‘ಕುಂದಾಪುರದಲ್ಲಿ ಆದ ಅಪಘಾತಕ್ಕೆ ಎಂಟು ಚಿಕ್ಕ ಮಕ್ಕಳ ಸಾವು” ಎಂಬುದನ್ನು ಓದಿದಾಗ ನನ್ನ ಎದೆ ಒಂದು ಕ್ಷಣ ಜೋರಾಗಿ ನೋವಿನಲ್ಲಿ ಚೀರಿ ಬಿಟ್ಟಿತು. ಕಳೆದ ತಿಂಗಳು ರಸ್ತೆಯ ಅಪಘಾತದಲಿ ನನ್ನ ಗೆಳೆಯನನ್ನುಕಳೆದುಕೊಂಡ ನೋವಿನ ಗಾಯ ಇನ್ನೂ ಮಾಸಿಲ್ಲ. ಏನಾಗುತ್ತಿದೆ ರಸ್ತೆಯ ಮೇಲೆ?
ಇಂದು ಪ್ರತಿದಿನ ರಸ್ತೆಯ ಅಪಘಾತದಲ್ಲಿ ಸುಮಾರು 377 ಜನ ಸಾಯುತ್ತಿದ್ದಾರೆ, ಎನಿಲ್ಲ ಅಂದರೂ ಅದರೊಳಗೆ ಇಪ್ಪತ್ತಾದರೂ ಹದಿಹರೆಯದ ಯುವಕರು,ಮಕ್ಕಳು. ಇದು ಮಲೆಷಿಯನ್ ಏರ್ಲೈನ್ಸ್ MH370 ತರಹದ ಒಂದು ಜಂಬೋ ವಿಮಾನ ದಿನವೂ ಅಪಘಾತಕ್ಕಿಡಾದಂತೆ. ಒಂದು ವಿಮಾನ ಅಪಘಾತಕ್ಕೊಳಗಾಯಿತು ಅಂದರೆ ಸಾಕು ಇಡೀ ವಿಶ್ವವೇ ಕಂಗಾಲಾಗುತ್ತದೆ. ವಿಮಾನಕ್ಕೆ ಎಷ್ಟು ಸುರಕ್ಷತೆ, ಎಷ್ಟು ಸೌಕರ್ಯ? ಆದರೆ ಅದೇ ಪ್ರತಿ ದಿನವೂ ರಸ್ತೆಯ ಮೇಲೆ ಆಗುತ್ತಿರುವ ಜೀವಹಾನಿಗೆ ಜಗತ್ತೇ ಕುರುಡು! ಯಾಕೆ? ಭಯೊತ್ಪಾದನೆ…ಭಯೋತ್ಪಾದನೆ ಎಂದು ಬೊಬ್ಬೆ ಹೊಡೆದು ಕೊಳ್ಳುತ್ತೇವೆ. 2014 ರಲ್ಲಿ ಭಯೋತ್ಪಾದನೆ ಯಿಂದ ಸತ್ತವರ ಸಂಖ್ಯೆ 83, ಅದೇ ರಸ್ತೆಯ ಅಪಘಾತದಿಂದ ಸತ್ತವರ ಸಂಖ್ಯೆ1,39,671! ಸ್ವಾಮಿ, ಭಯೋತ್ಪಾದನೆ ಯಿಂದಾಗುವ ಸಾವಿಗಿಂತ ರಸ್ತೆಯಲ್ಲಿ ಸಾಯುತ್ತಿರುವವರ ಸಂಖ್ಯೆ ಹತ್ತಲ್ಲ, ನೂರಲ್ಲ,ಸಾವಿರವಲ್ಲ, ಲಕ್ಷ ಪಟ್ಟು ಹೆಚ್ಚು! ಭಯೋತ್ಪಾದನೆಯ ನಿಯಂತ್ರಣ ನಮಗೆ ದೊಡ್ಡದು, ಅದಕ್ಕಾಗಿ ಕೋಟ್ಯಾಂತರ ವ್ಯಯ, ವಿಶ್ವಸಂಸ್ಥೆಯಲ್ಲಿ ಅದೇ ದೊಡ್ಡ ಚರ್ಚೆ …ರಸ್ತೆಯ ಮೇಲೆ ನಡೆಯುತ್ತಿರುವ ಮಾರಣಹೋಮವ ಕೇಳುವವರಾರು?
