X

ಏನೀ ಮಂಕುತಿಮ್ಮನ ರೇಖಾಲೇಖ ?

ಜೀವಗತಿಗೊಂದು ರೇಖಾಲೇಖವಿರಬೇಕು |

ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||

ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? |

ಆವುದೀ ಜಗಕಾದಿ? – ಮಂಕುತಿಮ್ಮ || ೦೨೫ ||

ಜೀವನಕ್ಕೊಂದು ಗುರಿಯಿರಿರಬೇಕು, ಗಮ್ಯವಿರಬೇಕು ಅದೇ ಜೀವನೋತ್ಸಾಹದ ಸ್ಪೂರ್ತಿಯ ಗುಟುಕು ಎನ್ನುತ್ತಾರೆ ಬಲ್ಲವರು. ಜೀವನ ಹೀಗೆ ಯಾವುದೊ ಗಮ್ಯದ ದಿಕ್ಕು, ದೆಸೆ ಹಿಡಿದು ಹೊರಟರು ಅದನ್ನು ಸರಿಯಾದ ಹಾದಿಯಲ್ಲಿ ನಿರ್ದೇಶಿಸುತ್ತ ನಡೆಸಲು ಒಂದು ಮಾರ್ಗದರ್ಶಿ ಸೂತ್ರವಿರಬೇಕು. ನೀರಿನಲ್ಲಿ ದೋಣಿಯನ್ನೊ, ಹಡಗನ್ನೊ ನಡೆಸುವ ನಾವಿಕನಿಗೆ ಹೇಗೆ ಹಾದಿಯ ಸುಳಿವನ್ನು ಭೂಪಠವೊಂದು ಒದಗಿಸಬಲ್ಲದೊ, ಹಾಗೆ ಸೂಜಿಕಾಂತವೊಂದು (ಮ್ಯಾಗ್ನೆಟಿಕ್ ಕಂಪಾಸ್)  ಸದಾ ಉತ್ತರ – ದಕ್ಷಿಣಾಭಿಮುಖವಾಗಿ ನಿಲ್ಲುವ ಮುಖೇನ ನಾವಿಕ ನಡೆದ ದಿಕ್ಕನ್ನು ನಿಖರವಾಗಿ ತಿಳಿಸುವುದು. ಮಾತ್ರವಲ್ಲದೆ, ಯಾನದಲ್ಲಿ ಕಳೆದ ದಿನಗಳೆಷ್ಟು, ಉಳಿದ ದಿನಗಳೆಷ್ಟು ಎಂದೆಲ್ಲಾ ವಿವರವೀಯುತ್ತ ಅವನ ಗಮ್ಯದ ಪಯಣಕ್ಕೆ ನಿರಂತರವಾಗಿ ಸಹಾಯ ಮಾಡುವ ಸಲಕರಣೆಗಳು ಜತೆಯಲ್ಲಿರುತ್ತವೆ. ನಮ್ಮ ಜೀವನದ ನಿರಂತರ ಚಲನೆಯ ನಾವೆಗು ಅಂತದ್ದೊಂದು ದಿಕ್ಕು ದೆಸೆ ತೋರಿ ಗುರಿಯತ್ತ ಒಯ್ಯುವ ದಿಕ್ಸೂಚಿ ಸಲಕರಣೆ, ಉಪಕರಣವಿರಬೇಕೆನ್ನುವುದು (ಅರ್ಥಾತ್ ರೇಖಾಲೇಖ) ಬಹಳ ಸರಳ, ಸಾಧಾರಣ ನಿರೀಕ್ಷೆ.

ಆದರೆ ನಾವಿರುವ ಜಗ ನಿಯಮದಲ್ಲಿ ಹಾಗೆ ನಡೆಯುವುದಿಲ್ಲ. ಇಲ್ಲಿ ಆದಿಯೂ ಕಾಣುವುದಿಲ್ಲ , ಅಂತ್ಯವೂ ಗೊತ್ತಾಗುವುದಿಲ್ಲ. ಜೀವನದಲ್ಲಿ ಮುನ್ನುಗ್ಗುತ್ತ ಇರಬೇಕೆನ್ನುವುದೇನೊ ಸತ್ಯವಾದರೂ, ಅಂತಿಮವಾಗಿ ಎಲ್ಲಿಗೆ ಮತ್ತು ಹೇಗೊ ಹೋಗಬೇಕೆಂಬುದನ್ನು ನಿಖರವಾಗಿ ತಿಳಿಸದೆ ಎಲ್ಲಿಗೆಂದು ಹೋಗುವುದು? ಅಂತಿಮವಿರಲಿ, ಆರಂಭಿಸುವುದೆಲ್ಲಿಂದ ಎನ್ನುವ ಶುರುವಿನ ಗೆರೆಯನ್ನು ತೋರುವುದಿಲ್ಲವಲ್ಲ ಈ ಜೀವನದರ್ಶನ ? ಅಸ್ಪಷ್ಟವಾಗಿಯಾದರೂ ಆ ಆದಿ-ಅಂತಿಮ ತುದಿಗಳ ಅರಿವಿಲ್ಲದ ಸನ್ನಿವೇಶದಲ್ಲಿ, ಅವನ್ನು ಊಹಿಸಿ, ಪರಿಭಾವಿಸಿಕೊಂಡು ಮುನ್ನಡೆಯಲಾದರೂ ಹೇಗೆ?

