ಒಂದು ಅಗೋಚರಶಕ್ತಿ ಜಗತ್ತಿನ ಫೋಟೋ ಕ್ಲಿಕ್ಕಿಸುತ್ತಿದೆ. ಅದನ್ನು ಕಂಡ ಮಾಮರವೊಂದು ಸೊಂಟದ ಮೇಲೆ ಕೈ ಇಟ್ಟು ಪೋಸ್ ನೀಡಿದೆ. ಯಾವುದೋ ಹೊಸ ರಿಯಾಲಿಟಿಶೋನಲ್ಲಿ ಭಾಗವಹಿಸಲೋ ಎಂಬಂತೆ ನವಿಲು ನಾಟ್ಯಾಭ್ಯಾಸ ನಡೆಸಿದೆ. ನೆಂಟಸ್ತಿಕೆಗೆ ಬಂದ ಗಂಡಿನ ಅಮ್ಮನೋ ಅಜ್ಜಿಯೋ “ಒಂದು ಹಾಡು ಹೇಳು ಮಗಾ…” ಅಂದಿರಬೇಕು. ಅದಕ್ಕೆ ಕೋಗಿಲೆ ಮನೆಯಿಂದ ಇಂಪಾದ ಸಂಗೀತ ಕೇಳಿ ಬರುತ್ತಿದೆ. ಆ ಇಂಪಿಗೆ ಮನಸೋತು ತೆಂಗಿನಮರಗಳು ತಲೆದೂಗುತ್ತಿವೆ. ಇತ್ತ ನವಿಲಿನ ನಾಟ್ಯವನ್ನು ನೋಡುತ್ತ-ನೋಡುತ್ತಾ ಅತ್ತಿಂದಿತ್ತ ಚಲಿಸುವ ಮೋಡಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಆ ನಾಟ್ಯದ ಸೊಬಗಿಗೆ ಮನಸೋತ ಒಂದು ಮಳೆಹನಿ ತನ್ನ ಇಡೀ ಬಳಗವನ್ನು ಭೂಮಿಗೆ ಕರೆದಿದೆ. ಹಾಗಾಗಿ ಒಂದು ದೊಡ್ಡ ಮೆರವಣಿಗೆಯೇ ಬಾನಿಂದ ಭೂಮಿಯತ್ತ ಬರುತ್ತಿದೆ. ಎಲ್ಲೆಲ್ಲೂ ಟ್ರಾಫಿಕ್’ಜ್ಯಾಮ್ ಉಂಟಾಗಿದೆ.
ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆಂದು ತಿಳಿದು ನಾಚಿದ ನವಿಲು ತನ್ನ ಗರಿಗಳನ್ನು ಅಡಗಿಸಿ ಓಡುತ್ತಿದೆ. ನವಿಲಿನ ನಾಟ್ಯ ನಿಂತರೂ ಮೋಡಗಳು ಮಾತ್ರ ಇನ್ನೂ ಡಿಕ್ಕಿ ಹೊಡೆದುಕೊಳ್ಳುತ್ತಲೇ ಇವೆ. ಈಗ ಏನನ್ನು ನೋಡಿ ಮೈಮರೆತಿವೆಯೋ ಅರಿಯೆ. ಮಳೆಹನಿಗಳು ಕೂಡ ಅಷ್ಟೇ; ಇನ್ನೂ ಬರುತ್ತಲೇ ಇವೆ. ಏನೋ ಹೊಸತನ್ನು ಈ ಭುವಿಯಲ್ಲಿ ಕಂಡಿರಬೇಕು. ಈ ಭೂರಮೆಯ ಸೊಬಗೇ ಹಾಗೆ. ತನ್ನ ಚೆಲುವಿನಿಂದ ಎಲ್ಲರನ್ನೂ ಸೆಳೆಯುವ ಆಯಸ್ಕಾಂತ ಈ ಧರೆ. ಇಲ್ಲಿ ಬಂದ ಯಾರಿಗೂ ಮತ್ತೆ ತಿರುಗಿ ಹೋಗುವ ಬಯಕೆಯೇ ಆಗುವುದಿಲ್ಲ. ಈ ಮಳೆಹನಿಗಳದ್ದೂ ಅದೇ ಕಥೆ ಇರಬೇಕು. ಹಾಗಾಗಿ ತಮಗೆ ಈ ಭೂಮಿಯಲ್ಲಿ ಶಾಶ್ವತವಲ್ಲದೇ ಹೋದರೂ ಒಂದಷ್ಟು ದಿನ ನೆಲೆಕೊಡಬಲ್ಲ ನದಿಯೆಡೆ ಗಡಿಬಿಡಿಯಿಂದ ಮೆರವಣಿಗೆ ಹೊರಟಿವೆ.
