಪಿಚಂದ್ ಅನ್ನೋ ಗುರುವಿನ ಕನಸು,ಪರಿಶ್ರಮ… ಹೀಗೆ ಹೇಳಹೊರಟರೆ ಉದಾಹರಣೆಗಳನೇಕ ಸಿಗುತ್ತವೆ. ಲಕ್ಷಾಂತರ ಡಾಕ್ಟರ್’ಗಳು,ಇಂಜಿನಿಯರುಗಳು, ವಿಜ್ಞಾನಿಗಳು ಅಥವಾ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಅದೆಷ್ಟೇ ಸಾಧನೆ ಮಾಡಿದವರೇ ಆಗಿರಲಿ, ಅವರ ಸಾಧನೆಯ ಹಿಂದೆ ಕೋಲು ಹಿಡಿದು ಗದರಿದ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗುರುಗಳನೇಕರಿಹರೆಂಬ ಮಾತು ಎಲ್ಲರೂ ಒಪ್ಪಲೇಬೆಕಾದದ್ದು.
ತನ್ನ ಬಳಿ ಕಲಿತ ವಿದ್ಯಾರ್ಥಿಯೊಬ್ಬ , ತನ್ನ ಕಾಲ ಮೇಲೆ ನಿಂತುಕೊಳ್ಳುವಷ್ಟು ಸಕ್ಷಮನಾಗಿರುವುದನ್ನು ನೋಡಿ, ಸಾರ್ಥಕತೆಯ ನಿಟ್ಟುಸಿರು ಬಿಡುವ ಗುರು, ಧನ್ಯತಾ ಭಾವವನ್ನು ಹೊಂದುವುದಷ್ಟಕ್ಕೆ ತನ್ನ ಸ್ವಾರ್ಥತೆಯನ್ನು ಇರಿಸಿಕೊಂಡಿರುತ್ತಾನೆ. ಇನ್ನು ಶಿಷ್ಯನಾದವನು ಆತನ ಸಾಮರ್ಥ್ಯವನ್ನೂ ಮೀರಿ ದೊಡ್ಡದೊಂದು ಸಾಧನೆಯನ್ನು ಮಾಡಿದನೆಂದರೆ ಗುರು ಎನಿಸಿಕೊಂಡವನ ಮನಸು ಹಿರಿ ಹಿರಿ ಹಿಗ್ಗಿ, ಮಗುವಿನಂತೆ ಕುಣಿದಾಡಿದರೆ ಅಚ್ಚರಿಯೇನಿಲ್ಲ.
ಆದರ್ಶ ಗುರು ಎನಿಸಿಕೊಂಡ ಗುರುವಿನಲ್ಲಿ, ಉತ್ತಮ ಶಿಕ್ಷಕನ ಜೊತೆಗೆ, ಒಬ್ಬ ಆಪ್ತ ಸ್ನೇಹಿತನೂ ಇರುತ್ತಾನೆ. ಪರಿಸ್ಥಿತಿ ಬಂದರೆ ಜೀವನದುದ್ದಕ್ಕೂ ಇಡೋ ಪ್ರತಿಯೊಂದು ಹೆಜ್ಜೆಗೂ ಬೆಂಗಾವಲಾಗಿ ನಿಂತು, ತಲೆ ನೇವರಿಸಿ ಸಂತೈಸಿ ಧೈರ್ಯ ತುಂಬುವ ಹೆತ್ತವರಿಗೂ ಮೀರಿದ ಬಂಧುವಾಗುತ್ತಾನೆ ಗುರು. ಮಗುವಿಗೆ ಜನನಿ ಮೊದಲ ಗುರುವೆನ್ನುವುದು ಎಷ್ಟು ಸತ್ಯವೋ, ಮೊದಲ ಗುರುವು ಎರಡನೇ ಜನನಿಯ ಸ್ಥಾನವನ್ನು ತುಂಬುವನೆಂಬುದೂ ಅಷ್ಟೇ ಸತ್ಯ.ಇದು ಗುರು ಶಿಷ್ಯರ ನಡುವಿನ ಅವಿನಾಭಾವ ಬಂಧ. ವಿದ್ಯಾರ್ಥಿಯೋರ್ವನ ಸರ್ವತೋಮುಖ ಬೆಳವಣಿಗೆ ತನ್ನ ಆದ್ಯ ಕರ್ತವ್ಯವೆಂದು ಭಾವಿಸಿ ತನ್ನೆಲ್ಲ ಜ್ಞಾನವನ್ನು ಧಾರೆಯೆರೆಯುವ ಗುರುವಿನ ಹಿರಿಮೆ ಬಹು ದೊಡ್ಡದು. ಅಂತಹ ಗುರುವಿನ ಹೆಜ್ಜೆಗಳನ್ನು ಹಿಂಬಾಲಿಸಿದಾತ ಸಾಧನೆಯ ಶಿಖರವನ್ನೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೇ ಇರಬೇಕು ‘ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ‘ ಎಂದು ಹಿರಿಯರು ಹಾಡಿರುವುದು.
