X

ನಿಮಗೆ ‘ಹಾಯ್ಕು’ ಗೊತ್ತು, ‘ಮಣಿಪದ್ಮ’ ಗೊತ್ತೇ?

ನೀವು ಸಾನೆಟ್ ಬಗ್ಗೆ ಕೇಳಿರುತ್ತೀರಿ, ಹಾಯ್ಕು ಓದಿರುತ್ತೀರಿ, ಆದರೆ ಇದೊಂದು ಹೊಸ ಪ್ರಕಾರದ ಕವಿತೆ, ಇದನ್ನು ನಾನು ‘ಮಣಿಪದ್ಮ’ ಎಂದು ಕರೆಯುತ್ತೇನೆ.

‘ಮಣಿಪದ್ಮ’ವನ್ನು “ಓಂ ಮಣಿಪದ್ಮೇ ಹಂ” ಎಂಬ ಬೌದ್ಧ ಮಂತ್ರದಿಂದ ಪಡೆದಿದ್ದೇನೆ. ಮಣಿಪದ್ಮ ಅಂದರೆ, ಪದ್ಮಪತ್ರದ ಮೇಲಿರುವ ಹನಿ. ತಾವರೆ ಎಲೆಯ ಮೇಲಿದ್ದೂ ತಾವರೆಗೆ ತಾಕದೇ ಇರುವ ಬಿಂದು. ಇದ್ದೂ ಇಲ್ಲದಂತೆ ಇರುವಂತಹುದು.

ಈ ಮಣಿಪದ್ಮ ಎಂಬ ಪ್ರಕಾರದ ಕವಿತೆಯಲ್ಲಿ ಐದು ಸಾಲುಗಳಿದ್ದು, ಮೂರು ಮತ್ತು ಎರಡು ಸಾಲುಗಳ ಎರಡು ಪಂಕ್ತಿಗಳನ್ನು ಒಳಗೊಂಡಿರುತ್ತದೆ. ಎರಡನೆಯ ಪಂಕ್ತಿ ಮೊದಲ ಪಂಕ್ತಿಯ ಮುಂದುವರೆದ ಭಾಗವಲ್ಲ. ಆದರೆ ಈ ಎರಡು ಪಂಕ್ತಿಗಳ ನಡುವಿನ ಸೂಕ್ಷ್ಮ ತಂತುವನ್ನು ಓದುಗ ತನ್ನ ಮೌನದಲ್ಲಿ ಕಂಡುಕೊಳ್ಳುತ್ತಾನೆ.

ಇಲ್ಲಿ ಮೌನವನ್ನು ತುಂಬುವ, ಅಥವಾ ನಡುವಿನ ತಂತುವನ್ನು ಮಾಯಮಾಡುವ ಕಾರ್ಯ ಕವಿಯದಾದರೆ, ಆ ತಂತುವನ್ನು ಕಂಡುಕೊಳ್ಳುವ ಭಾರ ಓದುಗನದು. ಈ ಎರಡು ಪಂಕ್ತಿಗಳ ನಡುವಿನ ಕಣಿವೆಯಲ್ಲಿ ದುಮುಕಬೇಕಾದ ಕಾರ್ಯ ಓದುಗನದು.

ಆದರೆ, ಈ ಪ್ರಕಾರದ ಕವಿತೆ ಸುಲಭವಲ್ಲ. ಓದುಗನಿಗೆ ಸುಲಭಕ್ಕೆ ತಂತು ಕಾಣುವಂತೆ ಮಾಡಿದರೂ, ಅಥವಾ ಒತ್ತಾಯಪೂರ್ವಕವಾಗಿ ಕಾಣದಂತೆ ಮಾಡಿದರೂ ಕವಿ ಸೋಲುತ್ತಾನೆ. ಕವಿ ಓದುಗನನ್ನು ಈ ಎರಡು ಪಂಕ್ತಿಯ ನಡುವಿನ ಮೌನಕ್ಕೆ ಹೋಗುವಂತೆ ಪ್ರೇರೇಪಿಸುವುದು, ಮತ್ತು ಪದವಾಗದ ಮೌನವನ್ನು ಪದವಾಗದ ಭಾವದಲ್ಲಿಯೇ ಸ್ವೀಕರಿಸುವಂತೆ ಓದುಗನಿಗೆ ಅನುವು ಮಾಡಿಕೊಡುವುದು ಕವಿಯ ಜವಾಬ್ದಾರಿ.

