X

ಹೀಗೊಂದು ಸ್ವ-ವಿಮರ್ಶೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು-ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು ಯಾರು ಇಲ್ಲ. ಬಲಪಕ್ಕದಲ್ಲಿರುವನಿಗೆ ಎರಡಂತಸ್ತಿನ ಮನೆ, ಎಡಪಕ್ಕದಲ್ಲಿರುವ ನಿಲ್ಲಲು ಸೂರಿಲ್ಲದ ಭಿಕಾರಿ, ಒಂದಸ್ತಿನ ಮನೆಯಲ್ಲಿರುವ ನಾವು ಎರಡಂತಸ್ತಿರುವನನ್ನು ನೋಡಿ ಹಲುಬುತ್ತೇವೆಯಾಗಲಿ, ಏನು ಇಲ್ಲದವನಿಗಾಗಿ ಕರುಬುವುದಿಲ್ಲ. ನಮ್ಮ ಮನೆಯಲ್ಲಿರುವ ಬೇವಿನ ಗಿಡ ಕಹಿ ಎಂಬುದು ನಮಗೆ ಗೊತ್ತಿಲ್ಲ, ಪಕ್ಕದ ಮನೆಯ ಮಾವಿನಕಾಯಿ ಹುಳಿ ಎನ್ನುತ್ತೇವೆ. ಬದುಕು ಎನ್ನುವುದೊಂದು ಈರುಳ್ಳಿಯಂತೆ ಒಂದೊಂದೆ ಪದರ ಕಳಚಿದಷ್ಟು ಮತ್ತೊಂದು, ಕೊನೆಯ ಪದರ ತೆರೆಯುವುದರಲ್ಲಿ ನಾವೆ ಇಲ್ಲ. ಪಕ್ಕದವನು ಗೆದ್ದರೆ ಅಸೂಯೆ ಎದುರಿನವನು ಸೋತರೆ ಸಂತೋಷ. ಒಟ್ಟು ಪ್ರತಿಯೊಬ್ಬನಿಗೂ ಬೇಕು ಸರ್ವಾಧಿಕಾರ, ತನಗೆ ಅರ್ಹತೆ ಇದೆಯೋ ಇಲ್ಲವೋ ಎಂಬುದು ಅನವಶ್ಯಕ ಒಟ್ಟು ನಾ ಗೆಲ್ಲಬೇಕು, ಗೆಲ್ಲುತ್ತಲೇ ಇರಬೇಕು, ನನ್ನ ಮುಂದ್ಯಾರು ಗೆಲ್ಲಬಾರದೆಂಬ ಮಹದಾಸೆ ನನಗೆ, ಅದಕ್ಕಾಗಿಯೇ ಒಳಿತು ಕೆಡಕುಗಳ ಮೆಟ್ಟಿ ನನ್ನ ಕಾರ್ಯ. ನಾನು ಹೇಗಿದ್ದರೂ ಸರಿಯೇ, ಇತರರು ನನ್ನ ಮುಂದೆ ತಪ್ಪು ಮಾಡಬೇಕೆಂಬ ಮಾನವಾತೀತ ಕಲ್ಪನೆ. ಎಲ್ಲವನ್ನು, ಎಲ್ಲರನ್ನೂ ಮೀರಿ ಬದುಕಬೇಕೆಂಬ ವಾಂಛೆ. ಈ ಲಗಾಮಿಲ್ಲದ ಕುದುರೆಯ ಓಟದಲ್ಲಿ ಲಾಘ ಹಾಕುತ್ತ ಓಡುತ್ತಿರುವ ಸ್ಪರ್ಧಾಳುಗಳಂತೆ ನಾವು. ಬದುಕೊಂದು ಕಾರ್ಖಾನೆ ಈ ಕಾರ್ಖಾನೆ ವೃದ್ದಿಗೊಳಿಸಲು ದೇಹದ ಎಲ್ಲಾ ಯಂತ್ರಗಳನ್ನು ಉಪಯೋಗಿಸುತ್ತೇವೆ ಮುಖ್ಯವಾಗಿ ಮೆದುಳು ಅರ್ಥಾತ್ ಮನಸ್ಸು. ಇದು ಮಾಡುವ ಕಾರ್ಯ ಮತ್ತಿನ್ಯಾವ ಭಾಗವು ಮಾಡುವುದಿಲ್ಲ, ಈ ಮೆದುಳಿನಲ್ಲಿ ಅದೆಷ್ಟು ಸರಕುಗಳಿವೆಯೋ ನಮ್ಮೊಳಗಿನ ಭಗವಂತನಿಗೆ ಗೊತ್ತು, ಕಾಮ, ಕ್ರೋಧ, ದ್ವೇಷ, ಅಸೂಯೆ, ಅಹಂ, ಕ್ರೌರ್ಯ ಇವೆಲ್ಲ  ನಮ್ಮೊಳಗಿನ ಅಸುರರು, ಇನ್ನು ಶಾಂತಿ, ಪ್ರೀತಿ,ಪ್ರೇಮ,ಸಹನೆ,ಕರುಣೆ,ಮಮತೆ ಇವುಗಳೆಲ್ಲ ಸುರರು, ಇವರೆಲ್ಲ ಮೆದುಳೆಂಬ ಬೆಟ್ಟವನ್ನು ಬದುಕೆಂಬ ಸಮುದ್ರದೊಳಗೆಸೆದು, ಕಾಲವೆಂಬ ಸರ್ಪ ಹಿಡಿದು ಮಂಥಿಸುತ್ತಲೇ ಇರುತ್ತವೆ. ಅಮೃತದಂತ ಗುಣ ಹೊರಬಂದರೆ ಜೀವನ ಸಿಹಿ, ಕಾರ್ಕೋಟ ವಿಷದ ಗುಣವಾದರೆ ನಾಶ. ಒಂದುವೇಳೆ ನಮ್ಮೊಳಗೆ ಈ ಅಮೃತದ ಗುಣ ಬಂದರೆ ಈ ಮೇಲೆ ತಿಳಿಸಿದ ಅಸುರರೆಲ್ಲ ನಾಶವಾಗಿ ಸುರರಷ್ಟೆ ಉಳಿಯುತ್ತಾರೆ, ಆಗ ಮನುಷ್ಯ ಇತರರನ್ನು ತೆಗಳುವ ಬದಲು ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಶುರು ಮಾಡುತ್ತಾನೆ,ಈ ಸ್ವ-ವಿಮರ್ಶೆ ಯಾರಲ್ಲಿ ಹುಟ್ಟುತ್ತದೆಯೋ ಆತ ಯಾರನ್ನು ದೂರಲಾರ, ತನ್ನ ಬದುಕಲ್ಲಿ ಏನೇ ನಡೆದರು ಅದು ತನ್ನಿಂದಲೇ ನಡೆದಿದೆ ಇತರರಿಂದಲ್ಲ ಎನ್ನುವ ಧೋರಣೆ ತಳೆಯುತ್ತಾನೆ, ಪ್ರತಿ ಕಾರ್ಯದಲ್ಲೂ ತನ್ನ ತಪ್ಪು ಸರಿಯೆಷ್ಟು ಎಂಬುದನ್ನು ತೂಗಿ ನೋಡುತ್ತಾನೆ. ಸ್ವ-ವಿಮರ್ಶೆ ಎಂಬುದೊಂದು ಆತ್ಮಾವಲೋಕನದ ಘಟ್ಟ, ಇದೊಂದು ಆರೋಗ್ಯಕರ ಚಿಂತನೆ, ಇಂಥಹ ಚಿಂತನೆ ಬೆಳೆಸಿಕೊಂಡವನು ಎಲ್ಲರನ್ನೂ ಅವರಂತೆ ಕಾಣುತ್ತಾನೆ, ಬೇಡದ ಆಲೋಚನೆಗಳಿಗೆ ಲಗಾಮು ಹಾಕಿ ಮನಸ್ಸೆಂಬ ಕುದುರೆಯನ್ನು ಸ್ವಪಥದಲ್ಲಿ ಚಲಿಸುವಂತೆ ಮಾಡುತ್ತಾನೆ.  