X

ಹನಿಗಳ ಮೆರವಣಿಗೆ…

ಬೇಸಗೆಯ ಧಗೆಯಲ್ಲಿ ಬೆಂದ ಧರಣಿಗೆ ತಂಪೆರೆಯಲು ಭೂಮಿಗಿಳಿಯುವ ನೀರಿನ ಹನಿಗಳ ಮೆರವಣಿಗೆ ಈ ಮಳೆ. ಸೂರ್ಯನ ಕಿರಣಗಳ ಧಗೆಯಿಂದ ಭೂಮಿಯನ್ನು ಕಾಪಾಡಲು ಸೂರ್ಯನಿಗೆ ಅಡ್ಡವಾಗಿ ನಿಲ್ಲುವ ಮೋಡಗಳು ಅದೂ ಸಾಲದೇ ಹೋದಾಗ ಮಳೆಯಾಗಿ ಇಳೆಗಿಳಿದು ತಂಪೆರೆಯುವ ಕಾಲ ಅದು. ‘ಮಳೆ’ ಕೇವಲ ನೀರಿನ ಹನಿಗಳಲ್ಲ; ಅವು ಹೊಸತನದ ರಾಯಭಾರಿಗಳು. ಭೂಮಿಗೆ ಹಸಿರನ್ನು ಜೀವಿಗಳಿಗೆ ಉಸಿರನ್ನೂ ತರುವ ಜೀವಜಲದ ಹನಿಗಳು. ನಾವು ಮಳೆಯಿಂದ ನಮ್ಮನ್ನು ರಕ್ಷಿಸಲು ಕೊಡೆಗಳನ್ನೊ, ರೈನ್ಕೋಟ್’ಗಳನ್ನೋ ಬಳಸುತ್ತೇವೆ. ಆದರೆ ನಮ್ಮ ಒಳಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಮಳೆಯಲ್ಲಿ ನೆನೆಯುವ ಅಸೆ ಎಂದಿಗೂ ಜೀವಂತವಾಗಿರುತ್ತದೆ. ಮಳೆ ಹನಿಗಳ ಸ್ಪರ್ಶ ಮೈಗೆ ಕೊಡುವ ರೋಮಾಂಚನ ಅದ್ಭುತ. ಮೊದಲ ಮಳೆ ಧರೆಯ ಮಣ್ಣಿಗೆ ತರುವ ಸೌಗಂಧಕ್ಕೆ ಸಾಟಿ ಎಲ್ಲಿ ಅಲ್ಲವೇ? ಮಳೆಹನಿಗಳು ನಮ್ಮಲ್ಲಿ ಉತ್ಸಾಹದ ಚಿಲುಮೆಯನ್ನು ಚಿಗುರಿಸುತ್ತವೆ. ಪ್ರೀತಿಯನ್ನು ಅರಳಿಸುತ್ತವೆ. ನಮ್ಮೊಳಗಿನ ಮುಗ್ಧತೆಯನ್ನು ಹೊರತರುತ್ತವೆ.

ಬಿಸಿಲ ಧಗೆಯಲ್ಲಿ ಬೆಂದು, ಸೋತು, ಕಳೆಗುಂದಿದ ಜಗತ್ತು, ಈ ಮಳೆಹನಿಗಳು ಸ್ಪರ್ಶಿಸುತ್ತಿದ್ದಂತೆ ಮತ್ತೆ ಕಳೆಗಟ್ಟುತ್ತದೆ. ಗಿಡಮರಗಳು ಚಿಗುರಿ ಹಸಿರಾಗುತ್ತವೆ. ಕಡಲಿನ ಒಡಲು ಉಕ್ಕಿ ಭೋರ್ಗರೆಯುತ್ತದೆ. ಬೆಟ್ಟ ಗುಡ್ಡಗಳಿಂದ ಜಲಪಾತಗಳು ಜಿಗಿಯಲಾರಂಭಿಸುತ್ತವೆ. ಆಕಾಶದಲ್ಲಿ ಕಾಮನಬಿಲ್ಲು ಮೂಡಿ ರಂಗೇರುತ್ತದೆ. ಅಡಗಿ ಕುಳಿತ ನವಿಲುಗರಿಗಳು ಅರಳಿ ನರ್ತಿಸಲಾರಂಭಿಸುತ್ತವೆ. ಕೊಡೆಗಳಿಗೆ ಮನೆಯ ಅಟ್ಟದ ಮೇಲಿನ ಧೂಳಿಂದ ಮುಕ್ತಿ ಸಿಗುತ್ತದೆ. ರದ್ದಿ ಕಾಗದಗಳೆಲ್ಲ ದೋಣಿಗಳಾಗಿ ಹೊಸಪಯಣ ಆರಂಭಿಸುತ್ತವೆ. ನೇಗಿಲುಗಳು ಗದ್ದೆಗಿಳಿಯುತ್ತವೆ. ಉಳುಮೆ ಮಾಡುವವರ ನೀಲಿ, ಹಸಿರು ಬಣ್ಣದ ಕೊಪ್ಪೆಗಳು ಗರಿಗೆದರಿ ಹೊಲಗದ್ದೆಗಳಿಗೆ ಬಣ್ಣಬರುತ್ತದೆ. ಮನೆಯ ಅಂಗಳಗಳು ತಮಗೆ ತೊಡಿಸಿದ ಚಪ್ಪರದ ಟೊಪ್ಪಿಗಳನ್ನು ತೆಗೆದು ಮಳೆ ಹನಿಗಳಲ್ಲಿ ಮಿಂದೇಳುತ್ತವೆ. ಬಾನಿನಿಂದ ಬರುವ ಹನಿಗಳ ಮೆರವಣಿಗೆಗೆ ಕಾಯುತ್ತಿದ್ದ ಈ ಜಗತ್ತು ಮುಂಗಾರು ಆರಂಭವಾದಂತೆ ಸಂತಸದ ಅಲೆಯಲ್ಲಿ ತೇಲುತ್ತದೆ.

