X

ಗುಬ್ಬಚ್ಚಿ ಗೂಡಿನಲ್ಲಿ…..

ಗುಬ್ಬಚ್ಚಿಗಳು ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲಾ ಮನೆಯ ಅವಿಭಾಜ್ಯ ಅಂಗಗಳಾಗಿದ್ದವು.  ಮನೆಗಳಲ್ಲಿ ಗುಬ್ಬಚ್ಚಿಗಳಿಗಾಗಿ ಮುಚ್ಚಿಗೆಯಲ್ಲಿ ಗೂಡುಕಟ್ಟಿ ಇಡಲಾಗುತಿತ್ತು. ಮನೆಕಟ್ಟುವಾಗ ಮನೆಯ ವಿನ್ಯಾಸದೊಂದಿಗೆ ಗುಬ್ಬಚ್ಚಿಗೂಡಿನ ವಿನ್ಯಾಸವೂ ಮುಖ್ಯವಾಗಿತ್ತು. ಮರದ ಬೆಚ್ಚಗಿನ ಮುಚ್ಚಿಗೆಯಲ್ಲಿ ಸುಮಾರು ಅರ್ದ ಮೀಟರ್ ಉದ್ದಗಲದ ಪೊಟರೆಯಿಟ್ಟು, ಹೊರಗಡೆ ಸುಮಾರು ೫ ಸೆಂಟೀಮೀಟರ್’ನ ರಂಧ್ರಯಿಡಲಾಗುತಿತ್ತು. ಹೀಗೆ ವಿನ್ಯಾಸಗೊಳಿಸಿದ ಗೂಡು ಬೆಕ್ಕು, ಹಾವು, ಇರುವೆ ಇತ್ಯಾದಿಗಳಿಂದ ಸುರಕ್ಷಿತವಾಗಿತ್ತು. ಕೇರೆ ಹಾವುಗಳು ಮಾಡಿನ ಪಕ್ಕಾಸಿನ ಮೇಲಿಂದ ಬಂದು ಅರ್ದ ಮೀಟರ್’ನಷ್ಟು ದೂರ ದೇಹವನ್ನು ಚಾಚಿ ವಿಫಲ ಪ್ರಯತ್ನಮಾಡಿದ್ದನ್ನು ಹಲವು ಬಾರಿ ನೋಡಿದ್ದೆವು. ಗುಬ್ಬಚ್ಚಿಗಳು ಸಂಖ್ಯೆ ಜಾಸ್ತಿಯಾದಾಗ ಈ ವಿನ್ಯಾಸಗೊಳಿಸಿದ ಗೂಡಲ್ಲದೆ ಮಾಡಿನ ಸಂದಿಮೂಲೆಗಳಲ್ಲೂ ಗೂಡುಕಟ್ಟಿ ಮನೆತುಂಬಾ ಗುಬ್ಬಚ್ಚಿಗಳಿರುತ್ತಿದ್ದವು. ಆದರೆ ನಮೆಗೆಲ್ಲಾ ಹಕ್ಕಿಗಳ ಹಿಕ್ಕೆಯ ತೊಂದರೆಯೇ ತಲೆ ನೋವಾಗಿತ್ತು. ಒಗೆದು ಒಣಸಿದ ಯುನಿಫ್ಹಾರ್ಮನ ಬಿಳಿ ಬಟ್ಟೆಗಳನ್ನು ಹಿಕ್ಕೆಹಾಕಿ ಗಲೀಜುಮಾಡುತ್ತಿದ್ದ ಗುಬ್ಬಚ್ಚಿಗಳಿಗೆ ದಿನವೂ ಬಯ್ಯುತ್ತಿದೆವು. ಯಾಕಾದ್ರೂ ಗುಬ್ಬಚ್ಚಿಗಳನ್ನು ಮನೆಯಲ್ಲಿ ಸಾಕುತ್ತಾರೆ ಅನಿಸುತ್ತಿತ್ತು. ಗುಬ್ಬಚ್ಚಿಗಳಿಂದ ಉಪಯೋಗವೇನು ಎನ್ನುವುದೇ ತಿಳಿಯುತ್ತಿರಲ್ಲಿಲ್ಲ. ಪರಿಸರ ಶಾಸ್ತ್ರದಲ್ಲಿ ಪರಿಸರದ ಸಮತೋಲನಕ್ಕೆ ಎಲ್ಲಾ ಜೀವಿಗಳು ಬೇಕು ಎಂದು ಪಾಠದಲ್ಲಿ ಓದಿದರೂ, ಪೂರ್ವಜರ ಮನೆಯಲ್ಲಿ ಗುಬ್ಬಚ್ಚಿ ಸಾಕುವ ಕಾರಣ ತಿಳಿಯಲಿಲ್ಲ. ಸ್ಕೂಲು-ಕಾಲೇಜು ಮುಗಿತ್ತಿದ್ದಂತೆ ಗುಬ್ಬಚ್ಚಿಗಳು ಕಣ್ಮರೆಯಾದವು. ನಮ್ಮ ಮನೆಯಲೊಂದೇ ಅಲ್ಲ, ಎಲ್ಲ ಕಡೆಯೂ ಗುಬ್ಬಚ್ಚಿಗಳ ಸಂತತಿ ಕ್ಷಿಪ್ರಗತಿಯಲ್ಲಿ ಕಡಿಮೆಯಾಗ ತೊಡಗಿತು.