ಅಪಘಾತಕ್ಕೆ ಕಾರಣ ಸರ್ಕಾರವೆಷ್ಟೋ ಅಷ್ಟೇ ಜನರೂ ಕೂಡ. ಎಷ್ಟು ಅವಸರ ನಮ್ಮಲ್ಲಿ? ಸ್ಟಿಯರಿಂಗ್ ಹಿಡಿದ ಕೂಡಲೇ ಮೈಕಲ್ ಶೂಮಾಕರ್ ಮೈಮೇಲೆ ಬಂದು ಬಿಡುತ್ತಾನೆ ಅನಿಸುತ್ತದೆ. ಜುಂ ಜುಂ ಅಂತ ಓಡಿಸುವ ಮಜಾ. ತಿರುವಿನಲ್ಲಿ ಓವರ್ ಟೇಕ್ ಮಾಡುವುದು, ರಸ್ತೆಯಲ್ಲಿ ರೇಸ್ ಮಾಡುವುದು,ಒಂದೇ ಕೈಲಿ ಓಡಿಸುವುದು ಯಾಕೆ? ಕುಡಿದು ಓಡಿಸಿ ತಾವಲ್ಲದೆ ಇನ್ನೊಬ್ಬರ ಜೀವವನ್ನೂ ತೆಗೆಯುವುದು ಯಾಕೆ? ರಸ್ತೆಯ ನಿಯಮವನ್ನು ಪಾಲಿಸಿ ನಿಧಾನವಾಗಿ ವಾಹನವನ್ನು ಓಡಿಸಿದರೆ ಏನಾಗುತ್ತದೆ ನಮಗೆ? ಇನ್ನು, ರಸ್ತೆಯ ಮೇಲೆ ವೇಗದ ಮಿತಿ ಬರೆದರಾಗಲಿಲ್ಲ, ವೇಗದ ಮಿತಿಯನ್ನು ವೀಕ್ಷಿಸುವುದು ಹೆದ್ದಾರಿ ನಿಗಮದ ಕರ್ತವ್ಯ. ಯಾಕೆ ಸರ್ಕಾರ ಕುರುಡಾಗಿದೆ? ವೇಗದ ಮೀತಿ ಮೀರಿದವರಿಗೆ ಕಠಿಣ ಸಜೆ ಆಗುವುದು ಯಾವಾಗ?ಯಾಕೆ ಸರ್ಕಾರದ ನಿರ್ಲಕ್ಷ್ಯ? AAA ಫೌಂಡೇಶನ್ ಪ್ರಕಾರ ನೀವು 30-40 km/h ವೇಗದಲ್ಲಿದ್ದರೆ ಅಪಾಯದ ಸಾಧ್ಯತೆ ಬರಿ10%, ಆದರೆ ವೇಗ ಹೆಚ್ಚುತ್ತಿರುವಂತೆ ಅಪಘಾತವಾಗುವ ಸಾಧ್ಯತೆಗಳೂ ಕೂಡ ಹೆಚ್ಚು. 90km/h ವೇಗದಲ್ಲಿದ್ದರೆ ಅಪಘಾತವಾಗುವ ಸಾಧ್ಯತೆ 90%! ಪ್ರತಿ ವರ್ಷ ಆಗುವ ಅಪಘಾತದಲ್ಲಿ 63% ಶೇಕಡಾ ಅಪಘಾತಗಳು ನಿರ್ಧಿಷ್ಟಪಡಿಸಿದ ವೇಗದ ಮಿತಿ ಮೀರಿ ಓಡಿಸಿದ್ದರಿಂದ. ಇತ್ತೀಚಿನ ಸರ್ವೆಯ ಪ್ರಕಾರ ರಸ್ತೆಯ ಅಪಘಾತಕ್ಕೆ ಮುಖ್ಯ ಕಾರಣವೆಂದರೆ ವಾಹನ ಓಡಿಸುವಾಗ ಮೊಬೈಲ್’ನಲ್ಲಿ ಮಾತನಾಡುವುದು. ಇಂದು ರಸ್ತೆಯಲ್ಲಿ ನೋಡುತ್ತೇನೆ ಸಾಮಾನ್ಯ ಚಾಲಕನಿಂದ ಹಿಡಿದು ಪೋಲಿಸ ಇಲಾಖೆಯ ಚಾಲಕ ಕೂಡಾ ಗಾಡಿ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದ ಕಾಣಬಹುದು. ಇದನ್ನು ತಡೆಯುವುದು ಅಷ್ಟು ಕಷ್ಟವೇ? ಹೊರ ಕೆಲ ದೇಶಗಳಲ್ಲಿ ಗಾಡಿ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ ಸಿಕ್ಕಿಬಿದ್ದರೆ ತಕ್ಷಣ ನಿಮ್ಮ ಲೈಸೆನ್ಸ್ ಜಪ್ತಿ ಮಾಡಲಾಗುತ್ತದೆ, ಅಲ್ಲದೇ ಲಕ್ಷಗಟ್ಟಲೆ ದಂಡ ವಿಧಿಸಲಾಗುತ್ತದೆ. ಅಲ್ಲಿ ಜೀವ ಮುಖ್ಯ. ಅಲ್ಲಿ ಕಾನೂನು ಜೀವ ಉಳಿಸುವುದಕ್ಕೆ ಮಾಡಿದರೆ ಇಲ್ಲಿ ಐದನೂರು ರೂಪಾಯಿ ನೋಟನ್ನು ಕೇಳುವುದಕ್ಕೆ!
