X
    Categories: ಕಥೆ

ಶಾಸ್ತ್ರೋಕ್ತ ಭಾಗ-೨

ಬೈಕ್ ನಿಲ್ಲಿಸಿದ್ದನ್ನು ನೋಡಿ ಅವರ ಮುಖ ಪ್ರಸನ್ನವಾಗಿದ್ದು ಬೈಕಿನ ಹೆಡ್ ಲೈಟಿನ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನಾನು ಏನನ್ನಾದರೂ ಕೇಳುವ ಮೊದಲೇ ಅವರೇ ಶುರು ಮಾಡಿದರು.

“ನಮಸ್ಕಾರ, ಯಾವ್ ಕಡೆಗೆ ಹೊರ್ಟಿದ್ರಿ ನೀವು?”

“ನಾನು ಬೆಳ್ಯಾಡಿ ಕಡಿಗೆ. ನಿಮ್ಗೆಲ್ಲಿ ಹೋಯ್ಕು?” ನಾನು ಉತ್ತರಿಸಿದೆ.

“ನಂಗ್ ಸಮೇತ ಬೆಳ್ಯಾಡಿ ಕಡೆಗೇ ಹೋಯ್ಕು. ಇಲ್ಲಿಂದ ನಡ್ಕಂಡು ಹೋಪುಕೆ ಸುಮಾರು ದೂರ ಆತ್ತು ಮಾರಾಯ್ರೆ. ಮಳೆ ಬೇರೆ ನಿಲ್ಲುದಿಲ್ಲೆ ಅನ್ನತ್ತ್. ಅಲ್ಲಿವರೆಗೆ ನನ್ನನ್ನ ಕರ್ಕಂಡು ಹೋಯಿ ಒಂದ್ ಉಪ್ಕಾರ ಮಾಡ್ತ್ರಿಯೆ?” ಕೈ ಮುಗಿಯುತ್ತ ಅವರು ಕೇಳಿಕೊಂಡರು.

ವೃದ್ಧ ವ್ಯಕ್ತಿ ನನಗೆ ಕೈ ಮುಗಿಯುತ್ತಿರುವುದನ್ನು ನೋಡಿ ಕಸಿವಿಸಿಯಾಗಿ ಹೇಳಿದೆ, “ಅಯ್ಯೋ ಅದ್ಕೆಲ್ಲ ಕೈ ಮುಗಿಬೇಡಿ ಮಾರಾಯ್ರೆ. ಬನ್ನಿ ಕೂತ್ಕಣಿ. ನಿಮ್ಮನೆ ಎಲ್ಲಿ ಬತ್ತೋ ಅಲ್ಲೇ ಬಿಡ್ತೆ ನಿಮ್ಮನ್ನ”.

ಅವರು ಹತ್ತಿ ಕುಳಿತ ಕೂಡಲೇ ತಡ ಮಾಡದೇ ಬೈಕ್ ಓಡಿಸಲು ಶುರು ಮಾಡಿದೆ. ಮನೆಗೆ ಹೋಗಿ ಅಪ್ಪ ಅಮ್ಮನ ಬೈಗುಳ ಕೇಳುವುದಂತೂ ಇಂದು ನಿಶ್ಚಿತವೆಂದು ಯೋಚಿಸುತ್ತಿರಲು ಹಿಂದೆ ಕುಳಿತ ವ್ಯಕ್ತಿ ಮಾತನಾಡಲು ಶುರುವಿಟ್ಟುಕೊಂಡರು.

“ಯಾರ್ ಮನೆ ಅಂದ್ರಿ ನೀವು ಬೆಳ್ಯಾಡಿಲಿ?”

“ಯಾರ್ ಮನೆ ಅಂತ ನೀವು ಕೇಣ್ಲು ಇಲ್ಲ, ನಾನೇನ್ ಹೇಳ್ಲು ಇಲ್ಲ”. ಬಿಡದೆ ಸುರಿಯುತ್ತಿರುವ ಮಳೆಯಿಂದ ರೇಗಿ ಉತ್ತರಿಸಿದೆ. ಕ್ಷಣಮಾತ್ರದಲ್ಲಿ ಕನಿಕರ ಮೂಡಿ ನಾನೇ ಮುಂದುವರೆಸಿದೆ. “ನಾನು ಬೆಳ್ಯಾಡಿಯ ರಾಘವೇಂದ್ರ ಹೊಳ್ಳರ ಮಗ. ನಿಮ್ಮ್ ಪರಿಚಯ ಹ್ಯಾಂಗೆ?”

“ರಾಘವೇಂದ್ರ ಹೊಳ್ಳರ ಮಗನ? ಮತ್ತೆ ಇಲ್ಲಿ ಊರಲ್ಲಿ ಕಂಡ ಹಾಂಗೆ ಇಲ್ಲ್ಯಲೇ ನಿಮ್ಮನ್ನ?” ನನ್ನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಕೂಡ ಹೋಗದೆ ಮರುಪ್ರಶ್ನೆ ಹಾಕಿದರು.

“ನಾನು ಬೆಂಗಳೂರಲ್ಲೇ ಇಪ್ಪುದು. ಒಂದು ವಾರಕ್ಕೆ ಮನೆಗೆ ಬಂದದ್ದಷ್ಟೆ. ನಿಮಗೆ ಹೆಸ್ರು, ಮನೆ ಎಂತಾದರು ಇತ್ತ?” ನನ್ನ ಪ್ರಶ್ನೆಗೆ ಉತ್ತರ ಬರದಿದ್ದನ್ನು ನೋಡಿ ಕೆರಳಿ ಮತ್ತೆ ಅದೇ ಪ್ರಶ್ನೆ ಹಾಕಿದೆ.

“ಅಯ್ಯೋ ಮರ್ತೆ ಹೋಯ್ತು ಕಾಣಿ. ನನ್ನ ಹೆಸ್ರು ಈಶ್ವರ ಜೋಯ್ಸ ಅಂತ. ಬೆಳ್ಯಾಡಿ ಸುತ್ತ ಮುತ್ತ ಪುರೋಹಿತಿಕೆ ನಾನೇ ಮಾಡ್ಕೊಂಡಿದ್ದದ್ದು ಮೊದ್ಲು. ಈಗ ಎಡಿಯುದಿಲ್ಲ ಮಾರಾಯ್ರೆ. ಅಷ್ಟ್ಯಾಕೆ ನಿಮ್ಮ ಅಜ್ಜನ ಕಾಲದಲ್ಲಿ ನಿಮ್ಮನೆಲಿ ಏನೇ ಪೂಜೆ ಪುನಸ್ಕಾರ ಆದ್ರೂ ನನ್ನೇ ಕರಿತಿದ್ದದ್ದು. ನಿಮ್ಮ ಅಪ್ಪಂಗೆ ಮಾತ್ರ ನಾನು ಸಾಕಾಯಿಲ್ಲೆ ಅಂಬ್ರು ಕಾಣಿ, ಅಗ್ರಹಾರದ ಸುತ್ತದ ಇನ್ಯಾರನ್ನೋ ಕರಿತ್ರು ಪುರೋಹಿತಿಕೆಗೆ ಈಗ ನಿಮ್ಮನೆಲಿ”.

ಜೋಯ್ಸರ ಮಾತಿನಲ್ಲಿದ್ದ ಕೊಂಕು ನನಗೆ ಹೊಳೆಯಲಿಲ್ಲವೆಂದಲ್ಲ. ವಿಷಯ ಬೇರೆಡೆ ತಿರುಗಿಸಲು ನಾನು ಮಾತು ಮುಂದುವರೆಸಿದೆ.

“ಅಲ್ಲ ಜೋಯಿಸರೆ, ಈ ರಾತ್ರಿಲಿ, ಹೀಂಗೆ ಮಳೆ ಹೊಡಿತಾ ಇಪ್ಪು ಹೊತ್ತಿಗೆ ಮನೆಲ್ಲಿ ಹಪ್ಪಳ ತಿನ್ದ್ಕಂಡು, ಆರಾಮ ಆಯಿ ಬೆಚ್ಚಗೆ ಇಪ್ಪು ಬದ್ಲು ಅಲ್ಲಿ ಕಾಡಿನ ಮಧ್ಯೆ ಹ್ಯಾಂಗೆ ಬಂದ್ರಿ ನೀವು?”

ಸ್ವಲ್ಪ ಹೊತ್ತಿನ ನಂತರ ಉತ್ತರ ಬಂತು ಹಿಂದಿನ ಸೀಟಿನಿಂದ.

