ಕ್ಯಾನ್ಸರ್ ಎಂದಾಕ್ಷಣ ನಮಗೆ ಏನು ನೆನಪಾಗಬಹುದು.. ಯಾವುದೋ ಒಬ್ಬ ವ್ಯಕ್ತಿ ಅಸ್ಪತ್ರೆಯಲ್ಲಿ ರೋಗದಿಂದಾಗಿ, ಕೀಮೋ ರೇಡಿಯೇಷನ್’ಗಳಿಂದ ಜರ್ಝರಿತಗೊಂಡು ಮಲಗಿರುವ ಚಿತ್ರ ಕಣ್ಣ ಮುಂದೆ ಬರಬಹುದು. ಆತನ ಮಾನಸಿಕ ತುಮುಲಗಳ ಬಗ್ಗೆ ಯೋಚಿಸಬಹುದು. ಭವಿಷ್ಯದ ಕುರಿತು ಆತನ ಚಿಂತೆಗಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಆದರೆ ಒಂದು ಮುಖ್ಯ ಅಂಶವನ್ನು ಮರೆತು ಬಿಟ್ಟಿರುತ್ತೀವಿ. ಆತನ ಕುಟುಂಬ. ಯಾರಿಗೆ ಗೊತ್ತು ಆತನಿಗೆ ಒಬ್ಬ ಪುಟ್ಟ ಮಗಳಿರಬಹುದು. ಇವೆಲ್ಲದರ ನಡುವೆ ಎಲ್ಲೋ ಒಂದು ಕಡೆ ಆಕೆಯ ಬದುಕು ಬದಲಾಗುತ್ತಿರಬಹುದು.. ಆತನ ಕ್ಯಾನ್ಸರ್ ಈಕೆಯ ಬದುಕಿನ ಮೇಲೂ ಪರಿಣಾಮ ಬೀರುತ್ತಿರಬಹುದು.
ವಾಷಿಂಗ್ಟನ್’ನ ‘ಕ್ಯಾನ್ಸರ್ ಪಾಥ್’ವೇ’ ಎಂಬ ಸಂಸ್ಥೆ ಬಹಳ ವಿನೂತನವಾದ ಒಂದು ಕಾರ್ಯಕ್ರಮವನ್ನ ಹಮ್ಮಿಕೊಳ್ಳುತ್ತದೆ. ಅದರ ಹೆಸರು “ಕ್ಯಾನ್ಸರ್ ಅನ್ರ್ಯಾಪಡ್ ರೈಟಿಂಗ್ ಕಾಂಟೆಸ್ಟ್” ಇಲ್ಲಿ ಕ್ಯಾನ್ಸರ್’ಗೆ ಒಳಗಾಗಿರುವ ವ್ಯಕ್ತಿಯ ಮನೆಯವರು ತಮ್ಮ ಅನುಭವಗಳನ್ನ, ತಮ್ಮ ಭಾವನೆಗಳನ್ನ ಬರವಣಿಗೆಯ ಮೂಲಕ ಹಂಚಿಕೊಳ್ಳುತ್ತಾರೆ. ಮಕ್ಕಳೂ ಕೂಡ ಇದರಲ್ಲಿ ಭಾಗವಹಿಸುತ್ತಾರೆ. ಈ ಬರಹಗಳು ಕುಟುಂಬದವರಿಗೆ ತಮ್ಮ ಒತ್ತಡಗಳಿಂದ, ನೋವಿನಿಂದ ಹೊರ ಬರಲು ಸಹಾಯ ಮಾಡುತ್ತದೆ. ನನಗೆ ಬಹಳ ಕಾಡಿದ ಅಂತಹದೇ ಒಂದು ಬರಹವನ್ನ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಡೆಸ್ಟಿನಿ ಕುಲ್ಮಸ್ ಬರೆದಿರುವ ‘ಅದು ಕೇವಲ ಹುಣ್ಣಾಗಿತ್ತು’ ಎಂಬ ಬರಹದ ಸಾರಾಂಶ ಇಲ್ಲಿದೆ.
