`ಆಖ್ಯಾನ’-ಕಥಾಸಂಕಲನ
ಲೇಖಕರು: ಮೂರ್ತಿ
ಪ್ರಕಾಶಕರು: ಕನ್ನಡಸಂಘ, ಕ್ರೈಸ್ಟ್ ಯುನಿವರ್ಸಿಟಿ, ಹೊಸೂರು ರಸ್ತೆ, ಬೆಂಗಳೂರು-029
ಪ್ರಥಮ ಮುದ್ರಣ: 2015, ಪುಟಗಳು: 224, ಬೆಲೆ: ರೂ.200-00
ಲೇಖಕ ಮೂರ್ತಿ (ಮಾರುತಿ ಅಂಕೋಲೆಕರ್) ಸಿರ್ಸಿಯವರು. `ಆಖ್ಯಾನ’ ಇವರ ಪ್ರಥಮ ಕಥಾಸಂಕಲನ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಈ ಕಥೆಗಳನ್ನು ಮೂರ್ತಿ ಬರೆದದ್ದು 1973 ಹಾಗೂ 1986ರ ನಡುವೆ. ಅನಂತರ ಇವರು ಮತ್ತೆ ಕತೆಗಳನ್ನು ಬರೆದಂತೆ ಕಾಣೆ. ಯಾವ ಪ್ರೇರಣೆಯೋ, ಅಂತೂ ಬೆಟರ್ ಲೇಟ್ ದ್ಯಾನ್ ನೆವರ್ ಎನ್ನುವಂತೆ ವಿಳಂಬವಾದರೂ ಕೂಡ ಈ ಕತೆಗಳು ಸಂಕಲನರೂಪದಲ್ಲಿ ಓದುಗರಿಗೆ ಸಿಗುವಂತಾಗಿವೆ. ಇವು `ತುಷಾರ’ ಮತ್ತು `ಉದಯವಾಣಿ’ ಪತ್ರಿಕೆಗಳ ಕಥಾಸ್ಪರ್ಧೆಗಳಲ್ಲಿ (ದೀಪಾವಳಿ ಕಥಾಸ್ಪರ್ಧೆಗಳಲ್ಲಿ) ಪ್ರಥಮ, ದ್ವಿತೀಯ ಹಾಗೂ ಇತರ ಬಹುಮಾನಗಳನ್ನು ಪಡೆದ ಕಥೆಗಳು. ಈ ಕಥೆಗಳು ನೀಳ್ಗತೆಗಳಾದರೂ ಕೂಡ ಇವುಗಳಲ್ಲಿ `ಅನುತ್ತರಾ’ ಕಥೆ ಮಿನಿ ಕಾದಂಬರಿಯಷ್ಟು ದೀರ್ಘವಾದ್ದು. ಆದರೂ ಇದರ ವ್ಯಾಪ್ತಿ ಒಂದು ಸಣ್ಣ ಕಥೆಯದೇ. ಈ ಸಂಕಲನಕ್ಕೆ ಶ್ರೀ ಕೆ.ವಿ.ತಿರುಮಲೇಶ್ ಮುನ್ನುಡಿ ಬರೆದಿದ್ದು, ಶ್ರೀಧರ ಬಳಗಾರರ ಹಿನ್ನುಡಿಯಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಯು.ಆರ್.ಅನಂತಮೂರ್ತಿ, ರಾಘವೇಂದ್ರ ಖಾಸನೀಸ, ಕ.ವೆಂ.ರಾಜಗೋಪಾಲ್ ಹಾಗೂ, ಶಂಕರ ಮೊಕಾಶಿ ಪುಣೇಕರ್ ಈ ಕತೆಗಳ ಕುರಿತು ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ದಾಖಲಿಸಿದ್ದು, ಇವೆಲ್ಲ ಸಂಕಲನದ `ಪರಿಶಿಷ್ಟ’ದಲ್ಲಿವೆ. ಒಟ್ಟಿನಲ್ಲಿ ಮೂರ್ತಿಯವರ ಈ ಕತೆಗಳನ್ನು ಗಂಭೀರವಾಗಿ ಓದಬೇಕೆನ್ನುವವರಿಗೆ ಅಗತ್ಯವಾದ ಪರಿಕರಗಳೆಲ್ಲ ಸಂಕಲನದ ಜೊತೆಗೇ ಲಭ್ಯವಾಗುವಂತಿವೆ.
