ವಾರವೆಲ್ಲಾ ಫುಲ್ ಡೇ ಬಿಝಿ. ಬೆಳಗ್ಗೆ 8ಕ್ಕೆ ಮನೆ ಬಿಟ್ಟರೆ ಸಂಜೆ ಟ್ರಾಫಿಕ್‍ನಲ್ಲಿ ಸಿಕ್ಕಾಕೊಂಡು ಮನೆ ಸೇರುವ ಹೊತ್ತಿಗೆ ಮತ್ತೆ ಎಂಟು. ಅಡಿಗೆ ಮಾಡಿ,ತಿಂದಂತೆ ಮಾಡಿ ಮಲಗಿದ ಐದೇ ನಿಮಿಷದಲ್ಲಿ ಬೆಳಗು. ಸಾಕಪ್ಪಾ ಸಾಕು ಈ ಆಫೀಸ್ ಕಿರಿಕಿರಿ ಅಂತಿರುವಾಗ್ಲೇ ರಿಲ್ಯಾಕ್ಸ್ ಆಗೋಕೆ ಒಂದು ಸಂಡೇ. ಪ್ರತಿ ಭಾನುವಾರ ನಾವು ತಪ್ಪದೇ, ವಿಸಿಟ್ ಮಾಡೋ ಪ್ಲೇಸ್‍ಗಳಲ್ಲಿ ಒಂದು ಗಾಂಧಿಬಜಾರ್.
ಇಳಿಸಂಜೆ ಹೊತ್ತಿನಲ್ಲಿ ಹನಿ ಹನಿ ಮಳೆ ಸುರಿಯುತ್ತಿದ್ದರೂ ಗಾಂಧಿಬಜಾರ್’ಗೆ ತೆರಳಲು ಇನ್ನಿಲ್ಲದ ಉತ್ಸಾಹ. ಅದೇ ರಸ್ತೆ, ಅದೇ ಮುಖಗಳಾಗಿದ್ರೂ ನಮಗೆ ಪ್ರತಿ ಸಾರಿಯೂ ಆ ಪಯಣ ನೂತನ. ಅದೇ ದಾರಿಯಲ್ಲಿ ಅದೇನೋ ಹೊಸತನ. ರೆಡಿಯಾಗಿ ಹೊರಗೆ ಹೊರಟಾಗ, ಫ್ರೆಂಡ್ ಮಗಳು ತೊದಲು ನುಡಿಯಲ್ಲಿ ಮಲಯಾಳಂನಲ್ಲಿ ಗಾಂಧಿಬಜಾರ್ ಪೋವುನ್ನು ಅಂತ ಹೇಳುವಷ್ಟರ ಮಟ್ಟಿಗೆ ನಮಗೆ ಗಾಂಧಿಬಜಾರ್’ನ ರಸ್ತೆಗಳು ಚಿರಪರಿಚಿತ.
ಆಶ್ರಮ ಸರ್ಕಲ್‍ನಿಂದ ಸಾಗುತ್ತಾ ಹೋಗುತ್ತಿದ್ದರೆ ನಗೆ ಸೂಸುವ ಅದೇ ಮುಖಗಳು. ಸೀಬೆ ಕಾಯಿ ಮಾರುವ ಹುಡುಗ, ಟಾಯ್ಸ್ ಮಾರುವ ಆಂಟಿ,ಬೇಯಿಸಿದ ಕಡಲೇ ಮಾರುವ ತಾತ ಎಲ್ಲರೂ ಪ್ರತಿ ವಾರದ ಮಾಮೂಲು ಅತಿಥಿಗಳು. ಖರೀದಿಸಲು ಏನೂ ಇಲ್ಲದಿದ್ದರೂ, ರಸ್ತೆಯುದ್ದಕ್ಕೂ ನಡೆಯುತ್ತಾ ಹೋಗುವುದೇ ಒಂದು ಖುಷಿ. ಅಲ್ಲೆಲ್ಲೋ ಸಿಕ್ಕ ಕಾರ್ನ್ ಮೆಲ್ಲುತ್ತಾ, ಕುರ್ತಾಗಳನ್ನು ನೋಡಿ ನೆಕ್ಸ್ಟ್ ವೀಕ್ ತೆಗೆದುಕೊಂಡ್ರಾಯ್ತು ಅಂತ ಮುಂದೆ ಸಾಗೋದೆ ಕೆಲಸ. ನಮ್ಮ ಪಾಲಿಗೆ ಇದು ಬರೀ ಟೈಂಪಾಸ್ ಅಲ್ಲ. ಗುರುತೇ ಇಲ್ಲದ ಅಪರಿಚಿತರನ್ನು ದಿನಾಲೂ ನೋಡುವ ಖುಷಿ.