ಜೊತೆಗೆ, ‘ಮಣಿಪದ್ಮ’ದ ಎರಡು ಪಂಕ್ತಿಗಳಲ್ಲಿ, ಮೊದಲ ಪಂಕ್ತಿ ಸಾಮಾನ್ಯವಾಗಿ ಲೌಕಿಕ/ಸಾಮಾನ್ಯ ಜನಜೀವನದ ಸಂಗತಿಗಳನ್ನು ಹೇಳಿದರೆ, ಎರಡನೇ ಪಂಕ್ತಿ ಸೂಚ್ಯವಾಗಿ (ಹೌದು, ವಾಚ್ಯವಾಗಿ ಅಲ್ಲ) ತಾತ್ವಿಕ/ಅಲೌಕಿಕ/ಆಧ್ಯಾತ್ಮಿಕ ವಿಚಾರವನ್ನು ಹೊಂದಿರುತ್ತದೆ (ಹೊಂದಿರಲೇಬೇಕು ಅಂತಿಲ್ಲ).

-೧-

ಬೆಟ್ಟದಿಂದ, ಮೆಲ್ಲಗೆ ಜಾರುತ್ತಿದೆ ಸುರಿದ ಮಳೆ,

ಕಾಲುವೆಯಾಗಿ ಮನೆಯ ಮುಂದೆ ಹರಿವಾಗ

ದೋಣಿಯ ನೆನಪಾಗುತ್ತದೆ ಅವಳಿಗೆ…

ಅಂಬಿಗನಿಲ್ಲದೇ ಇರುವಾಗ

ಸುಮ್ಮನೇ ಇದ್ದಲ್ಲಿಯೇ ತೇಲುತ್ತದೆ ದೋಣಿ.

-೨-

ವಿಭಾಕರ ಕಿರಣಗಳು

ನಿನ್ನ ಕದಪುಗಳನ್ನು ತಟ್ಟಿ ಎಚ್ಚರಿಸುವಾಗ

ಮಗ್ಗಲು ಬದಲಾಯಿಸುತ್ತೀಯ, ಕಳ್ಳಕೂಸು ನೀನು.

ದೇವಾಲಯದ ಬಳಿ ಕುಳಿತ ನಾನು

ಹಾದಿ ನೋಡುತ್ತೇನೆ.

ಪ್ರಕಾರದ ಆಶಯವನ್ನು ಪೂರ್ಣವಾಗಿ ಮುಟ್ಟುವಲ್ಲಿ ಕವಿತೆಯ ಸಾಫಲ್ಯವಿದ್ದರೂ, ಅದು ಹೆಚ್ಚಿನ ಬಾರಿ ಸಾಧ್ಯವಾಗುವುದೇ ಇಲ್ಲ. ಹಾಯ್ಕುಗೆ ಸಂಬಂಧಿಸಿ ಹೇಳುವುದಾದರೆ, ಇಡೀ ಜೀವನದಲ್ಲಿ ಒಂದು ಹಾಯ್ಕುವನ್ನು ಪಡೆದರೂ ಆ ಕವಿ ಜೀವನ ಸಾರ್ಥಕ ಅಂದುಕೊಳ್ಳುತ್ತಾನಂತೆ. ಅಂತ ಸಫಲ ಹಾಯ್ಕುವಿಗಾಗಿ ಇಡೀ ಜೀವನವನ್ನು ಧ್ಯಾನವಾಗಿಸುತ್ತಾನಂತೆ. ಈ ಮೇಲಿನ ಎರಡು ಮಣಿಪದ್ಮಗಳು ಅಂದುಕೊಂಡಷ್ಟು ತೃಪ್ತಿಕರವಾಗಿಲ್ಲ ಅನ್ನುವುದನ್ನು ಹೇಳಲು ಈ ಮಾತು ಹೇಳುತ್ತಿದ್ದೇನೆ.