`ಆಖ್ಯಾನ’ ನಿಜಕ್ಕೂ ಗಂಭೀರವಾಗಿ ಓದಬೇಕಾದ ಕತೆಗಳು. ಕೆ.ವಿ.ತಿರುಮಲೇಶ್ ಹೇಳಿರುವಂತೆ, “ಇವು ಸಾಕಷ್ಟು ಸಂಕೀರ್ಣವಾಗಿದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಪ್ರಬುದ್ಧವಾದ ಕತೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ ತೆಗೆದುಕೊಂಡ ಲೇಖಕನಿಗೆ ಮಾತ್ರ ಸಾಧ್ಯವಾಗುವ ಕತೆಗಳು. ಬಹು ಮುಖ್ಯವಾದ ಕಥಾವಸ್ತುಗಳು, ಗಂಭೀರವಾದ ಶೈಲಿ, ಎಲ್ಲವನ್ನೂ ಗಮನಿಸುವ ಸೂಕ್ಷ್ಮತೆ, ಅವಕ್ಕೆ ಸ್ಪಂದಿಸುವ ಗುಣ, ಅದ್ಭುತವಾದ ವೈಚಾರಿಕತೆ, -ಇವೆಲ್ಲವೂ ಈ ಕತೆಗಳನ್ನು ಬಹಳ ಮೇಲ್ಮಟ್ಟದಲ್ಲಿ ಇರಿಸುತ್ತವೆ”(ಮುನ್ನುಡಿಯಿಂದ). ಈ ಕತೆಗಳ ಕುತೂಹಲವಿರುವುದು ಮುಖ್ಯವಾಗಿ ಮಾನವೀಯ ನೆಲೆಯಲ್ಲಿ ವರ್ಧಿಷ್ಣುವಾಗಬೇಕಾದ ಹೆಣ್ಣು-ಗಂಡುಗಳ ಸಂಬಂಧ, ಪ್ರೇಮಿಗಳಾಗಿ, ಭಾವಲೋಕದಲ್ಲಿ ಪ್ರಾಪ್ತವಾಗಿ ನಿಜವಾಗುವ ದಾರಿಯಲ್ಲಿರುವ ಅಣ್ಣ-ತಂಗಿಯರಾಗಿ, ಬದುಕಿಗೊಂದು ಸಾರ್ಥಕತೆ ಕಾಣಿಸುವ ಸಂಬಂಧ. ಹಾಗೂ ಈ ಸಂಬಂಧವನ್ನು ಭಾವನೆಯ ಮತ್ತು ವೈಚಾರಿಕತೆಯ ಮಿಶ್ರಗುಣದ ಹದದಲ್ಲಿ ಬೆಳೆಯಗೊಡುವುದು ಮೂರ್ತಿಯವರ ಕತೆಗಾರಿಕೆಯ ಚೆಹರೆಯಾಗಿದೆ. ಮೂರ್ತಿ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ನಿರ್ಲಕ್ಷಿಸಿ ಕಥಾವಸ್ತುವನ್ನು ಸರಳೀಕರಿಸುವುದಿಲ್ಲ. ಇವರ ಕತೆಗಳ ಅಂತರಂಗವು ಸರ್ವಗ್ರಾಹಿಯಾದ ಏಕಾಗ್ರ ಓದಿಗೆ ಮಾತ್ರ ಎಟಕುವಂತಹುದು. ಅಂತಹ ಸಂಕೀರ್ಣವಾದ ಬದುಕಿನ ಅನುಭವವನ್ನು ಆ ಸಂವೇದನೆಯ ಒಂದಂಶವನ್ನು ಕೂಡ ನಿರ್ಲಕ್ಷಿಸದೆ ಸಾಂದ್ರವಾದ ವಿವರಗಳಿಂದ ಅದಕ್ಕೆಂದೇ ಎಂದೋ ತನ್ನೊಳಗೆ ಹದಗೊಂಡು ಕಾದಿರುವ ಭಾಷೆಯಲ್ಲಿ ಆಖ್ಯಾನಿಸುವುದು ಮೂರ್ತಿಯವರ ಅಸಾಧಾರಣವಾದ ಕತೆಗಾರಿಕೆಯ ಗುಣ. ಇದಕ್ಕೆ ನಿದರ್ಶನವಾಗಿ `ಆಖ್ಯಾನ’ದ ಯಾವುದೇ ಕತೆ ಒದಗಬಲ್ಲದು. ಉದಾಹರಣೆಗೆ- `ಕಾಣದ ಕಡಲ ಹಾದಿ’ ಅಥವಾ `ಮನದ ಮಾಮರದಲ್ಲೊಂದು ಕೋಗಿಲೆ’. `ಆಖ್ಯಾನ’ದ ಒಂದೊಂದೂ ಕತೆ ಒಂದೊಂದು ಪ್ರತ್ಯೇಕ ಲೋಕ. ಬಹುಶಃ ಎಲ್ಲಾ ಶ್ರೇಷ್ಠ ಕತೆಗಳೂ ತನ್ನದಾದ ಒಂದು ಸ್ವಯಂಪೂರ್ಣ ಲೋಕದ ಆವರಣವನ್ನು ನಿರ್ಮಿಸಿಕೊಂಡು ಅದರೊಳಕ್ಕೆ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತವೆ. `ಆಖ್ಯಾನ’ದ ಎಲ್ಲಾ ಕತೆಗಳಲ್ಲಿ ಓರ್ವ ಸಾತ್ವಿಕ ಮನಸ್ಸಿನ ನಿರೂಪಕನಿದ್ದಾನೆ. ಅವನ ವೈಚಾರಿಕ ತಾಕಲಾಟ ಹಾಗು ಅಂತರಂಗದ ಧ್ವನಿ ಅವನನ್ನು ಅಂತಿಮವಾಗಿ ದಡವೊಂದಕ್ಕೆ ತಲುಪಿಸುವ ಸ್ವಾರಸ್ಯವನ್ನಿಲ್ಲಿ ಕಾಣುತ್ತೇವೆ. ಕತೆಯಲ್ಲಿ ಜರುಗುವ ಕ್ರಿಯೆಗಳೆಲ್ಲ ಹೆಚ್ಚಿನ ಪಾಲು ಅಮೂರ್ತದಲ್ಲಿ ಗ್ರಹಿಸಬೇಕಾದಂಥವು; ನಿರೂಪಕನ ನೆನಪಿನಲ್ಲಿ ಮತ್ತೆ ಮತ್ತೆ ಉಕ್ಕಿ ಅದರ ಭಾವಬಿಂಬಗಳಲ್ಲಿಯಷ್ಟೆ ಕಾಣಸಿಗುವಂಥವು. ಮೂರ್ತಿಯವರ ಪಾತ್ರಗಳೆಲ್ಲ ಒಂದೋ ಉತ್ಕಟವಾದ ಪ್ರೀತಿಯಲ್ಲಿ ಬದುಕು ಸವೆಸಬೇಕೆನ್ನುವವರು, ಇಲ್ಲ, ನಿರುಪಯುಕ್ತರಾಗಿ ಆತ್ಮಘಾತುಕರಾದವರು; ಸ್ವಾಭಿಮಾನಿಗಳಾಗಿ, ಜೀವಕಾಮಿಗಳಾದ ಹೆಣ್ಣಾಗಿ ಗಂಡಾಗಿ ತೀವ್ರವಾದ ಭಾವನೆಗಳ ಅನುಪಾಲನೆಯನ್ನೇ ಸುಖವೆಂದು ಬಗೆವ ಕಷ್ಟಸಹಿಷ್ಣುಗಳು. ಮೂರ್ತಿಯವರ ಕತೆಗಾರಿಕೆ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವ ನವ್ಯಪಂಥದ್ದೇ ಆದರೂ ಕೂಡ ಅದು ನವ್ಯಸಾಹಿತ್ಯದಲ್ಲೆಲ್ಲೂ ಇಷ್ಟೊಂದು ಸ್ವಯಂಪೂರ್ಣವಾಗಿಲ್ಲ. ಈ ಕತೆಗಳ ಸ್ವಪ್ನಸದೃಶ ಲೋಕದೊಳಕ್ಕೆ ಸಾಗುವ ಓದುಗ ಮೃದುವಾಗುತ್ತಾನೆ, ಭಾವನೆಯ ತೂಗಿನಲ್ಲಿ ಕತೆಗಳ `ಜೀವ ಪೋಷಕ ಗುಣ’ಗಳಿಗೆ ತೆರೆದುಕೊಳ್ಳುತ್ತಾನೆ. ಒಟ್ಟಿನಲ್ಲಿ `ಅಂತರಂಗದ ಆಖ್ಯಾನ’ದ ಭಾವಶಿಲ್ಪಗಳಾಗಿರುವ ಇವು ತುಂಬ ತನ್ಮಯಗೊಳಿಸುವ ಕತೆಗಳು.
ಆದರೂ ಓದುಗನಾಗಿ ನನಗೆ ಈ ಕತೆಗಳೊಡನೆ ಅತೃಪ್ತಿಯೊಂದಿದೆ. ಕೃತಿಯೊಂದು ನನಗೆ ಬಹಳ ಇಷ್ಟವೆನಿಸಿದಾಗ ಮಾತ್ರ ನನ್ನ ಅತೃಪ್ತಿ ಎಲ್ಲ ಓದುಗರ ಪರವಾಗಿ ಮುಖ್ಯವೆನಿಸುತ್ತದೆ. ಈ ಮೇಲೆ ಹೇಳಲಾದಂತೆ, ಈ ಕತೆಗಳ ಭಾವಶಿಲ್ಪ, ವಿವರಗಳ ಸಮೃದ್ಧಿ, ವೈಚಾರಿಕತೆ, -ಈ ಎಲ್ಲವನ್ನೂ ಒಳಗೊಂಡ ಕಲಾಶಿಸ್ತು ಈ ಕತೆಗಳನ್ನು ಸ್ವಯಂಪೂರ್ಣಗೊಳಿಸಿದೆ. ಓದುಗನ ಪಾಲಿಗೆ ಅದರ ಒಳಕ್ಕೆ ವಿಹರಿಸುವ ಸುಖವಷ್ಟೆ ಮಿಕ್ಕಿರುತ್ತದೆ. ಆದರೆ ನನಗನಿಸುವಂತೆ ಕತೆ ಅಥವಾ ಕವಿತೆಯೊಂದು ಲೇಖಕನಿಂದ ಆರಂಭವಾಗಿ ತನ್ನ ಓದುಗನೊಳಕ್ಕೆ ಅಡಿಯಿಟ್ಟು ಸಾರ್ಥಕವಾಗಬೇಕಾದುದು. ಸೃಜನಶೀಲಕೃತಿ ತನ್ನೊಳಗೇ ಮುಗಿಯುವಂಥದಲ್ಲ. ಅದು ಓದುಗನನ್ನೂ ಕಾಡಬೇಕಾದ್ದು, ಆತನನ್ನೂ ಒಳಗೊಂಡು. `ಆಖ್ಯಾನ’ದ ಕತೆಗಳು ಓದುಗನನ್ನು ಮೆಚ್ಚಿಸುವಷ್ಟು ಓದುಗನ್ನು ಕಾಡುವುದಿಲ್ಲ. ಕಾರಣ, ಈ ಕತೆಗಳು ತುಂಬ ನುಣುಪಾದದ್ದೇ! ತುಂಬ ಎಕ್ಸ್‍ಕ್ಲೂಸಿವ್ ಕತೆಗಳಾದದ್ದೇ!