X
    Categories: ಕಥೆ

ಕಾಮಿತಾರ್ಥ-ಭಾಗ ೩

ಜಪಾನೀ ಮೂಲ: ಹರುಕಿ ಮುರಕಮಿ

ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಟೆಂಗೊ ಕತೆಯನ್ನು ಎರಡು ಸಲ ಓದಿದ. ಲೋಕದ ಕಣ್ಣಲ್ಲಿ ಕಳೆದು ಹೋಗಲಿಕ್ಕೆಂದೇ ಬಂದಿಳಿಯಬೇಕಿದ್ದ ಕೊನೆಯ ನಿಲ್ದಾಣ ಎಂಬ ಮಾತು ಅವನನ್ನು ಹಲಸಿನ ಮೇಣದಂತೆ ಕಚ್ಚಿ ಹಿಡಿಯಿತು. ಪುಸ್ತಕವನ್ನು ಮುಚ್ಚಿ ಹೊರಗಿನ ಔದ್ಯಮಿಕ ವೈಭವದ ದೃಶ್ಯಗಳನ್ನು ನೋಡುತ್ತಾ ಕುಳಿತ. ಸ್ವಲ್ಪ ಹೊತ್ತಲ್ಲೇ ಅವನಿಗೊಂದು ಗಾಢವಾದ ನಿದ್ರೆ ಆವರಿಸಿತು. ಎಚ್ಚರಾದಾಗ ಮೈಯೆಲ್ಲ ಬೆವತಿತ್ತು. ಟ್ರೇನು ಇನ್ನೂ ಓಡುತ್ತಲೇ ಇತ್ತು.

ಟೆಂಗೊನಿಗಿನ್ನೂ ನೆನಪಿದೆ. ಅದು ಐದನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ತುಂಬಾ ದಿನಗಳ ಆಳವಾದ ಯೋಚನೆಯ ನಂತರ ಒಂದು ದಿನ ಟೆಂಗೊ ತನ್ನ ತಂದೆಯ ಎದುರು ನಿಂತು ಇನ್ನು ತಾನು ಭಾನುವಾರದ ರೌಂಡುಗಳಿಗೆ ಬರುವುದಿಲ್ಲ ಎಂದು ತಣ್ಣಗೆ ಘೋಷಿಸಿಬಿಟ್ಟ. ಆ ಸಮಯವನ್ನು ಓದೋದಕ್ಕೆ, ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಕಲಿಯೋದಕ್ಕೆ, ಗೆಳೆಯರ ಜೊತೆ ಆಡೋದಕ್ಕೆ ಕಳೆಯುತ್ತೇನೆ ಎಂದು ಧೈರ್ಯ ಮಾಡಿ ಹೇಳಿ ಬಿಟ್ಟ. ನನಗೂ ಬೇರೆ ಹುಡುಗರ ಹಾಗೆ ಬದುಕಬೇಕು ಅನ್ನಿಸ್ತಿದೆ ಅಂತಲೂ ಸೇರಿಸಿದ. ತಾನೇನು ಹೇಳ ಬಯಸಿದ್ದನೋ ಅದನ್ನು ಆದಷ್ಟು ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ಹೇಳಿ ಮುಗಿಸಿದ್ದ. ಊಹಿಸಿದ್ದಂತೆಯೇ ಅಪ್ಪ ಹಾರಾಡಿದ. ಬೇರೆಯವರ ಮನೆ ಸುದ್ದಿ ನನಗ್ಗೊತ್ತಿಲ್ಲ; ನಮಗೆ ನಮ್ಮದೇ ಆದ ರೀತಿ ರಿವಾಜು ಇದೆ ಅಂದ. ಬದುಕೋದು ಹೇಗೆ ಅಂತ ನನಗೇ ಹೇಳಿ ಕೊಡುವಷ್ಟು ದೊಡ್ಡೋನಾದಿಯೋ ಸರ್ವಜ್ಞ ಮುನಿ? ಹೇಗೆ ಬದುಕಬೇಕು, ಹೇಗೆ ನಿನ್ನನ್ನು ಬೆಳೆಸಬೇಕು ಅಂತ ನನಗೆ ಗೊತ್ತಿದೆ. ಅದನ್ನ ನಿನ್ನಂಥಾ ಎಳಸು ಗಿಡದಿಂದ ಕಲಿಯಬೇಕಾದ್ದಿಲ್ಲ ನನಗೆ ಎಂದು ಕಿರುಚಿದ. ಮನೆ ರಣರಂಗವಾಯಿತು. ಟೆಂಗೊ ಮೌನವಾದ. ತನ್ನ ಮಾತುಗಳೊಂದೂ ಅಪ್ಪನ ಒಳಗಿಳಿಯುವುದು ಸಾಧ್ಯವಿಲ್ಲ ಎನ್ನುವುದು ಅವನಿಗೆ ಖಚಿತವಾಗಿತ್ತು. ರೋಷದಿಂದ ಕುದಿಯುತ್ತಾ ಹೋದ ಅಪ್ಪ ಕೊನೆಗೆ “ನಿನಗೆ ನನ್ನ ಮಾತು ಕೇಳೋದಕ್ಕೆ ಕಷ್ಟವಾದರೆ ಈ ಮನೆಯಲ್ಲಿ ಇರಬೇಕಾಗಿಲ್ಲ. ಪೆಟ್ಟಿಗೆ ಕಟ್ಟಿಕೊಂಡು ಹೊರಡು, ಹಾಳಾಗಿ ಹೋಗು” ಎಂದು ಬಿಟ್ಟ.

ಬಿಸಿಲಿಗೆ ಬಿದ್ದ ಜೇಡಿ ಮಣ್ಣು ಗಟ್ಟಿಯಾಗುತ್ತಾ ಹೋದಂತೆ ಟೆಂಗೊನ ಮನಸ್ಸಿನಲ್ಲಿ ಅಪಕ್ವವಾಗಿ ಮೊಳೆತಿದ್ದ ನಿರ್ಧಾರವೂ ಅಪ್ಪನ ಮಾತಿನ ಬೆಂಕಿಗೆ ದೃಢಗೊಳ್ಳುತ್ತಾ ಹೋಯಿತು. ಮರು ದಿನ ಶಾಲೆಯಲ್ಲಿ ಪಾಠಗಳೆಲ್ಲ ಮುಗಿದ ಮೇಲೆ ಟೆಂಗೊ ತನ್ನ ಇಷ್ಟದ ಟೀಚರ್ ಬಳಿ ಹೋಗಿ ತನ್ನ ಪರಿಸ್ಥಿತಿ ಹೇಳಿಕೊಂಡ. ಅಪ್ಪ ಕಿರುಚಾಡಿದ್ದನ್ನೂ ತನಗೆ ಆ ಮನೆಯಲ್ಲಿ ಇರುವುದಕ್ಕೆ ಯಾವ ಇಷ್ಟವೂ ಇಲ್ಲ ಎನ್ನುವುದನ್ನೂ ನಿರ್ಭಾವುಕನಾಗಿ ವಿವರಿಸಿದ. ಟೀಚರ್ ಅವನಿಗೆ ಸಹಾಯ ಮಾಡುವುದಾಗಿ ಮನಃಪೂರ್ವಕ ಒಪ್ಪಿಕೊಂಡರು. ನಂತರ ಆಕೆ ಮನೆಗೆ ಬಂದು ಅಪ್ಪನ ಜೊತೆ ಮಾತಾಡಿದರು. ಆಗ ಕೋಣೆಯಿಂದ ಹೊರ ಕಳಿಸಿದ್ದರಿಂದ ಅವರ ಮಾತುಕತೆಯ ವಿವರಗಳು ಟೆಂಗೊನಿಗೆ ಗೊತ್ತಾಗಲಿಲ್ಲ. ಆದರೆ, ಅಪ್ಪನನ್ನು ಟೀಚರು ಚೆನ್ನಾಗಿ ಬೆವರಿಳಿಸಿರಬಹುದು ಎಂದು ಮನಸ್ಸು ಹೇಳುತ್ತಿತ್ತು. ಅದಾದ ಮೇಲೆ ಅಪ್ಪ ಹಲ್ಲು ಕಿತ್ತ  ಹಾವಿನಂತೆ ಆಗಾಗ ಅಸಹಾಯಕನಾಗಿ ಬುಸುಗುಡುತ್ತಿದ್ದ. ಹತ್ತು ವರ್ಷದ ಹುಡುಗನನ್ನು ಮನೆಯಿಂದ ಹೊರ ಹಾಕುವುದು ಅವನಿಗೆ ಸಾಧ್ಯವಿರಲಿಲ್ಲ. ಹಾಗೇನಾದರೂ ಆಗಿದ್ದರೆ ಪೋಲೀಸರು ಬಂದು ಅವನನ್ನು ಎಳೆದೊಯ್ಯಬಹುದಾಗಿತ್ತು. ಕಾನೂನಿಗೆ ಹೆದರಿ ಅಪ್ಪ ತನ್ನನ್ನು ಮನೆಯಲ್ಲಿ ಇರಗೊಟ್ಟ. ಅಲ್ಲದೆ, ಟೀಚರು ತಾಕೀತು ಮಾಡಿದ್ದರಿಂದ ಅಪ್ಪ ಭಾನುವಾರದ ತಿರುಗಾಟದಿಂದ ತನಗೆ ವಿನಾಯಿತಿ ಕೊಡುವ ಹಾಗಾಯಿತು.  ಇದು ಅಪ್ಪನೆಂಬೋ ರಾಕ್ಷಸನ ವಿರುದ್ಧ ಟೆಂಗೊ ದಾಖಲಿಸಿದ ಮೊದಲ ದಿಗ್ವಿಜಯ! ಒಂದು ಸ್ವಾತಂತ್ರ್ಯ ಹೋರಾಟ ಗೆದ್ದ ಹುಮ್ಮಸ್ಸು ಅವನ ಮೈಯಿಡೀ ತುಂಬಿಕೊಂಡಿತ್ತಾಗ.

