X
    Categories: ಕಥೆ

ರಾಜ ಸನ್ಯಾಸಿ ಭಾಗ 3

ರಾಜ ಸನ್ಯಾಸಿ ಭಾಗ 2

1929 ರಲ್ಲಿ ಜಯದೇವಪುರಕ್ಕೆ ವಾಪಸ್ ಆಗಿ ಆತ ತನ್ನ ಅಕ್ಕ ಹಾಗೂ ಅಜ್ಜಿಯೊಡನೆ ಜೀವನವನ್ನು ಪ್ರಾರಂಭಿಸಿದ. ರಾಜನಾಗಿ ಅಧಿಕಾರ ವಹಿಸಿಕೊಂಡು ಆತ ಖಜಾನೆಗೆ ಸಲ್ಲಬೇಕಾಗಿದ್ದ ತೆರಿಗೆ ಕಂದಾಯಗಳನ್ನು ಪ್ರಜೆಗಳಿಂದ ಸಂಗ್ರಹಿಸಲು ಪ್ರಾರಂಭಿಸಿದ. ಆದರೆ ಸತ್ಯೇಂದ್ರನಾಥನು ಕೋರ್ಟ್ ಮೊರೆ ಹೊಕ್ಕು ಭವಲ್ ಸನ್ಯಾಸಿಯು ಜಯದೇವ ಪುರವನ್ನು ಪ್ರವೇಶಿಸದಂತೆ 144ನೇ ಸೆಕ್ಷನ್ ಅಡಿಯಲ್ಲಿ ಆದೇಶವನ್ನು ಹೊರಡಿಸಿದ. ನಂತರ ಈ ನಿರ್ಬಂಧವು ಇಡೀ ಭವಲ್ ಪ್ರಾಂತ್ಯಕ್ಕೆ ವಿಸ್ತರಿಸಲ್ಪಟ್ಟಿತು. ಆಗ ರಾಜನು 1930 ರಲ್ಲಿ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳ ನೆರವಿನೊಂದಿಗೆ ಢಾಕಾದ ಸೆಷನ್ಸ್ ಕೋರ್ಟ್’ನಲ್ಲಿ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ದಾಖಲಿಸಿದ.

ಭವಲ್ ಸನ್ಯಾಸಿಯ ಪರ ವಕೀಲ ರಾಗಿದ್ದವರು ಖ್ಯಾತ ಬಿ ಸಿ ಚಟ್ಟರ್ಜಿಯವರು, ತಮ್ಮ ಬಲಶಾಲಿಯಾದ ವಾದ ಹಾಗೂ ಗೆಲುವುಗಳಿಗೆ ಪ್ರಖ್ಯಾತರಾದವರು.1930 ಏಪ್ರಿಲ್ 24 ರಂದು ಈ ಕೇಸಿನ ವಿಚಾರಣೆ ಪ್ರಾರಂಭವಾಯಿತು. ಅಲ್ಲಿಂದ ಸತತ 6 ವರ್ಷಗಳ ಕಲ ಇದು ಅಬಾಧಿತವಾಗಿ ಮುಂದುವರೆಯಿತು. ಒಟ್ಟೂ 1609 ಸಾಕ್ಷಿಗಳನ್ನು ಹಾಗು 2000 ಕ್ಕೂ ಹೆಚ್ಚು ಸಾಕ್ಷ್ಯ ವಸ್ತುಗಳನ್ನು ಹಾಜರು ಪಡಿಸಲಾಯ್ತು. ಬ್ಲಿಟ್ಜ್ ಪತ್ರಿಕೆ ವರದಿ ಮಾಡಿದಂತೆ “ಸಾಕ್ಷಿ ಹೇಳಲು ಬಂದಿದ್ದವರ ವಯಸ್ಸು 21 ರಿಂದ 100 ರ ತನಕ ಇತ್ತು. ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್,ಪಾರ್ಸಿ,ಸಿಖ್ಖರು,ನಾಸ್ತಿಕರು,ನಾಗಾ ಸನ್ಯಾಸಿಗಳು,ಸಾಧುಗಳು ಹೀಗೆ ಎಲ್ಲ ಜಾತಿ ವರ್ಗಗಳ ಜನರೂ ಬಂದಿದ್ದರು. ಡಾಕ್ಟರ್,ಇಂಜಿನಿಯರ್,ಛಾಯಾಗ್ರಾಹಕ,ಚಮ್ಮಾರ,ಬಡಗಿ,ಸೇವಕ,ಶಿಲ್ಪಿ,ಜಮೀನ್ದಾರ,ದಲ್ಲಾಳಿ,ಪ್ರಾಧ್ಯಾಪಕ,ಪಂಡಿತ,ಮೀನುಗಾರ ಹೀಗೆ ಎಲ್ಲ ವೃತ್ತಿಯ ಜನರೂ ಸಾಕ್ಷ್ಯ ನುಡಿದರು. ಭವಲ್ ಸನ್ಯಾಸಿಯ ಬಗ್ಗೆ ಮತ್ತಷ್ಟು ತಿಳಿಯಲು ಅವನು ‘ಸಾಯುವುದಕ್ಕಿಂತ’ ಮೊದಲು ಸಹವಾಸ ಮಾಡಿದ್ದ ವೇಶ್ಯೆಯರ ಮಾತನ್ನೂ ಕೇಳಲಾಯಿತು.

