ಅವನಿಗೆ ತಾನು ಮಾಡುತ್ತಿದ್ದ ಕಸರತ್ತಿನ ದಿನಗಳ ಜ್ಞಾಪಕವಿನ್ನೂ ಇದೆ. ಹಗ್ಗದ ಮೇಲೆ ನಡೆದು, ನಾನಾ ಕಸರತ್ತುಗಳನ್ನು ತೋರಿಸಿ, ಜನರೆದುರು ಪಾತ್ರೆ ಹಿಡಿದು ದುಡ್ಡು ಕೇಳುತ್ತಿದ್ದ ನೆನಪುಗಳಿನ್ನೂ ಇವೆ ಎಂಬುದು ಅವನಿಗೂ ಆಶ್ಚರ್ಯವನ್ನುಂಟು ಮಾಡುತ್ತವೆ. ಅದು ಇಪ್ಪತ್ತು ಇಲ್ಲ ಇಪ್ಪತ್ತೈದು ವರ್ಷಗಳ ಹಳೆಯ ಮಾತಿರಬೇಕು. ಅವುಗಳನ್ನು ಆತ ಬೇಕೆಂದರೂ ಮರೆಯಲಾರ. ಆತನ ಚಲನೆಯಿಲ್ಲದ ಎಡಗೈ ಆ ಜೀವನದ ಕ್ಷಣಗಳಿಗೆ ಹಿಡಿದ ಕನ್ನಡಿಯೆಂಬಂತಿದೆ. ಸುಮಾರು ದೊಡ್ಡವನಾಗಿದ್ದರೂ ಬಲವಿಲ್ಲದ ಹಗ್ಗದ ಮೇಲೆ ನಡೆಯಲು ಹೋಗಿ, ಮಧ್ಯದಲ್ಲಿದ್ದಾಗ ಹಗ್ಗ ಹರಿದು ಬಿದ್ದಿದ್ದು ನೆನಪಿಲ್ಲ ಆದರೆ ಆನಂತರ ಅನುಭವಿಸಿದ ನೋವಿನ ಕರಾಳ ನೆನಪುಗಳಷ್ಟೆ ಇರುವುದು. ಆಗ ಅವನಿಗೆ ಹನ್ನೆರಡೋ ಹದಿಮೂರೋ ವರ್ಷವಿರಬೇಕು. ಅವನ ಜೀವನದಲ್ಲಿ ಯಾವುದೂ ಖಚಿತವಲ್ಲ, ಎಲ್ಲವೂ ಇರಬೇಕು, ಆಗಿರಬೇಕು ಎಂಬ ಊಹಾಪೋಹಗಳೆ. ಅದರ ನಂತರ ಆ ಹಗ್ಗದ ಮೇಲಿನ ಜೀವನಕ್ಕೆ ಎಳ್ಳು ನೀರು ಬಿಟ್ಟ ಜೀವಕ್ಕೆ ಗಿಣಿಯೇ ಆಸರೆ.
ಅಷ್ಟು ಹೊತ್ತಿಗೆ ಗೂಡಲ್ಲಿದ್ದ ಗಿಣಿ ಒಂದು ಕೂಗು ಹಾಕಿತು. ಶಂಕರ ಎಂದಿನಂತೆ ಒಂದು ಬಟ್ಟಲಿನಲ್ಲಿ ಅನ್ನವನ್ನು, ಇನ್ನೊಂದರಲ್ಲಿ ನೀರನ್ನು ತಂದಿಟ್ಟ. ಆ ಅಲೆಮಾರಿ ಜೀವನಕ್ಕೆ ತೆರೆ ಹಾಡಿ, ತಾನು ಇತರರಂತೆ ನೆಲೆಯೂರಲು ಕಾರಣವಾದ ಈ ಗಿಣಿಯ ಮೇಲೆ ಆತನಿಗೆ ಅಪಾರ ಪ್ರೀತಿ. ಕಳೆದ ಹದಿನೆಂಟು ವರ್ಷಗಳಿಂದ ಆತನ ಸಂಸಾರವನ್ನು ನಡೆಸಿ, ಮಕ್ಕಳನ್ನು ಸಾಕಿ ಸಲುಹಲು ಸಹಾಯವಾಗಿದೆ ಆ ಗಿಣಿ. ಅದೇನು ಸಾಧರಣ ಗಿಣಿಯಲ್ಲ, ತನ್ನ ವೃತ್ತಿಯಲ್ಲಿ ಪಳಗಿದ ಗಿಣಿ. ಈಗಂತು ಅದು ಹಣವಿಡದೆ, ಹೊರಬರುವುದೂ ಇಲ್ಲ. ಅದನ್ನು ಪಂಜರದಲ್ಲಿ ಭದ್ರಪಡಿಸಿ, ಆತ ತನ್ನ ನಿತ್ಯಕರ್ಮಗಳನ್ನು ಪೂರೈಸಲು ಹೋದ.