***

ಆಸ್ಪತ್ರೆಯ ರಿಸೆಪ್ಷನ್‍ನಲ್ಲಿ ಟೆಂಗೊ ತನ್ನ ಮತ್ತು ತಂದೆಯ ಹೆಸರು ಹೇಳಿದ.

“ನೀವು ಬರೋ ವಿಷಯ ನಮಗೆ ಮುಂಚಿತವಾಗಿ ತಿಳಿಸಿದೀರಾ?” ಎಂದು ಕೇಳಿದಳು  ಅಲ್ಲಿ ಕೂತಿದ್ದ ಯುವತಿ. ಇಂತಹ ಆಸ್ಪತ್ರೆಗಳಿಗೆ ಹೇಳಿ ಮಾಡಿಸಿದ ಆಕರ್ಷಕ ಮೈಕಟ್ಟಿನ ತುಂಬ ಶಿಷ್ಟಾಚಾರದ ಸ್ವಾಗತಕಾರಿಣಿ.

“ಇಲ್ಲ, ಇವತ್ತು  ಬೆಳಿಗ್ಗೆಯಷ್ಟೇ ನನಗೆ ಇಲ್ಲಿ ಬರಬೇಕು ಅಂತ ಅನ್ನಿಸ್ತು. ಹಾಗೇ ಟ್ರೇನ್ ಹತ್ತಿಬಿಟ್ಟೆ”, ಪ್ರಾಮಾಣಿಕವಾಗಿ  ಉತ್ತರಿಸಿದ ಟೆಂಗೊ.

ಈಗ ಆ ಯುವತಿ ಒಂದು ವಿಚಿತ್ರ ಅಸಹನೆಯನ್ನು ಮುಖ ತುಂಬ ತುಂಬಿಕೊಂಡಳು. “ಇಲ್ಲಿಗೆ ಬಂದು ಹೋಗೋರು ಮೊದಲೇ ನಮಗೆ ತಿಳಿಸಿರಬೇಕು. ನಮಗೆ ನಮ್ಮದೇ ಆದ ರೂಲ್ಸುಗಳಿವೆ ಇಲ್ಲಿ. ಅಲ್ಲದೆ ಪೇಷಂಟುಗಳ ಜೊತೆನೂ ಮಾತಾಡಿ ಅವರಿಗೆ ಭೇಟಿ ಮಾಡೋ ಇಚ್ಛೆ ಇದೆಯೋ ಇಲ್ವೋ ಅಂತಾನೂ ತಿಳ್ಕೋಬೇಕಾಗುತ್ತೆ” ಎಂದಳು ಸಣ್ಣ ಕೋಪದಿಂದ.

“ಕ್ಷಮಿಸಿ, ಗೊತ್ತಿರಲಿಲ್ಲ”

“ಕಳೆದ ಸಲ ಯಾವತ್ತು ಬಂದಿದ್ದು ನೀವು?”

“ಎರಡು ವರ್ಷದ ಹಿಂದೆ”

“ಎರಡು ವರ್ಷ”, ಮುಖವನ್ನೆತ್ತದೆ ಆಕೆ ಹಾಜರಾತಿ ಪುಸ್ತಕದಲ್ಲಿ ಹಾಳೆ ತಿರುಗಿಸುತ್ತ ಹೇಳಿದಳು, “ಎರಡು ವರ್ಷದಲ್ಲಿ ನೀವು ಒಮ್ಮೆಯೂ ಬರಲಿಲ್ವಾ?”

ಟೆಂಗೊ ಮಾತಾಡಲಿಲ್ಲ. “ನಮ್ಮ ದಾಖಲೆಗಳ ಪ್ರಕಾರ ನೀವು ಮಿಸ್ಟರ್ ಕವಾನಾ ಅವರ ಏಕೈಕ ಸಂಬಂಧಿ” ಎಂದಳು ಆಕೆ.

“ಹೌದು” ಎಂದ.

ಆಕೆ ಈಗ ಮುಖವೆತ್ತಿ ಅವನ ಮೈ ಮೇಲೊಮ್ಮೆ ಕಣ್ಣಾಡಿಸಿದಳು. ಬಂದಿರುವ ಆಗಂತುಕ ಸಂದರ್ಶಕನನ್ನು ಪ್ರಾಥಮಿಕ ತಪಾಸಣೆಗೊಳಪಡಿಸುವ ಹಾಗಿದ್ದವು ಅವಳ ನೋಟ. ಎರಡು ವರ್ಷದಲ್ಲಿ ಒಮ್ಮೆಯೂ ಬಂದಿಲ್ಲ ಎಂದು ಹೇಳಿದ್ದರಿಂದ ಅವಳಿಗೇನೂ ಅಷ್ಟು ಆಶ್ಚರ್ಯವಾದ ಹಾಗೆ ಕಾಣಲಿಲ್ಲ. ಬಹುಶಃ ಇಂತಹ ಅದೆಷ್ಟು ಕೇಸುಗಳನ್ನು ಆಕೆ ನಿತ್ಯ ನೋಡಬೇಕೋ!

“ಈಗ ಸದ್ಯಕ್ಕೆ ನಿಮ್ಮ ತಂದೆ ಗ್ರೂಪ್ ಥೆರಪಿ ಕ್ಲಾಸಿಗೆ ಹೋಗಿದ್ದಾರೆ. ಇನ್ನೊಂದು ಅರ್ಧ ಗಂಟೇಲಿ ಮುಗಿಯುತ್ತೆ ಅದು. ಆಮೇಲೆ ನೀವು ಅವರನ್ನ ನೋಡ್ಬಹುದು” ಎಂದಳು.

“ಹೇಗಿದ್ದಾರೆ ಈಗ?” ಎಂದು ಮೆತ್ತಗೆ ಕೇಳಿದ.

“ದೇಹದ ಆರೋಗ್ಯದಲ್ಲಿ ಪರ್ವಾಗಿಲ್ಲ. ಆದರೆ ಇದರ ಸಮಸ್ಯೆ ಕಾಡ್ತಾ ಇದೆ” ಎಂದು ಆಕೆ ತನ್ನ ಹಣೆಯನ್ನು ತೋರು ಬೆರಳಿಂದ ಸಣ್ಣಗೆ ಬಡಿದಳು. ಟೆಂಗೊ ಅವಳಿಗೆ ವಂದಿಸಿ ಆಸ್ಪತ್ರೆಯ ಲೌಂಜಿನಲ್ಲಿ ಕೂತ. ತೆರೆದ ವಿಶಾಲ ಕಿಟಕಿಗಳಿಂದ ಆಗೀಗ ಸಮುದ್ರದ ಕಡೆಯಿಂದ ಆಹ್ಲಾದಕರವಾದ ಗಾಳಿ ಬೀಸಿ ಬಂದು ಇಡೀ ಕೋಣೆಯನ್ನು ತುಂಬುತ್ತಿತ್ತು. ಹೊರಗೆ ತೋಟದಲ್ಲಿ ನೆಟ್ಟ ಗಾಳಿ ಮರಗಳು ಸುಂಯ್ ಎಂದು ಕೊಂಬೆಗಳನ್ನು ಆಡಿಸುತ್ತಿದ್ದವು. ಮರದ ತೊಗಟೆಯ ಅಡಿಯಲ್ಲಿ ಅಡಗಿ ಕೂತ ಜೀರುಂಡೆಗಳು ತಮ್ಮ ಕೊರಳೆತ್ತಿ ಪ್ರೇಮಗೀತೆ ಹಾಡಿಕೊಳ್ಳುತ್ತಿದ್ದವು.

ಸ್ವಲ್ಪ ಹೊತ್ತಾದ ಬಳಿಕ ಅ ಯುವತಿ ಬಂದು “ಈಗ ನಿಮ್ಮ ತಂದೆಯವರನ್ನು ನೋಡಬಹುದು” ಎಂದು ಕರೆದಳು. ಅವಳನ್ನು ಹಿಂಬಾಲಿಸಿದ ಟೆಂಗೊನಿಗೆ ಆಸ್ಪತ್ರೆಯಲ್ಲಿ ಹಾಕಿದ್ದ ಒಂದು ದೊಡ್ಡ  ಕನ್ನಡಿಯೆದುರು ಹಾದು ಹೋದಾಗ ತಾನು ಹಾಕಿದ್ದ ಜೀನ್ಸ್ ಪ್ಯಾಂಟು, ಅದರ ಮೇಲೆ ಹೇರಿಕೊಂಡ ಗೋಣಿ ಚೀಲದಂತಹ ಜಾಕೀಟು, ತಪ್ಪು ತೂತುಗಳಿಗೆ ಹೋಗಿ ಕೊರಳು ಸಿಕ್ಕಿಸಿಕೊಂಡಂತಿದ್ದ ಬಟನ್ನುಗಳ ಅಧ್ವಾನ, ಷರಟಿನ ಎಡತೋಳಿನ ಮೇಲೆ ಎದ್ದುಕಾಣುವ ಟೊಮೇಟೋ ಸಾಸೇಜಿನ ಕಲೆ, ತಲೆಗೆ ಸಿಕ್ಕಿಸಿಕೊಂಡ ಬೇಸ್‍ಬಾಲ್ ಕ್ಯಾಪ್ ಎಲ್ಲ ನೋಡಿ ನಗು ಬಂತು. ಇಂತಹ ವಿಚಿತ್ರ ಛದ್ಮವೇಷದಲ್ಲಿ ಬಂದು ಎರಡು ವರ್ಷದಿಂದ ಅಪ್ಪನನ್ನು ನೋಡಿಲ್ಲ ಎಂದು ಹೇಳುವ ಮೂವತ್ತು ವರ್ಷದ ಯುವಕನನ್ನು ಹೇಗೆ ನೋಡಬೇಕೋ ಹಾಗೆಯೇ ಈ ಯುವತಿ ನೋಡಿದ್ದಾಳೆ ಎಂದು ಸಮಾಧಾನವೂ ನಾಚಿಕೆಯೂ ಆಯಿತು.

