X
    Categories: ಕಥೆ

“ತಬ್ಬಲಿಯು ನೀನಾದೆ ಮಗನೇ “……

ಇಂದು ಮಠಗಳೆಂದರೆ ರಾಜಕೀಯ  ಪಕ್ಷಗಳ ಕಛೇರಿಗಳು, ಹಣದ ಕೊಟ್ಟಿಗೆಗಳು, ವಯೋವೃದ್ದರ  ಕಾಫಿ  ಶಾಪ್’ಗಳು ಸಿರಿವಂತರ ಕೈ ಗೊಂಬೆ ಹೀಗೆ ಹತ್ತು ಹಲವು ಮಾತುಗಳು ಕೇಳಿ ಬರುತ್ತದೆ. ಯಾವುದೋ ಮತ ಪ್ರಚಾರಕ್ಕೋ ,ಸಿದ್ದಾಂತಗಳನ್ನು ಪ್ರತಿಪಾದಿಸಲೋ, ಯಾವುದೋ ವ್ಯಕ್ತಿಯ ತತ್ವಗಳನ್ನು ಪ್ರಚಾರ ಮಾಡಲೋ .,ತಮ್ಮ ಜನಾಂಗದ ಬಲವನ್ನು ಪ್ರದರ್ಶಿಸಲೋ ತಮ್ಮ ಸಮುದಾಯದವರನ್ನು ಒಂದುಗೂಡಿಸಲೊ ಅಥವಾ ಯಾವುದೋ  ಒಂದು ಉದ್ದೇಶದಿಂದ ಮಠಗಳನ್ನು ತೆರೆಯುವುದುಂಟು  ಆದರೆ ಕಲ್ಲೂರಿನಲ್ಲಿ ಇರುವ ಕೃಷಿ ಮಠವು ಇವೆಲ್ಲವನ್ನೂ ಮೀರಿ ನಿಂತಿದೆ. ಪ್ರಸ್ತುತ ಪೀಠವನ್ನು ಅಲಂಕರಿಸಿರುವ ಶಿವಮೂರ್ತಿಶರಣರು ತಮ್ಮ ಗುರುಗಳಾದ ಮಹಾಶರಣರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ವಿದ್ಯೆ ಮತ್ತು ಕೃಷಿಯನ್ನು ದಾಸೋಹದ ಅಂಶಗಳಾನ್ನಾಗಿಸಿಕೊಂಡು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದಂತೆ ೫೪ ವರುಷದಿಂದ ನಡೆಸಿಕೊಂಡು ಬಂದಿದ್ದಾರೆ .ಈ ವರ್ಷದ ಮಹಾನವಮಿಗೆ ಶಿವಮೂರ್ತಿಶರಣರು ಪೀಠವನ್ನು ಅಲಂಕರಿಸಿ ೫೪ ವಸಂತಗಳು ತುಂಬಲಿದೆ.

ಕಲ್ಲೂರಿನಲ್ಲಿ ಜಾತ್ರೆಯ ಸಮಾರಂಭ, ಮಠಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಶಿವಮೂರ್ತಿಶರಣರು ಸ್ವಲ್ಪ ಬಳಲಿದ್ದರು. ರಾತ್ರಿ ಹತ್ತರ ಸಮಯ, ಶಿವಮೂರ್ತಿ ಶರಣರು ತಮ್ಮ ಕೋಣೆಯಲ್ಲಿ ಯಾವುದೋ ಪುಸ್ತಕವನ್ನು ಹಿಡಿದು ಮಂದಲಿಗೆಯ ಮೇಲೆ ಕುಳಿತ್ತಿದ್ದಾರೆ. ಪರಮ ಆಪ್ತ ಶಿಷ್ಯನಾದ ಕಾರ್ತೀಕನು ಕೋಣೆಯೊಳಗೆ ಪ್ರವೇಶಿಸುತ್ತಾನೆ.

“ನೋಡಿದ್ಯ  ಕಾರ್ತಿಕ, ಆ ವಿದೇಶಿ ಮಹಿಳೆ ಪುಣ್ಯಕೋಟಿಯನ್ನು ಕೊಂದೇಬಿಟ್ಲು … ಪುಣ್ಯಕೋಟಿಯಾದ್ರೆನು ಗಂಗೆ, ಗೌರಿ  ಅದರೇನು ಯಾವುದನ್ನೂ ಬಿಡಲ್ಲ ಈ ಜನ..”

