X

ಬಣ್ಣ ಬಣ್ಣದ ಲೋಕ.. ಬಣ್ಣಿಸಲಾಗದ ಬಾಳು..

“ಬಣ್ಣ ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ..” ಈ ಹಾಡು ಹಳೆಯದಾದರೂ ಪ್ರತಿ ಬಾರಿ ಕೇಳುವಾಗಲೂ ಭಾವಗಳು ಉಕ್ಕಿ ಬರುತ್ತದೆ. ಆ ಹಾಡಿನ ಒಳಾರ್ಥ ಬೇರೆ ಇರಬಹುದು ಆದರೆ ಬಣ್ಣಗಳ ಜೊತೆಗಿನ ಸಂಬಂಧವನ್ನು ಹಾಡು ಚೆನ್ನಾಗಿ ವಿವರಿಸುತ್ತದೆ. ಬದುಕು, ಭಾವ ಹಾಗೂ ಬಣ್ಣದ ನಡುವಿನ ಸಂಬಂಧ ಅಂತಹದು.

ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ಕಷ್ಟವೆನಿಸಿದಾಗ ಹಚ್ಚ ಹಸಿರಿನ ಪ್ರಕೃತಿಯ ನಡುವೆ ಪ್ರಶಾಂತತೆಯನ್ನ ಹುಡುಕಿ ನಡೆಯುತ್ತೇವೆ.ಇನ್ನೂ ದುಃಖವೆನಿಸಿದಾಗ ಏಕಾಂಗಿಯಾಗಿ ಪ್ರಕೃತಿಯ ಮಡಿಲಿಗೆ ತೆರಳುತ್ತೇವೆ. ಆ ಹಸಿರು ಅಮ್ಮನ ಮಡಿಲಿನಂತೆ. ಏನೇ ಆಗಿದ್ದರೂ ಮನಸ್ಸು ಮೃದುವಾಗಿ ಮರುಕ ಮಾಯವಾಗಿ ಬಿಡುತ್ತದೆ. ಆ ಹಸಿರು ಬಣ್ಣದಲ್ಲಿ ಸಿಗುವ ಆಪ್ತತೆ ಬೇರೆ ಬಣ್ಣಗಳಲ್ಲಿ ಸಿಗುವುದೇ ಇಲ್ಲ.

ಅಲ್ಲಿಡೀ ಗಾಢ ಮೌನ, ಸುತ್ತಲೂ ಮಬ್ಬುಗತ್ತಲು. ಸುತ್ತಲು ಚೀರುವ ಜೀರುಂಡೆಗಳ ಕಿರುಚಾಟ. ದೂರದಲ್ಲಿ ಊಳಿಡುವ ನರಿಗಳ ಮೇಳ, ಜೊತೆಯಲ್ಲಿ ಒಂದಿಬ್ಬರಿದ್ದರೂ ಮನಸಲ್ಲಿ ಏನೋ ದುಗುಡ, ಸಂಕಟ ಮೂಡಿಸಿಬಿಡುತ್ತದೆ, ಸುತ್ತಲಿನ ಕತ್ತಲು ಕರಾಳ ಭಾವನೆಗಳನ್ನು ಮನಸಲ್ಲಿ ಮೂಡಿಸಿಬಿಡುತ್ತದೆ. ಕತ್ತಲ ಕಪ್ಪು ಬಣ್ಣವನ್ನು ನಾವು ದೂರವೇ ಇಟ್ಟು ಬಿಡುತ್ತೇವೆ. ಅದೇ ಬೆಳಕು ಹರಿದೆಡೆ ಭಯಾನಕವಾಗಿದ್ದ ಜಾಗ ಎಷ್ಟೊಂದು ಸುಂದರವಾಗಿ ಕಾಣಿಸಿಕೊಳ್ಳುತ್ತದೆ?

ಹೀಗೆ ಪ್ರತಿಯೊಂದು ಬಣ್ಣಗಳೂ ನಮ್ಮ ಭಾವನೆಗಳಿಗೆ ಜೊತೆಯಾಗಿಬಿಟ್ಟಿವೆ. ಅಳೆಯಲಾಗದ ಸೂಕ್ಷ ಸಂಬಂಧ ಬಣ್ಣಗಳ ಜೊತೆಗೆ ನಮಗಿದೆ.ನಮ್ಮ ದೇಶದ ಬಾವುಟದಲ್ಲಿರುವ ಮೂರು ಬಣ್ಣಗಳು ಬೇರೆ ಬೇರೆ ಭಾವಗಳನ್ನು ಸೂಚಿಸುತ್ತದೆ. ಅದರಂತೆಯೇ ಪ್ರತಿ ದೇಶದ ಬಾವುಟದ ಬಣ್ಣಕ್ಕೂ ಅದರದ್ದೇ ಆದ ಭಾವಗಳಿವೆ. ಜನಾಂಗೀಯ ದ್ವೇಷಗಳು ಹುಟ್ಟಿಕೊಂಡಿದ್ದು ಕೂಡಾ ಕಪ್ಪು ಬಿಳಿ ಎಂಬ ಬಣ್ಣಗಳ ಆಧಾರದ ಮೇಲೆ.

ಸಂಸ್ಕೃತಿಯೊಂದಿಗೆ ಇದೆ ಬಣ್ಣಗಳ ನಂಟು

ಹಿಂದಿನದು ಎಂದ ಕೂಡಲೇ ಮನಸಲ್ಲಿ ಕಪ್ಪು ಬಿಳುಪಿನ ಚಿತ್ರಣ ಬಂದರೆ ಅದು ಮನಸ್ಸಿನ ತೋರಿಕೆ ಮಾತ್ರ.  ಬಣ್ಣಗಳ ಜೊತೆಗಿನ ಬದುಕು ಹಿಂದಿನಿಂದಲೇ ಜೊತೆಯಾಗಿ ಬಂದಿದೆ.

ಕೆಲವೊಂದು ಬಣ್ಣಗಳು ಶುಭ ಸೂಚಕವೆಂದೂ ಕೆಲವೊಂದು ಬಣ್ಣಗಳು ಅಶುಭ ಸೂಚಕವೆಂದು ಹೇಳುವುದು ಕೇಳಿದ್ದೇವೆ. ಅಷ್ಟೆಲ್ಲಾ ಉಪಕಾರ ಮಾಡುವ ಕಪ್ಪು ಕಾಗೆಯೂ ಕೂಡಾ ಬಣ್ಣದಿಂದಾಗಿಯೇ ದೂಷಿಸಲ್ಪಡುತ್ತದೆ. ನವಗ್ರಹಾರಾಧನೆಯ ಸಂದರ್ಭದಲ್ಲಿ 9 ಬಣ್ಣಗಳು ಮುಖ್ಯವೆನಿಸುತ್ತದೆ. ಮುತ್ತೈದೆಯರ ಹಣೆಯಲ್ಲಿ ಸಿಗುವ ಸಿಂಧೂರ ಶುಭ ಸೂಚಕ. ಬಿಳಿ ಬಣ್ಣ ನೈರ್ಮಲ್ಯ ಅಥವಾ ತಟಸ್ಥ ಭಾವವನ್ನು ಸೂಚಿಸುತ್ತದೆ. ಇನ್ನು ಖಾವಿ ವೈರಾಗ್ಯವನ್ನು ಸೂಚಿಸುವುದರಿಂದಲೇ ಜೀವನ ಮಾರ್ಗದಲ್ಲಿ ವಿರಕ್ತಿಹೊಂದಿದವರು ಆ ಬಣ್ಣದ ಉಪಯೋಗವನ್ನೇ ಮಾಡುತ್ತಾರೆ.