***

ಅಪ್ಪ ತನ್ನ ಕೋಣೆಯಲ್ಲಿ ಕಿಟಕಿ ಪಕ್ಕದಲ್ಲಿ ಬಿಡಿಸಿಟ್ಟ ಕುರ್ಚಿಯಲ್ಲಿ, ಎರಡೂ ಕೈಗಳನ್ನು ತೊಡೆಗಳ ಮೇಲೆ ಶಿಸ್ತಿನಿಂದ ಇಟ್ಟುಕೊಂಡು ಕೂತಿದ್ದ. ಹತ್ತಿರದಲ್ಲಿದ್ದ ಅಲಂಕಾರದ ಕುಂಡದಲ್ಲಿ ಒಂದಷ್ಟು ನಾಜೂಕಾದ ಹಳದಿ ಹೂಗಳು ಅರಳಿ ನಿಂತಿದ್ದವು. ಮುದುಕರಿಗೆ ಬಿದ್ದರೆ ಪೆಟ್ಟಾಗಬಾರದೆಂದು ಮುಂಜಾಗ್ರತೆಯ ಕ್ರಮವಾಗಿ ನುಣ್ಣನೆಯ ನೆಲ ಮಾಡಿಸಿದ್ದರು. ಕೋಣೆಯ ಒಳ ಹೊಕ್ಕಾಗ ಟೆಂಗೊನಿಗೆ ಒಂದು ಕ್ಷಣ ತನ್ನ ಅಪ್ಪನನ್ನು ಗುರುತು ಹಿಡಿಯಲು ಆಗಲಿಲ್ಲ. ವೃದ್ಧಾಪ್ಯ ಆ ಜೀವವನ್ನು ಉಪ್ಪಿನ ಭರಣಿಯಲ್ಲಿ ಮುಳುಗಿಸಿಟ್ಟ ಮಿಡಿಯಂತೆ ಹಿಂಡಿ ಬಿಟ್ಟಿತ್ತು. ಅವನ ತಲೆ ಕೂದಲನ್ನು ನೀಟಾಗಿ ಕತ್ತರಿಸಿದ್ದರಿಂದ ಹಣೆಯ ಮೇಲಿನ ಭಾಗ ಹಿಮ ಮುಚ್ಚಿದ ಹುಲ್ಲು ಚಾಪೆಯಂತೆ ಕಾಣಿಸುತ್ತಿತ್ತು. ಕೆನ್ನೆಗಳು ಗುಳಿ ಬಿದ್ದಿದ್ದವು. ಕಣ್ಣಿನ ಗುಳಿ, ಬೇಸಗೆಯಲ್ಲಿ ನೀರಿಂಗಿದ ಬಾವಿಯಂತೆ ಇನ್ನಷ್ಟು ಆಳಕ್ಕಿಳಿದಂತೆ ಕಂಡಿತು. ಹಣೆಯ ಮೇಲೆ ಮೂರು ಗೆರೆಗಳು ಕತ್ತಿಯಿಂದ ಕೊರೆದಷ್ಟು ಸ್ಪಷ್ಟವಾಗಿ ಮೂಡಿದ್ದವು. ಹುಬ್ಬುಗಳು ಅಗತ್ಯಕ್ಕಿಂತ ಹೆಚ್ಚು ಉದ್ದಕ್ಕೆ ಚಾಚಿ ಯಾಕೋ ಮುಖಕ್ಕೆ ಹೊಂದುವಂತಿಲ್ಲ ಅನ್ನಿಸುವಂತಿತ್ತು. ಕಿವಿಗಳು ಮಾತ್ರ ಮೊದಲಿನ ಹಾಗೆಯೇ – ಚೂಪಾಗಿ ಆಕಾಶ ನೋಡುತ್ತಿದ್ದವು. ದೂರದಿಂದ ನೋಡಿದರೆ ಅಲ್ಲೊಂದು ಬಾವಲಿ ತನ್ನೆರಡು ರೆಕ್ಕೆಗಳನ್ನು ಮಡಚಿಕೊಂಡು ಕೂತಿದೆ ಅನ್ನಿಸಬೇಕು ಯಾರಿಗಾದರೂ! ಟೆಂಗೊನಿಗೆ, ದೂರದಿಂದ ನೋಡಿದಾಗ, ಅವನು ಮನುಷ್ಯ ಎನ್ನುವುದಕ್ಕಿಂತಲೂ ಮೋಸಗಾರ ಮುಖ ಹೊತ್ತು ಕೂತ  ಮೂಷಿಕದಂತೆಯೇ ಕಂಡ. ತಾನು ಹಿಂದೆ ಕಂಡಿದ್ದ ಮತ್ತು ಸದಾ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ಅಪ್ಪ ಕಷ್ಟಜೀವಿ. ಗಟ್ಟಿಕುಳ. ಭಾವನೆ-ಕಲ್ಪನೆಗಳ ಜಗತ್ತೆಲ್ಲ ಅವನಿಗೆ ಅತೀತವಾದದ್ದಾದರೂ ಅವನಿಗೆ ಅವನದ್ದೇ ಆದ ನೀತಿ-ನಿಯಮಗಳು, ನಂಬಿಕೆ-ಸಿದ್ಧಾಂತಗಳಿದ್ದವು. ಈಗ ತನ್ನೆದುರು ಕೂತಿದ್ದದ್ದು ರಕ್ತ ಮಾಂಸ ತುಂಬಿಕೊಂಡ ಮನುಷ್ಯ ಜೀವವಲ್ಲ; ಆ ಜೀವದ ಖಾಲಿ ಚಿಪ್ಪು ಅಷ್ಟೆ ಎನ್ನಿಸಿತು ಟೆಂಗೊನಿಗೆ.

“ಮಿಸ್ಟರ್ ಕವಾನಾ!”, ನರ್ಸ್ ಒಂದು ತೀಕ್ಷ್ಣವಾದ ಕಂಚಿನ ಕಂಠದಲ್ಲಿ ದನಿಯೆತ್ತಿ ಕರೆದಳು. ಹಾಗೆ ಅದೇ ಸ್ವರದಲ್ಲಿ ಮಾತಾಡಲು ಅವಳಿಗೆ ತರಬೇತಿ ಕೊಟ್ಟಿದ್ದರೋ ಏನೋ. “ಮಿಸ್ಟರ್ ಕವಾನಾ, ಯಾರು ಬಂದಿದಾರೆ ನೋಡಿ, ನಿಮ್ಮ ಮಗ. ಟೋಕಿಯೋದಿಂದ ಬಂದಿದಾರೆ ನಿಮ್ಮನ್ನ ನೋಡೋದಿಕ್ಕೆ” ಎಂದಳು.

ಆತ ದನಿ ಬಂದತ್ತ ತಿರುಗಿ ಕತ್ತೆತ್ತಿದ. ಕಣ್ಣು ಟೆಂಗೊನನ್ನೂ ಸೀಳಿಕೊಂಡು ದೂರದ ಜಗತ್ತನ್ನು ನೋಡುವಂತಿತ್ತು.

ಏನು ಹೇಳುವುದೆಂದು ತಿಳಿಯದೆ ಟೆಂಗೊ “ಹಲೋ” ಎಂದ.

ಅಪ್ಪ ಮಾತಾಡಲಿಲ್ಲ. ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಬರೆದ ನೋಟೀಸ್ ಬೋರ್ಡನ್ನು ಓದುವವನಂತೆ ಟೆಂಗೊನ ಮುಖವನ್ನು ದಿಟ್ಟಿಸಿದನಷ್ಟೆ.

“ಆರೂವರೆಗೆ ಇಲ್ಲಿ ರಾತ್ರಿಯೂಟ ಕೊಡ್ತೇವೆ. ಅಷ್ಟು ಹೊತ್ತಿನವರೆಗೆ ನೀವು ಇದ್ದು ಊಟ ಮಾಡ್ಕೊಂಡು ಹೋಗಿ” ಎಂದು ದಾದಿ ಸೌಜನ್ಯಪೂರ್ವಕವಾಗಿ ವಿನಂತಿಸಿಕೊಂಡಳು.

ಆಕೆ ಅತ್ತ ಹೊರಟುಹೋದ ಮೇಲೆ ಅಷ್ಟುಹೊತ್ತು ನಿಂತಿದ್ದ ಟೆಂಗೊ ಅಪ್ಪನ ಬಳಿ ಸರಿದು ಅವನಿಗೆದುರಾಗಿ ಅಲ್ಲಿದ್ದ ಹಳೇ ಮರದ ಕುರ್ಚಿಯಲ್ಲಿ ಕೂತ. ಅಪ್ಪನ ಕಣ್ಣುಗಳು ಅವನ ಚಲನವಲನಗಳನ್ನು ಹಿಂಬಾಲಿಸುತ್ತಿದ್ದವು.

“ಹೇಗಿದ್ದೀಯ?” ಎಂದು ಕೇಳಿದ ಟೆಂಗೊ.

“ಚೆನ್ನಾಗಿದೇನೆ. ಥ್ಯಾಂಕ್ಯೂ”, ಶಿಷ್ಟಾಚಾರ ಪಾಲಿಸಿದ ಅಪ್ಪ.