“ಗುರುಗಳೇ ,ನೀವು ಯಾವುದರ ಬಗ್ಗೆ ಮಾತನಾಡುತಿದ್ದಿರಿ ಎಂದು ನನಗೆ ತಿಳಿಯದು ..ಕ್ಷಮಿಸಬೇಕು”

“ಭೈರಪ್ಪನವರ ‘ತಬ್ಬಲ್ಲಿಯು ನೀನಾದೆ ಮಗನೆ’ ಕಾದಂಬರಿಯ ಕಾಳಿಂಗನ ಮಡದಿಯ ಬಗ್ಗೆ ..ಕಾಳಿಂಗನ ವಿದೇಶಿ ಹೆಂಡತಿ ಪುಣ್ಯಕೋಟಿ ಹಸುವನ್ನೇ ಕೊಂದು ತಿನ್ನುತ್ತಾಳೆ …. .ಎಷ್ಟು ಕ್ರೋಧ ನೋಡು..”

“ಗುರುಗಳೇ ,ಭೈರಪ್ಪನವರ ಸಾಹಿತ್ಯವನ್ನು ವಿಮರ್ಶಿಸುವಷ್ಟು ವಿದ್ವತ್ತನ್ನು ನಾನು ಹೊಂದಿಲ್ಲ …  ..ಆದರೆ ನಾನು ಬಂದ ವಿಷಯವೇ ಬೇರೇ ….ನಾಳಿನ ಕಲ್ಲೂರಮ್ಮನ ಜಾತ್ರೆಯ ಸಮಾರಂಭದಲ್ಲಿ ಈ ಮಠದ ಉತ್ತರಾದಿಕಾರಿಯನ್ನು ನೇಮಿಸುತ್ತಿರಿ ಎಂದು ಹೇಳಿದ್ದಿರಿ ..ಅದು ಸಾಧ್ಯವಾಗುತ್ತದಯೇ “

“ನೋಡೋಣ …ನಾಳೆ ಆ ತಾಯಿ ಏನು ಅನುಗ್ರಹಿಸುತ್ತಾಳೆ ಎಂದು…ನನ್ನ ಕೈಯಲ್ಲಿ ಏನೂ ಇಲ್ಲ..ಈಗಾಗಲೇ ತಡವಾಗಿದೆ ,,ಸ್ವಲ್ಪ ನೀರನ್ನು ತಂದು ಇತ್ತು ನೀನು  ಮಲಗು ..ಎಲ್ಲವನ್ನು ಅವಳು ನಿರ್ಧರಿಸುತ್ತಾಳೆ …”

“ಹೌದು ಎಲ್ಲವನ್ನು ಜಗನ್ಮಾತೆಯೇ ನಿರ್ಧರಿಸುತ್ತಾಳೆ .ಕಲ್ಲೂರಿನ ಮಠಕ್ಕೆ ನಾಳೆ ಉತ್ತರಾದಿಕಾರಿ ನೇಮಕ ಆಗಬೇಕೆಂದರೆ ಆಗುತ್ತದೆ, ಇಲ್ಲ ಎಂದರೆ ಇಲ್ಲ ” ಎಂದು ಕಾರ್ತಿಕ್ ಮನದಲ್ಲೇ ಅಂದುಕೊಂಡು ಮಲಗಲು ಹೊರಟನು .

.ಮಹೇಶ್ವರಿ ತಾಲೂಕಿನ ಕಲ್ಲೂರಿನ ಮಠಕ್ಕೆ ಮುಂಬರುವ ಮಹಾನವಮಿಗೆ ಈಗಿರುವ ಗುರುಗಳು  ಪೀಠವನ್ನು ಅಲಂಕರಿಸಿ ೫೪ ವಸಂತಗಳು ತುಂಬಿವೆ. ಈಗಿನ ಶರಣರಿಗೆ ೭೦ ಸಮೀಪಿಸುತ್ತಿದೆ, ಊರ ಜನರ ಒತ್ತಾಯದ ಮೇರೆಗೆ ನಾಳೆ ಉತ್ತರಾಧಿಕಾರಿಯನ್ನು ಬಹಿರಂಗ ಪಡಿಸುತ್ತೇನೆ ಎಂದು ಶರಣರು ಹೇಳಿದ್ದಾರೆ. ಅದ್ದರಿಂದ ಇಡಿ ಊರಿಗೆ ಊರೇ ಸಂಭ್ರಮಿಸುತ್ತಿದೆ. ಯಾರು ಮಠದ ಪೀಠವನ್ನು ಅಲಂಕರಿಸುತ್ತಾರೆ ಎಂಬ ಕುತೂಹಲ ಪ್ರಸ್ತುತ ಶರಣರ ಸೇವಕನಾದ ಕಾರ್ತಿಕನಿಗೂ ಇತ್ತು.

ಇತ್ತ ನಾಳಿನ ಸಮಾರಂಭದ ಬಗ್ಗೆ ಒಂದಿಷ್ಟು ಚಿಂತೆ ಇಲ್ಲದೆ “ತಬ್ಬಲಿಯು ನೀನಾದೆ ಮಗನೆ ” ಕಾದಂಬರಿಯನ್ನು ಓದುತ್ತ ,ಭೈರಪ್ಪನವರನ್ನು ಹೊಗಳುತ್ತಾ ಶಿವಮೂರ್ತಿಶರಣರು ಕೋಣೆಯಲ್ಲಿ ಕುಳಿತಿದ್ದರು .ಹಾಗೆ ಓದುತ್ತ ಓದುತ್ತ ಗೋಡೆಗೆ ಒರಗಿ ಕೊಂಡರು. ಕಣ್ಣಲ್ಲಿ ನೀರು ತುಂಬಿತು ಹಳೆಯ ನೆನಪುಗಳು ಶರಣರ ಕಣ್ಣ ಮುಂದೆ ಬರತೊಡಗಿದವು …

ಈಗಿನ ಸುಮಾರು ೫೦ ವರುಷಗಳ ಹಿಂದಕ್ಕೆ ಹೋಗೋಣ. ಈಗಿರುವ ಹಾಗೆ ಪಂಚಾಯ್ತಿ. ನೋಡಲು ಆಫೀಸು ಯಾವುದು ಕಲ್ಲೂರಿನಲ್ಲಿ ಇರಲಿಲ್ಲ. ಆದ್ದರಿಂದ ರಾಜ ವಂಶಸ್ಥರು ಸ್ಥಾಪಿಸಿದ್ದ ಮಠ, ಪೀಠದ ಗುರುಗಳಾದ ಮಹಾಶರಣರು ಮತ್ತು ಅದರ ಆಡಳಿತ ಮಂಡಳಿ ಇಡೀ ಊರನ್ನು ನೋಡಿಕೊಳ್ಳುತಿತ್ತು. ಜೀವಕ್ಕಾಗಿ ಅನ್ನ ಜೀವನಕ್ಕಾಗಿ ಬುದ್ಧಿ. ಜೀವನೋಪಾಯಕ್ಕಾಗಿ ವಿದ್ಯೆ  ಎಂದು ನಂಬಿದ್ದ ಮಠ ಯಾವುದೇ  ಜಾತಿ, ಮತ ಬೇಧಗಳಿಲ್ಲದೆ ಎಲ್ಲಾ ಪ್ರಜೆಗಳನ್ನು ಸಮಾನ ರೀತಿಯಿಂದ ಶ್ರೀಮಠದ ಗುರುಗಳು ಮತ್ತು ಆಡಳಿತ ಮಂಡಳಿ ನಡೆಸಿಕೊಳ್ಳುತಿತ್ತು. ಈ ಕಾರಣದಿಂದ ಗ್ರಾಮಸ್ಥರೆಲ್ಲ ಮಠದ ಬಗ್ಗೆ ಗೌರವದಿಂದ ಹಾಗೂ ಅಭಿಮಾನದಿಂದ ನಡೆದುಕೊಳ್ಳುತ್ತಿದ್ದರು. ಮಠವು ಧಾರ್ಮಿಕ ಆಚರಣೆಗಳಲ್ಲದೆ ಹಳ್ಳಿಯ ಜನರ ಕಷ್ಟ ಸುಖಗಳಿಗೂ ಸ್ಪಂದಿಸುತಿತ್ತು  .ವಿದ್ಯೆಯಿoದಲೇ ಮುಕ್ತಿ ಎಂದು ನಂಬಿದ್ದ ಮಹಾಶರಣರು ಮಠದಲ್ಲಿ ಪಾಠಶಾಲೆಯೊಂದನ್ನು ತೆರೆದಿದ್ದರು. ಮೂರೂ ನಾಲ್ಕು ಶಿಕ್ಷಕರ ಜೊತೆಗೆ ಮಹಾಶರಣರು ತಾವು ಬಿಡುವಾದಾಗ ಮಕ್ಕಳಿಗೆ ಬೋಧನೆ ಮಾಡುತಿದ್ದರು.

