X

ಮತ್ತೊಮ್ಮೆ ಹುಟ್ಟಿ ಬಾ ಗುರುದೇವಾ ಶ್ರೀ ವಿದ್ಯಾರಣ್ಯ

ಹೇ ಭಾರತ ಜನನಿ, ಲೋಕೋತ್ತರರಾದ ಪುತ್ರರನ್ನು ಇತ್ತಮಾತೆ, ವ್ಯಾಸ, ಕೃಷ್ಣ, ಯುಧಿಷ್ಠರರಂತಹ ಪುತ್ರರಿಗೆ ಜನ್ಮವಿತ್ತ ಮಹಾಮಾತೆ. ಈಗ ನನ್ನ ಮಕ್ಕಳೆಲ್ಲ ನಿರ್ಬಲರಾದರೇಕೆ ? ನಾವು ಕ್ಷತ್ರಿಯರನ್ನೆಲ್ಲಾ ಒಗ್ಗೂಡಿಸಬೇಕು. ಇಂದು ಇದ್ದು ನಾಳೆ ಹೋಗುವ ಈ ದೇಹದ ಪೋಷಣೆಗಾಗಿ, ವಿಷಯ ರಾಗ ಭೋಗಳಲ್ಲಿ ಮಗ್ನರಾಗಿ ವಿಷಯ ಲೋಲಪತೆಯಿಂದ ಪಶು ಪ್ರಾಣಿಗಳಿಗೂ ಕೀಳಾಗಿ ಬಾಳುತ್ತಿರುವ ಕ್ಷತ್ರಿಯರೇ ಎದ್ದೇಳಿ, ನಿಮ್ಮ ತಾಯಿ, ತಂಗಿ ಹೆಣ್ಣು ಮಕ್ಕಳು ಅಪಮಾನಕ್ಕೀಡಾಗುತ್ತಿರುವಾಗ, ನೀವು ಇಂದ್ರಿಯ ಸುಖದತ್ತ ಜಾರಬೇಡಿ, ಏಳಿ, ಶತ್ರುವನ್ನು ಬಡಿದು ಹೊಡೆದೋಡಿಸಿರಿ ಎಂದು ಕ್ಷತ್ರಿಯರನ್ನು ಎಚ್ಚರಿಸಿದವರಾರು ? ಅವೇಶದಿಂದ ಮಾಧವನು ತನ್ನನ್ನು ತಾನೆ ಎಂಬಂತೆ ಎಲ್ಲರಿಗೂ ಕೇಳುವಂತೆ ಪ್ರಶ್ನಿಸಿಕೊಂಡನು.

ಶ್ರೀ ವಿದ್ಯಾತೀರ್ಥರು ಸ್ಪಷ್ಟವಾದ ಗಂಭೀರ ಧ್ವನಿಯಲ್ಲಿ “ನೀನು” ಎಂದರು. ಆ ಮಾಧವನೇ ಮುಂದೆ ವಿದ್ಯಾತೀರ್ಥರ ಮಾರ್ಗದರ್ಶನದಲ್ಲಿ ವಿದ್ಯಾರಣ್ಯರಾದರು.

ವಿದ್ಯಾರಣ್ಯರನ್ನು ಯುಗ ಪುರುಷರೆಂದು ಕರೆಯುತ್ತೇವೆ ಕಾರಣ ಶ್ರೀ ಗುರು ವಿದ್ಯಾರಣ್ಯರು ಕೇವಲ ಪೀಠದ ಗುರುಗಳಾಗಿರಲಿಲ್ಲ. ಇಡೀ ಸಮಸ್ತ ಭಾರತಕ್ಕೆ ಒದಗಿರುವ ಕೇಡನ್ನು ಪರಿಹರಿಸುವ ಒಬ್ಬ ಸಮರ್ಥ ರಾಜನ ರೀತಿ ಇದ್ದರು ಎಂದರೂ ತಪ್ಪಾಗವುದಿಲ್ಲ. ವಿದ್ಯಾರಣ್ಯರು ಸಂನ್ಯಾಸಿಯಾಗುವುದಕ್ಕಿಂತ ಮೊದಲು ಇಡೀ ಭಾರತವನ್ನು ಪರ್ಯಟನೆ ಮಾಡಿ. ಭಾರತ ಖಂಡದ ಜನರ ಹೀನಾಯಸ್ಥಿತಿಯನ್ನು ಕಣ್ಣಾರೆ ಕಂಡವರು.