ಬಣ್ಣದ ಬದುಕು

ರಂಗ ಕಲಾವಿದರಿರಬಹುದು, ಸಿನೆಮಾ ರಂಗದ ತಾರೆಯರಿರಬಹುದು, ಅವರದು ಬಣ್ಣದ ಬದುಕು ಎಂದು ಉಲ್ಲೇಖಿಸುವ ಕ್ರಮವಿದೆ. ಅವರ ಬದುಕುಗಳು ಬಣ್ಣದಜೊತೆಗೆ ಬೆರೆತಿರುವುದರಿಂದಲೇ ಈ ರೀತಿಯಾಗಿ ಹೇಳಲಾಗುತ್ತದೆ. ರಂಗಸಜ್ಜಿಕೆಯಲ್ಲಿ ಬಣ್ಣಗಳ ಪಾತ್ರ ಬಹಳಷ್ಟು ಮುಖ್ಯವೆನಿಸುತ್ತದೆ. ಸಿನಿಮಾದಲ್ಲೂ ಕೂಡಾ ನಟರ ಉಡುಗೆ ತೊಡುಗೆಯಿಂದ ಹಿಡಿದು ಹಿಂಭಾಗದ ಗೋಡೆಯ ಮೇಲಿನ ಗಡಿಯಾರದ ಬಣ್ಣವೂ ಮುಖ್ಯವಾಗುತ್ತದೆ. ಹಾರರ್ ಚಿತ್ರಗಳಲ್ಲಿ  ಗಾಢವಾದ ಬಣ್ಣಗಳು ಪ್ರಮುಖ ಪಾತ್ರವಹಿಸಿದರೆ, ಉಳಿದವುಗಳಲ್ಲೂ ಭಾವಗಳಿಗೆ ತಕ್ಕಂತೆ ಬಣ್ಣದ ಉಪಯೋಗ ಬದಲಾಗುತ್ತದೆ.

ಇನ್ನು ಯಕ್ಷಗಾನ ಕಥಕ್ಕಳಿಯಂತಹ ಕಲೆಗಳಲ್ಲಿ ಬಣ್ಣಗಾರಿಕೆ ಅಧ್ಯಯಯನ ನಡೆಸಬಹುದಾದಂತಹ  ಒಂದು ಅಂಗ. ಮುಖದ ಮೇಲಿನ ವರ್ಣಗಳ ಬಳಕೆ ರಂಗದ ಮೇಲೆ ಹೊರಡಿಸುವ ಭಾವದ ಅಭಿವ್ಯಕ್ತಿಯನ್ನು ಮತ್ತಷ್ಟು ಉತ್ತೇಜಿಸಿ ತೋರಿಸಲು ಸಹಾಯ ಮಾಡುತ್ತದೆ.

ಜಾಹೀರಾತು ಮಾಡುತ್ತೆ ಬಣ್ಣಗಳ ಮೋಡಿ

ದಿನನಿತ್ಯ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಬಣ್ಣ ಬಣ್ಣದ ಜಾಹೀರಾತುಗಳಲ್ಲಿ  ಸುಖಾಸುಮ್ಮನೆ ಬಣ್ಣಗಳನ್ನು ಚೆಲ್ಲುವುದಿಲ್ಲ. ಅಳೆದೂ ತೂಗಿ ಆ ಬಣ್ಣಗಳು ಮಾಡಬಹುದಾದಂತಹ ಪರಿಣಾಮಗಳನ್ನು ಲೆಕ್ಕವಿಟ್ಟುಕೊಂಡೇ ತಯಾರಿಸಲಾಗುತ್ತದೆ.ಯಾವ ಚಿತ್ರಗಳಿಗೆ ಯಾವ ಬಣ್ಣವಿರಬೇಕು, ಅದರ ಗಾಢತೆ ಎಷ್ಟಿರಬೇಕು,  ಹಿನ್ನಲೆಯ ಬಣ್ಣಕ್ಕೆ ಸರಿಯಾಗಿ ಅಕ್ಷರಗಳಿಗೆ ಯಾವ ಬಣ್ಣ ನೀಡಿದರೆ ಗ್ರಾಹಕನ ಮನಸೆಳೆಯಬಹುದು ಎಂಬಿತ್ಯಾದಿ ಲೆಕ್ಕಾಚಾರಗಳಿರುತ್ತದೆ. ತಮ್ಮ ತಮ್ಮ ಉತ್ಪನ್ನಗಳಿಗೆ ಯಾವ ಬಣ್ಣ ನೀಡಿದರೆ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತದೆ ಎಂದೂ ಕೂಡಾ ಲೆಕ್ಕಾಚಾರಗಳಿವೆ. ಉದಾಹರಣೆಗೆ ಎಲ್ಲಾ ಬಣ್ಣದ ಕಾರುಗಳು ಎಲ್ಲಾ ಮಾಡೆಲ್ಗಳಲ್ಲೂ ಲಭಿಸುವುದಿಲ್ಲ. ಕೆಲವೊಂದು ಮಾಡೆಲ್ಗಳಲ್ಲಿಪ್ರಾರಂಭದಲ್ಲಿ ಇದ್ದ ಬಣ್ಣದ ಮಾಡೆಲ್ ಕೆಲ ತಿಂಗಳಲ್ಲಿ ಅಲಭ್ಯವಾಗಿದ್ದು ಇದೆ. ಗ್ರಾಹಕನ ಮನಸೆಳೆಯುವಲ್ಲಿ ವಿಫಲವಾದ್ದರಿಂದಲೇ ಹೆಚ್ಚಿನ ಬಾರಿ ಆ ವೈವಿಧ್ಯತೆ ನಿಲ್ಲಿಸಲಾಗಿರುತ್ತದೆ.

