ಕಾದಂಬರಿ

ಕರಾಳಗರ್ಭ ಭಾಗ 7

ಮುಂದಿನ ದಿನಾ ಒಂಬತ್ತಕ್ಕೆ ಮೃದುಲಾ ಮತ್ತು ಫರ್ನಾಂಡೆಸ್ ಇಬ್ಬರು ಅವಳ ಆಫೀಸ್ ರೂಮಿನಲ್ಲಿ ಕಾನ್ಫರೆನ್ಸ್ ಲೈನಿಗೆ ಬಂದರು..ದೊಡ್ಡ ಟಿ ವಿ ಪರದೆಯ ಮೇಲೆ ಬಂದ ಫರ್ನಾಂಡೆಸ್,

“ ಅಬ್ಬಾ, ನಾವು ಕೊಟ್ಟ ದುಡ್ಡಿಗೆ ಮೊದಲ ರಿಪೋರ್ಟ್ ಕೊಡು, ವಿಜಯ್..ಇವತ್ತಾದರೂ!” ಎಂದರು ಮುಖ ಗಂಟಿಕ್ಕಿ. ನೋಡಿದಿರಾ ಈ ಶ್ರೀಮಂತ ಲಾಯರಿನ ದಾಷ್ಟೀಕ?

ನನಗೆ ಕೆಟ್ಟ ಕೋಪ ಬಂದಿತ್ತು,” ಅಂತಾ ರಿಪೋರ್ಟ್ ಕೊಡಬೇಕಾಗಿರುವುದು ನೀವು!. ಇಲ್ಲಿಗೆ ಬಂದ ಎರಡೇ ದಿನದಲ್ಲಿ ಹುಚ್ಚನಂತೆ ಊರೆಲ್ಲಾ ಅಲೆದಿದ್ದೇನೆ…ನನಗೇ ಪ್ರಾಣಾಪಾಯವೂ ಆಗಿದೆ…ಆದರೆ ಕೊನೆಗೆ ನಿಮಗೇ ಗೊತ್ತಿದ್ದ  ಮುಖ್ಯ ವಿಷಯವನ್ನೇ ನನಗೆ ಹೇಳದೆಯೇ ಕಳಿಸಿದಿರಿ…ಹಾಗಾಗಿ ನಿಮ್ಮ ಮೋಸ ಕಪಟ ಬಯಲಾಗಿದೆ…”ಎಂದೆ

“ಯಾವುದು ?” ಎಂದರು ಇಬ್ಬರೂ ಒಟ್ಟಿಗೆ, ದನಿಯಲ್ಲಿ ಗಾಬರಿಯಿತ್ತು..ಕಹಿಸತ್ಯ ನೋಡಿ!.

“ಜಾನಿ..ಐವತ್ತು ಸಾವಿರ….ಎರಡು ಚೆಕ್… ನೀವು ಕೊಟ್ಟ ಹಣ..ಏನಿದರ ಅರ್ಥ?” ಅಷ್ಟು ಸಾಕಲ್ಲ?

ಟಿ ವಿ ಪರದೆಯಲ್ಲಿ ಮೃದುಲಾ ಈಗ ಫರ್ನಾಂಡೆಸ್ ಕಡೆಗೆ ನೋಡಿದರು.

“ ನಾನು ಹೇಳಿದೆ ನಿಮಗೆ, ಮುಚ್ಚಿಡುವುದು ಬೇಡಾ, ವಿಜಯ್ ಕಂಡು ಹಿಡಿದೇ ಹಿಡಿಯುತ್ತಾರೆ ಎಂದು..ನೀವು ಕೇಳಲಿಲ್ಲಾ..” ಎಂದು ಆತನನ್ನು ದೂರಿದಳು