ನಿನ್ನೆ ನಡೆದ ಬಸ್ಸ್ ಹಾಗೂ ಓಮಿನಿಯ ದುರಂತದಲ್ಲಿ ಎಂಟು ಮಕ್ಕಳು ಸ್ಥಳದಲ್ಲಿ ಮೃತಪಟ್ಟರೆ ಹನ್ನೊಂದು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರಂತೆ. ಅಂದರೆ ಆ ಓಮಿನಿಯಲ್ಲಿ ಡ್ರೈವರ್ ಬಿಟ್ಟು 19 ಮಂದಿ ಇದ್ದರು ಅಂತಾಯಿತು! ಕೋಳಿ ತುಂಬಿದ ಹಾಗೆ ಮಕ್ಕಳ ತುಂಬಿಕೊಂಡು ಹೋಗಲು ಅನುಮತಿ ಕೊಟ್ಟವರಾರು? ಪ್ರತಿ ಕಾರಿಗೂ ತೂಕದ ಹಾಗೂ ಪ್ರಯಾಣಿಕರ ಮಿತಿ ಇರುತ್ತದೆ. ಅದನ್ನು ಸ್ಥಳೀಯ RTOನಿಯಂತ್ರಿಸಬೇಕು. RTO ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೆ? ಓವರ್ ಲೋಡ್ ಇನ್ನೊಂದು ದೊಡ್ಡ ಕಾರಣ. ಶೇಕಡಾ 30 ರಷ್ಟು ಸಾವು ಓವರ್ ಲೋಡ್ ವಾಹನ ನಿಯಂತ್ರಣ ತಪ್ಪಿ ಆಗುವ ದುರಂತದಿಂದ ಆಗುತ್ತಿದೆ. ಟ್ರಕ್ ಆಗಲಿ, ಬಸ್ ಆಗಲಿ ಓವರ್ ಲೋಡ್ ನಿಂದ ನಿಯಂತ್ರಣ ತಪ್ಪಿ ಮುಂದೆ ಬರುತ್ತಿರುವ ಕಾರಿಗೋ ರಿಕ್ಷಾಕ್ಕೋ ಬಡಿದರೆ ಏನು ಗತಿ?ಯಾಕೆ ಕಾರುಗಳಲ್ಲಿ ಅಷ್ಟು ದುರಾಸೆಯಿಂದ ಜನರ ತುಂಬಬೇಕು? ತೂಕದ ಮಿತಿ ಮೀರಿ ಯಾಕೆ ಲಾರಿಗಳನ್ನು ತುಂಬಬೇಕು? ಇದನ್ನು ಸರ್ಕಾರ ಯಾಕೆ ನಿಯಂತ್ರಣದಲ್ಲಿ ತಂದಿಲ್ಲ? ಅಷ್ಟು ಕಷ್ಟವೆ? ಅಥವಾ ಸಾಮಾನ್ಯ ಜನರ ಜೀವದ ಬಗ್ಗೆ ನಿರ್ಲಕ್ಷ್ಯವೇ?