ಗಾಂಧಿಬಜಾರ್’ನ ಈ ರಸ್ತೆಗಳಲ್ಲೇ ನನ್ನನ್ನು ಅತಿಯಾಗಿ ಕಾಡಿದ ಕೆಲವೊಂದು ಮುಖಗಳಿವೆ. ಎಲ್ಲಾ ಬಿಟ್ಟು ರಿಲ್ಯಾಕ್ಸ್ ಆಗಿರೋಣ ಅಂತೆನಿಸಿದ ಸಂಡೇಯಲ್ಲಿಯೂ ಮನದಾಳಕ್ಕಿಳಿದು ಕಾಡಿದ ಮುಖಗಳು. ಮುಂದೆ ಸಾಗಿದರೂ ಮರೆಯಾಗದ ಛಾಯೆಗಳು. ಮನೆಗೆ ಬಂದರೂ ಮರೆಯಲಾಗದ ಆ ಮುಖದಲ್ಲಿನ ಭಾವನೆಗಳು. ಅಪರಿಚಿತರಾದರೂ ಅವ್ರ ನೋವು ಮನದಾಳಕ್ಕಿಳಿದು ಸಣ್ಣ ನೋವು ಮೂಡಿಸುತ್ತದೆ. ಏನೂ ಮಾಡಲಾಗದ ಅಸಹಾಯಕತೆಯಿಂದ ಮನಸ್ಸು ಮಿಡಿಯುತ್ತದೆ.
ಬಿಸಿಲಿರಲಿ, ಮಳೆಯಿರಲಿ ಗಾಂಧಿಬಜಾರ್’ನ ಆ ರಸ್ತೆಗಳಲ್ಲಿ ಆ ತಾತ ಇದ್ದೇ ಇರುತ್ತಾರೆ. ಸ್ಪಲ್ಪ ಕುಬ್ಜ ದೇಹ. ಬಾಡಿದ ಮುಖ. ಆದ್ರೂ ಕಣ್ಣಲ್ಲಿ ಅದೇನೋ ಹೊಳಪು. ಕೈಯಲ್ಲೊಂದು ಪ್ಲಾಸ್ಟಿಕ್ ಕವರ್. ಅದ್ರಲ್ಲಿ ಹೆಚ್ಚೆಂದರೆ 10 ಅನಿಸುವಷ್ಟು ಅಗರಬತ್ತಿಯ ಕಟ್ಟುಗಳು. ಕೈಯಲ್ಲಿ ಒಂದೆರಡು ಪ್ಯಾಕೆಟ್ಸ್. ರಸ್ತೆ ಬದಿಯಲ್ಲಿ ಓಡಾಡುತ್ತಾ, ಅಗರಬತ್ತಿಯ ಕಟ್ಟುಗಳನ್ನು ಕೊಳ್ಳುವಂತೆ ಮುಂದೆ ಚಾಚುತ್ತಾರೆ. ಜನ್ರು ಹಾಗೆಯೇ ಮುಂದೆ ಹೋದರೂ ಮತ್ತೆ ಖರೀದಿಸುವಂತೆ ಕೇಳುತ್ತಾರೆ. ಅಂಗಲಾಚುತ್ತಾರೆ.
ಜನ್ರು ಇದೆಂಥಾ ಕಿರಿಕಿರಿ ಅನ್ನುವಂತೆ ನೋಡಿ ಹಾಗೆಯೇ ಮುಂದೆ ಹೋದಾಗ ಮನಸ್ಸು ಸಣ್ಣದಾಗಿ ಚೀರುತ್ತದೆ. ಆ ಇಳಿವಯಸ್ಸಿನಲ್ಲಿಯೂ, ಎಲ್ಲರ ತಾತ್ಸಾರ, ತುಚ್ಛ ನೋಟವನ್ನು ಶಕ್ತಿಯನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವ್ರಿಗೆ ನೀಡಲಿ ಅಂತ ಮನಸ್ಸು ಕೇಳಿಕೊಳ್ಳುತ್ತದೆ. ಅಗತ್ಯವಿಲ್ಲದಿದ್ದರೂ ಸುಮ್ಮನೆ ನಾಲ್ಕೈದು ಕಟ್ಟು ಅಗರಬತ್ತಿ ಖರೀದಿಸಿದಾಗ ಮನಸ್ಸಿಗೆ ಸಂತೃಪ್ತಿ.