ಇನ್ನು, ಬೌದ್ಧ ಮಂತ್ರದಲ್ಲಿ ಮಣಿಪದ್ಮ ಎಂದರೆ ಅನೇಕ ಅರ್ಥಗಳಿವೆ. ಆ ಅರ್ಥಗಳನ್ನು ಈ ಸಂದರ್ಭದಲ್ಲಿ ವಿವರಿಸುವುದು ಅಥವಾ ಈ ಪ್ರಕಾರದ ಕವಿತೆಗೆ ಆರೋಪಿಸುವುದು ಕಷ್ಟ. ಆದರೆ ಒಂದೆರೆಡು ಅರ್ಥಗಳನ್ನು ಇಲ್ಲಿ ಬಳಸಿಕೊಳ್ಳಬಹುದು. ಅಂದರೆ, ಪದ್ಮದ ಒಳಗಿನ ಮಣಿ ಅಥವಾ ವಜ್ರ ಅಂದರೆ ಮನುಷ್ಯನ ಆಂತರ್ಯದ ಜಾಗೃತಿ ಅಥವಾ ಜ್ಞಾನ. ಪದ್ಮಪುಷ್ಪ ಅರಳಿದಾಗ ಆ ಜ್ಞಾನದ ಅನಾವರಣ ಆಗುತ್ತದೆ ಎಂಬುದು. ಇಲ್ಲಿ ‘ಮಣಿಪದ್ಮ’ದಲ್ಲಿ ಅಡಗಿರುವ ‘ಮೌನದ ನಾದ’ವನ್ನು ಓದುಗ ಕಂಡುಕೊಳ್ಳುತ್ತಾನೆ, ಆ ನಾದ ಅವನನ್ನು ಮೌನಿಯನ್ನಾಗಿ ಮಾಡುತ್ತದೆ. ಆ ಶುದ್ಧ ಮೌನವೇ ಒಳಗಿನ ಮಣಿ ಅಥವಾ ಒಳಗಿನ ಜ್ಞಾನ.

ಈ ಪ್ರಕಾರವನ್ನು ಹೇಗೆ ಪ್ರಾರಂಭಿಸಿದೆ ಎಂಬುದನ್ನು ಹೇಳಬೇಕು. ಮಣಿಪದ್ಮ ಎಂಬ ಪ್ರಕಾರವನ್ನು ನಾನು ಪ್ರಾರಂಭಿಸಿ ಕವಿತೆಗಳನ್ನು ಬರೆಯಲಿಲ್ಲ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ನನ್ನದೇ ಕೆಲವು ಕವಿತೆಗಳನ್ನು ಓದಿ, ಅವುಗಳ ಸ್ವರೂಪ ಮತ್ತು ಸ್ವಭಾವಗಳ ಕುರಿತು ಚಿಂತಿಸುತ್ತಿರುವಾಗ ನನಗೆ ಇವುಗಳನ್ನು ಮಣಿಪದ್ಮ ಎಂದು ಕರೆಯಬಹುದೇ ಅನ್ನಿಸಿತು. ಅನಂತರದಲ್ಲಿ ಅದೇ ಪ್ರಕಾರದಲ್ಲಿ ಬರೆಯಲು ಪ್ರಯತ್ನಿಸಿದೆ. ಮತ್ತು ಮಣಿಪದ್ಮ ಕುರಿತು ಒಂದು ಸಣ್ಣ ಲೇಖನವನ್ನೂ ಬರೆದಿಟ್ಟಿದ್ದೆ. ಆದರೆ ಅದನ್ನು ಎಲ್ಲಿಯೂ ಪ್ರಕಟಿಸಿರಲಿಲ್ಲ. ಈಗ ಈ ಪ್ರಕಾರವನ್ನು ಪ್ರಯತ್ನಿಸಲು ಕನ್ನಡ ಸಹೃದಯಿ ಕವಿಗಳಿಗೆ ಆಹ್ವಾನಿಸುತ್ತಿದ್ದೇನೆ.

-೩-

ನಿನ್ನ ಕಮಲದಂತಹ ಪಾದಗಳ ಮೇಲೆ

ಹಣೆಯಿಡುವ ಹೊತ್ತಿಗೆ, ಮೊದಲ ರವಿಕಿರಣ ಮೂಡುತ್ತದೆ.

ನಾನು ಮಂಜಿನಂತೆ ಕರಗುತ್ತೇನೆ.

ನಿನ್ನ ಮುಖದಲ್ಲೇನೋ ಮಧುರ ಮುಗುಳ್ನಗೆ;

ಚಂದ್ರನಿನ್ನೂ ಆಗಸದಲ್ಲಿರುವಂತೆ.

-೪-

ನಿಂಬೆ ತೋಟದಿಂದ ಬಂತು ಗಾಢ ಗಂಧ

ನನ್ನ ಪರಿಸರವನೆಲ್ಲ ತುಂಬುತ್ತ

ನಿಂಬೆ ಬಣ್ಣದ ಹೆಣ್ಣೆ ನಂಬು ನನ್ನನು

ಸೋತು ಹೋದೆ ಪರದ ಪರಿಮಳಕ್ಕೆ.

ಒಂದೇ ಪರಿಮಳವು ಸಂಧಿಸಿದೆ ನಮ್ಮನು

ಬಂಧಿಸಿದೆ ಒಂದೇ ಹೂವಿನ ಹಾರ.

-Raghavendra M

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post