X

ಗೂಡುಬಿಟ್ಟ ಗುಬ್ಬಚ್ಚಿಯ ಕಥೆ-ವ್ಯಥೆ..

ಅಮ್ಮ, ಅಪ್ಪ, ಪಕ್ಕದ ಮನೆಯ ಗಂಗಮ್ಮ, ಬಾಲ್ಯದ ಗೆಳೆಯ, ಗೆಳತಿ ನೆನಪಾಗುತ್ತಿದ್ದಾರೆ. ಎಲ್ಲರೂ ದೂರದ ಗೂಡಿನಲ್ಲಿದ್ದಾರೆ.. ನಮ್ಮದೋ ಹಾಳು ಅನಿವಾರ್ಯ.. ನೆನೆದಾಗ ಅಮ್ಮ ಎದುರಿಗಿರದ ಊರಲ್ಲಿ ಹೊಟ್ಟೆಪಾಡಿಗೊಂದು ಕಾರ್ಯ.. ಎರಡು ಮೂರು ತಿಂಗಳಿಗೊಮ್ಮೆ, ಖುಷಿಗೆ ಹಬ್ಬ ಹರಿದಿನಗಳಿಗೊಮ್ಮೆ  ದೂರದ ಗೂಡಿಗೆ ಹೋದಾಗ ಅಮ್ಮನ ಮಡಿಲಿನ ಸುಖ…! ಆಹಾ…..! ಅಮ್ಮನ ಮಡಿಲಿನ ಮುಂದೆ ಸ್ವರ್ಗವೂ ಶೂನ್ಯ.. ಈ ಅಪಾರ್ಟಮೆಂಟ್’ನಲ್ಲಿ ಯಾವ ಸುಖವೂ ಇಲ್ಲ… ನೀನಿರುವ ಮನೆ ಹೆಂಚಿನದಾದರೂ ಅದರಲ್ಲಿ ತುಂಬಿರೋದು ಬರೀ ಖುಷಿ.. ಅಲ್ಲಿ ಮೆತ್ತನೆಯ ದಿಂಬು, ಸೋಫಾ, ಬೆಡ್ ಎಲ್ಲ ಇದ್ದರೂ, ನಿನ್ನ ಮಡಿಲಿನ ಸುಖವಿಲ್ಲ.. ಬ್ಯೂಟಿ ಪಾರ್ಲರ್ ಅಕ್ಕ ಮಾಡುವ ಮಸಾಜ್’ಗಿಂತ ಕೆಲಸ ಮಾಡುತ್ತಲೇ ಸವೆದು ಒರಟಾದ ನಿನ್ನ ಕೈಯಿಂದ, ದೂರದ ಸಿಟಿಯಿಂದ ಹಳ್ಳಿಗೆ ಓಡೋಡಿ ಬಂದ ನನ್ನ ಮುಖವನ್ನೊಮ್ಮೆ ಸವರಿ ದೃಷ್ಟಿ ತೆಗೆದು ಬೆರಳುಗಳನ್ನ “ಲಟಕ್ ಲಟಕ್ ” ಅನ್ನಿಸಿದಾಗ ಆಗುವ ಆ ಶಬ್ದದಲ್ಲೇ ಆಯಾಸವೆಲ್ಲ ಮರೆಯಾಗಿಬಿಡುತ್ತೆ…

ಅಪ್ಪನ ಜೊತೆ ಈ ಮೊಬೈಲ್ ಮಾತು ಬೇಸರವಾಗಿದೆ.. ಗದ್ದೆ ತೋಟ ಅಲೆಯುತ್ತ, ಅಪ್ಪನೊಡನೆ ಮಾತನಾಡುತ್ತ ನಡೆದರೆ ಅದೆಂತದೋ ಖುಷಿ… ಅಪ್ಪ ಕಿತ್ತು ತಂದ ಕಡಲೆಕಾಯಿ, ಜೋಳ ತಿನ್ನುತ್ತಿದ್ದರೆ ಈ ಸಿಟಿಯ ಕೊಂಡು ತಿನ್ನುವ ಕಡಲೆಕಾಯಿ, ಜೋಳ ಎಲ್ಲವೂ ಸಪ್ಪೆಯೆನಿಸುತ್ತವೆ.. ಗೋಬಿ ಮಂಚೂರಿ, ಪಾನಿಪೂರಿಗಳು ಅಮ್ಮ ಮಾಡುವ ಉಳ್ಳಾಗಡ್ಡಿ ಬಜ್ಜಿಯ ಮುಂದೆ ರುಚಿ ಕಳೆದುಕೊಂಡಿರುವಂತೆನಿಸುತ್ತವೆ..

