‘ಡೈನಾಸರ್’ಗೂ ಕ್ಯಾನ್ಸರ್ ಆಗಿತ್ತಂತೆ..’ ಅನ್ನೋ ವಾಕ್ಯ ಕೇಳಿದಾಗ ನಿಜಕ್ಕೂ ಆಶ್ಚರ್ಯ ಆಗಿತ್ತು. ಅಂದರೆ ಕ್ಯಾನ್ಸರ್ ಅನ್ನೋದು ಬಹಳ ಹಿಂದೆಯೇ ಇದ್ದಿದ್ದು ಅಂತಾಯಿತು. ಡೈನಾಸರ್ ಅಂತಹ ಡೈನಾಸರ್’ನ್ನೇ ಕ್ಯಾನ್ಸರ್ ನಡುಗಿಸುವಾಗ ನಮ್ಮಂತವರೆಲ್ಲ ಯಾವ ಲೆಕ್ಕ ಎಂದು ಅನಿಸಿದ್ದಂತೂ ನಿಜ. ಹಾಗಂತ ಅದರಲ್ಲಿ ವಿಶೇಷ ಏನೂ ಇಲ್ಲ. ಡೈನಾಸರ್ ಕೂಡ ಜೀವಕೋಶಗಳಿಂದಲೇ ತಾನೇ ಆಗಿದ್ದು.
ಈಗ ಎರಡು ದಿನಗಳ ಹಿಂದೆಯಷ್ಟೇ ಹೊಸ ಸುದ್ದಿಯೊಂದು ಹೊರ ಬಂದಿದೆ. ಅದೇನೆಂದರೆ ಕ್ಯಾನ್ಸರ್ ಮಾಡರ್ನ್ ಖಾಯಿಲೆ ಅಲ್ಲ ಅದು ಬಹಳ ಹಳೆಯ ಖಾಯಿಲೆ ಅಂತ. ಎಷ್ಟು ಹಳೆಯದು ಅಂದರೆ ಮಿಲಿಯನ್ ವರ್ಷಗಳಷ್ಟು ಹಳೆಯದು.!! ಸೌತ್ ಆಫ್ರಿಕಾದ ವಿಟ್’ವಾಟರ್ಸ್ಯಾಂಡ್’ ವಿಶ್ವವಿದ್ಯಾಲಯದ ಕೆಲವು ವಿಜ್ಞಾನಿಗಳು ಸುಮಾರು ೧.೭ ಮಿಲಿಯನ್ ವರ್ಷಗಳಷ್ಟು ಹಳೆಯ ಪಳೆಯುಳಿಕೆಯಲ್ಲಿ ಕ್ಯಾನ್ಸರ್ ಇರುವುದನ್ನು ಹೇಳಿದ್ದಾರೆ. ಕಾಲಿನ ಮೂಳೆ ಹಾಗೂ ಬೆನ್ನು ಹುರಿಯಲ್ಲಿ ಕ್ಯಾನ್ಸರ್ ಆಗಿದ್ದಕ್ಕೆ ಸಾಕ್ಷ್ಯ ಇದೆ ಎಂದಿದ್ದಾರೆ. “ನಾವು ಆ ಮೂಳೆಯನ್ನ ಇತ್ತೀಚಿನ (ಮಾಡರ್ನ್ ಹ್ಯೂಮನ್) ಆಸ್ಟಿಯೋ ಸರ್ಕೋಮ ಸ್ಪೆಸಿಮನ್’ನೊಂದಿಗೆ ಪರೀಕ್ಷಿಸಿ ನೋಡಿದ್ದು ಅವರೆಡರಲ್ಲೂ ಸಾಮ್ಯತೆ ಇದೆ” ಎಂದು ವಿಶ್ವವಿದ್ಯಾಲಯದ ಎಡ್ವರ್ಡ್ ಜಾನ್ ಓಡ್ಸ್ ಹೇಳಿದ್ದಾರೆ. ವಿಜ್ಞಾನಿಗಳಿಗೆ ಈಗ ಕಾಡುತ್ತಿರುವ ತಲೆ ನೋವು ಏನೆಂದರೆ, ‘ಮಿಲಿಯನ್ ವರ್ಷಗಳಷ್ಟು ಹಿಂದೆ ಮನುಷ್ಯನಿಗೆ (ಪ್ರಾಚೀನ ಮನುಷ್ಯ ಅನ್ನಬಹುದೇನೋ) ಕ್ಯಾನ್ಸರ್ ಉಂಟಾಗುತ್ತದೆ. ಕಾಲ ಬದಲಾಗುತ್ತದೆ, ಪರಿಸರ ಬದಲಾಗುತ್ತದೆ, ಮನುಷ್ಯ ಬದಲಾಗುತ್ತಾನೆ ಆದರೆ ಯಾಕೆ ಕ್ಯಾನ್ಸರ್ ಯಾಕೆ ಬದಲಾಗಲಿಲ್ಲ ಎನ್ನುವುದು..?!’ ಇದು ಖಂಡಿತವಾಗಿಯೂ ಗಂಭೀರವಾದ ಪ್ರಶ್ನೆಯೇ..!!
