ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯
___________________________________
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ ? ಮಂಕುತಿಮ್ಮ ||
ಈ ಪದ್ಯವನ್ನು ಓದಿದಾಗೆಲ್ಲ ಮತ್ತೆ ಮತ್ತೆ ಗಹನದಿಂದ ಲೌಕಿಕ ಸಂವಹನದೆಡೆಗಿನ ಛಾಯೆ ಎದ್ದು ನಿಲ್ಲುತ್ತದೆ. ಅಲೌಕಿಕ ಚಿಂತನೆಯ ಉಚ್ಛ ಸ್ತರದಿಂದ ಐಹಿಕ ಜೀವನದ ನಶ್ವರತೆಯ ಸೆರಗಿಗೆ ನೇರ ಕೊಂಡಿ ಬಿಗಿಯುವ ಈ ಶೈಲಿ ಅನನ್ಯವೆಂದೆ ಹೇಳಬಹುದು. ನಮ್ಮ ಧಾರ್ಮಿಕ ಪ್ರೇರೇಪಿತ ತತ್ವ, ಸಿದ್ದಾಂತಗಳಲ್ಲಿ ನಂಬಿಕೆಯಿರುವವರಿಗೆ ಸೃಷ್ಟಿಕರ್ತ ಬ್ರಹ್ಮ ಮಣ್ಣಿನಿಂದ ಈ ಮಾನವ ಪ್ರತಿಮೆಗಳನ್ನು ಮಾಡಿ, ಜೀವ ತುಂಬಿ ಈ ಜಗತ್ತಿಗೆ ಬಿಡುತ್ತಾನೆಂಬ ಕಲ್ಪನೆ ಚಿರಪರಿಚಿತ. ಸಾಮಾನ್ಯ ಜನಪದರಲ್ಲಂತು ಅದು ಕಲ್ಪನೆ, ಕಥೆಗು ಮೀರಿದ ಪ್ರಶ್ನಾತೀತ ನಂಬಿಕೆಯ ಸ್ತರದ ವಸ್ತು. ಇಲ್ಲಿ ಮಣ್ಣಿನ ಹೆಂಟೆಯೆನ್ನುವುದು ಅದೇ ಕಲ್ಪನೆಯ ಸಾಕಾರ ರೂಪ.
ಅದು ಬ್ರಹ್ಮನ ಕೃತ್ಯವೊ, ವೈಜ್ಞಾನಿಕ ಪ್ರಕ್ರಿಯೆಯೊ ಎನ್ನುವ ಜಿಜ್ಞಾಸೆಯನ್ನೆಲ್ಲ ಬದಿಗಿರಿಸಿ ನೋಡಿದರೆ, ಪ್ರತಿಯೊಂದು ಜೀವಿ ಅಥವ ವ್ಯಕ್ತಿಯ (ಆಳು) ಅಸ್ತಿತ್ವವನ್ನು ನಿರೂಪಿಸುವ ಸತ್ವವೆಂದರೆ ಅದರ ಉಸಿರಾಟದ ಪ್ರಕ್ರಿಯೆ. ಅದೇ ಜೀವ ಜಗಕ್ಕು , ನಿರ್ಜೀವ ಜಗಕ್ಕೂ ನಡುವೆ ಇರುವ ವ್ಯತ್ಯಾಸ. ಉಸಿರಾಟ ನಿಂತರೆ ಗಾಳಿಯಿಲ್ಲದ ಜೀವ ಹೊತ್ತಿದ್ದ ದೇಹ ಆ ನಿರ್ಜೀವ ವಸ್ತುವಿಗೆ ಸಮ, ಬರಿಯ ಮಣ್ಣು ಹೆಂಟೆಯಿದ್ದ ಹಾಗೆ. ಹೀಗಾಗಿ ಬರಿಯ ಮಣ್ಣಿನ ಹೆಂಟೆಯಂತಹ ದೇಹದೊಳಕ್ಕೆ ಗಾಳಿ (ಜೀವಾಮ್ಲ, ಪ್ರಾಣವಾಯು) ಹೊಕ್ಕು ಮನೆ ಮಾಡಿಕೊಂಡರಷ್ಟೆ ಅದು ಜೀವವೆನಿಸಿಕೊಳ್ಳುವುದು. ಅದರ ಸೂಚನೆಯಾಗಿಯೆ ತನ್ನ ಹೊರಳಾಟದ ರೂಪದಲ್ಲಿ ಒಳಗು, ಹೊರಗೆಲ್ಲ ಚಲಿಸುತ್ತ ಜೀವಂತವಾಗಿಡುತ್ತದೆ – ಇಡೀ ಮಣ್ಣಿನ ಹೆಂಟೆಯನ್ನು.