ಭಾರತದ ರಸ್ತೆಯ ಪರಿಸ್ಥಿತಿ ನೋಡಿ. 9200 ಕಿಮೀ ನಷ್ಟು ಅಷ್ಟೇ ರಾಷ್ಟ್ರೀಯ ಹೆದ್ದಾರಿ, ಅದರಲ್ಲಿ ಬರೀ 600 ಕಿಮೀ ನಷ್ಟು ಎಕ್ಸ್ಪ್ರೆಸ್ ಹೆದ್ದಾರಿ ಉಳಿದ 60 ಸಾವಿರ ಕಿಮೀ ರಸ್ತೆ ರಾಜ್ಯದ ಹೆದ್ದಾರಿಗಳು ಇಲ್ಲವೇ ಗ್ರಾಮೀಣ ರಸ್ತೆಗಳು. ಇದರ ಅರ್ಥ ಏನೆಂದರೆ ದೇಶದ ಬಹುಪಾಲು ರಸ್ತೆಗಳು ಸಿಂಗಲ್ ಲೇನ್. ಇದು ಬಹಳ ಗಂಭೀರ ವಿಷಯ. ನ್ಯಾಶನಲ್ ಹೈ ವೇ ನಲ್ಲಿ ದುರಂತ ನಡೆಯುತ್ತದೆ ಆದರೆ ಅತೀ ಹೆಚ್ಚು ಈ ಸಿಂಗಲ್ ಲೇನ್ ರಸ್ತೆಗಳಿಂದ ನಡೆಯುವಂತಹದು. WHO ಸಮೀಕ್ಷೆಯ ಪ್ರಕಾರ ಈ ವರ್ಷ ಎರಡು ಲಕ್ಷಕ್ಕೂ ಹೆಚ್ಚು ರಸ್ತೆಯ ಅಪಘಾತದಿಂದ ಸಾವು ಆಗುವ ಸಾಧ್ಯತೆಗಳು ಇದೆ. ಎರಡು ಲಕ್ಷ ಸಾವು ಮಲೇರಿಯಾ, ಏಡ್ಸ್, ಕ್ಯಾನ್ಸರ್, ಜ್ವರ, ಇತ್ಯಾದಿ ಕಾಯಿಲೆಗಳೆಲ್ಲ ಸೇರಿ ಅದುದಕ್ಕಿಂತ ಹೆಚ್ಚು! ಇಂದು ಮಿಲಿಟರಿಗೆ ಹೋದ ಮಕ್ಕಳು ವಾಪಾಸು ಬರುತ್ತಾರೆ ಎಂಬ ನಂಬಿಕೆ ಇದೆ, ಆದರೆ ರಸ್ತೆಗೆ ಹೋದವರು ಬರುತ್ತಾರೋ ಇಲ್ಲವೋ ಆ ನಂಬಿಕೆ ಇಲ್ಲ. ಡಿಜಿಟಲ್ ಇಂಡಿಯಾ ಸ್ವಲ್ಪ ತಡವಾಗಿ ನಡೆದರೂ ಏನೂ ತೊಂದರೆಯಿಲ್ಲ ಆದರೆ ಡಬಲ್ ಲೇನ್ ಮಾಡುವುದು ತಡವಾದರೆ ಸಾವಿನ ಸಂಖ್ಯೆ ಎರಡು ಲಕ್ಷದಿಂದ ನಾಲ್ಕು ಲಕ್ಷ ಆಗುವುದನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ.
ಕೊನೆಯದಾಗಿ ತಂತ್ರಜ್ಞಾನ. ಇಂದು ಮಾರುಕಟ್ಟೆಯಲ್ಲಿ ಎಲ್ಲಾ ಕಾರುಗಳಲ್ಲಿ ಹೆಚ್ಚಾಗಿ ಸುರಕ್ಷಾ ಸೌಲಭ್ಯಗಳಿರುತ್ತವೆ. ಅದನ್ನು ಸಾಕಷ್ಟು ಮಂದಿ ಖರೀದಿ ಮಾಡುವುದಿಲ್ಲ. ಉದಾಹರಣೆಗೆ ABSಹತ್ತು ಸಾವಿರ ರೂಪಾಯಿ ಹೆಚ್ಚು ಅಂತ ಬೇಡ ಅನ್ನುತ್ತಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಸಂಭವಿಸುವ ಅವಗಡಗಳು ಒದ್ದೆ ನೆಲದಿಂದ ಚಕ್ರದ ನಿಯಂತ್ರಣ ತಪ್ಪಿ ಆಗುವಂತಹದು, ಅದನ್ನುABS ನಿಂದ ತಡೆಯಬಹುದು. Airbags ಯಾಕೆ ನಮಗೆ ಎನ್ನುತ್ತಾರೆ! ಸೀಟ್ ಬೆಲ್ಟ್ ಹಾಕಿಕೊಂಡರೆ ಅಲರ್ಜಿ, ಬರೀ ಡ್ರೈವರ್ ಮಾತ್ರ ಹಾಕಿಕೊಂಡರೆ ಸಾಕು ಎಂಬ’ಮೂಢನಂಬಿಕೆ’ಗಳು! ಮೊನ್ನೆಯೊಂದು ಘಟನೆಯಲ್ಲಿ ಗಂಡ ಹೆಂಡತಿ ಹಾಗೂ ಎರಡು ಮಕ್ಕಳು ಹೋಗುತ್ತಿದ್ದ ದ್ವಿಚಕ್ರ ವಾಹನ ಮರಕ್ಕೆ ಬಡಿದು ಉರುಳಿ ನಾಲ್ಕೂ ಮಂದಿ ಸ್ಥಳದಲ್ಲೇ ಮೃತಪಟ್ಟರಂತೆ. ಕೂಲಂಕುಷವಾಗಿ ನೋಡಿದರೆ ಅಲ್ಲಿ ಟೈಯರ್ ಸ್ಪೋಟಗೊಂಡು ನಿಯಂತ್ರಣ ತಪ್ಪಿ ಅವಘಡ ಸಂಭವಿಸಿತ್ತು. ಗಾಡಿ ಖರೀದಿ ಮಾಡಿದಾಗಿನಿಂದ ಆತ ಚಕ್ರ ಬದಲಾಯಿಸೇ ಇಲ್ಲವಂತೆ!!! ‘ದುಡ್ಡು ಹೋದರೆ ಬಪ್ಪುದು ಆದರೆ ಜೀವ ಹೋದರೆ ಬಾರದು.’ ಒಂದೆಡೆ ಮೋದಿಜಿ ಡಿಜಿಟಲ್ ಇಂಡಿಯಾ ಮಾಡುತ್ತೇನೆಂದು ಹೇಳುತ್ತಾರೆ ಇಲ್ಲಿ ಜನರು ರಸ್ತೆಯ ಮೇಲೆ ಹಸುಕುರಿಗಳನ್ನು ಮೇಯಲು ಬಿಡುತ್ತಾರೆ. ಒಂದೆಡೆ ಕಂಪನಿಗಳು ಹೈ ಟೆಕ್ ತಂತ್ರಜ್ಞಾನದ ಕುರಿತು ಚರ್ಚೆ ಮಾಡುತ್ತಿದ್ದಾರೆ ಇತ್ತ ರಸ್ತೆ ಯಾವುದೋ ಹೊಲ ಯಾವುದೋ ಗೊತ್ತಾಗುವ ಸ್ಥಿತಿಯಲ್ಲಿ ಇಲ್ಲ. ಒಂದೆಡೆ ಪಾಲಕರು ಜೀವ ಒತ್ತೆ ಇಟ್ಟು ಮಕ್ಕಳನ್ನು ಓದಿಸುತ್ತಾರೆ, ಅದೇ ಮಕ್ಕಳು ರಸ್ತೆಯಲಿ ಅಪಘಾತಕ್ಕೊಳಗಾಗಿ ಸಾಯುತ್ತಿದ್ದಾರೆ. ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಲ್ಲಿ ಪ್ರತಿಯೊಬ್ಬ ನಾಗರೀಕನೂ ಎಚ್ಚೆತ್ತುಕೊಳ್ಳಬೇಕು. ಹಾಗೆಯೇ ಸರ್ಕಾರ ರಸ್ತೆಯನ್ನು ಅಭಿವೃದ್ಧಿಗೊಳಿಸುವದರ ಜೊತೆಗೇ ಜನರಲ್ಲಿ ಶಿಸ್ತು ಮೂಡಿಸಲು ಕಠಿಣ ನಿಯಮಗಳನ್ನು ತರಲೇ ಬೇಕು, ತಕ್ಷಣವೇ! ಯಾಕೆಂದರೆ ಒಂದು ವರ್ಷ ತಡ ಅಂದರೂ ಎರಡು ಲಕ್ಷ ಸಾವು! ಅದ್ಯಾಕೆ ನೀವು ಇದನ್ನು ಓದುತ್ತಿರುವಾಗಲೇ ಕನಿಷ್ಠ ಅಂದರೂ ಐದು ಮಂದಿ ಎಲ್ಲೋ ಸಾವಿಗೀಡಾಗಿರುತ್ತಾರೆ.
–
Facebook ಕಾಮೆಂಟ್ಸ್