X

ಮನೆ ಅಡವಿಟ್ಟು ಅಕಾಡೆಮಿ ಸ್ಥಾಪಿಸಿದ್ದು ಸಾರ್ಥಕವಾಯ್ತು

ಇಂದು ಭಾರತ ಸಿಂಧೂವಿನ ಸಾಧನೆಯ ಗುಣ ಗಾನ ಮಾಡುತ್ತಿದೆ. ಸಿಂಧೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಗತ್ತಿನ ನಂಬರ್‌ ಒನ್ ಆಟಗಾರ್ತಿ ಮರಿನ್‌ಗೆ ಸಿಂಧೂ ಒಡ್ಡಿದ ಸವಾಲು ಅಂತಿಂಥದ್ದಲ್ಲ. ಇಡೀ ಒಲಿಂಪಿಕ್ ಗೇಮ್ಸನಲ್ಲಿ ನೇರ ಸೆಟ್ಟಿನಿಂದ ಗೆದ್ದಿದ್ದ ಮರಿನ್, ಮೊದಲ ಸೆಟ್ ಸೋತಿದ್ದು ಸಿಂಧೂವಿಗೆ.

ರಿಯೋ ಒಲಿಂಪಿಕ್ಸ್ ಅಫಿಷಿಯಲ್ ವೆಬ್ ಸೈಟಿನಲ್ಲಿ ಕಂಡು ಬಂದಂತೆ ಇದು ’ಹೆವಿ ಫೇವರೆಟ್ ಆಟಗಾರ್ತಿಯ ಹಾರ್ಡ್ ಫಾಟ್ ವಿಕ್ಟರಿ!’. ಈ ಒಂದು ಸಾಲು ಸಾಕು ಸಿಂಧೂವಿನ ಪ್ರತಿಭೆಯನ್ನು ಅಳೆಯಲು. ಬೆಳ್ಳಿಯನ್ನು ತಂದ ಭಾರತದ ಚಿನ್ನ ಸಿಂಧೂ!ಇಂದು ಸಿಂಧು, ನಿನ್ನೆ ಸೈನಾ! ಇಲ್ಲಿಗೇ ಮುಗಿಯುವುದಿಲ್ಲ. ಇಂದು ವಲ್ಡ ಬ್ಯಾಡ್ಮಿಂಟನ್ ಪಟ್ಟಿಯಲ್ಲಿ ಭಾರತದ ಅದೆಷ್ಟು ತಾರೆಗಳು ಮಿನುಗುತ್ತಿವೆ ಗೊತ್ತಾ? ಕಶ್ಯಪ, ಪ್ರಣಯ್ ಕುಮಾರ್, ಗುರುಸಾಯಿ ದತ್ತ್, ಅರುಣ್, ಅರುಂಧತಿ ಪಂಟವಾನೆ. ಇವರೆಲ್ಲ ಸೇರಿಸಿ ಭಾರತದ ರ‍್ಯಾಂಕನ್ನು ಜಗತ್ತಿನ ಸ್ಥರದಲ್ಲಿ ಮೇಲಕ್ಕೆ ತಂದಿದ್ದಾರೆ. ಇವರೆಲ್ಲರ ನಡುವೆ ಒಂದು ಸಮಾನತೆ ಏನು ಗೊತ್ತಾ? ಈ ಎಲ್ಲಾ ಪ್ರತಿಭೆಗಳೂ ಅರಳಿದ್ದು ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಿಂದ.