ನಮ್ಮ ರಾಜಮಹಾರಾಜರು ಸುಖಲೋಲಪಕರಾಗಿರುವುದನ್ನು ಕಂಡ ಅಸಹ್ಯಪಟ್ಟರು. ಅಭಿಮಾನ್ಯಶೂನ್ಯರು, ರಣಹೇಡಿಗಳು ವಿಷಯವ್ಯಸನಿಗಳು ಆದ ಕ್ಷತ್ರಪರನ್ನು ಕಂಡು ಮಾಧವ (ವಿದ್ಯಾರಣ್ಯರ) ಶಕ್ತಿ ಕುದಿಯಿತು. ದೇಶದ ಪರ್ಯಟನೆ ಸಂದರ್ಭದಲ್ಲಿ ದಾರಿ ಉದ್ದಕ್ಕೂ ಸಿಕ್ಕ ಗ್ರಾಮಗಳ ಹಿರಿಯರಿಗೂ ಸಜ್ಜನರಿಗೆ ದೇಶದ ಪರಿಸ್ಥಿತಿ ಬಗ್ಗೆ ಹಾಗೂ ನಾವು ಮಾಡಬೇಕಾದ ಕರ್ತವ್ಯದ ಬಗ್ಗೆ ತಿಳಿ ಹೇಳುತ್ತಿದ್ದರು. ಶ್ರೀ ವಿದ್ಯಾರಣ್ಯರು ಕಾಶಿಯ ಹಲವಾರು ಪಂಡಿತರನ್ನು ಭೇಟಿಯಾಗಿ ಚರ್ಚೆ ಮಾಡುತ್ತಿದ್ದರು. ಇವರನ್ನು ಭೇಟಿಯಾದ ಪಂಡಿತರೆಲ್ಲ ಹೇಳುತ್ತಿದ್ದದ್ದು ಇವರು ಶಾರದೆಯ ಪುತ್ರರೇ ಎಂದು ಅಷ್ಟೊಂದು ವಿದ್ವತ್ ಇವರದಾಗಿತ್ತು.