ಫರ್ನಾಂಡೆಸ್ ಚೇತರಿಸಿಕೊಂಡು, “ ಹೌದು, ಆದರೆ ನಾವು ಹಾಗೆ ಮಾಡಲೇ ಬೇಕಾಯ್ತು…ಅವನು ಆ ಎರಡು ವಿಚಿತ್ರ ಪತ್ರಗಳು ಬರೆದು ಕಳಿಸಿದ್ದನಲ್ಲಾ…ಅನಂತರ ನಮ್ಮ ಆಫೀಸಿಗೆ ಬಂದಿದ್ದ.. ನಮ್ಮನ್ನು ಭೇಟಿಯಾದ..ಮೃದುಲಾ ಜನ್ಮದ ಬಗ್ಗೆ ಒಂದು ಭಯಂಕರ ಕಟು ಸತ್ಯವನ್ನು ನಮಗೆ ತಿಳಿಸಿದ…ಅದಕ್ಕಾಗಿ ತನಗೆ ಕೇಳಿ-ಕೇಳಿದಾಗ ಹಣ ಕೊಡದಿದ್ದರೆ ಮೃದುಲಾ ಮಾನ ಮರ್ಯಾದೆ ಹೋಗುವಂತಾ ಈ ಅತ್ಯಂತ ಅಪಾಯಕಾರಿಯಾದ ರಹಸ್ಯವನ್ನು ಪತ್ರಿಕೆ-ಮಾಧ್ಯಮಗಳಿಗೆ ಕೊಟ್ಟು ಬಹಿರಂಗ ಮಾಡುತ್ತೇನೆ ಎಂದು ಬೆದರಿಸಿದ. ಮತ್ತು ತಾನು ಬಂದದ್ದಾಗಲೀ, ಹಣ ಪಡೆಯುವ ವಿಷಯವಾಗಲೀ ಯಾರಿಗೂ ಹೇಳಬಾರದೆಂದ.. ‘ಒಂದು ಫೋನ್ ಕಾಲ್, ಒಂದು ಫ್ಯಾಕ್ಸ್ ಸಾಕು ’ ಎಂದ.. ಮೊದಲು ಎರಡು ಕಂತಿನಂತೆ ೫೦ -೫೦ ಸಾವಿರ ಕೇಳಿದ ಜಾನಿ…ಅದು ದೊಡ್ಡ ದುಡ್ದಲ್ಲ ನಮಗೆ…ಆದರೆ ನಮಗೆ ಪೂರ್ತಿ ವಿಷಯ ಅವನು ಹೇಳಲೇ ಇಲ್ಲಾ..ಅದಕ್ಕಾಗಿಯೇ ನಿಮಗಾಗಲಿ, ನನ್ನ ಮಗಳಿನಂತಿರುವ ಲೂಸಿಯಾಗಾಗಲೀ ಏನೂ ಹೇಳದೆ ಎಲ್ಲಾ ಪತ್ತೆ ಹಚ್ಚಿರೆಂದು ಹೇಳಿ ಸುಮ್ಮನಾದೆವು…ಹೇಗಾದರೂ ಪೂರ್ತಿ ಸತ್ಯ ಹೊರಗೆ ಬರಲಿ ಎಂದು”

ಕೊನೆಗೂ ಜಾನಿಗೆ ಗೊತ್ತಿದ್ದ ರಹಸ್ಯ ಏನೆಂದು ನಮಗೆ ಹೇಳುತ್ತಿಲ್ಲಾ ಈ ಫರ್ನಾಂಡೆಸ್ …! ಎಂತಾ ಚಾಣಾಕ್ಷ ನೋಡಿ..

 ನಾನಂದೆ :” ಮೃದುಲಾ, ನೀವು ನನ್ನ ಕಕ್ಷಿದಾರರು, ನಮ್ಮಿಬ್ಬರ ಮಧ್ಯೆ ಯಾವ ರಹಸ್ಯವೂ ಇರಬಾರದು, ಮುಚ್ಚಿಡಬಾರದು.ಈಗಾಗಲೇ ಈ ಕೇಸ್ ಅಪಾಯಕಾರಿಯಾಗಿದೆ ನಮಗೆ…ಹೇಳಿ,.ಏನಂತೆ ಜಾನಿ ನಿಮಗೆ ಹೆದರಿಸಿದ ಆ ಕಟು ಸತ್ಯ?..ಯಾಕೆ ನಮ್ಮಿಂದ ಬಚ್ಚಿಟ್ಟಿರಿ..ಇದು ನ್ಯಾಯವೆ?” ಎಂದು ಗಂಭೀರವಾಗಿ ಪ್ರಶ್ನಿಸಿದೆ. ಪತ್ತೇದಾರರಿಗೂ ಕಸುಬಿನ ನೀತಿಯಿರುತ್ತೆ ಎಂದು ಅವರಿಗೆ ಅರಿವಾಗಬೇಕು.

ಎರಡು ಕ್ಷಣ ಮನದಲ್ಲೆ ಯೋಚಿಸಿ ನಿರ್ಧಾರಕ್ಕೆ ಬಂದರು ಮೃದುಲಾ, “ ನಾನು ಹುಟ್ಟಿದ್ದು ಅನೈತಿಕ ವಾಗಿಯಂತೆ..ನಮ್ಮಪ್ಪ ಅಮ್ಮನಿಗೆ ಮದುವೆಯಾಗುವ ಮುಂಚೆ ಅಮ್ಮ ಕದ್ದು ಬಸುರಿಯಾಗಿ ನಾನು ಹುಟ್ಟಿದೆನಂತೆ,,ಅವನಿಗೆ ಎಲ್ಲಾ ವಿವರಗಳೂ ಗೊತ್ತಂತೆ..” ಎಂದು ಬಿಕ್ಕಿದರು

“ವಾಟ್!!”..”ಎಂದು ಅಚ್ಚರಿಪಟ್ಟೆವು ನಾವಿಬ್ಬರು..ಇದು ಬಾಂಬೇ ಸರಿ..