ಬ್ಯಾಡ್ಮಿಂಟನ್ ಜಗತ್ತಿನ ಲೆಜೆಂಡ್ ಆಗಿರುವ ಪ್ರಕಾಶ್ ಪಡುಕೋಣೆಯವರ ಗರುಡಿಯಲ್ಲಿ ಬೆಳೆದ ಗೋಪಿಚಂದ್ ಒಂದು ಕಾಲದಲ್ಲಿ ಬ್ಯಾಡ್ಮಿಂಟನ್ ಸ್ಟಾರ್, ಆದರೆ ಈಗ ಅವರು ಸ್ಟಾರ್ ಮೇಕರ್!ಜಗತ್ತಿನ ಎರಡನೇ ಶ್ರೇಯಾಂಕದ ಸೈನಾ ನೆಹ್ವಾಲ್‌ಗೆ ಕೋಚ್ ಆಗಿರುವ ಗೋಪಿಚಂದ್ ಇಂದು ಭಾರತಕ್ಕೆ ಬೆಳ್ಳಿ ಪದಕ ತಂದ ಸಿಂಧೂವಿಗೂ ಕೋಚ್. ಇಂದು ಗೋಪಿಚಂದ್ ಯಶಸ್ಸಿನ ಶಿಖರದಲ್ಲಿರಬಹುದು, ಆದರೆ ಇಲ್ಲಿಯ ತನಕ ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅವರು ಹೇಗೆ ತಮ್ಮ ಕೋಚಿಂಗ್ ಅಕಾಡೆಮಿ ಶುರು ಮಾಡಿದರು, ಹೇಗೆ ಅದನ್ನು ನಡೆಸಿಕೊಂಡು ಬಂದರು, ಇದನ್ನೆಲ್ಲ ನೋಡಿದಾಗ ಬಹಳ ರೋಮಾಂಚನವಾಗುತ್ತದೆ. ಭಾರತದಲ್ಲಿ ಕ್ರಿಕೆಟ್ ಬಿಟ್ಟರೆ ಮತ್ಯಾವ ಕ್ರೀಡೆಗೂ ಅಷ್ಟು ಪ್ರೋತ್ಸಾಹವಿಲ್ಲ, ಇದು ವಾಸ್ತವ. ನಿನ್ನೆ ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಫೈನಲ್ ಆಟ ಆಡುತ್ತಿರುವುದನ್ನು ಬಹುತೇಕ ಎಲ್ಲರೂ ನೋಡಿರುತ್ತಾರೆ, ಆದರೆ ಅದರಲ್ಲಿ 10% ಜನಕ್ಕೂ ಅದರ ನಿಯಮ, ಪ್ರಾಮುಖ್ಯತೆಯ ಬಗ್ಗೆ ಗೊತ್ತಿರುವುದು ಸುಳ್ಳು.

ಇಂತಹ ಪರಿಸ್ಥಿತಿಯಲ್ಲಿ ಜನಪ್ರಿಯವಲ್ಲದ ಆಟಕ್ಕೆ ಸಂಬಂಧಿಸಿದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಉನ್ನತಿಯ ಶಿಖರಕ್ಕೆ ತಲುಪಿಸುವುದು ಕಷ್ಟಸಾಧ್ಯ. ಅದನ್ನು ಮಾಡಿ ತೋರಿಸಿದ್ದಾರೆ ಪುಲೇಲಾ ಗೋಪಿಚಂದ್!2001ರಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದಾಗ ಗೋಪಿಚಂದ್‌ಗೆ ಇಪ್ಪತ್ತೇಳು ವರ್ಷ ವಯಸ್ಸು. ಅದಾಗಲೇ ಆಟದಂಗಣದಲ್ಲಿ ಹಲವಾರು ಬಾರಿ ಗಾಯಗೊಂಡು ಅವರು ಜರ್ಜರಿತರಾಗಿದ್ದರು. ಕೆಲವೊಮ್ಮೆ ಪ್ರಾಕ್ಟಿಕಲ್ ಆಗಿ ವಿಚಾರ ಮಾಡಬೇಕು, ಇರುವ ಪರಿಸ್ಥಿತಿಯನ್ನು ಸ್ವೀಕರಿಸಿಬೇಕು. ಇಲ್ಲೂ ಅದೇ ಆಯಿತು. ಸ್ವತಃ ತಾನೇ ಆಡಲು ಇನ್ನು ಸಾಧ್ಯವಿಲ್ಲ ಎಂದು ಅರಿತ ಗೋಪಿಚಂದ್ ಮುಂದಿನ ಪೀಳಿಗೆಗೆ ಒಂದು ’ವಲ್ಡ ಕ್ಲಾಸ್ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ’ವನ್ನು ತೆರೆಯಲು ನಿರ್ಧರಿಸಿದರು. ಇದನ್ನು ಪ್ರೋತ್ಸಾಹಿಸಿ ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ಸರ್ಕಾರ ಅವರಿಗೆ ಕಡಿಮೆ ದರದಲ್ಲಿ ಐದು ಎಕರೆ ಜಾಗವನ್ನು ಕೊಟ್ಟಿತು ಕೂಡಾ.