ಅದೇಕೋ ಅರಿಯೆ ಮಳೆಹನಿಗಳು ನನಗೆ ಅತ್ಯಂತ ಆತ್ಮೀಯ ಬಂಧುಗಳಂತೆ ಭಾಸವಾಗುತ್ತದೆ. ಮಳೆ ಸುರಿಯುತ್ತಿರುವಾಗ ಅದೆಷ್ಟೋ ಅವ್ಯಕ್ತ ಭಾವಗಳನ್ನು ಈ ಮನಸ್ಸು ನನ್ನ ಅನುಮತಿಗೂ ಕಾಯದೇ ಮಳೆಹನಿಗಳೊಂದಿಗೆ ಹಂಚಿಕೊಳ್ಳುತ್ತದೆ. ಯಾರಲ್ಲಿಯೂ ಭಿನ್ನವಿಸಲಾಗದ ಅದೆಷ್ಟೋ ನೋವುಗಳು ಮೌನದಲ್ಲೇ ಆ ಹನಿಗಳೊಂದಿಗೆ ವಿನಿಮಯವಾದಂತೆ ಅನಿಸುತ್ತದೆ. ಭಾವಗಳ ಅಥವಾ ನೋವುಗಳ ತೀವ್ರತೆ ಅತಿಯಾಗಿ ಹನಿಗಳ ಸನಿಹ ಬಯಸಿ ಮಳೆಯಲ್ಲಿ ನೆನೆದರೆ ನಮ್ಮವರೇ ಯಾರೋ ನಮ್ಮನ್ನು ಅಪ್ಪಿ ಸಂತೈಸಿದಂತಹ ಅನುಭವ.  ಇನ್ನು, ಮಳೆಹನಿಗಳು ತಮ್ಮೊಂದಿಗೆ ಹೊತ್ತು ತರುವ ನೆನಪುಗಳು ಸಾವಿರ. ಹಾಗಾಗಿ ಅದು ಕೇವಲ ನೀರಿನ ಹನಿಗಳ ಮೆರವಣಿಗೆಯಲ್ಲ; ನೆನಪುಗಳ ಮೆರವಣಿಗೆಯೂ ಹೌದು. ಜೋರಾಗಿ ಮಳೆ ಸುರಿಯುತ್ತಿರುವಾಗ ಮನೆಯ ಒಂದು ಕಿಟಕಿಯ ಪಕ್ಕ ಕುಳಿತು ನೆನಪುಗಳ ಮೆಲುಕನ್ನು ಆಸ್ವಾದಿಸುವ ಸವಿಯೇ ಬೇರೆ. ನಮಗರಿವಿಲ್ಲದೆಯೇ ಮುಗುಳ್ನಗು ತರಿಸಬಲ್ಲ ಅಥವಾ ನೆನಪುಗಳು ಕಹಿಯಾಗಿದ್ದಲ್ಲಿ ನಮಗರಿವಿಲ್ಲದೆಯೇ ಕಣ್ಣೀರಹನಿಗಳು ಕೆನ್ನೆಯನ್ನು ಸ್ಪರ್ಷಿಸುವಂತೆ ಮಾಡಬಲ್ಲ ಶಕ್ತಿ ಮಳೆಹನಿಗಳಿಗಿದೆ.