-ಎನ್ನುವ ಸಂದಿಗ್ಧ ನನಗೆ. ಈ ಕತೆಗಳನ್ನು ಓದುವಾಗ ಸಿದ್ಧಿಸುವ ತನ್ಮಯತೆ ಭಾಷೆಯ ಮತ್ತು ಕೋಮಲ ಭಾವನೆಗಳ ವಿವರಗಳ ಸಂಗೀತದ್ದೇ?-ಎನ್ನುವ ಪ್ರಶ್ನೆಗೆ ನಾನು ಉತ್ತರಗಳನ್ನು ಹುಡುಕಿಕೊಳ್ಳಬೇಕಾಗಿದೆ. ನಮ್ಮೆಲ್ಲರ ಒಳಗೆ ಯಾವುದೋ ತಳಪಾತಳಿಯಲ್ಲಿರುವ ಕುಸುಮಕೋಮಲವಾದ ಭಾವತರಂಗಗಳನ್ನು ಈ ಕತೆಗಳು ಬಡಿದೆಬ್ಬಿಸುತ್ತವೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ನಾನಿದನ್ನು ಅಂದುಕೊಳ್ಳುತ್ತಿದ್ದೇನೆ. ಇದೇ ಸಂಕಲನದಲ್ಲಿರುವ `ಸಾಂಪ್ರತ’ ಕತೆಯೊಡನೆ ಉಳಿದ ಕತೆಗಳನ್ನು ಹೋಲಿಸಿಕೊಂಡು ಓದಿದರೂ ನನ್ನ ಅತೃಪ್ತಿಯ ಕಾರಣ ಗೋಚರಿಸದಿರದು. `ಸಾಂಪ್ರತ’ದ ವೈಚಾರಿಕತೆ ಕತೆಯೊಳಗಿನದೇ ಆದರೂ ಕೂಡ ಅದು ನನ್ನದು ಕೂಡ ಆಗುವ ಸಾಮಾಜಿಕತೆ ಹೊಂದಿದೆ; ಈ ಕತೆಯ ಸೈಡ್‍ವಿಂಗ್‍ನಲ್ಲಿ ನಾನೂ ನಿಂತಿರುವ ಭಾವನೆ ನನಗೆ.
`ತೀರ್ಥ’ ಕತೆಯನ್ನು ಓದುವಾಗ ಬದುಕು ಕ್ರಿಯೆಯೋ ಅಥವಾ ಪ್ರತಿಕ್ರಿಯೆಯೋ ಎನ್ನುವ ಪ್ರಶ್ನೆ ಉದ್ಭವಿಸಿದ್ದನ್ನು ಕೂಡ ಮರೆಯಲಾರೆ. ಹೀಗೆ ಇಷ್ಟೊಂದು ಪ್ರಶ್ನೆಗಳಾಗಿ ಉಳಿಯಲು ಹವಣಿಸುವ ಈ ಕತೆಗಳ ಕುರಿತು ನನ್ನ ಅತೃಪ್ತಿಯನ್ನು ಇಮ್ಮನಿಸ್ಸಿನಿಂದಲೆ ದಾಖಲಿಸುತ್ತಿದ್ದೇನೆ. ನನ್ನ ಅನಿಸಿಕೆಯಲ್ಲಿ ನಾನು ಎಡವಿರಲೂಬಹುದು ಎನ್ನುವ ಇಮ್ಮನಸ್ಸಿನಲ್ಲಿ; `ಆಖ್ಯಾನ’ವನ್ನು ಯಾಕೆ ಓದದೆ ಇರಲಾರೆ ಎನ್ನುವ ಪ್ರಶ್ನೆಯನ್ನು ಉಳಿಸಿಕೊಂಡು.
ಆರ್.ಡಿ.ಹೆಗಡೆ ಆಲ್ಮನೆ
Facebook ಕಾಮೆಂಟ್ಸ್