ತನ್ನ ಒಂದು ಕಾಲದಲ್ಲಿ ಬಿಳಿಯದಾಗಿದ್ದ ನಿಲುವಂಗಿ, ಪೈಜಾಮ ತೊಟ್ಟು, ಹೆಗಲಿಗೊಂದು ಕೇಸರಿ ಶಾಲು ಹೊದ್ದು, ಹಣೆಗೆ ಮಂಡಲದಂತಹ ಒಂದು ಬೊಟ್ಟನ್ನಿಟ್ಟು, ತಲೆಗೆ ಕೆಂಪು ಪಗಡಿಯನ್ನು ರಾಜಸ್ಥಾನಿ ಶೈಲಿಯಲ್ಲಿ ತೊಟ್ಟು, ಗಿಣಿಯ ಪಂಜರವನ್ನು ಹೆಗಲಿಗೇರಿಸಿಕೊಂಡು ಮನೆಯಿಂದ ಹೊರಟ. ಇದೇ ಆತನ ದಿನದ ವೇಷಭೂಷಣ. ಭೂಷಣವೋ? ಅಭೂಷಣವೋ? ಆತನಿಗದು ತಿಳಿಯದು. ಹೊರಡುವಾಗ ಹೆಂಡತಿಯ ಬಳಿ, ಸಂಜೆ ಬರುತ್ತಾ ಮಗಳಿಗೆ ಔಷಧಿ ತರುವೆನೆಂದು ಹೇಳಿಹೋದ. ಕಳೆದೆರಡು ದಿನಗಳಲ್ಲಿ ವ್ಯವಹಾರ ಸ್ವಲ್ಪ ಕುಂದಿತ್ತು. ಕೈಯಲ್ಲಿದ್ದ ಹಣವನ್ನೆಲ್ಲ ಮನೆಯ ಬಾಡಿಗೆಗೆ ಕೊಟ್ಟು ಆಗಿದ್ದರಿಂದ ಕೈ ಖಾಲಿಯಗಿತ್ತು. ಮಳೆ ಕಡಿಮೆಯಾಗಿದ್ದರಿಂದ ರಸ್ತೆಯಲ್ಲಿ ನಡೆಯುವುದು ಸ್ವಲ್ಪ ಸುಲಭವಾಗಿತ್ತು.
ಎಂದಿನಂತೆ ಗೋಡೆಗಡಿಯಾರದ ಬದಿಯ ಫುಟ್‍ಪಾತಿನ ಮೇಲೆ ಕುಳಿತ. ಒಬ್ಬ ಹಸುಗೂಸಿನ ತಾಯಿ ತನ್ನ ಕೂಸನ್ನೆತ್ತಿಕೊಂಡು ಆತನನ್ನೇ ನೋಡುತ್ತ ಹೋದಳು. ಅವಳ ಆ ನೋಟ ಅವನ ಮನಸ್ಸಿನಲ್ಲಿ ಬಹಳ ಕಷ್ಟಪಟ್ಟು ಹೂತಿಟ್ಟಿದ್ದ ನೆನಪುಗಳನ್ನು ಕೆದಕಿತು. ಅವನು ಜೀವನದಲ್ಲಿ ಎಷ್ಟೇ ಪ್ರಯತ್ನಿಸಿದರೂ ಆ ತಾಯಿ ಮಗುವನ್ನು ಮರೆಯಲಾರ. ಆ ಘಟನೆಯಾಗಿ ಹತ್ತು ವರ್ಷಗಳೇ ಕಳೆದಿವೆ ಆದರೆ ಆ ತಾಯಿಯ ಮುಖ ಅವನ ಮನಃಪಟಲದಲ್ಲಿ ಸ್ಥಬ್ಧವಾಗಿದೆ. ತನ್ನ ಹೆಂಡತಿ ತನ್ನ ಮಗುವನ್ನು ಹೊತ್ತು ನಿಂತಿದ್ದಾಗಲೂ ಅದೇ ನೆನಪಾಗಿ, ಈ ಜೀವನವೆಲ್ಲ ಸುಳ್ಳು, ಇದನ್ನೆಲ್ಲ ಬಿಟ್ಟುಬಿಡಬೇಕೆಂದು ಅನಿಸಿದ್ದಿದ್ದೆ. ಆದರೆ ಮರುದಿನ ಬೆಳಗ್ಗೆ ಗಂಜಿಗಾಗಿ ಹೊಟ್ಟೆ ಹಂಬಲಿಸಿದಾಗ ಬೇರೆ ದಾರಿಕಾಣದೆ ಹೊರಡುತ್ತಾನೆ.
