ಯುದ್ಧ ಗೆದ್ದಾಯ್ತು, ರಾವಣ ಬಿದ್ದಾಯ್ತು ಇನ್ನೆಲ್ಲಾ ನಿರಾಳವಾಯ್ತು ಎಂದು ಎಲ್ಲರು ಅಂದುಕೊಳ್ಳುತ್ತಿರುವಾಗಲೆ ಬಂದೆರಗಿತು ಮತ್ತೊಂದು ರೀತಿಯ ಧರ್ಮ ಸಂಕಟ. ಸೀತೆಯ ಪಾವಿತ್ರ್ಯ, ಪಾತಿವ್ರತ್ಯದ ಬಗ್ಗೆ ಶ್ರೀರಾಮನಿಗೆಷ್ಟೆ ನಂಬಿಕೆಯಿದ್ದರೂ, ಅವನು ಇಳೆಯ ರಾಜವಂಶದವನ ಪಾತ್ರದಲ್ಲಿ ಆ ನಂಬಿಕೆಯನ್ನು ಮಾತ್ರ ಆದರಿಸಿ ನಿರ್ಧಾರ ಕೈಗೊಳ್ಳುವಂತಿಲ್ಲ. ಹಾಗೆ ಕೈಗೊಂಡ ನಿರ್ಧಾರ ಸಾರ್ವಜನಿಕ ಸಮಷ್ಟಿಯ ದೃಷ್ಟಿಯಲ್ಲಿ ಕೀಳುಗಳೆಯುವಂತಾಗಬಾರದು, ಕಳಪೆಯಾಗಿರಲೂ ಬಾರದು. ಇದು ಬರಿ ಸತಿಯ ಪ್ರಶ್ನೆಯಲ್ಲ ಸಾಮ್ರಾಜ್ಯದ ರಾಣಿಯೊಬ್ಬಳ ಕುರಿತಾದ ಪ್ರಶ್ನೆ. ತಾನು ಆಂತರ್ಯದಲ್ಲಿ ಬಲ್ಲ ಸೀತಾ ಪರಿಶುದ್ದತೆಯ ಸತ್ಯವನ್ನು ಜಗವೆಲ್ಲ ಸಾಕ್ಷಾಧಾರ ಸಮೇತ ನೋಡಿ ನಂಬುವಂತಿರಬೇಕು. ಮುಂದಾವ ಅನುಮಾನ ಶಂಕೆಗೆ ಎಡೆಗೊಡುವಂತಿರಬಾರದು ಎಂಬ ಮುಂದಾಲೋಚನೆಯಿಂದ, ‘ಬೇಡದ್ದೆಲ್ಲಾ ಅನುಭವಿಸಿ ಕೊನೆಗೂ ಸಿಕ್ಕಿತಲ್ಲ ಸ್ವಾತ್ಯಂತ್ರ’ – ಎಂದು ಹರ್ಷಿಸುತ್ತಿದ್ದವಳತ್ತ ಕಡು ಕಠೋರ ಮಾತಿನಿಂದ ತಬ್ಬಿಬ್ಬುಗೊಳಿಸುತ್ತಾನೆ ಶ್ರೀರಾಮ. ‘ಬಿಡುಗಡೆ ಮಾಡಿಸಿದ್ದು ಪತಿಯಾಗಿ ತನ್ನ ಕರ್ತವ್ಯ , ಈಗವಳು ಎಲ್ಲಿಗೆ ಬೇಕಾದರೂ ಹೋಗಲಿಕ್ಕೆ ಸ್ವತಂತ್ರಳು’ ಎಂದುಬಿಟ್ಟರೆ , ಅವನಿಗಾಗಿಯೆ ಜೀವ ಹಿಡಿದುಕೊಂಡು ಬದುಕಿದ್ದ ಸೀತಾಮಾತೆಯ ಕಥೆ ಏನಾಗಬೇಕು? ಹೋಗೆಂದರೆ ತಾನೆ ಎಲ್ಲಿಗೆ ಹೋಗುವಳು? ಅಳುತ್ತಳುತ್ತಲೆ ಅಗ್ನಿ ಪ್ರವೇಶದ ಹಾದಿ ಹಿಡಿದಳು ಸೀತಾಮಾತೆ. ಅಗ್ನಿಯೂ ಅವಳನ್ನು ಸುಡದೆ ಅವಳ ಪಾವಿತ್ರ್ಯಕ್ಕೆ ಸಾಕ್ಷಿಯಾಯಿತೆನ್ನುವುದು ಬೇರೆ ವಿಚಾರ. ಆದರೆ ಸಾಮಾನ್ಯ ಮಾನವ ಪತಿಯೊಬ್ಬನ ರೀತಿ ನಡೆದ ಪತಿ ಶ್ರೀ ರಾಮನ ನಡುವಳಿಕೆ ಇಲ್ಲಿನ ಗಮನೀಯ ಅಂಶ.
