X
    Categories: ಕಥೆ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಅವಳು:

ಆಹಾ!ಉಪ್ಪಿನಕಾಯಿ ಎಂದರೆ ಹೀಗಿರಬೇಕೆ ಎಂದು ಗಂಡ ತಮ್ಮನ ಹೆಂಡತಿ ಮಾಡಿದ್ದ ಮಾಡಿದ್ದ ಊಟ ಮಾಡುತ್ತ ಎಲ್ಲ ಎರಡೆರಡು ಸಲ ಬಡಿಸಿಕೊಂಡು ತಿನ್ನುತ್ತಿದ್ದಾನೆ.ಅವಳಿಗೆ ತುಸು ಹೊಟ್ಟೆ ಕಿಚ್ಚಾದರೂ,ಇವಳಿಗೆಷ್ಟು ಆರಾಮ ಅಲ್ವ ಅನಿಸಿತು.ನೌಕರಿಯ ಜಂಜಾಟವಿಲ್ಲ.ಊರಿನ ವಿಶಾಲ ಮನೆಯಲ್ಲಿ ಇವಳು ರಾಣಿಯಂತೆ.ಅಲ್ಲೇ ಸಿಗುವ ತರಕಾರಿ,ಮೀನು.ಬಾವಿಯಲ್ಲಿ ನೀರಂತೂ ಬತ್ತಿದ್ದೇ ಇಲ್ಲ.ಇವಳ ಗಂಡನಂತೂ ಬೆಳಿಗ್ಗೆ ತೋಟಕ್ಕೆ ಹೋದವನು ಮಧ್ಯಾನ್ಹಕ್ಕೆಲ್ಲ ಮನೆಗೆ ಬಂದು ಬಿಡುತ್ತಾನೆ.ತನ್ನವರ ತಮ್ಮನೇ ಆದರೂ ಎಷ್ಟು ವ್ಯತ್ಯಾಸ ಇಬ್ಬರಿಗೂ.ಹೆಂಡತಿ ಬಡಿಸಿದ್ದನ್ನು ತಿಂದು ಸುಮ್ಮನೆ ಎದ್ದು ಬಿಡುತ್ತಾನೆ.ಇವಳು ಹಳೆಯ ಕೊಟನ್ ಸೀರೆಯುಟ್ಟು  ಊರೆಲ್ಲ ಓಡಾಡಿ ಬಂದರೂ ತುಟಿ ಪಿಟಿಕ್ ಎನ್ನುವನಲ್ಲ ಆತ.ಕೆಲವೊಮ್ಮೆ ಇವಳೂ ತೋಟಕ್ಕೆ ಹೋಗುವುದುಂಟು ಅವನೊಟ್ಟಿಗೆ.ಆಗೆಲ್ಲ ಊರ ಜನ “ಆದರ್ಶ ದಂಪತಿಗಳು” ಎಂದು ಚೇಷ್ಟೆ ಮಾಡುವುದೂ ಇದೆ.ತನಗೋ ದೂರದ ಬೆಂಗಳೂರಲ್ಲಿ ಎಂತದಕ್ಕೂ ಸಮಯವಿಲ್ಲ.ತನಗಿಂತ ಹೆಚ್ಚು ಕೆಲಸ ಗಂಡನಿಗೆ.ಆಫೀಸು,ಗಂಡ ಮಕ್ಕಳು,ಅಡಿಗೆ ಎಂದು ಸಂಭಾಳಿಸುವಷ್ಟರಲ್ಲಿ ಸುಸ್ತು ಸುಸ್ತು.ಗಂಡನೋ ಊಟ ಮಾಡುವಾಗಲೆಲ್ಲ ತಮ್ಮನ ಹೆಂಡತಿ ಮಾಡುವ ಮೀನು ಸಾರಿನ ಮುಂದೆ ನೀನು ಮಾಡಿದ ಬೇಳೆಸಾರು ಸಪ್ಪೆ ಎಂದು ಬಿಡುತ್ತಾನೆ.ಹೆಣ್ಣು ಮನೆ ಲಕ್ಷ್ಮಿಯಂತೆ .ಇದ್ದರೆ ಇವಳಂತಿರಬೇಕೆನ್ನುತ್ತಾನೆ.ಅಪರೂಪಕ್ಕೆ ಊರಿಗೆ ಬಂದಾಗಲೆಲ್ಲ ಹಬ್ಬದ ಖುಷಿ ಅವಳಿಗೆ.ಎಲ್ಲರೊಟ್ಟಿಗೆ ತುಂಬ ಮಾತು.ಗಲಗಲ ನಗು.ಒಳ್ಳೆಯ ಊಟ.ಬದುಕು ಹಿಂಗೇ ಇದ್ರೆ ಅಂದುಕೊಳ್ಳುತ್ತಾಳೆ.ಅಷ್ಟರಲ್ಲೇ ನಾಳೆ ಪುನಹ ಬೆಂಗಳೂರಿಗೆ ಹೊರಡಬೇಕು ಎಂದು ನೆನಪಾಗಿ ಮನಸ್ಸು ಭಾರವಾಯಿತು.

