ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆ ರಜೆಯ ನಂತರ ಜೂನ್ ತಿಂಗಳು ಬಂತಂದರೆ ಶಾಲೆ ಪುನರಾರಂಭದ ಸಂಭ್ರಮ. ಜೂನ್ ಒಂದಕ್ಕೆ ಶಾಲೆ ಶುರುವಾದರೆ ಜೂನ್ ೬ ರಿಂದ ಮಳೆಗಾಲ ಶುರುವಾಗುವ ವಾಡಿಕೆ. ಒಮೊಮ್ಮೆ ಸ್ವಲ್ಪ ಆಚೀಚೆ ಆದರೂ ಜೂನ್ ಮೊದಲ ವಾರಕ್ಕೆ ಮಳೆರಾಯನ ಆಗಮನವಂತೂ ಖಚಿತ. ಹೊಸ ವರ್ಷದ ಹೊಸ ತರಗತಿಗೆ ಹೋಗುವ ಉತ್ಸಾಹ ಒಂದೆಡೆಯಾದರೆ ಮಳೆಯ ಕಿರಿಕಿರಿಯು ಉತ್ಸಾಹಕ್ಕೆ ಅಕ್ಷರಸಃ ತಣ್ಣೀರು ಎರೆಚುತಿತ್ತು. ಕರಾವಳಿಯ ಜಿಲ್ಲೆಗಳಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್’ವರೆಗಿನ ವರುಣ ದೇವ ಮನೆ ಮಾಡುವುದು ಸಾಮಾನ್ಯ. ಕರಾವಳಿಯ ಮಳೆಯು ದಪ್ಪ-ದಪ್ಪಗಿನ ಹನಿಗಳಿಂದ ಕೂಡಿದ್ದು ಬೀಸುವ ಗಾಳಿಯಿಂದ ಓರೆಯಾಗಿ ಬೀಳುತ್ತಾ ನಮ್ಮನ್ನು ಒದ್ದೆಯಾಗಿಸುತ್ತದೆ. ಹಿಡಿದಿರುವ ಕೊಡೆ ಹೆಸರಿಗಷ್ಟೇ!!!. ಬಾಲ್ಯದಲ್ಲಿ ಮಳೆಯಲ್ಲಿ ತೊಯ್ದಕೊಂಡು ಶಾಲೆಗೆ ಹೋಗುತ್ತಿದ್ದದ್ದು, ಮಳೆ ನೀರಿನ ಆಟ, ಇತ್ಯಾದಿಗಳು ಎಂದಿಗೂ ಹಸಿ ಹಸಿ ನೆನಪುಗಳು!!!…
ನಮ್ಮ ಶಾಲೆಯು ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ಒಂದು-ಎರಡು ತರಗತಿಗಳಲ್ಲಿರುವಾಗ ಅಕ್ಕನ ಕೊಡೆಯೇ ಆಸರೆ. ಆವಾಗೆಲ್ಲ ಹತ್ತಿ ಬಟ್ಟೆಯ ಉದ್ದ ಕೋಲಿನ ಕೊಡೆಗಳು… ಕೊಟ್ಟ ದುಡ್ಡಿಗೆ ಸರಿಯಾಗಿ ಅವುಗಳ ದಪ್ಪ… ತೆಳ್ಳಗಿನ ಕೊಡೆ ಜೂನ್- ಜುಲೈ’ನ ಜಡಿಮಳೆಯನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲ! ನೇರವಾಗಿ ಮಳೆಯ ಹನಿಯು ಮೈಗೆ ಬೀಳುವುದಿಲ್ಲ ಅಷ್ಟೇ!! ತೂರಿ ಬಂದ ನೀರಿನ ಹನಿಗಳು ೧೫ ನಿಮಿಷದ ಮಳೆಯಲ್ಲಿ ನಮ್ಮನ್ನು ಒದ್ದೆಯಾಗಿಸುತಿತ್ತು… ದಪ್ಪನೆಯ ಬಟ್ಟೆಯ ಹಾಗೂ ಎರಡು ಹೊದಿಕೆಯ ಕೊಡೆಗಳೂ ಸಿಗುತಿದ್ದವಾದರೂ ಒದ್ದೆಯಾದ ಮಣಭಾರದ ಆ ಕೊಡೆಗಳನ್ನು ಹೊರುವುದೊಂದು ಸಾಹಸವೇ… ಒಂದೇ ಕೊಡೆಯ ಆಶ್ರಯದಲ್ಲಿ ಅಕ್ಕ ಮತ್ತು ನಾನು ಶಾಲೆಗೆ ಹೋಗುತಿದ್ದೆವು. ಚೀಲಕ್ಕೆ ಹಾಕಿದ ಪುಸ್ತಕಗಳು ಒದ್ದೆಯಾಗದಂತೆ ಪುಸ್ತಕಗಳನ್ನು ಪ್ಲಾಸ್ಟಿಕ್ ಕವರ್’ನಲ್ಲಿ ಹಾಕಿ, ಇಬ್ಬರ ಮಧ್ಯ ಇಟ್ಟುಕೊಂಡು ಹೋಗುತಿದ್ದೆವು. ಕೈಯಲ್ಲೊಂದು ಬುತ್ತಿ-ಡಬ್ಬ…ಮಳೆಯಲ್ಲಿ ತೊಯ್ದ ಬುಟ್ಟಿಯಲ್ಲಿರುವ ಕೊಚ್ಚಿಗೆ ಅನ್ನ ಸಂಪೂರ್ಣ ತಣ್ಣಗಾಗಿರುತಿತ್ತು. ಇನ್ನೊಂದು ಸಮಸ್ಯೆಯಂದರೆ ಒದ್ದೆಯಾದ ಕೊಡೆಗಳನ್ನು ತರಗತಿಯ ಹೊರಗೆ ಕಟ್ಟಿರುವ ಸರಿಗೆಯಲ್ಲಿ ನೇತಾಕಿರಬೇಕಿತ್ತು… ತರಗತಿಗಳು ಮುಗಿದ ತಕ್ಷಣ ಬಂದರೆ ಕೊಡೆಗಳು ಇಟ್ಟ ಸ್ಥಳದಲ್ಲಿ ಸಿಗುತ್ತಿದ್ದವು…ಇಲ್ಲವಾದರೆ ಚಿಕ್ಕ-ಚಿಕ್ಕ ಕಳ್ಳ ಪೋರರು ಕೊಡೆಯನ್ನು ಎತ್ತಿಕೊಂಡೇ ಬಿಡುತ್ತಿದ್ದರು. ಕೊಡೆಗಳಲ್ಲಿ ಹೆಸರು ಬರೆದಿಡುವುದೂ ಅನಿವಾರ್ಯ. ತರಗತಿಗಳು ಮುಗಿಯುವ ಸಮಯದಲ್ಲಿ ಅಧ್ಯಾಪಕರು ಕೊಡೆಯಿಡುವ ಜಾಗಕ್ಕೆ ಬಂದು ನೋಡುತ್ತಾ ಆ ಕಳ್ಳ ಪೋರರಿಂದ ಕೊಡೆಗಳನ್ನು ರಕ್ಷಿಸುತಿದ್ದರು!!! ಶಾಲೆಯ ದಾರಿಯು ಮಣ್ಣಿನ ರಸ್ತೆಯಾಗಿದ್ದಲ್ಲದೆ ಏರಿಕೆಯದ್ದಾಗಿತ್ತು. ಚರಂಡಿಗಳಿಲ್ಲದ ಈ ರಸ್ತೆಯಲ್ಲಿ ಮಳೆಯ ನೀರು ಹರಿದು ಹೋಗುವುದು ಸಾಮಾನ್ಯ. ಮಳೆ ಬಂದು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಪಾಚಿ ಬೆಳೆದುಕೊಂಡಿದ್ದು ನಮ್ಮನ್ನು ಬೀಳಿಸಲು ಕಾದು ಕೊಂಡಿರುತ್ತಿತ್ತು. ಹೆಜ್ಜೆ ಮೇಲೊಂದ್ ಹೆಜ್ಜೆಯನಿಟ್ಟುಕೊಂಡು ನಡೆಯಬೇಕಿತ್ತು… ಆ ಜಾರಿಕೆಯ ರಸ್ತೆಯಲ್ಲಿ ಹಲವಾರು ಭಾರಿ ಬಿದ್ದು-ಎದ್ದು ಹೋಗುತಿದ್ದೆವು. ಕೆಲವೂಮ್ಮೆ ಒಬ್ಬರು ಜಾರಿ ಅವರನ್ನು ಬೀಳುವುದನ್ನು ತಡೆಯಲು ಹೋದೆ ಇನ್ನೊಬ್ಬರು, ಹಾಗೆ ಮತ್ತೊಬ್ಬರೂ ಬಿದ್ದು “ಸರಣಿ ಅಪಘಾತ”ಗಳಾಗುತ್ತಿದ್ದವು.
ಮಳೆಗಾಲ ಇನ್ನೊಂದು ಆಕರ್ಷಣೆಯೇ ಮಳೆಗಾಲದ ಬರುವಿಕೆಯ ಕೂಗಿ ಕೂಗಿ ಹೇಳುವ ಕಪ್ಪೆಗಳು!! ಹಿಂದಿನ ಮಳೆಗಾಲ ಮುಗಿಯುತ್ತಿದ್ದಂತೆ ಮಣ್ಣಿನಡಿ ಕಣ್ಮರೆಯಾಗಿದ್ದ ಕಪ್ಪೆಗಳು ಹೊರ ಬಂದು “ವಾಟ್.. ವಾಟರ್..ವಾಟ್… ವಾಟರ್..”(what water?!!!…what water ?!!!) ಎನ್ನುತ್ತಾ ಮಳೆಗಾಲದ ಮುನ್ಸೂಚನೆ ಕೊಡುತ್ತವೆ. ಆ ಪುಟ್ಟ ಪ್ರಾಣಿಗೆ ಮಳೆಯ ಬರುವಿಕೆಯ ಭವಿಷ್ಯ ಹೇಗೆ ತಿಳಿಯುತ್ತದೆಯೋ ಗೊತ್ತಿಲ್ಲ… ಒಂದು ಶುರು ಮಾಡಿದರೆ ಸಾಕು, ಅಲ್ಲೊಂದು-ಇಲ್ಲೊಂದು-ಮತ್ತೆಲ್ಲೋ ಇನ್ನೊಂದು ಹೀಗೆ ಅವುಗಳ ಜುಗಲ್ಬಂದಿ ಶುರು!!! ರಾತ್ರಿ-ಹಗಲೆನ್ನದೇ ಕೂಗಿ-ಕೂಗಿ ತನ್ನ ಸಂಗಾತಿಯನ್ನು ಕರೆದು ಸಂತಾನೋತ್ಪತ್ತಿ ಮಾಡುವುದೇ ಈ ಕೂಗಿನ ಮರ್ಮ… ಅದೇನೇ ಆಗಲಿ ನಮಗಂತೂ ಇಡೀ ದಿನ ಕರ್ಕಶ ಸಂಗೀತ ಕಛೇರಿ..! ಈ ಸಂಗೀತ ಕಛೇರಿಗೆ ಸಾಥ್ ಕೊಡುತಿದ್ದವು ಕರ್ಕಶ ಕೂಗಿನ ಜೀರುಂಡೆಗಳು… ನಾವು ಸಣ್ಣದಿದ್ದಾಗ ಜೀರುಂಡೆಗಳನ್ನು ನೋಡಲೇ ಇಲ್ಲ!!!. ಕಾಣಲು ಗುಪ್ತವಾಗಿರುವ ಇವುಗಳ ಕೂಗಿನ ಶಬ್ದ ಕೇಳಿದ ಹೊಸಬರು ಇದೇನು ಬ್ರಹತ್ ಗಾತ್ರದ ಪ್ರಾಣಿಯೇ ಅಂದುಕೊಳ್ಳಬೇಕು. ನಿಶಬ್ದದ ರಾತ್ರಿಯಲ್ಲಿ ಈ ಕರ್ಕಶ ಕೂಗು horror movie ಯ ಹಿಮ್ಮೇಳದಂತೆ ಕೇಳಿಸಿ ಭಯ ಹುಟ್ಟಿಸುತಿತ್ತು… ಹಲವು ವರ್ಷಗಳ ನಂತರ ಜೀರಂಡೆಗಳ ಅಸಲೀ ಗಾತ್ರ ತಿಳಿದಾಗಲೇ ಆ ಭಯ ನಿವಾರಣೆಯಾಗಿದ್ದು… ಜೀರಂಡೆಗಳ ಈ “ಕ್ರಿ ಕ್ರಿ ಕ್ರಿ ಕ್ರಿ…. ….. ” ಕೂಗಿನಿಂದಲೇ ಇವುಗಳಿಗೆ ಇಂಗ್ಲೀಷಿನಲ್ಲಿ “Cricket” ಎಂದು ಕರೆದಿರಬೇಕು!!!. ಕಪ್ಪೆ-ಜೀರಂಡೆಗಳ ಹಿಮ್ಮೇಳದ ಮುಮ್ಮೇಳವೆನು ಗೊತ್ತೇ?… ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರದಂತೆ ಹೊಳೆಯುವ “ಮಿಂಚು ಹುಳ”ಗಳು… ಬಾಲ್ಯದ ಕುತೂಹಲದ ನೈಸರ್ಗಿಕ ಕೌತುಕಗಳ ಪಟ್ಟಿಯಲ್ಲಿ ಇದೂ ಒಂದು. ಮರದ ರೆಂಬೆ-ಕೊಂಬೆಗಳಲ್ಲಿ ಸಾವಿರಾರು ಮಿಂಚುಹುಳಗಳು ಕೂತು ತನ್ನ ದೇಹವನ್ನು ಬೆಳಗುತ್ತಾ ಇಂದ್ರಜಾಲವನ್ನು ಸ್ರಷ್ಟಿಸುತಿದ್ದವು. ಆಗ ನಮಗೆ ವಿಸ್ಮಯವಾಗಿದ್ದ ಈ ಮಿಂಚುಹುಳ ಈಗ ಮಾಮೂಲೆನಿಸಿದರೂ ಇಂದಿಗೂ ಚಿಕ್ಕ ಮಕ್ಕಳು ಈ ಹುಳಗಳನ್ನು ಕುತೂಹಲದಿಂದಲೇ ನೋಡುತ್ತಾರೆ. ಹಿಂದಿನ ಕಾಲದಲ್ಲಿ ಕಾರ್ಮೋಡ ತುಂಬಿದ ಕಗ್ಗತ್ತಲೆಯ ರಾತ್ರಿಯಲ್ಲಿ ದಾರಿ ದೀಪಕ್ಕಾಗಿ ಮಿಂಚುಹುಳಗಳನ್ನು ಗಾಜಿನ ಬುರುಡೆಯಲ್ಲಿ ಹಾಕಿಕೊಂಡು ಹೋಗುತ್ತಿದ್ದರಂತೆ!!!