ಅವನು ಆಗ ಕೆ. ಆರ್. ಪೇಟೆಯಲ್ಲಿದ್ದ. ಐದಾರು ವರ್ಷಗಳ ಪರಿಶ್ರಮದ ಕಾರಣ, ಜೀವನ ಆರಾಮವಾಗಿ ಸಾಗುತ್ತಿತ್ತು. ಮಗಳು ಹುಟ್ಟಿ ಒಂದು ವರ್ಷ ತುಂಬಿತ್ತು, ಅವಳ ತೊದಲು ಮಾತುಗಳನ್ನು ಕೇಳುತ್ತ ಇದ್ದ ಕಷ್ಟಗಳನ್ನು ಚೂರು ಚೂರಾಗಿ ಮರೆಯುತ್ತಿದ್ದ. ಆವತ್ತು ಒಬ್ಬಳು ತಾಯಿ ತನ್ನ ಹಸುಗೂಸನ್ನೆತ್ತಿಕೊಂಡು ಶಾಸ್ತ್ರ ಕೇಳಲು ಬಂದಳು. ಅವನು ಗಿಣಿಯಿಂದ ಕಾರ್ಡು ತೆಗೆಸಿ, ಮಗುವಿಗೆ ಒಳ್ಳೆ ಭವಿಷ್ಯವಿದೆ ಎಂದ. ತಾಯಿ ಮಗುವಿನ ಕೈನೋಡೆಂದು ಹೇಳಿದಾಗ ಅವನಿಗೆ ಇನ್ನೊಂದು ಸ್ವಲ್ಪ ದುಡ್ಡು ಮಾಡಬಹುದೆಂದೆನಿಸಿ ಆಯುಷ್ಯ ಬಹಳ ಗಟ್ಟಿಯಾಗಿದೆ ನೂರು ವರ್ಷ ಬದುಕುತ್ತಾನೆ. ಆದರೆ ಸ್ವಲ್ಪ ತೊಂದರೆ ಇದೆ, ಶಾಂತಿಯಾಗಬೇಕು ಎಂದು ಹೇಳಿದ. ಆತ ದುಡ್ಡು ತೆಗೆದುಕೊಂಡು, ನಮಸ್ಕಾರ ಮಾಡಿದವಳಿಗೆ ಆಶೀರ್ವದಿಸಿದ. ಅವಳು ಹೋಗಿ ರಸ್ತೆಯ ಬದಿಗೆ ನಿಂತಳು. ಇವನು ದುಡ್ಡನ್ನೆಣಿಸಿ ತನ್ನ ಪೆಟ್ಟಿಗೆಯಲ್ಲಿಡುತ್ತಿದ್ದಾಗ, ಒಂದು ಆರ್ತನಾದವೂ, ಲಾರಿಯೊಂದು ಸಡನ್ನಾಗಿ ಬ್ರೇಕ್ ಹಾಕಿದ ಸದ್ದು ಕೇಳಿಸಿತು. ಜನರೆಲ್ಲ ಲಾರಿಯೆದರು ನೆರೆದರು, ಇವನೂ ಹೋಗಿ ನೋಡುತ್ತಾನೆ, ತಾಯಿ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಲಾರಿಯ ಡ್ರೈವರು ಓಡಿಹೋದ, ಪೋಲಿಸರೂ ಬಂದರು. ಜನರೆಲ್ಲ ಪೋಲಿಸು ಕೇಸಿನ ರಾಮಾಯಣ ನಮಗೇಕೆ ಎಂದು ಹಿಂದೆ ಸರಿದರು.