ಹೀಗಿರುವಾಗ ನಮ್ಮ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳನ್ನು ನೋಡಿದಾಗ ತುಂಬಾ ಖುಶಿಯಾಯಿತು. ಬಹುಮಹಡಿ ಕಟ್ಟಡದ ನಿರ್ಮಾಣದಲ್ಲಿದ ನ್ಯೂನ್ಯತೆಯಿಂದಾಗಿರುವ ಕುಂದಗಳ ಮಧ್ಯೆಯಿರುವ ಪೊಟರೆ ಗುಬ್ಬಚ್ಚಿಗಳ ಗೂಡಾಗಿತ್ತು. ಅಪರೂಪಕ್ಕೆ ಕಾಣಸಿಗುವ ಗುಬ್ಬಚ್ಚಿಗಳ ಬಗ್ಗೆ ಇನ್ನೂ ತಿಳಿದುಕೊಳ್ಳುವ ಆಸಕ್ತಿಬಂದಿತು. ಬಾಲ್ಕನಿಯಲ್ಲಿ ಅಕ್ಕಿ ಹಾಗೂ ನೀರನ್ನು ಇಡಲು  ಶುರುಮಾಡಿದೆನು. ಹಾಗೇ ರಟ್ಟಿನ ಪೆಟ್ಟಿಗೆಯನ್ನು   ಬಾಲ್ಕನಿಯಲ್ಲಿ “ಗೂಡು ಪೆಟ್ಟಿಗೆ” (NEST BOX) ಯಾಗಿ ಅಳವಡಿಸಿದೆ. ಆ ಪೆಟ್ಟಿಗೆಗಳಲ್ಲಿ ಮುನಿಯಾ ಜಾತಿಯ ಚಿಕ್ಕ ಹಕ್ಕಿ ಗೂಡು ಕಟ್ಟಿ ಸಂಸಾರಮಡಲು ಶುರುಮಾಡಿದವು. ಮುನಿಯಾಗಳು ಪ್ರತಿ ೨ ತಿಂಗಳಿಗೊಮ್ಮೆ ಮರಿಮಾಡಿತ್ತಿವೆ. ಇಟ್ಟ ಗೂಡುಪೆಟ್ಟಿಗೆಯಲ್ಲಿ ಗುಬ್ಬಚ್ಚಿ ಬರಲಿಲ್ಲವೆಂದು ಬೇಸರವಾಗುತಿತ್ತು. ೩ ವರ್ಷವಾದ ನಂತರ ಗುಬ್ಬಚ್ಚಿ ಗೂಡುಪೆಟ್ಟಿಗೆಯನ್ನು ಗೂಡುಕಟ್ಟಲು ಆರಿಸಿಕೊಂಡವು.