ಮೊದಲ ಮಳೆಯ ಮಾರನೇ ದಿನ ಮುಸ್ಸಂಜೆಯ ಇನ್ನೊಂದು ಕುತೂಹಲಕರ ವಿದ್ಯಮಾನವೇ “ಹಾರುವ ಹಾತೆಗಳು”. ಸಂಜೆಯ ಸಮಯದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಮಳೆಗೆ ಒದ್ದೆಯಾದ ನೆಲವನ್ನು ಕೊರೆದುಕೊಂಡು ಸಾಲು-ಸಾಲಾಗಿ ಹಾತೆಗಳು ಬರಲು ಪ್ರಾರಂಭಿಸುತ್ತವೆ.!!! ಹಾಗೆ ಬಂದ ಈ ಹಾತೆಗಳು ಕ್ಷಣ ಮಾತ್ರದಲ್ಲಿ ಬಾನಿನ ಮುಖಮಾಡಿ ಹಾರಲು ಶುರುಮಾಡುತ್ತವೆ.!!! ಅವುಗಳು ಹಿಂಡು ಹಿಂಡಾಗಿ ಬರುವುದು ಎಷ್ಟು ವಿಚಿತ್ರವೋ, ಅಷ್ಟೇ ವಿಚಿತ್ರ ಅವುಗಳ ಆಕಾಶಯಾನ… “ಇವುಗಳು ಹೋಗುವುದಾದರೂ ಎಲ್ಲಿಗೆ?… , ಸ್ವಲ್ಪ ಸಮಯದ ನಂತರ ವಾಪಸು ಬರುತ್ತವೆಯೇ?, ಇವುಗಳು ಹಾತೆಗಳೇ ಅಥವಾ ಕೀಟಗಳೇ ? ಮೊದಲ ಮಳೆ ಮಾರನೇ ದಿನವೇ ನೆಲದಿಂದ ಹೊರ ಬರುವುದಾದರೂ ಯಾವುದಕ್ಕೆ…?” ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ಮುಂದೆ ಬರುತ್ತಿದ್ದವು. ಅವಾಗ ಸಿಗುತ್ತಿದ್ದ ತಾತ್ಕಾಲಿಕ ಉತ್ತರ- ” ಮಳೆಯ ನೀರು ಹಾತೆಗಳ ಗೂಡಿಗೆ ಹೋಗುವುದರಿಂದ ಇವುಗಳು ಮೇಲೇಳುತ್ತಿರುವುದು “…. ಸರಿಯಾದ ಕಾರಣವೇನು ಗೊತ್ತೇ?…. ನೆಲದಡಿಯ ಕಾಲೋನಿಗಳಲ್ಲಿರುವ ಈ ಹಾತೆಗಳು ಮಳೆ ಬಂದಾಕ್ಷಣ ಸಂತಾನೋತ್ಪತ್ತಿಗೆ ಸರಿಯಾದ ಸಮಯ ಎಂದುಕೊಂಡು ಹೆಣ್ಣು-ಗಂಡು ಎರಡು ಹೊರಬಂದು ಹಾರುತ್ತಾ ಮಿಲನವಾಗುತ್ತವೆ. ತನ್ನ ಜೀವನದ ಧ್ಯೇಯವನ್ನು ಪೂರೈಸಿದ ಗಂಡು ಇರುವೆ ಮಿಲನವಾದ ಕೆಲವೇ ಸಮಯದಲ್ಲಿ ಸತ್ತು ಹೋದರೆ, ಹೆಣ್ಣು ಇರುವೆ ರೆಕ್ಕೆಗಳನ್ನು ಕಳಚಿಕೊಂಡು ತನ್ನ ಆಯ್ಕೆಯ ಜಾಗದಲ್ಲಿ ಕಾಲೋನಿ ಕಟ್ಟುತ್ತದೆ… ಕೀಟ ಪ್ರಪಂಚದ ಅನೇಕಾನೇಕ ವಿಸ್ಮಯಗಳಲ್ಲಿ ಇದೂ ಒಂದು.
ಬಾಲ್ಯದ ಮರೆಯಲಾಗದ ನೆನಪುಗಳನ್ನು ಇನ್ನೊಂದು ಪ್ರಮುಖವಾಗಿರುವುದು ವಿಚಿತ್ರವಾಗಿ, ಭಯಂಕರವಾಗಿ ಕೂಗುತ್ತಿದ್ದ ಒಂದು ಹಕ್ಕಿ… ಈ ಹಕ್ಕಿಯ ಕೂಗು ದಿನದುದ್ದಕ್ಕೂ ಕೇಳಿ ಬಂದರೂ ರಾತ್ರಿ ನಿಶಬ್ದವಾದಾಗ ಕೇಳಿದಾಗ ಭಯ ಹುಟ್ಟಿಸುತಿತ್ತು. “Thooo…Thu…Thoo ” ಎಂದು ಕೂಗುವ ದನಿ ಅರ್ಧ ನಿದ್ರೆಯಿಂದೆದ್ದಾಗ ಕೇಳಿಸಿದರೆ ಅಂಜಿಕೆಯಿಂದ ತುಂಬಾ ಸಮಯ ನಿದ್ರೆಯೇ ಬರುತ್ತಿರಲಿಲ್ಲ. ಅದೆಷ್ಟೋ ವರ್ಷಗಳ ನಂತರ ಈಗ ಗೊತ್ತಾಗಿದ್ದು ಈ ಹಕ್ಕಿಯ ಹೆಸರು “Brain fever bird !!!”. ನಾವು ಈಗಿರುವ ಕೈಗಾ ಪರಿಸರದಲ್ಲೂ ಇದು ಮಳೆಗಾಲದಲ್ಲಿ ಸಾಕಷ್ಟು ಕೂಗು ಕೇಳಿ ಬಂದರೂ ಕಾಣ ಸಿಗುವುದು ಅಪರೂಪವೇ. ಕೆಲವೇ ದಿನದ ಹಿಂದೆ ನನ್ನ ಕ್ಯಾಮರಾದಲ್ಲೂ ಸೆರೆಯಾಗಿದೆ!!. ಇದಕ್ಕೆ ಈ ಹೆಸರು ಬಂದಿರುವುದು ಅದರ ಕೂಗುವ ಶೈಲಿಗಷ್ಟೇ. ಇದೊಂದು ಕೋಗಿಲೆಯಂತೆ ಬೇರೆ ಹಕ್ಕಿಗಳ ಗೂಡಲ್ಲಿ ಮೊಟ್ಟೆಯಿಡುವ “ಪರಪುಟ್ಟ”.