“ ಭೀತಿ ಹುಟ್ಟಿಸುವ ಕಾರ್ನಿವಲ್ ರೈಡ್ ಮಾಡುವಾಗ ಗಟ್ಟಿಯಾಗಿ ಅದರ ಹ್ಯಾಂಡಲ್ ಹಿಡಿದುಕೊಂಡು ಕುಳಿತಿರುವಾಗ ಯಾವ ಭಾವ ಮನದಲ್ಲಿರುತ್ತೆ? ಮೊದಲ ಬಾರಿಯಾಗಿದ್ದರಂತೂ ಇದು ನಿಲ್ಲುತ್ತಲೇ ಇಲ್ಲವಲ್ಲ ಎನಿಸುತ್ತಿರುತ್ತದೆ. ಯಾವಾಗ ನಿಲ್ಲುವುದೋ ಎನಿಸುತ್ತಿರುತ್ತದೆ. ನನ್ನ ತಂದೆಯನ್ನ ಕ್ಯಾನ್ಸರ್’ನಿಂದ ಬಳಲುತ್ತಿರುವುದನ್ನ ನೋಡಿ ನನಗೆ ಹಾಗೆ ಅನಿಸುತ್ತಿತ್ತು. ೨೦೦೬, ನಾನು ೧೦ ವರ್ಷದವಳಿದ್ದಾಗ, ನಾನು ನೋಡಿದ ದೃಢ ವ್ಯಕ್ತಿಯೊಬ್ಬ ಮನಸಿನ ಆಳದಲ್ಲೆಲ್ಲೋ ಸ್ವಲ್ಪ ಸತ್ತಿದ್ದ. ಅದು ಕೇವಲ ಹುಣ್ಣಾಗಿತ್ತು ಅಷ್ಟೆ. “ ನಾನು ಕಿವಿಗೆ ಏನೋ ತಾಗಿಸಿಕೊಂಡಿದ್ದೆ. ಇದು ಬೇಗ ಹೊರಟು ಹೋಗುತ್ತದೆ. ಯೋಚಿಸಬೇಡ ” ತಂದೆ ಯಾವಾಗಲೂ ಹೇಳುತ್ತಿದ್ದರು. ಆ ಸಾಲುಗಳು ಅವರಿಗೆ ಅಭ್ಯಾಸವಾಗಿ ಹೋಗಿತ್ತು. “ಡ್ಯಾಡಿ.. ಮತ್ತೆ ನಿಮ್ಮ ಕಿವಿಯಲ್ಲಿ ರಕ್ತ ಬರುತ್ತಿದೆ” ಎನ್ನುತ್ತಿದ್ದ ನನಗೆ, “ಓಹ್.. ಇದು ಬೇಗ ಹೊರಟು ಹೋಗುತ್ತದೆ” ಎನ್ನುತ್ತಿದ್ದರು. ಆದರೆ ಆ “ಬೇಗ” ಎಂಬ ಪದ ವಾರಗಳೇ ಉರುಳಿದರೂ ಬರಲೇ ಇಲ್ಲ. ಅಪ್ಪ ಅಮ್ಮ ಇಬ್ಬರೂ ಈ ವಿಷಯವಾಗಿ ಚರ್ಚೆ ಮಾಡಿಕೊಳ್ಳುವುದು ನನ್ನ ಮಲಗುವ ಕೋಣೆಗೆ ಕೇಳುತ್ತಿತ್ತು. ಆಗಲೂ ಅವರ ಉತ್ತರ ಅದೇ ಆಗಿತ್ತು. ಆದರೆ ಆ ಹುಣ್ಣು ದೊಡ್ಡದಾಗಲಾರಂಭಿಸಿತ್ತು. ಕೊನೆಗೂ ಅಪ್ಪ ತಮ್ಮ ಹಠವನ್ನು ಬಿಟ್ಟು ಆಸ್ಪತ್ರೆಗೆ ತೆರಳಿದ್ದರು. ನನಗಿನ್ನೂ ಆ ದಿನ ನೆನಪಿದೆ. ಅಪ್ಪನಿಗೆ “ಕ್ಯಾನ್ಸರ್” ಎಂಬ ಖಾಯಿಲೆ ಉಂಟಾಗಿದೆ ಎಂದು ಅಮ್ಮ ಹೇಳಿದ್ದಳು. ರಾತ್ರಿ ಮಲಗಿದ್ದಾಗ,”ಅದು ಕೇವಲ ಹುಣ್ಣಾಗಿತ್ತು ಅಷ್ಟೇ ಅಲ್ಲವೇ..?” ಎಂದು ನನ್ನಷ್ಟಕ್ಕೆ ಹೇಳಿಕೊಳ್ಳುತ್ತಿದ್ದೆ.
ನನ್ನ ತಂದೆ ದಿನ ಹೋದಂತೆ ಅಪರಿಚಿತನಾಗುತ್ತಿದ್ದ. ಯಾವಾಗಲೂ ಖುಷಿ-ಖುಷಿಯಾಗಿರುತ್ತಿದ್ದ, ನಮ್ಮನ್ನು ನಗಿಸುತ್ತಿರುತ್ತಿದ್ದ ಅಪ್ಪ ಈಗಿರಲಿಲ್ಲ. ಆತ ಯಾವಾಗಲೂ ಮಂಪರಿನಲ್ಲಿರುವಂತೆ ಇರುತ್ತಿದ್ದ, ಶಾಂತ ಹಾಗೂ ನಿಧಾನಿಯಾಗಿದ್ದ. ಅಮ್ಮ ದಿನವಿಡೀ ಒಂದೇ ಮಾತನ್ನ ಹೇಳುತ್ತಿದ್ದಳು “ಶ್… ಅಪ್ಪ ರೆಸ್ಟ್ ಮಾಡುತ್ತಿದ್ದಾರೆ” ಎಂದು. ಅಪ್ಪನ ಬದುಕು ಮಾತ್ರ ಬದಲಾಗುತ್ತಿರಲಿಲ್ಲ. ನನ್ನ ಹಾಗೂ ನನ್ನ ಪರಿವಾರದವರೆಲ್ಲರ ಬದುಕು ಕೂಡ ಬದಲಾಗುತ್ತಿತ್ತು. ಅಮ್ಮನೇ ಎಲ್ಲರನ್ನು ನೋಡಿಕೊಳ್ಳಬೇಕಾಗಿತ್ತು. ನಾನು ಆಕಡೆ ಈಕಡೆ ಆಡ್ಡಾಡುತ್ತಾ, ಕರೋಕೆ ಹಾಡುತ್ತಾ ಜೋರಾಗಿ ಕಿರುಚಾಡುತ್ತಾ, ಬಾಗಿಲ ಬಳಿ ಅಪ್ಪ ಬರುತ್ತಿದ್ದಂತೆ “ಡ್ಯಾಡಿ…’ ಎಂದು ಕೂಗುತ್ತಾ ಅವರ ಬಳಿ ಓಡುತ್ತಿದ್ದವಳು ಈಗ ಯಾವಾಗಲೂ ಶಾಂತವಾಗಿಯೇ ಇರಬೇಕಾಗಿತ್ತು.
ಡಾಕ್ಟರ್ ಚಿಕಿತ್ಸೆ ಆರಂಭಿಸಿ ಭರವಸೆ ನೀಡಿದ್ದರು. ಪ್ರತಿ ಎರಡು ವಾರಗಳಿಗೊಮ್ಮೆ ರೇಡಿಯೇಷನ್ ಥೆರಪಿ ನೀಡಲಾಗುತ್ತಿತ್ತು. ೧೮ ರೇಡಿಯೇಷನ್ ಆಗುವಷ್ಟರಲ್ಲಿ ಎಲ್ಲವೂ ಬದಲಾಯಿತು. ಈಗ ಅವರು ಅಪರಿಚಿತರಾಗಿರಲಿಲ್ಲ. ಮತ್ತೆ ಮೊದಲಿನಂತಾಗಿದ್ದರು. ಮೊದಲಿನಂತಯೇ ನಮನ್ನ ಖುಷಿ ಪಡಿಸುತ್ತಾ, ಜೋಕ್’ಗಳನ್ನ ಹೇಳುತ್ತಾ ನಮ್ಮೊಟ್ಟಿಗಿರುತ್ತಿದ್ದರು. ಆದರೆ ೨೫ನೇ ರೇಡಿಯೇಷನ್ ಬೇರೆಯೇ ಪರಿಣಾಮ ಬೀರಿತ್ತು. ಅವರು ಬಹಳ ಆಯಾಸಗೊಂಡಿದ್ದರು ಅದರ ನಂತರ. ಹಾಗೆಯೇ ಕಿವಿಯ ಆ ಭಾಗದಲ್ಲಿ ಆಪರೇಷನ್ ಕೂಡ ಆಯಿತು.