ಆದರೆ ಮಾಧವನಿಗೂ ತಮ್ಮ ಸಾಯಣನಿಗೂ ಏನೂ ಕೊರಗು? ಹಣದ ಕೊರಗೆ ಎಂದರೆ ಅದು ಬ್ರಾಹ್ಮಣರಿಗೆ ಹುಟ್ಟಿನಿಂದ ಬಂದದ್ದು ಅದೂ ನಮ್ಮ ಚಿಂತೆಗೆ ಕಾರಣವಲ್ಲ. ಸರಿ ವಿದ್ವತ್ ಕೊರತೆಯೇ ? ಇಲ್ಲ. ಇನ್ನೂ ನಾವು ತಿಳಿಯುವುದು. ಬಹಳಷ್ಟಿದೆ. ಅದರೆ ನಮ್ಮ ಕೊರಗಿಗೆ ಇದ್ಯಾವುದು ಕಾರಣವಲ್ಲ. ಮತ್ತೇನು ಎಂಬ ಚಿಂತೆಯಲ್ಲಿ ಮುಳುಗಿರಲೂ ನಿದ್ರೆ ಆವರಿಸಿತು. ಸ್ವಪ್ನದಲ್ಲಿ ಕಾಶಿಯ ಅನ್ನಪೂಣೇಶ್ವರಿ ತಾಯಿ ಕಾಣಿಸಿಕೊಂಡು ನೀನು ಹೆಚ್ಚಾಗಿ ತಪಸ್ಸು ಧ್ಯಾನವನ್ನು ಮಾಡು ಸದ್ಯಕ್ಕೆ ದಕ್ಷಿಣಕ್ಕೆ ಪಯಣಿಸು ಎಂದು ಅದೇಶವಿತ್ತಳು. ಅಲ್ಲಿಂದ ಹೊರಟ ಮಾಧವ ದಾರಿ ಉದ್ದಕ್ಕೂ ಜನರಲ್ಲಿ ದೇಶಾಭಿಮಾನವನ್ನು ಮೂಡಿಸಿತ್ತಾ ಗಾಯಿತ್ರಿ ಮಂತ್ರವನ್ನು ಉಪದೇಶಿಸುತ್ತಾ ದಕ್ಷಿಣದ ಕನ್ಯಾಕುಮಾರಿಯನ್ನು ಸೇರಿದರು. ನಮಗೆ ತಿಳಿದಿರುವ ಹಾಗೆ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಧ್ಯಾನಗೈದು ಭಾರತಾಂಬೆಯನ್ನು ಸಾಕ್ಷಾತ್ಕರಿಸಿಕೊಂಡರು ಮತ್ತು ಮುಂದಿನ ಗುರಿಯನ್ನು ತಾಯಿಯಿಂದ ಪಡೆದರು. ಇದಕ್ಕಿಂತ ಮೊದಲು ವಿದ್ಯಾರಣ್ಯರು ಇದೇ ಕನ್ಯಾಕುಮಾರಿಯಲ್ಲಿ ಕುಳಿತು ಜಗತ್’ಜನನಿ ಮಹಾಮಾತೆಯನ್ನು ಒಲಿಸಿಕೊಂಡಿದ್ದು.

ಕನ್ಯಾಕುಮಾರಿ ಅಗಸ್ತ್ಯಬಂಡೆ ಅಗಸ್ತ್ಯರು ಕುಳಿತು ತಪಸ್ಸು ಮಾಡಿದ ಜಾಗ ಅಲ್ಲಿಗೆ ಈಜಿ ಸೇರಿದರು. ಅಲ್ಲಿ ಸತತ ನಾಲ್ಕು ದಿನ ಧ್ಯಾನಸ್ಥರಾಗಿದ್ದರು. ಈ ಕಡೆ ಸಾಯಣ ಮತ್ತು ನರಸಿಂಹ ದೀಕ್ಷೀತ್. ಬಲದೇವ ಬ್ರಹ್ಮಚಾರಿ ದಡದಲ್ಲಿ ಕಾಯುತ್ತಿದ್ದರು. ಮಾಧವ ಬರದಿದ್ದನ್ನು ನೋಡಿ ಅಂಬಿಗನ ಸಹಾಯದಿಂದ ಅಗಸ್ತ್ಯ ಬಂಡೆಯನ್ನು ಮುಟ್ಟಿದರು. ಆಗಿನ್ನೂ ಅಂತರ್ಮುಖಿಯಾಗಿದ್ದರು. ಸ್ವಲ್ಪ ಸಮಯದ ನಂತರ ಬಹಿರ್ಮುಖರಾದ “ಓಂ ಶ್ರೀ ಮಾತ್ರೇ ನಮಃ ” ಎಂದು ಘೋಷಿಸುತ್ತಾ ಮಾಧವನು ಎಚ್ಚರನಾಗಿದ್ದನು. ನೋಡಿ ಎಲ್ಲರು ಸ್ಥಂಭೀಭೂತರಾದರು. ಅದಾದ ಮೇಲೆ ಸತತ 24 ದಿನಗಳ ಕಾಲ ಧ್ಯಾನಸ್ಥರಾಗಿದ್ದು ತಾಯಿಯಿಂದ ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ದೇಶದ ಈ ಪರಿಸ್ಥಿತಿಗೆ ಪರಿಹಾರವೇನು ಎಂದು ಕೇಳಿದರು. ಜಗನ್ಮಾತೆ ಗಾಯಿತ್ರಿದೇವಿ ಪ್ರತ್ಯಾಕ್ಷಳಾಗಿ ಮುಂದೆ ಮಾಡುವ ಮಹತ್ಕಾರ್ಯದ ಸಲುವಾಗಿ ಶೃಂಗೇರಿ ಗುರು ವಿದ್ಯಾತೀರ್ಥರ ಬಳಿ ಹೋಗಲು ಹೇಳಿದಳು. ಹಂಪಿಯಲ್ಲಿದ್ದ ವಿದ್ಯಾತೀರ್ಥರ ದರ್ಶನಕ್ಕೆ ಬಂದ ಮಾದವ ಮುಂದೆ ಶಿಷ್ಯನಾಗಿ ಸಂನ್ಯಾಸಿಯಾಗಿ ಶ್ರೀ ವಿದ್ಯಾರಣ್ಯ ಎಂಬ ನಾಮವನ್ನು ಪಡೆದರು. ಮುಂದೆ ಇವರು ಹರಿಹರ, ಬುಕ್ಕರಿಗೆ ಮಾರ್ಗದರ್ಶನ ಮಾಡಿ ಮಹಾನ್ ಸಾಮ್ರಾಜ್ಯ ಉದಯಿಸಲು ಕಾರಣರಾದರು. ಮೊಘಲರ ಬಂಧನದಿಂದ ಆಗ ತಾನೇ ಬಿಡಿಸಿಕೊಂಡು ಅವರ ಪ್ರತಿನಿಧಿಯಾಗಿ ಬಂದಿದ್ದ ಹರಿಹರ, ಬುಕ್ಕರನ್ನು ಶುದ್ಧಿಗೊಳಿಸಿ ತುಂಗಾಭದ್ರ ನದಿಯ ದಡದಲ್ಲಿ 1259ನೇ ಶಕ ವರ್ಷ, ಧಾತು ಸಂವತ್ಸರ ವೈಶಾಖ ಶುದ್ಧ ಸಪ್ತಮಿ ಪುಷ್ಯ ನಕ್ಷತ್ರ ಸಿಂಹ ಲಗ್ನದಲ್ಲಿ 18-4-1336 ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದರು.