ಅಲ್ಲಿಂದ ಮುಂದಕ್ಕೆ ಏನು ಹೇಳಬೇಕೆಂದು ಟೆಂಗೊನಿಗೆ ತೋಚಲಿಲ್ಲ. ತನ್ನ ಕೋಟಿನ ಬಟನ್ನನ್ನು ತಿರುಪಿದ. ಎತ್ತ ನೋಡುವುದೆಂದು ತಿಳಿಯದೆ ಕ್ಷಣಹೊತ್ತು ಮುಖವನ್ನು ಕಿಟಕಿಯಾಚೆ ಕಾಣಿಸುತ್ತಿದ್ದ ಮರಗಳತ್ತ ನೆಟ್ಟ.

“ನೀನು ಟೋಕಿಯೊದಿಂದ ಇಲ್ಲಿಗೆ ಬಂದೆಯಾ?”, ಅಪ್ಪ ಕೇಳಿದ.

“ಹೌದು, ಟೋಕಿಯೊದಿಂದ”

“ಎಕ್ಸ್‍ಪ್ರೆಸ್ ಟ್ರೇನ್ ಹಿಡಿದು ಬಂದಿರಬೇಕು”

“ಹೌದು. ತತಿಯಾಮದವರೆಗೆ ಫಾಸ್ಟ್ ಟ್ರೇನಲ್ಲಿ ಬಂದೆ. ಅಲ್ಲಿಂದ ಚಿಕುರಕ್ಕೆ ಲೋಕಲ್ ಟ್ರೇನ್ ಸಿಕ್ಕಿತು”

“ನೀನಿಲ್ಲಿ ಸಮುದ್ರದಲ್ಲಿ ಈಜೋದಕ್ಕೆ ಬಂದಿರಬಹುದು ಅಲ್ವಾ?”

“ನಾನು ಟೆಂಗೊ. ಟೆಂಗೊ ಕವಾನಾ. ನಿನ್ನ ಮಗ”

ಅಪ್ಪನ ಹಣೆಯ ಮೂರು ಗೆರೆಗಳು ಇನ್ನಷ್ಟು ಆಳಕ್ಕೆ ಇಳಿದುಹೋದವು. ಅವನು ಟೆಂಗೊನನ್ನೆ ದಿಟ್ಟಿಸಿನೋಡಿ “ಹ್ಞ! ಎಲ್ಲರೂ ಸುಳ್ಳು ಹೇಳೋರೇ. ರೇಡಿಯೋ ಬಿಲ್ಲು ಕಟ್ಟೋದಕ್ಕೆ ಹೇಳಿದರೆ ಸುಳ್ಳು ಬೇರೆ ಬರುತ್ತೆ ಬಾಯಲ್ಲಿ” ಅಂತ ಲೊಚಗುಟ್ಟಿದ.

“ಅಪ್ಪ!”, ಟೆಂಗೊ ಆ ಪದವನ್ನು ಉಚ್ಚರಿಸದೆ ವರ್ಷಗಳೇ ಕಳೆದುಹೋಗಿದ್ದವು. “ನಾನು ಟೆಂಗೊ. ನಿನ್ನ ಮಗ”, ಮತ್ತೆ ತಿಳಿಸಿ ಹೇಳುವಂತೆ ಬಿಡಿಸಿ ಮಾತಾಡಿದ.

“ನನಗೆ ಮಗ ಇಲ್ಲ” ಎಂದ ಅಪ್ಪ.

“ನಿನಗೆ ಮಗ ಇಲ್ಲ?”

ಅಪ್ಪ ಇಲ್ಲ ಎನ್ನುವಂತೆ ತಲೆಯಲ್ಲಾಡಿಸಿದ.

“ಹಾಗಾದ್ರೆ ನಾನು ಯಾರು?”

“ಏನೂ ಅಲ್ಲ.” ಮತ್ತೆ ತಲೆಯಾಡಿಸಿದ ಮುದುಕ.

ಟೆಂಗೊನಿಗೆ ಉಸಿರು ಕಟ್ಟಿದಂತಾಯಿತು. ಬಾಯಿಂದ ಮಾತು ಯಾಕೋ ಹೊರಡಲಿಲ್ಲ. ಅಪ್ಪ ಕೂಡ ಮಾತು ಮುಂದುವರಿಸುವಂತೆ ಕಾಣಲಿಲ್ಲ. ಇಬ್ಬರೂ ಎದುರಾಬದುರಾ ಕೂತು ಮೌನದ ಬಲೆ ಹರಡಿಕೊಂಡು ಕಾದರು. ಸಂಜೆಯ ಪರದೆ ಇಡೀ ಊರಿನ ಮೇಲೆ ಸದ್ದಿಲ್ಲದೆ ನಿಧಾನವಾಗಿ ಇಳಿಯುತ್ತಿತ್ತು. ಆ ಮೌನವನ್ನು ಕತ್ತರಿಸಿಹಾಕುವಂತೆ ಹೊರಗೆ ಮರ ಹತ್ತಿ ಕೂತಿದ್ದ ಜೀರುಂಡೆಗಳು ಕಿರ್ರೋಬರ್ರೋ ಎಂದು ತಾರಕಧ್ವನಿಯಲ್ಲಿ ಒರಲುತ್ತಿದ್ದವು.

ಈ ಮನುಷ್ಯ ಸತ್ಯವೇ ಹೇಳ್ತಿರಬಹುದು. ಟೆಂಗೊ ಯೋಚಿಸಿದ. ನೆನಪುಗಳು ಸತ್ತಿರಬಹುದು. ಆದರೆ ಪದಗಳಿಗೆ ಸತ್ಯದ ಲೇಪ ಇನ್ನೂ ಉಳಿದಿದ್ದರೆ?

“ಏನು ನಿನ್ನ ಮಾತಿನ ಅರ್ಥ?” ಕೇಳಿದ ಟೆಂಗೊ.

“ನೀನು ಏನೂ ಅಲ್ಲ” ಅಪ್ಪ ಮತ್ತೆ ಸ್ಪಷ್ಟವಾಗಿ ಹೇಳಿದ. “ಏನೂ ಆಗಿರಲಿಲ್ಲ. ಏನೂ ಆಗಿಯೂ ಇಲ್ಲ. ಆಗುವುದೂ ಇಲ್ಲ”

ಟೆಂಗೊನಿಗೆ ಆ ಕ್ಷಣವೇ ಕುರ್ಚಿಯಿಂದೆದ್ದು  ಹೊರ ನಡೆಯಬೇಕು ಅನ್ನಿಸಿತು. ನೇರ ಸ್ಟೇಷನ್ನಿಗೆ ಹೋಗಿ ಮರಳಿ ಟೋಕಿಯೊಗೆ ಹೋಗಿ ಬಿಡಬೇಕು. ಅನ್ನಿಸಿದ್ದಷ್ಟೆ. ಆದರೆ ಎದ್ದು ನಿಲ್ಲಲು ಮಾತ್ರ ಸಾಧ್ಯವಾಗಲಿಲ್ಲ. ಟ್ರೇನಿಂದ ಇಳಿದು ಮಾರ್ಜಾಲಪುರಕ್ಕೆ ಹೋದ ಯುವಕನಂತೆ ಆಗಿಬಿಟ್ಟಿದ್ದ. ಅವನಿಗೆ ಕುತೂಹಲ ತಣಿಸಿಕೊಳ್ಳಬೇಕಾಗಿತ್ತು. ಎದ್ದೆದ್ದು ಬೀಳುತ್ತಿರುವ ಪ್ರಶ್ನೆಗಳಿಗೆ ಶಾಶ್ವತ ಉತ್ತರ ಬೇಕಾಗಿತ್ತು. ಆ ಉತ್ತರಗಳನ್ನು ಕೊಡುವ ಒಂದೇ ಪೆಟ್ಟಿಗೆ ಈಗ ಅವನೆದುರು ಬಿದ್ದಿತ್ತು. ಆದರೆ ಅದಕ್ಕೆ ಬೀಗ ಹಾಕಿತ್ತು. ಇಷ್ಟು ವರ್ಷಗಳಾದರೂ ಒಡೆಯದೆ, ಒಡೆಯಲಾಗದೆ ಬಿದ್ದಿರುವ ಪೆಟ್ಟಿಗೆ ಇದು. ಟೆಂಗೊನಿಗೆ ಉತ್ತರ ಬೇಕಾಗಿತ್ತು. ಈ ಕ್ಷಣವನ್ನು ಕೈಯಿಂದ ಜಾರಿ ಹೋಗಲು ಬಿಟ್ಟರೆ ಮತ್ತದು ಸಿಗುವುದಿಲ್ಲ ಎನ್ನುವುದು ಖಚಿತವಾಗಿತ್ತು. ಬಾಲ್ಯದಿಂದಲೂ ಬಾಯಿಯವರೆಗೆ ಬಂದು ಆರಿ ಹೋಗುತ್ತಿದ್ದ ಆ ಪ್ರಶ್ನೆಯನ್ನು ಅವನು ಮತ್ತೆ ತಲೆಯೊಳಗೆ ಜೋಡಿಸಿ ಮರು ಜೋಡಿಸಿ ಕೊನೆಗೆ ಕೇಳಿಯೇ ಬಿಡುವುದೆಂದು ನಿರ್ಧರಿಸಿ ಬಾಯಿ ತೆರೆದ. “ಅಂದರೆ ನೀನು ಹೇಳ್ತಾ ಇರೋದು, ನೀನು ನನ್ನ ನಿಜ ಅಪ್ಪ ಅಲ್ಲ ಅಂತಾನಾ? ನನಗೂ ನಿನಗೂ ರಕ್ತಸಂಬಂಧ ಇಲ್ಲ ಅಂತಾನಾ?” ಎಂದು ಕೇಳಿಯೇಬಿಟ್ಟ ಕೊನೆಗೂ.

“ರೇಡಿಯೋ ಸಿಗ್ನಲ್ ಕದಿಯೋದು ಸರಕಾರಕ್ಕೆ ಮಾಡುವ ಮೋಸ” ಎಂದ ಅಪ್ಪ ಟೆಂಗೊನ ಕಣ್ಣುಗಳನ್ನು ನೋಡುತ್ತ. “ಅದಕ್ಕೂ ದುಡ್ಡು-ಚಿನ್ನ ಕದಿಯೋದಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ!”