ಹಿಂದಿರುಗಿ ಬರಬೇಕಾದರೆ ಈ ತಾತ ದಿನಕ್ಕೆಷ್ಟು ಸಂಪಾದಿಸಬಹುದು. ಹೊತ್ತಿನ ಊಟಕ್ಕಾದರೂ ಆ ದುಡ್ಡು ಸಾಕಾಗುತ್ತಾ. ಯಾರೂ ಅಗರಬತ್ತಿ ಕಟ್ಟು ಖರೀದಿಸಿದ ದಿನಗಳಲ್ಲಿ ಏನು ಮಾಡ್ತಾರೆ. ಸಾಲು ಸಾಲು ಪ್ರಶ್ನೆಗಳು ಮನದಲ್ಲಿ ಕಾಡಿದರೂ ಉತ್ತರವಿಲ್ಲ.
ರಸ್ತೆಯ ಕೊನೆಯಲ್ಲಿ ಗಾಡಿಯಲ್ಲಿ ಐಸ್‍ಕ್ರೀಂ ಮಾರುವ ಹುಡುಗನ ನೋಡಿದಾಗಲೂ ಇದೇ ಬೇಸರ. ಐಸ್‍ಕ್ರೀಂ ಪಾರ್ಲರ್’ಗಳ ಮೊರೆ ಹೋಗುವ ಜನ್ರು 10 ರೂಪಾಯಿಯ ಐಸ್‍ಕ್ರೀಂ ಖರೀದಿಸಲು ಬರುವುದೇ ಕಡಿಮೆ. ಹುಡುಗ ಫುಟ್‍ಪಾತ್‍ನಲ್ಲಿ ಸಾಗುವವರನ್ನೆಲ್ಲಾ ಕಣ್ಣರಳಿಸಿ ನೋಡುತ್ತೇನೆ. ಐಸ್‍ಕ್ರೀಂ ಕೊಳ್ಳುತ್ತಾರೆ. 10ರೂಪಾಯಿನ್ನಾದ್ರೂ ಸಿಗುತ್ತಾ ಅನ್ನೋ ಆಸೆ.
ಆ ಕಾಯುವಿಕೆಯಲ್ಲಿಯೇ ಸಂಜೆಯಾಗಿ ಬಿಡುತ್ತದೆ. ಖಾಲಿಯಾಗದ ಗಾಡಿಯನ್ನು ತಳ್ಳಿಕೊಂಡು ಮತ್ತೆ ಮನೆಯತ್ತ ತೆರಳುವ ಸಮಯ. ಗಾಡಿಯಂತೆ ಬಹುಶಃ ಬದುಕು ಭಾರವೆನಿಸಿರಬೇಕು.
ಗಾಂಧಿಬಜಾರ್’ಗೆ ಪ್ರತಿ ಬಾರಿ ಹೋದಾಗಲೂ ಈ ಅಸಹಾಯಕ ಮುಖಗಳು ಇನ್ನಿಲ್ಲದಂತೆ ಕಾಡುತ್ತವೆ. ಆ ಸಂಡೇ ಮುಗಿಯುವವರೆಗೂ ಆ ನೋವು ಮನಸ್ಸಿನೊಳಗೇ ಮಿಡುಕುತ್ತಲೇ ಇರುತ್ತದೆ. ಮತ್ತೆ ಮಂಡೇ ಆರಂಭವಾಗಿ ಬದುಕಿನ ಜಂಜಾಟದಲ್ಲಿ ಮುಳುಗಿ ಹೋಗುವವರೆಗೆ ಗಾಂಧಿಬಜಾರ್’ನಲ್ಲಿ ಕಾಡುವ ಮುಖಗಳು ಇನ್ನಿಲ್ಲದಂತೆ ಕಾಡಿಸುತ್ತವೆ.
Facebook ಕಾಮೆಂಟ್ಸ್