X

ಕನ್ನಡ ಮಾತನಾಡಲು ಕೀಳರಿಮೆ ಏಕೆ ?…..

   ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕೆ ಮಹತ್ವವೇ ಇಲ್ಲವಾಗಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದು, ಇಲ್ಲೇ ಖಾಯಂ ಆಗಿ ನೆಲೆಸುವ ಜನರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದ ಹವಾಮಾನಕ್ಕೋ ಅಥವಾ ಇಲ್ಲಿನ ಜನರ ಸಹಿಷ್ಣುತಾ ಭಾವಕ್ಕೋ ಏನೋ ಬೇರೆ ಕಡೆಗಳಿಂದ ಬಂದ ಜನ ಇಲ್ಲೇ ಇರಲು ಬಯಸುತ್ತಾರೆ. ಆದರೆ ನಾವು ಸಾಮಾನ್ಯವಾಗಿ ಕಂಡಿರುವಂತೆ ಎಷ್ಟೇ ವರ್ಷಗಳಿಂದ ಇಲ್ಲಿ ನೆಲಸಿದ್ದರೂ ಅವರು ಕನ್ನಡ ಕಲಿಯುವ ಮನಸ್ಸು ಮಾಡುವುದಿಲ್ಲ. ಮುಖ್ಯವಾಗಿ ಅವರಿಗೆ ಕನ್ನಡ ಕಲಿಯುವ ಅನಿವಾರ್ಯತೆಯೇ ಬರುವುದಿಲ್ಲ.ತಮಿಳುನಾಡು, ಕೇರಳ, ಗುಜರಾತ್, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ ಗೊತ್ತಿಲ್ಲದೇ ಬದುಕುವುದೇ ಕಷ್ಟ. ಹೊರಗಿನಜನರು ಇಲ್ಲಿಗೆ ಬಂದು ನಮ್ಮ ಕನ್ನಡದ ಮಹತ್ವ ಕಡಿಮೆಯಾಗುವಂತೆ ಮಾಡಿದರು ಎನ್ನುವ ಮಾತೇನೋ ನಿಜ. ಆದರೆ ಅದಕ್ಕಿಂತ ಮುಖ್ಯವಾದ ಸಮಸ್ಯೆ ಇರುವುದು ಕನ್ನಡಿಗರಾದ ನಮ್ಮಲ್ಲೇ. ಸಾಮಾನ್ಯವಾಗಿ ತಮಿಳರಲ್ಲಿ, ಮಲೆಯಾಳಿಗಳಲ್ಲಿ, ಉತ್ತರ ಭಾರತದ ಜನಗಳಲ್ಲಿರುವಷ್ಟು ಭಾಷಾಭಿಮಾನ ನಮ್ಮ ಕನ್ನಡಿಗರಲ್ಲಿ ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಕನ್ನಡಗರಿಗೆ ಕನ್ನಡದಲ್ಲಿ ಮಾತನಾಡುವುದೇ ಏನೋ ಅವಮಾನವಾದಂತೆ. ಬಹಳಷ್ಟು ಜನರಿಗೆ ಕನ್ನಡ ಎಂದರೆ ಕೀಳರಿಮೆ,ತಾತ್ಸಾರ ಭಾವವಿದೆ. ಇವತ್ತಿನ ಆಧುನಿಕ ಸಮಾಜದಲ್ಲಿ ಗಮನಿಸಿರುವಂತೆ ಕನ್ನಡ ಬರುವ ಪ್ರತೀ ಕನ್ನಡಿಗನೂ ಆಗಂತುಕ ವ್ಯಕ್ತಿಯ ಜೊತೆ ಸಂಭಾಷಣೆ ಪ್ರಾರಂಭಿಸುವುದು ಇಂಗ್ಲೀಷ್’ನಲ್ಲಿ ಅಥವಾ ಹಿಂದಿಯಲ್ಲಿ. ಇದಕ್ಕೆ ಮುಖ್ಯ ಕಾರಣ ಕನ್ನಡದ ಬಗ್ಗೆ ಪ್ರೀತಿ ಇಲ್ಲದಿರುವುದು, ಅಭಿಮಾನ ಇಲ್ಲದಿರುವುದು. ಅಯ್ಯೋ ನಾನು ಕನ್ನಡದಲ್ಲಿ ಮಾತನಾಡಿದರೆ ಅವರು ಏನಂದುಕೊಂಡುಬಿಡುತ್ತಾರೆ ಎನ್ನುವ ಕೀಳರಿಮೆಯೇ ಇವತ್ತಿನ ಈ ಪರಿಸ್ಥಿತಿಗೆ ಕಾರಣ. ಇನ್ನು ಬೆಂಗಳೂರಿನಲ್ಲಂತೂ ಕನ್ನಡದ ಅಗತ್ಯವೇ ಇಲ್ಲ. ಒಂದು ವಿಚಾರ ಸರಿಯಾಗಿ ಅರ್ಥವಾಗುವುದಿಲ್ಲ, ಈ ಬೆಂಗಳೂರಿನ ಪೋಷಕರಿಗೆ ತಮ್ಮ ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ಏಕೆ ಅಷ್ಟು ಭಯ? ಸರಿಯಾಗಿ ಇಂಗ್ಲೀಷ್ ಬರದಿದ್ದರೂ ತಮ್ಮ ಮಕ್ಕಳ ಜೊತೆ ತಪ್ಪು ತಪ್ಪಾಗಿ ಇಂಗ್ಲೀಷ್’ನಲ್ಲೇ ಮಾತಾಡುತ್ತಾರೆ. ಏಕಿಷ್ಟು ಇಂಗ್ಲೀಷ್ ವ್ಯಾಮೋಹ? ಅವರು ಹೇಳುವಂತೆ, ಮಕ್ಕಳನ್ನು ಕನ್ನಡದಲ್ಲಿ ಮಾತಾಡಿಸಿದರೆ ಅವರು ಶಾಲೆಯಲ್ಲಿ ಹಿಂದುಳಿದುಬಿಡುತ್ತಾರೆ, ಅವರಿಗೆ ಸಹಾಯವಾಗಲಿ ಅಂತ ಇಂಗ್ಲೀಷ್’ನಲ್ಲಿ ಮಾತಾಡುತ್ತೇವೆ ಅನ್ನುತ್ತಾರೆ. ನೀವು ಗಮನಿಸಿರಬಹುದು ಈಗಿನ ಮಕ್ಕಳು ನೀವು ಬೇಡ ಅಂದರೂ ಇಂಗ್ಲೀಷ್’ನಲ್ಲೇ ಮಾತಾಡುತ್ತಾರೆ.

