ಅವಳು ವಕೀಲನೊಬ್ಬನ ಪತ್ನಿ. ಆ ಏರಿಯಾದ ಅಪಾರ್ಟ್’ಮೆಂಟ್’ವೊಂದರಲ್ಲಿ ಸಾಧಾರಣ ಗೃಹಿಣಿ. ಅವಳು ಸಾಂಪ್ರದಾಯಿಕ ಅಯ್ಯರ್ ಕುಟುಂಬದವಳಾದರೆ, ಅವನು ಕ್ರಿಶ್ಚಿಯನ್. ಇಬ್ಬರೂಪ್ರೀತಿಸಿ ಮದುವೆಯಾಗಿರುತ್ತಾರೆ. ಮುದ್ದಾದ ಮಗಳು ಮನೆಯ ಕಣ್ಮಣಿ. ಯಾವುದಕ್ಕೂ ಕೊರತೆಯಿಲ್ಲದ ಸುಖೀ ಕುಟುಂಬ. ಆದ್ರೆ ಇದ್ದಕ್ಕಿದ್ದಂತೆ ಮನೆಯ ಗೃಹಿಣಿ, ವಾಸುಕಿಅಂರ್ತಮುಖಿಯಾಗಿ ಬಿಡುತ್ತಾಳೆ. ಮಾತೆತ್ತಿದರೆ ಸಿಡುಕುವ, ರೇಗಾಡುವ ಸ್ವಭಾವ ಶುರುವಾಗುತ್ತದೆ. ಗಂಡನಿಗೆ ಪ್ರಶ್ನೆಯಾಗಿ ಉಳಿಯುವ ತನ್ನ ಸಮಸ್ಯೆಯನ್ನು ವಾಸುಕಿ, ಹೊಸದಾಗಿನೇಮಕಗೊಂಡ ಪೊಲೀಸ್ ಅಧಿಕಾರಿ ಜೀನಾಬಾಯಿಗೆ ತಿಳಿಸುತ್ತಾಳೆ. ತಾನು IPC 376 ಪೀಡಿತೆ ಎಂದು ಮನದ ನೋವನ್ನು ಹೊರ ಹಾಕುತ್ತಾಳೆ.
ಅಂದ್ರೆ ತಾನು ರೇಪ್‌ಗೊಳಗಾದ ಮಹಿಳೆ ಎಂದು ಹೇಳಿ ಕಣ್ಣೀರು ಹಾಕುತ್ತಾಳೆ. ಹೌದು, ಗೃಹಿಣಿಯಾಗಿರುವ ವಾಸುಕಿ ತನ್ನದೇ ಅಪಾರ್ಟ್‌ಮೆಂಟ್‌ನಲ್ಲಿರುವ ಇಬ್ಬರು ಯುವಕರಿಂದ ರೇಪ್‌ಗೆ ಒಳಗಾಗಿರುತ್ತಾಳೆ. ಯಾವಾಗಲೂ ಅಪಾರ್ಟ್‌ಮೆಂಟ್‌ಗೆ ಬಟ್ಟೆ ಐರನ್ ಮಾಡಲು ಬರುವ ವ್ಯಕ್ತಿ ಇಬ್ರಿಗೆ ಸಾಥ್ ನೀಡಿರುತ್ತಾನೆ. ಚೇಚಿ (ಅಕ್ಕ) ಎಂದು ಕರೆಯುತ್ತಲೇ ಇಂಜಿನಿಯರಿಂಗ್ ಓದುತ್ತಿರುವ ಆ ಇಬ್ಬರು ಯುವಕರು ವಾಸುಕಿಯ ಪ್ರತಿಭಟನೆಯನ್ನೂ ಲೆಕ್ಕಿಸದೆ ಆಕೆಯನ್ನು ಅತ್ಯಾಚಾರ ಮಾಡಿರುತ್ತಾರೆ.
ವಾಸುಕಿ ತನ್ನ ತಮ್ಮನಂತೆ ನೋಡಿರುವ ಆ ಯುವಕರು ಆಕೆ ಎಷ್ಟು ಬೇಡಿಕೊಂಡರೂ, ಕಾಲಿಗೆ ಬಿದ್ದರೂ ಲೆಕ್ಕಿಸದೆ ಆಕೆಯ ಮಾನಭಂಗ ಮಾಡುತ್ತಾರೆ. ಅಷ್ಟೇ ಅಲ್ಲ, ಹಿಡನ್ ಕ್ಯಾಮರಾದಲ್ಲಿ ಅತ್ಯಾಚಾರದ ವೀಡಿಯೋ ಸಹ ಮಾಡಿರುತ್ತಾರೆ. ಇದೇ ರೀತಿ ಆರು ಮಂದಿ ಗೃಹಿಣಿಯರನ್ನು, ಗಂಡ ಆಫೀಸಿಗೆ ಹೋದ ಸಂದರ್ಭ ಅವ್ರು ಅತ್ಯಾಚಾರ ಮಾಡಿರುತ್ತಾರೆ. ಮತ್ತೆ ವಾಸುಕಿ ಆ ಸಮಸ್ಯೆಯಿಂದ ಹೇಗೆ ಹೊರ ಬರುತ್ತಾಳೆ. ಆರೋಪಿಗಳಿಗೆ ಶಿಕ್ಷೆಯಾಗುತ್ತದಾ ಅನ್ನೋದು ಪ್ರೇಕ್ಷಕರಲ್ಲಿ ಮೂಡುವ ಪ್ರಶ್ನೆ. ಇದು ಮಲಯಾಳಂನ ‘ಪುದಿಯ ನಿಯಮಂ’ ಚಿತ್ರದ ಕಥೆ..