ಮನೆಯ ಮಾಡಿನಿಂದ ಇಳಿಯುವ ನೀರಿಗೆ ಕೈ ಒಡ್ಡಿ ನಿಂತ ನೆನಪು, ಶಾಲೆಯ ಹಾದಿಯಲ್ಲಿ ಸಿಗುವ ಸಣ್ಣ ಸಣ್ಣ ಝರಿಯಲ್ಲಿ ಪುಟ್ಟ-ಪುಟ್ಟ ಮೀನುಗಳನ್ನು ನೋಡಿ ಆನಂದಿಸಿದ ನೆನಪು, ದೂರದಲ್ಲಿ ಬರುತ್ತಿರುವ ಹುಡುಗಿಯರ ಗುಂಪಿನಲ್ಲಿ ಕೊಡೆಯ ಬಣ್ಣದಿಂದ ಪ್ರಿಯ ಗೆಳತಿಯನ್ನು ಗುರುತಿಸಿದ ನೆನಪು, ಎಲ್ಲರ ಬಳಿ ಕೊಡೆ ಇದ್ದರೂ ಒಬ್ಬ ಗೆಳೆಯನ ಕೊಡೆಯಲ್ಲಿ ಐದು ಜನ ಹೋದ ನೆನಪು, ಶಾಲೆಗೆ ಹೋಗುತ್ತಿರುವಾಗ ರಸ್ತೆಯಲ್ಲಿನ ನೀರನ್ನೆಲ್ಲ ಮೈಗೆ ರಾಚಿಸಿ ಹೋದ ಬಸ್ಸಿನಚಾಲಕನ ನೆನಪು, ಶಾಲೆಗೆ ರಜೆ ಸಿಗುವ ಸಲುವಾಗಿ ಜೋರುಮಳೆ ಬರಲಿ ಎಂದು ಪ್ರಾರ್ಥಿಸಿದ ನೆನಪು, ರಜೆ ಕೊಟ್ಟ ತಕ್ಷಣ ಮಳೆ ನಿಲ್ಲಲಿ ಎಂದು ಆಶಿಸಿದ ನೆನಪು, ಜೋರುಗಾಳಿ-ಮಳೆಯಲ್ಲಿ ಕೊಡೆ ಹಿಮ್ಮುಕವಾಗಿ ಗೆಳೆಯರಿಂದ ನಗೆಪಾಟಲಿಗೀಡಾದ ನೆನಪು, ಇದ್ದಕ್ಕಿದ್ದಂತೆ ಬಂದ ಮಿಂಚಿನಿಂದ ಒಮ್ಮೆ ಬೆಚ್ಚಿಬಿದ್ದು ನಂತರ ಸುಧಾರಿಸಿಕೊಳ್ಳುತ್ತಾ “ಶೇ, ಹೇರ್’ಸ್ಟೈಲ್ ಸರಿ ಇರ್ಲಿಲ್ಲ ಮಾರ್ರೆ” ಎಂದು ಪೋಸ್ ಕೊಟ್ಟ ಹುಚ್ಚುತನದ ನೆನಪು, ಕಾಲೇಜ್ ಬಸ್’ನ ಒಡೆದ ಕಿಟಕಿ ಗಾಜುಗಳಿಂದ ಮಳೆ ನೀರು ಒಳಬಂದು ಅದನ್ನು ತಡೆಯಲು ಹರಸಾಹಸ ಮಾಡಿ ಆಗದೇ ಹೋದಾಗ ಇಡೀ ಕಾಲೇಜಿಗೇ ಬೈಯ್ಯುತ್ತಾ ದಾರಿ ಸವೆಸಿದ ನೆನಪು; ಹೀಗೆ ನೆನಪುಗಳ ಮೆರವಣಿಗೆಯೇ ಮಳೆ ಎಂದಾಗ ಕಣ್ಮುಂದೆ ಹಾದು ಹೋಗುತ್ತದೆ. “ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…” ಎಂಬ ಜಯಂತ್ ಕಾಯ್ಕಿಣಿ ಅವರ ಸಾಲಿನಂತೆ, ಮಳೆ ನಿಂತ ನಂತರ ತೊಟ್ಟಿಕ್ಕುವ ಮರದ ಹನಿಗಳು ನಮ್ಮ ಮನಸಲ್ಲಿ ಹುದುಗಿರುವ ತೀರದ ಬಯಕೆಗಳನ್ನು ಕೆಣಕುವಂತಿರುತ್ತದೆ. ಈ ಮಳೆಯೇ ಹಾಗೆ, ತನ್ನ ಹನಿಗಳ ಸ್ಪರ್ಷದಿಂದ ಎಲ್ಲವನ್ನೂ ಹಸಿರಾಗಿಸುತ್ತದೆ, ಬತ್ತಿದ ನೆಲವಾದರೂ ಸರಿ, ಹೃದಯವಾದರೂ ಸರಿ. ಬತ್ತಿದ ನೆಲ ಚಿಗುರೆಲೆಗಳಿಂದ, ಹುಲ್ಲುಹಾಸಿನಿಂದ ಹಸಿರಾದರೆ, ಬತ್ತಿದೆದೆ ಹಳೆಯ ನೆನಪುಗಳಿಂದ, ಹೊಸಭಾವಗಳಿಂದ ಹಸಿರಾಗುತ್ತದೆ.