ಗೂಡುಪೆಟ್ಟಿಗೆಯನ್ನು “ಗೂಡುಕಟ್ಟಲು ಯೋಗ್ಯವೇ?” ಎಂದು ಪರೀಕ್ಷಿಸಲು ಜೋಡಿ ಹಕ್ಕಿಗಳು ಸುಮಾರು ೧೫ ದಿನ ತೆಗೆದುಕೊಂಡವು. ಗಂಡು ಮತ್ತು ಹೆಣ್ಣು ಗುಬ್ಬಚ್ಚಿಗಳು ಸಕ್ರಿಯವಾಗಿ ತೊಡಗಿಕೊಂಡಿದ್ದವು… ಮೊದಲಿದ್ದ ಮುನಿಯಾ ಹಕ್ಕಿಗಳು ಹಾರಿ ಹೋದದಿನವೇ  ಗುಬ್ಬಚ್ಚಿಗಳು ಆ ಗೂಡನ್ನು ಸಮೀಕ್ಷಿಸಲು ಸುರುಮಾಡಿದವು. ಮೊದಲು ಗಂಡು ಗುಬ್ಬಿ ಗೂಡನ್ನು ಪರಿಚಯಿಸಿದರೆ, ಹೆಣ್ಣುಗುಬ್ಬಿಯದು ಕೂಲಂಕುಷ ವೀಕ್ಷಣೆ…!! ಗ್ರಿಲ್’ನಿಂದ ಗೂಡಿಗೆ ಮತ್ತೆ ಗ್ರಿಲ್ಲಿಗೆ… ಹೀಗೆ ಹತ್ತಾರು ಬಾರಿ ಗೂಡಿಗೆ ಹೋಗಿ ಪರೀಕ್ಷಿಸಿತು. ೨-೩ ದಿನಗಳಲ್ಲಿ  ‘ಗೂಡಿಗೆ ಬೇರೆಯೇನು ಅಪಾಯವಿಲ್ಲ’ ಎಂದು ತೀರ್ಮಾನಿಸಿದ ಹೆಣ್ಣುಗುಬ್ಬಿ ಗೂಡಿನ ಒಳಹೊಕ್ಕಿ ವಾಸ್ತವ್ಯಕ್ಕೆ ಯೋಗ್ಯವೇ ಎಂದು ಪರೀಕ್ಷಿಸಲು ಶುರುಮಾಡಿತು. ಈ ಮಧ್ಯೆ ಮುನಿಯಾಗಳು ಗುಬ್ಬಿಗಳಿಲ್ಲದ ಸಮಯನೋಡಿ ಪುನಃ ಬಂದು ಸಂಸಾರಮಾಡಲು ಸುರುಮಾಡಿದವು. ಗುಬ್ಬಚ್ಚಿಗಳು ಬಂದಾಕ್ಷಣ ಮುನಿಯಾಗಳು ಹಾರಿಹೊದರೂ ಪುನಃ ವಾಪಾಸಾಗುತ್ತಿದ್ದವು. ಅರೆಮನಸ್ಸಿಂದಿದ್ದ ಗುಬ್ಬಚ್ಚಿಗಳು ಮುನಿಯಾಗಳನ್ನು ಅಷ್ಟೇನು ಓಡಿಸುತ್ತಿರಲಿಲ್ಲ… ಗುಬ್ಬಚ್ಚಿಗಳ ವಿಳಂಬ ತೀರ್ಮಾನದ  ಲಾಭಪಡೆದ ಮುನಿಯಾ ಮೊಟ್ಟೆಇಟ್ಟೇಬಿಟ್ಟಿತು.!!! ಗುಬ್ಬಚ್ಚಿ ಕನಿಕರದಿಂದ ಆ ಗೂಡನ್ನು ತೊರೆದು ಬೇರೆ ಗೂಡನ್ನರಸಿ ಹೊರಟಿತು…. ಹಾಗೆಹೊರಟ ಗುಬ್ಬಚ್ಚಿಗಳು ನೇರವಾಗಿ ಹೋಗಿದ್ದು ನಮ್ಮ ಮನೆಯ ಇನ್ನೊಂದು ಬಾಲ್ಕನಿಯಲ್ಲಿದ್ದ ‘ಗೂಡುಪೆಟ್ಟಿಗೆ’ಯನ್ನು…!!! ಅಲ್ಲಿಯೂ ಮುನಿಯಾ ಗೂಡು ಕಟ್ಟುತಿತ್ತು….