X
    Categories: ಕಥೆ

ಹೀಗೊಂದು ಕಥೆ

ಛಲ ಬಿಡದ ರಾಜಾ ವಿಕ್ರಮನು ಮರದ ಮೇಲಿದ್ದ ಬೇತಾಳವನ್ನು ಇಳಿಸಿ ಹೆಗಲಿಗೆ ಹಾಕಿಕೊಂಡು ಮಾಂತ್ರಿಕನಿರುವೆಡೆ ಹೊರಟನು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಬೇತಾಳವು ಮಾತನಾಡಲಾರಂಭಿಸಿತು. “ಎಲೈ ರಾಜೋತ್ತಮನೇ, ನಿನ್ನ ಸಾಹಸ, ಪರಾಕ್ರಮಗಳಿಗೆ ಮೆಚ್ಚಿದೆನು. ಈ ರಾತ್ರಿಯಲ್ಲಿ ನನ್ನನ್ನು ಹೊತ್ತೊಯ್ದೇ ತೀರುವೆನೆಂಬ ನಿನ್ನ ಛಲವು ಪ್ರಶಂಸೆಗೆ ಮಿಗಿಲಾದದ್ದು. ಇರಲಿ. ಪ್ರಯಾಣದ ಆಯಾಸ ತಿಳಿಯದಿರಲೆಂದು ಕಥೆಯೊಂದನ್ನು ಹೇಳುತ್ತೇನೆ ಕೇಳು.

ಅದೊಂದು ರಾಜ್ಯ. ಆ ರಾಜ್ಯದ ಜನರು ಪರಂಪರೆಯಿಂದ ಹಲವಾರು ಸಂಪ್ರದಾಯಗಳನ್ನು ಪಾಲಿಸಿಕೊಂದು ಬರುತ್ತಿದ್ದರು. ಒಂದು ವಿಶೇಷ ಬಗೆಯ ಪಾಯಸ ಮಾಡಿ ಕುಡಿಯುವುದೂ ಅವುಗಳಲ್ಲಿ ಒಂದು. ಆ ರಾಜ್ಯದಲ್ಲಿ ನಿರುದ್ಯೋಗಿಗಳ ಗುಂಪೇ ಇತ್ತು. ಅವರನ್ನು ಬುದ್ಧಿಜೀವಿಗಳು, ವಿಚರವಾದಿಗಳು, ಪ್ರಗತಿಪರರು ಎಂದೆಲ್ಲ ಅವರೇ ಘೋಷಿಸಿಕೊಂಡಿದ್ದರು. ರಾಜ್ಯದ ಸಂಸ್ಕøತಿ ಪರಂಪರೆಯನ್ನು ಹೀಯಾಳಿಸುವುದು, ವಿರೋಧಿಸುವುದೇ ಇವರ ಕೆಲಸ. ಹಾಗಾಗಿ ಈ ಪಾಯಸ ಮಾಡಿ ಕುಡಿಯುವುದನ್ನು ಮೂಡನಂಬಿಕೆ, ಅಂಧಾನುಕರಣೆ ಎಂದೆಲ್ಲಾ ತೆಗಳುತ್ತಾ ಇರುತ್ತಿದ್ದರು. ಹಾಗಾಗಿ ಯುವ ಪೀಳಿಗೆ ಸಂಪ್ರದಾಯವನ್ನು ಬಿಡುತ್ತಾ ಬರುತ್ತಿತ್ತು. ಹೀಗೇ ಹಲವಾರು ವರ್ಷ ಕಳೆಯಿತು.  ಈ ಪಾಯಸದಲ್ಲಿ ಔಷಧೀಯ ಗುಣಗಳಿರುವುದು ಅದು ಹೇಗೋ ಇತರ ರಾಜ್ಯದವರಿಗೆ ತಿಳಿಯಿತು. ನಿಧಾನವಾಗಿ ಇತರ ರಾಜ್ಯಗಳಲ್ಲೂ ಈ ಪಾಯಸ ಕುಡಿಯುವ ಪದ್ಧತಿ ಜಾರಿಗೆ ಬರುತ್ತದೆ. ಅದನ್ನು ನೋಡಿ ಈ ರಾಜ್ಯದಲ್ಲೂ ಹಲವರು ಪಾಯಸ ಮಾಡುವುದನ್ನು ಪುನರಾರಂಭಿಸಿದರು. ಈ ಮಧ್ಯೆ ರಾಜ್ಯದ ರಾಜಕೀಯದಲ್ಲಿ ಬದಲಾವಣೆಗಳಾಗುತ್ತವೆ. ಪಾಳೇಗಾರನಾಗಿದ್ದ ಒಬ್ಬನನ್ನು ಜನರೇ ಸೇರಿ ರಾಜ್ಯದ ಸಿಂಹಾಸನಕ್ಕೆ ತಂದು ಕೂರಿಸಿ ಪಟ್ಟಾಭಿಷೇಕ ನೆರವೇರಿಸಿದರು. ಆತ ದಕ್ಷ ಆಡಳಿತಗಾರನಾಗಿದ್ದು ಹೊರ ರಾಜ್ಯಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಅಚ್ಚರಿಯೆನ್ನಿಸುವಷ್ಟು ಉತ್ತಮಗೊಳಿಸುತ್ತಾನೆ. ಪಾಯಸ ಕುಡಿಯುವ ಪದ್ಧತಿ ಇತರ ರಾಜ್ಯಗಳಲ್ಲೂ ಹೆಚ್ಚಾಗಿರುವುದನ್ನು ಗಮನಿಸಿದ ರಾಜ ಆ ಪದ್ಧತಿಯ ಅಗತ್ಯತೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಜಾಗೃತಿ ದಿನವನ್ನು ಪ್ರಪಂಚದಾದ್ಯಂತ ಆರಂಭಿಸಬೇಕೆಂದು ಇತರ ರಾಜ್ಯದ ರಾಜರಿಗೆ ಸಲಹೆ ನೀಡಿದ. ಅದನ್ನು ಸಣ್ಣ ಪುಟ್ಟ ದೊರೆಗಳಿಂದ ಹಿಡಿದು ದೊಡ್ಡ ದೊಡ್ಡ ಸಾಮ್ರಾಟರು, ಚಕ್ರವರ್ತಿಗಳು ಎಲ್ಲರೂ ಖುಷಿಯಿಂದ ಒಪ್ಪಿಕೊಂಡರು. ಇದನ್ನು ತಿಳಿದ ವಿಚಾರವಾದಿ ಗುಂಪಿಗೆ ಮುಖಭಂಗ, ಹೊಟ್ಟೆ ಉರಿ ತಡೆಯಲಾಗುವಿಲ್ಲ. ಅಲ್ಲಿರುವ ಕೆಲವರು ಸಂಪ್ರದಾಯ ವಿರೋಧಿಗಳು, ಅವರಿಗೆ ತಾವು ಹೀಗಳೆಯುತ್ತಿದ್ದ ಸಂಪ್ರದಾಯಕ್ಕೆ ವಿಶ್ವಮಾನ್ಯತೆ ಬಂತಲ್ಲಾ ಎಂಬ ಹೊಟ್ಟೆ ಉರಿ. ಇನ್ನು ಕೆಲವರು ರಾಜ ವಿರೋಧಿಗಳು, ಅವರಿಗೆ ಈ ಪಾಯಸದಿಂದಾಗಿ ರಾಜನ ಬೆಲೆ ಹೆಚ್ಚಾಯಿತಲ್ಲಾ ಎಂಬ ಆತಂಕ. ಮತ್ತೊಂದಿಷ್ಟು ಜನ ರಾಷ್ಟ್ರವಿರೋಧಿಗಳು, ದೇಶದ್ರೋಹಿಗಳು. ಅವರಿಗೆ ರಾಜ್ಯದ ಘನತೆ ಗೌರವ ಉನ್ನತಿಯಾಗಿ ಬಿಡುವುದೆಂಬ ಸಮಸ್ಯೆ. ಇನ್ನು ಕೆಲ ಪ್ರಚಾರಪ್ರಿಯರಿಗೆ ಇಲ್ಲೊಂದಿಷ್ಟು ವಿರೋಧ ಮಾಡಿ ಪ್ರಚಾರ ಪಡೆಯುವ ಹಂಬಲ. ಮತ್ತೂ ಕೆಲವರಿಗೆ ನಾಲಿಗೆ ಚಪಲ. ದುರುಳರೆಲ್ಲಾ ಒಂದಾದರು. ಪಾಯಸ ವಿರೋಧಿ ಅಭಿಯಾನವನ್ನು ಆರಂಭಿಸಿದರು. “ಪಾಯಸಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದಕ್ಕೆ ಹಾಕುವ ಸಿಹಿಗೆ ಮಾತ್ರ ನಮ್ಮ ವಿರೋಧವಿದೆ. ನಾವು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ರಾಜ ನಿರ್ಧರಿಸಲು ಹೇಗೆ ಸಾಧ್ಯ? ಪಾಯಸಕ್ಕೆ ಸಿಹಿ ಹಾಕ ಬೇಕೆನ್ನುವುದು ಮತಾನುಚಾರಣೆಯ ಹೇರಿಕೆ. ರಾಜನು ತನ್ನ ನಂಬಿಕೆಗಳನ್ನು ಇತರರ ಮೇಲೆ ಹೇರುತ್ತಿದ್ದಾನೆ. ಇದು ರಾಜ ಮಾಡುತ್ತಿರುವ ದೌರ್ಜನ್ಯ” ಇತ್ಯಾದಿಯಾಗಿ ವಾದ ಮಾಡ ತೊಡಗಿದರು. ಎಲೈ ರಾಜನೇ, ಇವರು ದುಷ್ಟರೇ ಹೌದಾದರೂ ಇವರ ಪ್ರಶ್ನೆಗಳು ಸರಿಯಾಗಿಯೇ ಇರುವಂತೆ ಕಾಣಿಸುವುದಿಲ್ಲವೇ? ರಾಜನು ಹೀಗೆ ಮಾಡುವುದರಿಂದ ರಾಜ ತನ್ನ ನಂಬಿಕೆಯನ್ನು ಪ್ರಜೆಗಳ ಮೇಲೆ ಹೇರಿದಂತಾಗುವುದಿಲ್ಲವೇ? ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಿಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ನೀನು ತಿಳಿದು ಉತ್ತರಿಸದೇ ಹೋದರೆ ನಿನ್ನ ತಲೆ ಸಿಡಿದು ಸಾವಿರ ಹೋಳಾಗುತ್ತದೆ” ಎನ್ನುತ್ತಾ ಬೇತಾಳ ತನ್ನ ಮಾತನ್ನು ನಿಲ್ಲಿಸಿತು.

ಬೇತಾಳದ ಪ್ರಶ್ನೆಯನ್ನು ಕೇಳಿದ ವಿಕ್ರಮಾದಿತ್ಯನು ಉತ್ತರಿಸಲಾರಂಭಿಸಿದನು. ” ಎಲೈ ಬೇತಾಳವೇ, ಎಂದಿನಂತಲ್ಲದೆ ಈ ಬಾರಿಯ ನಿನ್ನ ಪ್ರಶ್ನೆಗಳು ಅತ್ಯಂತ ಸರಳವಾಗಿರುವವು. ಹಾಗೆ ನೋಡಿದರೆ ನಿನ್ನ ಕಥೆಯಲ್ಲೇ ಉತ್ತರ ಸಿಗುವಾಗ ನಾನು ಉತ್ತರಿಸುವ ಅಗತ್ಯವೇ ಕಾಣುತ್ತಿಲ್ಲ. ಆದರೂ ನಿನ್ನ ಬೇಡಿಕೆಯಂತೆ ಉತ್ತರಿಸುತ್ತಿದ್ದೇನೆ ಕೇಳು. ಮೊದಲನೆಯದಾಗಿ, ವಿಶಿಷ್ಟವಾದ ಪಾಯಸ ಮಾಡಿ ಕುಡಿಯುವುದು