“ನೀನು ಹೇಳಿದ್ದು ನಿಜ ಇರಬಹುದು”, ಟೆಂಗೊನ ಒಳಗೆ ಸತ್ಯದ ಬೇರುಗಳು ಇಳಿಯುತ್ತಿದ್ದಂತಿತ್ತು.

“ರೇಡಿಯೋ ಸಿಗ್ನಲು ಅಂದ್ರೆ ಮಳೆ ಥರಾ ಆಕಾಶದಿಂದ ಬಿಟ್ಟಿ ಉದುರುತ್ತೆ ಅಂದುಕೊಂಡಿದಾರೆ ಜನ”, ಅಪ್ಪನ ಗೊಣಗಾಟ ಮುಂದುವರಿಯಿತು.

ಟೆಂಗೊ ಅಪ್ಪನ ಕೈಗಳತ್ತ ದೃಷ್ಟಿ ಹರಿಸಿದ. ಅವು ಭುಜದಿಂದ ಹೊರಟು ತೊಡೆಗಳ ಮೇಲೆ ಶಿಸ್ತಿನಿಂದ ಕೂತಿದ್ದವು. ಹಿಂದಿಗಿಂತ ಸ್ವಲ್ಪ ಹೆಚ್ಚು ಕಪ್ಪಾಗಿದ್ದವು. ಹೊರಗಿನ ಬಿಸಿಲಲ್ಲಿ ಅಡ್ಡಾಡುತ್ತ ಕೆಲಸ ಮಾಡಿದ್ದರ ಪರಿಣಾಮ ಇರಬಹುದು.

“ಹಾಗಾದ್ರೆ ನನ್ನಮ್ಮ ಕಾಯಿಲೆ ಬಿದ್ದಿದ್ದು, ತೀರ್ಕೊಂಡಿದ್ದು, ನನಗೆ ಅಮ್ಮ ಇಲ್ದೇ ಹೋಗಿದ್ದು.. ಎಲ್ಲ ಕತೆ?”, ಟೆಂಗೊ ಮುಂಬಾಗಿ ಸಣ್ಣದನಿಯಲ್ಲಿ ವಿಚಾರಿಸಿದ.

ಅಪ್ಪ ಉತ್ತರಿಸಲಿಲ್ಲ. ಅವನ ಮುಖದ ಭಾವ ಬದಲಾಗಲಿಲ್ಲ. ಕೈಗಳು ಚಲಿಸಲಿಲ್ಲ. ಅವನ ಕಣ್ಣುಗಳು ಟೆಂಗೊನ ಒಳಗೆ ಎಕ್ಸ್‍ರೇಯಂತೆ ಇಳಿದು ಏನನ್ನೋ ಹುಡುಕುವಂತೆ ನೆಟ್ಟುಕೂತಿತ್ತು.

“ಅಮ್ಮ ನಿನ್ನನ್ನು ಬಿಟ್ಟಳು. ನನ್ನೂ ಬಿಟ್ಟು ಹೋದಳು. ಬೇರ್ಯಾವುದೋ ಗಂಡಸಿನ ಕೈ ಹಿಡಿದಳು. ಹೌದು ತಾನೆ?”

ಅಪ್ಪನ ತಲೆ ಸಣ್ಣಗೆ ಅಲುಗಿತು. “ಹಾಗೆಲ್ಲ  ರೇಡಿಯೋ ಬಿಲ್ ತಪ್ಪಿಸೋದು ನ್ಯಾಯ ಅಲ್ಲ. ಒಂದಲ್ಲಾ ಒಂದಿನ ಸಿಕ್ಕಿ ಹಾಕ್ಕೊಂಡು ದಂಡ ಕಕ್ತೀರಿ ನೀವೆಲ್ಲ”

ಈ ಮನುಷ್ಯನಿಗೆ ನನ್ನ ಪ್ರಶ್ನೆಗಳೆಲ್ಲ ನೂರಕ್ಕೆ ನೂರು ಸರಿಯಾಗಿ ಕೇಳುತ್ತಿದೆ, ಅರ್ಥವಾಗುತ್ತಿದೆ. ಉತ್ತರಿಸಲಿಕ್ಕೆ ಇಷ್ಟವಿಲ್ಲದೆ ಈ ಆಟ ಹೂಡುತ್ತಿದ್ದಾನೆ ಅನ್ನಿಸಿತು ಟೆಂಗೊನಿಗೆ.

“ಅಪ್ಪ,”, ಟೆಂಗೊ ಸ್ಪಷ್ಟ ದನಿಯಲ್ಲಿ ಶುರುಮಾಡಿದ: “ನೀನು ನನ್ನ ನಿಜವಾದ ಅಪ್ಪ ಅಲ್ಲದೇ ಹೋದರೂ ಹಾಗೇ ಕರೀತೇನೆ ನಾನು. ಯಾಕೆಂದರೆ ಅಪ್ಪ ಅನ್ನದೆ ಹೋದರೆ ಬೇರೆ ಹೇಗೆ ನಿನ್ನನ್ನ ಕರೀಬೇಕು ಅಂತ ಗೊತ್ತಿಲ್ಲ ನನಗೆ. ನಿಜ ಹೇಳಿ ಬಿಡ್ತೇನೆ ಕೇಳು. ನಾನು ಯಾವತ್ತೂ ನಿನ್ನನ್ನು ಇಷ್ಟಪಡಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಕಟುವಾಗಿ ದ್ವೇಷಿಸ್ತಿದ್ದೆ ಅಂತ ಕಾಣುತ್ತೆ. ಅದು ನಿನಗೂ ಗೊತ್ತಿತ್ತು ತಾನೆ? ನಮ್ಮಿಬ್ಬರಿಗೆ ರಕ್ತ ಸಂಬಂಧ ಇಲ್ಲದೇ ಹೋದ್ರೂ ಈಗ ಜೀವನದಲ್ಲಿ ಇಷ್ಟು ದೂರ ಬಂದ ಮೇಲೆ ನಿನ್ನನ್ನು ಹೊಸದಾಗಿ ದ್ವೇಷಿಸೋದಕ್ಕೆ ನನಗೆ ಯಾವ ಕಾರಣಗಳೂ ಇಲ್ಲ. ಆದ್ರೆ ಮತ್ತೆ ನಿನ್ನನ್ನು ಇಷ್ಟಪಡ್ತೀನಾ? ಅದೂ ಬಹುಶಃ ಸಾಧ್ಯವಿಲ್ಲ. ಆದರೆ ಕೊನೇ ಪಕ್ಷ ನನಗೆ ನಿನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅಂತ ಅನ್ನಿಸ್ತಾ ಇದೆ. ನಾನು ಯಾರು, ಎಲ್ಲಿಂದ ಬಂದೆ, ನನ್ನ ನಿಜವಾದ ವಾರಸುದಾರರು ಯಾರು ಅನ್ನುವ ಪ್ರಶ್ನೆ ನನ್ನನ್ನ ಇಷ್ಟು ವರ್ಷ ಭೂತದ ಹಾಗೆ ಹಿಂಬಾಲಿಸಿಕೊಂಡು ಬಂದಿದೆ. ಅದನ್ನಾದರೂ ನನಗೆ ಹೇಳಿ ಬಿಡು. ಅಷ್ಟು ಮಾಡಿದಿಯಾದರೆ ನಾನು ಮುಂದೆಂದೂ ನಿನ್ನನ್ನು ಶತ್ರುವಿನ ಹಾಗೆ ನೋಡೋದಿಲ್ಲ. ಅಷ್ಟು ನಾನು ಭರವಸೆ ಕೊಡ್ತೇನೆ”

ಟೆಂಗೊನ ಅಪ್ಪನ ಕಣ್ಣುಗಳು ಇನ್ನೂ ಏನನ್ನೋ ಹುಡುಕುತ್ತಲೇ ಇದ್ದವು. ದೃಷ್ಟಿ ಕದಲಲಿಲ್ಲ.

“ನಿಜ ಹೇಳ್ಳಾ,.. ನೀನು ಹೇಳೋದು ಸರಿ. ನಾನು ಏನೂ ಅಲ್ಲ. ರಾತ್ರಿ ಹೊತ್ತಲ್ಲಿ ಯಾರೋ ಸಮುದ್ರದಲ್ಲಿ ಎಸೆದು ಹೋದ ದರಿದ್ರನ ಹಾಗೆ ನಾನು. ಕಷ್ಟ ಪಟ್ಟು ದಡಕ್ಕೆ ಬಂದರೆ ಅಲ್ಲಿ ಏನೂ ಉಳಿದಿರೋದಿಲ್ಲ. ಯಾವ ಮನುಷ್ಯರೂ ಕಾಣ್ಸೋದಿಲ್ಲ. ಅಂಥಾ ಅನಾಥ ನಾನು. ನನಗೆ ಜಗತ್ತಿನಲ್ಲಿ ಸಂಬಂಧಿ ಅಂತ ಇರೋನು ನೀನೊಬ್ಬನೆ. ಆದರೆ ನೀನಿನ್ನೂ ಅದೇನೋ ಪರಮ ರಹಸ್ಯವನ್ನ ಯಾರಿಗೂ ಹೇಳದೆ ಸಾಯಬೇಕು ಅಂತ ನಿರ್ಧಾರ ಮಾಡಿದ್ದಿ. ನಿನ್ನ ಸ್ಮರಣ ಶಕ್ತಿ ಬೇರೆ ದಿನ ಹೋದ ಹಾಗೆ ಕಡಿಮೆಯಾಗ್ತಾ ಇದೆ ಅಂತ ಡಾಕ್ಟರು ಹೇಳ್ತಾರೆ. ಒಂದು ದಿನ ಇದೆಲ್ಲ ರಹಸ್ಯಗಳನ್ನು ನಿನ್ನ ಜೊತೇನೇ ಮಣ್ಣು ಮಾಡಬೇಕು, ಯಾರ ಕೈಗೂ ಸಿಗೋದಕ್ಕೆ ಬಿಡಬಾರದು ಅಂತ ಹಠ ಹಿಡಿದಿದ್ದೀಯ ನೀನು. ನನ್ನ ಬದುಕಿನ ಸತ್ಯ ಯಾವುದು ನನಗೆ ಗೊತ್ತಿಲ್ಲ. ನಾನು ಯಾರು ನನಗೆ ಗೊತ್ತಿಲ್ಲ. ನೀನು ಹೇಳೋದು ಸರಿ ತಾನೆ? ನಾನು ಏನು ಈ ಜಗತ್ತಿನಲ್ಲಿ? ಏನೂ ಅಲ್ಲ!”