ಕಾಲಕ್ರಮೇಣ ಮಹಾಶರಣರಿಗೆ ತಾವು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿದು, ತಮ್ಮ ನಂತರದ ಜಾಗವನ್ನು ತುಂಬಲು ಸಿದ್ದತೆ ನಡೆಸಿಕೊಂಡರು. ಇಡಿ ಆಡಳಿತ ಮಂಡಳಿ ಶಿಷ್ಯ ಪರಿಗ್ರಹಣಕ್ಕೆ ಸಿದ್ದಗೊಂಡಿತು. ಮಠದ ಶಾಲೆಗೆ ಬರುತ್ತಿದ್ದ ರಾಮಚಂದ್ರ ಎಂಬುವರ ಮಗ ಶಿವಮೂರ್ತಿ ಎಂಬುವನನ್ನು ಮಹಾಶರಣರು ಶರಣ ಸ್ಥಾನಕ್ಕೆ ಆರಿಸಿದ್ದರು.ಈ ವಿಷಯ ಇಡಿ ಊರಿಗೆ ಹಬ್ಬಿತು. ಈ ವಿಷಯ ರಾಮಚಂದ್ರರ ಕುಟುಂಬಕ್ಕೆ ತಿಳಿದ ಕೂಡಲೇ ರಾಮಚಂದ್ರ ಮತ್ತು ಅವನ ಹೆಂಡತಿ ಮಠಕ್ಕೆ ಓಡಿ ಬಂದರು.

“ಬನ್ನಿ ,ಬನ್ನಿ ನೀವು ಬರುತ್ತೀರಿ ಎಂದು ನನಗೆ ತಿಳಿದಿತ್ತು. ಎಂತಹ ಜನ್ಮ ನಿಮ್ಮದು ..ಲೋಕ ಕಲ್ಯಾಣಕ್ಕಾಗಿ ನಿಂತಿರುವ ಮಠಕ್ಕಾಗಿ ನಿಮ್ಮ ಮಗನನ್ನು ಹೆತ್ತಿದಿರಿ ..   ಆ ಕಲ್ಲುರಮ್ಮ ನನಗೆ ಆಜ್ಞಾಪಿಸಿದ್ದಾಳೆ  ..ಅದರಂತೆ ನಾಳೆಯ ಮಹಾನವಮಿಯಂದು ನಿಮ್ಮ ಮಗನಿಗೆ ಶರಣಸ್ಥಾನವನ್ನು ಕೊಡಲು ನಾವು ಮುಂದಾಗಿದ್ದೇವೆ.”

“ಆಚಾರ್ಯ , ನಿಮ್ಮಷ್ಟು ನಾವು ತಿಳಿದಿಲ್ಲ. ನನ್ನದೊಂದು ಪುಟ್ಟ ಕೃಷಿ ಕುಟುಂಬ  ಇದ್ದ ಮಗಳೊಬ್ಬಳಿಗೆ ಮದುವೆ ಆಗಿದೆ. ನನ್ನ ವಂಶ ಬೆಳೆಯುವುದಕ್ಕೆ ಶಿವಮೂರ್ತಿ ಒಬ್ಬನೇ ಇರುವುದು. ನಿಮ್ಮ ಈ ನಿರ್ಧಾರದಿಂದ ನಾವುಗಳು ತಬ್ಬಲಿಗಳಾಗುತ್ತೇವೆ .ಹಾಗೂ ನನ್ನ ವಂಶ ಇಲ್ಲಿಗೆ ನಿಂತು ಹೋಗುತ್ತದೆ. ಮೇಲಾಗಿ ಶಿವಮೂರ್ತಿಗೆ ಇನ್ನು ಹದಿನಾಲ್ಕು ವರುಷಗಳು ಅಷ್ಟೇ,”