ಹಾಗೆಂದು, ಬರಿಯ ಗಾಳಿ ಹೊರಳಾಡಿಬಿಟ್ಟಿತೆಂದು ಅದನ್ನು ಜೈವಿಕ ಅಸ್ತಿತ್ವದ ಸಾರ್ಥಕತೆಯೆಂದು ಹೇಳಿಬಿಡಲಾಗುವುದೆ? ಆಗದು. ಬರಿಯ ಗಾಳಿ ತುಂಬಿದ ಮಾತ್ರಕ್ಕೆ ಮಾನವ ಜನ್ಮಕ್ಕೆ ಸಂಪೂರ್ಣ, ಪರಿಪೂರ್ಣ ಸ್ಥಿತಿ ಬಂದಂತಾಗಲಿಲ್ಲ. ಜೀವನದ ಸಾರ್ಥಕತೆ ಅಡಗಿರುವುದು ಬರಿಯ ಗಾಳಿ ತುಂಬಿದ ಭೌತಿಕ ಅಸ್ತಿತ್ವ ಮಾತ್ರದಲ್ಲಲ್ಲ. ಅದಕ್ಕೊಂದು ಬೇರೆಯದೆ ಆದ ಘನ ಉದ್ದೇಶವಿದೆ. ಯಾವುದೋ ಪುರುಷಾರ್ಥದ ಬೆನ್ನು ಹತ್ತಿ ಹೋಗಬೇಕಾದ ಕರ್ತವ್ಯ, ಬಂಧನ, ಅನಿವಾರ್ಯತೆಗಳಿವೆ. ಅದಾವುದೂ ಇರದ, ಮೋಹ-ಲಾಲಸೆಗಳಿಂದ ಗಾಳಿ ಮಾತ್ರ ತುಂಬಿದ ಆಳಂತೆ ಬದುಕಿದರೆ ಅದು ಮಣ್ಣು ಹೆಂಟೆಗೆ ಸಮವೆ ಹೊರತು, ನಿಜವಾದ ಅರ್ಥದಲ್ಲಿ ಆಳೆಂದು ಹೇಳಲಾಗುವುದಿಲ್ಲ. ಇದ್ದೂ ಇರದ ಅಸ್ತಿತ್ವದ ಸಮನಾಗಿಬಿಡುತ್ತದೆಯೆನ್ನುವ ಅರ್ಥ ಎರಡನೆ ಸಾಲಲ್ಲಿ ಹೊರಡುತ್ತದೆ.