ರಾಜ್ಯ ಸ್ಥಾಪನೆಗೆ ಬೇಕಾದ ಧನವನ್ನು ಸಂಗ್ರಹಿಸಲು ಗುರು ವಿದ್ಯಾತೀರ್ಥರ ಬಳಿ ಹೋಗಿ ಮಠದಿಂದ ಹಾಗೂ ಮಠದ ಭಕ್ತರಿಂದ ಧನ ಸಂಗ್ರಹಿಸಿ ವಿಜಯನಗರ ಸಾಮ್ರಾಜ್ಯಕ್ಕೆ ವಿನಿಯೋಗಿಸಿದರು. ಮುಂದೆ ವಿಜಯನಗರ ಸಾಮ್ರಾಜ್ಯ ಇಡೀ ಪ್ರಪಂಚವನ್ನು ಅಕರ್ಷಸಿ ಸ್ವರ್ಣಮಹಿ ಹಂಪಿಯಾಗಿತ್ತು.

ಮುತ್ತು, ರತ್ನ, ವಜ್ರ ವೈಢೂರ್ಯ, ಬಂಗಾರ, ಬೆಳ್ಳಿಗಳನ್ನು ಸಂತೆಯಲ್ಲಿ ಮಾರುವಷ್ಟು ಸಿರಿಸಂಪತ್ತು ನಮ್ಮ ವಿಜಯನಗರದ್ದಾಗಿತ್ತು. ಹಾಗೂ ಮುಖ್ಯವಾಗಿ ಉತ್ತರದಿಂದ ಮತಾಂಧರ ದಾಳಿಯನ್ನು 300 ವರ್ಷಗಳಕ್ಕೂ ಹೆಚ್ಚು ಕಾಲ ದಕ್ಷಿಣಕ್ಕೆ ಬಾರದಂತೆ ಶತ್ರುಗಳಿಗೆ ಸಿಂಹಸ್ವಪ್ನವಾಗಿ ದಕ್ಷಿಣದ ಕಡೆ ತಲೆಹಾಕಲು ಬಿಡಲಿಲ್ಲ. ಹಾಗೂ ದಕ್ಷಿಣದ ಭಾರತದ ಮತಾಂಧರನ್ನು ಹೆಡೆಮುರಿಕಟ್ಟಿ ಧರ್ಮವನ್ನು ಸ್ಥಾಪಿಸಿದರು. ಪ್ರಪಂಚದ ಚರಿತ್ರೆಯಲ್ಲಿ ಸ್ವರ್ಣಯುಗವನ್ನು ತಂದ ಶ್ರೀ ಕೃಷ್ಣ ದೇವರಾಯನು ಒಂದು ಯುದ್ಧವನ್ನು ಸೋಲಲಿಲ್ಲ. ಸದಾ ದಿಗ್ವಿಜಯಿಯಾಗಿದ್ದ. ವಿಜಯನಗರದ ಆಡಳಿತದಲ್ಲಿ ಜನರು ಸುಭಿಕ್ಷವಾಗಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಶ್ರೀ ವಿದ್ಯಾರಣ್ಯರ ದೂರದೃಷ್ಟಿ.

ಭಾರತೀಯ ಧರ್ಮ, ಸಂಸ್ಕೃತಿ, ಜನಜೀವನಕ್ಕೆ ಅಪಾಯ ಬಂದಾಗ ಸರ್ವನಾಶವಾಗಿಬಿಡುತ್ತೇದೆಯೋ ಎಂಬ ಭೀತಿ, ಕಳವಳ, ಮೂಡಿದಾಗ ಮಹಾಪುರುಷರು ಅವತಾರ ಮಾಡಿ ಧರ್ಮ, ಸಂಸ್ಕೃತಿ, ಜನಜೀವನವನ್ನು ರಕ್ಷಿಸಿ ಉದ್ದರಿಸಿದ್ದಾರೆ. ಅಂತಹ ಅಪಾಯಕಾರಿ ಘಟ್ಟವೊಂದು ನಮ್ಮ ಭಾರತಖಂಡದಲ್ಲಿ 13 ಮತ್ತು 14 ಶತಮಾನದಲ್ಲಿ ಬಂದಿತ್ತು. ಆಗ ನಮ್ಮನ್ನು ಉದ್ಧರಿಸಿದ ಯುಗವತಾರಿ ಶ್ರೀ ವಿದ್ಯಾರಣ್ಯ ಸ್ವಾಮೀಗಳು ಶೃಂಗೇರಿ ಶಾರದ ಪೀಠದ ಜಗದ್ಗುರುಗಳು.

ಶ್ರೀ ವಿದ್ಯಾರಣ್ಯ ಜನನ ವೈಶಾಖ ಶುದ್ಧ ಸಪ್ತಮಿ 11-4-1296 ಬುಧವಾರ. ಇವರ ಪೂರ್ವಾಶ್ರಮದ ಹೆಸರು ಮಾಧವಾಚರ್ಯ ಇವರು ಸೋದರ ಸೋಮನಾಥನೊಡನೆ ಬಾಲ್ಯದಲ್ಲಿಯೇ ವಿದ್ಯಾಭ್ಯಾಸಕ್ಕಾಗಿ ಸ್ವಸ್ಥಳವನ್ನು ಬಿಟ್ಟು ಹೊರಟವರು. ಇವರ ತಂದೆತಾಯಿಗಳ ವಿವರ ಎಲ್ಲಿಯೂ ಸಿಗುವುದಿಲ್ಲ. ಇವರು ಕರ್ನಾಟಕದವರು. ವೇದ ವೇದಾಂತ ತರ್ಕ, ಮಿಮಾಂಸೆ, ವ್ಯಾಕರಣ, ಯೋಗಶಾಸ್ತ್ರಗಳಲ್ಲಿ ಪಂಡಿತ್ಯವನ್ನು ಸಂಪಾದಿಸಿದ್ದರು. ಅನಂತರ ಹಲವಾರು ವರ್ಷಗಳ ಕಾಲ ಗಾಯಿತ್ರಿ ಮಂತ್ರ ಪರಶ್ಚರಣ ಮಾಡಿದರು.