ಹೀಗೆ ಮಳೆಗಾಲ ಶುರುವಾದಂತೆ ನಮಗೆ ಜೀವಶಾಸ್ತ್ರದ ಪಾಠ. ಸಾಮಾನ್ಯವಾಗಿ ಕಾಣ ಸಿಗದ ಅನೇಕ ಜೀವಿಗಳು ಮಳೆಗಾಲದಲ್ಲಿ ಪ್ರತ್ಯಕ್ಷವಾಗಿ ನಮಗೆ ಅಚ್ಚರಿಯನ್ನೂ ಕುತೂಹಲವನ್ನೂ ತರುತ್ತಿದ್ದವು. ಮಳೆಗಾಲದ ಮೊದ ಮೊದಲಿನ ದಿನಗಳಲ್ಲಿ ಕಾಣ ಸಿಗುವ ಇನ್ನೊಂದು ಅಪರೂಪವೇ ಅಣಬೆ… ನೆಲದ ಒಳಗೇ ಹುಟ್ಟಿ ಬೆಳೆಯುವ ಕಲ್ಲಣಬೆ ಒಂದು ಜಾತಿಯದಾದರೆ, ನೆಲದ ಮೇಲೆ ಹುಟ್ಟಿ ಕೊಡೆಯಂತೆ ಬೆಳೆಯುವ ‘ನಾಯಿಕೊಡೆ’ ಗಳು ಇನ್ನೊಂದು ಜಾತಿ.
ಈ ನಾಯಿಕೊಡೆಯಲ್ಲೂ ವಿವಿಧ ಗಾತ್ರ, ವಿವಿಧ ಬಣ್ಣ, ಆಕಾರ. ಕೆಲವು ಕೆಲವೇ ಮಿಲಿಮೀಟರ್ ವ್ಯಾಸದಾದರೆ, ಇನ್ನುಕೆಲವು ೧೫-೨೦ ಸೆ. ಮೀಟರ್ ಗಾತ್ರದವುಗಳು. ಇನ್ನು ಕೆಲವು ಮಡಚಿದ ಕೊಡೆಯಂತಿದ್ದು ‘ಯಾವತ್ತು ಬಿಡಿಸಿಕೊಳ್ಳುತ್ತವೆ’ ಎಂದು ನಮ್ಮನ್ನು ಒಂದಿಷ್ಟು ದಿನ ಕುತೂಹಲದಿಂದ ಕಾಯಿಸಿ ನಂತರ ಹಾಗೆಯೇ ಕೊಳೆತು ಹೋಗುತ್ತಿದ್ದವು. ಇನ್ನುಕೆಲವು ಸತ್ತ ಮರಗಳ ಮೇಲೆ ಬೆಳೆಯವ ಅತೀ ವಿಚಿತ್ರ ಆಕಾರ-ಬಣ್ಣ-ವಿನ್ಯಾಸದ ಅಣಬೆ.!!! ಒಂದೆರಡು ದಿನಗಳಲ್ಲಿ ಅತೀ ವೇಗವಾಗಿ ಬೆಳೆದು ಅದೇ ವೇಗದಲ್ಲಿ ಕೊಳೆತು ಹೋಗುವ ಅಣಬೆಗಳೂ ಕುತೂಹಲ ತರುತ್ತಿದ್ದವು.
ಮಳೆಗಾಲ ಶುರುವಾಯಿತೆಂದರೆ ಭೂಮಿ ಮೇಲಿರುವ ಎಲ್ಲ ಸಸ್ಯ ಸಂಕುಲಗಳಿಗೆ ಚಿಗುರೊಡೆಯುವ ಸಂಭ್ರಮ… ಇನ್ನು ಕೆಲವು ಬೀಜ ಮೊಳಕೆಯೊಡೆದು ಗಿಡವಾಗುವ ಪ್ರಕ್ರಿಯೆ… ಬಾಲ್ಯದಲ್ಲಿ ಕೌತುಕವೆನಿಸಿರುವ ಸಸ್ಯ ಒಂದಿದೆ. ಖಾಲಿ ಬರಡೆಣಿಸಿರುವ ಜಾಗದಿಂದ ಮೇಲೇಳುವ ಈ ಗಿಡ ಒಂದು ಬಳ್ಳಿ…. ಮೊದಲ ಮಳೆಯಾಗುತ್ತಿದ್ದಂತೆ ಭೂಮಿಯನ್ನು ಸೀಳಿ ಚಿಗುರೊಡೆಯುವ ಈ ಬಳ್ಳಿ ಹಚ್ಚ ಹಸಿರಾಗಿ ಉದ್ದನೆ ಬೆಳೆಯುತ್ತಾ ಸಮೀಪದಲ್ಲಿರುವ ಕ್ಷಿಪ್ರವಾಗಿ ಮರಗಳನ್ನು ಆಲಂಗಿಸುತ್ತ ಬೆಳೆಯುತಿತ್ತು. ನಮಗಾಗುವ ಆಶ್ಚರ್ಯವೆಂದರೆ ಸುಮಾರು ೩-೪ ಮೀರಟ್ ಬೆಳೆದರೂ ಈ ಬಳ್ಳಿಯಲ್ಲಿ ಎಲೆಗಳೇ ಇರುತ್ತಿರಲಿಲ್ಲ!!!!…ಸಾಮಾನ್ಯವಾಗಿ ಬೀಜದಿಂದ ಮೊಳೆಕೆಯೊಡೆಯುವ ಗಿಡಗಳು ಇಷ್ಟು ಕ್ಷಿಪ್ರವಾಗಿ ಬೆಳೆಯುವುದಿಲ್ಲ… ಇದರಲ್ಲೇನಿದೆ ಅಸಾಮಾನ್ಯ ಕೌತುಕ?… ಭೂಮಿಯಲ್ಲಿ ಅಡಿಗಿರುವ ಇವುಗಳ ಗಡ್ಡೆಯೇ ಇದರ ಹಿಂದಿನ ಗುಟ್ಟು….ಇದರಂತೆ ಹಲವಾರು ಗಡ್ಡೆ-ಗೆಣಸುಗಳ ಗಿಡಗಳೂ ಸಹ ವಿಚಿತ್ರ ಅನಿಸುತಿತ್ತು…. ಮಳೆ ಬರುತ್ತಿದಂತೆ ಭೂಮಿಯನ್ನು ಸೀಳಿ ಕೆಲವೇ ದಿನಗಳಲ್ಲಿ ೧-೨ ಚದರ ಮೀಟರ್ ನಷ್ಟು ಜಾಗಕ್ಕೆಲ್ಲ ಚಪ್ಪರ ಹಾಕುತಿತ್ತು….