ಮೃದುಲಾ ಕಣ್ಣಂಚಿನಲ್ಲಿ ನೀರಾಡುತ್ತಿದೆ ಆದರೆ ಈಗ ಅದು ಅಭಿನಯವಲ್ಲ…

“ಎಲ್ಲರಿಗೂ ಸಮಾಜದಲ್ಲಿ ನಾನು ದತ್ತು ಪುತ್ರಿ ಅಂತಾ ಮಾತ್ರ ಗೊತ್ತಿತ್ತು, ಅದರ ಹಿಂದಿನ ಕಟು ಸತ್ಯ ಗೊತ್ತಿರಲಿಲ್ಲ, ನನಗೂ ಕೇಳಿ ನಂಬಿಕೆ ಬರಲಿಲ್ಲ..ಆದರೆ ಅವನು ಪೂರ್ತಿ ಸತ್ಯವನ್ನು ನಮಗೆ ತಿಳಿಸಲಿಲ್ಲಾ..ಎಲ್ಲಿ ದುಡ್ದು ಕೊಡದಿದ್ದರೆ ಅವನು ಮಾಧ್ಯಮಗಳಿಗೆ ಹೇಳಿಬಿಟ್ಟರೆ, ಮುಂದಿನ ದಿನದ ಹೆಡ್-ಲೈನ್ಸ್ ಊಹಿಸಬಲ್ಲಿರಾ?

“ ಜನಪ್ರಿಯ ನಟಿ ಒಬ್ಬ ಅನೈತಿಕ ಶಿಶು! ..ಟಿ.ವಿ.ಯ ಆದರ್ಶ ನಾರೀಮಣಿ, ಅನೈತಿಕ ಶಿಖಾಮಣಿ!!….. …ಹೀಗೆಲ್ಲಾ…..ಪತ್ರಿಕೆ ಮತ್ತು ಟಿ ವಿ.ಮಾಧ್ಯಮದವರಿಗೆ ಹಬ್ಬವಾಗುತ್ತಿತ್ತು….ನನ್ನ ಮಾನ ಮೂರಾಬಟ್ಟೆಯಾಗುತ್ತಿತ್ತು..ನನ್ನ ಸೀರಿಯಲ್ ನಿಂತು ಲಕ್ಷಾಂತರ ರೂ ನಷ್ಟವಾಗುತಿತ್ತು…ಇದಕ್ಕೆಲ್ಲಾ ನಾನಾಗಲೀ, ವಿಶಾಲ್ ಕಪೂರ್ ಆಗಲಿ ಸಿದ್ಧವಿರಲಿಲ್ಲ..ಅವನಿಗೆ ಎರಡು ಬಾರಿ ದುಡ್ಡು ಕೊಟ್ಟಿದ್ದೇವೆ ಅಷ್ಟೆ… ನಿಮ್ಮನ್ನು ಕೇಳಿಕೊಳ್ಳುವುದು ಇಷ್ಟೇ…

“….ಇನ್ಮುಂದೆ ನಮಗೆ ಜಾನಿಯ ಕಾಟ ನಿಲ್ಲಬೇಕು ಮತ್ತು ನನ್ನ ಜನ್ಮ ಕೊಟ್ಟ ತಂದೆ ತಾಯನ್ನೂ ನೀವು ಪತ್ತೆ ಹಚ್ಚಿ ಕೊಡಬೇಕು..” ಎಂದು ಒತ್ತಾಯಿಸಿದರು ಮೃದುಲಾ. ಮತ್ತದೇ ಹಳೇ ಬೇಡಿಕೆ..

“ ಹಾಗೆ ನಾನು ಕಂಡು ಹಿಡಿದರೂ ನೀವೇನು ಮಾಡಬಲ್ಲಿರಿ?” ಎಂದು ಸವಾಲೆಸೆದೆ.

“ ಅವನು ಜೈಲಿಗೆ ಹೋದರೆ ಮೊದಲು ಬ್ಲ್ಯಾಕ್ ಮೈಲ್ ನಿಲ್ಲುತ್ತದೆ…ಆತಂಕ ನಿವಾರಣೆ..ಮತ್ತು ನನ್ನ ಹೆತ್ತ ತಂದೆ ತಾಯಿಗಳು ಸತ್ಯವಾಗಿ ಸಿಕ್ಕಿದರೆಂದರೆ ನಾನು ನಿಜವಾಗಿಯೂ ಎಲ್ಲರ ಮುಂದೆ ಬಹಿರಂಗವಾಗಿ ಅವರನ್ನು ಒಪ್ಪಿಕೊಳ್ಳುತ್ತೇನೆ..ಟಿ ವಿ-ಪತ್ರಿಕೆಯವರ ಗೋಷ್ಟಿ ಕರೆದು ಅನುಕಂಪದ ಅಲೆಯನ್ನು ನನ್ನ ಕಡೆಗೆ ತಿರುಗಿಸಿಕೊಳ್ಳುತ್ತೇನೆ. ನಾನೇ ಪಾಸಿಟಿವ್ ಆಗಿ ಅವರಿಗೆ ಹೆಡ್-ಲೈನ್ಸ್ ಕೊಡುತ್ತೇನೆ…ಆಗ ಅವರೇ ಟಿ.ವಿ.ಯಲ್ಲಿದ್ದ ಪಾತ್ರದಂತೆಯೇ ನಾನು ಆದರ್ಶ ವ್ಯಕ್ತಿ ಎನ್ನುತ್ತಾರೆ….ಎಲ್ಲಾ ಸುಖಾಂತ್ಯವಾಗುತ್ತದೆ….ಇದನ್ನು ನನಗೆ ಸೂಚಿಸಿದ್ದೆ ಈ ಫರ್ನಾಂಡೆಸ್….ನನ್ನ ಪ್ರೊಡ್ಯೂಸರ್, ನಿಮ್ಮ ಗೆಳೆಯ ವಿಶಾಲ್ ಕೂಡಾ ಒಪ್ಪಿದ್ದಾರೆ..ಅದನ್ನೇ ಒಂದು ಎಪಿಸೋಡ್ ಮಾಡಿಬಿಡೊಣಾ ಎಂದು…ವಾಟ್ ಎನ್ ಐಡಿಯಾ… ಅವರು ಹೇಳಿದ ಮೇಲೆ ಮುಗಿಯಿತು….ಏನಂತೀರಾ..?”ಎಂದರು ಮೃದುಲಾ ಆ ಸಂಕಟದಲ್ಲೂ ಆಶಾಭಾವನೆಯೇ ಮೂರ್ತಿವೆತ್ತಿದಂತೆ.