“ತಿಳಿವಳಿಕೆ ಅನ್ನೋದು ಸಂಪತ್ತಿದ್ದ ಹಾಗೆ”, ಅಪ್ಪ ದನಿಯನ್ನು ಇಳಿಸಿ ಟೆಂಗೊನಿಗೇನೋ ಗುಟ್ಟು ಹೇಳುತ್ತಿರುವಂತೆ ಮಾತಾಡಿದ. “ಅದನ್ನ ಬೇಕಾ ಬಿಟ್ಟಿ ಬಳಸೋದು ಸಲ್ಲ. ಇವೊತ್ತು ಸಿಕ್ಕಿದ್ದನ್ನ ಜೋಪಾನವಾಗಿಟ್ಟು ಮುಂದಿನ ತಲೆಮಾರಿಗೆ ಕೊಡೋದು ಬುದ್ಧಿವಂತಿಕೆ. ಅದಕ್ಕೇ ನಾನು ಹೇಳ್ತಿರೋದು ಈ ರೇಡಿಯೋ ಟಿವಿ ಬಿಲ್ಲೆಲ್ಲ ಉಳಿಸ್ಕೋಬೇಡಿ ಅಂತ..”

ಅವನ ಮಾತನ್ನು ಕತ್ತರಿಸಿ ಟೆಂಗೊ ಕೇಳಿದ, “ನನ್ನಮ್ಮ ಯಾವ ಥರದ ಹೆಂಗಸು? ಹೇಗಿದ್ಳು? ಎಲ್ಲಿಗೆ ಹೋದ್ಳು? ಏನಾಯ್ತು ಅವಳಿಗೆ?”

ಅಪ್ಪನ ಮಣಮಣ ನಿಂತಿತು. ಇನ್ನೇನೂ ಹೇಳುವುದಿಲ್ಲ ಎನ್ನುವಂತೆ ಅವಡುಗಚ್ಚಿದ.

“ಒಂದು ತೀರ ಅಸ್ಪಷ್ಟ ಚಿತ್ರ ನನ್ನ ಕಣ್ಣೆದುರು ಬರುತ್ತೆ. ಗೊತ್ತಾ ನಿನಗೆ? ಹಲವು ವರ್ಷಗಳಿಂದ ಆ ಚಿತ್ರ ಬಂದೂ ಬಂದು ನನ್ನ ಮನಸ್ಸೊಳಗೆ ನಿಂತು ಬಿಟ್ಟಿದೆ. ಅದು ನಿಜವಾಗಿ ಆದದ್ದೋ ನಾನೇ ಭ್ರಮಿಸಿಕೊಂಡದ್ದೋ ಕನಸೋ ನನಸೋ ದೇವ್ರಿಗೇ ಗೊತ್ತು. ಆದರೂ ಅದು ನಿಜವಾಗಿ ನಡೆದ ಘಟನೆಯ ಚಿತ್ರ ಅಂತಲೇ ನಂಬಿ ಬಿಟ್ಟಿದೇನೆ. ಆಗಿನ್ನೂ ನಾನು ಒಂದೂವರೆ ವರ್ಷದ ಮಗು. ನನ್ನ ಪಕ್ಕದಲ್ಲಿ ಅಮ್ಮ ಇದಾಳೆ. ಅವಳನ್ನ ಇನ್ನೊಬ್ಬ ಗಂಡಸು ಹಿಡಕೊಂಡಿದಾನೆ. ನೀನಲ್ಲ ಇನ್ಯಾರೋ ಒಬ್ಬ. ಅವನ್ಯಾರು ನನಗೆ ಸ್ಪಷ್ಟವಾಗ್ತಿಲ್ಲ. ನೀನಲ್ಲ ಅಂತ ಮಾತ್ರ ಹೇಳ್ಬೋದು”

ಅಪ್ಪ ಮಾತಾಡಲಿಲ್ಲ. ಆದರೆ ಅವನ ಕಣ್ಣುಗಳು ಅಲ್ಲಿರದ ಯಾವುದೋ ಅದೃಶ್ಯ ವಸ್ತುವಿನ ಹುಡುಕಾಟ ಮಾಡುತ್ತಿದ್ದದ್ದು ನಿಜ.

“ನನಗಾಗಿ ಏನನ್ನಾದರೂ ಸ್ವಲ್ಪ ಓದಿದ್ದರೆ ಒಳ್ಳೇದಿತ್ತೇನೋ”, ದೀರ್ಘ ಮೌನದ ನಂತರ ಅಪ್ಪನ ತುಟಿ ಸಹಜ ದನಿಯಲ್ಲಿ ಮಾತಾಡಿತು. “ಕಣ್ಣು ಮಂಜಾಗಿಬಿಟ್ಟಮೇಲೆ ಓದೋಕಾಗ್ತಿಲ್ಲ. ಅಲ್ಲಿ ಶೆಲ್ಫಲ್ಲಿ ಕೆಲವು ಪುಸ್ತಕ ಇದೆ. ಯಾವುದು ಇಷ್ಟವಾಗುತ್ತೋ ತಗೊಂಡು ಸ್ವಲ್ಪ ಓದಪ್ಪ” ಅಂದ.

***

ಟೆಂಗೊ ಎದ್ದು ಶೆಲ್ಫಿನಲ್ಲಿದ್ದ ದಪ್ಪರಟ್ಟಿನ ಹಳೇ ಪುಸ್ತಕಗಳ ಮೇಲೊಮ್ಮೆ ಕಣ್ಣಾಡಿಸಿದ. ಹೆಚ್ಚಿನವು ಐತಿಹಾಸಿಕ ಕಾದಂಬರಿಗಳ ಹಾಗೆ ಕಂಡವು. ಅಂತಹ ಪುಸ್ತಕಗಳ ಭಾಷೆ ಅವನಿಗೆ ಕಬ್ಬಿಣದ ಕಡಲೆ. ಓದಲು ಪ್ರಯಾಸ ಪಡಬೇಕಾದೀತು ಅನ್ನಿಸಿತು. “ನಿನಗೇನೂ ಅಭ್ಯಂತರ ಇಲ್ಲವಾದರೆ ನಾನೇ ತಂದಿರುವ ಪುಸ್ತಕದಿಂದ ಒಂದು ಕತೆ ಓದ್ತೇನೆ ಕೇಳ್ತೀಯಾ? ಬೆಕ್ಕುಗಳ ಊರಿನ ಮೇಲೆ ಒಂದು ಕತೆ” ಅಂದ.

“ಬೆಕ್ಕುಗಳ ಊರಿನ ಮೇಲೇನೆ? ಸರಿಯಪ್ಪ ಓದು. ಶ್ರಮ ತಗೋಬೇಡ ಅಷ್ಟೆ”

“ಶ್ರಮ ಏನು ಬಂತು. ಟ್ರೇನ್ ಬರೋದಕ್ಕೆ ಇನ್ನೂ ಸಾಕಷ್ಟು ಹೊತ್ತಿದೆ. ಆದ್ರೆ ಇದೊಂದು ವಿಚಿತ್ರ ಕತೆ. ನಿನಗೆ ಇಷ್ಟವಾಗುತ್ತೋ ಇಲ್ವೋ ಗೊತ್ತಿಲ್ಲ”

ಟೆಂಗೊ ಕುರ್ಚಿಯಲ್ಲಿ ಕೂತು ತಾನು ತಂದಿದ್ದ ಪುಸ್ತಕ ಬಿಡಿಸಿ ಮಾರ್ಜಾಲಗಳ ಊರಿನ ಕತೆಯನ್ನು ತುಸು ಎತ್ತರದ ದನಿಯಲ್ಲಿ ಸ್ಪಷ್ಟವಾಗಿ ಓದತೊಡಗಿದ. ನಡುನಡುವೆ ನಿಲ್ಲಿಸಿ ಉಸಿರಾಡಿಕೊಂಡ. ಹಾಗೆ ನಿಲ್ಲಿಸಿದಾಗೆಲ್ಲ ಅಪ್ಪನ ಮುಖ ನೋಡಿ ಅಲ್ಲೇನಾದರೂ ಬದಲಾವಣೆಗಳಾಗಿವೆಯೆ ಗಮನಿಸಿದ. ಅಪ್ಪನ ಮುಖ ಕಡೆದಿಟ್ಟ ಮೂರ್ತಿಯಂತೆ ನಿಶ್ಚಲವಾಗಿಯೇ ಇತ್ತು. ಅವನು ಕತೆಯನ್ನು ಮೆಚ್ಚಿದನೆ? ಸಂಕಟಪಟ್ಟನೆ? ಯಾವುದೂ ಗೊತ್ತಾಗುವಂತಿರಲಿಲ್ಲ.