ಈ ಪ್ರಕರಣವು ಎಷ್ಟೊಂದು ಕ್ಲಿಷ್ಟಕರವಾಗಿತ್ತೆಂದರೆ ಇದನ್ನು ಬಗೆಹರಿಸಲು ಸ್ಕಾಟ್ಲೆಂಡ್ ಯಾರ್ಡ್’ನ್ನು ಕರೆಸಲಾಯಿತು. 1905 ರಲ್ಲಿ ರಾಜಕುಮಾರ ಹೆಸರಿನಲ್ಲಿ ಇನ್ಶ್ಯೂರೆನ್ಸ್ ದಾಖಲಿಸಿದ್ದ ಸ್ಕಾಟಿಷ್ ಯೂನಿಯನ್ ಇನ್ಶ್ಯೂರೆನ್ಸ್ ಕಂಪೆನಿಯೂ ಕೂಡ ಸಾಧುವಿನ ಮೈಮೇಲೆ ಇದ್ದ ಗುರುತುಗಳು ರಾಜಕುಮಾರನದ್ದೇ ಎಂದು ಧೃಢಪಡಿಸಿತು. ಬಾಬಾಜಿ 1921 ರಲ್ಲಿ ಢಾಕಾದಲ್ಲಿ ಐದು ದಿನಗಳ ಕಾಲ ವಾಸ್ತವ್ಯ ಹೂಡಿದ್ದಾಗ ನೀಡಿದ ಹೇಳಿಕೆಗಳ ದಾಖಲೆಗಳನ್ನೂ ಸಮಗ್ರ ವಿಚಾರಣೆಗೆ ಒಳಪಡಿಸಲಾಯಿತು. ಬಾಬಾ ಧರಮ್’ದಾಸ್ ತನ್ನನ್ನು ಹೇಗೆ ಬದುಕಿಸಿ ವಾಪಸ್ಸು ಢಾಕಾಗೆ ಕಳುಹಿಸಿದರೆಂದು ಭವಲ್ ಸನ್ಯಾಸಿ ವಿಸ್ತಾರವಾದ ಹೇಳಿಕೆಯನ್ನು ನೀಡಿದ. ಅವನು ನೀಡಿದ ಹೇಳಿಕೆಯನ್ನು ಬಾಬಾಜಿಯ ಶಿಷ್ಯಂದಿರಾದ ಬಾಬಾ ದರ್ಶನ್ ದಾಸ್, ಬಾಬಾ ಲೋಕ್ ದಾಸ್, ಬಾಬಾ ಪ್ರೀತಮ್ ದಾಸ್ ಕೂಡ ಖಚಿತಪಡಿಸಿದರು.ರಾಜಕುಮಾರನ ಅಜ್ಜಿ,ಸಹೋದರಿ,ಹಿರಿಯ ಅಣ್ಣನ ಹೆಂಡತಿ,ರಾಜಮನೆತನದ ನೂರಾರು ವ್ಯಕ್ತಿಗಳು,ನೆರೆ ರಾಜ್ಯದ ರಾಜರು,ಅರಮನೆಯ ಸೇವಕರು,ನೂರಾರು ಸಾರ್ವಜನಿಕ ವ್ಯಕ್ತಿಗಳು ಕೂಡ ಭವಲ್ ಸನ್ಯಾಸಿಯೇ ಮೇಜೋ ಕುಮಾರನೆಂದು ಸಾಕ್ಷ್ಯ ನುಡಿದರು.