ಕ್ಯಾನ್ಸರ್ ಮನುಷ್ಯನಲ್ಲಿ ಮಾತ್ರ ಅಲ್ಲ ಪ್ರಾಣಿಗಳಲ್ಲೂ ಕೂಡ ಹಿಂದೆಯೇ ಇತ್ತು ಎನ್ನುತ್ತಾರೆ ಓಡ್ಸ್ ಮತ್ತು ರಾಂಡಾಲ್ಪ್ ಕ್ವಿನಿ. ಡೈನಸರ್’ಗಳಲ್ಲೂ ಕ್ಯಾನ್ಸರ್ ಇದ್ದಿದ್ದಕ್ಕೆ ಸಾಕ್ಷ್ಯಗಳಿವೆ ಅಲ್ಲದೇ ೩೦೦ ಮಿಲಿಯನ್ ವರ್ಷಗಳಷ್ಟು ಹಿಂದಿನ ಮೀನಿನ ಪಳೆಯುಳಿಕೆಯಲ್ಲೂ ಕ್ಯಾನ್ಸರ್ ಇದ್ದಿದ್ದರ ಬಗ್ಗೆ ಪತ್ತೆಯಾಗಿದೆ ಎನ್ನುತ್ತಾರೆ ಈ ವಿಜ್ಞಾನಿಗಳು.
ಮೂರು-ನಾಲ್ಕು ವರ್ಷಗಳ ಹಿಂದೆ ಕೆಲ ವಿಜ್ಞಾನಿಗಳು “ಕ್ಯಾನ್ಸರ್ ಈಸ್ ಪ್ಯೂರ್ಲಿ ಮ್ಯಾನ್ ಮೇಡ್” ಎಂದಿದ್ದರು. ಕೆಲವು ವಿಜ್ಞಾನಿಗಳು ನೂರಾರು ಈಜಿಪ್ಟಿಯನ್ ಮಮ್ಮಿಗಳನ್ನು ಪರೀಕ್ಷಿಸಿದ ನಂತರ ಕೇವಲ ಒಂದು ಮಮ್ಮಿಯಲ್ಲಿ ಮಾತ್ರ ಕ್ಯಾನ್ಸರ್ ಇದ್ದಿತ್ತು ಎಂಬುದನ್ನು ಪತ್ತೆ ಮಾಡಿದ್ದರು. ಅವರು ಹೇಳುವ ಪ್ರಕಾರ ಇದು ಪ್ರಾಕೃತಿಕವಾಗಿ ಅಥವಾ ಸಹಜವಾಗಿ ಬರುವಂಥದ್ದಲ್ಲ. ಕ್ಯಾನ್ಸರ್ ಎಂಬ ಖಾಯಿಲೆಗೆ ಮನುಷ್ಯನೇ ಕಾರಣ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿ, ವಾತಾವರಣ, ಮಲಿನಗೊಂಡಿರುವ ಪರಿಸರ ಇವೆ ಎಲ್ಲ ಕಾರಣ ಎನ್ನುತ್ತಾರೆ. ಆದರೆ ಇನ್ನು ಕೆಲವರು ಈಜಿಪ್ಟ್’ನ ಜನ ದೀರ್ಘಕಾಲ ಬದುಕಿದವರಲ್ಲ,ಅವರ ಅಯುಷ್ಯ ಕಮ್ಮಿ ಇತ್ತು. ಹಾಗಾಗಿ ಕ್ಯಾನ್ಸರ್’ನ ಪ್ರಮಾಣ ಸಾಕಷ್ಟು ಕಡಿಮೆ ಇತ್ತು ಹೊರತೂ ಅಲ್ಲಿ ಕ್ಯಾನ್ಸರ್ ಇರಲೇ ಇಲ್ಲ ಎನ್ನುವಂತೆಯೂ ಇಲ್ಲ ಎನ್ನುತ್ತಾರೆ. ಅದಕ್ಕೆ ಪೂರಕವೆಂಬಂತೆ ಅಲ್ಲಿನ ಮಮ್ಮಿಯಲ್ಲಿ ಕ್ಯಾನ್ಸರ್ ಕಂಡು ಬಂದಿದೆಯಲ್ಲ..! ಇಂದಿನ ಜೀವನ ಶೈಲಿ ಕ್ಯಾನ್ಸರ್ ತುತ್ತಾಗುತ್ತಿರುವ ಜನರ ಸಂಖ್ಯೆಯನ್ನ ಹೆಚ್ಚಿಸಿರಬಹುದು. ಆದರೆ ಜೀವನ ಶೈಲಿಯೇ ಕ್ಯಾನ್ಸರ್’ಗೆ ಕಾರಣ ಎಂದು ಹೇಳುವಂತಿಲ್ಲ.
ರಾಂಡಾಲ್ಫ್ ಮತ್ತು ಕ್ವಿನಿ ಕೂಡ ಅದನ್ನೇ ಹೇಳುತ್ತಾರೆ. ಈಗಿರುವ ಕ್ಯಾನ್ಸರ್ ಸಂಪೂರ್ಣ ಹೊಸತು, ಅಲ್ಲದೇ ಈಗಿನ ಜೀವನ ಶೈಲಿ, ಆಲ್ಕೋಹಾಲ್, ಸ್ಮೋಕಿಂಗ್ ಇವುಗಳಿಗೆ ನೇರ ಸಂಬಂಧ ಇದೆ. ಪ್ರಾಚೀನ ಮೂಳೆ, ಇವರುಗಳಿಗೆ ಸಿಕ್ಕಿದ ಪಳೆಯುಳಿಕೆಯಲ್ಲಿ ಕಂಡು ಬಂದ ಟ್ಯೂಮರ್, ಪ್ರೈಮರಿ ಆಸ್ಟಿಯೋಜೆನಿಕ್ ಕ್ಯಾನ್ಸರ್. ಅಂದರೆ ಅವುಗಳಿಗೆ ಕಾರಣ ಪರಿಸರದ ಅಥವಾ ಇನ್ಯಾವುದೇ ಹೊರಗಿನ ಕಾರಣಗಳು ಆಗಿರುವುದಿಲ್ಲ. ಆ ತರಹದ ಕ್ಯಾನ್ಸರ್ ಈಗಲೂ ಇದೆ. ಅಂದರೆ ಇದರ ಅರ್ಥ ಕ್ಯಾನ್ಸರ್’ಗೆ ಕಾರಣ ಜೀವನ ಶೈಲಿ, ಪರಿಸರ ಇಷ್ಟೇ ಅಲ್ಲದೇ ಇನ್ನೂ ಏನೋ ಇದೆ ಎಂಬುದು ಈಗ ವಿಜ್ಞಾನಿಗಳ ಅಂಬೋಣ.