“ಅದೇ ನಂಗು ನೆನಪಾತ್ತಾ ಇಲ್ಲೆ ಕಾಣಿ. ಬೆಳಗ್ಗೆ ತಿಂಡಿ ತಿಂದು ಮಲ್ಕಂಡದ್ದು ನೆನಪಿತ್ತು. ಅಮೇಲೆ ಇಲ್ಲಿಗೆ ಹ್ಯಾಂಗೆ ಬಂದೆ ಅಂತ ಎಂತದು ನೆನಪೇ ಇಲ್ಲ ಮಾರಾಯ್ರೆ. ವರ್ಷ ಆಯ್ತು ಕಾಣಿ, ಎಲ್ಲ ಮರ್ತು ಹೋಪುಕೆ ಶುರು ಆಯ್ತು ಬತ್ತಾ ಬತ್ತಾ. ವಿಶ್ವೇಶ ಬಯ್ತಾ ಇರ್ತ ನಂಗೆ. ಏನ್ ಮಾಡ್ತಾ ಇದ್ರಿ ಅಂಬುದೇ ನಿಮಗೆ ಸ್ವಯ ಇಲ್ಲ್ಯ ಅಂತ. ನಾನೇನ್ ಬೇಕಂತ ಮಾಡುದ ಹೇಳಿ ಇದೆಲ್ಲ”. ಜೋಯಿಸರು ಮತ್ತೆ ಸುಮ್ಮನಾದರು.

ಮೊದಲಿಂದಲೂ ಮುಪ್ಪಿನ ಬಗ್ಗೆ ನನಗೆ ಭಯ ಇದ್ದೇ ಇದೆ. ಮುಪ್ಪಿನಲ್ಲಿ ಕಾಡುವ ಇಡೀ ಜೀವನದ ನೆನಪುಗಳ ಬಗ್ಗೆ. ಆದರೆ ಈ ಜೋಯಿಸರಿಗೆ ಇವತ್ತು ಬೆಳಗ್ಗೆ ತಿಂಡಿ ತಿಂದ ನಂತರದ್ದು ಕೂಡ ನೆನಪಿಲ್ಲ. ಮಾತು ಮುಂದುವರೆಸಲು ನಾನೇ ಕೇಳಿದೆ.

“ವಿಶ್ವೇಶ ಅಂದ್ರೆ ಯಾರು?”

“ವಿಶ್ವೇಶ ನನ್ನ ಮಗ. ಅವ್ನು ಸಮೇತ ಪುರೋಹಿತ್ಕೆ ಮಾಡ್ಕಂಡೆ ಇಪ್ಪುದು. ನಾನೇ ಕಲ್ಸಿ ಕೊಟ್ಟದ್ದು ಅವನಿಗೆ. ಅವನಿಗೆ ಯಾಕೋ ಮೊದಲಿಂದನೂ ಅಷ್ಟೇನೂ ಇಷ್ಟ ಇರ್ಲಿಲ್ಲ ಪೌರೋಹಿತ್ಯ. ನಾನೇ ಒತ್ತಾಯ ಮಾಡಿದ್ದು. ಈಗ ಅನ್ನಿಸ್ತ ಇತ್ತು ತಪ್ಪು ಮಾಡಿದೆ ನಾನು ಅಂತ”. ಜೋಯಿಸರ ಧ್ವನಿ ಕ್ಷೀಣವಾಯಿತು.

“ಯಾಕೆ ಜೋಯಿಸ್ರೆ? ಎಂತ ಆಯ್ತು ನಿಮ್ಮ ಮಗಂಗೆ?” ಕುತೂಹಲದಿಂದ ಕೇಳಿದೆ.

“ನೀವೇನು ಓದಿದ್ದು? ಬೆಂಗಳೂರಲ್ಲಿ ಎಂತ ಕೆಲಸ ನಿಮಗೆ?” ಪ್ರಶ್ನೆಗೆ ಪ್ರಶ್ನೆಯೇ ಉತ್ತರ ಜೋಯಿಸರದ್ದು.

“ಏನೋ ಒಂದು ಕೆಲಸ. ಹೊಟ್ಟೆಗೆ ಹಿಟ್ಟು ಬೀಳ್ಕಲ್ಲ”. ನನ್ನ ಪ್ರಶ್ನೆಗೆ ಮತ್ತೆ ಸರಿಯಾಗಿ ಉತ್ತರ ಬರದಿದ್ದಕ್ಕೆ ಬೇಕಂತನೆ ಕೊಂಕು ಮಾತಾಡಿದೆ.