ಆ ಚಿತ್ರ ನೋಡಿದ ದಿನ ನನ್ನಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡು ಬಿಟ್ಟಿತ್ತು. ಸಮಾಜದಲ್ಲಿರುವ ಓರೆಕೋರೆಗಳು, ವಿಕೃತ ಮನೋಭಾವನೆಯೇ ಈ ಚಿತ್ರದ ಕಥೆ. ಸಮಾಜದಲ್ಲಿ ದಿನನಿತ್ಯ ಇಂತಹಾ ಅದೆಷ್ಟೋ ಘಟನೆಗಳು ನಡೆಯುತ್ತವೆ. ಒಂದಷ್ಟು ಘಟನೆಗಳು ಬೆಳಕಿಗೆ ಬಂದ್ರೆ, ಮತ್ತೆ ಒಂದಷ್ಟು ಘಟನೆಗಳು ಮಾನ, ಮರ್ಯಾದೆ ಹೆಸರಲ್ಲಿ ಯಾರ ಗಮನಕ್ಕೂ ಬರದೆ ಮುಚ್ಚಿ ಹೋಗುತ್ತವೆ.
ಹೌದು, ಮನುಷ್ಯ ಬೆಳೆಯುತ್ತಿದ್ದಾನೆ. ಸಂಬಂಧಗಳು ಸಾಯುತ್ತಿವೆ, ಚಿತ್ರದಲ್ಲಿ ನಡೆಯುವಂತೆಯೇ ಸಂಬಂಧಗಳು ಅರ್ಥ ಕಳೆದುಕೊಂಡಿವೆ. ಅಕ್ಕ, ತಮ್ಮ, ತಾಯಿ ಅನ್ನೋ ಸಂಬಂಧದ ಪಾವಿತ್ರ್ಯತೆ ಈಗ ಉಳಿದಿಲ್ಲ. ಟಿವಿ, ಸಿನೆಮಾ, ವೆಬ್’ಸೈಟ್’ಗಳಲ್ಲಿ ಅಶ್ಲೀಲ ಚಿತ್ರ, ವೀಡಿಯೋಗಳನ್ನು ದಿನಪೂರ್ತಿ ನೋಡುತ್ತಿರುವ ಇವತ್ತಿನ ಯುವಜನಾಂಗಕ್ಕೆ ಸಂಬಂಧಗಳ ಗೊಡವೆಯಿಲ್ಲ. ರಕ್ತ ಸಂಬಂಧದ ಹಂಗಿಲ್ಲ. ಎಲ್ಲಾ ಬಿಟ್ಟು ಜಸ್ಟ್ ಎಂಜಾಯ್ ಮಾಡೋಣ ಅಷ್ಟೆ.
ಸಮಾಜದಲ್ಲಿ ಇಂತಹಾ ವಿಕೃತ ಭಾವನೆಗಳು ಹೆಚ್ಚಾಗಿರುವುದಕ್ಕೆ ಅಣ್ಣನೇ ತಂಗಿಯ ಮೇಲೆ, ಅಪ್ಪನೇ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ. ತಂಗಿಗೇ ರಕ್ಷಣೆ ನೀಡಬೇಕಾದ ಅಣ್ಣನೇ ಪೀಡಕನಾಗಿಬಿಡುತ್ತಾನೆ. ಆಸರೆ ನೀಡಬೇಕಾದ ಅಪ್ಪನೇ ಅತ್ಯಾಚಾರವೆಸಗುತ್ತಾನೆ. ಮಗಳು, ತಂಗಿ ಎಲ್ಲಾ ಸಂಬಂಧ ಬಿಟ್ಟು ಆತ ಬರೀ ಕಾಮಮೃಗವಾಗಿ ಬಿಡುತ್ತಾನೆ. ಆಸೆ ಈಡೇರುತ್ತದೆ. ಸಂಬಂಧಗಳು ಸಾಯುತ್ತವೆ.
ಇಂತಹಾ ಘಟನೆಗಳು ನಡೆದಾಗ ಸೋಜಿಗವೆನಿಸುವುದು, ತನಗೆ ಜನ್ಮ ನೀಡಿದವಳು ಒಬ್ಬಳು ತಾಯಿಯೇ ಅನ್ನೋದು ಯಾಕೆ ಅತ್ಯಾಚಾರ ಮಾಡುವವನಿಗೆ ಮರೆತು ಹೋಗುತ್ತದೆ. ಆಕೆಯೂ ತನ್ನ ತಾಯಿ, ತಂಗಿಯಂತೇ ಒಬ್ಬಳು ಹೆಣ್ಣು ಜೀವ ಎಂಬುದು ಯಾಕೆ ಅರ್ಥವಾಗುವುದಿಲ್ಲ. ಬಹುಶಃ ಅದು ಅರ್ಥವಾದಾಗಲಷ್ಟೇ ಇಂತಹಾ ವಿಕೃತ ಘಟನೆಗಳು ನಿಲ್ಲಲು ಸಾಧ್ಯ,
ಎಲ್ಲಕ್ಕಿಂತಲೂ ಮೊದಲು ಮನುಷ್ಯನ ಮನದಲ್ಲಿರುವ ಕೊಳೆ ಕಳೆದು ಹೋಗಬೇಕು. ಎಲ್ಲವನ್ನೂ ಬಿಟ್ಟು ಮನಸ್ಸಿರುವ ಮಾನವನಾಗಬೇಕು. ಅಲ್ಲಿಯವರೆಗೂ ಸಂಬಂಧಗಳು ಸದ್ದಿಲ್ಲದೇ ಸಾಯುತ್ತಲೇ ಇರುತ್ತವೆ..
-ವಿನುತ ಪೆರ್ಲ
Facebook ಕಾಮೆಂಟ್ಸ್