ಇಂಗ್ಲೀಷ್ ಮಾಧ್ಯಮದ ಶಾಲೆಗಳಿಂದ ಅವರು ಕ್ರಮ ಬದ್ಧವಾಗಿ ಇಂಗ್ಲೀಷ್ ಭಾಷೆ ಕಲಿಯುತ್ತಾರೆ. ನಿಜ, ಇವತ್ತಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಮುಂದಿನ ಭವಿಷ್ಯಕ್ಕೆ ಇಂಗ್ಲೀಷ್ ಬೇಕೇ ಬೇಕು. ಶೈಕ್ಷಣಿಕ ವಿಚಾರಗಳನ್ನು ಇಂಗ್ಲೀಷ್’ನಲ್ಲಿ ಕಲಿಯುವುದೇ ಸುಲಭ. ಮಕ್ಕಳಿಗೆ ಇಂಗ್ಲೀಷ್ ಕಲಿಸುವ ಜವಾಬ್ದಾರಿಯನ್ನು ಶಾಲೆಗಳು ನಿರ್ವಹಿಸುತ್ತವೆ. ಪೋಷಕರಾದ ನಮ್ಮಿಂದ ಆ ಮಕ್ಕಳಿಗೆ ಬೇಕಾಗಿರುವುದು ಮತ್ತದೇ ಇಂಗ್ಲೀಷ್ ಅಲ್ಲ. ಮನೆಯಲ್ಲಾದರೂ ಮಕ್ಕಳೊಂದಿಗೆ ಕನ್ನಡ ಮಾತಾಡಬೇಕು. ಯಾವುದೇ ವಿಚಾರವಾಗಲಿ ಮಾತೃಭಾಷೆಯಲ್ಲಿ ಹೇಳಿದರೆ ಮಕ್ಕಳಿಗೆ ಬೇಗನೆ ಅರ್ಥವಾಗುತ್ತದೆ. ಮಾತೃಭಾಷೆಯ ಶಕ್ತಿಯೇ ಅಂತದ್ದು.