“ನಾನು ಮೊದಲು ಜೀವ ಸಹಿತ ಬಂದು ನಿಮ್ಮಪ್ಪ ಅಮ್ಮನನ್ನು ಹುಡುಕಿ ಕೊಡುವಂತಾಗಲಿ, ಪತ್ರಿಕಾ ಗೋಷ್ಟಿಗಳ ಬಗ್ಗೆ ಆಗ ಮಾತನಾಡೋಣಾ“ ಎಂದು ನಾನು ಅಲ್ಲೇ ಅವರ ಗಾಳಿಗೋಪುರವನ್ನು ಧರೆಗಿಳಿಸಿದೆ..

“ಡ್ಯಾಡ್” ಎಂದು ಸಾಕು ತಂದೆ ಫರ್ನಾಂಡೆಸ್’ರನ್ನು ಉದ್ದೇಶಿಸಿ ಲೂಸಿ “ ನಾನು ವಿಜಯ್ ಜತೆ ಸೇರಿ ಈ ಕೇಸಿನ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿದ್ದೇನೆ… ನನ್ನ ಜತೆ ಇನ್ನೆಂದಾದರೂ ಈ ತರಹ ಸೀಕ್ರೆಟ್ ಮಾಡಿದರೆ, ನಿಮ್ಮ ಜತೆ ಮಾತಾಡುವುದೂ ಇಲ್ಲಾ, ಕೆಲಸ ಮಾಡುವುದು ಮೊದಲೆ ಇಲ್ಲಾ” ಸಣ್ಣ ಗುಡುಗು ಹಾಕಿ ನನ್ನ ಭಾಗಕ್ಕೆ ಸೇರಿದಳು ಲೂಸಿಯಾ.

“ ಸರಿಯಮ್ಮ, ಲೂಸಿ…ನೀನೂ ವಿಜಯ್ ಇನ್ನು ಜಂಟಿ ಕಾರ್ಯಾಚರಣೆ ಮಾಡಬಹುದು…ಟೂ ಹೆಡ್ಸ್ ಆರ್ ಬೆಟರ್ ಥ್ಯಾನ್ ಒನ್ ( ಒಂದಕ್ಕಿಂತಾ ಎರಡು ತಲೆ ವಾಸಿ)“ಎಂದು ತಲೆಯಿಂದ ದೊಡ್ಡ ಭಾರ ಸಾಗಿ ಹಾಕಿದಂತೆ ನೆಮ್ಮದಿಯಿಂದ  ನಿಡುಸುಯ್ದರು ಫರ್ನಾಂಡೆಸ್.

೧೦

ಅವರಿಬ್ಬರೊಂದಿಗೆ ಸಂಭಾಷಣೆ ಮುಗಿದ ನಂತರ, ನಾನು ಲೂಸಿಯನ್ನು ನೋಡಿ ಮುಗುಳ್ನಕ್ಕೆ..

“ಏನದು ನಿಮ್ಮ ನಗುವಿನ ಅರ್ಥ? ಎಂದಳು ಕಳ್ಳಿ, ಮಳ್ಳಿ

“ ಅವರು ಟೂ ಹಾರ್ಟ್ಸ್ ಆರ್ ಬೆಟರ್ ಥ್ಯಾನ್ ಒನ್( ಒಂದಕ್ಕಿಂತಾ ಜೋಡಿ ಹೃದಯ ವಾಸಿ) ಎನ್ನಲಿಲ್ಲವೆ? ಅದಕ್ಕೇ…” ಎಂದೆ, ಆ ಫರ್ನಾಂಡೆಸ್ ಹೇಳಿದ್ದನ್ನು ತಿರುಚುತ್ತಾ.