“ಆಗ್ಳಿಂದ ಹೊಟ್ಟೆಯಿಂದ ಕಹಿ ತೇಗು ಬತ್ತಾ ಇತ್ತು. ನಿಮ್ಗೇನಾದ್ರು ಗೊತ್ತ ಯಾಕೆ ಹಿಂಗೆ ಅಂತ?”

“ಆಸಿಡಿಟಿ ಆಯಿತ್ತೇನೊ”. ಸುಮ್ಮನೆ ಆಸಕ್ತಿರಹಿತವಾಗಿ ಉತ್ತರಿಸಿದೆ.

“ಆಸಿಡಿಟಿ ಆದ್ರೆ ಹುಳಿ ತೇಗು ಬಪ್ಪುದಲ್ದೇ? ಕಹಿ ತೇಗು ಬತ್ತಾ?” ಅಂತ ಹೇಳಿ ಜೋಯ್ಸರು ಸಣ್ಣದಾಗಿ ನಕ್ಕರು.

ಕೂಡಲೇ ನನ್ನ ಉತ್ತರಕ್ಕೆ ನನಗೇ ಮುಜುಗರವಾಗಿ, ಜೋಯಿಸರ ಪ್ರತಿಕ್ರಿಯೆಗೆ ಕೋಪಗೊಂಡು ಉತ್ತರಿಸಿದೆ, “ನಂಗೇನು ಗೊತ್ತು ಮಾರಾಯ್ರೆ? ನಾನೇನು ಡಾಕ್ಟರ್ ಅಲ್ಲ ನಿಮ್ಮ ತೇಗಿನ ರುಚಿ ಕೇಳಿ ನಿಮಗೆ ಎಂತ ಆಯಿತ್ತು ಅಂತ ಹೇಳುಕೆ. ನಾನು ಇಂಜಿನಿಯರ್”.

“ಒಹ್ ದೊಡ್ಡ ದೊಡ್ಡ ಮನೆ ಎಲ್ಲ ಕಟ್ಟುಕೆ ನಿಮ್ಮನ್ನ ಕರೆಸ್ತ್ರಲ್ಲ?”

“ಹೌದು” ನನ್ನ ಕೆಲಸದ ಬಗ್ಗೆ ವಿವರಿಸಿ ಪ್ರಯೋಜನವಿಲ್ಲವೆಂದು ಸುಮ್ಮನೆ ಒಪ್ಪಿಕೊಂಡೆ.

“ಬಹುಷಃ ವಿಶ್ವೇಶಂಗೂ ನಿಮ್ ಥರನೇ ಆಯ್ಕು ಅಂತ ಆಸೆ ಇತ್ತೇನೋ”.

ಈ ಸಲ ನಾನು ಏನು ಪ್ರತಿಕ್ರಿಯೆ ತೋರಿಸುವ ಗೋಜಿಗೆ ಹೋಗಲಿಲ್ಲ. ಜೊಯಿಸರೇ ಮುಂದುವರೆಸಿದರು.

“ಅವ್ನು ಸಣ್ಣದಿರುವಾಗ್ಲೇ ನನ್ ಥರನೇ ಪುರೋಹಿತನನ್ನಾಗಿ ಮಾಡುವುದು ಅಂತ ನಾನೇ ತೀರ್ಮಾನ ಮಾಡಿ ಬಿಟ್ಟಿದ್ದೆ. ಅವ್ನ ಹತ್ರ ಆಗ ಎಂತ ಕೇಣ್ಳು ಇಲ್ಲ, ಕೇಂಡಿದ್ರು ಸಮೇತ ತನಗೆ ಮುಂದೆ ಏನಾಯ್ಕು ಅಂತ ತೀರ್ಮಾನ ಮಾಡುವಷ್ಟು ಪ್ರಾಯ ಕೂಡ ಆಯಿರ್ಲಿಲ್ಲೆ ಅವನಿಗೆ. ದೊಡ್ಡವ್ನಾತಿದ್ದ ಹಾಂಗೆ ಅವನಿಗೆ ಆಸಕ್ತಿ ಹೋಯ್ತು ಅನ್ಸತ್ತು  ಪೌರೋಹಿತ್ಯದ ಮೇಲೆ. ಅವ್ನದ್ದೇ ಪ್ರಾಯದ ಮಕ್ಳು ದೂರದ ಊರಿಗೆ ಹೋಯಿ ಒಳ್ಳೆ ಒಳ್ಳೆ ಕೆಲಸ ಸೇರಿದರು. ಇವ್ನು ಸುಮ್ನೆ ಕರುಬ್ತಾ ಕೂತ್ಕಂಡ”.

ಸ್ವಲ್ಪ ಹೊತ್ತು ಜೋಯಿಸರು ಸುಮ್ಮನಾದರು. ಮತ್ತೆ ಮಾತು ಮುಂದುವರೆಯಿತು.

“ಯಾಕೆ ಅರ್ಥ ಆತ್ತಿಲ್ಲೇ ಈಗಿನ ಮಕ್ಳಿಗೆ? ಸಾಯುವಾಗ ದುಡ್ಡು ನಮ್ಮೊಟ್ಟಿಗೆ ಬತ್ತಿಲ್ಲೆ ಅಂತ. ಮನೆ ಇಪ್ಪುದು ಆಶ್ರಯಕ್ಕೆ, ಬಟ್ಟೆ ಇಪ್ಪುದು ಮಾನ ಮುಚ್ಚುಕೆ, ಊಟ ಮಾಡುದು ಹಸಿವೆ ನೀಗಿಸುಕೆ, ವಾಹನ ಇಪ್ಪುದು ಓಡಾಡುಕೆ ಅಂತ. ಮನೆ, ಬಟ್ಟೆ, ವಾಹನ, ಆಹಾರದ ಮೇಲೆ ಜನರನ್ನ ಯಾಕೆ ಅಳಿಯುದು? ದೇವ್ರು ಕೊಟ್ಟ ಈ ಜನಮನ್ನ ಸಾರ್ಥಕ ಆಯಿ ಕಳೆದರೆ ಸಾಕು ಅಂತ ಯಾಕೆ ಅರ್ಥ ಆತ್ತಿಲ್ಲೆ ಯಾರಿಗೂ?”

ಜೋಯಿಸರ ಮಾತು ನನಗೇ ತಾಕಿದಂತಾಗಿ ಏನು ಮಾತಾಡುದು ಅಂತ ಗೊತ್ತಾಗದೆ ಕೇಳಿದೆ, “ಮದ್ವೆ ಆಯಿತ್ತ ನಿಮ್ಮ ಮಗಂಗೆ?”

“ಅದ್ರ ಕಥೆ ಕೇಣ್ಬೇಡಿ ಮಾರಾಯ್ರೆ. ಅದ್ಕೊಂದು ಒದ್ದಾಡಿದ್ದು ಸ್ವಲ್ಪ ಅಲ್ಲ ನಾವು. ಈಗ ಬ್ರಾಹ್ಮಣರ ಹುಡುಗಿಯರು ಮದ್ವೆಗೆ ಸಿಕ್ಕುದೇ ಕಷ್ಟ. ಇಪ್ಪು ಕೆಲವರಿಗೂ ನಿಮ್ಮ ಹಾಂಗೆ ಒಳ್ಳೆ ಕೆಲಸದಲ್ಲಿ ಇಪ್ಪುವವ್ರೇ ಬೇಕು. ನೀವು ಫಾರಿನ್ನಿಗೆ ಹೋಯಿದ್ರಿಯೇ?” ಅನಿರೀಕ್ಷಿತವಾಗಿ ಜೋಯಿಸರಿಂದ ಬಂದ ಪ್ರಶ್ನೆ ಕ್ಷಣಕಾಲ ನನ್ನ ತಬ್ಬಿಬ್ಬುಗೊಳಿಸಿತು.

ಅವರಿಂದ ಏನು ಉತ್ತರ ಬರಬಹುದೆಂಬ ಕುತೂಹಲದಲ್ಲಿ ಉತ್ತರಿಸಿದೆ “ಇಲ್ಲ ಮಾರಾಯ್ರೆ”.

