X
    Categories: ಕಥೆ

ಪರಿಸ್ಥಿತಿಯ ಕೈಗೊಂಬೆ ರಾಜು0

ರಾಜು, ಮಳವಳ್ಳಿ ಬಳಿಯ ಒಂದು ಕುಗ್ರಾಮದಿಂದ ಬೆಂಗಳೂರು ಸೇರಿಕೊಂಡ 18 ರ ತರುಣ,10ನೇ  ಕ್ಲಾಸ್’ವರೆಗೆ ಓದಿ ಅಲ್ಲೇ ನೆಲೆಸಿದ್ದ ಮಹೇಶನ ಬಳಿ ಪ್ಲಂಬಿಂಗ್, ಎಲೆಕ್ಟ್ರೀಷಿಯನ್ ಕೆಲಸ ಕಲಿತಿದ್ದಾನೆ. ಗೌಡರ ಮನೆಯ ಪಂಪ್ ರಿಪೇರಿ ಮಾಡುವುದು, ಫ್ಯೂಸ್ ಫಿಕ್ಸ್ ಮಾಡುವುದು, ಗ್ರಾಮ ಪಂಚಾಯ್ತಿ ಕಚೇರಿ ನೀರಿನ ನಲ್ಲಿಯ ಕೊಳವೆ ಕೆಲಸ ಮಾಡುವುದರಿಂದ ಹಿಡಿದು, ಉಳ್ಳವರ ಜಮೀನಿನ ಕಳೆ ಕೀಳುವುದು, ಬೆಳೆಗೆ ಔಷಧಿ ಹೊಡೆವುದು, ಹೀಗೆ ಶ್ರಮವಹಿಸಿ ತನ್ನ ಖರ್ಚಿನ ನಿರ್ವಹಣೆಗೆ ಸಾಕಾದಷ್ಟು ದುಡಿಯುತ್ತಿದ್ದ.

ಮಹೇಶನ ಓರಗೆಯವನು ಶ್ರೀಕಾಂತ,ಬೆಂಗಳೂರಿನ ಐ.ಟಿ  ಕಂಪನಿಗಳ ಕಾರ್ಪೆನ್ಟ್ರೀ, ಎಲೆಕ್ಟ್ರಿಕಲ್ ಕೆಲಸಗಳ ಟೆಂಡರ್ ಪಡೆದು ಕೆಲಸ ಮಾಡಿಸುತ್ತಾನೆ, 15-20 ಜನಗಳಿಗೆ ಆಶ್ರಯ ನೀಡಿರುತ್ತಾನೆ. ರಾಜು ಬೆಂಗಳೂರು ಸೇರಿದ್ದು ಶ್ರೀಕಾಂತನ ಟೀಮ್’ನ ಸದಸ್ಯನಾಗಿಯೇ. ಸಣ್ಣ ಪುಟ್ಟ ಆನ್ ಜಾಬ್ ಟ್ರೈನಿಂಗ್ ಕೊಟ್ಟನಂತರ, ಶ್ರೀಕಾಂತ ರಾಜುವನ್ನು ಒಂದು ಕಂಪನಿಯ ನವೀಕರಣ ಘಟಕಕ್ಕೆ ಕೆಲಸಕ್ಕೆ ನೇಮಿಸುತ್ತಾನೆ. ಅದು ಒಂದು ಸುಸಜ್ಜಿತವಾದ ಆಫೀಸ್, ಈಗಾಗಲೇ ಸುಮಾರು 100 ಜನರ ತಂಡ ಕಾರ್ಯ ನಿರ್ವಹಿಸುತ್ತದೆ, ಎಲ್ಲ ಕಡೆ ಕಂಪ್ಯೂಟರ್ಗಳು, ಗರಿ ಗರಿ ಇಸ್ತ್ರಿ ಮಾಡಿದ ಪೋಷಾಕು ಧರಿಸಿದ ಇಂಜಿನೀರ್ಗಳು, ಮೀಟಿಂಗ್ ರೂಮ್ಗಳು, ಇತ್ಯಾದಿ ಇತ್ಯಾದಿ ಒಟ್ಟಿನಲ್ಲಿ ಒಂದು ಸುಸಜ್ಜಿತವಾದ ಬಣ್ಣದ ಪ್ರಪಂಚ. ಈ ಕಚೇರಿಯ ಕೆಲಸಕ್ಕೆ ಬಂದ ರಾಜುವಿಗೆ ಅದೊಂದು ಹೊಸ ಜಗತ್ತು.