ಮಳೆಗಾಲದ ಜಡಿಮಳೆಯಲ್ಲಿ ಹೊರಾಂಗಣದ ಆಟಗಳೆಲ್ಲ ನಿಲ್ಲಿಸಬೇಕಾಗುತಿತ್ತು. ಆಗೊಮ್ಮೆ ಈಗೊಮ್ಮೆ ಮಳೆ ನಿಂತಾಗ ಅಲ್ಪ ಸ್ವಲ್ಪ ಆಟ … ಈಗಿನಂತೆ ಮೊಬೈಲಾಗಲಿ ಟಿವಿಯಾಗಲಿ ಇರುತ್ತಿರಲಿಲ್ಲ. ಹಾಗಂತ ಯಾವತ್ತೂ ನಮಗೆ ಬೇಜಾರಾಗುತ್ತಿರಲಿಲ್ಲ.!! ಕಾರಣ ನಮ್ಮ ಒಳಂಗಾಣದ ಆಟಗಳು…. ಅವಿಭಕ್ತ ಕುಟುಂಬವಾಗಿದ್ದರಿಂದ ಮನೆಯಲ್ಲಿ ನಾವು ಹಲವಾರು ಮಕ್ಕಳಿರುತ್ತಿದ್ದೆವು. ಕಣ್ಣಾಮುಚ್ಚಾಲೆ, ಕಳ್ಳ-ಪೊಲೀಸ್, ಪಗಡೆಯಾಟ, ಚೆನ್ನೆಮಣೆ.. ಹೀಗೆ ಹಲವಾರು ಆಟಗಳು ನಮ್ಮ ಆವಾಗಿನ ಒಳಾಂಗಣದ ಆಟಗಳು. ಕರೆಂಟಿಲ್ಲದ ಮಳೆಗಾಲದ ಕತ್ತಲ ದಿನಗಳಲ್ಲಿ ಅಡಗಿಕೊಳ್ಳಲು ಅಸಂಖ್ಯ ಜಾಗವಿದ್ದು ಕಣ್ಣಾಮುಚ್ಚಾಲೆ ಅತೀ ಸಾಮಾನ್ಯ ಆಟ!!! ಅದಲ್ಲೆಡೆ ನಾವೆಲ್ಲ ಸೇರಿ ನಾಟಕ ಕಂಪೆನಿಯನ್ನೇ ಕಟ್ಟಿಕೊಂಡಿದ್ದೆವು!!! ಪಾಠದಲ್ಲಿ ಬರುವ, ವಾರ್ಷಿಕೋತ್ಸವದಲ್ಲಿ ಅಭ್ಯಸಿಸಿರುವ ಅಥವಾ ರೇಡಿಯೋದಲ್ಲಿ ಪ್ರಸಾರವಾಗಿದ್ದ ನಾಟಕಗಳ ಅಭಿನಯ ಮಾಡುತಿದ್ದೆವು. ಸ್ವಯಂ ನಿರ್ದೇಶಿಸಿ ಅಭಿನಯಿಸಿರುವ ಈ ನಾಟಕಗಳಿಗೆ ಹೆಚ್ಚಾಗಿ ಪ್ರೇಕ್ಷಕರು ನಾವೇ!!!. “ಹುಲಿ ಮತ್ತು ಬ್ರಾಹ್ಮಣ” “ಶಿಭಿ ಚಕ್ರವರ್ತಿ ಮತ್ತು ಬೇಡ” ಇವುಗಳು ಪ್ರಸಿದ್ಧ ನಾಟಕಗಳು. ಆಗಸ್ಟ್ ತಿಂಗಳು ಬಂತೆಂದರೆ ಸ್ವಾತಂತ್ರ್ಯ ದಿನಾಚರಣೆಯ ತಯಾರಿ. ಶಾಲೆಯಲ್ಲಿ ಅಭ್ಯಸಿಸಿರುವ ದೇಶಭಕ್ತಿ ಗೀತೆಗಳ ಸಮೂಹಗಾನವೂ ನಡೆಯುತಿತ್ತು. ” ಭಾರತೀಯರು…ನಾವು ಭಾರತೀಯರು.| ಭರತ ಮಾತೇ ನಮ್ಮ ಮಾತೇ ಭಾರತೀಯರು |” ನಮ್ಮ ಶಕ್ತಿ ಮೀರಿ ಕೂಗುತಿದ್ದರೂ ಮನೆಯಲ್ಲಿ ಯಾರೂ ಬೈಯುತಿರಲಿಲ್ಲ. ಕಾರಣ ಹೊರಗಿನ ಮಳೆಯ ಆರ್ಭಟ… ಧೋ ಎಂದು ಸುರಿಯುವ ಮಳೆಯಲ್ಲಿ ನಾವು ಕೋಗಿದ್ದು ನಮಗೇ ಕೇಳದ ಪರಿಸ್ಥಿತಿ…
ಇನ್ನು ಮನೆಯ ಮುಂದೆ ಹರಿಯುತಿದ್ದ ಸಣ್ಣದೊಂದು ತೋಡು (ಮಳೆಗಾಲದಲ್ಲಿ ಹರಿಯುವ ಸಣ್ಣ ಕಾಲುವೆ…) ನಮ್ಮ ಹಲವಾರು ವಿಸ್ಮಯಗಳ ಭಂಡಾರ, ಕ್ರಿಯಾಶೀಲತೆಯ ಆಗರ!!! ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಕಪ್ಪೆಗಳ ಜೀವನ ಚಕ್ರವನ್ನು ಅತ್ಯಂತ ಕೂಲಂಕುಷವಾಗಿ ವೀಕ್ಷಿಸುತಿದ್ದೆವು. ಕೊಳೆಯುತ್ತಿರುವ ಎಲೆಗಳ ನಡುವೆ ನೊರೆಯಂತಿರುವ ಮೊಟ್ಟೆ ರಾಶಿ… ಕೆಲವೇ ದಿನಗಳಲ್ಲಿ ಹೊರ ಬರುತ್ತಿದ್ದ ಚಿಕ್ಕದಾದ ಮೀನಿನಂತೆ ಬಲವಿರುವ ಗೊದ ಮೊಟ್ಟೆ ಮರಿ ಕಪ್ಪೆಗಳು.. ಕೆಲವೇ ದಿನಗಳಲ್ಲಿ ಬಾಲ ಕಳಚಿಕೊಂಡು ಕಪ್ಪೆಯ ರೂಪ ಪಡೆಯುವುದು…. ಪಾಠದಲ್ಲಿ ಬರುವ ಕಪ್ಪೆಯ ಜೀವನ ಕ್ರಮದ ಪ್ರತ್ಯಕ್ಷ ಉದಾಹರಣೆಗಳಾಗಿದ್ದವು. ಹಾಗೆ ಕೆಲವೊಮ್ಮೆ ಕಪ್ಪೆಯನ್ನು ಹಿಡಿಯಲು ಬರುತ್ತಿದ್ದ ನೀರು ಹಾವುಗಳು ಭಯವನ್ನು ತರುತಿದ್ದರೂ ನೀರಾಟವನ್ನು ಮಾತ್ರ ನಿಲ್ಲಿಸಿರುತ್ತಿರಲಿಲ್ಲ. …!! ಆ ಸಣ್ಣ ಕಾಲುವೆಯಲ್ಲಿ ದೋಣಿಯಾಟ ಇನ್ನೊಂದು ವಿನೋದ… ಕೆಸುವಿನ ಎಲೆಯ ಮೇಲೆ ಸಣ್ಣ ಕಲ್ಲನ್ನಿಟ್ಟು ನಾವಿಕನನ್ನಾಗಿ ಮಾಡಿ ತೂರಿ ಬಿಡುತಿದ್ದೆವು. ಹಾಗೆ ಬಿಟ್ಟ ನಾವೆ ನೀರಿನ ಹರಿವಿನ ಕಡೆಗೇ ಸಂಚರಿಸಿ ಕೊನೆಯಲ್ಲಿ ಜಲಪಾತದಲ್ಲಿ ಬಿದ್ದು ನಮ್ಮ ಆಟ ಮುಕ್ತಾಯವಾಗುತಿತ್ತು. ಆ ಕಾಲುವೆಗೊಂದು ಅಣೆಕಟ್ಟನ್ನು ಕಟ್ಟುವುದು…ಅದರ ನೀರನ್ನು ಸ್ವಲ್ಪ ಎತ್ತರದ ಜಾಗಕ್ಕೆ ಹರಿಸಿ, ಅಲ್ಲಿ ನಾಟಿಮಾಡುವುದು… ಇತ್ಯಾದಿ ಕ್ರಿಯಾಶೀಲತೆಯ ಆಟಗಳು ಮಳೆ ನಿಂತು ಇನ್ನೊಂದು ಮಳೆ ಬರುವ ಮುಂಚೆ ನಡೆಯುತ್ತಿದ್ದವು.
ಮಳೆಗಾಲದ ಅಡುಗೆಗಳಲ್ಲಿ ಅತೀ ಅಪರೂಪವಾದ ರುಚಿಕರವಾದ “ಹುರುಳಿ ಸಾರು” ಮರೆಯಲಾಗದ ನೆನಪು. ಹುರುಳಿ ಸಾರು ಈವಾಗಲೂ ಮಾಡುತ್ತಿವೆ. ಆದರೆ ಆವಾಗ ೨-೩ ಕಿಲೋ ಹುರುಳಿ ಬೇಯಿಸಿ ರಸವನ್ನು ತೆಗೆಯುತಿದ್ದರಿಂದ ಅದರ ರುಚಿ ಅತೀ ಅದ್ಭುತವಾಗಿತ್ತು. ಜಡಿಮಳೆಯಲ್ಲಿ ದೇಹವನ್ನು ಬೆಚ್ಚಗಿರಿಸಲು ಹುರುಳಿ ಸಾರು ಅವಶ್ಯಕವೂ ಆಗಿತ್ತು. ಬೇಯಿಸಿದ ಹುರುಳಿಯನ್ನು ದನ-ಕೋಣಗಳಿಗೆ ಹಾಕಲಾಗುತಿತ್ತಾದರೂ ವರ್ಷದಲ್ಲಿ ಒಂದೆರಡು ಭಾರಿ ಹುರುಳಿ ಕಾಯಿಯನ್ನು ತೆಂಗಿನ ತುರಿ-ಬೆಲ್ಲ ಹಾಕಿ ಕೊಟ್ಟು ಉಸುಲಿಯನ್ನು ಮಾಡಲಾಗುತಿತ್ತು… ವಾಹ್… ಉಮ್ಮಾ.. ಎಂತಾ ರುಚಿ… ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತದೆ. ಈವಾಗಿನಂತೆ ಮನೆಯಲ್ಲಿ ಚಾಕಲೇಟ್-ಬಿಸ್ಕೆಟ್ ಇಟ್ಟುಕೊಂಡು ನೆನಪಾದಾಗಲೆಲ್ಲ ತಿನ್ನುವ ಕಾಲವಲ್ಲ!!.. ಚಾಕಲೇಟ್-ಬಿಸ್ಕೆಟ್ ಸಿಗುವುದೇ ಅತೀ ಅಪರೂಪ…