“ಅವರು ಹಾರ್ಟ್ಸ್ ಅಂದರೋ, ಹಾರ್ಸ್( ಕುದುರೆ) ಅಂದರೋ ಸರಿಯಾಗಿ ಕೇಳಿಸಲಿಲ್ಲಪ್ಪಾ…” ಎಂದು ಕಿಲಕಿಲ ನಗುತ್ತಾಳೆ ಕಿಲಾಡಿ

ಇನ್ನು ಮೇಲೆ ನನ್ನ ಪಾರ್ಟ್ನರ್ ಅದ ನಿನ್ನನ್ನು ಬರೇ ಲೂಸಿ ಎಂದೇ ಕರೆಯಾಲಾಗುತ್ತದೆ..”ಎಂದು ಮತ್ತೆ ಅವಳಿಗೆ ಪ್ರತ್ಯುತ್ತರ ನೀಡುವ ಅವಕಾಶ ಕೊಡದೆ ಮುಂದುವರೆಸಿದೆ:

“ಲೂಸಿ, ನಾನೀಗ ರಚನಾ ನಂಬೂದರಿಯನ್ನು ಹುಡುಕಿಕೊಂಡು ಹೋಗುತ್ತೇನೆ..ನಂಬೂದರಿಯನ್ನು ನಂಬಬಾರದು ಎಂದು ಆಕೆ ಹೇಳಿದ್ದನ್ನುಯಾಕೆ ಅಂದು ನೋಡೇಬಿಡೋಣಾ..”ಎನ್ನುತ್ತಾ ಸೀಟಿನೆಂದೆದ್ದು ಹೊರಗೆ ಹೊರಟವನು ತಕ್ಷಣ ನೆನೆಪಿಗೆ ಬಂದು, “ನಿಮ್ಮ ಕಸ ಗುಡಿಸುವ ಶಾಂತಿ ಬಂದಳೇ?.., ಅದೇ ನಮ್ಮ ಜಾನಿಯ ಗರ್ಲ್ಫ್ರೆಂಡ್?” ಎಂದೆ.

ಆಗ ಲೂಸಿ ಹುಬ್ಬುಗಂಟಿಕ್ಕುತ್ತಾ ಎದ್ದು, “ಹೌದಲ್ಲಾ?…ಅವಳು ಬಂದರೆ ಜನ್ಮ ಜಾಲಾಡುತ್ತಿದ್ದೆ. ಅರೆಸ್ಟೇ ಮಾಡಿಸಿ ಬಿಡೋಣವೆಂದಿದ್ದೆ…ಆದರೆ ಇವತ್ತೇಕೋ ಬಂದೇ ಇಲ್ಲಾ…” ಎಂದಳು

“ ಇರಲಿ, ಅವರಿಬ್ಬರನ್ನೂ ಪ್ರತ್ಯೇಕವಾಗಿ ಡೀಲ್ ಮಾಡೋಣಾ..ಮೊದಲು ಅವರಿಗೆ ತಿಳಿದ ರಹಸ್ಯ ಏನೆಂದು ತಿಳಿದುಕೊಳ್ಳೋಣ, ಅವರಿಗೆ ಸ್ವಲ್ಪ ಅನುಮಾನ ಬಂದರೂ ಪತ್ರಿಕೆಗಳಿಗೆ ಲೀಕ್ ಮಾಡಿ ನಮ್ಮ ಕೆಲಸ ಕೆಡಿಸಿಬಿಡಬಹುದು, ಹುಶಾರಾಗಿರಬೇಕು” ಎಂದೆ.

“ ಜಾನಿಗೆ ನೀವೇ ಮೇ ತಿಂಗಳ ಕಾಗದಗಳನ್ನು ಅವನ ಮನೆಯಿಂದ ಕದ್ದಿದ್ದು ಅಂತಾ ಗೊತ್ತಾಗಿಬಿಟ್ಟರೆ?…”ಎಂದಳು ಜಾಣೆ.

” ನಾನೇ ಎಂದು ಅವನು ನೋಡಿಲ್ಲ. ಜತೆಗೆ ಅವನಿಗೂ ಯಾರೋ ಒಬ್ಬ ಶತ್ರುವಿದ್ದಾನಲ್ಲಾ.. ಅವನ ಮೇಲೆಯೇ ಜಾನಿಗೆ ಅನುಮಾನ ಬರಬಹುದು…”ಎಂದು ತಲೆಯ ಬೋರೆ ಮುಟ್ಟಿಕೊಳ್ಳುತ್ತಾ ಹೊರಬಂದೆ.

ಸಮಯ ಹತ್ತು ಘಂಟೆಯಾಗುತ್ತಿತ್ತು.