ಗಾಳಿ ತುಂಬಿದ ಮಣ್ಣುಹೆಂಟೆ ತನ್ನ ಪುರುಷಾರ್ಥವನ್ನರಿತು ಸರಿಯಾದ ‘ಆಳಿನ’ ಸ್ವರೂಪವನ್ನು ಅವತರಿಸಿಕೊಳ್ಳದಿದ್ದರೆ ಅದು ಪುಕ್ಕಲುತನ, ಹೇಡಿತನದ ಸಂಕೇತವೂ ಆಗುತ್ತದೆ, ಬರಿಯ ಮುಟ್ಟಿದರೆ ಪುಡಿಯಾಗುವ ಹೆಂಟೆಯ ಬದುಕಿನಂತಾಗುತ್ತದೆ. ಮುಂಬರುವ ಕಷ್ಟಕಾರ್ಪಣ್ಯಗಳನ್ನೆಲ್ಲ ಎದುರಿಸುವ ಧೈರ್ಯ, ಸ್ಥೈರ್ಯವಿಲ್ಲದೆ ಸೋತು ಸೊರಗುವ ಅಸಹಾಯಕತೆ, ಜವಾಬ್ದಾರಿಯಿಂದ ಓಡಿಹೋಗುವ ಸೋಗಲಾಡಿತನ ಬದುಕನ್ನು ನಿಯಂತ್ರಿಸತೊಡಗುತ್ತದೆ. ಅಂತಹ ಬದುಕು ಈ ಜೀವನದ ನಿಜವಾದ ಉದ್ದೇಶವಲ್ಲ. ಹೀಗೆ ಮೊದಲೆರಡು ಸಾಲಿನಲ್ಲಿ ಗಹನ ಸ್ತರದ ಜೀವ-ಜೀವಾತ್ಮಗಳ ಜತೆಗಿನ ಜೀವಾನಿಲದ ಅನೋನ್ಯತೆಯನ್ನು ತೆರೆದಿಡುತ್ತದೆ; ಜತೆಜತೆಗೆ ಅದಕ್ಕೆ ಆರೋಪಿಸಲ್ಪಡುವ, ಬರಿಯ ಲೌಕಿಕಕ್ಕೆ ಮೀರಿದ, ಯಾವುದೊ ಗುರುತರ ಹೊಣೆಗಾರಿಕೆಯನ್ನು ತೋರಿಸುತ್ತದೆ.
ವ್ಯಕ್ತಿ, ವ್ಯಕ್ತಿತ್ವದ ಸಾರ್ಥಕತೆಯತ್ತ ಸೆಳೆಯುವ ಪ್ರಯತ್ನ ಮಾಡುವ ಮೊದಲೆರಡು ಸಾಲುಗಳಿಗಿಂತ ವಿಭಿನ್ನ ಸ್ತರದ ಅನುಭವವಾಗುವುದು ಕೊನೆಯೆರಡು ಸಾಲಿನಲ್ಲಿ. ‘ಗಾಳಿ ತುಂಬಿದ ಆಳಾಗಿ’ ಸೂಕ್ತ ಸಾರ್ಥಕ ಜೀವನ ನಡೆಸಬೇಕು ಅಂತೇನೊ ಹೇಳಿದ್ದಾಯ್ತು. ಆದರೆ ಅದೇನು ಸುಲಭದ ಕಾರ್ಯವೆ ? ಹೂವೆತ್ತಿದಂತೆ ನಡೆದುಬಿಡುವ ಕೆಲಸವೆ? ಆ ಕುರಿತ ವಿಶ್ಲೇಷಣೆ ಮುಂದಿನ ಸಾಲುಗಳ ಸಾರ. ಬದುಕೆನ್ನುವುದು ಹೂವಿನ ಮಂಚವಲ್ಲ. ನಡೆಯುವ ಹಾದಿಯಲ್ಲಿ ನೂರೆಂಟು ಅಡ್ಡಿ, ಆತಂಕಗಳು, ತಂಟೆ, ತಕರಾರುಗಳು ಕಾಡುತ್ತವೆ. ಒಳ ತುಂಬಿದ ಗಾಳಿಯನ್ನೆ ಕಂಗೆಡಿಸುವ ರೀತಿಯ ಧೂಳಿನ ಸುಳಿಗಳು ಎದುರಾಗುತ್ತವೆ. ನೀರಿನಲ್ಲಿ ತನ್ನನ್ನೆ ಸುತ್ತುತ್ತ ಸಿಕ್ಕಿದ್ದನ್ನೆಲ್ಲ ಕಬಳಿಸಿ ಸುರುಳಿ ಸುತ್ತಿಸಿ ಎತ್ತೆಸೆಯುವ ಸುಳಿಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸಿ ಬದುಕುವ, ಮುನ್ನುಗ್ಗುವ ಧೈರ್ಯ, ಅನುಭವ, ಛಾತಿ, ಪಕ್ವತೆ – ಎಲ್ಲವೂ ಇರಬೇಕು. ಆದರೆ ಈ ಪರಿಪಕ್ವತೆಯೆನ್ನುವುದು ಮಣ್ಣುಹೆಂಟೆಗೆ ಹುಟ್ಟಿನಿಂದ ಬಂದ ಸರಕಲ್ಲವಲ್ಲ ?