ಭವಲ್ ಸನ್ಯಾಸಿಯ ಪ್ರಕರಣವು ದೀರ್ಘವಾಗಿದ್ದು ಸಾಕಷ್ಟು ಏರಿಳಿತ ಗಳನ್ನು ಕಂಡ ಪ್ರಕರಣವಾಗಿದೆ. ಎರಡನೇ ವಿಶ್ವ ಯುದ್ಧವೂ ವಿಚಾರಣೆ ವಿಳಂಬವಾಗಲು ಕಾರಣವಾಯಿತು. ಸರಕಾರದ ಕಡೆಯಿಂದ ಕೋರ್ಟ್ ಆಫ್ ವಾರ್ಡ್ಸ್ ಸನ್ಯಾಸಿಯ ವಿರುದ್ಧ ದಾವೆ ಹೂಡಿತ್ತು. ಒಬ್ಬ ಅನಕ್ಷರಸ್ಥ ವ್ಯಕ್ತಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರಲು ಸಾಧ್ಯವೇ ಇಲ್ಲ ಎಂದು ಪ್ರತಿವಾದಿಗಳು ವಾದಿಸಿದರು. ಆದರೆ ಭವಲ್ ಸನ್ಯಾಸಿಗೆ ತಕ್ಕ ಮಟ್ಟಿಗೆ ಓದಲು ಹಾಗೂ ಬರೆಯಲು ಬರುತ್ತಿತ್ತು. ಸನ್ಯಾಸಿ ಹಾಗೂ ರಾಜಕುಮಾರನ ಕಣ್ಣಿನ ಬಣ್ಣದ ಬಗ್ಗೆಯೂ ಸಾಕಷ್ಟು ವಾದ ವಿವಾದಗಳಾದವು. ಭವಲ್ ಸನ್ಯಾಸಿ ಬೆಂಗಾಲಿ ಭಾಷೆಯನ್ನು ಹೆಚ್ಚು ಕಡಿಮೆ ಮರೆತುಬಿಟ್ಟಿದ್ದ, ಕೇವಲ ಉರ್ದು ಮಾತನಾಡುತ್ತಿದ್ದು ಬಾಬಾಜಿಯೊಂದಿಗಿನ ತಿರುಗಾಟದಲ್ಲಿ ತಾನು ಬೆಂಗಾಲಿಯನ್ನು ಮರೆತಿರುವುದಾಗಿ ಹೇಳಿದ. ಡಾರ್ಜಿಲಿಂಗ್’ನಲ್ಲಿ ಅಂದು ರಾಜಕುಮಾರನ ದೇಹದ ಬದಲು ಬೇರೊಬ್ಬರನ್ನು ದಹಿಸಲಾಗಿತ್ತು ಎಂಬ ವಾದಗಳೂ ಕೇಳಿಬಂದವು. ರಾಜಮನೆತನದ ಹಲವು ವ್ಯಕ್ತಿಗಳು ಆತ ರಾಜಕುಮಾರನೇ ಎಂದು ವಾದಿಸಿದರೆ ಪ್ರತಿವಾದಿಗಳು ಮಾತ್ರ ಇದನ್ನು ಸಂಪೂರ್ಣವಾಗಿ ಅಲ್ಲಗೆಳೆದರು.ಈ ವೇಳೆಗಾಗಲೇ ಭವಲ್ ಸನ್ಯಾಸಿಯ ಪ್ರಕರಣದ ಕುರಿತಾಗಿ ಕತೆ ನಾಟಕಗಳು ಬರೆಯಲ್ಪಟ್ಟಿದ್ದವು. ಹಲವಾರು ಬಿಭಾಬತಿ ದೇಬಿ ಮತ್ತು ಸತ್ಯೇಂದ್ರನಾಥರ ನಡುವೆ ಅನೈತಿಕ ಸಂಬಂಧವನ್ನೂ ಆರೋಪಿಸಿದರು. ಸೆಪ್ಟೆಂಬರ್ 1935 ರಲ್ಲಿ ಬಾಬಾ ಧರಮ್ ದಾಸ್’ರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಯ್ತು. ಅವರು ಭವಲ್ ಸನ್ಯಾಸಿಯನ್ನು ತಮ್ಮ ಮುಂಚಿನ ಶಿಷ್ಯ ‘ಸುಂದರ್ ದಾಸ್’ ಎಂದೂ, ಆತ ಮುಂಚೆ ಪಂಜಾಬ್’ನವನಾಗಿದ್ದ ಎಂದೂ ಹೇಳಿದರು. ಅನಾರೋಗ್ಯದ ಕಾರಣ ಬಾಬಾಜಿಯವರ ವಿಚಾರಣೆ ನ್ಯಾಯಾಲಯದ ಹೊರಗೆ ಮುಂದುವರೆಯಿತು. ಜನರು ಬಾಬಾಜಿಯನ್ನೂ ಮೋಸಗಾರ ಎಂದು ಜರೆದರು. ನ್ಯಾಯಮೂರ್ತಿ ಪನ್ನಾಲಾಲ್ ಬಸು ಅವರು ಸಾಕಷ್ಟು ಕಾಲಾವಕಾಶವನ್ನು ತೆಗೆದುಕೊಂಡು ಕೊನೆಗೂ 1936 ರ ಆಗಸ್ಟ್ 24 ರಂದು ಭವಲ್ ಸನ್ಯಾಸಿಯ ಪರವಾಗಿ ತೀರ್ಪು ನೀಡಿದರು. ಅಂದು ನ್ಯಾಯಾಲಯದ ಹೊರಗೆ ನೆರೆದಿದ್ದ ಸಾವಿರಾರು ಜನರ ಹರ್ಷಕ್ಕೆ ಪಾರವೇ ಇರಲಿಲ್ಲ. ಪನ್ನಾಲಾಲ್ ಬಸುರವರು ಈ ತೀರ್ಪಿನ ನಂತರ ಸರ್ಕಾರೀ ಸೇವೆಯಿಂದ ನಿವೃತ್ತರಾದರು.