ಆ ಮಗುವನ್ನು ಅವುಚಿ ಹಿಡಿದಿದ್ದ ತಾಯಿ, ಮಗು ಇಬ್ಬರ ಪ್ರಾಣವೂ ಹಾರಿಹೋಗಿತ್ತು. ಶಂಕರ ಇದನ್ನೆಲ್ಲ ನೋಡಿ ಕುಸಿದು ಕುಳಿತ. ಮರುದಿನವೇ ಶಂಕರ ಊರು ಬಿಟ್ಟ. ದೊಡ್ಡ ಊರಿನಲ್ಲಾದರೆ ಏನಾದರೂ ಬೇರೆ ಕೆಲಸ ಸಿಗಬಹುದು ಎಂದುಕೊಂಡು ಮೈಸೂರಿಗೆ ಬಂದ. ತರಕಾರಿ ಮಾರುಕಟ್ಟೆ, ಹಾಪ್‍ಕಾಮ್ಸ್ ಮುಂತಾದಲ್ಲೊಂದೆರಡು ದಿನ ದುಡಿದ, ಆದರೆ ಸಂಸಾರ ಸಾಗಿಸುವುದೇ ಕಷ್ಟವಾಗಿ ಮತ್ತೆ ಆತನ ಜೀವನದ ಭಾರ ಗಿಣಿರಾಮನ ಹೆಗಲೇರಿತು.
ಅವನಿಗೂ ಬಹಳ ಅನಿಸಿದೆ, ತಾನು ಹೇಳುವುದೆಲ್ಲವೂ ಸತ್ಯವಲ್ಲ ಎಂದು. ಆತ ಬಾಕಿಯವರಂತೆ, ಭಗವಂತ ನುಡಿಸುತ್ತಾನೆ ನಾನು ನುಡಿಯುತ್ತೇನೆ ಎಂದುಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗಾದರೆ ಭಗವಂತನೇಕೆ ತಪ್ಪು ನುಡಿಸುತ್ತಾನೆಂಬುದು ಆತನಿಗೆ ತಿಳಿಯದು. ಬಹಳಷ್ಟು ಸಲ ಇದನ್ನೆಲ್ಲ ಬಿಟ್ಟು ಬಿಡಬೇಕೆಂದೆನಿಸಿದೆ. ಆದರೆ ಬೇರೆ ಹಾದಿ ಕಾಣದೆ ಮತ್ತೆ ಮುಂದುವರೆಯುತ್ತಾನೆ.
ಆ ದಿನದ ನಂತರ ಗೋಡೆಗಡಿಯಾರದ ಪಕ್ಕದ ಬೀದಿಯೆ ಅವನ ಭವಿಷ್ಯವಾಣಿಯ ಅರಮನೆ. ಈಗಂತೂ ಅವನಿಗೆ ಖಾಯಂ ಭಕ್ತಾದಿಗಳೂ ಇದ್ದಾರೆ. ಬರಿ ಭವಿಷ್ಯ ಹೇಳಿದರೆ ಸಾಕೆ? ಕೇಡೆಂದು ತಿಳಿದರೆ, ಅದನ್ನು ತಪ್ಪಿಸುವ ಹೊಣೆಯನ್ನೂ ಆತ ಹೊತ್ತಿದ್ದಾನೆ. ವಿಭೂತಿ ಮಂತ್ರಿಸಿ ಕೊಡುವುದು, ತಾಯಿತ ಕಟ್ಟುವುದು ಇವೆಲ್ಲ ಆತ ಈಗೀಗ ಕಲಿತ ನವಕುಶಲಗಳು.
ಒಂದೆರಡು ಜನ ಬಂದರು, ಹೋದರು. ಹೆಚ್ಚೇನು ಲಾಭವಿಲ್ಲ. ಹೊತ್ತು ಏರಿತು,ಇಳಿಯಿತು. ಯಾರೂ ಬರದೆ ಸಂಜೆಯಾಯಿತು. ಒಂದು ಯುವಕರ ಸಾಲು ಅವನನ್ನೇ ನೋಡುತ್ತ ಸಾಗಿತು. ಅವರ ಮಾತುಗಳೂ ಕಿವಿಗೆ ಬಿದ್ದವು.
“ಎಂತ ಸಾವಾ? ಈ ಕಾಲದಲ್ಲೂ ಹೀಗೆಲ್ಲ ಬದುಕುವವರು ಉಂಟ ಮಾರಾಯಾ?” ಎಂದೊಬ್ಬ ಉದ್ಗರಿಸಿದ.
“ಎಂತದಾ?”
“ಅಲ್ಲ ಮರಾಯ ಗಿಣಿಶಾಸ್ತ್ರದವನನ್ನು ನೋಡಿ ಯಾವ ಕಾಲ ಆಗಿತ್ತು”.