ಟೆಂಗೊ ಕತೆಯನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಅಪ್ಪ “ಆ ಬೆಕ್ಕುಗಳ ಊರಲ್ಲಿ ಟಿವಿ ಇತ್ತಾ?” ಎಂದು ಕೇಳಿದ.

“ಈ ಕತೆ ಬರೆದದ್ದು ಸಾವಿರದೊಂಬೈನೂರ ಮೂವತ್ತರ ಆಸುಪಾಸಲ್ಲಿ. ಜರ್ಮನಿ ದೇಶದೋನು. ಆ ಕಾಲದಲ್ಲಿ ಟಿವಿ ಇದ್ದಿರೋದು ಅನುಮಾನ. ಆದ್ರೆ ಜನ ಆ ಕಾಲದಲ್ಲಿ ರೇಡಿಯೋ ಕೇಳತಿದ್ರು ಅನ್ನೋದು ಖಾತ್ರಿ”

“ಈ ಊರನ್ನ ಬೆಕ್ಕುಗಳೇ ಕಟ್ಟಿದ್ದೋ ಅಥವಾ ಯಾರೋ ಕಟ್ಟಿ ಬಿಟ್ಟು ಹೋದದ್ದನ್ನ ಈ ಬೆಕ್ಕುಗಳು ಬಂದು ತುಂಬಿಕೊಂಡದ್ದೋ?”, ತನ್ನಷ್ಟಕ್ಕೇ ಪ್ರಶ್ನೆ ಮಾಡಿಕೊಳ್ಳುವಂತೆ ಅಪ್ಪ ಮಾತಾಡಿದ.

“ನನಗ್ಗೊತ್ತಿಲ್ಲ. ಆದ್ರೆ ಯಾರೋ ಮನುಷ್ಯರೇ ಕಟ್ಟಿದ ಊರು ಇರಬಹುದದು. ಊರಿಗೆ ಯಾವುದಾದರೂ ರೋಗ ಬಂದು ಅವರೆಲ್ಲ ತೀರಿಕೊಂಡಿರಬಹುದು. ಊರು ಸ್ಮಶಾನದ ಹಾಗೆ ಆದಮೇಲೆ ಈ ಬೆಕ್ಕುಗಳು ಬಂದಿರಬಹುದು”

“ಖಾಲಿತನ ಸೃಷ್ಟಿಯಾದಾಗ ಯಾರಾದ್ರೂ ಬಂದು ತುಂಬಲೇಬೇಕಲ್ವಾ. ಎಲ್ಲರೂ ಮಾಡೋದು ಅದನ್ನೇ ತಾನೆ?”

“ಎಲ್ರೂ ಮಾಡೋದು ಅದನ್ನೇ?”

“ಹೌದು. ಸಂಶಯ ಬೇಡ”

“ಹಾಗಾದ್ರೆ ನೀನು ತುಂಬತಾ ಇರುವ ಖಾಲಿತನ ಯಾವುದು?”

ಅಪ್ಪ ವರ್ಷಗಳಿಂದ ಕಟ್ಟಿಕೊಂಡ ಕಹಿಯನ್ನು ಕಾರಿಕೊಳ್ಳುವಂತೆ “ನಿನಗೆ ಗೊತ್ತಿಲ್ಲ?” ಎಂದು ಪ್ರಶ್ನಿಸಿದ.

“ಇಲ್ಲ, ಗೊತ್ತಿಲ್ಲ” ಎಂದ ಟೆಂಗೊ.

ಅಪ್ಪನ ಮೂಗಿನ ಹೊಳ್ಳೆಗಳು ಅರಳಿದವು. ಒಂದು ಹುಬ್ಬು ಪ್ರಶ್ನಾರ್ಥಕವಾಗಿ ಮೇಲೆ ಹೋಯಿತು. ಕೋಪ ಮತ್ತು ಅನುಮಾನ ಬೆರೆತಂತೆ ಹೇಳಿದ, “ವಿವರಣೆ ಕೊಡದೆ ಅದು ನಿನಗೆ ಅರ್ಥವಾಗಲಿಲ್ಲ ಅಂದಮೇಲೆ ವಿವರಣೆ ಕೊಟ್ಟು ಅರ್ಥ ಮಾಡಿಸೋದು ವ್ಯರ್ಥ”

ಟೆಂಗೊ ಯೋಚನೆಗೆ ಬಿದ್ದ. ಅಪ್ಪ ಅದುವರೆಗೆ ಎಂದೂ ಅಷ್ಟೊಂದು ಗೂಢಾರ್ಥದಲ್ಲಿ ಕಾವ್ಯಾತ್ಮಕವಾಗಿ ಮಾತಾಡಿದ್ದನ್ನು ಟೆಂಗೊ ನೋಡಿರಲಿಲ್ಲ, ಕೇಳಿರಲಿಲ್ಲ. ಅವನ ಜಗತ್ತು ಅಂತಹ ಗೂಢ ಭಾಷೆಗೆ ಅತೀತವಾಗಿತ್ತು. ನೇರ ಒರಟು ಭಾಷೆ ಅವನದ್ದು ಯಾವಾಗಲೂ.

“ಅಂದ್ರೆ ನೀನು ಯಾವುದೋ ಖಾಲಿಯನ್ನ ತುಂಬತಾ ಇದ್ದೀ ಅಂತಾಯ್ತು. ನೀನು ಬಿಟ್ಟುಹೋಗ್ತಾ ಇರೋ ಖಾಲಿಯನ್ನ ತುಂಬೋರು ಯಾರು?” ಅಂದ ಟೆಂಗೊ.

“ನೀನು”, ಅಪ್ಪ ತೋರು ಬೆರಳೆತ್ತಿ ಟೆಂಗೊನತ್ತ ನೆಟ್ಟ. “ಸಹಜ ತಾನೆ? ಯಾರೋ ಬಿಟ್ಟ ಖಾಲಿಯನ್ನ ನಾನು ತುಂಬಿದೆ. ನನ್ನದನ್ನ ನೀನು ತುಂಬತೀ”

“ಜನ ಗುಳೆಹೋದ ಮೇಲೆ ಬೆಕ್ಕುಗಳು ಬಂದು ಆ ಊರನ್ನ ತುಂಬಿಕೊಂಡ ಹಾಗೆ”

“ಹ್ಞೂ”

ಟೆಂಗೊ ನಿಟ್ಟುಸಿರಿಟ್ಟ. “ಹಾಗಾದರೆ ನನ್ನ ತಂದೆ ಯಾರು?” ಕೇಳಿದ.

“ಎಲ್ಲ ದೊಡ್ಡ ಖಾಲಿ ಜಗತ್ತು. ನಿನ್ನಮ್ಮ ಒಂದು ದೊಡ್ಡ ಖಾಲಿ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ನಿನ್ನನ್ನು ಹುಟ್ಟಿಸಿ ಹೋದಳು. ನಾನು ಆ ಖಾಲಿಯನ್ನ ತುಂಬುತ್ತಾ ಬಂದೆ”

ಅಷ್ಟು ಹೇಳಿದ ಮೇಲೆ ಅಪ್ಪ ಕಣ್ಣು ಬಾಯಿಗಳೆರಡನ್ನೂ ಮತ್ತೆ ತೆರೆಯುವುದಿಲ್ಲವೆಂದು ಹಠ ಹಿಡಿದ ಮಗುವಿನಂತೆ ಕಲ್ಲಾಗಿ ಕೂತ.

“ಅವಳು ಬಿಟ್ಟು ಹೋದ ಮೇಲೆ ನೀನು ನನ್ನನ್ನ ಬೆಳೆಸಿದೆ. ಅದೇ ತಾನೆ ನೀನು ಹೇಳ್ತಾ ಇರೋದು?”, ಹಠ ಹಿಡಿದ ಮಗುವನ್ನು ರಮಿಸುವ ಮತ್ತೊಂದು ಮಗುವಂತೆ ಟೆಂಗೊ ಗೂಢಗಳನ್ನು ಹೊರಗೆ ಬರಲು ಕೂತು ಬಿಟ್ಟಿದ್ದ.

ಅಪ್ಪ ತನ್ನ ಗಂಟಲು ಸರಿ ಮಾಡಿಕೊಂಡ. ಸ್ವಲ್ಪವೇ ಸ್ವಲ್ಪ ಮುಂದಕ್ಕೆ ಬಾಗಿ ಚಿಕ್ಕ ಮಗುವಿಗೆ ತಿಳಿ ಹೇಳುವ ಧ್ವನಿಯಲ್ಲಿ ಮತ್ತೆ ಸಾವಕಾಶವಾಗಿ ಹೇಳಿದ, “ಅದಕ್ಕೇ ನಾನು ಹೇಳಿದ್ದು. ವಿವರಣೆ ಇಲ್ಲದೆ ಅರ್ಥವಾಗಿಲ್ಲ ಅಂದ ಮೇಲೆ ವಿವರಣೆ ಪಡಕೊಂಡು ಉಪಯೋಗ ಇಲ್ಲಾ ಅಂತ”

ಟೆಂಗೊ ತನ್ನ ಕೈಗಳನ್ನು ನೀಳವಾಗಿ ತೊಡೆಗಳ ಮೇಲಿಟ್ಟುಕೊಂಡು ನೆಟ್ಟಗೆ ಕೂತು ಅಪ್ಪನ ಕಣ್ಣುಗಳೊಳಗೆ ನೋಡಿದ. ಈ ಮನುಷ್ಯ ಖಾಲಿ ಚಿಪ್ಪಲ್ಲ. ಇನ್ನೂ ರಕ್ತ ಮಾಂಸ ನೆಣಗಳಿರುವ ಜೀವಂತ ಮನುಷ್ಯ. ತನ್ನೊಳಗೆ ಬೆಳೆಯುತ್ತಿರುವ ಖಾಲಿ ಜಗತ್ತನ್ನು ಧಿಕ್ಕರಿಸಲಾಗದೆ ಅಸಹಾಯನಾಗಿ ಕೂತಿರುವ ಜೀವಂತ ಮನುಷ್ಯ ಇಂವಾ. ಕಾಲ ಸರಿದಂತೆ ಆ ನಿರ್ವಾತ ಇವನನ್ನು ಇಂಚಿಂಚಾಗಿ ನುಂಗುತ್ತಾ ಬರುತ್ತದೆ. ಒಂದು ದಿನ ಅವನು ಪೂರ್ತಿಯಾಗಿ ಟೊಳ್ಳಾಗುತ್ತಾನೆ. ಅಷ್ಟಿಷ್ಟು ಉಳಿದಿರುವ ನೆನಪುಗಳನ್ನು ಕೂಡ  ಆ ಟೊಳ್ಳು ನುಂಗಿಬಿಟ್ಟಿರುತ್ತದೆ ಆಗ. ಕಾಲದ ಮಹಿಮೆ ಅವೆಲ್ಲ.