“ಒಹ್ ಹಾಂಗದ್ರೆ ನಿಮ್ಗೂ ಮದ್ವೆ ಆಪುದು ಕಷ್ಟ ಇತ್ತು ಕಾಣಿ. ಈಗ ಬ್ರಾಹ್ಮಣರ ಹುಡುಗಿಯರದ್ದೆಲ್ಲ ಬೇಡಿಕೆಗಳು ಜಾಸ್ತಿ ಆಯಿತ್ತು ಮಾರಾಯ್ರೆ. ಹುಡುಗ ಒಳ್ಳೆ ಕೆಲಸದಲ್ಲಿ ಇರ್ಕು, ಫಾರಿನ್ನಿಗೆ ಹೋಯಿರ್ಕು, ಅಪ್ಪ ಅಮ್ಮ ಇಲ್ದೇ ಇದ್ರೆ ಒಳ್ಳೆದು, ಇದ್ರೂ ಸಮೇತ ಮದ್ವೆ ಆದ್ಮೇಲೆ ಮಗನ ಒಟ್ಟಿಗೆ ಇಪ್ಪುಕಾಗ ಹೀಂಗೆ ಎಲ್ಲ. ಹೀಂಗಿಪ್ಪುವಾಗ ಊರಲ್ಲಿಪ್ಪುವ ಹುಡುಗರಿಗೆ ಹೆಣ್ಣು ಕೊಡುಕೆ ತಯ್ಯಾರೇ ಇಲ್ಲ ಜನಗಳು. ಅದ್ರಲ್ಲಿ ಪುರೋಹಿತ್ರದ್ದು ಮತ್ತೆ ಅಡುಗೆ ಭಟ್ಟರ ಪಾಡು ಕೇಣ್ಬೇಡಿ ನೀವು. ಮನೇಲ್ಲಿ ಏನಾದ್ರೂ ಪೂಜೆ ಅಯ್ಕಿದ್ರೆ, ಸಭೆ ಸಮಾರಂಭಕ್ಕೆ ಅಡುಗೆ ಆಯ್ಕಿದ್ರೆ ಮಾತ್ರ ನೆನಪಾಪುದು ಜನಕ್ಕೆ ಪುರೋಹಿತರು ಮತ್ತೆ ಅಡುಗೆ ಭಟ್ರು. ಇಲ್ದೆ ಇದ್ರೆ ಬರೀ ಸಸಾರವೇ”. ಜೋಯಿಸರ ಧ್ವನಿ ಕೋಪದ ಕಡೆ ವಾಲುತ್ತಿರುವುದು ಸ್ಪಷ್ಟವಾಗುತ್ತಿತ್ತು.

“ಹಾಂಗದ್ರೆ ಇನ್ನೂ ಮದ್ವೆ ಹೆಣ್ಣು ಹುಡುಕ್ತಾ ಇದ್ರಿ ಕಾಣತ್ತು ಅಲ್ದಾ?” ನಾನು ಮಾತು ಮುಂದುವೆರೆಸಲು ಕೇಳಿದೆ.

“ಇಲ್ಲಪ್ಪ. ವಿಶ್ವೇಶಂಗೆ ಒಂಥರಾ ಬೇಜಾರು ಆಯ್ತು ಇಲ್ಲಿ ಜನ ಎಲ್ಲ ಮಾಡುದು ಕಂಡು. ಒಂದಿನ ಮಧ್ಯಾಹ್ನ ಇದ್ದಕ್ಕಿದ್ದ ಹಾಂಗೆ ಒಂದು ಹುಡುಗಿನ್ನ ಕರ್ಕಂಡು ಬಂದು, ಅಪ್ಪ ಇವಳೇ ನಿಮ್ ಸೊಸೆ. ನಿನ್ನೆ ಇವಳನ್ನ ಮದ್ವೆ ಆದೆ ಅಂತ ಹೇಳಿದ. ಮದ್ವೆಗೆ ಅಂತ ಅಂಬ ಹಾಂಗೆ ಇಬ್ರ ಕುತ್ತಿಗೆಲ್ಲು ಒಂದು ಹೂವಿನ ಹಾರ, ಹುಡುಗಿ ಕುತ್ತಿಗೆಲ್ಲಿ ಒಂದು ದಾರದಲ್ಲಿ ಕಟ್ಟಿದ್ದ ತಾಳಿ ಬಿಟ್ರೆ ಮತ್ತೆಂತ ಇರ್ಲಿಲ್ಲ. ಹುಡ್ಗಿನ್ನ ಕಂಡ ಕೂಡ್ಲೆ ಗೊತ್ತಾಯ್ತು ಇದು ಬ್ರಾಹ್ಮಣ ಹುಡ್ಗಿ ಅಲ್ಲ ಅಂತ. ಯಾವ್ದೋ ಘಟ್ಟದ ಮೇಲಿನ ಹುಡುಗಿ ಥರ ಇತ್ತು. ವಿಶ್ವೇಶನಿಗೆ ಎದ್ರು ಮಾತಾಡು ಧೈರ್ಯ ನಂಗೆ ಸಾಕಾಯಿಲ್ಲೆ. ಹೋಗ್ಲಿ ಒಂದು ಹುಡುಗಿಯಾದ್ರು ಸಿಕ್ಕಿತಲ್ಲ ವಿಶ್ವೇಶನ ಸಂಸಾರ ಸಾಗಿಸುಕೆ ಅಂತ ನಾನು ಸಮೇತ ಸುಮ್ನೆ ಆದೆ. ಅಗಾ ಆ ತಿರುವಲ್ಲಿ ಎಡಕ್ಕೆ ಹೋಪ. ಅಲ್ಲೇ ಆ ಇಳಿಜಾರು ರಸ್ತೆಲ್ಲಿ ಒಂದೆರಡು ಕಿಲೋಮೀಟರ್ ಮುಂದೆ ಹೋದ್ರೆ ನಮ್ಮನೆ. ಇಳಿಜಾರಲ್ಲಿ ಇಪ್ಪುದ್ರಿಂದ ಅದನ್ನ ಕೆಳಮನೆ ಅಂತ ಜನ ಮೊದಲಿಂದ ಕರಿಯುದು. ಕೆಳಮನೆ ಜೋಯಿಸರು ಅಂದ್ರೆ ನಿಮ್ಮ ಅಪ್ಪಂಗೆ ಗುರ್ತ ಆತ್ತು ಕಾಣಿ. ರಸ್ತೆ ಒಂಚೂರು ಹಾಳಾಯಿತ್ತು, ಸ್ವಲ್ಪ ಜಾಗ್ರತೆ ಅಕ್ಕಾ..”

