X
    Categories: ಅಂಕಣ

ಆಕಾಶ ಮಾರ್ಗ…!

..ಬರೆಯುತ್ತೇನೆಂದು ಹೊರಟು ಬಿಡುವುದು ಸುಲಭ ಆದರೆ ಬರೆದದ್ದನ್ನು ದಕ್ಕಿಸಿಕೊಳ್ಳುವುದು ..?ಉಹೂಂ ಅದಷ್ಟು ಸುಲಭವೂ ಇಲ್ಲ. ಗೊತ್ತಿದ್ದುದನ್ನಷ್ಟೆ ಬರೆಯುತ್ತೇನೆನ್ನುವರೂ ಇಲ್ಲ. ಈಗ ಏನಿದ್ದರೂ ಇಂಟರ್‍ನೆಟ್ಟಿನಿಂದ ಭಟ್ಟಿ ಇಳಿಸಿ ವೇದಿಕೆ,ಮೈಕು ಮತ್ತು ಟಿ.ಆರ್.ಪಿ.ಗಾಗಿ ಓರಾಟ ಮಾಡುವ ಟವಲ್ ಗ್ಯಾಂಗಿನವರದ್ದೇ ಹುಯಿಲು. ಇವರೆಲ್ಲರ ಮಾರ್ಗದ ಮಧ್ಯೆ ನಿಂತು ಪಕ್ಷೀ ನೋಟ ಬೀರುವುದೇ ಆಕಾಶ ಮಾರ್ಗದ ಉದ್ದೇಶ

ಬರಹ ಒಂದು ಮಾನಸಿಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವಂತಹ ಪ್ರಕ್ರಿಯೆ ಹೊರತಾಗಿ ಅಗತ್ಯಕ್ಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಬದಲಿಸಿಕೊಳ್ಳುತ್ತಾ, ಸಮಾಜದಲ್ಲಿ ನನ್ನದೂ ಒಂದಿರಲಿ ಎಂದು ಎಕ್ಕಾ ಬಿಸಾಕಿ ಕೂತುಕೊಳ್ಳುವ ಇಸ್ಪೀಟು ಅಡ್ಡೆಯಲ್ಲ. ಐಡೆಂಟಿಟಿಗಾಗಿ ಮತ್ತು ಸ್ವಂತದ್ದೆಂದು ಏನೂ ಇಲ್ಲದಿದ್ದಾಗ ಬಾಯಿಗೆ, ಕೈಗೆ ಬಂದಿದ್ದು ಬರೆದು ನೆಗೆಟಿವ್ವೋ ಪಾಸಿಟಿವ್ವೋ ಒಂದಿಷ್ಟು ಬರೆದು ದಿನಕ್ಕೆ ನಾಲ್ಕಾರು ಜನರಲ್ಲಿ ವೈಮನಸ್ಸು ಉಂಟು ಮಾಡುವ ಹರಾಮಿತನವಂತೂ ಮೊದಲೇ ಅಲ್ಲ.

ಆದರೆ ಇವತ್ತು ವ್ಯವಸ್ಥಿತವಾಗಿ ಸಮಾಜ ಒಡೆಯುವ ಮತ್ತು ಬಹಿರಂಗವಾಗಿ ಕೇವಲ ನಮ್ಮವರನ್ನು ಮಾತ್ರ ಟೀಕಿಸಿ ದಕ್ಕಿಸಿಕೊಳ್ಳಬಹುದಾದ ಎಲ್ಲಾ ದುರ್ಮಾರ್ಗಗಳನ್ನೂ ಅನುಸರಿಸುತ್ತಿರುವವರ ದೊಡ್ಡ ದಂಡೇ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದೆ. ಅಸಲಿಗೆ ಇವರಿಗೆಲ್ಲ ಬರಹ ಅಥವಾ ಸಾಹಿತ್ಯದಿಂದ ಆಗಬೇಕಾದುದೇನೂ ಇಲ್ಲ. ಹೊಟ್ಟೆ ಹೊರೆಯಲು ಯಾವುದೇ ಕಾಯಕ ಅಥವಾ ಮರ್ಯಾದೆಯುತವಾದ ಜೀವನ, ಸಾಯಲಿ ಕನಿಷ್ಟ ಅತ್ಮಾಭಿಮಾನದಂತಹ ವಿಷಯಕ್ಕೂ ಇವರಲ್ಲಿ ಯಾವ ಕಿಮ್ಮತ್ತೂ ಉಳಿದಿರುವುದಿಲ್ಲ. ಅದಕ್ಕೆಲ್ಲಾ ಏನಿದ್ದರೂ ಬಿಸ್ಕತ್ತು ಬಿಸಾಕಿದಂತೆ ಸ್ಥಳೀಯವಾಗಿ ಸೇರಿದಂತೆ ದೇಶ ವಿದೇಶದಿಂದಲೂ ಫಂಡು, ತುಂಡು ಎಲ್ಲಾ ಮೈ ಮನಸ್ಸಿಗೆ ಕಾಲಕಾಲಕ್ಕೆ ಲಭ್ಯವಾಗುತ್ತಿರುತ್ತದೆ. ಆದರೆ ಟಿ.ಆರ್.ಪಿ,ಐಡೆಂಟಿಟಿ…? ಅದನ್ನಾರು ಕೊಡಬೇಕು..?ಅದೇನಿದ್ದರೂ ಸ್ವಂತದ್ದೇ ಗಳಿಕೆಯಾಗಬೇಕು ಅದಕ್ಕೂ ಏನನ್ನಾದರೂ ಮಾರಿಕೊಳ್ಳಬಹುದಾದರೆ ಅದಕ್ಕೂ ಎಲ್ಲಾ ಮಾರ್ಗಗಳನ್ನು ಅನುಸರಿಸಿ, ತಲೆಯ ಮೇಲೊಂದು ಕರಗದಂತೆ ಪ್ರಶಸ್ತಿ ಫಲಕ ಹೊರುವವರಿಗೇನೂ ಇವತ್ತು ಕಡಿಮೆ ಇಲ್ಲ.

ಹಾಗಾಗೇ ಎಲ್ಲೆಡೆಯಲ್ಲೂ ಇವತ್ತು ಸಾಮಾಜಿಕ ಜಾಲತಾಣದಲ್ಲಿ ವಸ್ತು ನಿಷ್ಟ ಮತ್ತು ರಾಷ್ಟ್ರೀಯವಾಗಿ ಸಿಗಬೇಕಿದ್ದ ಪ್ರಾಮುಖ್ಯದ ವಿಷಯ ವಸ್ತುವಿಗೆ ಯಾವುದೇ ಪ್ರಾಶಸ್ತ್ಯ ಕೊಡದೇ ಕೇವಲ ಋಣಾತ್ಮಾಕ ಧೋರಣೆಗಳಿಗೆ ಮತ್ತು ಎಡಬಿಡಂಗಳಿಗೆ ಮಣೆ ಹಾಕುವುದೇ ಪ್ರಾಧಾನ್ಯವಾಗಿದೆ. ಇಂತಹ ನೇತ್ಯಾತ್ಮಕ ಆತ್ಮಗಳ ಬಣ್ಣ ಬಯಲು ಮಾಡುವುದೂ ಸೇರಿದಂತೆ ದೇಶಾದ್ಯಂತ ಜರಗುತ್ತಿರುವ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವುದೇ ಈ ಲೇಖನ ಮಾಲೆಯ ಉದ್ದೇಶ.

ಕಾರಣ ಇದು ಆಕಾಶ ಮಾರ್ಗ…!

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post