ತನಗಿಲ್ಲದಿರುವ ಅರಿವನ್ನು ಇತರರಿಂದ ಅರಿಯುತ್ತಾನೆ, ಇತರರಿಗಿಲ್ಲದ ಅರಿವನ್ನು ತನ್ನ ಅರಿವಿಂದ ನೀಡುತ್ತಾನೆ. ಇಂತಹ ವ್ಯಕ್ತಿ ಒಮ್ಮೊಮ್ಮೆ ಗೊಂದಲಕ್ಕೂ ಬೀಳುತ್ತಾನೆ ಪ್ರಪಂಚವೆಲ್ಲ ಗೂಢವೇನೊ ತನಗೆ ಇದರ ನಿಗೂಢತೆ ಭೇದಿಸುವುದು ಕಷ್ಟವೆನಿಸುತ್ತದೆ ಎಂಬಂತೆ, ಆದರೆ ತೊಂದರೆ ಇಲ್ಲ ಅಂತಹ ಸಮಯಕ್ಕೆ ನಮ್ಮೊಳಗಿನ ನಮ್ಮತನವೇ ಉಪಯೋಗಕ್ಕೆ ಬರುತ್ತದೆ, ಎಂದಿಗೂ ಆತ್ಮವಿಶ್ವಾಸ ಕೆಡದಂತೆ, ಕಷ್ಟದ ಬೆಟ್ಟಗಳನ್ನು ಕೃಷ್ಣನಂತೆ ಕಿರುಬೆರಳಲ್ಲಿ ಎತ್ತಲು ಸಹಕರಿಸುತ್ತವೆ. ಈ ಸ್ವವಿಮರ್ಶೆ ಎಲ್ಲರಲ್ಲೂ ಹುಟ್ಟಿದ್ದೇ ಆದರೆ ಯಾರಲ್ಲೂ ಹೊಟ್ಟಕಿಚ್ಚಾಗಲಿ, ಅಥವಾ ತಮ್ಮ ಕಷ್ಟಗಳಿಗೆ ಮತ್ತೊಬ್ಬರೇ ಕಾರಣ ಎನ್ನುವ ಭಾವವಾಗಲಿ ಇರುವುದಿಲ್ಲ ಅಲ್ಲವೇ….ಇಷ್ಟೆಲ್ಲಾ ಎಲ್ಲರಿಗೂ ತಿಳಿದ ವಿಷಯವೇ ಆದರೂ ನಮ್ಮನ್ನು ನಾವು ವಿಮರ್ಶಿಸಿಕೊಳ್ಳಲಾಗಲಿ, ತಪ್ಪನ್ನು ತಿದ್ದಿಕೊಳ್ಳಲಾಗಲಿ ನಾವು ಪ್ರಯತ್ನಿಸುವುದಿಲ್ಲ, ಏಕೆಂದರೆ ಮನುಷ್ಯನಿಗೆ ಸಮಾಜದ ಬಗೆಗಿಂತ ತನ್ನ ಆತ್ಮದ ಬಗ್ಗೆಯೇ ಭಯ ಹೆಚ್ಚು, ಸಮಾಜದ ಕಣ್ಣಿಗೆ ಮಣ್ಣೆರಚಿ ಬದುಕಲು ನಮಗೆ ಸಾಧ್ಯವಾದೀತು, ಆದರೆ ನಮ್ಮೊಳಗಿನ ನಮಗೆ ನಾವು ದ್ರೋಹ ಬಗೆಯಲಾಗುವುದಿಲ್ಲ, ನಾವೆಷ್ಟೆ ಎತ್ತರಕ್ಕೋದರೂ ನಮ್ಮೊಳಗೆ ನಮಗೆ ಅಂದರೆ ಆತ್ಮಕ್ಕೆ ಯಾವಾಗಲೂ ಗುಲಾಮರೇ.

-ಲಾವಣ್ಯ ಸಿದ್ಧೇಶ್ವರ್

abhisarike94@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post