ತೀರ್ಪು ಬಂದರೂ ರಾಜಕುಮಾರನಿಗೆ ಅಧಿಕಾರ ನೀಡಲು ನಿರಾಕರಿಸಿದ ಕೋರ್ಟ್ ಆಫ್ ವಾರ್ಡ್ಸ್ ಭವಲ್ ಸನ್ಯಾಸಿಯ ವಿರುದ್ಧ ಕಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಮತ್ತೆ ಪ್ರಕರಣ ದಾಖಲಿಸಿತು. ಪ್ರಕರಣದ ವಿಚಾರಣೆ ನಡಿಸಲು ನ್ಯಾಯಾಲಯವು ಮೂರು ಉತ್ಕೃಷ್ಟ ನ್ಯಾಯಮೂರ್ತಿಗಳ ವಿಶೇಷ ಪೀಠವನ್ನು ರಚಿಸಿತು. ಹಾಗೂ ಪ್ರಕರಣದ ತನಿಖೆಗೆಂದು ಮೊದಲಿನ ವಿಚಾರಣೆಯ ಸುಮಾರು 11327 ಪುಟಗಳ ದಾಖಲೆಯನ್ನು ಪ್ರಿಂಟ್ ಮಾಡುವಂತೆ ಆದೇಶ ಹೊರಡಿಸಿತು! ಪೀಠವು ಎರಡೂ ತಂಡಗಳ ವಾದ ಪ್ರತಿವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತು. ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಕೊಸ್ಟೆಲ್ಲೊ ಇಂಗ್ಲೆಂಡಿಗೆ ಹೋದವರು ವಿಶ್ವಯುದ್ಧದ ಕಾರಣದಿಂದ ಮರಳಿ ಬರಲಾಗದೆ ಅಲ್ಲೇ ಉಳಿದರು. ಆದರೂ ತಮ್ಮ ತೀರ್ಪನ್ನು ಪತ್ರದ ಮೂಲಕ ಭಾರತಕ್ಕೆ ರವಾನಿಸಿದರು. ಉಚ್ಚ ನ್ಯಾಯಾಲಯ ಪೀಠವು 1940 ರಲ್ಲಿ ಕೊನೆಗೂ ತೀರ್ಪನ್ನು  ನೀಡಿತು. ಇಬ್ಬರು ನ್ಯಾಯಮೂರ್ತಿಗಳು ಭವಲ್ ಸನ್ಯಾಸಿಯ ಪರವಾಗಿ ತೀರ್ಪು ನೀಡಿದರೆ ಒಬ್ಬರು ನ್ಯಾಯಮೂರ್ತಿಗಳು ಮಾತ್ರ ವಿರುದ್ಧವಾಗಿ ತೀರ್ಪು ನೀಡಿದರು. ಅಂತಿಮವಾಗಿ ಸನ್ಯಾಸಿಯ ಪರವಾಗಿ ತೀರ್ಪು ನೀಡಿದ ಕೊಸ್ಟೆಲ್ಲೋ ಅವರ ತಿರ್ಪನ್ನೇ ಉಚ್ಚ ನ್ಯಾಯಾಲಯವು ಎತ್ತಿ ಹಿಡಿಯಿತು.