ಆದರೆ ’ವಲ್ಡ ಕ್ಲಾಸ್ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ’ವನ್ನು ಸ್ಥಾಪಿಸಲು ಇಷ್ಟೇ ಸಾಲದು. ಕೋಟ್ಯಂತರ ರುಪಾಯಿಗಳು ಬೇಕು. ಇವರು ಫೇಮಸ್ ಕ್ರಿಕೆಟ್ ಆಟಗಾರನಲ್ಲ, ಕೋಕಾ ಕೋಲಾ ಕಂಪನಿ ಇವರ ಬೆನ್ನ ಹಿಂದೆ ಬಿದ್ದರೂ ಜಾಹೀರಾತಿಗೆ ಸಹಿ ಹಾಕಿಲ್ಲ. ಹೀಗಿರುವಾಗ ಹಣ ಎಲ್ಲಿಂದ ಬರಬೇಕು? ಗೋಪಿಚಂದ್ ತಮ್ಮ ದೂರದ ಸಂಬಂಧಿ ಹಾಗೂ ಉದ್ಯಮಿ ನಿಮ್ಮಗಡ್ ಪ್ರಸಾದ್ ಅವರನ್ನು ಸಂಪರ್ಕಿಸಿದರು. ಗೋಪಿಚಂದ್ ಅವರ ಕನಸನ್ನು ಅರಿತ ಮತ್ತು ಅದರ ಆಳವನ್ನು ಗ್ರಹಿಸಿ ಸುಮಾರು ಎರಡೂವರೆ ಮಿಲಿಯನ್ ಡಾಲರ್‌ಗಳಷ್ಟು ಹಣ ಕೂಡಿ ಹಾಕಿದರು. ಅದರ ಜೊತೆ ವಿದೇಶಿ ಕೋಚನ್ನು ಕೂಡ ಕರೆ ತರಲು ನಿರ್ಧರಿಸಿದರು. ಆದರೆ ಭಾರತದಲ್ಲಿ ಕ್ರಿಕೆಟ್ ಅಥವಾ ಬಾಲಿವುಡ್ ಸಿನಿಮಾ ಬಿಟ್ಟು ಬೇರೆ ಏನಾದರೂ ಮಾಡೋದು ಬಹಳ ಕಷ್ಟವಿದೆ. ಆಗಲೇ ಹಣದ ತೊಂದರೆಯಿಂದ ಪ್ರಾಜೆಕ್ಟ್ ತುಂಬಾ ತಡವಾಗಿತ್ತು. ಪ್ರಸಾದ್ ತನ್ನಲ್ಲಿದ್ದ ಎಲ್ಲ ಮಾರ್ಗವನ್ನೂ ಬಳಸಿ ತಮ್ಮಲ್ಲಿದ್ದ ಹಣದ ಜೊತೆಗೆ ಇನ್ನೂ 1.25 ಮಿಲಿಯನ್ ಡಾಲರ್ ಹಣ ಕೂಡಿಸಿದರು. ಗೋಪಿಚಂದ್ ಪತ್ನಿ ಪಿವಿವಿ ಲಕ್ಷ್ಮಿ ಅವರೂ ಒಲಿಂಪಿಕ್ ಕ್ರೀಡಾಳು. ಅವರೂ ಸ್ವತಃ ತನ್ನ ಒಡವೆಗಳನ್ನು ಅಡವಿಟ್ಟು ಹಣ ತಂದರು. ಇಷ್ಟೆಲ್ಲ ಆದ ಮೇಲೂ ಗೋಪಿಚಂದ್ ಅವರ ಕನಸಿನ ಜಾಗತಿಕ ಮಟ್ಟದ ಅಕಾಡೆಮಿ ಸಿದ್ಧವಾಗಲಿಲ್ಲ.2008 ರ ವರ್ಷ. ಆಗಲೇ ಬಹಳ ತಡವಾಗಿತ್ತು. ಪ್ರಾಜೆಕ್ಟ ಕೈಬಿಡುವ ಪರಿಸ್ಥಿತಿ. ಗೋಪಿಚಂದ್ ಅವರಿಗೆ ಇರುವ ದಾರಿ ಒಂದೇ ಆಗಿತ್ತು, ತನ್ನ ಮನೆಯನ್ನು ಅಡವಿಟ್ಟು ಉಳಿದ ಹಣ ತರುವುದು. ಇಂದು ಸಿಂಧು ಭಾರತಕ್ಕೆ ಬೆಳ್ಳಿ ಪದಕ ತಂದಿದ್ದಾಳೆ ಅಂದರೆ ಅದರಲ್ಲಿ ಗೋಪಿಚಂದ್ ಅವರ ಪರಿಶ್ರಮ, ತ್ಯಾಗ ಅಷ್ಟಿಷ್ಟಿಲ್ಲ.