ಅದನ್ನು ಹಂತಹಂತವಾಗಿ ಕಲಿಸಿಕೊಡುವುದೆ ಜೀವನಾನುಭವ. ಅದಿರದ ಜೀವಿಯ ತನುಮನಗಳು ಮರದ ಹಾಗೆ. ಹೊರಗಿನ ತೊಗಟೆ ಒಣಗಿ ಪಕ್ವವಿದ್ದಂತೆ ಕಂಡರೂ, ಆ ಕವಚದಡಿಯಲ್ಲಿ ಒಳಗೆಲ್ಲ ಹಸಿಹಸಿ. ಹಸಿ ಮರಕ್ಕೆ ಬೆಂಕಿ ಹಚ್ಚಿದರೆ ಒಣಪುಳ್ಳೆಯ ಹಾಗೆ ಚಟಪಟನೆ ಉರಿಯುವುದು ಸಾಧ್ಯವೆ? ಆ ಅಪಕ್ವತೆಯ ‘ಹಸಿತನ’ ಬೆಂಕಿಯಾಗುರಿಯಬೇಕಾದರೆ ನೋವಿನ ಅನುಭವ ಅನುಭವಿಸಲೇಬೇಕು – ಹೊಗೆಯಾಗುವ ರೂಪದಲ್ಲಿ. ಆ ಹೊಗೆ ಸ್ವಯಂ ತನ್ನನ್ನು ಕಾಡುವಷ್ಟೆ ಸಹಜವಾಗಿ ಇತರರನ್ನು ಕಾಡುತ್ತದೆನ್ನುವುದು ಮತ್ತೊಂದು ವಿಪರ್ಯಾಸ. ಆ ಪ್ರಕ್ರಿಯೆಯಲ್ಲೆ ನೋವಿನ ಮೂಲಕ ಪಕ್ವತೆಯಾಗರಳುವ ರೂಪಾಂತರ ಸಹ. ಇಡಿ ಬದುಕಿನ ಪೂರ್ತಿ ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ – ಸುಖದುಃಖಗಳೆಂಬ ನಿರಂತರ ತಾಡನಗಳೊಡನೆ ಸೆಣೆಸುತ್ತ. ನೈಜ ಸ್ಥಿತಿಯಿದಾಗಿರುವಾಗ ವಿಷ(ಕ್ಷ್ವೇಳ)ವಾದರೇನು , ಅಮೃತವಾದರೇನು? ಸಿಹಿಯಾದರೇನು, ಕಹಿಯಾದರೇನು? – ಎಂದು ಎಲ್ಲವನ್ನು ಒಂದೆ ರೀತಿಯಲ್ಲಿ ಸ್ವೀಕರಿಸುತ್ತ, ಪ್ರತಿಯೊಂದನ್ನು ಪರಿಪಕ್ವತೆಯ ಹಾದಿಗೊದಗಿದ ಪೂರಕ ಸರಕೆಂದು ಅನುಭಾವಿಸುತ್ತ ಬದುಕಿನ ಸಾರ್ಥಕತೆಯತ್ತ ಹೆಜ್ಜೆಯಿಡಬೇಕು – ಬರಿಯ ಮಣ್ಣಿನ ಹೆಂಟೆಯಾಗಿಯೆ ಉಳಿದು ಬಿಡದೆ, ಎನ್ನುತ್ತಾನೆ ಮಂಕುತಿಮ್ಮ.
Facebook ಕಾಮೆಂಟ್ಸ್