ನಾನೂ ಲೂಸಿ ಈ ಬೆಳಿಗ್ಗೆ ತಾನೆ ಆಕೆಯ ಆಫೀಸಿನಲ್ಲಿ ‘ಯೆಲ್ಲೋ ಪೇಜಸ್ ’ ತಿರುವಿಹಾಕಿ, ಲೋಕಲ್ ಪೇಪರ್ಸ್’ನಲ್ಲಿ ರಚನಾರ ಮತ್ತು ಕಮೀಶನರ್ ಬಗ್ಗೆ ಓದಿ ತಿಳಿದು ಮತ್ತೂ ಕೆಲವರು ಲೋಕಲ್ ಕಾಂಟ್ಯಾಕ್ಟ್ಸ್ ಅನ್ನುತ್ತಾರಲ್ಲ ಅವರೆಲ್ಲರಿಂದ ಸಂಗ್ರಹಿಸಿದ್ದ ವಿಷಯ ಇಷ್ಟು….

ಈಗಾಕೆ ರಚನಾ ರಾಮನ್… ಇಲ್ಲಿನ ಪೋಲಿಸ್ ಕಮೀಶನರ್ ರಾಮನ್’ರವರ ಪತ್ನಿ…ಊರಿನ ಮಾರ್ಕೆಟ್ ಬೀದಿಯಲ್ಲಿ ಬಣ್ಣದ ಪೇಂಟಿಂಗ್ಸ್ ಶಾಪ್ ಇಟ್ಟಿದ್ದಾರೆ. ಸ್ವತಃ ಕಲಾವಿದೆಯಂತೆ..ದಿನಾ ಬೆಳಗ್ಗೆ ಹತ್ತೂವರೆಯಿಂದ ಮಧ್ಯಾಹ್ನ ೪ ರವರೆಗೆ ಅಲ್ಲಿರುತ್ತಾರಂತೆ..ಆಮೇಲೆ ತಮ್ಮ ವಯಸ್ಸಾದ ತಂದೆ ನಂಬೂದರಿಯನ್ನು ನೋಡಿಕೊಳ್ಳಲು ಹೊರಟುಹೋಗುತ್ತಾರಂತೆ…ಆಕೆಯ ಪತಿ ಕಮೀಶನರ್ ಮನೆಯೂ ಪಕ್ಕದಲ್ಲೆ ಇದೆಯಂತೆ..

ಈ ನಂಬೂದರಿಗಳಿಗೆ ಮೃದುಲಾ ತಂದೆತಾಯಿಗಳ ಬಗ್ಗೆ ಏನು ಅಥವಾ ಎಷ್ಟು ತಿಳಿದರಲು ಸಾಧ್ಯ ಎಂಬುದು ಈಗಲೇ ನನಗೆ ಗೊತ್ತಿರಲಿಲ್ಲ. ಸುಬ್ಬಮ್ಮನ ಪ್ರಕಾರ ಚೆನ್ನಾಗಿಯೆ ಗೊತ್ತಿರಬೇಕು!

ಈ  ‘ರಚನಾ ಪೇಂಟಿಂಗ್ಸ್ ಶಾಪೀ’ ಎಂಬ ಅಂಗಡಿಯಿದ್ದಿದ್ದು ಬಿಝಿ ಜನನಿಬಿಡ ರಸ್ತೆಯ ಅಂಚಿನಲ್ಲಿ.. ನಾನು ಅದರೆದುರು ಅದೃಷ್ಟವಶಾತ್ ಇದ್ದ ಕಾರ್ಪೊರೇಷನ್ ಕಾರ್ ಪಾರ್ಕಿನಲ್ಲಿ ಅರ್ಧದಿನದ ಟಿಕೆಟ್ ತೆಗೆದುಕೊಂಡು ಬಂದು, ಪಕ್ಕದ ಡಬ್ಬಿ ಅಂಗಡಿಯಿಂದ ಫ್ಲಾಸ್ಕಿನಲ್ಲಿ ಕಾಫಿ- ಬಿಸ್ಕೇಟ್ಸ್ ಮತ್ತು ಕ್ಯಾಡ್ಬರಿ ಚಾಕಲೇಟ್ಸ್ ತಂದಿಟ್ಟುಕೊಂಡು ನನ್ನ ಕಾರನ್ನು ಅಂಗಡಿಯ ಮುಂಬಾಗಿಲಿಗೆ ಮುಖ ಮಾಡಿ ನಿಲ್ಲಿಸಿ ಕಾಯಲು ಆರಂಭಿಸಿದೆ..

ಕಾಯುವುದು ಎಂಬುದು ಪತ್ತೇದಾರನಿಗೆ ಬೇಕಾದ ಮುಖ್ಯ ಕಲೆ..ಕಾಫಿ-ತಿಂಡಿ ಜತೆಗಿದ್ದರೆ ಸುಮ್ಮನೆ ಕೂತು ಕಾಯುವುದನ್ನು ನನಗೆ ಯಾರೂ ಹೇಳಿಕೊಡಬೇಕಿಲ್ಲಾ..ನಿದ್ದೆ ಬರಬಾರದು ಅಷ್ಟೆ… ಬಿಸ್ಕೆಟ್ಸ್- ಚಾಕಲೇಟ್ಸ್ ಖಾಲಿ ಮಾಡುತ್ತಾ ಕುಳಿತೆ..