ಪುಟ್ಟ ಮಗುವೊಂದು ಹನಿಗಳೊಂದಿಗೆ ತಾನೂ ಮೆರವಣಿಗೆ ಹೋಗುತ್ತೇನೆಂದು ಹಟ ಹಿಡಿದಿದೆ. ಅಪ್ಪನ ಬಾರುಕೋಲಿನ ಹೊಡೆತಕ್ಕೆ ಚೀರಿದ ಮಗುವಿನ ಅಳುವಿಗೆ ಗುಡುಗು ಕೂಡ ಹೆದರಿ ನಿಶ್ಶಬ್ಧವಾಗಿದೆ. ಆ ಪುಟ್ಟ ಕಣ್ಣುಗಳಿಗೆ ಮಳೆಯಲ್ಲಿ ನೆನೆಯುವ ಅವಕಾಶ ಸಿಗದೇ ಹೋದರೂ ಕಣ್ಣೀರಿನ ಹನಿಗಳಲ್ಲಿ ನೆನೆದಿವೆ. ಆ ಅಳುವಿನ ಅಂತ್ಯದೊಂದಿಗೆ ಇಡೀ ಜಗತ್ತೇ ಮೌನಕ್ಕೆ ಶರಣಾದಂತಿದೆ. ಜೋರಾಗಿ “ಧೋ…” ಎಂದು ಸುರಿಯುತ್ತಿರುವ ಮಳೆಯ ಸದ್ದಿನೊಳಗಿನ ದಿವ್ಯ ಮೌನ ಅದು. ಪುಟ್ಟನ ಅಳುಮೊಗ ಕಂಡು ಬಾನು ಕೂಡ ಅಳುತ್ತಿದೆಯೇನೋ ಅನಿಸುತ್ತಿದೆ.
“ಎಂಥಾ ಮಳೆ ಅಮ್ಮಾ… ” ಎಂದು ಉದ್ಗರಿಸುತ್ತಾ ಹಾಲಮ್ಮ ಹಾಲು ಹಾಕಲು ಪಾತ್ರೆಗಾಗಿ ಕಾದಿದ್ದಾಳೆ. ಅಲ್ಲೇ ಮೂಲೆಯಲ್ಲಿ ಸಪ್ಪೆ ಮುಖ ಮಾಡಿ ಕೂತ ಪುಟ್ಟನನ್ನು ನೋಡಿ, ಕಾರಣ ಕೇಳಿ “ಬಾಪುಟ್ಟ, ನಾ ಕರ್ಕೊಂಡ್ಹೋಗ್ತೇನೆ” ಎಂದಿದ್ದಾಳೆ. ಒಂದು ಕೈಯಲ್ಲಿ ಹಾಲಿನ ಬಾಸ್ಕೆಟ್ ಹಿಡಿದುಕೊಂಡು ಇನ್ನೊಂದು ಕೈಯಿಂದ ಪುಟ್ಟನನ್ನು ಎಡಬದಿಗೆ ಸೊಂಟದ ಮೇಲೆ ಕೂರಿಸಿಕೊಂಡು ಕೊಡೆ ಹಿಡಿದು ಹೊರಟಿದ್ದಾಳೆ.
ಅರ್ಧಗಂಟೆಯ ನಂತರ ಮಳೆ ಈಗ ಕಡಿಮೆಯಾಗಿದೆ. ಪುಟ್ಟನ ಕಣ್ಣಿಂದ ಜಾರದೆ ಉಳಿದ ಒಂದು ಹನಿ ಜಾರಲು ತವಕಿಸುತ್ತಿದೆ. ಸಣ್ಣಗೆ ತಂಪಾಗಿ ಬೀಸುತ್ತಿರುವ ಚಳಿಗಾಳಿಗೆ ಮರಗಳೆಲ್ಲ ನಡುಗುತ್ತಿವೆ. ಎಲೆಗಳ ಮೇಲೆ ಪದ್ಮಾಸನ ಹಾಕಿ ಕುಳಿತ ಹನಿಗಳೆಲ್ಲ ಎಲೆಗಳ ನಡುಕಕ್ಕೆ ಆಯತಪ್ಪಿ ಕೆಳಗೆ ಬೀಳುತ್ತಿವೆ. ವರುಣನ ಆರ್ಭಟಕ್ಕೆ ಬೆಚ್ಚಿ ಅಡಗಿಕೂತಿದ್ದ ರವಿ ಮೆಲ್ಲಗೆ ಮೋಡಗಳ ಮರೆಯಿಂದ ಹೊರಗೆ ಇಣುಕಿದ್ದಾನೆ. ಹಾಲಮ್ಮ ಪುಟ್ಟನಿಗೆ ಸೂರ್ಯನನ್ನು ತೋರಿಸಿ “ನೋಡು, ರವಿ ಮಾಮನಿಗೂ ಅವನ ಅಮ್ಮ ಮಳೆಯಲ್ಲಿ ಹೊರಗೆ ಹೋಗ್ಲಿಕ್ಕೆ ಬಿಡ್ಲಿಲ್ಲ. ಈಗ ಮಳೆ ಕಡಿಮೆ ಆದ ಮೇಲೆ ಹೊರಗೆ ಬಂದ” ಅಂತ ಹೊಸಕಥೆ ಹೆಣೆದು ಬುದ್ಧಿಮಾತು ಹೇಳಿದ್ದಾಳೆ. ಮಳೆ-ಬಿಸಿಲಿನ ಸಮಾಗಮದೊಂದಿಗೆ ಬಣ್ಣಗಳ ಬಿಲ್ಲೊಂದು ಬಾನಲ್ಲಿ ಮೂಡಿದೆ. ಪುಟ್ಟನ ಮೊಗದಲ್ಲೂ ನಗುವಿನ ಬಣ್ಣವೊಂದು ಸಣ್ಣಗೆ ಮೆತ್ತಿಕೊಂಡಿದೆ.
Facebook ಕಾಮೆಂಟ್ಸ್