ಗೋಪಿಚಂದ್ ಕೊನೆಗೆ ತನ್ನ ಮನೆಯನ್ನೆ ಅಡವಿಟ್ಟು ಅಕಾಡೆಮಿ ಶುರು ಮಾಡಿದರು. ಇಂದು ಅಲ್ಲಿಂದ ಬ್ಯಾಡ್ಮಿಂಟನ್ ತಾರೆಗಳು ಒಂದಾದ ಮೇಲೆ ಇನ್ನೊಂದು ಮೂಡುತ್ತಿವೆ! ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದೆ. ಆಗಿನ ಭಾರತ ಸರ್ಕಾರ ಈ ಅಕಾಡೆಮಿ ಪ್ರಾರಂಭವಾಗಲು ಎಷ್ಟು ಸಹಾಯ ಮಾಡಿತ್ತೋ ಗೊತ್ತಿಲ್ಲ. ಆದರೆ ಅಕಾಡೆಮಿ ಶುರು ಆದ ಮೇಲೆ ಕಾಮನ್ವೆಲ್ತ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಬ್ಯಾಡ್ಮಿಂ ಟನ್ ಆಟಗಾರರನ್ನು ಇಲ್ಲಿಗೇ ತರಬೇತಿಗೆ ಕಳುಹಿಸಿತು. ಮನೆ, ಒಡವೆ ಎಲ್ಲವನ್ನೂ ಅಡವಿಟ್ಟು ಶುರು ಮಾಡಿದ ಅಕಾಡೆಮಿಯ ಯಶೋಗಾಥೆ ಇಂದು ಒಲಿಂಪಿಕ್ ಗೇಮ್ಸ್’ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವವರೆಗೆ ಕರೆತಂದಿದೆ.ಸೈನಾ ನೆಹ್ವಾಲ್ ಜಗತ್ತಿನ ಎರಡನೇ ರ‍್ಯಾಂಕ್ ಆಟಗಾರ್ತಿ. ಅವಳಿಗೆ ಕೋಚಿಂಗ್ ಕೊಡುತ್ತಿದೆ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ. ಅಂತಹದರಲ್ಲೂ ಅದರ ಖರ್ಚುಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಜನರಿಗೆ, ದೇಶಕ್ಕೆ, ಸರ್ಕಾರಕ್ಕೆ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕಗಳು ಬೇಕು. ಅಮೆರಿಕ, ಚೈನಾ, ಇನ್ನಿತರೆ ದೇಶಗಳಿಗೆ ಹೋಲಿಸಬೇಕು. ಆದರೆ ಕ್ರೀಡೆಯನ್ನು ಪೋಷಿಸಿ, ಬೆಳೆಸುವುದು ಯಾರಿಗೂ ಬೇಡ.