ಗೂಡಿಗಾಗಿ ಮುನಿಯಾ -ಗುಬ್ಬಚ್ಚಿಗಳ ಪೈಪೋಟಿ ಷುರುವಾಯಿತು… ೫-೬ ದಿನ ಮೇಲೆ ವಿವರಿಸಿದಂತೆ ಗಂಡು ಗುಬ್ಬಿಯ ಗೂಡಿನ ಆಯ್ಕೆ ಹಾಗೂ ಹೆಣ್ಣುಗುಬ್ಬಿಯ ಕೂಲಂಕುಷ ಸಮೀಕ್ಷೆ-ಪರೀಕ್ಷೆ ಆಗುತ್ತಿದ್ದಂತೆ ಮುನಿಯಾ ಮೊಟ್ಟೆಯನ್ನೂ ಇಡಲು ಶುರುಮಾಡಿತು…. !!! ‘ಇದೇ ಸರಿಯಾದ ಜಾಗ’ ಎಂದು ತೀರ್ಮಾನಿಸಿದ ಗುಬ್ಬಚ್ಚಿಗಳು ತಮಗಿಂತ ದುರ್ಬಲವಾದ ಮುನಿಯಾ ಮೇಲೆ ಪ್ರಹಾರವೇ ನಡೆಸಿತು… ಮೊಟ್ಟೆಯಿಡುತ್ತಿದ್ದ ಮುನಿಯಾದ ಮೇಲೆ ದಾಳಿಮಾಡಿ ಕೊಂದೇಬಿಟ್ಟಿತು….’ಸಾಧು’ ಎಂದೇ ಗುರುತಿಸಲ್ಪಟ್ಟ ಗುಬ್ಬಚ್ಚಿಯೇ ತನ್ನ ಉಳಿವಿಗೆ ಈ ಚಿಕ್ಕ ಹಕ್ಕಿಯನ್ನು ಬಲಿಯಾಗಿಸಿತು. ಗೂಡಲ್ಲಿದ್ದ  ಮುನಿಯಾ ಮೊಟ್ಟೆಯನ್ನು ಕೆಳಗುರುಳಿಸಿದವು. ಮತ್ತೆರಡು  ದಿನಗಳಲ್ಲಿ ಗೂಡನ್ನು ತಮಗೆ ಬೇಕಾದಂತೆ ಮಾರ್ಪಾಡಿಸಿದವು.. ಮುನಿಯಾದ ಗೂಡಿಗೆ ಭಿನ್ನವಾಗಿ ಗುಬ್ಬಚ್ಚಿಗಳು  ‘ಅಜ್ಜರಗಡ್ಡ ‘, ಹತ್ತಿ, ತುಪ್ಪಳದ ಗರಿ ಇತ್ಯಾದಿಗಳನ್ನು ತಂದು ಗೂಡನ್ನು ಮೆತ್ತಗಿನ ಹಾಸಿಗೆಯಂತೆ ತಯಾರಿಸಿದವು. ಗೂಡಿನ ಒಳಾಂಗಣ ವಿನ್ಯಾಸದಲ್ಲಿ ಶ್ರೀಮತಿ ಗುಬ್ಬಚ್ಚಿದೇ ಮೇಲುಕೈ !!!!ಗೂಡಿನ ಸಾಮಗ್ರಿಗಳನ್ನು ಗಂಡು ಗುಬ್ಬಿ ತರುತ್ತಿದ್ದರೂ ಗೂಡಿನೊಳಗೆ ಜೋಡಿಸುವ ಕೆಲಸ ಮಾತ್ರ ಹೆಣ್ಣು ಗುಬ್ಬಚ್ಚಿಯದೇ!!!. ಸೌಂದರ್ಯ ಪ್ರಜ್ಞೆಯಲ್ಲಿ ಮುನಿಯಾವೇ ಮುಂದೆ. ಮುನಿಯಾದ ಗೂಡುಹೊರಗಿನಿಂದ ಕಾಣಲು ಚೊಕ್ಕವಾಗಿದ್ದರೆ, ಗುಬ್ಬಚ್ಚಿಯ ಗೂಡಿನ ಹೊರೆಗೆಲ್ಲಾ ಹುಲ್ಲು-ಕಡ್ಡಿಗಳು ನೇತಾಡುತಿತ್ತು.!!! ಸರಿ, ಗೂಡು ರೆಡಿಯಾಯಿತು. ಮುಂದೆ ಮಿಲನಮಹೋತ್ಸವ….!!! ಪ್ರೀತಿಯಿಂದ ಕರೆದು, ಭುಜವನ್ನು ಹಿಗ್ಗಿಸಿ ತನ್ನ ಪರಾಕ್ರಮಗಳನ್ನು ಪ್ರದರ್ಶಿಸುತಿದ್ದ ಗಂಡುಗುಬ್ಬಿಯನ್ನು ಸತಾಯಿಸಿದ ಹೆಣ್ಣುಗುಬ್ಬಿ, ಒಂದಿಷ್ಟು ಸರಸವಾಡಿ ಕೊನೆಗೆ ಮಿಲನಕ್ಕೆ ಒಪ್ಪಿಕೊಡಿತು.!!! ಆಶ್ಚರ್ಯವೆಂದರೆ ಗುಬ್ಬಚ್ಚಿಗಳ ಹನಿಮೂನ್ ಹಲವು ದಿನಗಳವರೆಗೂ ನಡೆಯುತಿತ್ತು.!!! ರಾತ್ರಿಹೊತ್ತು ಹೆಣ್ಣು ಗುಬ್ಬಚ್ಚಿ ಗೂಡಲ್ಲಿ ಕೂತಿರುತಿತ್ತು… ಸುಮಾರು ೧೫ ದಿನಗಳ ನಂತರ ಬಾಲ್ಕನಿಯಲ್ಲಿ ಹೋದಾಗ ಮರಿಗುಬ್ಬಿಗಳ ಚೀವ್-ಚೀವ್ ಕೂಗಿದಾಗಲೇ ತಿಳಿಯಿತು ಗುಬ್ಬಚ್ಚಿ ಮೊದಲೇ ಮೊಟ್ಟೆ ಇಟ್ಟಾಗಿತ್ತು!!!. ಮುಂದಿನ ಪೀಳಿಗೆಯ ಉದಯವಾಯಿತು.

ಸುಮಾರು ೧೫ ದಿನಗಳ ಬಳಿಕ ಮೊಟ್ಟೆಯೊಡೆದು ಮರಿಯಾಯಿತು. ಹಕ್ಕಿಗಳಿಗೆ ಆಹಾರ ತಿರುವ ಕೆಲಸ……. ಮುನಿಯಾ ೩೦-೪೫ ನಿಮಿಷಕ್ಕೊಮ್ಮೆ ಹಕ್ಕಿಗಳಿಗೆ ಗುಟುಕು ಕೊಡುತ್ತಿದ್ದರೆ, ಗುಬ್ಬಚ್ಚಿಗಳು ೧೦-೧೫ ನಿಮಿಷಕ್ಕೊಮ್ಮೆ ಆಹಾರ ತರುತಿದ್ದವು!!! ನಮಗೆ ‘ಏನು ಆಹಾರ’ ತರುತಿದೆ ಎಂಬ ಕುತೂಹಲ… ಅವು ತರುತ್ತಿರುವುದು ಕೀಟಗಳನ್ನು. ಅದರಲ್ಲೂ ಮುಖ್ಯವಾಗಿ ಜೇಡಗಳನ್ನು.!!! ನಮ್ಮ ಬಾಲ್ಕನಿಯಲ್ಲಿರುವ ಜೇಡಗಳನ್ನೆಲ್ಲಾ ಹಿಡಿದು ತಿನ್ನಿಸಿದ ಹಕ್ಕಿಗಳು ಸುತ್ತಮುತ್ತಲಿನ ಹಲವಾರು ಮನೆಯ ಬಾಲ್ಕನಿಗಳಿಂದ ಜೇಡ ಹಾಗೂ ಜೇಡದ ಮೊಟ್ಟೆಗಳನ್ನು ತರುತಿದ್ದವು. ಅಗ ನನಗೆನಿಸಿತು – ನಮ್ಮ ಹಿರಿಯರು ಗುಬ್ಬಚ್ಚಿಯನ್ನು ಸಾಕುತ್ತಿದ್ದದ್ದೂ ಇದಕ್ಕಿರಬಹುದೇ?….