” ರಾಮಚಂದ್ರ ಇದು ತಾಯಿಯ ಆಜ್ಞೆ ..ನನ್ನ ಅಭಿಪ್ರಾಯವೇನು  ಇಲ್ಲ. ಮೇಲಾಗಿ ನಿನ್ನ ಮಗನಿಂದ ಈ ಮಠದ ಪರವಾಗಿ ಅನೇಕ ಲೋಕ ಕಲ್ಯಾಣ ಕಾರ್ಯಗಳು ಆಗುತ್ತದೆ. ಮತ್ತು ನಿಮ್ಮ ಯೋಗಕ್ಷೇಮಗಳನ್ನು ಮಠವೇ ನೋಡಿಕೊಳ್ಳುತ್ತದೆ ..ಅದ್ದರಿಂದ ನೀವುಗಳು ತಬ್ಬಲಿಗಳಾಗುವ ವಿಚಾರ ಬರುವುದೇ ಇಲ್ಲ..” ಎಂದು ಮಹಾಶರಣರು  ಹೇಳಿದರು.

ಸಾಕಷ್ಟು ವೇದನೆ ನಿವೇದನೆಗಳು ಮಹಾಶರಣರ ಮತ್ತು ರಾಮಚಂದ್ರ ದಂಪತಿಗಳ ನಡುವೆ ನಡೆದು, ಮಠಕ್ಕೆ ವಿರುದ್ದವಾಗಿ ನಡೆಯಲು ಇಚ್ಚಿಸದೆ ಶಿವಮೂರ್ತಿಯನ್ನು ಶರಣರ ಸ್ಥಾನಕ್ಕೆ  ಬಿಟ್ಟು ಕೊಡಲೇಬೇಕಾಯಿತು.

ಶಿವಮೂರ್ತಿಯನ್ನೇ ಶರಣ ಸ್ಥಾನಕ್ಕೆ ಯಾಕೆ ಆರಿಸಿದರು ಎಂಬುದು ಯಾರಿಗೆ ಗೊತ್ತು..ಕೆಲವರು ಅದೇ ಊರಿನವರು ಶರಣರಾದರೆ ಮಠ ಮತ್ತು ಹಳ್ಳಿಯ ನಡುವೆ ಸಂಬಂಧ ಸೌಹಾರ್ದಯುತವಾಗಿರುತ್ತದೆ ಎಂದು, ಕೆಲವರು ಹುಡುಗ ಬುದ್ಧಿವಂತನಾಗಿದ್ದು  ನಾಯಕತ್ವದ ಗುಣಗಳನ್ನೂ ಹೊಂದಿದ್ದು, ಅಚಾರ ವಿಚಾರ ಕೃಷಿ ಗೋ ಸಾಕಾಣಿಕೆ, ಉಳುಮೆ ವಿಜ್ಞಾನದಲ್ಲೂ  ವಿದ್ವತ್ತನ್ನು ಹೊ೦ದಿರುವೆನೆಂದು, ಕೆಲವರು ಕಲ್ಲೂರಮ್ಮನ  ಅನುಗ್ರಹ ಎಂದು, ಕೆಲವರು ರಾಮಚಂದ್ರನ ವಂಶವು ಹಬ್ಬುವುದು ನಿಲ್ಲಬೇಕು ಎಂಬ ಕುತಂತ್ರದಿಂದ ಮಹಾಶರಣರಿಗೆ ಭೋದನೆ ಮಾಡಿರುವರು ಎಂದು, ಹತ್ತು ಹಲವು ಮಾತುಗಳು ಕೇಳಿಬರುತ್ತಿದ್ದವು .ಆದರೆ ನಿಜವಾಗಿಯೂ ಚುರುಕು ಬುದ್ಧಿಯ ಹುಡುಗ ಶಿವಮೂರ್ತಿ  .