ಸಿಂಧೂ ಬೆಳ್ಳಿ ಗೆದ್ದು ಭಾರತದ ಬಾವುಟ ಹಿಡಿದು ನಿಂತ ಫೋಟೋ ಎಲ್ಲೂ ಕಾಣುತಿದೆ, ಅದರ ಹಿಂದಿರುವ ತರಬೇತಿ ಕೇಂದ್ರದ ನೋವುಗಳು ಗೌಣ. ಒಲಿಂಪಿಕ್ಸ್ನಲ್ಲಿ ರಾಷ್ಟ್ರಗೀತೆ ಹಾಡು ಮೊಳಗಿದಾಗ ಮೈ ಜುಂ ಎನ್ನುತ್ತದೆ, ಆದರೆ ಕೆಲ ದಿನಗಳ ನಂತರ ಕ್ರಿಕೆಟ್ ಮಾತ್ರ ನೆನಪಲ್ಲಿ ಉಳಿಯುತ್ತದೆ. ಸರ್ಕಾರ ಖೇಲ್ ರತ್ನ ಪ್ರಶಸ್ತಿಯನ್ನು ಕೊಟ್ಟು ನಿದ್ದೆ ಮಾಡುತ್ತದೆ, ಇತ್ತ ಗೋಪಿಚಂದರಂತಹ ಕ್ರೀಡಾಪಟುಗಳು, ಕೆಲ ಕ್ರೀಡಾಸಕ್ತರು ಹಗಲು ರಾತ್ರಿ ದುಡಿದು ಸಿಂಧೂ, ಸೈನಾರಂತಹ ತಾರೆಗಳನ್ನು ಹುಡುಕಿ ತಂದು ಬೆಳೆಸಿ ಜಗತ್ತಿನೆದುರು ಮಿಂಚುವಂತೆ ಮಾಡುತ್ತಾರೆ. ಬೆಳಿಗ್ಗೆ ಎರಡು ಗಂಟೆಗೆ ಎದ್ದು ಜಗತ್ತಿನ ಇತರೆ ಆಟಗಾರರ ಆಟದ ವಿಡಿಯೋ ಅಧ್ಯಯನ ಮಾಡಿ ನಂತರ ಅಕಾಡೆಮಿಗೆ ಬರುವ ಗೋಪಿಚಂದ್ ಕ್ರೀಡಾಳುಗಳಿಗಿಂತ ಹೆಚ್ಚು ಅಭ್ಯಾಸ ಮಾಡುತ್ತಾರಂತೆ. ಅವರ ಜೀವವನ್ನೇ ಮುಡಿಪಾಗಿಟ್ಟ ಅಕಾಡೆಮಿ ಅದು. ಒಂದು ಪದಕದ ಹಿಂದಿನ ಕಷ್ಟ ಗೆದ್ದವರಿಗೆ ಗೊತ್ತು, ಗೆಲ್ಲಲು ಬೆನ್ನೆಲುಬಾಗಿ ನಿಂತವರಿಗೆ ಗೊತ್ತು.

ಸಾನಿಯಾ, ಸೈನಾ, ಸಿಂಧೂ, ದೀಪಾ ಇವರೆಲ್ಲ ಇವತ್ತಿನ ಯುವ ಕ್ರೀಡಾ ಪಟುಗಳಿಗೆ ಪ್ರೇರಣೆ ಹೇಗೋ ಹಾಗೆಯೇ ಬದುಕನ್ನೇ ಕ್ರೀಡೆಗೆ ಮುಡುಪಾಗಿಟ್ಟ ಗೋಪಿಚಂದ್‌ನಂತಹವರೂ ಪ್ರೇರಣೆಯೇ. ಗೋಪಿಚಂದ್‌ರವರೆ, ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಗಲು ನೆರವಾದ ನಿಮಗೆ, ನಿಮ್ಮ ಕಷ್ಟದ ಫಲವಾದ ಅಕಾಡೆಮಿಗೆ ಧನ್ಯವಾದಗಳು.

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post