“ಹಂಗಾದ್ರೆ ಈಗ ನಿಮಗೆ ಆರಾಮ ಅನ್ನಿ. ಮನೆ ಕೆಲಸ ಎಲ್ಲ ಕಂಡ್ಕಂಬುಕೆ ಸೊಸೆ ಇದ್ಲಲೇ. ಅದ್ಕೆ ಹಿಂಗೆ ರಾತ್ರಿ ಆದ್ರೂ ಊರು ಊರು ಸುತ್ತುತ್ತಾ ಇದ್ರಿಯ ಎಂತ ಕಥೆ?” ಬೈಕನ್ನ ಎಡಕ್ಕೆ ತಿರುಗಿಸುತ್ತಾ ನಗುತ್ತ ಕೇಳಿದೆ.

“ಎಂಥ ಆರಾಮವು ಇಲ್ಲ ಮಾರಾಯ್ರೆ. ಬಂದವಳೇನು ಮನೆ ಕೆಲಸ ಮಾಡ್ತ್ಳು ಅನ್ದ್ಕಂಡಿದ್ರಿಯ ನೀವು? ಒಳ್ಳೆ ಮಹಾರಾಣಿ ಥರ ಟಿವಿ ಮುಂದೆ ಪ್ರತಿಷ್ಠಾಪನೆ ಆದ್ರೆ ಇಡೀ ದಿನ ಅಲ್ಲೇ. ಅಡುಗೆ ಸಮೇತ ನಾನೇ ಮಾಡ್ಕು.  ನನ್ ಕರ್ಮ. ಯಾರಿಗೆ ಬೈದು ಏನ್ ಪ್ರಯೋಜನ ಹೇಳಿ?”

“ವಿಶ್ವೇಶ ಅವ್ರು ಎಂತ ಹೇಳುದಿಲ್ಯ ಹೆಂಡತಿಗೆ?”

“ಹೇಳುದೆಂತ? ಅವನಿಗೂ ಬೇಜಾರತ್ತು ಅನ್ಸತ್ತು. ಮದ್ವೆ ಹೊಸತಲ್ಲ ಸುಮ್ನೆ ಯಾಕೆ ಜಗಳ ಅಂತ ಸುಮ್ನಿದ್ನೇನೋ? ಹಾಂ.. ಇಲ್ಲೇ ನಿಲ್ಸಿ ಮಾರಾಯ್ರೆ. ಅಗಾ ಅಲ್ಲೇ ತೋರತ್ತು ಕಾಣಿ ಅದೇ ನಮ್ಮನೆ”. ಸ್ವಲ್ಪ ದೂರಕ್ಕೆ ಕೈ ಮಾಡಿ ಜೋಯಿಸರು ತೋರಿಸಿದರು. ಕವಿದಿದ್ದ ಗಾಢ ಕತ್ತಲೆಯಲ್ಲಿ ಕಪ್ಪಾದ ಮನೆ ಆಕೃತಿ ಬಿಟ್ರೆ ಮತ್ತೇನು ತೋರಲಿಲ್ಲ.