ಮಹಾನಗರಗಳಲ್ಲಿ ಸದಾ ಬಾಗಿಲು ಮುಚ್ಚಿಕೊಂಡೇ ಇರುವ, ಎದುರಿಗೆ ಸಿಕ್ಕರೂ ಸೌಜನ್ಯಕ್ಕೂ ಒಂದು ಮಾತನಾಡದ ಪಕ್ಕದ ಮನೆಯವರಿಗಿಂತ ಹಳ್ಳಿಯ ಮನೆಯ ಪಕ್ಕದಲ್ಲಿರುವ ಗಂಗಮ್ಮನ ಮಾತೃ ಹೃದಯ ನೆನಪಾಗುತ್ತದೆ.. ಯಾವ ರಕ್ತ ಸಂಬಂಧವೂ ಇಲ್ಲದ ಗಂಗಮ್ಮನ ಹಾಡು, ಬಾಯ್ತುಂಬ ಆಡುವ ಮಾತುಗಳು ಮನದ ಮೂಲೆಯಲ್ಲಿ ಇಣುಕಿದಾಗ ಮೊಗದಲ್ಲೊಂದು ಮಂದಹಾಸ… ಅವಳೇ ಮಾಡಿಟ್ಟ ಚುರುಮುರಿಯನ್ನು ಅವಳ ಮನೆಗೆ ಹೋಗಿ ಅವಳ ಪರ್ಮಿಷನ್ ಇಲ್ಲದೇ ತಿನ್ನುವಷ್ಟು ಸಲಿಗೆ..”ಅದೇನ್ ಸಿಟಿನೋ ಪಾಕೀಟ್ ಹಾಲಿನ್ ಚಾ ಮಾಡ್ತಾರಂತ… ನೀವ್ ಅದೆಂಗ್ ಕುಡಿತೀರೋ… ಇರು ಆಕಳ ಹಾಲ್ ಐತಿ.. ಚಾ ಮಾಡ್ತನಿ.. ಬರೇ ಚುರುಮುರಿ ತಿನಬ್ಯಾಡ.. “ಅನ್ನೊ ಅವಳ ಮಮತೆ ಏನು ಕೊಟ್ಟರೂ ಸಿಗಲಾರದು… ನಿಮಗೂ ನಿಮ್ಮ ಗೆಳೆಯ /ಗೆಳತಿಯ ತಾಯಿಯಲ್ಲಿ, ಪಕ್ಕದ ಮನೆಯ ಅಜ್ಜಿಯಲ್ಲಿ, ಗಂಗಮ್ಮ ಕಾಣಬಹುದು…

ಇನ್ನು ಗೆಳೆಯ ಗೆಳತಿಯರು ಕೇವಲ ವಾಟ್ಸಪ್, ಫೇಸ್ಬುಕ್ ನಲ್ಲಿ ಆಗಾಗ ಇಣುಕಿ ನೋಡುವವರೆಗೆ ಮಾತ್ರ ನಾವು ಬಿಡುವಿದ್ದೇವೆ… ಪಾಪ ಮಹಾನಗರ, ಮಹಾನ್ ವಿದೇಶಗಳಲ್ಲಿ ಬೀಡುಬಿಟ್ಟಿರುವ ನಾವುಗಳು ..