ಗೆದ್ದರಾಯ್ತೆ ಸೀತೆಗೆ ಬಿಡುಗಡೆ, ಪಾಲಿಸಬೇಕಾಯ್ತಲ್ಲ ಲೋಕದ ನಡೆ
ಪರಪುರುಷನಡಿಯಾಳಾದ ನೆಪ ಕಾಡೆ, ಒಪ್ಪಿಕೊಳ್ಳದ ಜಗದಡೆತಡೆ
ಲೋಕ ನೀತಿಯ ಪಾಲಿಸೆ ಶುದ್ಧ, ಬರಬಾರದಲ್ಲವೆ ಲೋಕಾಪವಾದ
ಮರ್ಯಾದಾ ಪುರುಷೋತ್ತಮನ ಬಾಯಿಂದ, ಬರಿಸಿತೆ ಕಠಿಣ ಪದ || ೨೧ ||
ಪ್ರಿಯಸತಿಯು ಅಗ್ನಿಪ್ರವೇಶಕ್ಕೆ ಅಣಿಯಾಗುತ್ತಿದ್ದರೆ ಆ ಪ್ರಕ್ರಿಯೆಗೆ ದೂಡುವಂತಹ ಸಂಕಟಕ್ಕೆ ಒಳಗೊಳಗೆ ವ್ಯಥೆಯಾಗುತ್ತಿದ್ದರೂ ಮೌನವ್ರತ ಹಿಡಿದು ನೋಡುತ್ತ ಕುಳಿತಿರಬೇಕಾಯ್ತು ಶ್ರೀರಾಮ. ಅವನ ಕಾಠೀಣ್ಯತೆಯ ಈ ಮುಖ ನೋಡಿದವರೆಲ್ಲರೂ ಅಚ್ಚರಿಗೊಂಡು ಒಳಗೊಳಗೆ ಆ ನಡುವಳಿಕೆಯನ್ನು ಖಂಡಿಸುತ್ತಾ, ದೂಷಿಸುತ್ತ ಚಡಪಡಿಸುತ್ತಿದ್ದರೂ ಯಾರಿಗೂ ಅದರ ಕುರಿತು ಎದುರಾಡುವ ಧೈರ್ಯ ಸಾಲದು. ಅದನ್ನು ಏಕೆಂದು ಪ್ರಶ್ನಿಸುವ ಸಾಹಸ ಕೂಡ ಮಾಡಲಾಗದೆ ಬಿಮ್ಮನೆ ಮೌನದ ಸೆರಗಿಡಿದು ಶೋಕಿಸುತ್ತ ನೋಡುತ್ತಿದ್ದಾರೆ. ಅವರ ಮುಖಭಾವದಲ್ಲೆ ಅವರು ಬಾಯ್ಬಿಟ್ಟು ಕೇಳದಿದ್ದ ಪ್ರಶ್ನೆಗಳನ್ನೆಲ್ಲ ನೋಡುತ್ತಿದ್ದರೂ ಮೌನವೆ ಉತ್ತರವೆಂಬಂತೆ ಮತ್ತೊಂದೆಡೆಗೆ ಮುಖ ತಿರುವಿ ಎತ್ತಲೊ ನೋಡುತ್ತ ಕೂತಿದ್ದಾನೆ ಶ್ರೀರಾಮ. ಅವನ ಅಂತರಾಳಕ್ಕೆ ಚೆನ್ನಾಗಿ ಗೊತ್ತು – ಈ ಪರೀಕ್ಷೆಯಲ್ಲಿ ಸೀತೆ ಪುಟಕಿಟ್ಟ ಚಿನ್ನದ ಹಾಗೆ ಅಪರಂಜಿಯಾಗಿ ಗೆದ್ದು ಹೊರಬರುತ್ತಾಳೆಂದು. ಆದರೆ ಹಾಗೆಂದು ಬಾಯಿ ಬಿಟ್ಟು ಹೇಳುವಂತಿಲ್ಲ. ಅವನಂದುಕೊಂಡ ಹಾಗೆ ಸೀತೆ ಬೆಂಕಿಯಲ್ಲಿಳಿದರೂ ತಣ್ಣೀರ ಸ್ನಾನ ಮಾಡಿದಂತೆ, ಕೂದಲೂ ಕೊಂಕದ ಹಾಗೆ ಹೊರಬಂದಾಗ ಅಲ್ಲಿಯತನಕ ಹಿಡಿದಿಟ್ಟಿದ್ದ ಬಿಗುಮಾನವನ್ನೆಲ್ಲ ಬದಿಗಿಟ್ಟು ನೈಜ್ಯ ಪ್ರೀತಿ ವಾತ್ಸಲ್ಯದಿಂದ ಅಪ್ಪಿಕೊಳ್ಳುತ್ತಾನೆ – ನಿರೀಕ್ಷೆಯಂತೆ ಗೆದ್ದು ಬಂದವಳಿಗೆ ಅಭಿನಂದಿಸುವವನಂತೆ. ಆ ಅಪ್ಪುಗೆಯಲ್ಲಿ ಅನುದಿನವು ಬೆಂದು ನೊಂದ ಸೀತೆಯಷ್ಟೆ ತಾನು ಯಾತನೆಯನುಭವಿಸಿದ ಸಂದಿಗ್ದವನ್ನು ಆ ಒಂದು ಅಪ್ಪುಗೆಯಲ್ಲಿ ಬಿಚ್ಚಿ ತೋರಿಸುವ ಹಾಗೆ.
ಅಗ್ನಿ ಪರೀಕ್ಷೆ ಮುನ್ನುಗ್ಗಿರೆ ಸೀತೆ, ಗೊತ್ತಿದ್ದು ಮೌನವ್ರತ ಹಿಡಿವ ವ್ಯಥೆ
ಪುಟಕಿಟ್ಟ ಬಂಗಾರವಾಗುವಂತೆ, ದೂಷಣೆಗೆಲ್ಲ ಮೌನ ಉತ್ತರಿಸುತೆ
ನಿರೂಪಿಸುತ ಮಾತೆ ಪರಿಶುದ್ಧತೆ ಜಗದೆ, ಅಪ್ಪಿಕೊಂಡನಲ್ಲಾ ಮುಗ್ದ
ಬೇಯುತಿದ್ದಾ ಸೀತೆ ಜತೆಗೆ ಬೆಂದೆ, ಅನುಭವಿಸಿ ದಿನನಿತ್ಯ ಸಂದಿಗ್ದ || ೨೨ ||
ರಾಮನ ಉದ್ದೇಶವೇನೆ ಇದ್ದರೂ ಸೀತೆಯಂತಹ ಸೀತೆಯನ್ನೆ ಅಗ್ನಿಪ್ರವೇಶಕ್ಕೆ ಒಳಗಾಗುವಂತೆ ಮಾಡಿದ ಕ್ರಮ ಎಲ್ಲರಲ್ಲೂ, ಅದರಲ್ಲೂ ಸ್ತ್ರೀಕುಲದ ಕಣ್ಣಲ್ಲಿ ಜನಪ್ರಿಯವಾಗಲಿಕ್ಕೆ ಸಾಧ್ಯವಿರಲಿಲ್ಲ. ಅದು ಗೊತ್ತಿದ್ದೂ ಆ ಅಪ್ರಿಯವಾದ ಕಾರ್ಯಕ್ಕಣಿಯಾಗಿದ್ದು, ಮತ್ತೆ ಸಾಧಾರಣ ಮಾನವನ ಪಾತ್ರ ನಿಭಾವಣೆಯ ಹಿನ್ನಲೆಯಿಂದಾಗಿಯೆ. ಅದನ್ನು ಇತಿಹಾಸ ಹೇಗೆ ವಿವೇಚಿಸಿದರೂ ವಾಸ್ತವದಲ್ಲಿ ಪ್ರಚಲಿತವಿದ್ದ ರೀತಿಗೆ ಪೂರಕವಾಗಿ ನಡೆಯದೆ, ಕಾಲಧರ್ಮಕ್ಕೆ ವ್ಯತಿರಿಕ್ತವಾಗಿ ನಡೆಯುವಂತಿಲ್ಲ. ಆ ನಡುವಳಿಕೆಯಲ್ಲಷ್ಟೆ ತನ್ನ ಸಾಧಾರಣ ಮಾನವತ್ವದ ಸ್ಪಷ್ಟ ಪ್ರದರ್ಶನ ನೀಡುತ್ತ ಸ್ವಯಂ ತಾನೆ ನಿದರ್ಶನವಾಗಿಬಿಡುವ ಸಾಧ್ಯತೆ ಇದ್ದಿದ್ದು.