ಆ ರಾಜ್ಯದ ಜನರ ಸಂಪ್ರದಾಯ. ಅದರಿಂದ ಯಾರಿಗೂ ತೊಂದರೆಯೇನೂ ಇಲ್ಲವಷ್ಟೇ. ಹಾಗಿರುವಾಗ ಅದನ್ನು ಮುಂದುವರೆಸಲು ಯಾವ ವೈಜ್ಞಾನಿಕ ಕಾರಣಗಳೂ ಬೇಕಾಗಿಯೇ ಇಲ್ಲ. ಮತ್ತೆ, ರಾಜನು ಪಾಯಸ ಕುಡಿಯುವುದರಿಂದಾಗುವ ಪ್ರಯೋಜನಗಳ ಬಗೆಗೆ ಅರಿವು ಮೂಡಿಸುವ ಪ್ರಯತ್ನ ಮಾಡಿರುವುದು ಸರಿಯಾಗಿಯೇ ಇರುವುದು. ಆರೋಗ್ಯ ಕಾಪಾಡಿಕೊಳ್ಳುವುದು ಜನರ ವೈಯಕ್ತಿಕ ವಿಚಾರವೇ ಹೌದಾದರೂ, ರಾಜನು ತನ್ನ ಪ್ರಜೆಗಳ ಆರೊಗ್ಯದ ಬಗೆಗೆ ಕಾಳಜಿ ತೋರಿರುವುದು ತಪ್ಪೇನೂ ಅಲ್ಲ, ಬದಲಿಗೆ ಪ್ರಶಂಸನೀಯವದದ್ದು. ಇಲ್ಲಿ ಕೇಳಿ ಬರುತ್ತಿರುವ ವಿರೋಧ ಕೇವಲ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಎಂಬುದು ವೇದ್ಯವಾಗುತ್ತದೆ. ರಾಜ ಇಲ್ಲಿ ಏನನ್ನೂ ಹೇರಿಕೆ ಮಾಡಿರುವುದು ಕಾಣಿಸುವುದಿಲ್ಲ. ಪಾಯಸವನ್ನು ಮಾಡುವ ಅಥವಾ ಮಾಡದಿರುವ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ. ಸಿಹಿ ಬೇಡ ಎನ್ನುವವರು ಸಕ್ಕರೆ ಹಾಕದಿದ್ದರೆ ಅಥವಾ ಸಿಹಿ ಬದಲು ಮೆಣಸಿನ ಪುಡಿಯನ್ನೋ, ಕಹಿ ಜೀರಿಗೆಯನ್ನೋ ಹಾಕಿದರೆ ಅದನ್ನು ಯಾರೂ ವಿರೋಧಿಸುವುದಿಲ್ಲ. ಹಾಗಾಗಿ ಇದು ಯಾವ ರೀತಿಯಲ್ಲೂ ಹೇರಿಕೆಯಾಗುವುದಿಲ್ಲ. ಇದು ಒಂದೇ ಅಂತ ಅಲ್ಲ, ಯಾವ ಸಲಹೆಗಳೂ ಹೇರಿಕೆ ಎನ್ನಿಸಿಕೊಳ್ಳಲಾರದು. ಇಲ್ಲಿ ನಾವು ಗಮನಿಸದಿರುವ ಮತ್ತೊಂದು ಅಂಶವೂ ಇದೆ. ರವೆ,ತುಪ್ಪ, ಹಾಲು, ಸಕ್ಕರೆ ಇವೆಲ್ಲಾ ಸೇರಿ ಪಾಯಸ ಅನ್ನಿಸಿಕೊಳ್ಳುತ್ತದೆ, ಅಲ್ಲವೇ? ಸಕ್ಕರೆಯನ್ನೇ ಹಾಕದಿದ್ದ ಮೇಲೆ ಅದು ಪಾಯಸ ಅನ್ನಿಸಿಕೊಳ್ಳುವುದಾದರೂ ಹೇಗೆ? ಅದು ಮೆಣಸಿನ ಕಷಾಯವೋ, ಜೀರಿಗೆಯ ಕಹಿಯೋ ಅಥವಾ ಮತ್ತೇನೋ ಆಗುತ್ತದೆಯೇ ಹೊರತು ಪಾಯಸವಾಗುವುದಿಲ್ಲ. ಹಾಗಾಗಿ ಪಾಯಸಕ್ಕೆ ವಿರೋಧವಿಲ್ಲ, ವಿರೋಧ ಪಾಯಸದ ಸಿಹಿಗೆ ಎಂಬ ಮಾತುಗಳು ಅವರ ದುರ್ಭುದ್ಧಿಯನ್ನಷ್ಟೇ ತೋರಿಸುವುದಿಲ್ಲ, ಬುದ್ಧಿಗೇಡಿತನವನ್ನೂ ತೋರಿಸುತ್ತವೆ. ಎಲೈ ಬೇತಾಳವೇ, ಈ ರೀತಿಯ ರಾಜ ವಿರೋಧಿ, ರಾಷ್ಟ್ರ ವಿರೋಧಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಮುಂದೆ ಯೋಗ ವಿಶ್ವವಿಖ್ಯಾತವಾದಾಗ ಭಾರತದಲ್ಲಿ ಇದೇ ರೀತಿಯ ವಿರೋಧಗಳಾಗುತ್ತವೆ. ಯೋಗವನ್ನು ಒಪ್ಪುತ್ತೇವೆ, ಆದರೆ ಧ್ಯಾನ, ಶಾಂತಿಮಂತ್ರಗಳು, ಓಂಕಾರ ಇತ್ಯಾದಿಗಳು ಸರಿಯಲ್ಲ ಎನ್ನುವವರು ಬರುತ್ತಾರೆ. ಹಲವು ಪ್ರಾಣಾಯಾಮಗಳು ಓಂಕಾರವನ್ನೇ ಅವಲಂಬಿಸಿವೆ. ಪತಂಜಲಿ ಋಷಿಗಳು ಅದಕ್ಕೊಂದು ಕ್ರಮ ಅಂತ ಮಾಡಿದ್ದಾರಲ್ಲಾ? ಹಾಗೆಯೇ ಮಾಡಿದಾಗ ಮಾತ್ರ ಅದು ಯೋಗ ಅನ್ನಿಸಿಕೊಳ್ಳುತ್ತದೆ, ಶಾರೀರಿಕ, ಮಾನಸಿಕ ನೆಮ್ಮದಿ ದೊರೆಯುತ್ತದೆ. ಅವೆಲ್ಲವನ್ನೂ ಬಿಟ್ಟರೆ ಅದು ಯೋಗ ಹೇಗಾಗುತ್ತದೆ? ಶಾರೀರಿಕ ಶ್ರಮವಾಗುತ್ತದೆ, ಅಷ್ಟೇ. ಯಕ್ಷಗಾನಕ್ಕೆ ಒಪ್ಪಿಗೆ ಇದೆ ಆದರೆ ಭಾಗವತಿಕೆ ಇರಬಾರದು, ಭರತನಾಟ್ಯಕ್ಕೆ ಒಪ್ಪಿಗೆ ಇದೆ ಆದರೆ ಕುಣಿತ ಇರಬಾರದು, ಚದುರಂಗದಾಟಕ್ಕೆ ಒಪ್ಪಿಗೆ ಇದೆ ಆದರೆ ಚದುರಂಗದ ಕಾಯಿಗಳಿರಬಾರದು, ಊಟಕ್ಕೆ ಒಪ್ಪಿಗೆಯಿದೆ ಅದರೆ ಅನ್ನ ಇರಬಾರದು ಎಂದರೆ ಹೇಗಾಗುತ್ತದೆಯೋ ಇದೂ ಹಾಗೆಯೇ.” ಇಷ್ಟು ಹೇಳಿ ವಿಕ್ರಮಾದಿತ್ಯದನು ತನ್ನ ಉತ್ತರವನ್ನು ಮುಗಿಸಿದನು. ಹೀಗೆ ವಿಕ್ರಮನ ಮೌನಭಂಗವಾದೊಡನೆ ಬೇತಾಳವು ಹಾರಿ ಹೋಗಿ ಮರಕ್ಕೆ ನೇತಾಡತೊಡಗಿತು.

Sumukha S

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post