ಆದರೆ ಬಿಭಾಬತಿ ದೇವಿ ಈ ತೀರ್ಪನ್ನು ಒಪ್ಪಲು ಸಿದ್ಧವಿರಲಿಲ್ಲ. ಅವರ ಪರ ವಕಿಲರಾಗಿದ್ದ ಚೌಧರಿಯವರು ಹಿಂದೆ ಸರಿದರಾದರೂ ಬಿಭಾಬತಿ ದೇವಿಯು ಕಲ್ಕತ್ತಾ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಲಂಡನ್ ನ ‘ಪ್ರೈವಿ ಕೌನ್ಸಿಲ್’ನ ಮೊರೆಹೋದರು. “ಸತ್ತುಹೋದ ವ್ಯಕ್ತಿಯ ತಲೆಯನ್ನು ಬೋಳಿಸಿ ಯಾವುದೋ ಒಬ್ಬ ಅರೆಬೆತ್ತಲೆ ಫಕೀರನೊಬ್ಬ ಪ್ರಾಚೀನವಾದ ಯಾವುದೋ ಒಂದು ಲೇಹವನ್ನು ಲೇಪಿಸಿದರೆ ಸತ್ತುಹೋದ ವ್ಯಕ್ತಿ ಮತ್ತೆ ಎದ್ದು ಬಂದುಬಿಡುತ್ತಾನೆಯೆ? ವಿದ್ಯಾವಂತ ನ್ಯಾಯಮೂರ್ತಿಗಳು ತೀರ್ಮಾನಿಸಿದ್ದು  ಇದನ್ನೇ?” ಎಂದು ಕುಹಕವಾಡಿ ತೀರ್ಪನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಲಾಯಿತು. ತಾತ್ಕಾಲಿಕವಾಗಿ ತೀರ್ಪನ್ನು ವಜಾಗೊಳಿಸಿದರು ಕೂಡ! ಪ್ರಕರಣಕ್ಕೆ ಸಂಬಂಧಿಸಿದ 28 ಬೃಹತ್ ಕಡತಗಳನ್ನು ಅಧ್ಯಯನ ಮಾಡಿದ ಪ್ರೈವಿ ಕೌನ್ಸಿಲ್ ಹಿಂದಿನ ತಿರ್ಪನ್ನೇ ಎತ್ತಿ ಹಿಡಿಯಿತಲ್ಲದೆ ಭವಲ್ ಸನ್ಯಾಸಿಯ ಮೇಲಿದ್ದ ಎಲ್ಲ ಪ್ರಕರಣಗಳನ್ನು ಖುಲಾಸೆ ಮಾಡಿ ಕೋರ್ಟ್ ಆಫ್ ವಾರ್ಡ್ಸ್’ಗೆ ಛಿಮಾರಿ ಹಾಕಿತು. ರಾಜಕುಮಾರನ ವಿರುದ್ಧ ಅವಹೇಳನ ಕಾರಿಯಾದ ಕಾನೂನು ಸಮರವನ್ನು ಹೂಡಿದಕ್ಕೆ ಅವರನ್ನು ತರಾಟೆಗೆ ತೆಗೆದು ಕೊಂಡಿತು. 1946 ರ ಜುಲೈ 30 ರಂದು ಭವಲ್ ಸನ್ಯಾಸಿ ಶಾಶ್ವತವಾಗಿ ಎಲ್ಲ ಆರೋಪಗಳಿಂದ ಮುಕ್ತನಾದ.