ಸರಿ ಅದು ಮುಗಿದ ಅಧ್ಯಾಯವೆಂದು ಪರಿಭಾವಿಸಿ ಅಯೋಧ್ಯೆಗೆ ಬಂದು ಪಟ್ಟವನ್ನೇರಿ ಮತ್ತೆ ರಾಜ್ಯಭಾರವನ್ನಾರಂಭಿಸುತ್ತ ಇನ್ನಾದರೂ ಹರ್ಷೋಲ್ಲಾಸದಿಂದ ಕಾಲ ಕಳೆಯಬಹುದೆಂದುಕೊಂಡರೆ, ಮತ್ತೆ ದೂಷಣೆಯ ಮಾತಾಡಿದ ಅಗಸನ ರೂಪಾಗಿ ಬಂದು ಕಾಡಿತ್ತು ಇಹ ಜೀವನದ ಮಾಯೆ. ಮತ್ತೆ ಸಿಡಿಲಿನಂತೆ ಬಂದೆರಗಿದ ಈ ಬಾರಿಯ ಆಘಾತ ಅಪ್ಪಳಿಸಿದಾಗ ಸೀತೆ ತುಂಬು ಗರ್ಭಿಣಿ. ಆದರೆ ಮತ್ತೆ ಶ್ರೀ ರಾಮನಿಗೆ ಸತ್ವ ಪರೀಕ್ಷೆಯ ಸಮಯ. ಯಥಾರೀತಿ ರಾಮನ ನಿರ್ಧಾರದ ವ್ಯತಿರಿಕ್ತ ಪರಿಣಾಮ ಆಗಿದ್ದು ಸೀತೆಗೆ. ತುಂಬು ಗರ್ಭಿಣಿಯೆಂಬುದನ್ನು ಗಣಿಸದೆ ಅವಳನ್ನು ಕಾಡಿಗಟ್ಟುವ ಕಠೋರ ಮನಸ್ಥಿತಿಗೆ ಮತ್ತೆ ಶರಣಾಗಬೇಕಾಯ್ತು ಶ್ರೀರಾಮಚಂದ್ರ. ತನ್ನದೆ ಸಂತತಿಯ ಮುಖವನ್ನು ನೋಡಲಾಗದ ಅಸಹಾಯಕ ಪರಿಸ್ಥಿತಿಗೆ ಒಳಗಾಗಬೇಕಾಯಿತು. ಅತ್ತ ಕಡೆ ಸೀತೆಯ ಮತ್ತು ಮಕ್ಕಳ ಪಾಡೂ ಅಧೋಗತಿಯೆ ಆದರೂ, ಈ ಪ್ರಕ್ರಿಯೆಯಲ್ಲಿ ರಾಮನೇನು ಸುಖವಾಗಿದ್ದನೆಂದಲ್ಲ. ಇದ್ದೂ ಇಲ್ಲದಂತಾದ ಸಂಸಾರದ ಶೂನ್ಯ ವಾತಾವರಣದಲ್ಲಿ ಏಕಾಂಗಿಯಾಗಿ ಕೊರಗುತ್ತ, ಮರುಗುತ್ತ ಕಾಲ ಕಳೆಯಬೇಕಾಯಿತು. ಒಟ್ಟಾರೆ ಮಹಲಿನಲ್ಲಾಗಲಿ, ಕಾನನದಲ್ಲಾಗಲಿ ಸೌಖ್ಯವೆಂಬುದು ಅವರ ಪಾಲಿಗೆ ಬರೆದ ಬರಹವಾಗಿರಲಿಲ್ಲ. ಬದಲಿಗೆ ನೋವುಂಡೆ ನರಳುತ್ತ ಸಾಗಬೇಕಾಯಿತು ಜೀವನದಿಡಿ.