ಯಾರನ್ನಾದರೂ ಈ ಪ್ರಶ್ನೆ ಕೇಳೋಣವೆಂದರೆ ಯಾರನ್ನು ಕೇಳುವುದು? ಇದನ್ನೆಲ್ಲಾ ಸೃಜಿಸಿದನೆನ್ನುವ ಸೃಷ್ಟಿಕರ್ತ ಕೈಗೆ ಸಿಗುವಳತೆಯಲ್ಲಿ ಕಾಣುತ್ತಿಲ್ಲವಲ್ಲ? ಬಹುಶಃ ಅವನನ್ನು ಕಾಣಬೇಕೆಂದರೆ, ಅವನಿರುವ ಜಾಗ ಅಂದರೆ – ಅವನು ಮೊಟ್ಟಮೊದಲು ತನ್ನ ಕಾಯಕ ಆರಂಭಿಸಿದ ಆದಿಯ-ಆದಿಯಲೆಲ್ಲೊ ಇರಬಹುದೋ ಏನೊ.. ಅಲ್ಲಿಗೆ ಹೋಗಿ ಸಮಸ್ಯೆ, ಪ್ರಶ್ನೆಗಳಿಗೆಲ್ಲ ಪರಿಹಾರ ಕೇಳಿ ಬರುವಾ ಎಂದರೆ ಆ ಜಗದ ಆದಿ, ಜಗದ ಮೂಲ ಯಾವುದು ಎನ್ನುವುದು ಗೊತ್ತಿಲ್ಲವೆ !? ಯಾರನ್ನು ಕೇಳುವಂತಿಲ್ಲ, ಆರಂಭ ಅಂತ್ಯ ಗೊತ್ತಿಲ್ಲ, ಯಾವುದೇ ಉಪಕರಣಗಳ ಸಹಕಾರವೂ ಇಲ್ಲ – ಆದರೂ ನೀಸಿ ನಿಭಾಯಿಸು ಎಂದರೆ ಹೇಗೆ ಮಾಡುವುದೆಂಬ ಪ್ರಶ್ನೆ ಮಂಕುತಿಮ್ಮನನ್ನಿಲ್ಲಿ ಕಾಡಿದೆ.

ಇಲ್ಲಿ ‘ಮೊದಲು ಕೊನೆ’ ಎನ್ನುವುದು ಹುಟ್ಟು ಸಾವಿನ ಪ್ರತೀಕವೂ ಹೌದು. ಅವುಗಳ ಅನಿಶ್ಚಿತತೆ, ಅಸ್ಪಷ್ಟತೆಗಳ ನಡುವೆಯೂ ಬರಿ ಊಹೆ, ಪರಿಭಾವನೆಯಲ್ಲಿ ಅವೆರಡರ ನಡುವಿನ ಬದುಕು ನಡೆಸುವುದೆಂತು? ಎನ್ನುವುದು ಮುಖ್ಯ ಪ್ರಶ್ನೆಯಾಗಿಬಿಡುತ್ತದೆ. ಅಂತೆಯೆ ‘ಆವುದೀ ಜಗಕಾದಿ?’ ಎನ್ನುವುದು ಸೃಷ್ಟಿಯ ಒಟ್ಟಾರೆ ಬುಡದ ಮೂಲಕ್ಕೆ ಕೈ ಹಾಕುವ ಯತ್ನ ; ಆ ಗುಟ್ಟರಿವಾದರೆ ಜೀವನದ ಗುಟ್ಟನ್ನು ಬಿಡಿಸಬಹುದೆನ್ನುವ ಆಶಯ ಅದರಲ್ಲಡಕವಾಗಿರುವ ಭಾವ.

ಒಟ್ಟಾರೆ ಸೃಷ್ಟಿಯನ್ನು ಸೃಜಿಸಿದ ಕರ್ತೃವು ಬೇಕೆಂದೇ ಅದನ್ನೊಂದು ಒಗಟಿನ ರೂಪದಲ್ಲಿಟ್ಟು, ಅದನ್ನು ನಡೆಸುವ ಹೊಣೆಗಾರಿಕೆಯನ್ನು ನಮಗೇ ಬಿಟ್ಟಿದ್ದು ಮಾತ್ರವಲ್ಲದೆ, ಕಣ್ಣಿಗೆ ಬಟ್ಟೆ ಕಟ್ಟಿ ಜೀವನದ ಕಾಡಿನಲ್ಲಿ ಬಿಟ್ಟುಬಿಟ್ಟಿದ್ದಾನೆ. ಯಾವುದೇ ಮಾರ್ಗದರ್ಶಿ ರೇಖಾಲೇಖವನ್ನು ಒದಗಿಸದೆ, ತನ್ನ ಅಸ್ತಿತ್ವಕ್ಕಾಗಿ ನಿರಂತರ ಹೋರಾಡುವಂತೆ  ಗೊಂದಲದ ಗೂಡಿನಲ್ಲಿರಿಸಿಬಿಟ್ಟಿರುವನೆಂಬ ಬೇಸರ, ನಿರಾಶೆ ಇಲ್ಲಿ ಪರೋಕ್ಷವಾಗಿ ವ್ಯಕ್ತವಾಗಿದೆ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post