ಶ್ರೀ ವಿದ್ಯಾರಣ್ಯರು ಹೇಳುತ್ತಿದ್ದರು ಕೇವಲ ಕ್ಷತ್ರಿಯರಷ್ಟೇ ಅಲ್ಲ ನಾಲ್ಕು ವರ್ಣದವರು ಯುದ್ಧಕಲೆಯನ್ನು ಕಲಿಯಬೇಕು. ಸದಾ ತಮ್ಮೊಟ್ಟಿಗೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರಬೇಕು. ಯಾವ ಸಮಯದಲ್ಲೂ ಶತ್ರುಗಳನ್ನು ಎದುರಿಸಲು ಸನ್ನದ್ದರಾಗಿರಬೇಕು ಎಂದು ಹೇಳುತ್ತಿದ್ದರು. ಒಮ್ಮೆ ವಿದ್ಯಾರಣ್ಯರು ಪೂರ್ವಾಶ್ರಮದಲ್ಲಿ ನದಿಯ ದಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಯಾರೂ ಕಿರುಚಿಕೊಂಡಂತೆ ಕೇಳಿಸಿತು ತಿರುಗಿನೋಡಿದರೆ ಯಾರೋ ಚಾಂಡಾಲ ಒಬ್ಬಳು ಸ್ತ್ರೀಯನ್ನು ಕುದುರೆಯ ಮೇಲೆ ಹತ್ತಿಸಿಕೊಂಡು ಕರೆದೊಯ್ಯುತ್ತಿದ್ದ ತಕ್ಷಣ ಸಾಯಣನೊಂದಿಗೆ ಓಡಿ ಹೋಗಿ ಆ ಕುದುರೆಯನ್ನು ಹಿಡಿದು ಆ ತಾಯಿಯನ್ನು ತಮ್ಮ ಸಾಯಣ್ಣನ ಸುಪರ್ದಿಗೆ ಬಿಟ್ಟು ಆ ಚಾಂಡಾಲನಿಗೆ ಸರಿಯಾಗಿ ನಾಲ್ಕು ಪೆಟ್ಟು ಕೊಟ್ಟ ಆ ತಾಯಿಯನ್ನು ಊರಿನವರಿಗೆ ಒಪ್ಪಿಸಿ ಹೆಣ್ಣುಮಕ್ಕಳು ಕೂಡ ಸದಾ ತಮ್ಮ ರಕ್ಷಣೆಗೆ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ ಮಹಾನ್ ವ್ಯಕ್ತಿ. ಹೀಗೆ ವಿದ್ಯಾರಣ್ಯರು ಒಬ್ಬ ಸಂನ್ಯಾಸಿ ಸೇನಾನಿಯಾಗಿದ್ದರು. ಶ್ರೀ ಭಾರತೀ ತೀರ್ಥರು 1980ರಲ್ಲಿ ಮುಕ್ತರಾಗಲು ಶ್ರೀ ಶೃಂಗೇರಿ ದಕ್ಷಿಣಾಮ್ನಾಯ ಪೀಠಾಧಿಪತ್ಯವನ್ನು ವಹಿಸಿಕೊಂಡರು. ಶ್ರೀ ಭಾರತೀ ತೀರ್ಥರ ಸಮಾಧಿಯಲ್ಲಿ ಶ್ರೀ ಭಾರತೀ ರಾಮನಾಥಲಿಂಗವನ್ನು ಸ್ಥಾಪಿಸಿ ಅದರ ಹಿಂದೆ ಶ್ರೀ ವಿದ್ಯಾವಾಗೀಶ್ವರಿಯನ್ನು ಪ್ರತಿಸ್ಥಾಪಿಸಿದರು. ಸ್ವಲ್ಪಕಾಲ ಅಲ್ಲಿಯೇ ಇದ್ದು ಸಂನ್ಯಾರ್ಥರಾಗಿದ್ದ ಶಿಷ್ಯ ಶ್ರೀ ಚಂದ್ರಶೇಖರ ಭಾರತೀಯವರಿಗೆ ಶೃಂಗೇರಿಯ ಕಾರ್ಯಭಾರವನ್ನು ವಹಿಸಿ ಹಂಪಿಗೆ ಹಿಂದುರುಗಿದರು.