ಮಳೆ ಅಂದರೆ ಪ್ರೀತಿ, ಮಳೆ ಅಂದರೆ ಲವಲವಿಕೆ, ಮಳೆ ಅಂದರೆ ಹೊಸತನ; ಇನ್ನೇನು ಜಗತ್ತು ರವಿಯ ಕಿರಣಗಳ ತೀಕ್ಷ್ಣತೆಗೆ ಉರಿದೇ ಹೋಯಿತು ಎನ್ನುವಾಗ ಬರುವ ಮುಂಗಾರಿನ ಹನಿಗಳು ಬಹುಶಃ ನಮ್ಮನ್ನೂ ಸೇರಿಸಿಕೊಂಡು ಅದೆಷ್ಟೋ ಜೀವಿಗಳಿಗೆ ಮರುಜನ್ಮವನ್ನೇ ನೀಡುತ್ತವೆ. ಒಂದು ರೀತಿಯಲ್ಲಿ ಈ ಮುಂಗಾರು, ಕಾಣದ ಕೈಯೊಂದು ಸೃಷ್ಟಿಯ ಜೀವಿಗಳಿಗಾಗಿ ಮಾಡುವ ಅಮೃತ ಸಿಂಚನವಿದ್ದಂತೆ. ತನ್ನ ಸೃಷ್ಟಿಗೆ ಬೇಕಾದದ್ದೆಲ್ಲವೂ ಬೇಕಾದ ಸಮಯದಲ್ಲಿ ಸರಿಯಾಗಿ ದೊರಕುವಂತೆ ರೂಪಿಸಿರುವ ಆ ಸೃಷ್ಟಿಕರ್ತ ಎಂಬ ಮಾಸ್ಟರ್ಮೈಂಡ್’ಗೆ ನನ್ನದೊಂದು ಸಲಾಮ್ ಹಾಗೂ ಒಂದು ಮನಃಪೂರ್ವಕ ಧನ್ಯವಾದ. ಈ ಅದ್ಭುತ ಸೃಷ್ಟಿಯ ಅತ್ಯಪೂರ್ವ ಭಾಗವಾದ ಮಳೆ ಎಲ್ಲರಿಗೂ ಆತ್ಮೀಯ. ಈ ಹನಿಗಳು ನಮ್ಮ ಹಾಗೂ ಈ ಸುಂದರ ಪ್ರಕೃತಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಈ ಜಗತ್ತನ್ನು ಪ್ರೀತಿಸಲು ಪ್ರೇರೇಪಿಸುತ್ತವೆ. ಆ ಮೂಲಕ ಜೀವನಪ್ರೀತಿಯನ್ನು ಮೂಡಿಸುತ್ತದೆ. ಭಾವಗಳು ಪದೇಪದೇ ಬತ್ತಿಹೋಗುವ ಇಂದಿನ ಯಾಂತ್ರಿಕ ಬದುಕಿಗೆ ಆಗಾಗ ಜೀವತುಂಬುವ ಈ ಹನಿಗಳ ಮೆರವಣಿಗೆಯಲ್ಲಿ ನಾವು ಭಾಗಿಯಾಗೋಣ. ಬಾನೆಡೆಗೆ ಕೈ ಚಾಚಿ ನಮಗಾಗಿ ಇಳೆಗಿಳಿಯುವ ಹೊಸತನದ ರಾಯಭಾರಿಗಳನ್ನು ಸ್ವಾಗತಿಸೋಣ.

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು

ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು!!!

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post