“ಮನೆ ಒಳಗೆ ದೀಪನೆ ತೋರ್ತ ಇಲ್ಲ ಅಲ್ಲ ಜೋಯಿಸರೆ?” ಸ್ವಲ್ಪ ಅನುಮಾನದಿಂದಲೇ ಕೇಳಿದೆ.

“ಇಷ್ಟು ಹೊತ್ತಿಗೆಲ್ಲ ಮಲ್ಕಂಡು ಆಯಿರತ್ತು ನಮ್ಮನೆಲ್ಲಿ. ಬತ್ತೆ ಅಕ್ಕಾ. ತುಂಬಾ ಉಪಕಾರ ಆಯ್ತು ನಿಮ್ಮಿಂದ”. ಅಷ್ಟು ಹೇಳಿ ಕೈ ಮುಗಿದು ಜೋಯಿಸರು ಮನೆ ಕಡೆಗೆ ನಡೆಯತೊಡಗಿದರು.

“ಮತ್ತೆ ನಿಮ್ ಊಟ?” ಎಂದು ನಾನು ಕೂಗಿದೆ.

“ಎಂತಾದರು ವ್ಯವಸ್ಥೆ ಆತ್ತು ಬಿಡಿ. ನೀವು ಹೊರಡಿ, ಮಳೆ ಜಾಸ್ತಿ ಆಪು ಮುಂಚೆ ಮನೆ ಸೇರ್ಕಂಡು ಬಿಡಿ” ಎಂದು ಹೇಳಿ ಜೋಯಿಸರು ಕತ್ತಲೆಯಲ್ಲಿ ಮರೆಯಾದರು.

ಅಲ್ಲಿಂದ ಬೈಕ್ ತಿರುಗಿಸುವಷ್ಟರಲ್ಲಿ ಎಲ್ಲಿಂದಲೋ ಗಾಳಿಗೆ ಒಂದು ಕಾಗದದ ತುಂಡು ಹಾರಿ ಬಂದು ನನ್ನ ಬೈಕಿನ ಹೆಡ್ ಲೈಟಿಗೆ ಅಡ್ಡವಾಗಿ ಅಂಟಿಕೊಂಡಿತು. ಅದನ್ನ ಸರಿಸಿ ಬಿಸಾಡಲೆಂದು ಹೊರಟಾಗ ಅದರಲ್ಲಿ ತೋರಿದ್ದು ಮುದ್ರಿಸಿದಂತೆ ಇದ್ದ ಯಾರದೋ ಕೈ ಬರಹ. ಇರಲಿ ಬೆಳಗ್ಗೆ ಓದೋಣವೆಂದು ಹಾಗೆ ಮಡಚಿ ಬೈಕಿನ ಬಾಕ್ಸಿನ ಒಳಗೆ ಅದನ್ನ ತುರುಕಿ, ಮನೆ ಕಡೆ ಪ್ರಯಾಣ ಮುಂದುವರೆಸಿದೆ. ದಾರಿಯುದ್ದಕ್ಕೂ ಜೋಯಿಸರ ಮನೆಯ ಕಥೆಯೇ ನೆನಪಾಗುತ್ತಿತ್ತು. ಒಬ್ಬೊಬ್ಬರ ಮನೆದ್ದು ಒಂದೊದು ಕಥೆ ಈ ಊರಿನಲ್ಲಿ. ಬೆಂಗಳೂರಿಗೆ ಸೇರಿದವರ ಮನೆದ್ದೆಲ್ಲ ಸಾಧರಣ ಒಂದೇ ಕಥೆ. ಬರಿ ವ್ಯಥೆ ಅಷ್ಟೇ. ಎಂದು ಮನಸ್ಸಿನಲ್ಲೇ ನಗುತ್ತ ಮನೆ ಗೇಟ್ ಸರಿಸಿ ಬೈಕನ್ನ ಪಕ್ಕಕ್ಕೆ ನಿಲ್ಲಿಸಿ, ಹೆಚ್ಚೇನು ಮಾತನಾಡದೇ, ಅಮ್ಮ ಅಪ್ಪನ ಪ್ರಶ್ನೆಗಷ್ಟೇ  ಉತ್ತರಿಸಿ ಊಟ ಮಾಡಿ ಹಾಸಿಗೆಗೆ ಬಿದ್ದವನಿಗೆ ಅತಿ ಗಾಢ ನಿದ್ರೆ.

-Tilak Somayaji

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post