ಜುಲೈ ತಿಂಗಳಲ್ಲಿ ಬರುವ ಪ್ರಥಮನ ಏಕಾದಶಿಯೂ ಮರೆಯಲಾಗದ ನೆನಪು. ಮನೆಯ ದೊಡ್ಡವರೆಲ್ಲ ಮಧ್ಯಾಹ್ನ ಮಾತ್ರ ಊಟ ಮಾಡುತಿದ್ದರು. ಬೆಳ್ಳಿಗ್ಗೆ ೧-೨ ಹಲಸಿನ ಹಪ್ಪಳ, ಒಂದು ಲೋಟ ಕಷಾಯವಾದರೆ ರಾತ್ರಿಗೆ ಹೆಸರು ಬೇಳೆ ಪಾಯಸ… ನಾವು ಮಾಮೂಲಿನಂತೆ ಊಟ ಮಾಡುವುದಲ್ಲದೆ ಹಪ್ಪಳ-ಪಾಯಸ ಎಲ್ಲಾ ತಿಂದು “ಸುಬ್ಬಮ್ಮನ ಉಪವಾಸ” ಮಾಡುತ್ತಿದ್ದೆವು. ರಾತ್ರಿ ಅಪ್ಪ ಮತ್ತು ದೊಡ್ಡಪ್ಪ ಸೇರಿ ಪವಮಾನ ಪಾರಾಯಣ ಮಾಡುತಿದ್ದರು. “ಸ್ವಾದಿಷ್ಠಯಾ ಮದಿಷ್ಠಯಾ ಪವಸ್ವ ಸೋಮ ಧಾರಯಾ। ಇಂದ್ರಾಯ ಪಾತವೇ ಸುತಃ।। ……. ” ಮೂರೂ ಜನರ ಒಂದೇ ಧಾಟಿಯಲ್ಲಿ ಮೂಡಿ ಬರುತ್ತಿದ್ದ ಆ ವೇದ ಮಂತ್ರ ನಮ್ಮನ್ನು ರೋಮಾಂಚನಗೊಳಿಸುತಿತ್ತು.
ಮಳೆಗಾಲದ ಕಹಿ ನೆನಪವೊಂದಿದೆ… ಅದು ಕರ್ಕಾಟಕ ಅಮಾವಾಸ್ಯೆಯಂದು ಮಾಡಲಾಗುತ್ತಿದ್ದ ಹಾಲೆ ಮರದ ಕೆತ್ತೆಯ ಕಷಾಯ.. ಕಹಿ-ಕಹಿ ವಿಷದಂತಿರುವ ಕಷಾಯವನ್ನು ಬೆಳ್ಳಿಗ್ಗೆ ಹಲ್ಲುಜ್ಜಿದಾಕ್ಷಣ ಕುಡಿಯಬೇಕಾಗಿತ್ತು….ಕುಡಿದ ಅರ್ಧ ಗಂಟೆಯಷ್ಟು ಹೊತ್ತು ಬಾಯೆಲ್ಲ ಕಹಿಯಾಗಿರುತಿತ್ತು. ಕರ್ಕಾಟಕ ಅಮಾವಾಸ್ಯೆಯಂದು ಹಾಲೆ ಮರದ (Alstonia scholaris) ತೊಗಟೆಯನ್ನು ಬೆಳ್ಳಂಬೆಳ್ಳಿಗ್ಗೆ ತಂದು ಅರೆದು ಮೊಸರು ಹಾಕಿ ಕಷಾಯ ಮಾಡಿ ಕುಡಿಯುವುದು ಕರಾವಳಿ ಕರ್ನಾಟಕದ ಸಂಪ್ರದಾಯ. ಪೂರಾ ಒಂದು ವರ್ಷದ ಎಲ್ಲ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ… ಆಯುರ್ವೇದದಲ್ಲೂ ಹೋಮಿಯೋಪಥಿ ಔಷಧ ಪದ್ಧತಿಯಲ್ಲೂ ಇದರ ಪ್ರಯೋಗವಾಗಿದೆಯಂತೆ…. ಈವಾಗಲೂ ನಮ್ಮ ಮನೆಯಲ್ಲಿ ಹಾಲೆ ಕೆತ್ತೆಯ ಕಷಾಯ ಮಾಡಿ ಕುಡಿಯುತ್ತಾರೆ. ನಾವಿರುವ ಕೈಗಾ ಪರಿಸರದಲ್ಲೂ ಈ ಮರಗಳು ಇದ್ದರೂ ಅದರ ಸರಿಯಾದ ಪರಿಚಯು ಇಲ್ಲದ ಕಾರಣ ನಾವು ಉಪಯೋಗಿಸುತ್ತಿಲ್ಲ.
ಮಳೆಗಾಲದ ನೆನಪುಗಳು ಯಾವಾಗಲೂ ಹಸಿ-ಹಸಿ, ಅಂದರೆ ತಾಜಾ… ಮಳೆಗಾಲದಲ್ಲಿ ಎಷ್ಟು ಒಣಗಸಿದರೂ ಒಣಗದ ಒಳಉಡುಪಿನ ಹಾಗೆ.
Facebook ಕಾಮೆಂಟ್ಸ್