ಇನ್ನು ಲಕ್ಸುರಿ ಕಾರ್’ಗಳಲ್ಲಿ ಸಿಗುವ ಬಣ್ಣಗಳಿಗೂ ಮಧ್ಯಮ ವರ್ಗಕ್ಕೆ ಮೀಸಲಿಟ್ಟ ಕಾರ್’ಗಳ ಬಣ್ಣಗಳಿಗೂ ಅಲ್ಪ ವ್ಯತ್ಯಾಸವಿರುತ್ತದೆ. ಉದಾಹರಣೆಗೆ”ಕೇವ್ ಬ್ಲ್ಯಾಕ್”ಬಣ್ಣದ ಕಾರುಗಳು ಎಲ್ಲಾ ಮಾಡೆಲ್ಗಳಲ್ಲೂ ಲಭ್ಯವಿರುವುದಿಲ್ಲ. ಪ್ರಾಡಕ್ಟ್ ಡಿಸೈನ್’ಗೆ, ಕವರ್ ಡಿಸೈನ್, ಪ್ಯಾಕಿಂಗ್ ಹೀಗೆ ಪ್ರತಿ ಹಂತದಲ್ಲೂ ಬಣ್ಣಗಳನ್ನು ಗಮನವಿಟ್ಟು ಆಯ್ಕೆ ಮಾಡಲಾಗುತ್ತದೆ.

ಬಣ್ಣಗಳ ಅಧ್ಯಯನ

ಭಾವನೆಗಳನ್ನ ಬಣ್ಣಗಳು ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದೆ.ಮಾನವನ ನಡವಳಿಕೆಯಲ್ಲಿ ಬಣ್ಣಗಳ ಪಾತ್ರದ ಕುರಿತು ಮನಶಾಸ್ತ್ರದಲ್ಲಿ ಪ್ರತ್ಯೇಕ ಅಧ್ಯಯನವಿದೆ. ಬಣ್ಣಗಳ ಮನಶಾಸ್ತ್ರ ಹೆಚ್ಚಾಗಿ ಬ್ರಾಂಡಿಂಗ್’ನಲ್ಲಿ ಬಳಕೆಯಾಗುತ್ತದೆ. ಜೊತೆಗೆ ಮನೆ, ಕಛೇರಿಗಳ ಒಳಾಂಗಣ ವಿನ್ಯಾಸದ ವೇಳೆಯೂ ಬಳಕೆಯಾಗುತ್ತದೆ. ಮನೆಯೊಳಗೆ ಧನಾತ್ಮಕ  ಪರಿಣಾಮಕ್ಕೆ ಇಂತಹದೇ ಬಣ್ಣಗಳ ಬಳಕೆಯಿಂದ ಸಾಧ್ಯ ಎಂಬುದೂ ಕೂಡಾ ಕಂಡುಕೊಂಡಿದ್ದಾರೆ.

ಬಣ್ಣಗಳನ್ನು ನಾವು ಕಾಣುವುದು ಹೀಗೆ

ಈ ಬಣ್ಣದ ಲೋಕವನ್ನು ಮನಸ್ಸಿಗೆ ತಿಳಿಯಲು ಕೆಲಸ ಮಾಡುವ ಕಣ್ಣಿನ ಒಳಗಿನ ಕೋನ್ ಎಂಬ ಜೀವಕೋಶಗಳಿಗೆ ನಾವು ಧನ್ಯವಾದ ಹೇಳಲೇಬೇಕು. ಸೂರ್ಯನ ಬೆಳಕು ಬಿಳಿಯಾದರೂ ಬೆಳಕು ಒಂದು ವಸ್ತುವಿನ ಮೇಲೆ ಬಿದ್ದಾಗ ವಸ್ತು ತನ್ನ ನೈಜ ಬಣ್ಣಗಳನ್ನ  ಬಿಟ್ಟು ಬೆಳಕಿನಲ್ಲಿರುವ ಎಲ್ಲಾ ಉಳಿದ ಬಣ್ಣಗಳನ್ನು ಹೀರಿಕೊಂಡು ಬಿಡುತ್ತದೆ. ತನ್ನ ಬಣ್ಣವನ್ನು ಮಾತ್ರ ವಸ್ತುವಿನ ಹೊರಮೈ ಪ್ರತಿಫಲಿಸುತ್ತದೆ. ಪ್ರತಿಫಲಿಸಿದ ಬಣ್ಣಗಳನ್ನ ತಿಳಿಯಲು ಕಣ್ಣಿನೊಳಗಿನ ಕೋನ್’ ಜೀವಕೋಶಗಳು ಸಹಾಯಮಾಡುತ್ತದೆ. ಈ ಕೋನ್’ಗಳಲ್ಲಿನ ಏರುಪೇರಿನಿಂದಾಗಿಯೇ ಬಣ್ಣಗಳನ್ನು ಗುರುತಿಸಲಾಗದ ಅಪರೂಪದಸ್ಥಿತಿಯೂ ಉಂಟಾಗುತ್ತದೆ.

ಮನಸ್ಸಿಗೆ ತಕ್ಕಂತೆ ಬದಲಾಗುವ ಬಣ್ಣಗಳ ವೈವಿಧ್ಯತೆ

ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಿಗೆ ಹೆಚ್ಚು ಬಣ್ಣಗಳು ತಿಳಿದಿರುತ್ತವಂತೆ. ಪುರುಷರಲ್ಲಿ ಬಣ್ಣದ ವೈವಿಧ್ಯತೆ 7 ಬಣ್ಣಗಳಿಗೆ ಮುಗಿದರೆ ಮಹಿಳೆಯರ ಮನಸ್ಸಲ್ಲಿ ವೈವಿಧ್ಯಮಯ ಬಣ್ಣಗಳ ಕಲ್ಪನೆಯಿರುತ್ತದಂತೆ.ಶಾಪಿಂಗ್, ಸೆಲೆಕ್ಷನ್ ಸಂದರ್ಭದಲ್ಲಿ  ಬಣ್ಣಗಳ ಕುರಿತು ಮಹಿಳೆಯರೇ ಹೆಚ್ಚು ಚ್ಯೂಸಿ ಆಗಿರುವುದನ್ನು ನೀವು ಗಮನಿಸಿರಬಹುದು.

ಬಣ್ಣಕ್ಕೂ ಗುಣಕ್ಕೂ ಇದೆ ಸಂಬಂಧ

ನಮ್ಮ ಇಷ್ಟದ ಬಣ್ಣಗಳು ನಮ್ಮ ಗುಣವನ್ನು ಪ್ರತಿನಿಧಿಸುತ್ತದಂತೆ.ಅಂತರ್ಮುಖಿಗಳಿಗೆ ಒಂದು ಬಣ್ಣ ಇಷ್ಟವಾದರೆ ಬಹಿರ್ಮುಖಿಗಳಿಗೆ ಇನ್ನೊಂದು ರೀತಿಯ ಬಣ್ಣಗಳು ಇಷ್ಟವಾಗಿರುತ್ತದೆ. ಧನಾತ್ಮಕ ಚಿಂತಕರ ಆಯ್ಕೆಯ ಬಣ್ಣಗಳು ಒಂದು ತೆರನಾದರೆ, ಋಣಾತ್ಮಕ ಚಿಂತನೆಯವರದ್ದು ಇನ್ನೊಂದು ವಿಧ.

ಹೀಗೆ ವಿಧ ವಿಧವಾದ ಬಣ್ಣಗಳು ಬದುಕಿನ ಭಾಗವಾಗಿಯೇ ಇದೆ. ರಂಗು ರಂಗಿನ ನಮ್ಮ ಬದುಕಿನಲ್ಲಿ  ಬಣ್ಣಗಳು ನೀಡುವ ಪಾಲು ಮಾತ್ರ ಮುಖ್ಯವಾದದ್ದು.

-ಶಶಾಂಕ್ ಬಜೆ

shashankbaje@yahoo.in

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post