ಆದರೆ ಇತ್ತೀಚೆಗೆ ಪರಿಸ್ಥಿತಿಗಳು ಬದಲಾಗುತ್ತಿವೆ. ಹಿಂದೆ ಗುರುಗಳ ಮೇಲಿದ್ದ ಗೌರವ, ಪೂಜ್ಯಭಾವ ಕಡಿಮೆಯಾಗುತ್ತಿದೆ. ಸುಮ್ಮನೆ ಹೆದರಿಸಲೆಂದು ಬೆತ್ತ ಹಿಡಿದ ಶಿಕ್ಷಕ, ಇಂದು ಅಪರಾಧಿಯಂತೆ ಕಾಣಿಸುತ್ತಾನೆ. ಮಕ್ಕಳಿಗೆ ಗುರುಗಳು ಕೊಡೋ ಮಾರ್ಗದರ್ಶನಕ್ಕಿಂತ ಅಂಧಾನುಕರಣೆಯೇ ದೊಡ್ಡದೆನಿಸಿದೆ. ತಪ್ಪು ಮಕ್ಕಳದ್ದು ಮಾತ್ರವಲ್ಲ… ಮಕ್ಕಳ ಹೆತ್ತವರು, ಈಗಿನ ಸಾಮಾಜಿಕ ವ್ಯವಸ್ಥೆಯದೂ ಪಾಲಿದೆ. ಇಷ್ಟಲ್ಲದೆ ಒಮ್ಮೊಮ್ಮೆ ಮಾದರಿಯಾಗಬೇಕಾದ ಶಿಕ್ಷಕರೇ ತಪ್ಪು ದಾರಿ ತುಳಿಯುತ್ತಿರುವ ನಿದರ್ಶನಗಳು ಕಣ್ಣ ಮುಂದೆ ಇರುವಾಗ, ಮಕ್ಕಳು ಗುರು ತೋರಿದ ದಾರಿಯನ್ನು ಅನುಕರಿಸುವುದಾದರೂ ಹೇಗೆ? ಇದೆಲ್ಲದರ ಪರಿಣಾಮವಾಗಿ, ಸರಿಯಾದ ಮಾರ್ಗದರ್ಶನವಿಲ್ಲದೆ, ಸ್ವಸ್ಥ ಸಮಾಜದ ಅಡಿಪಾಯ ಕುಸಿಯುತ್ತಿದೆ. ಮೂಲೆ ಪಾಲಾಗಿರೋ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತೆ ಪುನರ್ಸ್ಥಾಪಿಸುವ ನಿಸ್ವಾರ್ಥ, ನಿಷ್ಠಾವಂತ ಶಿಕ್ಷಕರು ಬೇಕಾಗಿದ್ದಾರೆ. ಸಮಾಜಕ್ಕೆ ಕಲಾಂ , ರಾಧಾಕೃಷ್ಣನ್’ರವರಂತಹ ಆದರ್ಶ ಗುರುಗಳ ಅವಶ್ಯಕತೆ ಇದೆ. ಎಣ್ಣೆ ಬತ್ತಿ ಹೋಗಿ ಸಣ್ಣಗೆ ಉರಿಯುತ್ತಿರುವ ಜ್ಞಾನದ ದೀವಿಗೆಗೆ ತೈಲವನ್ನೆರೆಯುವ ಕಾರ್ಯ ಇಂತಹ ಗುರುಗಳಿಂದ ಮಾತ್ರ ಸಾಧ್ಯ.
– ವೇದಾವತಿ ಯಡ್ತಾಡಿ
ಬೆಂಗಳೂರು
Facebook ಕಾಮೆಂಟ್ಸ್