ನಮ್ಮದೇ ದೇಶದ ಮಹಾನಗರಗಳಲ್ಲಿದ್ದರೆ ಏನೋ ಎರಡು ಮೂರು ತಿಂಗಳಿಗೊಮ್ಮೆಯಾದರೂ ಅಮ್ಮ, ಅಪ್ಪ, ಗೆಳೆಯ ಗೆಳತಿಯರನ್ನು ನೋಡಬಹುದು, ಅವರೊಡನೆ ಕಾಲ ಕಳೆಯಬಹುದು.. ದೂರ ದೇಶದಲ್ಲಿದ್ದರೆ ಎರಡು ಮೂರು ತಿಂಗಳಿಗೊಮ್ಮೆ ಬರುವುದಕ್ಕಾಗುತ್ತದೆಯೇ..? ಇಲ್ಲ.. ವಿದೇಶದಲ್ಲಿರುವ ಮಗ/ಮಗಳು “ಅಪ್ಪ ಅಮ್ಮನಿಗೆ ಕೇವಲ ದುಡ್ಡು ಕಳಿಸುತ್ತಿದ್ದೇನೆ..” ಎನ್ನುತ್ತಾ, ವಯಸ್ಸಾಗಿರುವ ಅವರೊಡನೆ ಕಾಲ ಕಳೆದು, ಅವರನ್ನು ನೋಡಿಕೊಳ್ಳಲಾಗದ ಅನಿವಾರ್ಯತೆಗೆ ಬೈದುಕೊಂಡು ಹಲುಬುತ್ತಾರೆ. ಏನು ಮಾಡುವುದು, ಎಲ್ಲಾ ಅನಿವಾರ್ಯತೆಯ ಕರ್ಮ ..

ಹೀಗೇ ಓದಲೆಂದು ಬಂದವರು, ಕೆಲಸಕ್ಕೆಂದು ಬಂದವರು, ಅಪ್ಪ ನಿರುದ್ಯೋಗಿ ಎಂದು ಬೈದನೆಂದು ಹಳ್ಳಿ ಬಿಟ್ಟು ಪಟ್ಟಣ ಸೇರಿದವರು ನಾವು… ಪುಸ್ತಕ ತೆಗೆದಾಗ ಅದರಲ್ಲಿ ಬಿಟ್ಟು ಬಂದ ಗೂಡಿನ ಚಿತ್ರ ಕಾಣುತ್ತದೆ.. ಕೆಲಸಕ್ಕೆ  ಬಂದವರಿಗೆ ಒಂಥರ ಅನಾಥ ಪ್ರಜ್ಞೆ ಕಾಣುತ್ತದೆ… ಓಡಿ ಹೋಗಿಬಿಡೋಣ ಅನಿಸಿಬಿಡುತ್ತದೆ ಒಮ್ಮೊಮ್ಮೆ ನಮ್ಮವವರಿರುವತ್ತ.. ಬಿಡದೇ ಹಿಂದೆಯೇ ನಿಂತಿರುತ್ತದೆ ನಮ್ಮ ಓದಿನ, ಕೆಲಸದ ಅನಿವಾರ್ಯತೆ..