ಆರು ಗಂಟೆಗೆ ಐದು ನಿಮಿಷ ಇತ್ತೇನೋ. ಟೆಂಗೊ ಎದ್ದು ಅಪ್ಪನನ್ನು ಬೀಳ್ಕೊಂಡ. ಟ್ಯಾಕ್ಸಿಗಾಗಿ ಕಾಯುತ್ತಿರುವ ಹೊತ್ತಲ್ಲಿ ಇಬ್ಬರೂ ಕಿಟಕಿಯ ಬಳಿ ಅಕ್ಕ ಪಕ್ಕ ಮಾತಿಲ್ಲದೆ ಕೂತರು. ಟೆಂಗೊನೊಳಗೆ ಕೇಳಬೇಕೆಂದು ತಂದಿದ್ದ ನೂರಾರು ಪ್ರಶ್ನೆಗಳಿದ್ದವು. ಆದರೆ ಅವಾವುದಕ್ಕೂ ಉತ್ತರ ಸಿಗುವುದಿಲ್ಲ ಎನ್ನುವುದು ಅವನಿಗೆ ಖಚಿತವಿತ್ತು. ಅಪ್ಪನ ಬಿಗಿಮುಖ ಅದನ್ನು ಹೇಳದೇ ಹೇಳಿಬಿಟ್ಟಿತ್ತು. ವಿವರಣೆ ಕೊಡದೆ ಅವೆಲ್ಲ ಅರ್ಥವಾಗದೆ ಹೋದಾಗ ವಿವರಣೆ ಕೊಟ್ಟು ಅರ್ಥಮಾಡಿಸುವುದು ವ್ಯರ್ಥ ಅಲ್ಲವೆ? ಟ್ಯಾಕ್ಸಿ ಬಂದು ನಿಂತಾಗ ಟೆಂಗೊ “ನೀನಿವತ್ತು ಬಹಳ ವಿಷಯ ಹೇಳಿದೆ. ಕೆಲವು ವಿಷಯಗಳನ್ನು ನೇರವಾಗಿ ಹೇಳಿಲ್ಲವಾದರೂ ಹೇಳಿದ್ದೆಲ್ಲ ನನಗೆ ಅರ್ಥ ಆಗಿಲ್ಲದಿದ್ದರೂ ನಿನಗೆ ಸಾಧ್ಯವಾಗುವಷ್ಟು ಪ್ರಾಮಾಣಿಕವಾಗಿ ಅವೆಲ್ಲವನ್ನ ಹೇಳಿದ್ದೀಯ. ಅದಕ್ಕಾಗಿ ಚಿರಋಣಿಯಾಗಿರತ್ತೇನೆ” ಎಂದ.

ಅಪ್ಪ ಮೌನವಾಗಿದ್ದ. ದೂರದ ಬೆಟ್ಟದಲ್ಲಿ ಕಾಣಿಸುವ ಒಂದು ಬೆಳಕಿನ ಕಿಡಿಯನ್ನೂ ತಪ್ಪಿಸಿಕೊಳ್ಳಬಾರದೆಂಬ ನಿಷ್ಠೆಯಿಂದ ಪಹರೆ ಕಾಯುವ ಸೈನಿಕನ ಹಾಗೆ ಅವನ ಮುಖ ನಿರ್ಭಾವುಕವಾಗಿತ್ತು. ಅಪ್ಪ ನೋಡುತ್ತಿದ್ದ ಕಡೆ ಟೆಂಗೊ ಕೂಡ ಒಮ್ಮೆ ನೋಡಲು ಯತ್ನಿಸಿದ. ಅಲ್ಲಿ ದೂರದಲ್ಲಿ ಗಾಳಿಗೆ ಅತ್ತಿತ್ತ ಟೊಂಗೆ ಬೀಸುವ ಒಂದಷ್ಟು ಗಾಳಿಮರಗಳಿದ್ದವು ಅಷ್ಟೆ. ಸಮುದ್ರದೊಳಗೆ ಇಳಿಯುತ್ತಿದ್ದ ಸೂರ್ಯನ ಕೆಂಪು ಬೆಳಕು ಗಾಳಿಮರಗಳ ನಡುವಿಂದ ಹಾದು ಬರಲು ಯತ್ನಿಸುತ್ತಿತ್ತು.

“ನನಗೆ ಏನು ಹೇಳಬೇಕೋ ತಿಳೀತಾ ಇಲ್ಲ. ನಿನ್ನೊಳಗೆ ತುಂಬುತ್ತಿರುವ ಖಾಲಿತನ ನಿನಗೆ ಸಂಕಟ ಕೊಡದೇ ಇರಲಿ ಅಂತ ಹಾರೈಸೋದು ಬಿಟ್ಟರೆ ನಾನಿನ್ನೇನು ಮಾಡಿಯೇನು? ನನಗ್ಗೊತ್ತು ನೀನು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟೆ. ನನ್ನಮ್ಮನ್ನ ತುಂಬಾ ಪ್ರೀತಿ ಮಾಡಿದೆ. ನನಗದೆಲ್ಲ ಗೊತ್ತಾಗಲ್ಲ ಅಂದುಕೋ ಬೇಡ. ಅಷ್ಟು ದಡ್ಡ ಅಲ್ಲ ನಾನು. ಆದರೂ ಅವಳು ನಿನ್ನ ಬಿಟ್ಟು ಹೋದಳು. ಅಂತಹ ಪರಿಸ್ಥಿತಿಯಲ್ಲಿ ಒಂಟಿಯಾಗಿ ಬದುಕೋದು ಕಷ್ಟ. ಬೆಕ್ಕುಗಳ ಊರಿನ ಹಾಗೆ ಖಾಲಿ ಬಿದ್ದ ಊರಲ್ಲಿ ಒಬ್ಬನೇ ತಿರುಗಾಡೋದು ಅಸಹನೀಯ ಅನ್ಸುತ್ತೆ. ಅಂತಹ ಪರಿಸ್ಥಿತಿಯಲ್ಲಿ ನೀನು ನನ್ನ ಬೆಳೆಸಿದೆ. ದೊಡ್ಡೋನಾಗಿ ಮಾಡಿದೆ” ಎಂದ.

ದೂರದಲ್ಲೆಲ್ಲೊ ಒಂದಷ್ಟು ಕಾಗೆಗಳು – ಯಾರೋ ರೊಟ್ಟಿ ಚೂರು ಎಸೆದಿರಬೇಕು, ಗದ್ದಲ ಎಬ್ಬಿಸುತ್ತಿದ್ದವು. ಟೆಂಗೊ ಕುರ್ಚಿಯಿಂದ ಎದ್ದು ತನ್ನ ಕೈಗಳನ್ನು ಅಪ್ಪನ ಭುಜದ ಮೇಲಿಟ್ಟ. “ಬರ್ತೇನೆ ಅಪ್ಪ. ಆದಷ್ಟು ಬೇಗ ವಾಪಸು ಬರ್ತೇನೆ” ಅಂದ.

ಎದ್ದು ಹೋಗಿ ಬಾಗಿಲು ತೆರೆದು ಹೊರ ಹೋಗುವ ಸಮಯ ಹೊಸ್ತಿಲಲ್ಲಿ ನಿಂತವನು, ಕೊನೆಯದಾಗಿ ನೋಡುತ್ತೆನೆಂಬ ಹಾಗೆ ವಾಪಸು ತಿರುಗಿದ. ಅಲ್ಲಿ, ಕಿಟಕಿಯಿಂದ ಬಂದ ಬಿಸಿಲು ಬಿದ್ದು ಬೆಳ್ಳಿಯ ದಾರದಂತೆ ಹೊಳೆಯುತ್ತಿದ್ದ ಒಂದು ದೀರ್ಘ ಕಣ್ಣೀರ ಧಾರೆ ಕಲ್ಲಿನಂತೆ ಕೂತ ಅಪ್ಪನ ಕಣ್ಣಿಂದ ಇಳಿಯುತ್ತಿದುದ್ದನ್ನು ಕಂಡು ಟೆಂಗೊ ಸ್ತಂಭೀಭೂತನಾದ. ಆ ಕಣ್ಣೀರ ಹನಿ ನಿಧಾನವಾಗಿ ಉರುಳುತ್ತ ಕಪೋಲವನ್ನು ದಾಟಿ ಕೊನೆಗೆ ತೊಡೆಯ ಮೇಲೆ ಬಿತ್ತು. ಅರೆ ತೆರೆದು ನಿಂತಿದ್ದ ಬಾಗಿಲನ್ನು ಪೂರ್ತಿಯಾಗಿ ತಳ್ಳಿಕೊಂಡು ಟೆಂಗೊ ಹೊರಗೋಡಿದ. ಟ್ಯಾಕ್ಸಿಯಲ್ಲಿ ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಟೋಕಿಯೋ ಟ್ರೇನು ಹಿಡಿದ.

 

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post