ಒಂದನೇ ಹರಿಹರ (1936-1956), ಬುಕ್ಕರಾಯ (1356-1377) 2ನೇ ಹರಿಹರ (1377-1404) ಇವರಿಗೆ ಸರ್ವರೀತಿಯಲ್ಲಿಯೂ ಮಾರ್ಗದರ್ಶಕರಾಗಿದ್ದರು. ಶ್ರೀ ವಿದ್ಯಾರಣ್ಯರು 1386ರಲ್ಲಿ ಶ್ರೀ ವಿರೂಪಾಕ್ಷ ದೇವಾಲಯದ ಹಿಂದೆ ಇದ್ದ ಗುಹೆಯನ್ನು ಪ್ರವೇಶಿಸಿ ಅಲ್ಲಿಯೇ ವಿದೇಹ ಮುಕ್ತರಾದರು.

ಹೀಗೆ ತಮ್ಮ ಜೀವಿತದ ಕಾಲದಲ್ಲಿ ಇಡೀ ಭಾರತಖಂಡವನ್ನು ಸುತ್ತಿ ಧರ್ಮವನ್ನು ಮರೆತಿದ್ದ ರಾಜರಿಗೆ, ಜನರಿಗೆ ಧರ್ಮಾಭಿಮಾನವನ್ನು ಬೋಧಿಸಿ ಮಹಾನ್ ಸಾಮ್ರಾಜ್ಯವನ್ನು ಬೆಳೆಸಿದರು. ಈ ಯುಗಪುರುಷರು ಹುಟ್ಟಿ ನಾಳೆಗೆ ಸರಿಯಾಗಿ 720 ವರ್ಷಗಳಾಯಿತು. ಈಗಲೂ ಕೂಡ ನಮ್ಮ ದೇಶದ ಪರಿಸ್ಥಿತಿ 13 ಮತ್ತು 14ನೇ ಶತಮಾನಗಳಿಗೆ ಹೊರತಾಗಿಲ್ಲ. ನಮ್ಮ ದೇಶದಲ್ಲೇ ಇದ್ದು ನಮ್ಮ ದೇಶವನ್ನು ತೆಗಳುವ ಪರಕೀಯರು ತುಂಬಿಹೋಗಿದ್ದಾರೆ. ಅದರ ಜೊತೆಗೆ ದೇಶಕ್ಕೆ “ಕಮ್ಮಿನಿಷ್ಠರು” ಸೇರಿದ್ದಾರೆ. ಎಲ್ಲೆಡೆ ಪಾಶ್ಚಾತ್ಯ ಸಂಸ್ಕೃತಿಯ ಹಾರಾಟ ಚೀರಾಟ ಕೇಳುತ್ತಿದೆ. ಈ ಸಂದರ್ಭದಲ್ಲಿ ಯಾರ ಹೆಸರನ್ನು ಕೇಳಿದರೆ ನಮ್ಮ ಮೈ ಒಂದು ಕ್ಷಣ ರೋಮಾಂಚನವಾಗುತ್ತದೆಯೋ ಆಂತಹ ಮಹಾನ್ ಯುಗ ಪುರುಷ ಶ್ರೀ ವಿದ್ಯಾರಣ್ಯರು ಮತ್ತೊಮ್ಮೆ ಅವತರಿಸಬೇಕಿದೆ.

-ಅಣ್ಣಯ್ಯ ವಿನಾಯಕ, ಬೆಂಗಳೂರ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post