ಹತ್ತೂವರೆ ಹೊತ್ತಿಗೆ ಒಂದು ಮಾರುತಿ ಡಿಜೈರ್ ಕಾರ್ ಆಂಗಡಿಯ ಮುಂದೆಯೇ ನಿಂತಿತು..ಒಬ್ಬರು ಮಧ್ಯವಯಸ್ಕ ಮಹಿಳೆ ಆ ಕಾರಿನಿಂದ ಇಳಿದು ರೋಲಿಂಗ್ ಶಟರ್ಸ್ ಬಳಿಗೆ ಬಂದರು…

ನನಗೆ ಒಂದು ಕ್ಷಣ ಎದೆ ಬಡಿತ ನಿಂತಂತಾಯಿತು, ಚಾಕಲೇಟ್ ಗಂಟಲಲ್ಲಿ ಸಿಕ್ಕಿಕೊಡಂತಾಯ್ತು..

ಈ ರಚನಾ ನಮ್ಮ ಮೃದುಲಾರ ಪಡಿಯಚ್ಚು…!! ಮೃದುಲಾಗೆ ಇನ್ನೂ ೧೫-೨೦ ವರ್ಷವಾದರೆ ಥೇಟ್ ಹೇಗೆ ಇರಬಲ್ಲರು ಎಂದು ಸಾಕಾರವಾದಂತಿದೆ… ರಚನಾ–ನಂಬೂದರಿ-ರಾಮನ್’ರವರ ಮುಖ ಚರ್ಯೆ, ವ್ಯಕ್ತಿತ್ಚ, ಮೈಕಟ್ಟು ನೆಡೆ ಎಲ್ಲವೂ ಮೃದುಲಾರನ್ನು ಹೋಲುತ್ತದೆ…ಅಂದರೆ ಈಕೆ ಮೃದುಲಾಗೆ ಅಕ್ಕನೇ ಇರಬೇಕು…ಇಲ್ಲದಿದ್ದರೆ ಅದೇ ರೂಪ- ಲಕ್ಷಣ ಹೇಗೆ ಇರಲು ಸಾಧ್ಯ?…

ಇನ್ನು ಮಿಕ್ಕ ಮೂವರನ್ನು ವಿಚಾರಿಸುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ತಕ್ಷಣ ಲೂಸಿಗೆ ಫೋನ್ ಮಾಡಿದೆ:

“ ನಿನ್ನ ಕಡೆಯ ತನಿಖೆಯನ್ನು ನಿಲ್ಲಿಸಬಹುದು… ನನ್ನನ್ನು ಸರಿಯಾಗಿಯೇ ಗೈಡ್ ಮಾಡಿದೆ, ರಚನಾ ಬಗ್ಗೆ..” ಎಂದು ಇಲ್ಲಿ ಕಂಡಿದ್ದನ್ನು ವಿವರಿಸಿದೆ.

” ನೀವು ಒಬ್ಬರೇ ಹೋಗಿ ಆಕೆಯನ್ನು ಭೇಟಿ ಮಾಡಬೇಡಿ, ಒಪ್ಪದಿರಬಹುದು..ನಾನು ಬಂದು ಇದು ಕಾನೂನಿನ ವಿಚಾರ ಎಂದೆಲ್ಲಾ ಅವರಿಗೆ ವಿವರಿಸಿದರೆ ಅವರು ಸಹಕರಿಸಬಹುದು…ಈಗಲೇ ಹೊರಟೆ” ಎಂದಳು..

ನಾನು ಹೇಳಲಿಲ್ಲವೆ, ದಕ್ಷ ಲಾಯರ್ ಇವಳು.

“ಹೌದು, ಇಬ್ಬರೂ ಆಕೆಯ ಜತೆಗಿನ ಸಂಭಾಷಣೆಗೆ ಪರಸ್ಪರ ಸಾಕ್ಷಿಯಾಗಿರಬಹುದು..ನಿನಗಾಗಿ ಇಲ್ಲೇ ಕಾಯುತ್ತಿದ್ದೇನೆ..”ಎಂದು ಮಾತು ಮುಗಿಸಿ ಅವಳಿಗಾಗಿ ಕಾಯತೊಡಗಿದೆ.

ನಾನು ಯೋಚಿಸತೊಡಗಿದೆ..‘ನಂಬೂದರಿಯನ್ನು ನಂಬಬಾರದು ’ ಎಂದಿದ್ದಳು ಆ ಸುಬ್ಬಮ್ಮ..ಆದರೇಕೆ ಈಕೆಯ ತಂದೆಯನ್ನು ನಾವು ನಂಬಬಾರದು?..ಮೂವತ್ತೈದು ವರ್ಷದ ಕೆಳಗೆ ನಡೆದ ತನ್ನ ತಂಗಿಯ ಜನ್ಮ, ದತ್ತು ವಿಚಾರವೆಲ್ಲಾ ಈಕೆಗೆ ತಿಳಿದಿದೆಯೆ?…ಮೃದುಲಾಗೆ ಬ್ಲ್ಯಾಕ್ ಮೈಲ್ ಮಾಡಿದ ಜಾನಿ ಇವರನ್ನೂ ಕಂಡು ಹಿಡಿದಿದ್ದರೆ?..ಅವನು ಇವರಿಗೂ ಸಹಿತಾ?..