ಮೊದಲೇ ಹೆಸರಾಂತ ಕಂಪನಿ!, ಅಲ್ಲಿ ನೀತಿ ನಿಯಮಾವಳಿಗಳಿಗೆ ಹೆಚ್ಚಿನ ಆದ್ಯತೆ, ಸುರಕ್ಷತೆಗೆ ಪರಮಾದ್ಯತೆ. ಬೆಳಗ್ಗೆ ಶ್ರೀಕಾಂತನ ಟೀಮ್ 8 ಕ್ಕೆ ಹಾಜರಿರಬೇಕು ಮತ್ತು ಪ್ರತಿ ಸದಸ್ಯನೂ ತಮ್ಮ ಗುರುತಿನ ಚೀಟಿ ಪಡೆದಿರಬೇಕು, ಮಧ್ಯಾಹ್ನ 1:30 ರ ನಂತರ ಅರ್ಧ ಘಂಟೆ ವಿರಾಮ (ಹೊರ ಹೋಗುವಂತಿಲ್ಲ) ಸಂಜೆ ಆರಕ್ಕೆ ಆ ದಿನದ ಕೆಲಸದಿಂದ ಮುಕ್ತಿಯಾದ ನಂತರವೇ; 3 ನೇ ಮಹಡಿಯ ಗ್ಲಾಸ್ ಡೋರ್ ತೆರೆಯುವುದು, ಅಲ್ಲಿಯವರೆಗೂ ಸಂಪೂರ್ಣ ಬೀಗ.

ಅದೊಂದು ದಿನ ಮೊದಲನೇ ಮತ್ತು ಎರಡನೇ ಮಹಡಿಯಲ್ಲಿ ಕಂಪನಿ ನೌಕರರು ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ರಾಜು ತನ್ನ ಸಂಗಡಿಗರೊಂದಿಗೆ 3 ನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾನೆ, ಈ ಮಧ್ಯೆ ಶ್ರೀಕಾಂತನ ಮೊಬೈಲ್ ರಿಂಗಾಗುತ್ತದೆ. ಆ ಬದಿಯಿಂದ ಕರೆ ಮಾಡಿದವ ಗೆಳೆಯ ಮಹೇಶ, ರಾಜುವಿಗೆ ಮೊಬೈಲ್ ನೀಡಲು ಸೂಚಿಸುತ್ತಾನೆ, ಈ ಮೂರು ತಿಂಗಳ ಅವಧಿಯಲ್ಲಿ ರಾಜುವಿಗೆ ಕರೆ ಬರುವುದು ಬಹಳ ಅಪರೂಪ, ಬಂದರೆ ಏನೋ ಗಾಬರಿ; ಈ ಹಿಂದೆ ಬಂದದ್ದು ಅಸ್ವಸ್ಥ ಅಜ್ಜಿಯ ಚೇತರಿಕೆಯ ಬಗ್ಗೆ, ರಾಜು ಭಯದಿಂದಲೇ ಮಹೇಶನ ಬಳಿ ಫೋನಿನಲ್ಲಿ ಮಾತನಾಡುತ್ತಾನೆ, ಆಘಾತಕಾರಿಯಾಗಿತ್ತು ಆ ಕಡೆಯಿಂದ ಬಂದ ಸುದ್ದಿ,  ತಾಯಿ ಇಲ್ಲದೆ ತಬ್ಬಲಿಯಾಗಿದ್ದ  ರಾಜುವನ್ನು ಚಿಕ್ಕಂದಿನಿಂದ  ಮುದ್ದಾಗಿ ಬೆಳೆಸಿದ್ದ ಅಜ್ಜಿಯ ಧಿಡೀರ್ ಮರಣ!, ರಾಜುವಿಗೆ ದಿಕ್ಕು ತೋಚದಂತಾಯ್ತು, ಮಾತುಗಳು ಹೊರಡುತ್ತಿಲ್ಲ, ಕಣ್ಣೀರು ತನಗರಿವಿಲ್ಲದಂತೆ ಭೋರ್ಗರೆಯುತ್ತಿದೆ; ಸಾವರಿಸಿಕೊಂಡ ರಾಜು ಶ್ರೀಕಾಂತನ ಕೈಗೆ ಮೊಬೈಲ್ ಇಟ್ಟ, ವಿಷಯ ತಿಳಿದ ಶ್ರೀಕಾಂತ ರಾಜುವನ್ನು ಹಳ್ಳಿಗೆ ಹೊರಡಲು ಸೂಚಿಸುತ್ತಾನೆ, ಆಗ ಸಮಯ ಬೆಳಗ್ಗೆ 9, ಮುಖ್ಯ ದ್ವಾರ ಮುಚ್ಚಿದೆ, ಶ್ರೀಕಾಂತ ತನ್ನ ಮೊಬೈಲ್ನಿಂದ ಕಚೇರಿಯ ಅಧಿಕಾರಿಗೆ ಫೋನ್ ಮಾಡುತ್ತಾನೆ, ವಾರದ ಮೊದಲ ದಿನವಾದ್ದರಿಂದ ಬೆಳಗ್ಗಿನ ದೀರ್ಘಾವಧಿ ಮೀಟಿಂಗ್; ಅಧಿಕಾರಿಯ ಮೊಬೈಲ್ ತಾನು ‘ಸೈಲೆಂಟ್’ ಮೋಡ್ನಲ್ಲಿ ಕುಳಿತಿದೆ. ಇತ್ತ ರಾಜುವಿನ ಚಡಪಡಿಕೆ ಹೆಚ್ಚುತ್ತಿದೆ. ಕೊನೆಗೆ ರಾಜು ಎಲ್ಲಿಂದ ಹೊರಗಿರುವವರನ್ನು ಸಂಪರ್ಕಿಸಬಹುದೆಂದು ಅತ್ತಿಂದಿತ್ತ ಓಡುತ್ತಾನೆ, ಕಂಡದ್ದು ಒಂದು ಕಬ್ಬಿಣದ ಬಾಗಿಲು!, ಬಹಳ ದಿನದಿಂದ ಮುಚ್ಚಿದಂತೆ ಕಾಣುತ್ತಿದೆ, ಹೊರ ಹೋಗುವ ಮಾರ್ಗವೇ ಇರಬೇಕು ಎಂದು, ತೆರೆದೇ ಬಿಡುತ್ತಾನೆ; ತಕ್ಷಣವೇ, ಇಡೀ ಕಟ್ಟಡದಲ್ಲಿ ಅಲಾರ್ಮ್ ಶಬ್ಧ ಮೊಳಗುತ್ತದೆ, ಅರೇ ಏನಾಯ್ತು ಅನ್ನುವಷ್ಟರಲ್ಲಿ ಕಚೇರಿ ಅಧಿಕಾರಿ ವರ್ಗ, ಸಿಬ್ಬಂಧಿ ವರ್ಗ, ಸೆಕ್ಯುರಿಟಿ ನೆಲ ಮಹಡಿ ತಲುಪುತ್ತಾರೆ. ಇತ್ತ ಮೂರನೇ ಮಹಡಿಯ ತಂಡಕ್ಕೂ ನೆಲ ಮಹಡಿಯಲ್ಲಿ ಸೇರಲು ತಿಳಿಸುತ್ತಾರೆ.