ಹರ್ಷೋಲ್ಲಾಸ ಮರಳಿ ರಾಜ್ಯ ಪಟ್ಟ, ರಾಜನಾಗೂ ಮುಗಿಯದಾಟ
ಅಗಸನ ಮಾತೆಂದು ಅಲಕ್ಷಿಸದೆ ಕೆಟ್ಟ, ಪ್ರಜೆಯಾಡಿದ ನುಡಿ ದಿಟ್ಟ
ತಿಳಿದಿದ್ದೂ ಸೀತೆ ಗರ್ಭಿಣಿಯೆಂದು, ಕಾಡಿಗಟ್ಟುವ ಗತಿ ವಿಧಿ ತಂದು
ನೋವೆಷ್ಟಿತ್ತೊ ಮತ್ತೆ ಸಖ್ಯ ಸಿಗದು, ಸೌಖ್ಯವೆಲ್ಲಿತ್ತು ಮಹಲಿನಲಿದ್ದು || ೨೩ ||
ಇಷ್ಟಕ್ಕಾದರೂ ಮುಗಿದು ಹೋಯ್ತೆನ್ನಲು ಬಿಡದೆ ವಿಧಿ ಮತ್ತೆ ಮುಖಾಮುಖಿಯಾಗಿಸಿದ್ದು ತಂದೆ ಮಕ್ಕಳ ಕದನದ ಮೂಲಕ. ಅಶ್ವಮೇಧ ಯಾಗದ ಕುದುರೆಯನ್ನು ತಮ್ಮ ತಂದೆಯ ಯಾಗವೆಂದರಿಯದೆ ವೀರತನದಿಂದ ಕಟ್ಟಿ ರಣವೀಳ್ಯ ಕೊಟ್ಟುಬಿಟ್ಟರು. ಕದನದಲ್ಲಿ ಯಾರು ಅಪ್ಪ? ಯಾರು ಮಗ? ಯಾರು ಸಂಬಂಧಿ? ತಂದೆಯ ಯಜ್ಞಾಶ್ವವನ್ನೆ ತಡೆದು ಕದನದ ಕಣದಲ್ಲಿ ವೀರಾವೇಶದಿಂದ ಕಾದುತ್ತಿದ್ದಾರೆಂಬ ಸುದ್ದಿಗೆ ಮೂರ್ಛಿತಳಾಗಿ ಬಿದ್ದ ಸೀತೆ, ಎಚ್ಚರವಾಗುತ್ತಿದ್ದಂತೆ ಓಡಿದ್ದು ರಣರಂಗದ ಮೈದಾನಕ್ಕೆ. ಆಗಷ್ಟೆ ರಾಮನಿಗೂ ತನ್ನ ಮಕ್ಕಳೊಡನೆಯೆ ಹೋರಾಡುತ್ತಿರುವ ಸತ್ಯ ಗೊತ್ತಾಗುವುದು. ಹೀಗೆ ತಂದೆ ಮಕ್ಕಳನ್ನು ಒಗ್ಗೂಡಿಸಿದ ಮೇಲೆ ಅದಷ್ಟಕ್ಕೊಸ್ಕರವೆ ಕಾಯುತ್ತಿದ್ದವಳಂತೆ ತನಗೆ ಜನ್ಮವಿತ್ತಿದ್ದ ಭೂಮಾತೆಯ ಮಡಿಲಿಗೆ ಶಾಶ್ವತವಾಗಿ ಸೇರಿಹೋಗುತ್ತಾಳೆ ಸೀತೆ. ಅಲ್ಲಿಗೆ ಆ ನಂತರವಾದರೂ ರಾಮ ಸೀತೆಯರು ಒಂದಾಗಬಹುದಾದ ಸಾಧ್ಯತೆಯೂ ಕಮರಿಹೋಗುತ್ತದೆ. ಇಲ್ಲಿಯೂ ಮತ್ತೆ ಶ್ರೀ ರಾಮನೆಂಬೊಬ್ಬ ಸಾಧಾರಣ ಮಾನವನ ದಾರುಣ ಬದುಕಿನ ಚಿತ್ರಣವೆ ಹೊರತು ದೈವತ್ವದ ಅತಿಶಯ ಕಾಣುವುದಿಲ್ಲ. ಯಾವುದೊ ಕರ್ಮಕ್ಕೆ ಬದ್ಧನಾದ ಕರ್ಮ ಜೀವಿಯ ರೀತಿಯೆ ಬದುಕು ಸಾಗಿಸುವ ರಾಮನಿಗೆ ಬಹುಶಃ ಸಿಕ್ಕ ಕಟ್ಟ ಕಡೆಯ ಸಮಾಧಾನವೆಂದರೆ ತನ್ನ ಮಕ್ಕಳನ್ನು ಪಡೆದು ಅವರೊಡನೆ ತುಸು ಕಾಲ ಕಳೆಯುವಂತಾದದ್ದು. ಅಂತಿಮವಾಗಿ ತಾನು ಸರಯೂ ನದಿಯಲ್ಲಿಳಿದು ಜಲ ಸಮಾಧಿಯಾಗುವ ಹೊತ್ತಿನಲ್ಲಿ ಅದೊಂದು ಸಮಾಧಾನವಾದರೂ ಅಷ್ಟಿಷ್ಟು ಹಿತವಾದ ಅನುಭೂತಿಯನ್ನುಂಟು ಮಾಡಿರಬೇಕು.
ವಿಧಿ ವಿಪರ್ಯಾಸ ಅಗಣಿತ, ವಿಯೋಗದಲಿದ್ದೂ ಬಿಡದೆ ಕಾಡಿತ್ತ
ಮರೆತೆಲ್ಲ ಹೇಗೊ ಮುಗಿಸಲೆತ್ತಾ, ಲವ ಕುಶ ರೂಪದಲವತರಿಸಿತ್ತ
ಅಶ್ವಮೇಧಕುದುರೆ ಪುತ್ರರ ಸೇರೆ, ಕದನದಂಗಳ ಸಂಬಂಧಿಗಳಾರೆ
ಸಹಿಸಲಿನ್ನೆಷ್ಟು ಭೂಮಾತೆ ಪಾಲಾಗಿರೆ, ಸುತಪಿತ ಜತೆ ನೆಮ್ಮದಿಗಿರೆ || ೨೪ ||
ಹೀಗೆ ರಾಮಾಯಣದ ಅವಲೋಕನದ ಸಾರಾಂಶವಾಗಿ ನೋಡಿದರೆ ರಾಮನ ಪಾತ್ರ ವಹಿಸಿ ಆ ಮಟ್ಟದ ನೈತಿಕ ನಿಷ್ಠೂರತೆಯಲ್ಲಿ ಸಾಧಾರಣ ಮಾನವ ರಾಜನ ಭೂಮಿಕೆ ನಿಭಾಯಿಸುವುದು ಅಷ್ಟು ಸುಲಭವಲ್ಲ. ಸಮಷ್ಟಿಯ ಸಮಗ್ರ ಒಳಿತಿಗೆ ವೈಯಕ್ತಿಕ ಹಿತಾಸಕ್ತಿಗಳನ್ನು ಬಲಿಕೊಡಬೇಕಾಗಿ ಬಂದ ಪ್ರಸಂಗಗಳೆ ತುಂಬಿಕೊಂಡ ಜೀವನದಲ್ಲಿ ಬರಿ ಸಂಕಟಗಳ ಕುಂಭ ದ್ರೋಣವೆ ಆದರೂ ಅದನ್ನೆಲ್ಲಾ ನೈತಿಕ ಪ್ರಜ್ಞೆಯಳವಿನೊಳಗೆ ಎದುರಿಸುತ್ತಲೆ ನಿಭಾಯಿಸಿದ ರಾಮನ ಪಾತ್ರ, ಆ ಸಂಕಟವನ್ನು ಜತೆ ಜತೆಯಾಗಿ ಅಷ್ಟೆ ತೀವ್ರತೆಯಲ್ಲಿ ಅನುಭವಿಸಿದ ಸೀತೆಯಷ್ಟೆ ಪ್ರಮುಖ ಪಾತ್ರ. ಆದರೂ ಕೊನೆಯ ಸಾರದಲ್ಲಿ – ಇಷ್ಟೆಲ್ಲಾ ಮಾಡಬೇಕಾಗಿ ಬಂದಿದ್ದು ಕೇವಲ ದ್ವಾರಪಾಲಕನ ಶಾಪ ವಿಮೋಚನೆಯ ಸಲುವಾಗಿಯೆ? ಅದಕ್ಕಾಗಿ ಇದೆಲ್ಲಾ ಅನುಭವಿಸಬೇಕಾಗಿ ಬಂತೆ ಎಂದೆನಿಸಿದರೂ, ಮೊದಲ ಭಾಗದಲ್ಲಿ ಹೇಳಿದ್ದಂತೆ ಈ ಅವತಾರದ ಉದ್ದೇಶ ಸಾಧನೆಗೆ ಜಯ ವಿಜಯರ ಶಾಪ ಕೇವಲ ಒಂದು ನೆಪವಷ್ಟೆ ಆಗಿ ಕಾಣುವುದು ಪ್ರಮುಖ ವಿಷಯ. ಎಲ್ಲಕ್ಕಿಂತ ಮಿಗಿಲಾಗಿ ಈ ಅವತಾರದ ನೆಪದಲ್ಲಿ ಸಮಕಾಲೀನ ಮಾನವನೊಬ್ಬ ಹೇಗೆ ಬದುಕಬೇಕೆಂಬ ರೀತಿಯನ್ನು ಸ್ವತಃ ತನ್ನದೆ ಉದಾಹರಣೆಯಲ್ಲಿ ಬಿಡಿಸಿಟ್ಟ ರೀತಿಯೆ ಅನನ್ಯ. ಅಂತೆಯೆ ಹಾಗೆ ಬದುಕುವುದೆನೂ ಸುಲಭವಲ್ಲ ಎನ್ನುವುದರ ಅರಿವನ್ನು ತನ್ನ ಬದುಕಿನ ಯಾತನೆಗಳಿಂದಲೆ ಪ್ರಚುರ ಪಡಿಸಿದ್ದು ಮತ್ತೊಂದು ವೈಶಿಷ್ಠ್ಯ. ನರನ ಬದುಕಿನ ರೀತಿಯನ್ನು ತೋರಿಸುವ ಉದ್ದೇಶಕ್ಕೆ ತನ್ನನ್ನೆ ಸಮಿತ್ತಾಗಿಸಿಕೊಂಡ ಇಂತಹ ಉದಾಹರಣೆಗಳಿಂದಲೆ ಶ್ರೀ ರಾಮನ ಬದುಕು ಕೂಡ ಅನನ್ಯವಾಗಿ ಕಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ !
ಅಂತು ರಾಮಾಯಣ ಪ್ರಕರಣ, ರಾಮನಾಗುವ ಸಂಕಟವೆ ದ್ರೋಣ
ನರನವತಾರದ ನಾಟಕ ಕಣ, ಅನುಭವಿಸಿದ್ದೆಲ್ಲ ಪರಿ ವಿನಾಕಾರಣ
ಬರಿ ಹೆಸರಿದ್ದರಾಯ್ತೆ ರಾಮ, ಬದುಕುವುದಷ್ಟು ಸುಲಭವೆ ಪಾಮರ
ಶ್ರೀರಾಮನ ಬದುಕೆ ಅನನ್ಯ, ಬದುಕಿ ತೋರಿದ ನರ ಬದುಕುವ ತರ || ೨೫ ||
(ಮುಕ್ತಾಯ)
Facebook ಕಾಮೆಂಟ್ಸ್