ಊ-ಹೂ, ಇದಕ್ಕೆಲ್ಲ ಸುಲಭ ಉತ್ತರವೇ ಇಲ್ಲದಾಗಿದೆ.

ಲೂಸಿ ದಡಬಡಾಯಿಸಿಕೊಂಡು ಡ್ರೈವ್ ಮಾಡುತಾ ಬಂದು ಕಾರನ್ನು ‘ಕ್ರೀಚ್ ’ ಎಂದು ನನ್ನ ಪಕ್ಕಕ್ಕೆ ನಿಲ್ಲಿಸಿದಳು..ನಾನೂ ಕಾರಿನಿಂದ ಹೊರಬಂದೆ.

“ ಹೀಗೆ ಸ್ಪೀಡಾಗಿ ಬರುವಾಗ ಯಾವುದೇ ಕಾನೂನು ಮುರಿಯಲಿಲ್ಲಾ , ತಾನೆ, ಕಾನೂನು ದೇವತೆ?” ಎಂದು ನಗಾಡಿದೆ.

“ಮುರಿಯಲಿಲ್ಲ, ಸ್ವಲ್ಪ ಬಗ್ಗಿಸಿದೆ..”ಎಂದು ನಕ್ಕು ಹೊರಬಂದಳು.

ತಕ್ಷಣ ಇಬ್ಬರೂ ಆ ಪೇಂಟಿಂಗ್ಸ್ ಅಂಗಡಿಗೆ ಹೋದೆವು.

ಒಳಗೆ ಗಾಜಿನ ಗೋಡೆಗಳಿಗೆ, ಫ್ರೇಮ್ ಮಾಡಿದ ಹಲವಾರು ರಂಗು ರಂಗಿನ ಚಿತ್ರಗಳಿದ್ದವು.

ಮುಖ್ಯವಾಗಿ ಆ ಕರ್ಪೂರಿ ನದಿಯ ಬಳಿ ಸೂರ್ಯಾಸ್ತಮದ ದೃಶ್ಯಗಳು…ಅಲ್ಲೊಬ್ಬ ಕೊಳಲೂದುವ ಹುಡುಗ, ಇಬ್ಬರು ಪ್ರೇಮಿಗಳು ಅಕ್ಕಪಕ್ಕದಲ್ಲಿ ಕುಳಿತಿರುವುದು ಹೀಗೆ..ಎಲ್ಲವನ್ನೂ ಈಕೆಯೆ ರಚಿಸಿರಬಹುದೆ?

“ಹಲೋ, ನಿಮಗೇನು ಬೇಕು?” ಎಂದವಳತ್ತ ತಿರುಗಿ ನೋಡಿದೆವು..ಲೂಸಿ ಮೊದಲ ಬಾರಿ ಆಕೆಯನ್ನು ನೋಡಿ ಅರೆ ಕ್ಷಣ ಮೂಕ ವಿಸ್ಮಿತಳಾದಳು. ನನಗಾದಂತೆಯೆ!.. ಮೃದುಲಾಗೆ ಅಷ್ಟೊಂದು ಹೋಲಿಕೆಯನ್ನು ಅವಳೂ ನಿರೀಕ್ಷಿರಲಿಲ್ಲಾ..

ಆದರೂ ಸಂಭಾಲಿಸಿಕೊಂಡು ಲೂಸಿ ನುಡಿದಳು:

“ನೋಡಿ, ಮಿಸೆಸ್ ರಾಮನ್… ನಾನೊಬ್ಬ ಸಿವಿಲ್ ಲಾಯರ್ ಲೂಸಿಯಾ ಅಂತಾ..ಇವರು ನಮ್ಮ ಪತ್ತೆದಾರರು ವಿಜಯ್.. ಒಂದು ಹಳೇ ಜನ್ಮ – ದತ್ತು ವಿಚಾರವಾಗಿ ನಿಮ್ಮನ್ನು ಮಾತನಾಡಿಸೋಣಾ ಎಂದು ನಾವು ಬಂದಿದ್ದೇವೆ..ಪೋಲಿಸ್ ಕಮೀಶನರ್ ಪತ್ನಿಯಾದ ನೀವು ಇಂತದಕ್ಕೆ ಒಪ್ಪುತ್ತೀರಿ, ಸಹಕರಿಸುತ್ತೀರಿ ಎಂದು ನಂಬಿದ್ದೇವೆ..”

ಆಕೆ ಸ್ವಲ್ಪ ಗಾಬರಿಯಾದವಳಂತೆ “ ಯಾರ ಜನ್ಮ– ದತ್ತು? ..ನನಗೇಗೆ…” ಎನ್ನುವಷ್ಟರಲ್ಲಿ, ಲೂಸಿ ಮತ್ತೆ ಸಾವಧಾನದಿಂದ ವಿವರಿಸಿದಳು:

ಮುಂದುವರಿಯುವುದು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!