ಮಠದ ಶಿಕ್ಷಕರಿಗೆ ತುಂಬಾ ಗೌರವದಿಂದ ನಡೆದುಕೊಳ್ಳುತ್ತಿದ್ದ  ಹಾಗು ವ್ಯವಸಾಯ, ಗಣಿತ, ಗ್ರಹಣ, ಧೂಮಕೇತು ,ಮುಂತಾದವುಗಳ  ಬಗ್ಗೆ ಎಲ್ಲ ವಿಧ್ಯಾರ್ಥಿಗಳಿಗಿಂತಲೂ ಹೆಚ್ಚು ತಿಳಿದಿದ್ದ. ಹಾಗೆ ಮಠ ಮತ್ತು ಹಳ್ಳಿಯಲ್ಲಿ ನಡೆಯುತಿದ್ದ ಉತ್ಸವಗಳು ,ಹಬ್ಬಗಳಲ್ಲಿ ನಡೆಯುತ್ತಿದ್ದ ವಸಂತ ಸೇವೆಗಳು, ಕಲ್ಲೂರಿನ ಮನೆಗಳಲ್ಲಿ ಸಂಭವಿಸುತ್ತಿದ್ದ ಜನನ ಮರಣಗಳಲ್ಲೂ ಭಾಗಿಯಾಗುತಿದ್ದ. ಒಟ್ಟಿನಲ್ಲಿ ಗುರು ಪೀಠವನ್ನು ಅಲಂಕರಿಸಲು ಇರಬೇಕಾಗಿದ್ದ ಎಲ್ಲಾ ಅಂಶಗಳು ಶಿವಮೂರ್ತಿಗೆ ಇತ್ತು ಎಂದು ಮತ್ತೆ ಹೇಳಬೇಕಾಗಿಲ್ಲ .

ಮಹಾನವಮಿಯ ದಿನ ಶಿವಮೂರ್ತಿಯ ಶರಣ ಸ್ವೀಕಾರ ಸಮಾರಂಭ ಬಹಳ ಸಡಗರದಿಂದ ನಡೆಯಿತು. ಸನ್ಯಾಸಿಯಾದ ನಂತರ ಹಾಗೂ ಸನ್ಯಾಸಿಯಾದವನು ಪಾಲಿಸಬೇಕಾದ ಧರ್ಮ ಕರ್ಮಗಳನ್ನು ಮಹಾಶರಣರು ಶಿವಮೂರ್ತಿಗೆ ಬೋಧಿಸಿ, ತಮ್ಮ ಕೆಲಸ ಮುಗಿಯಿತು ಎಂದು ದೇವರ ಪಾದಕ್ಕೆ ತಮ್ಮ ಉಸಿರನ್ನು ಸಮರ್ಪಿಸಿದರು. ಗುರುಗಳು ಬೋಧಿಸಿದ ತತ್ವ ಮತ್ತು ಕಾಯಕಗಳನ್ನು ಶಿವಮೂರ್ತಿ ತಪ್ಪದೆ ಪಾಲಿಸಿದನು. ದಿನ ನಿತ್ಯವು ಹತ್ತು ಮನೆಗಳಲ್ಲಿ ಭಿಕ್ಷೆ, ಊರೊಳಗಿನ ರುದ್ರದೇವನಿಗೆ ನಮಸ್ಕಾರ, ಗ್ರಂಥಗಳ ಅಧ್ಯಯನ, ಮಠಕ್ಕೆ ಬಂದವರ ಜೊತೆ ಯೋಗಕ್ಷೇಮ, ಹೀಗೆ ಮಹಾಶರಣರ ಸ್ಥಾನವನ್ನು ತುಂಬಲು ಹೆಚ್ಚು ದಿನ ಬೇಕಾಗಲಿಲ್ಲ ಹೊಸ ಶರಣರಿಗೆ.