ಈ ಗೆಲುವಿನ ಸುದ್ಧಿ ಆಗಸ್ಟ್ 1 ರಂದು ರಾಜಾ ರಾಮೆಂದ್ರನಿಗೆ ಟೆಲಿಗ್ರಾಮ್ ಮೂಲಕ ತಲುಪಿತು. ಅಷ್ಟರಲ್ಲಾಗಲೇ ಕಲ್ಕತ್ತಾ ಹಾಗೂ ಢಾಕಾದ ಎಲ್ಲ ದಿನಪತ್ರಿಕೆಗಳ ಮುಖಪುಟದಲ್ಲಿ ಈ ಸುದ್ಧಿಯೇ ರಾರಾಜಿಸುತ್ತಿತ್ತು. ರಾಜನು ವಿಜಯೋತ್ಸಾಹ ವನ್ನು ಆಚರಿಸುತ್ತಾನೆಂದೇ ಎಲ್ಲರೂ ತಿಳಿದಿದ್ದರು. ಆದರೆ ಅಂತಹ ಉತ್ಸಾಹ ಅವನಲ್ಲಿ ಕಂಡು ಬರಲೇ ಇಲ್ಲ. ನ್ಯಾಯಾಲಯವು ಅವನನ್ನು ರಾಜನೆಂದು ತೀರ್ಪು ನೀಡಿದರೂ ತಾನೊಬ್ಬ ನಾಗಾ ಸನ್ಯಾಸಿ, ಬಾಬಾ ಧರಮ್ ದಾಸ್’ನ ಶಿಷ್ಯನಾಗುವ ಅವಕಾಶ ಪಡೆದ ಪುಣ್ಯವಂತ ಎಂದು ಒಳಮನಸ್ಸು ಅವನಿಗೆ ಹೇಳುತ್ತಲೇ ಇತ್ತು. ಸಾವಿರಾರು ಜನರು ಶುಭಾಶಯ ಕೋರಲು ಬರುತ್ತಲಿದ್ದರೂ ಆತ ಮಾತ್ರ ಗಹನವಾದ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿ ಅಂತರ್ಮುಖಿ ಯಾಗಿದ್ದ. ”ಮಾಯೆಯ ಆಟ ಮುಗಿಯಿತೇ? ನನ್ನ ಪಾತ್ರವನ್ನು ನಾನು ಸರಿಯಾಗಿ ನಿಭಾಯಿಸಿದೆನೆ? ಇನ್ನೂ ಅಂತಿಮ ಸ್ಪರ್ಶವೇನಾದರೂ ಬಾಕಿ ಉಳಿದಿದೆಯೆ?” ಎಂದು ಅವನ ಆತ್ಮ ಚಿಂತನೆಗೆ ತೊಡಗಿತ್ತು.