೨೦೧೨, ಅಕ್ಟೋಬರ್ ನಾನು ೧೬ ವರ್ಷದವಳು. ಅಪ್ಪನಿಗೆ ಹುಷಾರಿರಲಿಲ್ಲ. ಅತಿಯಾದ ತಲೆ ನೋವಿನಿಂದ ಬಳಲುತ್ತಿದ್ದರು. ಕಿವಿಯ ಹತ್ತಿರವೇ, ಮೊದಲು ಕ್ಯಾನ್ಸರ್ ಆಗಿದ್ದ ಜಾಗದ ಬಳಿಯಲ್ಲೇ ಅತೀವವಾದ ನೋವು. ಈ ಬಾರಿ ಯಾವುದೇ ಹಠ ಮಾಡದೇ ಡಾಕ್ಟರ್ ಬಳಿ ಹೋಗಿದ್ದರು. ಅವರು ಫ್ಲ್ಯೂ ಎಂದರು. ಆದರೆ ೨೧ನೇ ಅಕ್ಟೋಬರ್ ನನ್ನ ಬದುಕು ಇನ್ನಿಲ್ಲದಂತೆ ಬದಲಾಗಿ ಹೋಯಿತು. ಅಂದು ನಾನು ಎದ್ದಿದ್ದು ತಡವಾಗಿತ್ತು. “ಬೇಗ ರೆಡಿಯಾಗು.. ಶಾಲೆ ಬಸ್ ಬರುವ ಹೊತ್ತಾಯಿತು” ಎನ್ನುತ್ತಿದ್ದಳು ಅಕ್ಕ. ನಾನು ತಯಾರಾಗಿ ಹೊರಡಲು ಅನುವಾದಾಗ ರೂಮಿನಲ್ಲಿ ಮಲಗಿದ್ದ ಅಪ್ಪನಿಗೆ ಅಕ್ಕ ಗುಡ್ ಬೈ ಹೇಳುತ್ತಿದ್ದಳು. ಆದರೆ ನಾನು ಮಾತ್ರ ಬಸ್ ತಪ್ಪಿ ಹೋದೀತೆಂಬ ಭಯದಲ್ಲಿ ಅಪ್ಪನಿಗೆ ಹೇಳದೆ ಹಾಗೆ ಹೊರಟು ಹೋಗಿದ್ದೆ. ಇಂದಿಗೂ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ.
ಆ ರಾತ್ರಿ ನಾನು ಅಳುತ್ತಿದ್ದೆ, ನನ್ನ ಕಣ್ಣುಗಳನ್ನು ಆ ಕಡೆಗೆ ನೋಡಬಾರದೆಂದು ಬೇಡಿಕೊಳ್ಳುತ್ತಿದ್ದೆ. ಅಪ್ಪ ಹಾಸಿಗೆಯ ಮೇಲೆ ನೋವಿನಿಂದ ನರಳುತ್ತಾ ಕೂಗಿಕೊಳ್ಳುತ್ತಿದ್ದರು. ಮೀನನ್ನು ನೀರಿನಿಂದ ಹೊರ ತೆಗೆದಾಗ ಅದು ಒದ್ದಾಡುತ್ತದಲ್ಲ ಅದೇ ರೀತಿಯಲ್ಲಿದ್ದರು ಅಪ್ಪ. ನಾನು ಯಾವತ್ತೂ ಅವರನ್ನ ಆ ಸ್ಥಿತಿಯಲ್ಲಿ ನೋಡಿರಲಿಲ್ಲ. ತಕ್ಷಣವೇ ಆಸ್ಪತ್ರೆಗೆ ಕರೆ ತರಲಾಯಿತು. ಕೆಲವರು ಬಂದು ಅವರನ್ನ ಸ್ಟ್ರೆಚರ್’ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಸುಮ್ಮನೆ ಅವರನ್ನ ಹಿಂಬಾಲಿಸುತ್ತಿದ್ದೆ. ಎಷ್ಟೋ ಸಮಯದ ನಂತರ ಡಾಕ್ಟರ್ ಬಂದು ಹೇಳಿದ್ದರು. ರೇಡಿಯೇಷನ್ ಸರಿಯಾಗಿ ಆಗದಿದ್ದರ ಪರಿಣಾಮ ಅವರಿಗೆ ಸ್ಟ್ರೋಕ್ ಆಗಿದೆ ಎಂದು. ಮೆದುಳಿನ ಕೆಲ ಭಾಗ ಸಾಕಷ್ಟು ಡ್ಯಾಮೇಜ್ ಆಗಿತ್ತು. ಸಾವು ದೂರವಿಲ್ಲ ಎಂದರು ಡಾಕ್ಟರ್. ಮೂರು ವಾರಗಳ ಕಾಲ ಅವರು ಕೋಮಾದಲ್ಲಿದ್ದರು. ಕೋಮಾದಿಂದ ಹೊರ ಬಂದರೂ ಕೂಡ ಆವರು ಈಗ ಬೇರೆಯೇ ವ್ಯಕ್ತಿಯಾಗಿದ್ದರು. ಮತ್ತೆ ಅಪರಿಚಿತ..