ಕ್ಯಾನ್ಸರ್ ಎಷ್ಟು ಹಳೆಯದು ಅನ್ನುವುದಕ್ಕೆ ಜರ್ಮನಿಯ ಕೇಲ್ ವಿಶ್ವವಿದ್ಯಾನಿಲಯದ ಥಾಮಸ್ ಬಾಶ್ ಇನ್ನೂ ಸುಲಭದ ಉತ್ತರ ಕೊಟ್ಟು ಬಿಡುತ್ತಾರೆ. “ ಭೂಮಿಯ ಮೇಲೆ ಬಹು ಕೋಶೀಯ ಜೀವಿಗಳ ಜೀವನದ ಆರಂಭದಷ್ಟೇ ಹಳೆಯದು ಕ್ಯಾನ್ಸರ್” ಎನ್ನುತ್ತಾರೆ. ಅದರ ಜೊತೆಗೆ, “ಬಹುಶಃ ಇದನ್ನು ಸಂಪೂರ್ಣವಾಗಿ ಕಿತ್ತೊಗೆಯಲೂ ಸಾಧ್ಯವಿಲ್ಲ” ಎಂಬ ವಾಕ್ಯವನ್ನೂ ಸೇರಿಸುತ್ತಾರೆ. ನಮ್ಮಗಳ ಲಾಜಿಕ್ ಬಹಳ ಸರಳ. ಚಂದ್ರನಿಗೆ ಮನುಷ್ಯನನ್ನ ಕಳಿಸಿ ಕೊಡಲಾಗುತ್ತೆ ಅಂದರೆ ಕ್ಯಾನ್ಸರ್’ನ್ನು ಕೂಡ ಇನ್ನಿಲ್ಲದಂತೆ ತೆಗೆದು ಹಾಕಬಹುದು ಎಂದು. ಆದರೆ ನಿಜಸ್ಥಿತಿಯಲ್ಲಿ ಹಾಗಿಲ್ಲ. ಕ್ಯಾನ್ಸರ್’ಗೆ ಉತ್ತಮ ಔಷಧಿಗಳನ್ನ ಕಂಡು ಹಿಡಿಯಬಹುದು ಅದರಲ್ಲಿ ಎರಡು ಮಾತಿಲ್ಲ ಆದರೆ ಪೊಲಿಯೋ ರೀತಿ ಕ್ಯಾನ್ಸರ್’ನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಸಾಧ್ಯವಿಲ್ಲ ಎನ್ನುವುದು ಬಾಶ್ ಅವರ ಅಭಿಪ್ರಾಯ.
“ಜೀವಕೋಶ ರಾಂಗ್ ಡಿಸಿಶನ್ ತೆಗೆದುಕೊಳ್ಳುತ್ತದೆ” ಎನ್ನುತ್ತಾರೆ ಬಾಶ್. ಮನುಷ್ಯನಂತಹ ಬುದ್ದಿ ಇರುವ ಜೀವಿಯೇ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾನೆ, ಇನ್ನು ಪಾಪ ಆ ಚಿಕ್ಕ ಜೀವಕೋಶಕ್ಕೆ ಏನು ಹೇಳೋದು ಬಿಡಿ.!!! ಜೀವಕೋಶದಲ್ಲಿ ಮ್ಯುಟೇಷನ್ ಉಂಟಾಗಲು ಅದರ ಸುತ್ತಲಿನ ವಿಷಪೂರಿತ ಪರಿಸರ ಕಾರಣ ಎನ್ನುತ್ತಾರೆ. ಅಂದರೆ ದೇಹದಲ್ಲಿ ಟಾಕ್ಸಿನ್’ಗಳು ಹೆಚ್ಚಾದಾಗ, ಅದಕ್ಕೆ ತಕ್ಕನಾಗಿ ಬದಲಾಗುವ ನಿಟ್ಟಿನಲ್ಲಿ ಜೀವಕೋಶದಲ್ಲಿ ಮ್ಯುಟೇಶನ್ ಆರಂಭಗೊಳ್ಳುತ್ತದೆ. ನಂತರ ನಿಯಂತ್ರಣವಿಲ್ಲದಂತೆ ವಿಭಜನೆಗೊಳ್ಳುತ್ತಾ ಕ್ಯಾನ್ಸರ್ ಸೆಲ್ ಆಗುತ್ತದೆ ಎಂತಲೂ ಹೇಳುತ್ತಾರೆ. ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಎನ್ನುವುದಕ್ಕೆ ಹಿಪೊಕ್ರೆಟಸ್’ನಿಂದ ಹಿಡಿದು ಸಾಕಷ್ಟು ಜನ ತಮ್ಮದೇ ಆದ ಥಿಯರಿಗಳನ್ನು ಮಂಡಿಸಿದ್ದಾರೆ. ಹೊಸ ಹೊಸ ಆವಿಷ್ಕಾರವಾದಂತೆ ಹೊಸ ಹೊಸ ಕಾರಣಗಳೂ ಸಿಕ್ಕಿದವು. ಆದರೆ ಇದುವೇ ಕಾರಣ ಎಂದು ಸರಿಯಾಗಿ ಹೇಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಇನ್ನೂ ಏನೋ ಇದೆ ಎಂಬುದಷ್ಟೇ ಹೇಳಬಹುದಾಗಿದೆ!
“ನಮಗೀಗ ಕ್ಯಾನ್ಸರ್ ಎನ್ನುವುದು ಅತ್ಯಂತ ಪ್ರಾಚೀನವಾದದ್ದು ಅನ್ನುವುದು ಗೊತ್ತಾಗಿದೆ. ಹಾಗೆಯೇ ಹೇಗೆ ಒಂದು ಜೀವಕೋಶ ಕ್ಯಾನ್ಸರ್ ಸೆಲ್ ಆಗುತ್ತದೆ ಎಂಬುದನ್ನೂ ಅರಿತಿದ್ದೇವೆ, ಈಗ ಇವುಗಳನ್ನ ಬಳಸಿ, ಕ್ಯಾನ್ಸರ್ ಹೇಗೆ ಪ್ರಾಚೀನ ಕಾಲದಿಂದ ಈಗಿನ ಅಧುನಿಕ ಯುಗಕ್ಕೆ ವಿಕಸಿತಗೊಂಡಿದೆ ಎಂದುದನ್ನ ಕಂಡು ಹಿಡಿಯಬೇಕಿದೆ. ಅದಕ್ಕಾಗಿ ಕ್ಯಾನ್ಸರ್’ನ ಇತಿಹಾಸ ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ” ಎನ್ನುತ್ತಾರೆ ಎಡ್ವರ್ಡ್ ಜಾನ್ ಓಡ್ಸ್. ಥಾಮಸ್ ಬಾಶ್ ಕೂಡ ಅದನ್ನೇ ಹೇಳಿದ್ದಾರೆ. “ಶತ್ರುವಿನ ಮೂಲ ಗೊತ್ತಿದ್ದರೆ ಮಾತ್ರ, ಅವರ ಮೇಲೆ ಜಯ ಗಳಿಸಲು ಸಾಧ್ಯವಾಗುವುದು. ಹಾಗಾಗಿ ಕ್ಯಾನ್ಸರ್’ನ ಮೂಲ ಹುಡುಕಬೇಕು” ಎಂದಿದ್ದಾರೆ. ಅದೇನೆ ಇರಲಿ, ಸದ್ಯದ ಮಟ್ಟಿಗೆ, ಈಗ ಸಿಕ್ಕಿರುವ ಪಳೆಯುಳಿಕೆಗಳು ಹಾಗೂ ಮಾಹಿತಿಗಳು ಕ್ಯಾನ್ಸರ್ ಕುರಿತಾಗಿನ ಸಂಶೋಧನೆಗಳಿಗೆ ಸಹಕಾರಿಯಾಗಲಿ ಅನ್ನೋದೇ ನಮ್ಮ ಆಶಯ!
Facebook ಕಾಮೆಂಟ್ಸ್