ರಾಜನ ಪರಿಸ್ಥಿತಿಯನ್ನು ನೋಡಿ ಅವನ ಸೇವಕರು ಬಂಧು ಬಳಗವು ಅತಂಕಗೊಂಡಿತ್ತು. ಇತರನ್ನು ರಂಜಿಸುವುದಾಗಲಿ,ಅಥವಾ ಸೇವೆ ಮಾಡಿಸಿಕೊಳ್ಳುವ ಮನೋಭಾವದಲ್ಲಿಯೂ ಆತ ಇರಲೇ ಇಲ್ಲ. ಸದಾ ಏಕಾಂಗಿಯಾಗಿರಲು ಬಯಸುತ್ತಿದ್ದ. ಅಪರೂಪಕ್ಕೊಮ್ಮೆ ಹೊರಗೆ ಬಂದು ತನ್ನ ಲೌಕಿಕ ಕರ್ತವ್ಯಗಳನ್ನು ಪೂರೈಸಿ ಹೋಗುತ್ತಿದ್ದ. ಕಳೆದ 25 ವರ್ಷಗಳಲ್ಲಿ ಆತ ತನ್ನ ದಿನದ ವೇಳೆಯನ್ನು ಕಾನೂನು ಹೋರಾಟದಲ್ಲಿ,ಮನೆಜನರ ಕರ್ತವ್ಯದಲ್ಲಿ,ಸಂಸ್ಥಾನದ ಆಳ್ವಿಕೆ ಯಲ್ಲಿ,ವ್ಯವಹಾರಗಳಲ್ಲಿ,ಔತಣ ಕೂಟಗಳಲ್ಲಿ ಭಾಗವಹಿಸುವುದರಲ್ಲಿ ಕಳೆಯುತ್ತಿದ್ದ. ಆದರೆ ಯಾರಿಗೂ ತಿಳಿಯದಂತೆ ತನ್ನ ರಾತ್ರಿಯ ವೇಳೆಯನ್ನು ಸಂಪೂರ್ಣ ಧ್ಯಾನಕ್ಕೋಸ್ಕರ ಮೀಸಲಿಡುತ್ತಿದ್ದ! ಜನರು ಸುತ್ತುವರಿದಿದ್ದಾಗ ಆತ ರಾಜನಾಗುತ್ತಿದ್ದ. ಆದರೆ ಖಾಸಗಿಯಲ್ಲಿ ಆತ ಭವಲ್ ಸನ್ಯಾಸಿಯಾಗಿದ್ದ.

ವಿಜಯದ ಸುದ್ಧಿ ಆತನಿಗೆ ಬಂದು ತಲುಪುತ್ತಿದ್ದಂತೆ ಇನ್ನೊಂದು ಸಂದೇಶ ಕೂಡ ಅವನ ಆತ್ಮಕ್ಕೆ ತಲುಪಿತ್ತು. ಈ ಸಂದೇಶ ಬಂದಿದ್ದು ಆತನ ವಿಧಿಯ ಕರ್ತೃವಿನಿಂದ. ‘ಸಮರವನ್ನು ಜಯಿಸಿ ಯಾಗಿದೆ. ಈಗ ಆ ಗೆಲುವಿನ ಫಲವನ್ನು ಏನು ಮಾಡಬೇಕೆಂದು ನೀನೇ ನಿರ್ಧರಿಸು.’

ಆತ ಸನ್ಯಾಸ ದೀಕ್ಷೆ ತೆಗೆದುಕೊಂಡು ಸರಿಯಾಗಿ 33 ವರ್ಷ ಕಳೆದಿತ್ತು. ಈಗ ತಾನು ಕೈಗೊಂಡ ಯಜ್ಞಕ್ಕೆ ಪೂರ್ಣಾಹುತಿ ಯನ್ನು ನೀಡಲೇಬೇಕಿತ್ತು. ಆತ ತನ್ನೊಳಗಿನ ಮಾಯೆಯ ಕೊನೆಯ ಪರದೆಯನ್ನು ಕಿತ್ತೆಸೆದು ಗೆಲುವಿನ ಫಲವನ್ನು ತನ್ನ ವಿರುದ್ದದ ಸಮರದಲ್ಲಿ ಸೋತು ಸುಣ್ಣ ವಾದವರಿಗೇ ನೀಡಲು ನಿರ್ಧರಿಸಿದ.ತಾನು ಇಷ್ಟು ಕಾಲ ಅನುಭವಿಸುತ್ತಿದ್ದ ಇಬ್ಬಗೆಯ ಭಾವಗಳಿಂದ ಹೊರಬರಲು ಸಿದ್ಧನಾದ. ಗೌರವ-ಅವಮಾನ, ಸೋಲು-ಗೆಲುವು,ಸಂತೋಷ-ದುಃಖ,ಹುಟ್ಟು-ಸಾವು ಇವೆಲ್ಲವನ್ನೂ ಮೀರಿ ಬ್ರಹ್ಮ ಸೃಷ್ಟಿಸಿದ ಈ ಜಗತ್ತಿನಾಚೆಗೆ ತೆರಳಿ ಅದಮ್ಯ ಹಾಗೂ ಅಂತಿಮ ಶಕ್ತಿಗೆ ಶರಣಾಗಲು ತನ್ನ ಪಯಣದ ಕೊನೆಯ ಸಿದ್ಧತೆಯನ್ನು ಆರಂಭಿಸಿದ.