ಆದದ್ದೇನು, ರಾಜು ತೆರೆದ ಬಾಗಿಲಿಗೆ ಫೈರ್ ಅಲಾರ್ಮ್ ಅಳವಡಿಸಲಾಗಿರುತ್ತದೆ – ವಿಷಯ ತಿಳಿದ ಅಧಿಕಾರಿ ರಾಜುವಿನ ಮೇಲೆ ದರ್ಪ ತೋರಲು ಆರಂಭಿಸುತ್ತಾರೆ, ಇಲ್ಲ ಸಲ್ಲದ ಪ್ರಶ್ನಾವಳಿಗಳು ಪ್ರಾರಂಭವಾಗುತ್ತದೆ. ಶ್ರೀಕಾಂತ ತಾನು ವಾಸ್ತವದ ಅರಿವು ಮಾಡಿಕೊಟ್ಟು, ಎಷ್ಟೇ  ಬೇಡಿಕೊಂಡರೂ ಅಧಿಕಾರಿ ತಾನು ಜಗ್ಗದಾದ; ಮೇಲಾಧಿಕಾರಿಗಳಿಂದ ತನ್ನನ್ನು  ತಾನು ರಕ್ಷಿಸಿಕೊಳ್ಳಲು “ಆ ಬಾಗಿಲು ಸದಾ ಮುಚ್ಚಿರಬೇಕು, ತೆರೆಯಬಾರದು ” ಎಂದು ಸೂಚಿಸಿದ್ದಾಗಿ ಅಸತ್ಯ ನುಡಿದ. ರಾಜುವಿನಿಂದ “ತಿಳಿದೂ ತಪ್ಪು ಮಾಡಿದೆ” ಎಂಬ ಪತ್ರಕ್ಕೆ ಸಹಿ ಮಾಡಿಸಿದ, ಇನ್ನೆಂದೂ ಶ್ರೀಕಾಂತನ ತಂಡ ಈ ಕಂಪನಿಯೊಡನೆ ಕೆಲಸ ಮಾಡದಂತೆ, ಅನರ್ಹವೆಂದು ಶಿಫಾರಸು ಕೂಡ ಮಾಡಿದ!. ಇಷ್ಟೆಲ್ಲ ನಡೆಯುವಷ್ಟರಲ್ಲಿ ಆದ ಸಮಯ ಸಂಜೆ 5. ಇತ್ತ ರಾಜುವಿನ ಬರುವಿಕೆಯ ಕಾದೂ, ಕಾದೂ, ರಾಜುವಿನ ಸೋದರ ಮಾವ ಅಜ್ಜಿಯ ಅಂತಿಮ ಸಂಸ್ಕಾರ ಪೂರೈಸಿದ. ರಾಜು ಆಫೀಸಿನಿಂದ ಒಂದೇ ಉಸಿರಿನಲ್ಲಿ  ಓಡಿ, ಓಡಿ ಬಸ್ ಸ್ಟ್ಯಾಂಡ್ ಸೇರುವಷ್ಟರಲ್ಲೇ ಸಮಯ 8:03 ಆಗಿತ್ತು, ಅಂದಿನ ಕಡೆಯ ಬಸ್ 8 ಕ್ಕೆ ನಿರ್ಗಮಿಸಿ ಹಳ್ಳಿಯ ಹಾದಿ ಹಿಡಿದಿತ್ತು, ಇತ್ತ ರಾಜು ಕಣ್ಣೀರಿಡುತ್ತ ರಸ್ತೆಯಲ್ಲೇ ಶಕ್ತಿ ಹೀನನಾಗಿ ಬಿದ್ದ …

ಕಚೇರಿಯ ಅಧಿಕಾರಿ ಮೇಲಧಿಕಾರಿಗಳ ಕೆಂಗಣ್ಣಿಗೆ ಪಾತ್ರನಾಗದೇ ಬದುಕಿದೆನಲ್ಲ, ಎಂದು ಹಿಗ್ಗುತ್ತಾ ಬಸ್ ಸ್ಟ್ಯಾಂಡ್ ಪಕ್ಕದ ರಸ್ತೆಯಲ್ಲೇ ಪ್ರಯಾಣಿಸಿ, ಮಳವಳ್ಳಿಯ ಬಸ್ಸನ್ನು ಓವರ್ಟೆಕ್ ಮಾಡಿ ಮನೆ ದಾರಿ ಹಿಡಿದ!….

ಅಜ್ಜಿಯ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು….

-ಪ್ರವೀಣ್ ಎಸ್

Facebook ಕಾಮೆಂಟ್ಸ್

Team readoo kannada:
Related Post