“ಯಾವನಿಗ್ ಗೊತ್ತು? ಆಂಡ್ರಾಯ್ಡ್ ಮೊಬೈಲ್ ಕಾಲದಲ್ಲಿ, ನೋಕಿಯಾದ ಬ್ಲಾಕ್ ಎಂಡ್ ವೈಟ್ ಸೆಟ್ ತರಹ ಬದುಕು” ಎಂದನೊಬ್ಬ ಭಾವಿ ಚಿತ್ರಸಾಹಿತಿ.
ಅವರು ದೂರ ಸರಿದಂತೆ ಅವರ ಮುಂದಿನ ಮಾತುಗಳು ಅಸ್ಪಷ್ಟವಾದವು. ಅವನಿಗೂ ಅವರ ವಿಮರ್ಶೆ ಕೇಳಿ ನಗು ಬಂತು. ರಸ್ತೆ ಬದಿಯ ಭಿಕ್ಷುಕ ಎನ್ನುವವನೊಬ್ಬನಾದರೆ, ಸ್ವಾಮಿ ನನಗೆ ಒಳ್ಳೆದು ಮಾಡಿ ಎಂದು ಕೈ ಮುಗಿಯವವನ್ನಿನ್ನೊಬ್ಬ. ದೇವರೆ ಇಲ್ಲ ಎಂದು ವರ್ಷವಿಡೀ ಹಾರಾಡುವ ಯುವಕರ ಪರೀಕ್ಷಾ ಕಾಲದ ಭಕ್ತಿಯನ್ನೂ ಆತ ಕಂಡಿದ್ದಾನೆ. ಸಮಾಜ “ಅಭಿವೃದ್ಧಿ” ಹೊಂದಿದಂತೆ, ಮೌಢ್ಯಗಳೂ ಹೆಚ್ಚಾಗುತ್ತಿವೆ, ದೊಡ್ಡ ದೊಡ್ಡ ಜನರಿಗಾಗಿ ಪವರ್‍ಫುಲ್ ದೇವರುಗಳು, ಪವರ್‍ಫುಲ್ ವ್ಯಕ್ತಿಗಳಿಗೆ ಸ್ಪೆಷಲ್ ದರ್ಶನ ಎಂದು ಕೂಗಾಡುತ್ತಿದ್ದ “ಬುದ್ಧಿಜೀವಿ”ಯ ಮಾತುಗಳನ್ನು ಆತ ಕೇಳಿದ್ದಾನೆ. ಅಂತಹ ಪವರ್‍ಫುಲ್ ದೇವರ ಪವರ್‍ಫುಲ್ ಭಕ್ತರೆದುರು ನನ್ನ ಸಣ್ಣ ದೇವರು ನನ್ನನ್ನು ಕಾಪಾಡಬಲ್ಲನೋ? ಎಂದು ವೇದಾಂತ ಹೇಳುವಷ್ಟು ತಿಳಿದವನಲ್ಲ ಆತ. ಆ ಆಂಡ್ರಾಯ್ಡ್ ಫೋನಿನೆದುರು ಬಡಿದಾಡುತಿರುವ ನೋಕಿಯಾದಂತೆ, ತಾನೂ ಈ ಜಗತ್ತಿನ ಹೊಸತನಕ್ಕೆ ಬಗ್ಗದ ಬೆದರದ ವೀರಸೇನಾನಿ ಎಂದುಕೊಳ್ಳುತ್ತಾನೆ. ಮರುದಿನದ ಭರವಸೆಯಿಲ್ಲದ ಜಗತ್ತಿಗೆ ಭವಿಷ್ಯ ಹೇಳುತ್ತಾನೆ.
ಸೂರ್ಯ ತನ್ನ ಪಾಳಿ ಮುಗಿಸಿ ಹೊರಟಾಗಿತ್ತು, ತನ್ನ ದಿನವೂ ಮುಗಿಯಿತೆಂದು ಅವನೂ ಎದ್ದ. ಮಗಳ ಔಷಧಿಗೆ ಹಣವಿಲ್ಲ ಎಂಬುದನ್ನು ನೋಡಿಕೊಂಡು, ಗಿಣಿಯನ್ನೆತ್ತಿಕೊಂಡು ಮನೆಯತ್ತ ಕಾಲು ಹಾಕಿದ.
ಎಸ್.ಜಿ. ಅಕ್ಷಯ್ ಕುಮಾರ್
Facebook ಕಾಮೆಂಟ್ಸ್