ಬ್ಲಿಟ್ಜ್ ಪತ್ರಿಕೆಯ ವರದಿ ಹೀಗಿತ್ತು “ವಿಜಯದ ಸಂದೇಶ ಬಂದು 2 ದಿನಗಳ ನಂತರ ಶುಭಾಶಯ ಹೊತ್ತ ಜನರು,ಪತ್ರಗಳ ಸಾಗರವಿನ್ನೂ ಹರಿದು ಬರುತ್ತಿರುವಾಗಲೇ ಭವಲ್ ಸನ್ಯಾಸಿ ಇದ್ದಕ್ಕಿದ್ದಂತೆ ತನ್ನ ಲೌಕಿಕ ಯಾತ್ರೆಯನ್ನು ಮುಗಿಸಿಬಿಟ್ಟ. 1946 ರ ಆಗಸ್ಟ್ 3 ರಂದು ಪ್ರಾರ್ಥನೆ ಸಲ್ಲಿಸುತ್ತಿದ್ದವನಿಗೆ ಸ್ಟ್ರೋಕ್ ಬಂದು ಸ್ಥಳದಲ್ಲಿಯೇ ಆತ ತೀರಿಕೊಂಡ. ಮರುದಿನ ಬೆಳಿಗ್ಗೆ 9 ಘಂಟೆಗೆ ಆತನ ಅಂತ್ಯಸಂಸ್ಕಾರವನ್ನು ನಿಗದಿಪಡಿಸಲಾಯಿತು. ರಾತ್ರಿಯೆಲ್ಲ ಊರಿನಲ್ಲಿ ಆತ ಚಿತೆಯಿಂದ 18 ವರ್ಷದ ನವಯುವಕ ನಾಗಿ ಎದ್ದು ಬರುತ್ತಾನೆಂದು ಜನರು ನಂಬಿ ಮಾತನಾಡತೊಡಗಿದರು.”

ಆಗಸ್ಟ್ 4 ರ ಬೆಳಿಗ್ಗೆ 1909 ರಲ್ಲಿ ಡಾರ್ಜಿಲಿಂಗ್’ನಲ್ಲಿ ಆದಂತೆಯೇ ಧಾರಾಕಾರವಾಗಿ ಮಳೆ ಸುರಿಯತೊಡಗಿತು. ಭವಲ್ ಸನ್ಯಾಸಿಯ ಎರಡನೇ ಬಾರಿಯ ಪುನರಾಗಮನ ವನ್ನು ನೋಡಲು ಜನರೆಲ್ಲ ಕಾತುರದಿಂದ ಛತ್ರಿಗಳ ಕೆಳಗೆ ನಿಂತು ಚಿತೆಯ ಸುತ್ತ ಸೇರಿದ್ದರು. ಆದರೆ ಈ ಸಲ ಮಾತ್ರ ಹೊತ್ತಿ ಉರಿದ ಬೆಂಕಿ ಕೆಲವೇ ಕ್ಷಣಗಳಲ್ಲಿ ಭವಲ್ ಸನ್ಯಾಸಿಯ ದೇಹವನ್ನು ಇಡಿಯಾಗಿ ದಹಿಸಿ ಭಸ್ಮ ಮಾಡಿತು. “ಅವನು ಮಾಡಿದ ಮೋಸಕ್ಕೆ ನ್ಯಾಯಾಲಯ ಶಿಕ್ಷೆ ವಿಧಿಸದಿದ್ದರೆ ಏನಾಯ್ತು,ಆ ದೇವರೇ ಶಿಕ್ಷೆ ವಿಧಿಸಿದ” ಎಂದು ಸುದ್ಧಿ ಕೇಳಿದ ಬಿಭಾಬತಿ ದೇವಿ ಉದ್ಗರಿಸಿದರೆ ಆತನ ಆತ್ಮ ಮಾತ್ರ ಲೌಕಿಕ ಜಗತ್ತಿನಿಂದ ಮುಕ್ತವಾದ ತೃಪ್ತಿಯಲ್ಲಿ ತನ್ನ ಅಂತಿಮ ಗುರಿಯತ್ತ ಚಲಿಸುತ್ತಿತ್ತೋ ಏನೋ!

Sandeep Hegde, Sirsi

Source:

1)Wikipedia

2) At the eleventh hour,an autobiography of swami Rama

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post