ಇವಳು

ಗಂಡನ ಅಣ್ಣನಾದರೂ ಇವಳಿಗೋ ಅವನು ಅಣ್ಣನಿಗಿಂತ ಹೆಚ್ಚು.ಅವನು ಕೇಳಿ ಕೇಳಿ ಬಡಿಸಿಕೊಂಡು ತಿನ್ನುತ್ತಿದ್ದರೆ ತುಂಬು ಸಂತ್ರಪ್ತಿ ಇವಳಿಗೆ.ತನ್ನ ಗಂಡನಿಗಂತೂ ಊಟದ ಅಭಿರುಚಿಯೇ ಇಲ್ಲ.ಒಂದು ದಿನವೂ ರುಚಿಯಾಗಿದೆಯೆ ಮೀನು ಸಾರು ಎಂದಿದ್ದೇ ಇಲ್ಲ.ಆದರೆ ಆವತ್ತೊಂದಿನ ಸಾರಿಗೆ ಉಪ್ಪು ಹೆಚ್ಚಾದಾಗ ಮಾತ್ರ ಸಿಟ್ಟಿನಿಂದ ತಟ್ಟೆ ಸರಿಸಿ ಹೋಗಿದ್ದು ನೆನಪಾಯಿತು.ಅವಳಿಗೂ ಅವಳ ಮಕ್ಕಳಿಗೂ ಮತ್ತೊಮ್ಮೆ ಅನ್ನ ಬಡಿಸಿದಳು.ಕಣ್ಣು ಹಾಗೆಯೆ ಅವಳತ್ತ ಸರಿಯಿತು.ಚಿಕ್ಕ ಬಿಳಿಯ ಹೂಗಳ ಗುಲಾಬಿ ಸೀರೆ.ಚಂದಕ್ಕೆ ಕತ್ತರಿಸಿಕೊಂಡ ಕೂದಲು.ಎಷ್ಟು ಅಂದದ ಸೀರೆ ಉಡ್ತಾಳಲ್ಲ ಅವಳು ಊರಿಗೆ ಬಂದಾಗಲೆಲ್ಲ ಅಕ್ಕಪಕ್ಕದ ಮನೆ ಹೆಂಗಸರು ಅವಳ ಸೀರೆ ಬಗ್ಗೆಯೆ ಮಾತಾಡುತ್ತಿರುತ್ತಾರೆ.

ಮುಂಚೆಯಂತೂ  ಗೊಂಬೆಯಂತಿದ್ದಳವಳು.ಈಗ ತುಸು ದಪ್ಪಗಾಗಿದ್ದಾಳೆ.ಅವಳು ಬಂದಾಗಲೆಲ್ಲ ಎಲ್ಲರೂ ಮೈಮೇಲೆ ಬಿದ್ದು ಮಾತಾಡಿಸುತ್ತಾರೆ ಅವಳಿಗೆ.ತನ್ನನ್ನು ಕೇಳುವವರೇ ಇಲ್ಲ.ಜಾಣೆ ಅವಳು.ದೊಡ್ಡ ಕೆಲಸದಲ್ಲಿದ್ದಾಳೆ.ತನ್ನ ಗಂಡನಿಗಂತೂ ಅವಳನ್ನ ಹೊಗಳಿದಷ್ಟೇ ಸಾಲದು.ಅತ್ತಿಗೆಯನ್ನ ನೋಡೆ.ಎಲ್ಲ ವಿಷಯ ಗೊತ್ತವಳಿಗೆ.ನಿನ್ನಂತೆ ದಡ್ಡಿ ಅಲ್ಲ ಎನ್ನುತ್ತಾರೆ.ಬದುಕೇ ವ್ಯರ್ಥ ಎನ್ನಿಸಿ ಒಮ್ಮೊಮ್ಮೆ ಅತ್ತು ಬಿಡುತ್ತೇನೆ ತಾನು.ಮನೆಗೆ ಯಾರಾದರೂ ಬಂದಾಗ ಮಾತ್ರ ಗಲಗಲ ನಗು.ಆಮೇಲೆ ತಾನೊಬ್ಬಳೆ ಮೌನ ಸಾಮ್ರಾಜ್ಯದ ಒಡತಿಯಂತೆ.ಇವರೋ ಮಧ್ಯಾನ್ಹ ಬಂದವರೇ ಮಲಗಿಬಿಡುತ್ತಾರೆ.ಸಂಜೆ ಇನ್ನೆಲ್ಲೋ ಹೊರಟುಬಿಡುತ್ತಾರೆ.ಮಾತಿಲ್ಲ ಕಥೆಯಿಲ್ಲ.ಮಕ್ಕಳಂತೂ ಆಟ ಸ್ಕೂಲು ಅಂಥಾ ಮನೆ ಹೊರಗೆಯೇ.ಅಬ್ಬ.ನಾಳೆ ಅವಳು ಅವಳ ಗಂಡ ಮಕ್ಕಳೊಡನೆ ಹೊರಟು ಬಿಡುತ್ತಾಳೆ.ನಾಳೆಯಿಂದ ಮತ್ತದೇ ವ್ಯರ್ಥ ಎನ್ನಿಸುವ ಬದುಕು.ಮನಸ್ಯಾಕೋ ತುಂಬ ಭಾರವಾಯಿತು.

ಊಟ ಮುಗಿಸಿ ಟಿ.ವಿ. ಹಾಕಿದರೆ ಸಿ ಎಸ್ ಅಶ್ವಥ್ ಧ್ವನಿಯಲ್ಲಿ ಹಾಡು ….

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ

ಕಡಲನೂ ಕೂಡಬಲ್ಲೆನೆ ಒಂದು ದಿನ…

ಕೇಳುತ್ತ ಕೇಳುತ್ತ ಅಲ್ಲಿಯೇ ಘಾಡ ನಿದ್ದೆ ಇಬ್ಬರಿಗೂ.

ಮರುದಿನ ಅವಳು ಪರಿವಾರ ಸಮೇತ ಬೆಂಗಳೂರಿಗೆ ಹೊರಟು ನಿಂತಾಗ ಅವಳು ಮತ್ತು ಇವಳು ಇಬ್ಬರ ಕಣ್ಣಂಚಲ್ಲೂ ನೀರು.

 ವಿನಯಾ ನಾಯಕ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post