  ನನ್ನ ಪರಿಚಯದ ಒಬ್ಬರಿದ್ದಾರೆ, ಅಚ್ಚ ಕನ್ನಡಿಗರು. ಮನೆಯಲ್ಲಿ ಮಾತ್ರ ಮಗುವಿನ ಜೊತೆ ಇಂಗ್ಲೀಷ್’ನಲ್ಲೇ ಮಾತಾಡುತ್ತಾರೆ. ಆ ಮಗುವಿನ ಅಜ್ಜಿ ಇವರ ಮನೆಗೆ ಬರುವುದಕ್ಕೇ ಹಿಂಜರಿಯುತ್ತಾರೆ, ಕಾರಣ ಆ ಮಗುವಿನ ಹತ್ತಿರ ಅವರು ಕನ್ನಡ ಮಾತಾಡುವಂತಿಲ್ಲ. ನಾನು ಆ ಮಗುವಿಗೆ ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅವಳು ಖುಷಿ ಖುಷಿಯಾಗಿ ಕನ್ನಡದಲ್ಲೇ ಉತ್ತರಿಸುತ್ತಾಳೆ. ಈಗ ಹೇಳಿ ಸಮಸ್ಯೆಇರುವುದು ಎಲ್ಲಿ? ಹೊರಗಿನಿಂದ ಬಂದು ಇಲ್ಲಿ ನೆಲೆಸುವ ಅನ್ಯರಾಜ್ಯದ ಜನರಿಗಿಂತ ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಕನ್ನಡಿಗರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಕನ್ನಡದ ಬಗ್ಗೆ ಇರುವ ತಾತ್ಸಾರ, ಕನ್ನಡದ ಬಗ್ಗೆ ಇರುವ ಕೀಳರಿಮೆ. ಇವತ್ತು ಎಷ್ಟು ಜನ ಕನ್ನಡಿಗರು ಕನ್ನಡ ಪುಸ್ತಕಗಳನ್ನು, ದಿನಪತ್ರಿಕೆಯನ್ನು ಓದುತ್ತಾರೆ? ಎಷ್ಟು ಜನ ಕನ್ನಡ ನಾಟಕ, ಸಿನಿಮಾವನ್ನು ವೀಕ್ಷಿಸುತ್ತಾರೆ? ಇವತ್ತಿನ ಯುವಪೀಳಿಗೆಗೆ ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವುದಿಲ್ಲ ಅನ್ನುವುದು ನಿಜಕ್ಕೂ ಬೇಸರದ ಸಂಗತಿ. ತಮಿಳಿಗರೊಂದಿಗೆ ತಮಿಳಿನಲ್ಲಿ, ಆಂಧ್ರದವರೊಂದಿಗೆ ತೆಲುಗಿನಲ್ಲಿ, ಉತ್ತರ ಭಾರತದವರೊಂದಿಗೆ ಹಿಂದಿಯಲ್ಲಿ ಹಾಗೂ ಕನ್ನಡಿಗರೊಂದಿಗೆ ಇಂಗ್ಲೀಷ್’ನಲ್ಲಿ ಮಾತಾಡುವವನೇ ಬೆಂಗಳೂರು ಕನ್ನಡಿಗ ಎನ್ನುವ ಮಾತು ಅಕ್ಷರಶಃ ಸತ್ಯ.

ಕನ್ನಡದಂತೆಯೇ ಇಂಗ್ಲೀಷ್ ಕೂಡ ಒಂದು ಭಾಷೆ ಅಷ್ಟೇ. ಇಂಗ್ಲೀಷ್ ಗೊತ್ತಿಲ್ಲದೇ ಅಭಿವೃದ್ಧಿ ಸಾಧ್ಯವೇ ಇಲ್ಲ ಅನ್ನುವುದಂತೂ ಸುಳ್ಳು. ಜರ್ಮನಿ, ಫ್ರಾನ್ಸ್, ಚೀನಾ, ಜಪಾನ್ ಮುಂತಾದ ಪ್ರಗತಿ ಹೊಂದಿರುವ ದೇಶಗಳಲ್ಲಿ ಇಂಗ್ಲೀಷ್ ಗಂಧ ಗಾಳಿಯೇ ಇಲ್ಲ. ಸ್ಥಳೀಯ ಭಾಷೆ ಗೊತ್ತಿಲ್ಲದೇ ಅಲ್ಲಿ ಬದುಕುವುದೇ ಕಷ್ಟ. ಇವತ್ತಿನ ಸಂಧರ್ಭದಲ್ಲಿ ಕನ್ನಡವನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪೋಷಕರ ಮೇಲಿದೆ. ನಮ್ಮ ಮಕ್ಕಳು ಕನ್ನಡವನ್ನು ಇಷ್ಟ ಪಡುವಂತಹ ವಾತಾವರಣ ಸೃಷ್ಟಿಸೋಣ. ಕನ್ನಡ ಪುಸ್ತಕಗಳಿಗೆ,ದಿನಪತ್ರಿಕೆಗಳಿಗೆ,ಸಾಹಿತ್ಯ, ಸಂಗೀತ, ಕಲೆಗಳಿಗೆ, ಸಿನೆಮಾ, ನಾಟಕಗಳಿಗೆ, ಕನ್ನಡಕ್ಕಾಗಿ ಹೋರಾಡುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರೋತ್ಸಾಹಿಸೋಣ.

ಕನ್ನಡಿಗರಾದ ನಾವು ಕೀಳರಿಮೆ, ತಾತ್ಸಾರ ಬಿಟ್ಟು ಕನ್ನಡದಲ್ಲೇ ಮಾತಾಡೋಣ. ಅದೇ ನಾವು ಕನ್ನಡ ಭಾಷೆಗೆ ಮಾಡುವ ಮಹಾ ಸೇವೆ.

ವೇಣು ರಾವ್,

ಕೊಪ್ಪ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post