ಇರಬಹುದು. ಆಗಿನ ಮನೆಗಳು ತೆರದ ಮನೆಗಳಾಗಿರುತ್ತಿದ್ದು, ಹುಳ, ಹಾತೆ, ಕೀಟಗಳು ಮನೆಯೊಳಗೆ ಬರುವುದು ಸಾಮಾನ್ಯವೇ…. ಹಾಗೆ ಬರುತಿದ್ದ ಕೀಟಗಳ ಜೈವಿಕ ನಿಯಂತ್ರಣ ಸಾಧನವೇ ಈ ಗುಬ್ಬಚ್ಚಿಗಳು?? ಅಲ್ಲದೇ ಹಾವು ಮತ್ತಿತ್ತರ ಉಪದ್ರವಿ ಪ್ರಾಣಿಗಳ ಬರುವಿಕೆಯನ್ನು ಕೂಗಿ-ಕೂಗಿ ನಮಗೆ ತಿಳಿಸುತಿದ್ದವು. ಅಂತೂ ನಮ್ಮ ಬಾಲ್ಕನಿಯು ಜೇಡಗಳಿಂದ ಮುಕ್ತವಾಯಿತು. ಮನೆಯ ಒಳಗೂ ಬಂದು ಜೇಡಗಳನ್ನು  ಚೆನ್ನಾಗಿತ್ತು ಎಂದೆನಿಸಿತು. ಮಧ್ಯೆ-ಮಧ್ಯೆಯಲ್ಲಿ ಬಾಲ್ಕನಿಯಲ್ಲಿ ನಾವು ಹಾಕುತಿದ್ದ ಮುಂಡಕ್ಕಿಯನ್ನೂ ತಿನ್ನಿಸಿತಿತ್ತು. ಪ್ರೊಟೀನ್, ಪಿಷ್ಟ, ಕ್ಯಾಲ್ಷಿಯಂ ಇತ್ಯಾದಿಗಳ ಸಮತೋಲನ ಕಾಯ್ದುಕೊಂಡುಬರುತಿತ್ತು. ಗುಟುಕು ಕೊಡುವುದರಲ್ಲಿ ಹೆಣ್ಣು ಹಕ್ಕಿ ಜಾಸ್ತಿ ಸಕ್ರಿಯವಾಗಿದ್ದರೂ, ಆಗಾಗ್ಯೆ ಗಂಡು ಹಕ್ಕಿಯೂ ಆಹಾರ ತಂದು ಕೊಡುತಿತ್ತು. ಮರಿಹಕ್ಕಿ ಬೆಳೆದಂತೆಲ್ಲಾ ಗುಟುಕಿಗಾಗಿ ಅವುಗಳ ಕೂಗು ಜೋರಾಗಿತ್ತು. ಒಮ್ಮೊಮ್ಮೆ ನಮ್ಮನ್ನು ನೋಡಿ ವಿಭಿನ್ನ ರೀತಿಯಲ್ಲಿ ಚಿವ್-ಚಿವ್-ಚಿವ್’ಯಂದು ಕೂಗಿ ಮುಂಡಕ್ಕಿ ಖಾಲಿಯಗಿದ್ದನ್ನು ತಿಳಿಸುತಿತ್ತು..!!!! ಮುಂಡಕ್ಕಿ ಯಾ ಅಕ್ಕಿ ಹಾಕಿದಾಗ ತುಂಬಾ ಖುಶಿಯಿಂದ ಮರಿಗೆ ಉಣಿಸುತಿತ್ತು.!!! ಮಣ್ಣಿನ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದಲ್ಲದೇ, ತೀವ್ರ ಸೆಕೆಯಲ್ಲಿ ಸ್ನಾನಮಾಡಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದವು..  ಇನ್ನೊಂದು ಆಶ್ಚರ್ಯವೆಂದರೆ ಮರಿಹಕ್ಕಿಯ ಹಿಕ್ಕೆಯನ್ನು ತನ್ನ ಕೊಕ್ಕಿನಿಂದ ತಂದು ಹೊರಹಾಕುತಿತ್ತು.!!! ಗೂಡಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳುವಲ್ಲಿ ಮುನಿಯಾ ಗುಬ್ಬಚ್ಚಿಯೇ ಮೇಲು!! ಆದರೆ ಗುಬ್ಬಚ್ಚಿ ಹಿಕ್ಕೆಯನ್ನು ತಂದು ಬಾಲ್ಕನಿ ನೆಲದಮೇಲೆ, ಗ್ರಿಲ್’ಗಳ ಮೇಲೆಲ್ಲಾ ಹಾಕಿ ಗಲೀಜು ಮಾಡುತಿತ್ತು.!!! ಬಾಲ್ಕನಿಯನ್ನು ಸ್ವಚ್ಛಮಾಡುವುದು ನಮ್ಮ ಕೆಲಸ!!. (ಅಕ್ಕ-ಪಕ್ಕದ ಮನೆಯವರು ತಮ್ಮ ಮನೆಯ ಕಸವನ್ನು ಕಾಂಪೌಡಿನ ಹೊರಗೆ ಹಾಕಿದ ಹಾಗಾಯಿತು!!!. )

ಒಂದು ದಿನ ಬೆಳಿಗ್ಗೆ ಎರಡೂ ಗುಬ್ಬಚ್ಚಿಗಳು ಚೀವ್..ಚೀವ್..ಚೀವ್..ಚೀವ್..ಚೀವ್… ಎಂದು ವಿಚಿತ್ರವಾಗಿ ಎಡೆಬಿಡದೆ ಜೋರಾಗಿ ಕೂಗಲಾರಂಭಿಸಿದವು. ತಕ್ಷಣ ಬಂದುನೋಡಿದರೆ ಕಾಗೆಯೊಂದು ಗ್ರಿಲ್ ಮೇಲೆ ಕೂತು ಗುಬ್ಬಚ್ಚಿ ಗೂಡನ್ನು ನೋಡುತಿತ್ತು… ಆ ‘ಕಾಗೆ ಕಣ್ಣಿಗೆ’ ಗುಬ್ಬಚ್ಚಿ ಗೂಡು ಕಂಡೇಬಿಟ್ಟಿತು…. ಕಾಗೆಯನ್ನು ಓಡಿಸಿದೆವು… ಹಕ್ಕಿಗಳ ತಳಮಳ ಶಾಂತವಾಯಿತು… ಕಾಗೆ ಮತ್ತಿತ್ತರ ಪರಭಕ್ಷಕ ಹಕ್ಕಿಗಳಿಂದ ರಕ್ಷಣೆಗಾಗಿ ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನುಷ್ಯರ ಒಡನಾಟದಲ್ಲಿ ಮನೆಯನ್ನು ಕಟ್ಟುತ್ತವೆ… ಹಿಂದಿನಕಾಲದ ಮನೆಗಳು ತೆರೆದ ಮನೆಗಳಾಗಿದ್ದು ಗುಬ್ಬಚ್ಚಿಗಳಿಗೂ ಅಪಾಯದ ಸಮಯದಲ್ಲಿ ಗೂಡಿನಿಂದ ಹೊರಹೋಗಲು ಅನುಕೂಲವಾಗಿತ್ತು. ಈಗಿನ ಕಿಟಿಕಿ ಬಾಗಿಲುಗಳಿಂದ ಮುಚ್ಚಿದ ಮನೆಗಳು ಗುಬ್ಬಚ್ಚಿಗಳಿಗೆ ಸೂಕ್ತವಾಗಿಲ್ಲ… ನಾನು ಕಂಡಂತೆ, ಈ ತರಹದ ತೆರೆದ ಕಟ್ಟಡಗಳಾದ ದೇವಸ್ಥಾನಗಳಲ್ಲಿ, ತೆರೆದ ಸ್ಟೇಡಿಯಂಗಳಲ್ಲಿ ಮಾತ್ರ ಗುಬ್ಬಚ್ಚಿಗಳು ಕಾಣಸಿಗುತ್ತಿವೆ… ಅಂದರೆ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಇತ್ತೀಚಿನ ಮನೆಗಳ ವಿನ್ಯಾಸವೂ ಕಾರಣವಿರಬಹುದೇ???

