X

ಸೊಗಸಿನ ನಮ್ಮ ಕುಡ್ಲಕ್ಕೆ ತುಳುವರ ಬಹುಪರಾಕ್

ಚಿತ್ರ : ನಮ್ಮ ಕುಡ್ಲ (ತುಳು)
ತಾರಾಗಣ : ಪ್ರಕಾಶ್ ಶೆಟ್ಟಿ ಧರ್ಮನಗರ, ಛಾಯ ಹರ್ಷ, ಸತೀಶ್ ಬಂದಲೆ, ಗೋಪಿನಾಥ್ ಭಟ್ ಮತ್ತಿತರರು.
ನಿರ್ದೇಶನ : ಅಶ್ವಿನಿ ಹರೀಶ್ ನಾಯಕ್
ನಿರ್ಮಾಣ : ಖುಷಿ ಫಿಲಂಸ್

——-

ತನ್ನ ಟ್ರೈಲರ್’ನಿಂದಲೇ ಭರವಸೆ ಹುಟ್ಟಿಸಿದ್ದ ‘ನಮ್ಮ ಕುಡ್ಲ’ ತುಳು ಚಿತ್ರ ಅದೇ ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಬಹು ಸಮಯದಿಂದ ತನ್ನನ್ನು ಸೀಟಿನಲ್ಲಿ ಹಿಡಿದಿಟ್ಟುಕೊಂಡು ನೋಡುವಂತೆ ಮಾಡುವ ತುಳು ಚಿತ್ರಕ್ಕಾಗಿ ಹಾತೊರೆಯುತ್ತಿದ್ದ ತುಳುನಾಡಿನ ಪ್ರೇಕ್ಷಕನ ಕಾಯುವಿಕೆಗೆ ನಮ್ಮ ಕುಡ್ಲ ವಿರಾಮ ನೀಡಿದೆ ಎನ್ನಬಹುದು. ಸಾಹಸ ಪ್ರಧಾನ ಚಿತ್ರದಲ್ಲಿ ಹಾಸ್ಯಕ್ಕೂ ಪ್ರಾಧಾನ್ಯತೆ ನೀಡುವ ಮೂಲಕ ಪ್ರಸಕ್ತ ಚಾಲ್ತಿಯಲ್ಲಿರುವ ಹಾಸ್ಯದ ಟ್ರೆಂಡ್ ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬುದ್ದಿವಂತಿಕೆ ಮೆರೆಯಲಾಗಿದೆ.

‘ನಮ್ಮ ಕುಡ್ಲ’ ಮಂಗಳೂರಿನ ಭೂಗತ ಜಗತ್ತು ಮತ್ತು ರಾಜಕೀಯ ಚದುರಂಗದಾಟದ ಸುತ್ತ ಬೆಳಕು ಚೆಲ್ಲುತ್ತಾ, ಸಮಾಜದ ಪ್ರತಿಷ್ಟಿತರು ಮಧ್ಯಮವರ್ಗದ ಯುವಕರನ್ನು ತಮ್ಮ ಸ್ವಲಾಭಕ್ಕಾಗಿ ಬಳಸಿ ಅವರ ಜೀವನವನ್ನು ನರಕಸದೃಶವನ್ನಾಗಿ ಮಾಡುವುದನ್ನು ಎಳೆ ಎಳೆಯಾಗಿ ತೆರೆದಿಡುತ್ತದೆ. ತಾನು ಬೆಂಬಲಿಸುತ್ತಿದ್ದ ಸ್ಥಳೀಯ ಎಂ.ಎಲ್.ಎ ಯನ್ನೇ ಕೊಲೆ ಮಾಡಿದ ಆಪಾದನೆ ಮೇಲೆ ನಾಯಕ ಸಚ್ಚುವನ್ನು (ಪ್ರಕಾಶ್ ಶೆಟ್ಟಿ ಧರ್ಮನಗರ) ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ಮೂಲಕ ಆರಂಭವಾಗುವ ಚಿತ್ರ ಮುಂದೆ ನಾಯಕನ ಈ ಹಿಂದಿನ ಜೀವನವನ್ನು ತೆರೆ ಮೇಲಿಡುತ್ತಾ ಸಾಗುತ್ತದೆ. ಹೇಗೆ ನಾಯಕ ತನಗೆ ಅರಿವೇ ಇಲ್ಲದಂತೆ ಸಮಾಜದ ಪ್ರತಿಷ್ಠಿತರ ಚದುರಂಗದಾಟಕ್ಕೆ ಸಿಲುಕಿ ತನ್ನವರನ್ನು ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಾನೆ, ಆ ಮೂಲಕ ಅವನು ಪಡುವ ಪಾಡು, ಆ ನೋವು-ಹಿಂಸೆ, ಸದಾ ಕಾಡುವ ಅಶಾಂತಿ ಎಲ್ಲವೂ ಪ್ರಸಕ್ತ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಿದೆ. ಎಂ.ಎಲ್.ಎಯನ್ನು ಕೊಲೆ ಮಾಡುವ ಉದ್ಧೇಶ ಸಚ್ಚುವಿಗೆ ಯಾಕಿತ್ತು? ನಿಜಕ್ಕೂ ಕೊಲೆ ಮಾಡಿದ್ದು ಸಚ್ಚುವೆನಾ? ಹೌದಾದಲ್ಲಿ ಯಾಕೆ? ಇಲ್ಲವಾದಲ್ಲಿ ಇದರ ಹಿಂದಿರುವವರು ಯಾರು? ಈ ಎಲ್ಲಾ ತೀರದ ಕುತೂಹಲಗಳಿಗೆ ನೀವು ಚಿತ್ರಮಂದಿರಕ್ಕೆ ಕಾಲಿಡಲೇಬೇಕು. ಇಲ್ಲವಾದಲ್ಲಿ ಒಂದು ಒಳ್ಳೆಯ ಚಿತ್ರವನ್ನು ಮಿಸ್ ಮಾಡಿಕೊಂಡ ಕೊರಗು ನಿಮ್ಮನ್ನು ಕಾಡಲಿದೆ.

ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಎಂಬ ಗರಿಮೆಯನ್ನು ಹೊತ್ತು ನಿರ್ದೇಶನಕ್ಕೆ ಇಳಿದ ಅಶ್ವಿನಿ ಹರೀಶ್ ನಾಯಕ್ ತಮ್ಮ ಮೊದಲ ಪ್ರಯತ್ನದಲ್ಲೇ ಎಲ್ಲರ ಹುಬ್ಬೇರುವಂತೆ ಮಾಡಿರುವುದರ ಜತೆಗೆ ಚಿತ್ರವನ್ನು ಗೆಲ್ಲುವ ಹಾದಿಗೆ ತಂದು ನಿಲ್ಲಿಸಿದ್ದಾರೆ. ಆ ಮೂಲಕ ಮೊದಲ ‘ಯಶಸ್ವೀ ಮಹಿಳಾ ನಿರ್ದೇಶಕಿ’ ಎಂಬ ಮತ್ತೊಂದು ಗರಿಮೆಯೂ ಅವರ ಹೆಗಲೇರುವುದು ನಿಶ್ಚಿತ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿ, ನಾಯಕಿಯಾಗಿ ಹಾಗು ನಿರ್ದೇಶಕಿಯಾಗಿ ಅಶ್ವಿನಿ ಅವರು ನಿರ್ವಹಿಸಿದ ಕಾರ್ಯಕ್ಕೆ ಭೇಷ್ ಎನ್ನಲೇಬೇಕು. ಚಿತ್ರದ ಆರಂಭದ ದೃಶ್ಯದಿಂದ ಹಿಡಿದು ಕೊನೆಯ ‘ಶುಭಂ’ವರೆಗೆ ಎಲ್ಲೂ ಬೋರ್ ಹೊಡೆಸದಂತೆ ನವರಸಗಳನ್ನು ಹಿತವಾಗಿ ಬೆರೆಸಿ ಅರೆದು ಬಡಿಸಿದ ರೀತಿ ಅಮೋಘ. ಹಲವಾರು ನಾಟಕ, ಟಿವಿ ಶೋಗಳ ಅನುಭವ ಇಲ್ಲಿ ನೆರವಾಗಿರುವುದು ಸುಳ್ಳಲ್ಲ.

ಸ್ವತಃ ಚಿತ್ರದ ನಾಯಕರಾಗಿರುವ ಪ್ರಕಾಶ್ ಶೆಟ್ಟಿ ಧರ್ಮನಗರ ಬರೆದಿರುವ ಚಿತ್ರಕತೆ, ಸಂಭಾಷಣೆ ‘ನಮ್ಮ ಕುಡ್ಲ’ದ ಪ್ರಮುಖ ಹೈಲೈಟ್ ಗಳಲ್ಲಿ ಒಂದು. ಇದೇ ಚಿತ್ರದ ಯಶಸ್ಸಿಗೆ ಮತ್ತೊಂದು ಕಾರಣ ಎನ್ನಲಡ್ಡಿಯಿಲ್ಲ. ಅಷ್ಟು ಅಚ್ಚುಕಟ್ಟಾದ ಚಿತ್ರಕತೆ ಎಣೆದಿದ್ದಾರೆ ಪ್ರಕಾಶ್ ಶೆಟ್ಟಿ. ಬಸವರಾಜ್ ಹಾಸನ ಅವರ ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೈಟ್. ಅಂತೆಯೇ ಸಂಕಲನ, ಡಿ.ಐ, ರೀ-ರೆಕಾರ್ಡಿಂಗ್ ಚಿತ್ರದ ಶ್ರೀಮಂತಿಕೆಗೆ ತನ್ನ ಪ್ರಾಮಾಣಿಕ ಕೊಡುಗೆ ನೀಡಿವೆ.

