ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩
___________________________________
ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ? – ಮಂಕುತಿಮ್ಮ || ೦೨೩ ||
ಇಡೀ ಬದುಕಿನ ಕಿತ್ತಾಟವೆಲ್ಲ ನಾಲ್ಕೆ ಸಾಲುಗಳಲ್ಲಿ ಎಷ್ಟು ಸೊಗಸಾಗಿ ಬಿಂಬಿತವಾಗಿವೆ ನೋಡಿ ಈ ಸಾಲುಗಳಲ್ಲಿ. ಈ ಇಹದ ಜೀವನ, ಇರುವಿಕೆಯೆ ಒಂದು ಒಣ, ಕೆಲಸಕ್ಕೆ ಬಾರದ ರಗಳೆಯ ಹಾಗಂತೆ! ಯಾಕೆಂದರೆ ಈ ಬದುಕಿನ ಪೂರಾ ನಾವು ಮಾಡುವ ಕೆಲಸಗಳೆಲ್ಲ ಒಂದಲ್ಲ ಒಂದು ರೀತಿಯ ಅತಂತ್ರ ಹಾಗು ಉಪಯೋಗಕ್ಕೆ ಬಾರದ ಚಂಚಲ ಚಿತ್ತ ಪ್ರವೃತ್ತಿಯ ಗೋಳಾಟಗಳೆ.
ಎಲ್ಲವು ಸಮೃದ್ಧವಾಗಿದ್ದಾಗ ತಿಂದುಂಡು ಸುಖವಾಗಿರುತ್ತದೆಯೆ ಮಾನವ ಜನ್ಮ ? ಹಾಗಿರಲು ಮನಸು ಬಿಡುವುದಿಲ್ಲವಲ್ಲಾ ! ಹೊಟ್ಟೆ ತುಂಬಿದ ಮೇಲೆ ಏನಾದರು ಮಾಡದೆ ಉಂಡದ್ದು ಅರಗುವುದಿಲ್ಲ. ಅದಕ್ಕೆಂದೆ ಉದ್ದೇಶ ಇರಲಿ-ಬಿಡಲಿ, ಸುಮ್ಮನೆ ಗಮ್ಯವಿಲ್ಲದ ಅಲೆದಾಟದಲ್ಲಿ ತೊಡಗಿಕೊಳ್ಳುವುದು, ಹಿಂದೆ ನಡೆದದ್ದನ್ನು ನೆನೆಯುತ್ತ, ಅಂದಾಗಿರಬಹುದಾದ ಸೋಲು, ಅವಮಾನ, ಯಾತನೆಗಳಿಗೆ ಮತ್ತೆ ಮತ್ತೆ, ತಿರುತಿರುಗಿ, ಮರುಕಳಿಕೆಯ ಅರ್ಜ್ಯವನ್ನು ಸುರಿಯುತ್ತ ಕೊರಗುತ್ತ ಮನದಲ್ಲೆ ಬಳಲಿ ತೊಳಲಾಡುವುದು, ಇರುವುದರ ಸಂತೃಪ್ತಿಯನ್ನು ಬಿಟ್ಟು ಇರದುದರ ಅತೃಪ್ತಿಗೆ ಅಲವತ್ತುಗೊಳ್ಳುವುದು ಇತ್ಯಾದಿಯಾಗಿ ಕಂಗೆಡುತ್ತದೆ – ಯಾವುದರಲ್ಲೂ ಸಂತೃಪ್ತಿ ಕಾಣದ ಮನುಜ ಜೀವ.
ಅದೇ ತಿನ್ನಲು ಗತಿ ಇರದ ಹೊತ್ತಲಿ, ಭಿಕ್ಷೆ ಬೇಡಿಯಾದರು (ತಿರಿದನ್ನ) ಅನ್ನವುಣ್ಣಲು ಹೇಸದ ಮನೋಭಾವ ಈ ಮನಸಿನದು. ಮೈ ಕೈ ಗಟ್ಟಿಯಿದ್ದರು ದುಡಿದು ತಿನ್ನದೆ, ಸೋಮಾರಿಯಾಗಿ ಅವರಿವರಲ್ಲಿ ತಿರುಪೆಯೆತ್ತಿ ತಿನ್ನುವ ದುರ್ಬುದ್ಧಿ. ಎಲ್ಲವೂ ಇದ್ದಾಗ ಅಹಂಕಾರದ ಮದದಲ್ಲಿ ಮೆರೆದಾಡುವುದು ಒಂದೆಡೆಯಾದರೆ, ಕೆಳಗೆ ಬಿದ್ದು ಏನೂ ಇರದ ಹತಾಶ ಸ್ಥಿತಿಯಲ್ಲಿ ಪೆಚ್ಚುಪೆಚ್ಚಾಗಿ ಹಲ್ಲು ಕಿರಿಯುತ್ತ ನಿಲ್ಲಲೂ ಸೈ ಎನ್ನುವ ಸೋಗಲಾಡಿಯ ಪರಿಸ್ಥಿತಿ.
ಕಳೆದು ಹೋದ ವೈಭವದ ದಿನಗಳನ್ನು, ವಂಚಿತವಾದ ಅವಕಾಶಗಳನ್ನು, ಕೈ ಮೀರಿ ಹೋದ ಗಳಿಗೆಗಳನ್ನು ನೆನೆದುಕೊಂಡು ಮತ್ತೆ ಮತ್ತೆ ಕೊರಗುವಂತೆ ಆಗುವುದೆಷ್ಟು ಬಾರಿಯೊ ? ಆ ಕೊರಗಾಟವೆ ಕೋಪ-ತಾಪ, ಕ್ರೋಧಾಕಾರವಾಗಿ ಪರಿಣಮಿಸಿ, ನರಳಿಸಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನೂ ಕೆಡಿಸಿ ಕಂಗೆಡಿಸಿಬಿಡುತ್ತದೆ ಬದುಕು. ಅವೆಲ್ಲ ನಿರಂತರ ಜಂಜಾಟ, ಕಾಡುವಿಕೆಯನ್ನು ಕಂಡೆ ‘ಇದೇನೊಣ ರಗಳೆ ಬದುಕಪ್ಪ ?’ ಎಂದು ಕೇಳುತ್ತಾನೆ ಮಂಕುತಿಮ್ಮ.
ಕಷ್ಟಪಟ್ಟು ಮೈಮುರಿದು ದುಡಿದು, ಮೂರುಹೊತ್ತು ನೆಮ್ಮದಿಯಾಗಿ ತಿಂದುಂಡು ಯಾವುದೆ ಜಂಜಾಟದ ಹಂಗಿರದೆ ಸುಖವಾಗಿರಲು ಬಿಡದಲ್ಲ ಈ ಇಹ ಜೀವನದ ಇರುವಿಕೆಯ ಕೊಸರಾಟ – ಎಂಬ ಅಚ್ಚರಿ ಬೆರೆತ ವಿಷಾದ, ಖೇದ ಮಂಕುತಿಮ್ಮನ ಮಾತಲ್ಲಿಲ್ಲಿ ಅನುರಣಿತವಾಗಿದೆ.
Facebook ಕಾಮೆಂಟ್ಸ್