ಗುರುಗಳು ಹಾಕಿಕೊಟ್ಟ ಬುನಾದಿಯಲ್ಲಿ ಮಠವು ಸುಲಲಿತವಾಗಿ ನಡೆಯುತಿದ್ದನ್ನು ಕಂಡು ಶಿವಮೂರ್ತಿ ಶರಣರಿಗೆ ಬಹಳ ಹೆಮ್ಮೆ ಎನಿಸಿತು. ಆದರೂ ಅವರಿಗೆ ಒಂದು ಕೊರಗು ಸಹ ಇತ್ತು. ಸನ್ಯಾಸಿಯಾದವನು ಕಟ್ಟಿ ಇಡುವುದನ್ನು ಕಲಿಯಬಾರದು ಮತ್ತು  ಸನ್ಯಾಸಿಯು ವಿರಾಗಿಯಾಗಿರಬೇಕು ಎಂದು ಗುರುಗಳು ಹೇಳುತಿದ್ದ ಮಾತುಗಳು ಸದಾ ಕಿವಿಯಲ್ಲಿ ನಾದ ಮಾಡುತ್ತಿತು.”ವಿರಾಗಿತನವೆಂಬುದು ಅಂಗಡಿಯಲ್ಲಿ ಸಿಗುವ ವಸ್ತುವೇ,ಅಥವಾ ಅದನ್ನು ಬೋಧನೆ ಇಂದ ಪಡೆಯಲು ಸಾಧ್ಯವಿಲ್ಲ ” ಎಂದು ತನಗೆ ತಾನೇ ಸಮಾಧಾನಗೊಳ್ಳುತ್ತಿದ್ದನು.

ಹೀಗೆ ಶಿವರಾತ್ರಿಯ ಸಂಭ್ರಮ  ,ರುದ್ರದೇವರ ಗುಡಿಯಲ್ಲಿ ಶಿವಮೂರ್ತಿ ಶರಣರು ಸೇರಿದಂತೆ ಶರಣರ ಪೂರ್ವಾಶ್ರಮದ ತಂದೆ ರಾಮಚಂದ್ರ, ಊರಿನ ಮುಖ್ಯಸ್ಥರು ಎಲ್ಲರೂ ಗುಡಿಯಲ್ಲಿ ನೆರೆದಿದ್ದರು. ಶರಣರು ಗೋಮಾತೆಯ ಮಹಿಮೆಯನ್ನು ವಿವರಿಸಿ ಪ್ರವಚನ ನೀಡುತ್ತಿದ್ದರು. ಅಷ್ಟರಲ್ಲೇ ಯಾರೋ ಒಬ್ಬ ಬಂದು ಒಂದೇ ಉಸಿರಿನಲ್ಲಿ ಕೂಗಿ ಹೇಳಿದ “ರಾಮಚಂದ್ರಯ್ಯ..  ರುದ್ರದೇವರ ಬಸವ ನಿಮ್ ಎಂಡ್ರುನ್ನ ತಿವಿದು ಸಾಯಿಸಿ ಬಿಡ್ತು ,”ಅಲ್ಲೇ ಇದ್ದ ಪಟೇಲರು ,”ಆ ಬಸವನ ಹಿಡಿದು ಕಟುಕರಿಗೆ ಕೊಡ್ರುಲಾ ,ನಮ್ ಸ್ವಾಮ್ಗುಳ ತಾಯಿನೇ ತಿವಿದೀತೆ ” ಎಂದರು. ಶಿವಮೂರ್ತಿಗೆ ವಿರಾಗಿತನವೆಂಬುದು  ಏನು ಎಂದು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ .

ಇನ್ನು ಕೋಣೆಯಲ್ಲಿ ದೀಪ ಉರಿಯುತಿರುವುದನ್ನು ಗಮನಿಸಿದ ಕಾರ್ತಿಕ ಕೋಣೆಯ ಒಳಗೆ ಹೋದನು. ಪುಸ್ತಕವು ತೆರೆದಿತ್ತು ,ನೀರವ ಮೌನ ಕೋಣೆಯಲ್ಲಿತ್ತು, ಉಸಿರು ಬಿಗಿ ಹಿಡಿದಿತ್ತು, ದೇಹವು ತಣ್ಣಗಾಗಿತ್ತು, ಶಿವಮೂರ್ತಿ ಚೇತನ ಅಗಲಿತ್ತು

“ತಬ್ಬಲಿಯಾಯಿತಲ್ಲಯ್ಯ ಈ ಜೀವ ” ಎಂದು ಮನಸಿನಲ್ಲೇ ನೊಂದು ಕಾರ್ತಿಕ ಕುಸಿದು ಬಿದ್ದ.

ಅಭಿಲಾಶ್ ಟಿ

Facebook ಕಾಮೆಂಟ್ಸ್

Abhilash T B: Software engineer by profession. He is from Tipatoor . Writing story is his hobby.
Related Post