ಚಿತ್ರದಲ್ಲಿನ ಹಾಸ್ಯದ ಕುರಿತು ಇಲ್ಲಿ ಬರೆಯಲೇಬೇಕು. ಏರೆಗಾವುಯೇ ಕಿರಿಕಿರಿ ಮೂಲಕ ಮನೆಮಾತಾಗಿರುವ ಸತೀಶ್ ಬಂದಲೆ ಇಲ್ಲಿ ಮತ್ತೊಮ್ಮೆ ಮನಸೂರೆಗೊಳ್ಳುತ್ತಾರೆ. ಸತೀಶ್ ಬಂದಲೆ ಹಾಗು ಸುನಿಲ್ ನೆಲ್ಲಿಗುಡ್ಡ ಅವರ ಹಾವು ಮುಂಗುಸಿ ಜಗಳವನ್ನು ತೆರೆಯಲ್ಲಿ ನೋಡುವುದೇ ಅಂದ. ಬಲೆ ತೆಲಿಪಾಲೆ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಪೋಲೀಸ್ ಪೇದೆಯಾಗಿ ನಗೆಯುಕ್ಕಿಸುತ್ತಾರೆ. ಒಟ್ಟಿನಲ್ಲಿ ಹಾಸ್ಯ ದೃಶ್ಯಗಳು ಬಿದ್ದು ಬಿದ್ದು ನಗಿಸುವುದಂತೂ ಗ್ಯಾರಂಟಿ.

ಚಿತ್ರತಂಡ ಹೇಳಿಕೊಂಡಂತೆ ಚಿತ್ರದ ಒಟ್ಟು ಕಲಾವಿದರಲ್ಲಿ ಶೇಕಡಾ 95ರಷ್ಟು ಕಲಾವಿದರು ಹೊಸಬರಾದರೂ, ಯಾರು ಕೂಡ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಎಲ್ಲೂ ಅನಿಸುವುದಿಲ್ಲ. ಕೆಲ ಒಂದಿಬ್ಬರು ಕಲಾವಿದರು ಅತಿಯಾಗಿ ವರ್ತಿಸಿದಂತೆ ಕಂಡರೂ ಅದೆಲ್ಲ ಗೌಣವಾಗಿ ಬಿಡುತ್ತದೆ. ನಾಯಕ ನಟನಾಗಿ ಪ್ರಕಾಶ್ ಶೆಟ್ಟಿ ಅಮೋಘ ಅಭಿನಯ ನೀಡಿದ್ದರೆ, ಎಲ್ಲರೂ ಹೊಗಳುವಂತಹ ಅದ್ಭುತ ಹಾಗು ಅಷ್ಟೇ ಗಂಭೀರ ಅಭಿನಯ ನೀಡಿದ್ದು ಅಸ್ಲಾಂ ಪಾಶ. ಪೋಲೀಸ್ ತನಿಖಾಧಿಕಾರಿಯಾಗಿ ಅಸ್ಲಾಂ ಗಂಭೀರತೆ, ಕಣ್ಣಲ್ಲೇ ಮಾತನಾಡುವ ಪರಿ ಮೆಚ್ಚಲೇಬೇಕು. ಉಳಿದಂತೆ ನಾಯಕಿ ಛಾಯ ಹರ್ಷ (ಅಶ್ವಿನಿ ಹರೀಶ್ ನಾಯಕ್), ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ದಿನೇಶ್ ಅತ್ತಾವರ್ ಗಮನಸೆಳೆಯುತ್ತಾರೆ.

ಒಟ್ಟಿನಲ್ಲಿ ಪ್ರಸಕ್ತ ಸಮಾಜಕ್ಕೆ ಅಗತ್ಯವಾಗಿರುವ ಸಂದೇಶವನ್ನು ಇಟ್ಟುಕೊಂಡು, ಮನೋರಂಜನೆಗೆ ಯಾವುದೇ ಚ್ಯುತಿ ಬರದಂತೆ ಬಂದಿರುವ ‘ನಮ್ಮ ಕುಡ್ಲ’ ಕುಟುಂಬ ಸಮೇತರಾಗಿ ನೋಡುವಂತಹ ಹಾಗು ನೋಡಲೇಬೇಕಾದಂತಹ ಚಿತ್ರಗಳಲ್ಲಿ ಒಂದು. ಇದು ತುಳು ಚಿತ್ರರಂಗದ 2016ರ ಸಂಜೀವಿನಿ ಎನ್ನಲಡ್ಡಿಯಿಲ್ಲ.

Facebook ಕಾಮೆಂಟ್ಸ್

Ashwin Amin Bantwal: Self Employed & Journalist
Related Post