ಬಾಸ್ ನನ್ನು ಕಾಡಿ ಬೇಡಿ ರಜೆಯ ಪತ್ರಕ್ಕೆ ಅವರ ಸಹಿ ಒತ್ತಿಸಿಕೊಂಡು, ಹೇಗೋ ಗೂಡಿನತ್ತ ಪ್ರಯಾಣ ಬೆಳೆಸಿ, ನಾವು ಹೋಗುವ ದಿನವನ್ನೇ  ಹಬ್ಬವೇನೋ ಎನ್ನುವಂತೆ ಸಂಭ್ರಮಿಸಿ ಅಮ್ಮ ಮಾಡಿದ ತಿಂಡಿಗಳನ್ನು ಚಪ್ಪರಿಸಿ ತಿಂದು… ಅಪ್ಪನೊಡನೆ ಪಟಪಟ ಮಾತಾಡಿ.. ಊರ ದೇವಿಯ ದೇವಸ್ಥಾನದ ಗಂಟೆ ಹೊಡೆದು ಕೈಮುಗಿದು, ಮಕ್ಕಳೊಂದಿಗೊಂದಿಷ್ಟು ಮಕ್ಕಳಾಗಿ ಸಂಭ್ರಮಿಸಿ, ಊರ ಪಕ್ಕದ ಬೆಟ್ಟ ಹತ್ತಿ ಕಾಡು ಹಣ್ಣುಗಳನ್ನು ಕಿತ್ತು ತಿಂದು, ಕೊನೆಗೆ ಮತ್ತದೆ ಬೇಸರದಿಂದ ಬಸ್ಸು ಹತ್ತುವಾಗ ಅಪ್ಪ ಅಮ್ಮನ ಕಣ್ಣಂಚು ಒದ್ದೆಯಾಗಿರುತ್ತವೆ..” ಹುಷಾರು.. ಮನಿ ಮುಟ್ಟಿದ ಮ್ಯಾಲ ಒಂದ್ ಫೋನ್ ಮಾಡು.. ಇನ್ನೊಂದ್ ಸಾರಿ ಬರಬೇಕಾದ್ರ ಇನ್ನೊಂದ್ ನಾಕ ದಿನ ಹೆಚ್ಚಿಗಿ ಸೂಟಿ ಮಾಡಿ ಬಾ… ನಾಕ್ ದಿನ ಹೆಂಗ್ ಕಳ್ದು ಹೋತೋ ಗೊತ್ತಾಗ್ಲಿಲ್ಲ…ನೀ ಮನ್ಯಾಗ ಇದ್ದಂಗ ಆಗ್ಲಿಲ್ಲ” ಅಂತ ಬಸ್ ಹೊರಡೋವರೆಗೂ ಅಪ್ಪ, ಅಮ್ಮ ಮಾತಾಡುತ್ತಲೇ ಇರುತ್ತಾರೆ… ತಾಯಿ ತಂದೆ ಗುಬ್ಬಚ್ಚಿಗಳನ್ನು, ತನ್ನ ಗೂಡನ್ನೂ ಬಿಟ್ಟು ಹೋಗುತ್ತಿರುವ ಮರಿ ಗುಬ್ಬಚ್ಚಿಯ ಕಣ್ಣಲ್ಲಿ ಅದಾಗಲೇ ನೀರು ತುಂಬಿರುತ್ತದೆ.. ಮನಸಿಲ್ಲದೇ ಅಪ್ಪ ಅಮ್ಮನಿಗೆ ಬೈ ಹೇಳಿ ಪಟ್ಟಣ ತಲುಪಿ ಬೇಡ ಬೇಡವೆಂದರೂ ಬ್ಯಾಗ್ ಕಿತ್ತು ಹೋಗುವ ಹಾಗೆ ಅಮ್ಮ ತುಂಬಿದ ತಿಂಡಿಗಳನ್ನು ಎಲ್ಲರ ಜೊತೆ ಹಂಚಿ ತಿನ್ನುವಾಗ ಮತ್ತೆ ಅದೇ ಗೂಡಿನ ನೆನಪಾಗುತ್ತದೆ.. ಅಪ್ಪ ಅಮ್ಮನಿಗೆ ಕಾಲ್ ಮಾಡಿ ತಲುಪಿದ್ದೇನೆ ಎಂದು ಹೇಳಿ ಮಲಗಿ ಎಷ್ಟೋ ಹೊತ್ತು ನಿದ್ದೆ ಬರದೇ ಉರುಳಾಡಿ… ಮರುದಿನ ಎದ್ದು ಅದೇ ಕಾಲೇಜ್, ಅದೇ ಆಫೀಸ್ ಸೇರಿದರಾಯಿತು… ಮತ್ತೆ ಗೂಡಿಗೆ ಹೊರಡುವ ದಿನಕ್ಕೆ ಕಾಯುತ್ತಿರುತ್ತದೆ ಮನಸು… ಬೇಕೆಂದಾಗ ಸಿಗದ ಪ್ರೀತಿ, ಪ್ರೇಮ ವಾತ್ಸಲ್ಯಗಳು.. ಅನಿವಾರ್ಯತೆಗೆಗಾಗಿ ಆರ್ಟಿಫೀಷಿಯಲ್ ಜೀವನ…

ಈ ಕಥೆ ನನ್ನದಷ್ಟೇ ಅಲ್ಲ. ನನ್ನ ಹಾಗೇ ಬದುಕಿನ ಅನಿವಾರ್ಯತೆಗೆ ಅಮ್ಮ, ಅಪ್ಪ ಸಂಬಂಧಿಗಳಿರುವ ಗೂಡು ಬಿಟ್ಟು ದೂರದಲ್ಲಿರುವ ಸಿಟಿಗೆ, ದೂರದಲ್ಲಿರುವ ಭಾಷೆ, ವೇಷ ಯಾವುದೂ ನಮ್ಮಂತಿರದ ದೇಶಗಳಲ್ಲಿ ಬೀಡುಬಿಟ್ಟಿರುವ ನನ್ನಂತಹುದೇ ಗುಬ್ಬಚ್ಚಿಗಳ ಕಥೆ ಮತ್ತು ವ್ಯಥೆ.. ಹೌದಲ್ಲವೇ..??

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post