ಸರಿಯಾಗಿ ೧೭ ನೇ ದಿನ ಮರಿಹಕ್ಕಿ ಗೂಡಿನಿಂದ ಹೊರಬಂದಿತು… ರೆಕ್ಕೆ ಬಲಿತಿದ್ದರೂ ಹಾರಲು ಅಷ್ಟೇನು ಶಕ್ತವಾಗಿರಲಿಲ್ಲ.. ಗ್ರಿಲ್ ಮೇಲೆ ಕೂತಿದ್ದ ಮರಿಗೆ ಅಲ್ಲಿಯೇ ಊಟಮಾಡಿಸುತಿತ್ತು… ೧ ಗಂಟೆಯ ನಂತರ ಮರಿಹಕ್ಕಿ ಧೈರ್ಯಮಾಡಿ ಹಾರಿಹೋಯಿತು. ಮುನಿಯಾದಂತೆ ಪೋಷಕ ಹಕ್ಕಿಗಳ ಬೆಂಗಾವಲು ಇರಲಿಲ್ಲ. ಹಾರಿಹೋದ ಮರಿ ಮತ್ತೆ ಬರಲೇಯಿಲ್ಲ….

ಮರುದಿನವೇ ಜೋಡಿಹಕ್ಕಿಗಳ ಸಂಸಾರ ಮತ್ತೆ ಶುರುವಾಯಿತು….ಗೂಡನ್ನು ಸ್ವಚ್ಛಗೊಳಿಸುವ ಕಾರ್ಯ ಶುರುವಾಯಿತು… ಗೂಡಿನಲ್ಲಿದ್ದ ಹಿಕ್ಕೆಯನ್ನೆಲ್ಲಾ ಕೊಕ್ಕಿನಿಂದ ಹೆಕ್ಕಿತಂದು ಹೊರಹಾಕಲು ಸುಮಾರು ೨ ದಿನಗಳೇ ಬೇಕಾಯಿತು. ಆಮೇಲೆ ಹುಲ್ಲು, ಹತ್ತಿ, ಅಜ್ಜರಗಡ್ಡ ಇತ್ಯಾದಿಗಳನ್ನು ತಂದು ಗೂಡನ್ನು ಪೂರ್ಣಗೊಳಿಸಿದವು. ಒಂದು ತಿಂಗಳ ನಂತರ ೨ ಮರಿಗಳನ್ನು ಸಾಕಿ ಹಾರಿಬಿಟ್ಟವು… ಅದಾದ ಮೇಲೆ ಮಗದೋಮ್ಮೆ… ಹೀಗೆ ಬಾಲ್ಕನಿಯ “ಗೂಡು ಪೆಟ್ಟಿಗೆ” ಗುಬ್ಬಚ್ಚಿಯ ಖಾಯಂ ಗೂಡಾಯಿತು….

ನೀವೂ ಮಾಡಿನೋಡಿ!!! ಇಲೆಕ್ಟ್ರಾನಿಕ್ ಸಾಮಾನು ಇತ್ಯಾದಿಗಳ ಪ್ಯಾಕಿಂಗ್ನಲ್ಲಿ ಬರುವ ರಟ್ಟಿನ ಪೆಟ್ಟಿಗೆಯನ್ನು ಮಕ್ಕಳಿಗೆ, ಬೆಕ್ಕುಗಳಿಗೆ  ಸಿಗದಷ್ಟು ಎತ್ತರದಲ್ಲಿ ಜೋಡಿಸಿ… ಸ್ವಲ್ಪ ನೀರು ಮತ್ತು ಅಕ್ಕಿಕಾಳುಗಳನ್ನಿಟ್ಟು ಹಕ್ಕಿಗಳನ್ನು ಆಕರ್ಷಿಸಿ… ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಉಳಿಸಲು ಪ್ರಯತ್ನಿಸೊಣ.

ನಾಗರಾಜ ಅಡಿಗ,

ಕೈಗಾ ವಿದ್ಯುತ್ ಕೇಂದ್ರ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post