ಯಾವಗಲೂ ಹಾಸಿಗೆಯ ಮೇಲೆ ಇರುವಂತಾಗಿದ್ದರು. ನನಗೆ ಮತ್ತೆ ಯಾವತ್ತೂ ತಂದೆಯ ಅನುಭವವಾಗಲೇ ಇಲ್ಲ…
ಇದೆಲ್ಲದರ ನಡುವೆ ನಾನು ವೈಯಕ್ತಿಕವಾಗಿ ಬೆಳೆಯುತ್ತಾ ಹೋದೆ. ಸವಾಲುಗಳನ್ನ ಎದುರಿಸುವುದನ್ನ ಕಲಿಯುತ್ತಾ ಹೋದೆ. ತಂದೆಯಿಲ್ಲದೆ ಇರುವುದು ಹೇಗೆ ಎಂದು ನಿರಂತರವಾಗಿ ನನ್ನನ್ನ ನಾನು ಪ್ರಶ್ನಿಸಿಕೊಳ್ಳುತ್ತಲೇ ಇದ್ದೆ. ಅವರು ಮಗುವಿನಂತಾಡಿದರೂ ತಂದೆಯಂತೆಯೇ ನೋಡಿಕೊಳ್ಳುವುದನ್ನ ಕಲಿತೆ. ಅವರು ತಮ್ಮ ಹತಾಶೆಯಲ್ಲಿ ನಮಗೆ ನೋವುಂಟಾಗುವಂತೆ ಮಾತನಾಡಿದರೂ ಸಹಿಸಿಕೊಳ್ಳುವುದನ್ನ ಕಲಿತೆ. ಇನ್ನಷ್ಟು ಕೇರಿಂಗ್ ಆಗಿರುವುದನ್ನ ಕಲಿತೆ. ‘ಬದುಕು ಹೀಗೆ ಸಾಗುವುದು’ ಎಂಬುದನ್ನೂ ಕಲಿತೆ. ಇಂತಹ ಸವಾಲುಗಳೇ ನಾವೇನಾಗುತ್ತೇವೆ ಎಂಬುದನ್ನ ನಿರ್ಧರಿಸುತ್ತದೆ. ಅವುಗಳನ್ನ ತಾಳಿಕೊಳ್ಳುವುದನ್ನ ಕಲಿಯಬೇಕು ಆಗಲೇ ನಾವು ಇನ್ನಷ್ಟು ದೃಢವಾಗುವುದು. ಇಲ್ಲದಿದ್ದಲ್ಲಿ ನಾವು ಇನ್ನಷ್ಟು ದೃಢವಾಗಲು ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ ಹಾಗೂ ಮುಂಬರುವ ಸವಾಲುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನ ಪಡೆಯುವುದೇ ಇಲ್ಲ.
ನನಗೀಗ ೧೮ ವರ್ಷ. ನಾನಿನ್ನೂ ಕಾರ್ನಿವಲ್ ರೈಡ್’ನಲ್ಲಿರುವಂತೆಯೇ ಭಾಸವಾಗುತ್ತದೆ. ಆದರೆ ಈಗದು ಅಭ್ಯಾಸವಾಗಿಬಿಟ್ಟಿದೆ. ಮೊದಲಿನಂತೆ ಭಯವಾಗುವುದಿಲ್ಲ. ಯಾಕೆಂದರೆ ನಾನೀಗ ಅದಕ್ಕೆ ತಯಾರಾಗಿದ್ದೇನೆ ಮತ್ತು ದೃಢವಾಗಿದ್ದೇನೆ. ದೇವರಿಗೆ ಗೊತ್ತು ನಾವು ಇಂತಹ ಸವಾಲುಗಳನ್ನ ಎದುರಿಸಬಲ್ಲೆವು ಅಂತ ಅದಕ್ಕಾಗಿಯೇ ಅವುಗಳನ್ನ ನಮ್ಮ ಮುಂದಿಡುತ್ತಾನೆ. “
Facebook ಕಾಮೆಂಟ್ಸ್